ಬೆಂಬಲಿಗರು

ಭಾನುವಾರ, ಡಿಸೆಂಬರ್ 8, 2024

  ಪಾಸ್ ಫೈಲ್ 

ನಾವು ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ಸಮಯ; ದೊಡ್ಡ ರಜೆ ಕಳೆದು ತರಗತಿ ಆರಂಭವಾಗುವ ದಿನ ಈಗಿನಂತೆ ವಿದ್ಯಾರ್ಥಿಗಳನ್ನು  ಸ್ವಾಗತಿಸುವ ಪರಿಪಾಡಿ ಇರಲಿಲ್ಲ . ಕ್ಲಾಸ್ ಅಧ್ಯಾಪಕರು ಹಾಜರಿ ಪಟ್ಟಿಯಿಂದ ಹೆಸರು ಕೂಗಿ ಕರೆಯುವರು .ಅವರೆಲ್ಲಾ ಪಾಸ್ .ತಮ್ಮ ಸ್ಲೇಟು ಕಡ್ಡಿ ಸರಂಜಾಮು ಹೊತ್ತುಕೊಂಡು ಮೇಲಿನ ಕ್ಲಾಸ್ ಇರುವ ಕೊಠಡಿಗೆ ಹೋಗಬೇಕು . ಹೆಸರು ಕರೆಯದೇ ಇದ್ದವರು  ಫೈಲು . ಯಾರೆಲ್ಲ ಫೈಲು ಕೊನೆಗೇ ತಿಳಿಯುವುದು .ನಮ್ಮ ಮಿತ್ರರು ಪಾಸ್ ಆಗದಿದ್ದರೆ ಅವರ ಜತೆ ತಪ್ಪುವುದು ಎಂಬ ಬೇಸರ . ಆ ದಿನ ಕ್ಲಾಸ್ ಇಲ್ಲ . ಮರಳುವ ದಾರಿಯಲ್ಲಿ ಹೊಲಗದ್ದೆಯಲ್ಲಿ ಕೆಲಸ ಮಾಡುವವರು ಎಲ್ಯಣ್ಣೇರ್ ಪಾಸಾ ಎಂದು ಕೇಳುವರು . ಪಾಸಾಗಲಿ ಫೈಲು ಅಗಲೀ ಈಗಿನ ಹಾಗೆ ಹೊಗಳಿ ಏರಿಸುವ ಅಥವಾ ಹೀಗೆಳೆಯುವ ಪದ್ಧತಿ ಇರಲಿಲ್ಲ . ಫಲಿತಾಂಶ ದಿಂದ ಹತಾಶೆ ಗೊಂಡು ಆತ್ಮ ಹತ್ಯೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇತ್ತು .ಈಗಿನ ಸರಕಾರಿ ಶಾಲೆಗಳಂತೆ ಕಡ್ಡಾಯ  ಹೋಲ್ ಸೇಲ್ ಪಾಸ್ ಮಾಡುವ ಪದ್ಧತಿ ಇರಲಿಲ್ಲ . 

ಪಾಸ್ ಆದರೆ ಮೇಲ್ತರಗತಿಯಲ್ಲಿ ಇರುವ ನಮ್ಮ ಮಿತ್ರರ ಬಳಿ ಅವರ ಉಪಯೋಗಿಸಿದ ಟೆಕ್ಸ್ಟ್ ಬುಕ್ ಅರ್ಧ ಬೆಲೆಗೆ ಖರೀದಿಸುತ್ತಿದ್ದೆವು . ನಮ್ಮ ದುರಾದೃಷ್ಟಕ್ಕೆ ಕೆಲವೊಮ್ಮೆ ಪಠ್ಯ ಪುಸ್ತಕ ಬದಲಾಗುತ್ತಿದ್ದವು . ನಾನು ನನ್ನ ಸೀನಿಯರ್  ಮುದ್ಕುಂಜ ದಿವಾಕರ ಪ್ರಭುಗಳ ಬಳಿ  ಪುಸ್ತಕ ಕೊಳ್ಳುತ್ತಿದ್ದೆ .ಅವರು ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಇಟ್ಟು ಕೊಳ್ಳುತ್ತಿದ್ದರು

ಹೈ ಸ್ಕೂಲ್ ನಲ್ಲಿ ಕೂಡಾ ಇದೇ ರೀತಿ ಇತ್ತು . ಎಸ ಎಸ ಎಲ್ ಸಿ ಪರೀಕ್ಷೆ ಫಲಿತಾಂಶ ನವಭಾರತ ದಿನ ಪತ್ರಿಕೆಯಲ್ಲಿ ಮೊದಲು ಪ್ರಕಟವಾಗುತ್ತಿತ್ತು .ಶಾಲೆಗೆ ಆಮೇಲೆ ಬರುತ್ತಿತ್ತು ಎಂದು ನೆನಪು . ಪೇಪರ್ ನಲ್ಲಿ ಮೊದಲು ಫಸ್ಟ್ ಕ್ಲಾಸ್ ನ ಅಡಿಯಲ್ಲಿ ,ಆಮೇಲೆ ಸೆಕೆಂಡ್ ಮತ್ತು ಥರ್ಡ್ ಕ್ಲಾಸ್ ಕೆಳಗೆ ನಮ್ಮ ನಂಬರ್ ಇದೆಯೇ ಎಂದು ಹುಡುಕುತ್ತಿದ್ದೆವು .

ಶನಿವಾರ, ಡಿಸೆಂಬರ್ 7, 2024

ಯಾನ್ಲಾ ಈರ್ಲಾ ಸುಬ್ರಹ್ಮಣ್ಯದಾ ಜೋಡಿ 

ಇಂದು ಕುಕ್ಕೆ ಷಷ್ಟಿ . ಷಷ್ಟಿ ಸಮಯ ಸುಬ್ರಹ್ಮಣ್ಯದ ಬಳಿ ಕುಳ್ಕುಂದ ದಲ್ಲಿ ಜಾನುವಾರು ಸಂತೆ ನಡೆಯುತ್ತಿತ್ತು . ಘಟ್ಟದ ಮೇಲಿನಿಂದ ದನ ,ಎತ್ತು ,ಎಮ್ಮೆ ಮತ್ತು ಕೋಣಗಳನ್ನು ತಂದು ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದು ನಮ್ಮ ಜಿಲ್ಲೆಯ ರೈತರು ತಮಗೆ ಬೇಕಾದ ರಾಸುಗಳನ್ನು ಖರೀದಿಸಿ ಒಯ್ಯುತ್ತಿದ್ದರು . ಜಾತ್ರೆಗಾಗಿ ಪಶುಗಳನ್ನು ಪೋಷಿಸಿ ದಷ್ಟ ಪುಷ್ಟ ರನ್ನಾಗಿಸುತ್ತಿದ್ದಲ್ಲದೆ , ಕೊಂಬು ಕಿವಿ,ಮೂಗಿಗೆ ಅಲಂಕಾರ ಮಾಡಿರುತ್ತಿದ್ದರು. ಕೋಣಗಳ ಮೈಯ್ಯಿಂದ ಕೂದಲು ತೆಗೆದು ಎಣ್ಣೆ ಹಚ್ಚಿ ಫಳ ಫಳ ಹೊಳೆಯುವಂತೆ ಮಾಡುತ್ತಿದ್ದರು.  ಬ್ಯೂಟಿ ಪಾರ್ಲರ್ ನಿಂದ ಹೊರ ಬಂದ ಪಶುಯಗಳಂತೆ .ಉಳುಮೆಗಾಗಿ ಎತ್ತು ಮತ್ತು ಕೋಣಗಳ ಜೋಡಿಯನ್ನು ಅವರೇ ಮಾಡಿ ತರುತ್ತಿದ್ದು ಆಯ್ಕೆ ಸುಲಭ . ಸುಬ್ರಹ್ಮಣ್ಯದ ಜೋಡಿ ಬಹಳ ಪ್ರಸಿದ್ದ .ಅದಕ್ಕೇ ಒಂದು ತುಳು ಚಲ ಚಿತ್ರದಲ್ಲಿ ಯಾನುಲಾ ಈರ್ಲಾ ಸುಬ್ರಹ್ಮಣ್ಯದಾ ಜೋಡಿ ಎಂಬ ಪ್ರೇಮ ಗೀತೆ ಇದೆ . 

         ಕುಳ್ಕುಂದ ಜಾತ್ರೆಗೆ ನಾನು ಬಾಲ್ಯದಲ್ಲಿ ತಂದೆಯವರ ಜೊತೆಗೆ ಹೋದ ನೆನಪು ಇದೆ . ಅಲ್ಲಿ ಗೋಣಿ ಚೀಲ ಹಾಸಿ ಕೊಂಡು , ಚಳಿಗೆ (ಷಷ್ಟಿ ಸಮಯ ಭಾರೀ ಚಳಿ ಇರುತ್ತಿತ್ತು )ಕಂಬಳಿ ಹೊದ್ದು ಚಹಾ ಹೀರುತ್ತಿರುವ ಘಟ್ಟದ ಮೇಲಿನ ಕನ್ನಡ ಮಾತನಾಡುವ ವ್ಯಾಪಾರಿಗಳು .ಅವರೊಡನೆ  ಚೌಕಾಸಿ ಮಾಡುತ್ತಿರುವ ಗಿರಾಕಿಗಳು .ಹಿಂದೆ ಖರೀದಿಸಿದ ಜಾನುವಾರುಗಳನ್ನು ರಸ್ತೆ ಗುಂಟ ನಡೆಸಿ ಕೊಂಡೇ ಮನೆಗೆ ಬರುತ್ತಿದ್ದು ,ಕಾಲಾಂತರ ದಲ್ಲಿ ಟೆಂಪೋ ಗಳು ಬಳಕೆಗೆ ಬಂದವು

ಜಾನುವಾರು ಗಳಲ್ಲದೆ , ವಿವಿಧ ವಿನ್ಯಾಸದ ಕಂಬಳಿಗಳು , ಪಶು ಅಲಂಕಾರ ಸಾಧನಗಳು ಕೂಡಾ ಜಾತ್ರೆಯಲ್ಲಿ ಸಿಗುತ್ತಿದ್ದವು .

ನಿನ್ನೆ ಫೇಸ್ ಬುಕ್ ನಲ್ಲಿ ಸಹೋದರಿ ಒಬ್ಬರು ಜಯಂತ ಕಾಯ್ಕಿಣಿ ಯವರನ್ನು ಉಲ್ಲೇಖಿಸಿ ,"ಹೇಳಿ ಮಾಡಿಸಿದ ಜೋಡಿ ಎಂದರೆ ಚಪ್ಪಲಿ ಮಾತ್ರ ,ಬೇರೆಲ್ಲಾ ಹೋದಣಿಕೆ ಮಾತ್ರ " ಎಂಬ ಮಾತನ್ನು ಷೇರ್ ಮಾಡಿದ್ದು  ಸತ್ಯ ಎನಿಸಿತು .

ಮಂಗಳವಾರ, ಡಿಸೆಂಬರ್ 3, 2024

ಕಣ್ಣೀರ ಕತೆ

  



ಈರುಳ್ಳಿ ಅಥವಾ ನೀರುಳ್ಳಿ ಈಗ  ಹಚ್ಚದೇ ಕಣ್ಣೀರು ತರಿಸುತ್ತಿದೆ . ಎಲ್ಲಿಯೂ ಒಳ್ಳೆಯ ನೀರುಳ್ಳಿ ಸಿಗುತ್ತಿಲ್ಲ .ಸಿಕ್ಕರೂ ದರ ಕೇಳಿಯೇ ಕಣ್ಣೀರು ಬರುವಂತಿದೆ . ನಮ್ಮ ಆಸ್ಪತ್ರೆ ಇರುವ ಎ ಪಿ ಎಂ ಸಿ ರಸ್ತೆಯಲ್ಲಿ ಹಲವು ಜೀನಸು ಅಂಗಡಿಗಳು ಇದ್ದು ,ಎಲ್ಲಾ ಕಡೆ ಎಡ ತಾಕಿದೆ . ಕೆಲವು ಅಂಗಡಿಗಳು ಈ ಐಟಂ ತರಿಸುವುದೇ ನಿಲ್ಲಿಸಿವೆ . ಕಾರಣ ಬರುತ್ತ್ತಿರುವ ಮಾಲು ಕಳಪೆ ಮಟ್ಟದ್ದು .ಇನ್ನು ಕೆಲವು ಅಂಗಡಿಗಳು ಸಾಂಬಾರ್ ಈರುಳ್ಳಿ ಎಂಬ ಸಣ್ಣ ನೀರುಳ್ಳಿ ಮಾತ್ರ ಮಾರುತ್ತಿವೆ . ನಾನು ಯಾವ ವ್ಯವಹಾರಕ್ಕೂ ನಾಲಾಯಕ್ಕು ಆಗಾಗ ನನ್ನ ಮನೆಯವರು ಸೋದಾಹರಣ ಹೇಳಿ ಹೇಳಿ ನನ್ನಲ್ಲಿ ಕೀಳರಿಮೆ ಉಂಟು ಮಾಡಿರುತ್ತಾರೆ . ಅದನ್ನು ಹುಸಿ ಮಾಡಲು ಎಂದು ಪುತ್ತೂರಿನ ಸರ್ವ ಮಾಲ್ ,ಮಾರ್ಟ್ ಮತ್ತು ಅಂಗಡಿಗಳಿಗೆ ಭೇಟಿ ನೀಡಿದೆ .ಆದರೆ ವಧು ಅನ್ವೇಷಿಸುವ ಊರಿನ ಕೃಷಿಕ  ಯುವಕರ ಸ್ಥಿತಿ ಆಯಿತು .ಎಲ್ಲಿಯೂ ಒಳ್ಳೆಯ ನೀರುಳ್ಳಿ  ಪತ್ತೆ ಇಲ್ಲ . ಕೊನೆಗೆ ಮೊನ್ನೆ ಸೋಮವಾರ ಪುತ್ತೂರು ಸಂತೆ ಗೆ ಭೇಟಿ ಇತ್ತು ಎರಡು ಸುತ್ತು ಹೊಡೆದೆ . ಕೋವಿಡ್ ನಂತರ ಸಂತೆಗೆ ಭೇಟಿ ಇದುವೇ ಮೊದಲು . ಅಲ್ಲಿ ನನ್ನ ಕೆಲವು ರೋಗಿಗಳು ನನ್ನನ್ನು ನೋಡಿ ನಮಸ್ಕಾರ ಮಾಡಿ ಕನಿಕರ ಸೂಚಿಸಿದರು .'ಪಾಪ ಡಾಕ್ಸ್ರಿಗೆ ಪ್ರಾಕ್ಟೀಸ್ ಕಮ್ಮಿ ಆಗಿರ ಬೇಕು ,ಕಡಿಮೆಗೆ ತರಕಾರಿ  ಕೊಳ್ಳ್ಳುವಾ ಎಂದು ಬಂದಿರ ಬೇಕು ' ಎಂಬ ಮುಖ ಭಾವ .. 

ಕೊನೆಗೂ ಒಂದು ಮೂಲೆಯಲ್ಲಿ ಉರ್ದು ಮಾತನಾಡುವ ಸಾಹೇಬರಲ್ಲಿ ಪರವಾಗಿಲ್ಲ ಎನ್ನುವ ಮಾಲು ಕಂಡಿತು . ಕಿಲೋ ವಿಗೆ ರೂಪಾಯಿ ಅರುವತ್ತರಂತೆ ೫ ಕೆಜಿ ಕೊಂಡು ,ದಿಗ್ವಿಜಯ ಸಾದಿಸಿದವರಂತೆ ಪಕ್ಕದ ಅಂಗಡಿಯಿಂದ ಸೌತೆ ,ಬದನೆ ,ಹೀರೆ ಮತ್ತು ಮೂಲಂಗಿ ಚೀಲಕ್ಕೆ ಸೇರಿಸಿ ಕೊಂಡು ಆಸ್ಪತ್ರೆಗೆ ಹೋದೆ ದಿನವಿಡೀ ನೀರುಳ್ಳಿ ಚಿತ್ತನಾಗಿದ್ದೆ . 

ಸಂಜೆ  ಮನೆಗೆ ಸೇರಿದಾಗ ಸೈಕ್ಲೋನ್ ಮಳೆ ಆರಂಭವಾಗಿತ್ತು   ಹೆಂಡತಿಯ ಎದುರು ನೀರುಳ್ಳಿ ಇಟ್ಟು  ಮೀಸೆ ತಿರುವಾ (ನನಗೆ ಮೀಸೆ ಇಲ್ಲ ) ಎಂದು ಕರೆದರೆ ಅವಳು ಮಹಡಿಯಲ್ಲಿ ಕಿಟಿಕಿ ಬಳಿ ನೀರು ಬೀಳುವುದನ್ನು ನೋಡುತ್ತಿದ್ದಳು .ನೋಡಿ ಮಳೆಗಾಲದಲ್ಲಿ  ನೀರು ಸೋರಿ ಗೋಡೆ ಒದ್ದೆಯಾಗುವುದಕ್ಕೆ ನಾನು ನಿನ್ನೆಯಷ್ಟೇ ಹಾಕಿದ ಲೀಕ್ ಪ್ರೂಫ್ ಲೇಪ ಎಷ್ಟು ಚೆನ್ನಾಗಿ ಕೆಲಸ ಮಾಡಿದೆ . ನಾನು ನೀರುಳ್ಳಿ ನೀರುಳ್ಳಿ ಎಂದೆ ."ಎಂತದ್ದು ಮಾರಾಯರೆ ನಿಮ್ಮ ನೀರುಳ್ಳಿ . ನಾನು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇನೆ .ಒಂದು ದಿನವಾದರೂ ನನ್ನ ಕಾರ್ಯ ನೀವು ಗುರುತಿಸಿ ಪ್ರಶಂಸೆ ಮಾಡಿದ್ದುಂಟಾ .ಇದು ಎಂತ ನೀರುಳ್ಳಿ ?ಎಲ್ಲಾ ಹುಟ್ಟಿದೆ ."ಎಂದು ನನ್ನ ಉಬ್ಬಿದ ನನ್ನ ಬಲೂನ್ ಗಾಳಿ  ತೆಗೆದಳು . 

ಈ ನೀರುಳ್ಳಿ ಸಾಮಾನ್ಯ ಎಂದು ಭಾವಿಸ ಬೇಡಿ .ದೆಹಲಿಯಲ್ಲಿ ಜನಪ್ರಿಯ ನಾಯಕಿ ದಿ ಸುಷ್ಮಾ ಸ್ವರಾಜ್ ಇದರ ಸಮಸ್ಯೆಯಿಂದ ತಮ್ಮ ಮುಖ್ಯ ಮಂತ್ರಿ ಪದವಿಯನ್ನೇ ಕಳೆದು ಕೊಂಡು ,ಇಲ್ಲಿಯ ವರೆಗೆ ಅವರ ಪಕ್ಷಕ್ಕೆ ಅಲ್ಲಿ ಅಧಿಕಾರ ಮರೀಚಿಕೆಯಾಗಿಯೇ ಉಳಿದಿದೆ 

ಮಾತಿನ ಸಂಕೀರ್ಣತೆ

                                                                  Tool Module: The Human Vocal ApparatusSpeech and Brain | direct                                                                                                                    

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ನಾಲಿಗೆ ಎಂದು ದಾಸರು ಹಾಡಿದ್ದು ವಿನಾ ಕಾರಣ   ಕೆಟ್ಟದ್ದನ್ನು ಆಡುವವರಿಗೆ . ಇಲ್ಲಿ ನಾಲಿಗೆ ಯನ್ನು ಮಾತಿನ ಮುಖ್ಯ ಅಂಗ ಎಂದು ವಾಚ್ಯವಾಗಿ ಇದ್ದರೂ ಆಡುವವನನ್ನೇ ಪೂರ್ಣ ಉದ್ದೇಶಿಸಿ ಇರುವುದು . ಸಾಮಾನ್ಯ ತಿಳುವಳಿಕೆ ಇರುವಂತೆ  ನಾಲಿಗೆ ಮಾತಿನ ಮೂಲ ಅಲ್ಲ  ಅಲ್ಲದೆ ಏಕ ಮಾತ್ರ ಅಂಗವೂ ಅಲ್ಲ . 

ವಾಚ್ಯ ಮಾತಿನ ಉಗಮ ಎಡ ಮುಮ್ಮೆದುಳಿನಲ್ಲಿ .ಇಲ್ಲಿ ಬ್ರೋಕ ನ ಕೇಂದ್ರ (ಕಂಡು ಹಿಡಿದ ಫ್ರೆಂಚ್ ವಿಜ್ಞಾನಿ ಹೆಸರು )ಎಂದು ಇದ್ದು ಇಲ್ಲಿ ಆಡುವ ಮಾತಿನ ಕ್ರಿಯಾತ್ಮಕ ಸಂದೇಶ ರಚನೆ ಆಗಿ ನರಗಳ ಮೂಲಕ ಅದು ಕೊರಳಲ್ಲಿ ಇರುವ ಧ್ವನಿ ಪೆಟ್ಟಿಗೆಯ ಮಾಂಸ ಖಂಡಗಳಿಗೆ ರವಾನೆ ಆಗುತ್ತದೆ . ಆದೇಶ ಕ್ಕನುಸಾರ ಸ್ವರ ತಂತುಗಳು ಕಂಪಿಸಿ ಸ್ವರೋತ್ಪಾದನೆ ಆಗುವುದು , ನಮ್ಮ ಆಡಿಯೋ ಸ್ಪೀಕರ್ ಗಳ ಮುಖ್ಯ ಪೆಟ್ಟಿಗೆ ಯಲ್ಲಿ ಆದಂತೆ . ಉತ್ಪಾದಿತ ಶಬ್ದಗಳ ಮೌಲ್ಯ ವರ್ಧನೆ ನಾಲಿಗೆ  ,ಬಾಯಿ ,ಹಲ್ಲುಗಳ ಮೂಲಕ ಆಗುವುದಲ್ಲದೆ ,ಮೂಗಿನ ಪಾರ್ಶ್ವಗಳಲ್ಲಿ  ಮೂಳೆಗಳಲ್ಲಿ  ಖಾಲಿ ಪೆಟ್ಟಿಗೆ ಯಂತೆ ಇರುವ ಸೈನಸ್ (ಇವು ಸೌಂಡ್ ಸಿಸ್ಟಮ್ ನ  ಸ್ಪೀಕರ್ ಪೆಟ್ಟಿಗೆ ಗಳಂತೆ ಕಾರ್ಯ ನಿರ್ವಹಿಸುತ್ತವೆ )ಗಳಲ್ಲಿ ಆಗುತ್ತದೆ . 

ಆಲಿಸಿದ ಮಾತನ್ನು ಗ್ರಹಣ ಮಾಡುವ ಮೆದುಳಿನ ಕೇಂದ್ರ ಕ್ಕೆ  ವರ್ನಿಕೆ ಕೇಂದ್ರ ಎನ್ನುವರು .ಇದು ಬ್ರೋಕನ ಜಾಗಕ್ಕಿಂತ ಸ್ವಲ್ಪ ಹಿಂದುಗಡೆ ಇದ್ದು ಕಿವಿ ಮೂಲಕ ಆಲಿಸಿದ ಮಾತಿನ ಗ್ರಹಣ ಮಾಡುತ್ತದೆ . ಇಲ್ಲಿಂದ ಬ್ರೋಕನ ಜಾಗಕ್ಕೆ ಸಂಪರ್ಕ ಇದೆ . ಮಾತನ್ನು ಉತ್ಪಾದಿಸುವ ಮತ್ತು ಗ್ರಹಿಸುವ ಎರಡು ಮುಖ್ಯ  ವಿಭಾಗ ಗಳು ಇವೆ ಎಂದು ತಿಳಿಯಿತಲ್ಲಾ . 

ಮೆದುಳಿನಲ್ಲಿ  ರಕ್ತ ಹೆಪ್ಪ್ಪು ಗಟ್ಟುವುದು ಅಥವಾ ರಕ್ತ ಸ್ರಾವ ವಾಗಿ ಬ್ರೋಕನ ಕೇಂದ್ರದ ಕೆಲಸ ವ್ಯತ್ಯಯ ಆದರೆ(ಆಡುವ ) ಮಾತು ಬಿದ್ದು ಹೋಗುವುದು . ಕೇಳಿದ್ದು ಅರ್ಥ ಆಗ ಬಹುದು . ವರ್ನಿಕೆ ಕೇಂದ್ರ ಕ್ಕೆ ಮಾತ್ರ  ತೊಂದರೆ ಆದರೆ ಆಡುವ ಮಾತು ಬೀಳದು .ಆದರೆ ಆಡಿದ ಮಾತಿಗೆ ಅರ್ಥವಿರದು . ನಮ್ಮ ಬಲ ಭಾಗದ ಅವಯವಗಳ ನಿಯಂತ್ರಣ ಎಡದ ಮೆದುಳಿನಲ್ಲಿ ಇರುವುದರಿಂದ ಸಾಮಾನ್ಯವಾಗಿ  ಬಲ ಪಾರ್ಶ್ವ ವಾತ ಆದಾಗ ಮಾತೂ ಬೀಳುವುದು . 

ಧ್ವನಿ ಪೆಟ್ಟಿಗೆ ಯ ಕ್ಯಾನ್ಸರ್ ,ಅಥವಾ ನರ ದೌರ್ಬಲ್ಯ ಆದರೆ ಮಾತಿನ ಉತ್ಪಾದನೆ ಸರಿಯಾಗಿ ಆದರೂ ಶಬ್ದ ಗಳು ಹೊರಡವು .

ಸೋಮವಾರ, ಡಿಸೆಂಬರ್ 2, 2024

ಸಹಿ ನೆನಪಿನ ಸಿಹಿ

ನನ್ನ ಪತ್ನಿ ಶ್ರಮ ಜೀವಿ ಮತ್ತು ಸದಾ ಕ್ರಿಯಾ ಶೀಲೆ . ಏನಾದರೂ ಮಾಡುತಿರು ತಮ್ಮ ಎಂದು ಕವಿ ಹೇಳಿದ ರೀತಿ . ಹಾಗೆ ಮೊನ್ನೆ ನನಗೆ ಬ್ಯಾಂಕ್ ನಿಂದ  ಕೆ ವೈ ಸಿ ಅಪ್ಡೇಟ್ ಮಾಡಿ ಎಂದು ಒಂದು  ಓಲೆ ಬಂತು . ಸರಿ ನನ್ನದು ಮತ್ತು ಪತ್ನಿಯ ಕೆ ವೈ ಸಿ ದಾಖಲೆ ಪ್ರತಿ ಗಳಿಗೆ ಸಹಿ ಹಾಕಿಸ ಬೇಕಿತ್ತು . ಯಾವಾಗ ನೋಡಿದರೂ ಅವಳ ಕೈಯಲ್ಲಿ ಏನಾದರೂ ಇರುತ್ತಿದ್ದು ಹೊಂಚು ಹಾಕಿ ಕಾದು ನೋಡಿ ಸಹಿ ಹಾಕಿಸಿ ಕೊಂಡಾಗ ನಿಟ್ಟುಸಿರು . 

ಬಾಲ್ಯದಲ್ಲಿ ಶಾಲೆಯಿಂದ ಪ್ರೋಗ್ರೆಸ್ ರಿಪೋರ್ಟ್ ಅಂತ ವರ್ಷಕ್ಕೆ ಎರಡು ಬಾರಿ ಕೊಟ್ಟು ಹೆತ್ತವರ ಸಹಿ ಹಾಕಿಸಲು ಕಳುಹಿಸುತ್ತಿದ್ದರು ಕನ್ನಡ ಮೀಡಿಯಂ ನ ನಾವು ಅದನ್ನು ಪ್ರೋಕ್ರಿ ರಿಪೋರ್ಟ್ ಎನ್ನುತ್ತಿದ್ದೆವು  . ದಿನವಿಡೀ ಏನಾದರೂ ಒಂದು ಕೆಲಸ ಮಾಡಿರುತ್ತಿದ್ದ ತಂದೆಯವರನ್ನು ಕಾಡಿ ರಾತ್ರಿ ಹೊತ್ತು ಚಿಮಿಣಿ ದೀಪದ ಬೆಳಕಿನಲ್ಲಿ  ಸಹಿ ಹಾಕಿಸಿ ಕೊಳ್ಳುತ್ತಿದ್ದೆವು . ನಾವು ತುಂಬಾ ಮಕ್ಕಳು ಇದ್ದು ಸರಕಾರಿ ಆಫೀಸ್ ನಲ್ಲಿ ಫೈಲ್ ಗಳಿಗೆ ಸಹಿ ಹಾಕುವ ರೀತಿ ಇತ್ತು ಎನ್ನ ಬಹುದು . ನಮಗೆ ಮಾರ್ಕ್ ಎಷ್ಟು ಸಿಕ್ಕಿದೆ  ಎಂದು ಅವರು ಎಂದೂ ಚಿಂತೆ ಮಾಡಿದವರಲ್ಲ .ಕಡಿಮೆ ಅಂಕ ಸಿಕ್ಕಿದರೆ ಕೆಂಪು ಗೆರೆ ಹಾಕುವ ಪದ್ಧತಿ .ಕೆಲವೊಮ್ಮೆ ನಿನಗೆ ಯಾಕೆ ಕಡಿಮೆ ಕೆಂಪು ಗೆರೆ ಎಂದು ಕೇಳುವರು . ಮಕ್ಕಳು ಬುದ್ದಿವಂತರಾದರೆ ತೋಟ ಗದ್ದೆ ನೋಡಿಕೊಳ್ಳಲು ಯಾರೂ ಸಿಗಲಿಕ್ಕಿಲ್ಲ ಎಂಬ ಭಾವನೆ ಇತ್ತು . 

ತಂದೆ ಸಿಗದಿದ್ದರೆ ಅಜ್ಜನವರನ್ನು ಕಾಡಿ ಸಹಿ ಮಾಡಿಸಿ ಕೊಳ್ಳುತ್ತಿದ್ದೆವು .ಅಜ್ಜ ಮತ್ತು ತಂದೆ ಹಳೆಯ ಮೋಡಿ ಅಕ್ಷರದಲ್ಲಿ ಸಹಿ ಮಾಡುವರು .ಸಹಿ ಮಾಡುವ ಮೊದಲು ಒಂದು ರಫ್ ಕಾಗದ ದಲ್ಲಿ  ಮಾಡಿ ನೋಡುವರು . ಆಮೇಲೆ ಮೋಡಿ ಅಕ್ಷರದಲ್ಲಿ ಅಜ್ಜನ ಸಹಿ  ಅಂಗ್ರಿ ಮಹಾಬಲ ಭಟ್ಟನ ರುಜು ಎಂಬುದು ಲಿಂಗ್ರಿ ಮಹಾಚಲ ಚಟ್ಟನ  ರುಜು ಆಗುತ್ತಿತ್ತು . ಏನೇ ಇದ್ದರೂ ನಮಗೆ ಪರೀಕ್ಷೆಯಲ್ಲಿ ಪಾಸ್ ಆಗುವಾಗ ಆದದ್ದಕ್ಕಿಂತ ಹೆಚ್ಚು ನಿರಾಳತೆ  ಪ್ರೋಗ್ರೆಸ್ ರಿಪೋರ್ಟ್ ಗೆ ಸಹಿ ಬಿದ್ದಾಗ  ಆಗುತ್ತಿತ್ತು

ಶುಕ್ರವಾರ, ನವೆಂಬರ್ 22, 2024

ಹೃದಯಾಘಾತ ಬಗ್ಗೆ  ಎಲ್ಲರೂ ಕೇಳಿದ್ದೇವೆ .ಹೃದಯದ ಮಾಂಸಖಂಡ ಗಳಿಗೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳು ಹಠಾತ್ ಬಂದ್ ಆದರೆ ಹೃದಯದ ಕಾರ್ಯದಲ್ಲಿ ವ್ಯತ್ಯಯ ಆಗಿ , ರಕ್ತ ತಡೆಯ ಗಂಭೀರತೆಯನ್ನು ಹೊಂದಿಕೊಂಡು  ಎದೆ ನೋವಿನಿಂದ ಹಿಡಿದು ಸಾವು ಕೂಡಾ ಸಂಭವಿಸುವುದು . ಸಂಭವದ ಕ್ಷಿಪ್ರತೆಯಿಂದ ಆಘಾತ ಎಂಬ ವಿಶೇಷಣ .

ಅದರಂತೆ ಮೆದುಳಿನ ಆಘಾತ ಅಥವಾ ಸ್ಟ್ರೋಕ್  ಎಂಬ ಕಾಯಿಲೆ ಇದೆ . ಇಲ್ಲಿ ಮಾತ್ರ ಮೂರು ಮುಖ್ಯ ಪ್ರಭೇದ ಇವೆ .ಒಂದು ; ಹೃದಯಾಘಾತದಲ್ಲಿ ಆಗುವಂತೆ ಮೆದುಳಿನ ರಕ್ತ  ನಾಳಗಳು ಕೊಬ್ಬು ಶೇಖರಣೆಯಿಂದ ಸ್ಥಳೀಯ ವಾಗಿ ರಕ್ತ ಹೆಪ್ಪು ಗಟ್ಟುವಿಕೆಗೆ ಆಹ್ವಾನ ಕೊಟ್ಟು ರಕ್ತ ಸರಬರಾಜಿನಿಂದ ವಂಚಿತವಾದ ಸುತ್ತ ಮುತ್ತಲಿನ ಮೆದುಳಿನ ಜೀವಕೋಶಗಳು ನಿಷ್ಕ್ರಿಯ ಗೊಳ್ಳುವವು . ಎರಡು ; ರಕ್ತ ನಾಳಗಳು ಹಠಾತ್ ಒಡೆದು ಮೆದುಳಿನ ರಕ್ತಸ್ರಾವ ಆಗುವುದು . ಮೂರು ; ಕೆಲವು  ಕಾಯಿಲೆಗಳಲ್ಲಿ ಹೃದಯ ಒಳಗೆ ಹೆಪ್ಪು ಗಟ್ಟಿದ ರಕ್ತದ ತುಣುಕುಗಳನ್ನು ಮೆದುಳಿಗೆ ಹೋಗುವ ರಕ್ತ ನಾಳಗಳ ಮೂಲಕ ಹೋಗಿ ತಟಸ್ಥ ಉಂಟು ಮಾಡುವುದು .

 ಬಲ ಬಾಗದ ದೊಡ್ಡ ಮೆದುಳು ಶರೀರದ  ಎಡ   ಭಾಗವನ್ನೂ  ಮತ್ತು  ಎಡ ಪಾರ್ಶ್ವದ ದೊಡ್ಡ ಮೆದುಳು ಬಲ ಭಾಗ ಮತ್ತು ಮಾತನ್ನು ನಿಯಂತ್ರಿಸುತ್ತವೆ.  ಎಡ ಮೆದುಳು ಆಘಾತ ಆದರೆ ಬಲ ಪಾರ್ಶ್ವ ವಾಯು ಅಥವಾ ಲಕ್ವಾ ಉಂಟಾಗುತ್ತದೆ . ಅದೇ ತರಹ ಎಡ ಮೆದುಳಿನ ಕ್ಷಮತೆ ಕುಂದಿದಾಗ ಮಾತಾಡುವ, ಅರ್ಥ ಮಾಡಿಕೊಳ್ಳವ ಶಕ್ತಿ ಬೀಳ ಬಹುದು . ಅದೇ ರೀತಿ  ಹಿಮ್ಮೆದುಳಿಗೆ ಹಾನಿ ಆದರೆ ದೃಷ್ಟಿ ಹೋಗ ಬಹುದು . ಕಣ್ಣುಗಳು ಸರಿ ಇದ್ದರೂ ದೃಷ್ಟಿ ಗ್ರಹಣ  ವ್ಯತ್ಯಯದಿಂದ ಬರುವ ಕುರುಡು ತನ.ಸಿಟಿ ಸ್ಕ್ಯಾನ್  ಅಥವಾ ಎಂ ಆರ್ ಐ ಯಿಂದ ಮೆದುಳಿನ ಆಘಾತ ವನ್ನು ಪತ್ತೆ ಮಾಡುವರು .

ಅಧಿಕ ರಕ್ತದ ಒತ್ತಡ ,ಕೊಲೆಸ್ಟ್ರಾಲ್ ಇತ್ಯಾದಿ ಮೆದುಳಿನ ಆಘಾತಕ್ಕೆ ಸಾಮಾನ್ಯ ಕಾರಣಗಳು .ಹೃದಯಾಘಾತದಲ್ಲಿ ಮಾಡುವಂತೆ ಔಷಧಿ ನೀಡಿ ಹೆಪ್ಪು ಕರಗಿಸುವುದು ಮತ್ತು ರಕ್ತ ನಾಳಗಳ ಮೂಲಕ ಕೊಳಾಯಿ ಹಾಯಿಸಿ ಹೆಪ್ಪು ತೆಗೆದು ಸ್ಟೆಂಟ್ ಹಾಕುವುದು ಇಲ್ಲಿಯೂ ಇದೆ . ಮೆದುಳಿನ ಆಘಾತದಲ್ಲಿ ಕಾಯಿಲೆ ಮೆದುಳಿನಲ್ಲಿ ಇದ್ದರೂ ರೋಗ ಲಕ್ಷಣ ಅವಯವಗಳಲ್ಲಿ  ಇರುವುದು . ಕೈಕಾಲುಗಳು ಉಪಯೋಗಿಸದೆ ಮರಗಟ್ಟಿ ಹೋಗದ ಹಾಗೆ ಅವಕ್ಕೆ ಪಿಸಿಯೋ ತೆರಪಿ ಅಥವಾ ವೈಜನಿಕ ವ್ಯಾಯಾಮ  ಕೊಡುವರದರೂ ಮುಖ್ಯ ಚಿಕಿತ್ಸೆ ಮೆದುಳಿಗೆ ಆಗ ಬೇಕು . ಫ್ಯೂಸ್ ಹೋದಾಗ ಅದನ್ನು ಸರಿಪಡಿದೇ ಬಲ್ಬ್ ಹಾಕಿ ಪ್ರಯೋಜನ ವಿಲ್ಲ .

 

ಬುಧವಾರ, ನವೆಂಬರ್ 20, 2024

ಬಿಬೇಕ್ ದೇಬ್ ರಾಯ್ ಅವರ ಮಹಾಭಾರತ ದಲ್ಲಿ ಗೀತೋಪದೇಶ ಓದುತ್ತ್ತಿದ್ದೆ . ಎಲ್ಲಾ ವೇದಾಂತಿಗಳು ಪುರಾವರ್ತಿಸುವ ಫಲಾ ಪೇಕ್ಷೆ  ನಿನ್ನ ಕರ್ತವ್ಯ ಮಾಡು , ಸುಖ ಬಂದಾಗ ಅತಿ ಹಿಗ್ಗದಿರು ,ಕಷ್ಟ ಬಂದಾಗ ಕುಗ್ಗದಿರು ,ಅದೇ ನೈಜ ಯೋಗವಸ್ಥೆ ಇತ್ಯಾದಿ ವಾಕ್ಯಗಳ ರಿವಿಶನ್  ಆಯಿತು .ಲೋಕದಲ್ಲಿ ಇದನ್ನು ಬೋಧಿಸುವ ಪ್ರಾಜ್ಞರು ಸನ್ಯಾಸಿಗಳು ಬಹಳ ಮಂದಿ ಇದ್ದಾರೆ .ಆದರೆ ತಮ್ಮ ನಡವಳಿಕೆಯಲ್ಲಿ ಇದನ್ನು ಅಳವಡಿಸಲು ಅವರಿಗೂ ಸಾಧ್ಯವಾಗುವುದಿಲ್ಲ .  ಷಡ್ವೈರಿ ಗಳಿಂದ ದೂರವಿರಿ ಎಂದು ವೇದಿಕೆಯಿಂದ ಪ್ರಚಿಸುವವರು ತಮ್ಮ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ಹುಲು ಮಾನವರಂತೆ  ಕೋಪಾವೇಶದಿಂದ ಶಾಪ ಹಾಕುವರು , ಆಸ್ತಿಗಾಗಿ ಕೋರ್ಟ್ ಕಟ್ಟಳೆ ಅಲೆ ಯುವರು . 

ಇದನ್ನೆಲ್ಲಾ ಮೀರಿದ ಯೋಗಾವಸ್ಥೆ ಅಪರೂಪಕ್ಕೆ  ಕಂಡರೆ ಅದು  ಜನ ಸಾಮಾನ್ಯರಲ್ಲಿಯೇ .ಮೊನ್ನೆ ನಾನು ಓದಿದ ಬನ್ನಂಜೆ ಯವರ ಆತ್ಮ ಚರಿತ್ರೆ ಯಲ್ಲಿ ತಮ್ಮ ಆತ್ಮೀಯರಾದ  ಉದ್ಯಮಿ ಒಬ್ಬರ ಹೋಟೆಲ್ ಅಗ್ನಿಗೆ ಆಹುತಿ ಆದಾಗ ಅಲ್ಲಿದ್ದ ಹತ್ತು ಲಕ್ಷ ರೂಪಾಯಿ ಭಸ್ಮ ವಾಯಿತು ;ಅದನ್ನು ತಿಳಿದು ಅವರು ಯಾವುದೇ ಉದ್ವೇಗಕ್ಕೆ ಒಳಗಾಗದೆ ,ಹಿಂದಿನ ದಿನ ಅದನ್ನು ಯಾರಾದರೂ ಬಡವರಿಗೆ ಕೊಡ ಬಹುದಿತ್ತು ಎಂದು ಕೊಂಡರಂತೆ . 

ನನ್ನ ಕೈ ಎಣಿಕೆಯ ರೋಗಿಗಳಲ್ಲಿ ಇಂತಹ ಸ್ಥಿತ ಪ್ರಜ್ಞತೆ ಕಂಡಿದ್ದೇನೆ .ಹಿಂದೆ ಕ್ಯಾನ್ಸರ್ ಪೀಡಿತ ಓರ್ವ ಮಹಿಳೆ ಬಗ್ಗೆ ಬರೆದಿದ್ದೆ . ಇಂತಹದೇ ಓರ್ವ ಮಹಾ ಮಹಿಮ ದಿ  ವಿಶ್ವನಾಥ ಸಾಲಿಯಾನ್ ಮತ್ತು ಅವರ ಪತ್ನಿ ದಿ ಪಾರ್ವತಿ .,ಇವರು ಪುತ್ತೂರಿನ ಮಂಜಲ್ ಪಡ್ಪು ವಿನಲ್ಲಿ ಹೋಟೆಲ್ ವಿಶ್ವಾಸ್ ಎಂಬ  ಉದ್ಯಮ ನಡೆಸುತ್ತಿದ್ದು ಜನಪ್ರಿಯ ರಾಗಿದ್ದರು . ಜನ ಸಾಮಾನ್ಯರ ಮೆಚ್ಚಿನ ಹೋಟೆಲ್ . ಹಿಂದೆ ಕಟ್ಟಿಗೆಯಲ್ಲಿ ಅಡಿಗೆ ಇದ್ದಾಗ ಹೊಗೆ ಸೇವನೆಯಿಂದ ಇರ ಬೇಕು .ಅವರಿಗೆ ತೀವ್ರತರ  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು .  ಕಾಯಿಲೆ ಎಷ್ಟೇ ತೀವ್ರವಾಗಿ ಇರಲಿ ಒಂದೇ ಒಂದು ದಿನ ಅವರು ಮುಖ ಗಂಟು ಹಾಕಿದ್ದಾಗಲಿ ,ಗೊಣಗಿದ್ದಾಗಲೀ ಇಲ್ಲ . ಕೃತಜ್ಞತಾ ಭಾವ ಸೂಚಿಸುವ ಮುಖಭಾವ ಮಾತ್ರ ನಾನು ಕಂಡದ್ದು . ರೋಗ ತೀವ್ರವಾಗಿ ಅವರು ಅಸು ನೀಗಿದಾಗ ಅವರನ್ನು ಬಲ್ಲವರು ಕಂಬನಿ ಮಿಡಿದರು . ಇವರ ಪತ್ನಿ ದಿ ಪಾರ್ವತೀ ಅಮ್ಮ ನವರು ಗುಣದಲ್ಲಿ ಇವರದೇ ಪಡಿಯಚ್ಚು . ವರ್ಷಗಳ ಹಿಂದೆ ಭಾರೀ ಮಳೆಗೆ ಧರೆ ಕುಸಿದು ಇವರೂ ಜತೆಗೆ ಮಲಗಿದ್ದ ಮೊಮ್ಮಗ ಧನುಷ್ ಅಸು ನೀಗಿದಾಗ ಊರಿಗೆ ಊರೇ ಮರುಗಿತ್ತು .ಒಳ್ಳೆಯವರಿಗೆ ಯಾಕೆಇಂತಹ ಪರೀಕ್ಷೆ ?

ಈಗ ಮಗ ಮಹೇಶ್ ಹೋಟೆಲ್ ಮುಂದುವರಿಸುತ್ತಿತ್ತು ಹಿರಿಯರ ಸದ್ಗುಣಗಳು ಅವರಲ್ಲಿಯೂ ಎದ್ದು ಕಾಣುತ್ತದೆ .