ನಿಟ್ಟುಸಿರೀ ಕಹಿ ಗಾನ ಎದೆ ಝಲ್ಲನೆ ನೋವಿನ ಬಾಣ
ವಾಚಕರೆ ನಮ್ಮ ದೇಹದಲ್ಲಿ ಭೌತ ಶಾಸ್ತ್ರ ,ರಸಾಯನ ಶಾಸ್ತ್ರ ಮತ್ತು ಜೀವ ಶಾಸ್ತ್ರ ಅನ್ಯೋನ್ಯವಾಗಿ ಸಮ್ಮಿಳಿತ ಗೊಂಡಿವೆ .ಜೀವಕ್ರಿಯೆ ಸರಿಯಾಗಿ ನಡೆಯಲು ರಕ್ತದ pH 7.35 ರಿಂದ 7.45 ರ ಒಳಗೆ ಇರಬೇಕು .ಶರೀರದಲ್ಲಿ ಸದಾ ಆಮ್ಲ ಉಂಟು ಮಾಡುವ ವಸ್ತುಗಳು ಉತ್ಪತ್ತಿ ಆಗುತ್ತಲೇ ಇದ್ದು ಈ ಪ್ರಮಾಣ ಏರು ಪೇರು ಆಗ ಬಹುದು .ಅದಕ್ಕೆ ನಮ್ಮ ದೇಹದಲ್ಲಿ ಬ್ಯುಲ್ಟ್ ಇನ್ ಸ್ಟೆಬಿಲೈಸರ್ ಇದೆ .ಒಂದು ಉಸಿರಾಟದ ಮೂಲಕ ಇಂಗಲಲಾಮ್ಲ (ಕಾರ್ಬನ್ ಡೈ ಆಕ್ಸೈಡ್ )ಹೊರ ಹಾಕುವುದು ಮತ್ತು ಇನ್ನೊಂದು ಮೂತ್ರ ಪಿಂಡಗಳ ಮೂಲಕ ಆಮ್ಲ ವಸ್ತುಗಳ ವಿಸರ್ಜನೆ .ಉಸಿರಾಟದ ವೇಗ ಮತ್ತು ಆಳ ಹೆಚ್ಚು ಮಾಡಿದರೆ ರಕ್ತ ಆಮ್ಲ ಅಂಶ ಕಳೆದು ಕೊಂಡು ಕ್ಷಾರೀಕರಣ ಗೊಳ್ಳುವುದು .
ಕೆಲವು ಮಂದಿ ಮುಖ್ಯವಾಗಿ ಎಳೆಯ ಹುಡುಗಿಯರು ಕೆಲವೊಮ್ಮೆ ಯಾವುದೇ ಕಾಯಿಲೆ ಇಲ್ಲದಿದ್ದರೂ ಮನಸಿನ ಉದ್ವೇಗದಿಂದ ನಿಟ್ಟುಸಿರು ಅಥವಾ ಏದುಸಿರು ಬಿಡುವರು .ಉದ್ವೇಗಕ್ಕೆ ಕಾರಣ ಶಾಲಾ ಪರೀಕ್ಷೆ ,ಬರಲಿರುವ ಇಂಟೆರ್ ವ್ಯೂ ಅಥವಾ ಪರಿಸರ ಕಾರಣ ಇರ ಬಹುದು .
ಆಗ ಅಳ ವೇಗ ಅಧಿಕ ಉಸಿರಾಟ ಉಂಟಾಗುವುದು ,ಉಸಿರು ಕಟ್ಟಿದಂತೆ ಭಾಸ ಆಗುವುದು .ಎದೆ ನೋವು ,ಹೊಟ್ಟೆ ಉಬ್ಬರ ಇತ್ಯಾದಿ ಸೇರಿಕೊಳ್ಳುವುವು .ಜತೆಗೆ ಭಯ ಹುಟ್ಟಿಸುವಂತೆ ಕೈ ಕಾಲು ಕೊಕ್ಕೆ ಗಟ್ಟುವುವು ,ಇದರಿಂದ ನೋವೂ ಉಂಟಾಗುವುದು .
ಕೆಲವರು ಇದು ಅಪಸ್ಮಾರ ಎಂದು ತಪ್ಪು ತಿಳಿಯುವರು .
ಮೊದಲೇ ತಿಳಿಸಿದಂತೆ ಜೋರಾಗಿ ಉಸಿರಾಡಿದಾಗ ರಕ್ತ ಕ್ಷಾರೀಕರಣ ಗೊಳ್ಳುವುದು .ಇದರ ಪರಿಣಾಮ ರಕ್ತದ ಅಯಾನ್ ರೂಪದ ಕ್ಯಾಲ್ಸಿಯಂ ಪ್ರಮಾಣ ತಾತ್ಕಾಲಿಕ ವಾಗಿ ಕಡಿಮೆ ಆಗುವುದು .ಕ್ಯಾಲ್ಸಿಯಂ ಕಮ್ಮಿ ಆದುದರ ಲಕ್ಷಣ ಕೈ ಕಾಲು ಕೊಕ್ಕೆ (ಕೊಚ್ಛೆ )ಗಟ್ಟುವುದು .ನೀವು ರಕ್ತದ ಕ್ಯಾಲ್ಸಿಯಂ ಪ್ರಮಾಣ ನೋಡಿದರೆ ಸರಿ ಇರುವುದು .ಆದುದರಿಂದ ಇವರಿಗೆ ಕ್ಯಾಲ್ಸಿಯಂ ಕೊಟ್ಟು ಪ್ರಯೋಜನ ಇಲ್ಲ .
ಇಂತಹವರು ಬಂದಾಗ ಅವರ ರೋಗ ಚರಿತ್ರೆ ತೆಗೆದು ಕೊಂಡು ,ಯಾವುದಾದರು ಬೇರೆ ಗಂಭೀರ ಕಾಯಿಲೆ ಇಲ್ಲ ಎಂದು ಮೊದಲು ಮೊದಲು ದೃಢ ಪಡಿಸಿ ಕೊಳ್ಳುತ್ತೇವೆ . ಕೆಲವು ರಕ್ತ ಪರೀಕ್ಷೆ , ಇ ಸಿ ಜಿ ,ಮತ್ತು ರಕ್ತದ ಆಮ್ಲಜನಕ ಪ್ರಮಾಣ ಇತ್ಯಾದಿ .
ಆಮೇಲೆ ರೋಗಿಗೆ ಧೈರ್ಯ ತುಂಬುತ್ತೇವೆ ಮತ್ತು ಅವಶ್ಯವಿದ್ದರೆ ಉದ್ವೇಗ ಶಮನ ಔಷಧಿ ಕೊಡಬೇಕಾಗುವುದು .ಕೆಲವರಿಗೆ ದೀರ್ಘ ಕಾಲದ ಖಿನ್ನತಾ ನಿವಾರಕ (ಇವು ಉದ್ವೇಗ ಶಮನ ಗುಣವನ್ನೂ ಹೊಂದಿವೆ )ಸಲಹೆ ಮಾಡುವೆವು
ಇದರದ್ದೇ ಒಂದು ಸಣ್ಣ ರೂಪ ಇದೆ .ಇದರಲ್ಲಿ ರೋಗಿ ತನಗೆ ದಮ್ಮು ಗಟ್ಟುವುದು ಎಂದು ಬರುವರು .ಪರೀಕ್ಷೆ ಮಾಡಿದಾಗ ಅಸ್ತಮಾ ಅಥವಾ ಹೃದ್ರೋಗದ ಲಕ್ಷಣ ಇರುವುದಿಲ್ಲ .ಬದಲಿಗೆ ಆಗಾಗ ದೀರ್ಘ ಶ್ವಾಸ ತೆಗೆದು ಕೊ ಳ್ಳುತ್ತಿರುತ್ತಾರೆ .ಇವರಿಗೆ ಅಶ್ವಾಶನೆ ಸಾಕಾಗುವುದು .
ಈ ಲೇಖನದ ಶೀರ್ಷಿಕೆ ಗೆ ಸ್ಪೂರ್ತಿ ಹಾಡು ಕೇಳಲು ಈ ಲಿಂಕ್ ಒತ್ತಿರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ