ವಿಶಿಷ್ಟ ಅತಿಥಿಗಳು
ದೊಡ್ಡ ರಜೆಯಲ್ಲಿ ಎಷ್ಟು ಆಟ ಮತ್ತು ಇತರ ಚಟುವಟಿಕೆಗಳು ಇದ್ದರೂ ಒಮ್ಮೊಮ್ಮೆ ಬೇಸರ ಬರುತ್ತಿತ್ತು .ಕಾಗೆ ಕ್ರಾವ್ ಕ್ರಾವ್ ಎಂದು ಕೂಗಿದರೆ ಯಾರಾದರೂ ನೆಂಟರು ಬಂದಾರು ಎಂದು ಸಂತೋಷ ಆಗುತ್ತಿತ್ತು .ಇದು ಮಕ್ಕಳಿಗೆ ಮಾತ್ರ ಅಲ್ಲ ಹಿರಿಯರಿಗೆ ಕೂಡಾ . ದಾರಿಯಲ್ಲಿ ಸಿಕ್ಕಿದ ದೂರದ ನೆಂಟರನ್ನು ಕೂಡಾ ಒತ್ತಾಯ ಮಾಡಿ ಕರೆದು ಕೊಂಡು ಬರುತ್ತಿದ್ದ ಕಾಲ . ಬಾವಿಯಿಂದ ನೀರು ತರಬೇಕು ,ಅರೆಯುವ ಕಲ್ಲಿನಲ್ಲಿ ಅರೆಯಬೇಕು ಇಷ್ಟೆಲ್ಲಾ ಇದ್ದರೂ ಅತಿಥಿಗಳು ಬೇಕು .ಬಂದವರನ್ನೂ ಬೇಗ ಹೊರಡಲು ಬಿಡರು .ಎಲ್ಲಿ ಹೋಯಿತು ಆ ಕಾಲ ?ಊಟದ ಹೊತ್ತಿನಲ್ಲಿ ಯಾವ ಆಗಂತುಕ ಬಂದರೂ ಹಸಿದು ಹೋಗುವಂತಿಲ್ಲ . ಈಗಿನ ಆರ್ಥಿಕ ಪರಿಸ್ಥಿತಿ ಗೆ ಹೋಲಿಸಿದರೆ ಎಲ್ಲರೂ ಬಿ ಪಿ ಎಲ್ ನಲ್ಲಿ ಇದ್ದ ಸಮಯ .
ನಮ್ಮ ಮನೆಯ ನೈರುತ್ಯಕ್ಕೆ ನಂದರ ಬೆಟ್ಟು ಎಂಬ ಬಯಲು ಇದೆ .ಅಲ್ಲಿ ದಾಸ ಮನೆತನದವರು ವಾಸವಿದ್ದರು . ಆಗಾಗ ಅಲ್ಲಿಂದ ಓರ್ವ ಹಿರಿಯ ದಾಸರು ಜಾಗಟೆ ಬಾರಿಸುತ್ತಾ ಶಂಖ ಊದಿಕೊಂಡು ಮನೆ ಮನೆಗೆ ಬರುವರು . ಮುಖದಲ್ಲಿ ಉದ್ದ ನಾಮ ಮತ್ತು ಕೇಸರಿ ಬಣ್ಣದ ಮುಂಡಾಸು ಇರುತ್ತಿತ್ತು . ಅವರಿಗೆ ಸೇರು ಭತ್ತ ಅಥವಾ ಅಕ್ಕಿ ಜೋಳಿಗೆಗೆ ಹಾಕುತ್ತಿದ್ದ ನೆನಪು . ಇವರ ಕುಟುಂಬದವರೇ ಹಳ್ಳಿಯ ಸಂಚಾರಿ ಫ್ಯಾನ್ಸಿ ಸ್ಟೋರ್ . ದೊಡ್ಡ ಪೆಟ್ಟಿಗೆ ಹೊತ್ತು ಮನೆ ಮನೆಗೆ ಬರುವರು .ಹೆಣ್ಣು ಮಕ್ಕಳಿಗೆ ಬಳೆ ,ಕಾಡಿಗೆ ,ಲಾಲ್ ಗಂಧ ಎಂಬ ಕೆಂಪು ಬಣ್ಣದ ಪಾಲಿಷ್ ,ಎಳೆ ಶಿಶುಗಳ ಕರಿಮಣಿ ಬಳೆ ,ಕುಂಕುಮ ಮತ್ತು ಉಡಿದಾರದ ಪಟ್ಟೆ ನೂಲು . ಹೆಣ್ಣು ಮಕ್ಕಳಿಗೆ ಬಹಳ ಸಂಭ್ರಮ . ಗಂಡಸರ ಪಾತ್ರ ಕಡಿಮೆ .ಕೊನೆಗೆ ಬಿಲ್ ಪಾವತಿಸುವುದಷ್ಟೇ . ನಾನು ಸಣ್ಣವನಿರುವಾಗ ಲವ್ ಇನ್ ಟೋಕಿಯೋ ಎಂಬ ಹಿಂದಿ ಸಿನಿಮಾ ತುಂಬಾ ಜನಪ್ರಿಯ ಆಗಿತ್ತು .ಅದರ ನಾಯಕಿ ತಲೆ ಕೂದಲಿಗೆ ಎರಡು ಗೋಲಿಗಳು ಇರುವ ಬ್ಯಾಂಡ್ ಹಾಕಿದ್ದಳು ಎಂದು ಕಾಣುತ್ತದೆ .ಅಲ್ಲಿಂದ ಅದು ನಮ್ಮಲ್ಲಿಯೂ ಜನ ಪ್ರಿಯ ಆಯಿತು ಮತ್ತು ಅದಕ್ಕೆ ಲವ್ ಇನ್ ಟೋಕಿಯೋ ಎಂದು ನಾಮಕರಣ ಆಯಿತು . ನಾವು ಹಳ್ಳಿ ಜನ ಅದನ್ನು ಲವಿಂಗ್ಟಕಿ ಎಂದು ಕರೆಯುತ್ತಿದ್ದು ,ನಮ್ಮ ತಂದೆಯವರು ಟಂಗ್ ಟುಕಿ ಎನ್ನುತ್ತಿದ್ದರು (ಅಕ್ಕ ತಂಗಿಯರು ಅದು ಬೇಕು ಎಂದು ಜಾತ್ರೆಯಲ್ಲೋ ಅಂಗಡಿಯಲ್ಲೋ ತಂದೆಗೆ ದುಂಬಾಲು ಬೀಳುತ್ತಿದ್ದರು .)
ಇನ್ನು ಭವಿಷ್ಯ ಹೇಳುವ ನರ್ಸಣ್ಣ ಬುಡುಬುಡಿಕೆ ಬಾರಿಸಿ ಕೊಂಡು ಬಂದು ಅಯಾಚಿತವಾಗಿ ಮುಖ ಭವಿಷ್ಯ ,ಹಸ್ತ ಸಾಮುದ್ರಿಕೆ ಮಾಡುತ್ತಿದ್ದರು .ಸಾಮಾನ್ಯವಾಗಿ ಅದು ಒಳಿತು ಕೆಡುಕುಗಳ ಮಿಶ್ರಣ ಇರುತ್ತಿದ್ದು ಕೇಳುಗನಿಗೆ ನಿರಾಶೆ ಆಗದೆ ಒಳ್ಳೆಯ ದಕ್ಷಿಣೆ ಸಂದಾಯ ಆಗುತ್ತಿತ್ತು .
ಇನ್ನು ಬಸವಣ್ಣ ,ಭಾಗೀರಥಿಯರು ಅಲಂಕಾರ ಮಾಡಿಸಿ ಕೊಂಡು ವಾದ್ಯ ಸಮೇತ ಬರುವರು . ಹೌದಾ ಎಂದರೆ ತಲೆ ಆಡಿಸುವರು.(ಶಾಲೆಯಲ್ಲಿ ನನ್ನನ್ನು ಅಧ್ಯಾಪಕರು ಹೌದಾ ಬಸವಣ್ಣ ಎಂದರೆ ಹೌದು ಎಂಬಂತೆ ತಲೆ ಆಡಿಸುತ್ತೀಯಾ ಕೋಲೇ ಬಸವಾ ಎಂದು ಬೈಯ್ಯುವಾಗ ಇವುಗಳ ಮುಖ ನೆನಪಾಗುತ್ತಿತ್ತು ). ಬಸವನನ್ನು ಮದುವೆ ಆಗುತ್ತೀಯ ಭಾಗೀರಥಿ ಎಂದಾಗ ಮೊದಲು ಇಲ್ಲಾ ಎಂದು ತಲೆ ಆಡಿಸಿದವಳು ಆಮೇಲೆ ಪುಸಲಾಯಿಸಿದ ಮೇಲೆ ಒಪ್ಪುವಳು . ನಂತರ ನಮ್ಮ ಅಂಗಳದಲ್ಲಿ ಮದುವೆ .
ಆಟಿ ತಿಂಗಳಲ್ಲಿ ಆಟಿ ಕಳಂಜ ,ನಂತರ ಸೋಣೆ ಜೋಗಿ ತಪ್ಪದೇ ಬರುವರು . ಮಳೆ ಕಾಲದಲ್ಲಿ ಯಕ್ಷಗಾನ ಸ್ತ್ರೀ ವೇಷ ಕೂಡಾ .ಹೆಚ್ಚಾಗಿ ರಾತ್ರಿ ನಾವು ಮಲಗಿದ ಮೇಲೆ ಸೂಟೆ ಬೆಳಕಿನಲ್ಲಿ ಬರುವರು .ಮೊದಲು ಮನೆಯ ನಾಯಿ ಬೊಗಳಿ ಎಲ್ಲರನ್ನೂ ಎಬ್ಬಿಸುವದು . ನಿದ್ದೆಗಣ್ಣಿನಲ್ಲಿ ನಾವು ಎದ್ದು ನೋಡುವುದು .. ಬಾಗಿಲು ಇಲ್ಲದ ಬರೀ ಕಬ್ಬಿಣ ಸರಳುಗಳು ಇದ್ದ ಜಗುಲಿಯಲ್ಲಿ ನಾವು ಸಾಲಾಗಿ ಮಲಗಿರುತ್ತಿದ್ದೆವು . ಅಲ್ಲಿಂದಲೇ ನಮಗೆ ನೋಡುವ ಭಾಗ್ಯ .
ಇಲ್ಲಿ ಒಂದು ವಿಚಾರ ನಾಯಿಗಳು ಅತಿಥಿಗಳು ಬಂದೊಡನೆ ಬೊಗಳಿ ಹಾರಡಿದರೂ ಮತ್ತೆ ನಮ್ಮೊಂದಿಗೆ ಅವೂ ಆನಂದಿಸುವವು .
ಸೂಟೆ ಆಗ ನಾವು ಸಾಮಾನ್ಯವಾಗಿ ಉಪಯೋಗಿಸುತ್ತಿದ್ದ ಟಾರ್ಚ್ .ತೆಂಗಿನ ಗರಿಗಳ (ಸೂಡಿ )ಸೂಟೆ ಯನ್ನು ಬೇಕಾದಾಗ ಬೀಸಿ ಉರಿಸಿ ಉಳಿದ ಸಮಯ ಜಸ್ಟ್ ಜೀವಂತ ವಿರಿಸುವ ಎಕನಾಮಿಕ್ಸ್ ಮತ್ತು ಆರ್ಟ್ ಅನುಭವ ದಿಂದ ಬರುವುದು .ನಾವು ಜಾತ್ರೆಗೆ ಮತ್ತು ಆಟಕ್ಕೆ ಹೋಗುವಾಗ ಇದೇ ನಮ್ಮ ದಾರಿ ದೀಪ .ಇದರ ಬೆಳಕಿನಲ್ಲೇ ಹಿಂದೆ ಯಕ್ಷಗಾನ ಕೂಡಾ ನಡೆಯುತ್ತಿತ್ತಂತೆ .,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ