ಜ್ವರ
ಮುನುಜರಲ್ಲಿ ನಿತ್ಯ ವ್ಯಾಪಾರ ಸರಿಯಾಗಿ ನಡೆಯಲು ಶರೀರದ ಉಷ್ಣಾಂಶ ಒಂದೇ ರೀತಿ ಕಾಯ್ದು ಕೊಳ್ಳ ಬೇಕಾಗುವುದು .ಇದು 36.8 ± 0.4°C (98.2 ± 0.7°F) ರೇಂಜಿನಲ್ಲಿ ಇರುವುದು .ಇದು ದಿನವಿಡೀ ಒಂದೇ ತರಹ ಇರದೇ ಬೆಳಿಗ್ಗೆ ಕಡಿಮೆ ಮತ್ತು ಸಂಜೆ ಜಾಸ್ತಿ ಇರುವುದು ಬೆಳಿಗ್ಗೆ ಹೆಚ್ಚೆಂದರೆ 37.2°C (98.9°F) ಇದ್ದು ಸಂಜೆ 37.7°C (99.9°F ) ಇರ ಬಹುದು. ಸಂಜೆ ಉಷ್ಣಾಂಶ ಸ್ವಲ್ಪ ಜಾಸ್ತಿ ಇದ್ದರೆ ಅದನ್ನು ಜ್ವರ ಎಂದು ತಿಳಿಯ ಬಾರದು ಬೆಳಗ್ಗೆ . 37.2°C ಕ್ಕಿಂತ (98.9°F) ಸಂಜೆ37.7°C (99.9°F) ಕ್ಕಿಂತ ಹೆಚ್ಚು ಇದ್ದರೆ ಜ್ವರ ಎನ್ನ ಬಹುದು . ಮಹಿಳೆಯರಲ್ಲಿ ಋತು ಚಕ್ರ ದ ಮಧ್ಯದ ದಿನಗಳಿಂದ ಬೆಳಿಗಿನ ಉಷ್ಣಾಂಶ 0.6°C (1.0°F)ಅಧಿಕ ಇರುವುದು ಸಾಮಾನ್ಯ .
ನಮ್ಮ ಶರೀರದ ಉಷ್ಣ ನಿರಂತ್ರಕ ಮೆದುಳಿನ ಹೈಪೋಥಲಾಮಸ್ ಎಂಬ ಭಾಗದಲ್ಲಿ ಇದೆ .ಇದರ ಆಜ್ಞೆಯಂತೆ ತಾಪ ಎರ ಬೇಕಾದಾಗ ಯಕೃತ್ ,ಮೆದುಳು ,ಮಾಂಸ ಖಂಡ ಗಳು ಮತ್ತು ಇತರ ಅಂಗಗಳು ಗ್ಲುಕೋಸ್ ,ಕೊಬ್ಬು ಮತ್ತು ಅಮೈನೊ ಆಮ್ಲ ಉರಿಸಿ ಶಾಖೋತ್ಪಾದನೆ ಮಾಡುವವು .ಚರ್ಮಕ್ಕೆ ರಕ್ತ ಸಂಚಾರ ಕಡಿಮೆ ಮಾಡಿ ಶಾಖ ನಷ್ಟ ವಾಗದಂತೆ ನೋಡಿಕೊಳ್ಳುವುದು .
ಜ್ವರ ಉಂಟು ಮಾಡುವ ವಸ್ತುಗಳಿಗೆ ಪೈರೋಜನ್ ಅಥವಾ ಜ್ವರ ಕಾರಕಗಳು ಎನ್ನುವರು . ಇವುಗಳಲ್ಲಿ ಎರಡು ತರಹ .ಒಂದು ಹೊರಗಿನಿಂದ ಬಂದವುಗಳು ,ಮತ್ತು ಎರಡನೆಯದು ಶರೀರ ಉಳಗೇ ಉತ್ಪತ್ತಿಯಾದವು .ಉದಾಹರಣೆಗೆ ಒಂದು ಬ್ಯಾಕ್ಟೀರಿಯಾ ಶರೀರ ಪ್ರವೇಶಿಸಿದಾಗ ಬಿಳಿ ರಕ್ತ ಕಣಗಳು ಧಾಳಿ ಮಾಡುವುವು .ಈ ಕಾಳಗದಲ್ಲಿ ಗಾಯಗೊಂಡ ,ಮೃತವಾದ ಮತ್ತು ಇತರ ಬಿಳಿ ರಕ್ತ ಕಣ ಮತ್ತು ಬ್ಯಾಕ್ಟೀರಿಯಾ ಗಳಿಂದ ಜ್ವರ ಕಾರಕ ರಾಸಾಯನಿಕ ವಸ್ತುಗಳು ಬಿಡುಗಡೆ ಗೊಂಡು ರಕ್ತದ ಮೂಲಕ ತಾಪ ನಿಯಂತ್ರಣ ಕೇಂದ್ರಕ್ಕೆ ಎಚ್ಚರಿಸುವವು .ಅದು ಶರೀರದ ತಾಪಮಾನವನ್ನು ತನಗೆ ಅನ್ನಿಸಿದಷ್ಟು ಏರಿಸಿ ಪ್ರಕಟಿಸುವುದು .ಪೆಟ್ರೋಲ್ ಬಂಕ್ ನಲ್ಲಿ ದರ ಏರಿಸಿ ಬರೆದಂತೆ .ಕೂಡಲೇ ಶಾಖೋತ್ಪನ್ನ ಕೇಂದ್ರಗಳಿಗೆ ಸಂದೇಶ ರವಾನೆ ಆಗುವುದು ,ಇದರಲ್ಲಿ ಮಾಂಸ ಖಂಡಗಳು ವೇಗವಾಗಿ ಸಂಕುಚನ ವಿಕಸನ ಗೊಂಡು ನಡುಗುವುದನ್ನು ರೈಗರ್ ಅಥವಾ ಜ್ವರದ ನಡುಕ ಎನ್ನುವರು .
ಜ್ವರದ ಉದ್ದೇಶ ಆಕ್ರಮಿಗಳನ್ನು ಕೊಲ್ಲುವುದು ಮತ್ತು ಸೋಂಕು ವಿರೋಧಿ ಚಟುವಟಿಕೆಗೆ ವೇಗ ಕೊಡುವುದೂ ಇರ ಬಹುದು .
ಎಲ್ಲಾ ಜ್ವರಗಳು ಬ್ಯಾಕ್ಟೀರಿಯಾ ,ವೈರಸ್ ಇತ್ಯಾದಿಗಳಿಂದಲೇ ಬರುವುದು ಎಂದು ಇಲ್ಲ . ಸ್ವಯಮ್ ನಿರೋಧಕ ಕಾಯಿಲೆಗಳಲ್ಲಿಯೂ ಜ್ವರ ಬರುವುದು .(ಉದಾ SLE ,ರುಮಟಾಯ್ಡ್ ಆರ್ಥ್ರೈಟಿಸ್ ).ತಾಪಮಾನ ಕಡಿಮೆ ಆಗ ಬೇಕು ಎಂದಾಗ ಚರ್ಮ ಮತ್ತು ಬೆವರು ಗ್ರಂಥಿ ಗಳಿಗೆ ಆದೇಶ ಹೋಗಿ ಅಧಿಕ ಬೆವರು ಉತ್ಪತ್ತಿಯಾಗಿ ತನ್ಮೂಲಕ ಶಾಖ ವೂ ಹೊರ ಹೋಗುವುದು .ಜ್ವರ ಬಿಡುವಾಗ ಬೆವರುವುದು ಇದೇ ಕಾರಣಕ್ಕೆ .ನಮ್ಮ ನಿಶ್ವಾಸದ ಮೂಲಕವೂ ತಾಪಮಾನ ಹೊರಹೋಗುವುದು .
ಸಣ್ಣ ಜ್ವರಕ್ಕೆ ಜ್ವರ ಕಡಿಮೆ ಮಾಡುವ ಔಷಧಿ ಬೇಡ .ಏರು ಜ್ವರ ಇದ್ದರೆ ರೋಗಿಯು ಬಳಲುವನು .ಆಗ ಪ್ಯಾರಾಸಿಟಮಾಲ್ ನಂತಹ ಔಷಧಿ ಕೊಡುವರು .ಈ ಔಷಧಿ ಜ್ವರ ನಿಯಂತ್ರಕ ವನ್ನು ಪ್ರಚೋದಿಸುವ ರಾಸಾಯನಿಕಗಳ ವಿರುದ್ಧ ಕಾರ್ಯ ಮಾಡುವದು . ಆದರೆ ಮುಖ್ಯ ಚಿಕಿತ್ಸೆ (ಇದ್ದರೆ ) ಮೂಲ ರೋಗಕ್ಕೆ ಉದಾ ಟೈಪೋಯ್ಡ್ ,ಮಲೇರಿಯ ಇತ್ಯಾದಿ .
ಬಾಲಂಗೋಚಿ ; ಆಸ್ಪತ್ರೆಯಲ್ಲಿ ಸಿರಿಂಜ್ ಮತ್ತು ಗ್ಲುಕೋಸ್ ಬಾಟಲ್ಲುಗಳ ಮೇಲೆ ಪೈರೋಜನ್ ಫ್ರೀ ಎಂದು ಬರೆದಿರುತ್ತಾರೆ .ಇದರ ಅರ್ಥ ಜ್ವರ ಉಂಟು ಮಾಡುವ ರೋಗಾಣು ಅಥವಾ ಕಲ್ಮಶ ಇಲ್ಲಾ .ಕೆಲವರು ಇದನ್ನು ಓದಿ ಈ ಫ್ರೀ ಯಾಗಿ ಕೊಡುವ ವಸ್ತು ಎಲ್ಲಿ ಎಂದು ಕೇಳಿದ್ದುಂಟು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ