ನಿದ್ರಾ ಸಮಯದ ಶ್ವಾಸ ಅಡಚಣೆ
ಗೊರಕೆ ಹೊಡೆದು ನಿದ್ರಿಸುತ್ತಿರುವವರನ್ನು ಕಂಡು ನೀವು ಕರುಬಿ ಎಂಥಾ ಪುಣ್ಯವಂತನಯ್ಯ ಎಂತಹ ಸುಖ ನಿದ್ರೆ ಎಂದು ಕೊಂಡಿರುವಿರಿ .ಆದರೆ ಇವರಲ್ಲಿ ಬಹಳ ಮಂದಿ ಮೇಲೆ ಹೇಳಿದ ನಿದ್ರಾ ಸಮಯದ ಶ್ವಾಸ ಅಡಚಣೆ (Obstructive Sleep apnea )ಎಂಬ ಕಾಯಿಲೆಯಿಂದ ಬಳಲುತ್ತಿರಬಹುದು .ಕೆಲವರ ಗೊರಕೆ ಸರಣಿಯಲ್ಲಿ
ಗೊರ್ ಗೋರ್ ....... ಗೋರ್ರ್ ಗೋರ್ ----------------- ಗೋರ್ ಗೋರ್ ಎಂದು ನಡುವೆ ದೀರ್ಘ ವಿರಾಮ ಇರುವುದನ್ನು ನೀವು ಗಮನಿಸಿರ ಬೇಕು .ಇದು ಶ್ವಾಸೋಚ್ವಾಸ ನಿಲುಗಡೆ ಆದ ಸಂಕೇತ .ಈ ಸಮಯ ರಕ್ತದ ಆಮ್ಲಜನಕ ಪ್ರಮಾಣ ಕಡಿಮೆ ಆಗುವುದು .ಹೃದಯ ಮತ್ತು ಮೆದುಳಿನ ಕಾರ್ಯದಲ್ಲಿ ವ್ಯತ್ಯಯ ಆಗ ಬಹುದು ..
ಗಟ್ಟಿಯಾದ ಮತ್ತು ಪಕ್ಕದಲ್ಲಿ ಮಲಗಿದವರಿಗೆ ತೊಂದರೆ ಕೊಡಬಲ್ಲ ಗೊರಕೆ ,ಆಗಾಗ ಉಸಿರು ನಿಲ್ಲುವುದು ,ಉಸಿರಾಟದ ವೇಳೆ ಸಂಕಟ ವಾದಂತೆ ತೋರುವದು ಇತ್ಯಾದಿ ಇದ್ದರೆ ಅದು ರೋಗಗ್ರಸ್ಥ ನಿದ್ರೆ .ಇದರಿಂದ ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ ,ಆಗಾಗ ಎಚ್ಚರ ಆಗುವುದು ಮುಂಜಾನೆ ಏಳುವಾಗ ಇನ್ನೂ ಮಲಗ ಬೇಕೆಂದು ತೋರುವದು ,ತಲೆ ನೋವು ಮತ್ತು ಹಗಲು ಹೊತ್ತು ಕುಳಿತಲ್ಲೇ ತೂಕಡಿಕೆ .ಕೆಲವು ನಾಯಕರು ವೇದಿಕೆಯಲ್ಲಿ ತೂಕಡಿಸುವ ಕಾರಣ ಇದುವೇ .ದೀರ್ಘ ಕಾಲದಲ್ಲಿ ಇದು ಮರೆಗುಳಿ ತನ ,ಮಾನಸಿಕ ಖಿನ್ನತೆ ,ಲೈಂಗಿಕ ದೌರ್ಬಲ್ಯ ಮತ್ತು ಏರು ರಕ್ತದ ಒತ್ತಡ ಉಂಟು ಮಾಡ ಬಹುದು .
ಇದು ಸಾಮಾನ್ಯ ಗೊರಕೆಯೇ ,ಅಥವಾ ರೋಗವೇ ಎಂದು ಕಂಡು ಹಿಡಿಯಲು ನಿದ್ರೆಯ ಮಾಪನ ಮಾಡುವರು .ಇದನ್ನು ನಿದ್ರೆಯ ಬಹು ಆಯಾಮ ( polysomnography )ಅಧ್ಯಯನ ಎಂದು ಕರೆಯುವರು .ಇದಕ್ಕೆ ಒಂದು ರಾತ್ರಿ ಆಸ್ಪತ್ರೆಯಲ್ಲಿ ದಾಖಲಾಗ ಬೇಕಾಗುವುದು .ನಮ್ಮ ಮೈ ಮುಖ ತಲೆ ಗೆ ವಯರ್ ಕಟ್ಟಿ ಮೆದುಳು ,ಕಣ್ಣು ,ಶ್ವಾಸೋಚ್ವಾಸ ,ಹೃದಯ ಮತ್ತು ರಕ್ತದ ಆಮ್ಲಜನಕ ಪ್ರಮಾಣ ಅಹೋರಾತ್ರಿ ಅಳೆಯುವರು .ನಾನು ಇದರ ಅನುಭವ ಪಡೆಯಲೆಂದೇ ಈ ಪರೀಕ್ಷೆ ಮಾಡಿಸಿ ಕೊಂಡಿರುವೆನು .ಆದರೆ ಶರೀರ ತುಂಬಾ ತಂತಿಗಳನ್ನು ಧರಿಸಿ ,ಇನ್ನೊಬ್ಬರ ಕಣ್ಗಾವಲಿನಲ್ಲಿ ನಿದ್ರೆ ಸರಿಯಾದ ನಿದ್ರೆ ಬರಲಿಲ್ಲ .ಆದರೆ ಕಾಯಿಲೆ ಇರುವರಿಗೆ ತಥಾ ಕಥಿತ ಗೊರಕೆ ನಿದ್ರೆ ಬರ ಬಹುದು .
ಬೊಜ್ಜು ,ಥೈರಾಯಿಡ್ ಹಾರ್ಮೋನ್ ಕೊರತೆ ,ಮದ್ಯಪಾನ ಇತ್ಯಾದಿ ಈ ಕಾಯಿಲೆಗೆ ಕಾರಣ ಇರಬಹುದು .ಕುಂಭಕರ್ಣ ನಿಗೆ ಬಹುಶಃ ಇದೇ ತೊಂದರೆ ಇದ್ದಿರಬೇಕು ಎಂದು ನನ್ನ ಊಹೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ