ಮೂತ್ರ ಪಿಂಡಗಳ ಪಠ್ಯೇತರ ಚಟುವಟಿಕೆಗಳು
ಪಠ್ಯ ಪುಸ್ತಕದಲ್ಲಿ ಮೂತ್ರ ಪಿಂಡಗಳು ಶರೀರದಿಂದ ನೀರು ಮತ್ತು ಕಲ್ಮಶಗಳನ್ನು ವಿಸರ್ಜಿಸುತ್ತವೆ ; ಲವಣಗಳ ಪ್ರಮಾಣ ,ರಕ್ತದ ಸಾಂದ್ರತೆ ನಿಯಂತ್ರಿಸುತ್ತವೆ ಎಂದು ಕಲಿತಿದ್ದೇವೆ .
ಆದರೆ ಇನ್ನೂ ಕೆಲವು ಪ್ರಾಮುಖ್ಯ ಕೆಲಸಗಳನ್ನು ಅವು ನಿರ್ವಹಿಸುತ್ತವೆ .
೧. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಪ್ರಚೋದನೆ . ಕೆಂಪು ರಕ್ತ ಕಣಗಳು ಪ್ರಾಣವಾಯು ವನ್ನು ಶ್ವಾಸ ಕೋಶದಿಂದ ದೇಹದ ಕಣ ಕಣ ಗಳಿಗೂ ಸಾಗಿಸುವ ವಾಹಕಗಳು .ಆಮ್ಲಜನಕದ ಪ್ರಮಾಣ ಕಡಿಮೆ ಆದೊಡನೆ ಮೂತ್ರ ಪಿಂಡಗಳು ಎರಿತ್ರೊ ಪೊಯ್ಟಿನ್ ಎಂಬ ರಸ ವಿಶೇಷ ಉತ್ಪಾದಿಸಿ ರಕ್ತ ಕಣ ಕಾರ್ಖಾನೆ ಎಲುಬು ಮಜ್ಜೆಗೆ ಹೆಚ್ಚು ಹೆಚ್ಚು ಕೆಂಪು ರಕ್ತ ಕಣ ತಯಾರಿಸಲು ಸಂದೇಶ ನೀಡುತ್ತವೆ .ಇದರಿಂದ ಇದ್ದ ಬದ್ದ ಆಮ್ಲಜನಕ ಬಾಚಿ ಒಯ್ಯಲು ವ್ಯವಸ್ಥೆ ಆಗುವುದು .ಮೂತ್ರ ಪಿಂಡ ವೈಫಲ್ಯ ಇರುವವರಲ್ಲಿ ರಕ್ತ ಹೀನತೆಗೆ ಮುಖ್ಯ ಕಾರಣ ಈ ವಸ್ತುವಿನ ಅಭಾವ .ಅದಕ್ಕೆ ಕೃತಕವಾಗಿ ಎರಿತ್ರೊ ಪೊಯ್ಟಿನ್ ತಯಾರು ಮಾಡಿ ರೋಗಿಗೆ ಚುಚ್ಚು ಮದ್ದು ರೂಪದಲ್ಲಿ ಕೊಡುವರು .
೨. ಕ್ರಿಯಾಶೀಲ ವಿಟಮಿನ್ ಡಿ ಉತ್ಪಾದನೆ .
ನಮ್ಮ ಶರೀರದಲ್ಲಿ ಕ್ಯಾಲ್ಸಿಯಂ ಕರುಳಿನಿಂದ ರಕ್ತಕ್ಕೆ ಅಲ್ಲಿಂದ ಎಲುಬಿಗೆ ಸೇರಲು ಮತ್ತು ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಾಯ್ದು ಕೊಳ್ಳಲು ವಿಟಮಿನ್ ಡಿ ಅತ್ಯವಶ್ಯಕ ..ನಿಮಗೆ ತಿಳಿದಿರುವಂತೆ ಸೂರ್ಯ ಕಿರಣ ಚರ್ಮದ ಮೂಲಕ (ಕರ್ಣನ ನೆನಪು ಆಗುವುದೋ )ವಿಟಮಿನ್ ಡಿ ಉತ್ಪಾದಿಸದರೆ ಸ್ವಲ್ಪ ಆಹಾರದಲ್ಲಿ ಬರುವುದು . ಆದರೆ ಇವು ನಿಷ್ಕ್ರಿಯಾ ರೂಪದಲ್ಲಿ ಇರುವವು . ಯಕೃತ್ ನಲ್ಲಿ ಇದಕ್ಕೆ ಒಂದು ಕೋಡು (OH -Hydroxyl )ಸೇರಿದರೆ ಎರಡನೆಯದು ಮೂತ್ರ ಪಿಂಡಗಳಲ್ಲಿ ಜೋಡಣೆ ಆದಾಗ ಮಾತ್ರ ಕ್ರಿಯಾಶೀಲ ವಿಟಮಿನ್ ಡಿ ಆಗಿ ಕಾರ್ಯ ಪ್ರವೃತ್ತ ಆಗುವುದು .ಕಿಡ್ನಿ ಫೈಲ್ಯೂರ್ (ವೈಫಲ್ಯ )ದಲ್ಲಿ ರೆಡಿ ಮೇಡ್ ಎರಡು ಕೋಡಿನ ವಿಟಮಿನ್ ಡಿ ಕೊಡುವರು. .
೩. ರಕ್ತದ ಒತ್ತಡ ಕಾಪಾಡುವಿಕೆ .
ಮೂತ್ರ ಪಿಂಡಗಳು ರೆನಿನ್ ಎಂಬ ರಸ ವಿಶೇಷ ಉತ್ಪತ್ತಿ ಮಾಡುವವು .ಇದು ಯಕೃತ್ ನಲ್ಲಿ ಆಂಜಿಯೋ ಟೆನ್ಸಿನೋಜನ್ ತಯಾರು ಮಾಡಲು ಪ್ರೇರೇಪಿಸುವುದು .ಶ್ವಾಸ ಕೋಶದಲ್ಲಿ ಇದು ಆಂಜಿಯೋಟೆನ್ಸಿನ್(ಆಂಜಿಯೋ ಅಂದರೆ ರಕ್ತ ನಾಳ ,ಟೆನ್ಸಿನ್ ಅಂದರೆ ಅದರ ಟೆನ್ಷನ್ ಜಾಸ್ತಿ ಮಾಡುವಂತಹುದು ) ಎಂಬ ವಸ್ತುವಾಗಿ ಮಾರ್ಪಟ್ಟು ರ್ರಕ್ತ ನಾಳಗಳ ಸಂಕುಚನ ಉಂಟು ಮಾಡುವುದು .ಇದರಿಂದ ರಕ್ತದ ಒತ್ತಡ ಏರುವುದು .ಅಲ್ಲದೆ ಮೂತ್ರಪಿಂಡಗಳ ಶಿರದಲ್ಲಿ ಅಡ್ರಿನಲ್ ಗ್ರಂಥಿಗಳಿಂದ ಅಲ್ದೊ ಸ್ಟಿರೋನ್ ಎಂಬ ಹಾರ್ಮೋನ್ ಉತ್ಪತ್ತಿ ಆಗುವಂತೆ ಮಾಡುವುದು .ಈ ಹಾರ್ಮೋನ್ ಕಿಡ್ನಿ ಗಳು ನೀರು ಮತ್ತು ಉಪ್ಪು ಕಾಯ್ದಿಡುವಂತೆ ಮಾಡಿ ಇಳಿಯುತ್ತಿರುವ ರಕ್ತದ ಒತ್ತಡ ಕಾಯ್ದು ಕೊಳ್ಳುವುದು .
ಇನ್ನೂ ಹಲವು ಕೆಲಸಗಳನ್ನು ಕಿಡ್ನಿಗಳು ಯಾವುದೇ ಪ್ರಚಾರವಿಲ್ಲದೆ ಮಾಡುತ್ತಿರುತ್ತವೆ .ಮೂತ್ರ ಪಿಂಡಗಳೆಂದರೆ ಬರೀ ವಿಸರ್ಜನಾಂಗಗಳಷ್ಟೇ ಅಲ್ಲ ಅವು ಒಂದು ವಿವಿದೋದ್ದೇಶ ಸಹಕಾರಿ ಸಂಘಗಳಂತೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ