ಮದ್ದಿನ ಕುಪ್ಪಿ
ನಮ್ಮ ಬಾಲ್ಯದಲ್ಲಿ ಸಣ್ಣ ಸಣ್ಣ ಕಾಯಿಲೆಗಳಿಗೆ ಅಜ್ಜಿ ಮದ್ದು ನಡೆಯುತ್ತಿತ್ತು . ನಾವು ಅಸೌಖ್ಯಕ್ಕಾಗಿ ಶಾಲೆಗೆ ರಜೆ ಹಾಕ್ಕಿದ್ದು ನೆನಪಿಲ್ಲ . ಶಾಲೆಯಲ್ಲಿ ಕಲಿತ ಮಾದರಿ ರಜೆ ಅರ್ಜಿಯಲ್ಲಿ ಜ್ವರದಿಂದ ಬಳಲುತ್ತಿರುವುದರಿಂದ ರಜೆ ದಯ ಪಾಲಿಸಿ ಎಂದು ಕಲಿತದ್ದಷ್ಟೇ ಬಂತು . ಮನೆಯಲ್ಲಿ ಹಿರಿಯರು ಕೆಲವೊಮ್ಮೆ ತಮ್ಮ ಕಾಯಿಲೆಗಳಿಗೆ ಕನ್ಯಾನ ದಿಂದಲೋ ವಿಟ್ಲ ದಿಂದಲೋ ಡಾಕ್ಟಲ್ಲಿ ಹೋಗಿ ಮದ್ದು ತರಲು ಹೇಳುತ್ತಿದ್ದರು .ರೋಗ ಲಕ್ಷಣ ಹೇಳಿ ಔಷಧಿ ತರುವುದು .ಆಗ ಒಂದು ಬಿರಡೆ ಇರುವ ಔನ್ಸ್ ಕುಪ್ಪಿ ಕೊಂಡು ಹೋಗುವೆವು .ವೈದ್ಯರು ಅಥವಾ ಕಂಪೌಂಡರ್ ಅದರಲ್ಲಿ ಔಷಧಿ ತುಂಬಿಸಿ ಚೆನ್ನಾಗಿ ಕುಲುಕಿಸಿ ಕುಡಿಯಿರಿ ಎಂದು ಬರೆದ ಚೀಟಿ ಅಂಟಿಸಿ ಕೊಡುವರು .ಕೆಲವರು ಚೂರ್ಣ ಕಟ್ಟಿ ಕೊಟ್ಟು ಜೇನು ತುಪ್ಪದಲ್ಲಿ ಕಲಸಿ ತಿನ್ನಿರಿ ಎನ್ನುವರು . ಎರಡನೆಯದು ನಮಗೆ ಇಷ್ಟ . ಇಲ್ಲದ ಕೆಮ್ಮು ಬರಿಸಿ ನಾವೂ ಸ್ವಲ್ಪ ಸೇವಿಸುತ್ತಿದ್ದೆವು .
ಈಗ ಈ ಕುಪ್ಪಿ ಕಾಣಿಸುವುದಿಲ್ಲ .ಕಂಪನಿಯವರು ಸಣ್ಣ ಪ್ಲಾಸ್ಟಿಕ್ ಅಥವಾ ಗ್ಲಾಸ್ ಬಾಟಲ್ ನಲ್ಲಿ ಔಷಧಿ ಹಾಕಿಯೇ ಕಳುಹಿಸುವರು .
ಮಕ್ಕಳಾಗಿದ್ದಾಗ ಎಲ್ಲಾ ಔಷಧಿಗಳಿಗಿಂತಲೂ ಸಾಂತ್ವನ ನಮ್ಮ ಬಳಿ ತಾಯಿ ಬಂದು ಹಣೆ ಸವರಿ ಸೆರಗಿನಲ್ಲಿ ಗಾಳಿ ಹಾಕಿದಾಗ ,ಸೆರಗಿನಿಂದ ಅಕ್ಕಿ ಹಿಟ್ಟು ,ಸೆಗಣಿ ಮತ್ತು ಬೆವರಿನ ಮಿಶ್ರಣ (ಅವರು ಬೆಳಗಿನಿಂದ ಸಂಜೆ ತನಕ ಮನೆ ಕೆಲಸ ಮಾಡುತ್ತಿದ್ದುದರಿಂದ )ದ ಕಂಪು ಇಂದು ಮಾರ್ಕೆಟ್ ನಲ್ಲಿ ಸಿಗುವ ಯಾವುದೇ ಪರ್ಫ್ಯೂಮ್ ಗೆ ಇಲ್ಲಾ ಎಂದು ಹೇಳ ಬಲ್ಲೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ