ಬೆಂಬಲಿಗರು

ಬುಧವಾರ, ಜನವರಿ 5, 2022

ಮೇದೋಜೀರಕ ಗ್ರಂಥಿ

 ಮೇದೋಜೀರಕ  ಗ್ರಂಥಿ (Pancreas )

                   Pancreatitis - Wikipedia 

ನಮ್ಮ ಶರೀರದಲ್ಲಿ ಎರಡು ತರಹದ ಗ್ರಂಥಿಗಳು ಇವೆ . ಒಂದು ನಿರ್ನಾಳ ಗ್ರಂಥಿ ;ಇವು ತಾವು ಉತ್ಪತ್ತಿ ಮಾಡುವ ರಸ ವಿಶೇಷಗಳನ್ನು (ಹಾರ್ಮೋನ್ )ನೇರವಾಗಿ ರಕ್ತಕ್ಕೆ ಸೇರಿಸಿದರೆ ,ಸನಾಳ ಗ್ರಂಥಿಗಳು  ನಳಿಕೆಯ ಮೂಲಕ ನಿಗದಿತ ತಾಣಕ್ಕೆ ತಲುಪಿಸುತ್ತವೆ . 

ಇವುಗಳಲ್ಲಿ  ಪ್ಯಾಂಕ್ರಿಯಾಸ್ ಎರಡೂ  ಪಾತ್ರಗಳನ್ನು  ನಿರ್ವಹಿಸುವ ವಿಶೇಷ ಅಂಗ . ಇದರ ನಿರ್ನಾಳ ಭಾಗವು ಬಹಳ ಮುಖ್ಯವಾದ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿ ಮಾಡಿ ,ತನ್ಮೂಲಕ ರಕ್ತದಲ್ಲಿ ಇರುವ  ಗ್ಲುಕೋಸ್ ಜೀವ ಕೋಶಗಳನ್ನು  ಪ್ರವೇಶಿಸಲು ಸಹಾಯ  ಮಾಡುತ್ತದೆ .;ರಕ್ತದ  ಗ್ಲೋಕೋಸ್ ಪ್ರಮಾಣ ಹತೋಟಿಯಲ್ಲಿ ಇಡುತ್ತದೆ . ಅದೇ ರೀತಿ ಇನ್ನೊಂದು ಹಾರ್ಮೋನ್ ಗ್ಲುಕಾಗೋನ್  ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಗದಿಗಿಂತ ಕಡಿಮೆ ಆದರೆ ಲಿವರ್ ನ  ಕಾಪು ದಾಸ್ತಾನಿನಿಂದ ಬಿಡುಗಡೆ ಮಾಡಿಸುತ್ತದೆ . ಪ್ಯಾಂಕ್ರಿಯಾಸ್ ನ ನಿರ್ನಾಳ ಭಾಗವನ್ನು  ಲ್ಯಾಂಗರ್ ಹ್ಯಾನನ  ದ್ವೀಪಗಳು ಎಂದು ಕರೆಯುತ್ತಾರೆ . 

 

ಇನ್ನು  ಸನಾಳ ಭಾಗವು ಶರ್ಕರ ಪಿಷ್ಟ ,ಕೊಬ್ಬು ಮತ್ತು ಸಸಾರಜನಕ ಜೀರ್ಣಕ್ಕೆ ಬೇಕಾದ ಕಿಣ್ವಗಳನ್ನು ಸಣ್ಣ ಕರುಳಿಗೆ ನಾಳದ ಮೂಲಕ ರವಾನಿಸುವದು . ಅದು ಕರುಳಿಗೆ ಸೇರುವಲ್ಲಿಯೇ ಪಿತ್ತ ನಾಳವೂ ಬಂದು ಕೂಡುವುದು . 

ಪಿತ್ತ ನಾಳದ ಕಲ್ಲು ಇರುವವರಲ್ಲಿ ,ಮದ್ಯಪಾನಿಗಳಲ್ಲಿ ಮತ್ತು ಇನ್ನಿತರ ಕೆಲವು ಸಂದರ್ಭಗಳಲ್ಲಿ  ಪ್ಯಾಂಕ್ರಿಯಾಸ್ ನ ಉರಿಯೂತ ಉಂಟಾಗುವುದು .(Pancreatitis ). ಇದರಿಂದ ಹೊಕ್ಕುಳಿನಿಂದ ಸ್ವಲ್ಪ ಮೇಲೆ ತೀವ್ರ ನೋವು ಮತ್ತು ವಾಂತಿ ಉಂಟಾಗುವುದು .ರಕ್ತ ಪರೀಕ್ಷೆಯಲ್ಲಿ  ಅಮೈಲೇಸ್  ಮತ್ತು ಲೈಪೇಸ್ ಪ್ರಮಾಣ ಏರಿಕೆ ಇರುವುದು . ಹೊಟ್ಟೆಯ ಸ್ಕಾನ್ ನಲ್ಲಿ  ಪ್ಯಾಂಕ್ರಿಯಾಸ್ ಊದಿರುವದು ಕಂಡು ಬರುವದು . ಇಂತಹ ರೋಗಿಗಳನ್ನು ದಾಖಲು ಮಾಡಿ ಖಾಲಿ ಹೊಟ್ಟೆಯಲ್ಲಿ ಇತ್ತು ಆಹಾರವನ್ನು ರಕ್ತ ನಾಳಗಳ ಮೂಲಕ ಕೊಡುವರು .ಈ ಅಂಗಕ್ಕೆ ವಿಶ್ರಾಂತಿ ಕೊಡುವ ಉದ್ದೇಶ . 

ಇನ್ನು ಕೆಲವರಲ್ಲಿ  ಪ್ಯಾಂಕ್ರಿಯಾಸ್ ನಾಳಗಳ ಒಳಗೆ ಕಲ್ಲು ಉಂಟಾಗಿ ,ಅವು ಜೀರ್ಣ ಕ್ರಿಯೆಗೆ ಬೇಕಾದ ಕಿಣ್ವಗಳ ಸಾಗಣೆಗೆ ಅಡ್ಡಿ ಉಂಟು ಮಾಡುವವು .ಇದರಿಂದ ಅಜೀರ್ಣ ,ಮತ್ತು ಹೊಟ್ಟೆ ನೋವು ಬರ ಬಹುದು  . ಇಂತಹವರ  ಕಲ್ಲುಗಳನ್ನು ಸಾಧ್ಯವಾದರೆ ತೆಗೆಯುವರು ,ಮತ್ತು ಹೊರಗಿನಿಂದ  ಜೀರ್ಣ ಕ್ರಿಯೆಗೆ ಬೇಕಾದ ಎಂಜಯಿಮ್ ಗಳನ್ನು  ಮಾತ್ರೆ ರೂಪದಲ್ಲಿ ಕೊಡುವರು . 

ಗಂಭೀರವಾದ ಪ್ಯಾಂಕ್ರಿಯಾಸ್ ಕಾಯಿಲೆ ಕ್ಯಾನ್ಸರ್ . ಪ್ಯಾಂಕ್ರಿಯಾಸ್ ಗಡ್ಡೆ ಬೆಳೆದಂತೆ ನೋವು ,ಅಶಕ್ತಿ ಜೊತೆ ಪಿತ್ತ ನಾಳಕ್ಕೆ ತಡೆ ಉಂಟಾದಾಗ ಜಾಂಡೀಸ್ ಉಂಟಾಗುವುದು

 

ತಲೆಯೊಳಗಿನ ರಕ್ತ ಸ್ರಾವ

                                        Anatomy of the Brain Protection

                                               


                    

ಮೆದುಳು ಹಾಗೂ ಮೆದುಳು ಬಳ್ಳಿ ಬಹಳ ಅಮೂಲ್ಯ ಅಂಗಗಳು ಆಗಿದ್ದು  ,ಅವುಗಳ ರಕ್ಷಣೆಗೆ ಹಲವು ವ್ಯೂಹಗಳು ಪ್ರಕೃತಿ ನಿರ್ಮಿಸಿದೆ .ಅದರಲ್ಲೂ ಮೆದುಳು  ಇನ್ನೂ ಮುಖ್ಯವಾಗಿದ್ದು ಮೆದುಳು ನಿಷ್ಕ್ರಿಯವಾದಾಗ ಮಾತ್ರ ಅಂತ್ಯ ನಿಶ್ಚಯ . ನಿಮಗೆ ತಿಳಿದಂತೆ ಮೆದುಳು ಗಟ್ಟಿಯಾದ ತಲೆ ಬುರುಡೆಯ ಒಳಗೆ ಇದ್ದು ,ಇದೊಂದು  ನೈಸರ್ಗಿಕ ಹೆಲ್ಮೆಟ್ ಎಂದು ತಿಳಿದು ಕೊಳ್ಳ ಬಹುದು . ಐ ಎಸ ಐ ಮಾರ್ಕ್ ಬದಲಿಗೆ  ಎಂ ಡಿ ಬಿ (ಮೇಡ್ ಬೈ ಬ್ರಹ್ಮ )ಮಾರ್ಕ್  ಇರುತ್ತದೆ .ಇದೂ ಸಾಲದೆಂದು ಮೆದುಳಿನ ಹೊರಗೆ ಕ್ರಮವಾಗಿ ಪಯಾ ಮ್ಯಾಟರ್ ,ಅರಕೆನೋಯಿಡ್ ಮತ್ತು ಡ್ಯೂರಾ ಮ್ಯಾಟರ್ ಎಂಬ ಮೂರು ಪೊರೆಗಳು ಇದ್ದು ,ಪಯಾ ಮತ್ತು ಅರಕೆನೋಯ್ಡ್ ಪೊರೆ ನಡುವೆ  ಸೆರೆಬ್ರೊ(ಮೆದುಳು ) ಸ್ಪೈನಲ್ ಮೆದುಳು ಬಳ್ಳಿ )ದ್ರವ ಇರುತ್ತದೆ . ಈ ದ್ರವ  ಮೆದುಳಿಗೆ ಕುಶನ್ ತರಹ ರಕ್ಷಣೆ ಕೊಡುವುದಲ್ಲದೆ ಆಹಾರ ಇತ್ಯಾದಿ ಸರಬರಾಜು ಮಾಡುವದು .. 

   ಮೆದುಳು ಒಂದು ಕಂಪ್ಯೂಟರ್ ತರಹ . ಒಂದು ಸಿ ಡಿ ಅಥವಾ ಡಿ ವೀ ಡಿ ಗೆ ಸ್ವಲ್ಪ ತರುಚಿದರೆ ಅದರ ಕಾರ್ಯಗಳು ಅಸ್ತವ್ಯಸ್ತ ಆಗುವ ಹಾಗೆ ಮೆದುಳಿನ ಜೀವ ಕೋಶಗಳಲ್ಲಿ ಕೂಡಾ ಆಗುವದು . 

ಮೆದುಳಿಗೆ ಸಂಬಂದಿಸಿದ ರಕ್ತ ಸ್ರಾವಗಳಲ್ಲಿ ಕೆಲವು ವಿಧ ಇವೆ .ಇವು ಯಾವುದಾದರೂ ಅವಘಡದಿಂದ ಅಥವಾ ತನ್ನಿಂದ ತಾನೇ ಉಂಟಾಗ ಬಹುದು . 

ಇದರಲ್ಲಿ ಕೆಲವು ವಿಧ ಇವೆ . 

೧  ಎಕ್ಸ್ಟ್ರಾ ಡ್ಯೂರಲ್ . ಇದು ತಲೆ ಬುರುಡೆ ಮತ್ತು ಡ್ಯೂರಾ ಮ್ಯಾಟೆರ್ ನಡುವೆ ಆಗುವ ರಕ್ತಸ್ರಾವ . ಒತ್ತಡ ಹೆಚ್ಚು ಇರುವ ಅಪಧಮನಿ (artery )ಯಿಂದ ಆಗುವ ಕಾರಣ ಸ್ರಾವ ಶೇಖರಣೆ ಬೇಗ ಹೆಚ್ಚಾಗುವುದು . 

೨ ಸಬ್  ಡ್ಯೂರಲ್ : ಇದು ಡ್ಯೂರಾ ಮ್ಯಾಟರ್ ಮತ್ತು ಅರ್ಕನೋಯಿಡ್ ಮ್ಯಾಟರ್ ನಡುವೆ . ಅಭಿಧಮನಿ ಕಾರಣ (vein ). ನಿಧಾನ  ಸ್ರಾವ ಆಗುವುದು . 

ಮೇಲಿನ ಎರಡು ಸಂಧರ್ಭ ಸೀಮಿತ ಜಾಗದಲ್ಲಿ ಶೇಖರಣೆ ಆದ ರಕ್ತವು ತನ್ನ  ಅಳವಿಗೆ ಅನುಗುಣವಾಗಿ ಮೆದುಳಿನ ಮೇಲೆ ಒತ್ತಡ ಹಾಕುವುದರಿಂದ ಭ್ರಮಾವಸ್ಥೆ ಯಿಂದ ಹಿಡಿದು ಪ್ರಜ್ಞಾ ಹೀನ ಸ್ಥಿತಿ ವರಗೆ ಉಂಟಾಗ ಬಹುದು .ಸ್ಕ್ಯಾನ್ ನಲ್ಲಿ ಕಂಡು ಹಿಡಿದು ಅವಶ್ಯಕ ಇದ್ದರೆ ತಲೆ ಬುರುಡೆಯಲ್ಲಿ ರಂಧ್ರ ಮಾಡಿ ಅದನ್ನು ತೆಗೆಯುವರು . 

೩ . ಸಬ್ ಅರಕನೋಯಿಡ್  ಹೆಮೊರೇಜ್ (ಅರಕನೊಯಿಡ್ ಮ್ಯಾಟರ್ ಒಳಗಿನ ರಕ್ತ ಸ್ರಾವ ). ಇಲ್ಲಿ ಕೆಲವೊಮ್ಮೆ ಮೊದಲೇ ಇದ್ದ ರಕ್ತ ನಾಳದ ಉಬ್ಬುಗಳು ಕಾರಣ ಆಗ ಬಹುದು . ಇದನ್ನು ನಿಲ್ಲಿಸಲು ಕೂಡಾ ಕೆಲವು ಚಿಕಿತ್ಸಾ ವಿಧಾನಗಳು ಇವೆ . 

೪.  ಮೆದುಳಿನ ಒಳಗಿನ ರಕ್ತ ಸ್ರಾವ .                                                            ಇದಕ್ಕೆ ಅಧಿಕ ರಕ್ತದ ಒತ್ತಡ ಒಂದು ಕಾರಣ. ಮೆದುಳಿನ ಒಳಗೆ ಆಗುವ ಕಾರಣ ಅದು ಆದ  ಜಾಗವನ್ನು ಹೊಂದಿ ಕೊಂಡು ಪಕ್ಷವಾತ ,ಮಾತು ನಿಲ್ಲುವುದು ಇತ್ಯಾದಿ ಆಗಬಹುದು ಅಲ್ಲದೆ ಕೆಲವೊಮ್ಮೆ ಅಪಸ್ಮಾರ ಕೂಡಾ ಬರ ಬಹುದು . ಮೆದುಳಿನ ಒಳಗಡೆ ಶೇಖರಣೆ ಅದ ರಕ್ತವನ್ನು ತೆಗೆಯುವದು ಕಷ್ಟ (ಯಾಕೆಂದರೆ ಹೀಗೆ ಮಾಡುವಾಗ ಮೆದುಳಿನ ಸೂಕ್ಷ್ಮ ಜೀವಕೋಶಗಳಿಗೆ ಇನ್ನೂ ಹಾನಿ ಆಗಬಹುದು ).ಸೆರೆಬೆಲ್ಲಮ್ ಎಂಬ ಭಾಗದಲ್ಲಿ ಆದರೆ ಗಣನೀಯ ಶೇಖರಣೆ ಆದರೆ ಸಾಮಾನ್ಯವಾಗಿ ತೆಗೆಯುವರು ಏಕೆಂದರೆ ಅದು ಶ್ವಾಸ ಕೇಂದ್ರ ಇರುವ ಮೆದುಳಿನ ಕೆಳ ಭಾಗಕ್ಕೆ ಒತ್ತಡ ಹಾಕಿದರೆ ಜೀವ ಅಪಾಯ ಬರಬಹುದು . ಇದರ ಹೊರತಾಗಿ ಮೆದುಳಿನ ಒಳಗಿನ ರಕ್ತಸ್ರಾವಕ್ಕೆ ರಕ್ತದ ಒತ್ತಡ ಅಧಿಕ ಇದ್ದರೆ ಕಡಿಮೆ ಮಾಡುವದು ಮತ್ತು ಮೆದುಳಿನ ಆಘಾತದಿಂದ ಬಲಹೀನ ಆದ ಅಂಗಕ್ಕೆ ವ್ಯಾಯಾಮ ಮಾಡುವದು ಮಾತ್ರ ಇರುವ ಚಿಕಿತ್ಸೆ

ಹಿರಿಯ ಚೇತನ ತೊಂಬತ್ತರ ಸಂಭ್ರಮ

 




ನಿನ್ನೆ ೪. ೧. ೨೨ ಬಹಳ ಸಂಭ್ರಮ  . ಪುತ್ತೂರಿನ ಒಬ್ಬ ಹಿರಿಯ ಸಜ್ಜನ ಸಾಧಕ ,ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಸಾರ್ಥಕ  ಬದುಕಿನ ತೊಂಬತ್ತನೇ  ವರ್ಷಕ್ಕೆ  ಕಾಲಿಟ್ಟ  ದಿನ .ಅವರ  ಕುಟುಂಬದವರು ಮತ್ತು ಅಭಿಮಾನಿಗಳು ಸೇರಿ  ಪರ್ಲಡ್ಕದ ಬಹುವಚನಂ  ಸಭಾಂಗಣದಲ್ಲಿ ಸೇರಿ  ಆಚರಿಸಿದರು . ಸಭಾಂಗಣ ತುಂಬಿ ತುಳುಕಿತ್ತು . ಎಲ್ಲೆಲ್ಲೂ ಉತ್ಸಾಹ ,ಸಂತೋಷ ,ಆತ್ಮೀಯತೆ . 

ಶ್ರೀ ಸುಬ್ರಹ್ಮಣ್ಯ ಕೊಳತ್ತಾಯರು ವೃತ್ತಿಯಿಂದ ವಕೀಲರು . ೫೭ ವರ್ಷಗಳ  ಸುಧೀರ್ಘ ವೃತ್ತಿ ಜೀವನ .ಇವರಿಂದ ತರಬೇತು  ಪಡೆದ ಅನೇಕರು ಇಂದು  ಪ್ರಸಿದ್ಧ ವಕೀಲರೂ ,ನ್ಯಾಯಾಧೀಶರೂ ಆಗಿದ್ದಾರೆ . 

ಇವರ ಪ್ರವೃತ್ತಿ ಬಹು  ಮುಖ .  ಶಾಸ್ತ್ರೀಯ ಸಂಗೀತ ಅದರಲ್ಲಿ ಒಂದು ..ಪಿಟೀಲು ವಾದಕಿಯಾಗಿದ್ದ ತಮ್ಮ ಅಮ್ಮನಿಂದ ಬಂದ  ಬಳುವಳಿ . ಸ್ವಯಂ  ಮೃದಂಗ ವಾದಕರು . ಪುತ್ತೂರಿನ ಪ್ರಮುಖ ಸಂಗೀತ ಪೋಷಕರು .  ಬೇರೆ ಯಾರೇ  ಅಯೋಜಕರು  ಇದ್ದರೂ  ಸಮಯಕ್ಕೆ  ಸರಿಯಾಗಿ ಇವರು ಕಾರ್ಯಕ್ರಮಕ್ಕೆ  ಹಾಜರ್ . ಈಗ ಇವರ ಪ್ರತಿಭಾವಂತೆ  ಮೊಮ್ಮಗಳು  ಶ್ರೀಮತಿ  ಶ್ರೇಯಾ ಕೊಳತ್ತಾಯ  ಉದಯೋನ್ಮುಖ  ಹಾಡು ಗಾರ್ತಿ . 

ಸಾಹಿತ್ಯ  ಓದು  ಮತ್ತು  ಸಂಘಟನೆ ಇವರ ಇನ್ನೊಂದು  ಪ್ರವೃತ್ತಿ  . ಕನ್ನಡ  ಸಾಹಿತ್ಯ  ಪರಿಷತ್    ಪುತ್ತೂರು ಇದರ  ಮಾಜಿ  ರೂವಾರಿ , ಪುತ್ತೂರು ಕನ್ನಡ ಸಂಘದ ಕ್ರಿಯಾಶೀಲ ಮುಖಂಡ . ಪ್ರಸಿದ್ಧ  ಪುತ್ತೂರು ದಸರಾ ದ  ಆಯೋಜನೆಯಲ್ಲಿ  ಶಿವರಾಮ ಕಾರಂತಹರ ಕಾಲದಿಂದ  ಇಂದಿನ ವರೆಗೂ ಸಕ್ರಿಯ . 

ಇದಕ್ಕೆಲ್ಲಾ ಕಳಶವಿಟ್ಟಂತೆ  ಪುತ್ತೂರು  ರಾಮಕೃಷ್ಣ  ಸೇವಾಶ್ರಮ (ಅನಾಥಾಲಯ ) ದ  ಕೆಲಸಗಳಲ್ಲಿ  ಈ ಇಳಿ  ವಯಸ್ಸಿನಲ್ಲೂ  ಸಕ್ರಿಯ . 

ಈ ಎಲ್ಲಾ ಕಾರ್ಯಗಳಿಗೆ  ಬೆನ್ನೆಲುಬಾಗಿದ್ದ  ಪತ್ನಿ ಶ್ರೀಮತಿ  ಜಯಲಕ್ಷ್ಮಿ  ಹೋದ ವರ್ಷ ತೀರಿ ಕೊಂಡರು . ಅವರ ಅನುಪಸ್ಥಿತಿ ನಿನ್ನೆ ಕಾಡುತ್ತಿತ್ತು . 

ಮನೆಯಲ್ಲಿ ಓದು (ಈಗ ಸ್ವಲ್ಪ ಕಷ್ಟ ಆಗುತ್ತದೆ ಎಂದರು ),ಸಂಗೀತ ಆಲಿಸುವಿಕೆ ಯೊಡನೆ  ಹೂ ಗಿಡಗಳ ಆರೈಕೆ ಈಗ ಈ ಹಿರಿಯರ  ಕಲಾಪ . ನಿನ್ನೆ ತಮ್ಮ  ,ಈಗಲೂ ಸ್ಪಷ್ಟ ವಾಗಿರುವ ಮಾತಿನಲ್ಲಿ , ಸಮಯವನ್ನು ಅರ್ಥ ಪೂರ್ಣವಾಗಿ ಕಳೆಯಿರಿ ಎಂದು ಕಿವಿ ಮಾತು ಹೇಳಿದರು . 

ಹಿರಿಯರು  ನೂರ್ಕಾಲ ಅರೋಗ್ಯ ದಿಂದ ಬಾಳಲಿ . ಸುಸಂಸ್ಕೃತ ಸುಂದರ ಮತ್ತು ಮಾನವೀಯ ನಡವಳಿಕೆಗೆ  ಯುವ ಜನಾಂಗ ಮಾದರಿಯಾಗಿ ನೋಡ ಬಹುದಾದ ಇಂತಹ  ಹಿರಿಯ ಚೇತನಗಳು ನಮ್ಮೊಂದಿಗೆ ಇರಬೇಕಾದ ಅವಶ್ಯಕತೆ   ಬಹಳ   ಇದೆ . 

ನಿನ್ನೆಯ ಕಾರ್ಯಕ್ರಮ ದಲ್ಲಿ  ಮೊದಲಿಗೆ ನಾದ ಯಾನ ದಲ್ಲಿ ಪ್ರಸಿದ್ಧ  ಕಲಾವಿದ ಶ್ರೀ ಆರ್ ಕೆ ಶ್ರೀರಾಮ ಕುಮಾರ್ ಮತ್ತು ತಂಡದಿಂದ  ಸುಶ್ರಾವ್ಯ ವಯೊಲಿನ್ ವಾದನ ,ನಂತರ  ಭಾವಯಾನದಲ್ಲಿ  ಡಾ ವರದ ರಾಜ ಚಂದ್ರಗಿರಿ ಯವರ  ಸಮಯೋಚಿತ  ಭಾಷಣ ಮತ್ತು ಸುಬ್ರಹ್ಮಣ್ಯ  ಕೊಳತ್ತಾಯ ರ  ಹಿತ ನುಡಿ ಇದ್ದವು . ಬಹುವಚಮ್ ನ  ಡಾ ಶ್ರೀಶ ಕುಮಾರ್ ಮತ್ತು ಐ ಕೆ ಬೊಳುವಾರ್ ತಂಡ ದ  ಉತ್ಸಾಹ ದ  ತೊಡಗಿಸಿ ಕೊಳ್ಳುವಿಕೆ  ವಿಶೇಷ ಗಮನ ಸೆಳೆಯಿತು

ಮಂಗಳವಾರ, ಜನವರಿ 4, 2022

ಪಿತ್ತ ಪುರಾಣ

                     ಪಿತ್ತ ಪುರಾಣ 

               Bile duct - Wikipedia

'ನೆತ್ತಿಗೆ ಏರಿದ ನಿನ್ನ ಪಿತ್ತ ಇಳಿಸುವೆನು ' ಎಂದು ತುಂಟ ಮಕ್ಕಳನ್ನು ಹೆತ್ತವರು ,ಅಧ್ಯಾಪಕರು ಗದರುವುದು ಇತ್ತು . ವಾಡಿಕೆಯಲ್ಲಿ ಪಿತ್ತ ಎಂದರೆ  ವ್ಯಾಖ್ಯಾತೀತ ವಸ್ತು ಅಥವಾ ಅನುಭವ . ಬಾಲ್ಯದಲ್ಲಿ ವೀಳ್ಯದ ಎಲೆಗೆ ಯಾವುದೊ ಔಷಧ ಹಾಕಿ ಎರಡು ಮೂರು ದಿನ ನಮ್ಮ ತಲೆಗೆ ಅಂಟಿಸಿ ವಾರ್ಷಿಕ ಪಿತ್ತ ಅವರೋಹಣ ಕಾರ್ಯಕ್ರಮ ಆಚರಿಸುತ್ತಿದ್ದರು . ಅದಕ್ಕೆ ಹಾಕುವ ಮದ್ದಿನ ಹೆಸರು ನೆನಪಿಲ್ಲ . 

        ವಾಸ್ತವದಲ್ಲಿ  ಪಿತ್ತ ರಸ ಉತ್ಪತ್ತಿ ಮಾಡುವುದು ಲಿವರ್ . ಆದುದರಿಂದ ಅದನ್ನು ಪಿತ್ತ ಜನಕಾಂಗ ಎಂದು ಕರೆಯುತ್ತಾರೆ . ಅಲ್ಲಿ ಕೊಲೆಸ್ಟರಾಲ್ ನಿಂದ ಪಿತ್ತ ಲವಣ ಅಥವಾ ಬೈಲ್ ಸಾಲ್ಟ್ ಉತ್ಪತ್ತಿ ಮಾಡಿ ಪಿತ್ತ ರಸಕ್ಕೆ ಸೇರಿಸಲಾಗುತ್ತದೆ .(ಕೊಲೆಸ್ಟರಾಲ್ ನಿಂದ ವಿಟಮಿನ್ ಡಿ ,ಸ್ಟೇರೋಯಿಡ್ ಹಾರ್ಮೋನ್ ಗಳು ಕೂಡಾ ಉತ್ಪತ್ತಿ ಆಗುವುವು . )ಕೆಂಪು ರಕ್ತ ಕಣಗಳು ಸತ್ತ ಮೇಲೆ ಅವುಗಳ ಶರೀರದ ವರ್ಣ ದ್ರವ್ಯಗಳು ಕೂಡಾ ಲಿವರ್ ಮೂಲಕ ಇದನ್ನು ಸೇರುತ್ತವೆ .ಅವನ್ನು ಬೈಲ್ ಪಿಗ್ಮೆಂಟ್ಸ್ ಎನ್ನುವರು .  ಹಳದಿ ಮಿಶ್ರಿತ ಹಸಿರು ಬಣ್ಣದ ಪಿತ್ತ ರಸವು ಪಿತ್ತನಾಳದ ಮೂಲಕ ಸಣ್ಣ ಕರುಳಿನ ಉಗಮ ಸ್ಥಾನಕ್ಕೆ ಸಾಗಿಸಲ್ಪಡುವುದು .ದಾರಿಯಲ್ಲಿ ಪಿತ್ತ  ಕೋಶದಲ್ಲಿ ಸ್ವಲ್ಪ ವಿಶ್ರಾಂತಿ . ಕರುಳನ್ನು ಸೇರುವ ಮೊದಲು ಮೇದೋಜೀರಕ ಗ್ರಂಥಿಯ(ಪ್ಯಾಂಕ್ರಿಯಾಸ್ ) ನಾಳವೂ ಕೂಡಿ ಕೊಳ್ಳುತ್ತದೆ 

ಪಿತ್ತರಸ ಆಹಾರದಲ್ಲಿ ಇರುವ ಕೊಬ್ಬಿನ ಅಂಶವನ್ನು  ಕರಗುವ ವಸ್ತುವಾಗಿ ಮಾರ್ಪಡಿಸಿ ,ಅದರ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ . ಕೆಲಸ ಮುಗಿಸಿ ಪುನಃ ರಕ್ತ ಮೂಲಕ ಲಿವರ್ ಸೇರುತ್ತದೆ . ಬೈಲ್ ಪಿಗ್ಮೆಂಟ್ಸ್ ಮಾತ್ರ ಮಲದ ಮೂಲಕ ವಿಸರ್ಜನೆ ಆಗುವುದು .ಮಲದ ಬಣ್ಣಕ್ಕೆ ಕಾರಣ ಈ ವರ್ಣದ್ರವ್ಯಗಳು . 

             ಪಿತ್ತ ರಸ ಸಾಮಾನ್ಯವಾಗಿ ಜಠರ ಕ್ಕೆ ಬರುವುದಿಲ್ಲವಾದರೂ ಯಾವುದಾದರೂ ಕಾರಣಕ್ಕೆ ಜೋರಾಗಿ ವಾಂತಿ ಆಗುವಾಗ ಕರುಳಿನಿಂದ ಅಲ್ಪ ಸ್ವಲ್ಪ ಉದರ ಮೂಲಕ ಬಾಯಲ್ಲಿ ಬರುವುದು ಉಂಟು .ಡಾಕ್ಟ್ರೇ ಹಳದಿ ಹಳದಿ ವಾಂತಿ ಆಯಿತು ಎಂದು ಗಾಬರಿಯಿಂದ ಹೇಳುವುದು ಸಾಮಾನ್ಯ . 

ಪಿತ್ತ ನಾಳದ ಉದ್ದಕ್ಕೂ ಏನಾದರೂ ತಡೆ ಉಂಟಾದರೆ (ಉದಾ ಪಿತ್ತ ನಾಳದ ಕಲ್ಲು ,ಪಿತ್ತ ನಾಳದ ಅಥವಾ ಮೇದೋಜೀರಕ ಗ್ರಂಥಿಯ ಗಡ್ಡೆ )ವರ್ಣ ದ್ರವ್ಯಗಳು ರಕ್ತ ಸೇರಿ ಜಾಂಡಿಸ್ ಉಂಟಾಗ ಬಹುದು . ಆಗ ಈ ತಡೆಗಳನ್ನು ನಿವಾರಣೆ ಮಾಡುವ ಚಿಕಿತ್ಸೆ ಮಾಡಬೇಕೇ ಹೊರತು ವಾಡಿಕೆಯ ಹಳ್ಳಿ ಮದ್ದು ಅಲ್ಲ . ಈ ತರಹ ಜಾಂಡಿಸ್ ನಲ್ಲಿ ವಿಪರೀತ ತುರಿಕೆ ಇರುತ್ತದೆ ,ತೀವ್ರ ತರ ತಡೆಯಿದ್ದರೆ ಮಲದ ಬಣ್ಣ ಬಿಳಿ ಇರುತ್ತದೆ 

ಬಾಲಂಗೋಚಿ : ಹೊಟ್ಟೆಯ ಹುಳಗಳು (roundworm )ಕೆಲವೊಮ್ಮೆ ತಮ್ಮ ವ್ಯಾಪ್ತಿ ಪ್ರದೇಶದಿಂದ ಹೊರಗೆ ಎಂದರೆ ಸಣ್ಣ ಕರುಳಿನಿಂದ ಪಿತ್ತ ನಾಳದ ಮೂಲಕ ಹೊಕ್ಕು ಅಲ್ಲಿ ಸಿಲುಕಿ ಗೊಂಡು ಪಿತ್ತ ರಸ ತಡೆ ಜಾಂಡಿಸ್ ಉಂಟು ಮಾಡುವುದೂ ಉಂಟು .

ಸೋಮವಾರ, ಜನವರಿ 3, 2022

ರಕ್ತ ವಾಂತಿ

                                

Duodenal ulcer | healthdirect      Esophageal varices. (A) The lower esophagus and gastroesophageal... |  Download Scientific Diagram                            ಜಠರದ ಅಲ್ಸರ್ ಅಥವಾ ಹುಣ್ಣು                                                         ಅನ್ನ ನಾಳದ ಉಬ್ಬು ಧಮನಿ ಗಳು 


ಕಾಡಿನಲ್ಲಿ ನಡೆದು ಕೊಂಡು ಹೋಗುತ್ತಿದ್ದವನು ಏನೋ ಕಂಡಂತಾಗಿ ರಕ್ತ ಕಾರಿ ಸತ್ತನಂತೆ . ದೇವರು ಅಥವಾ ಭೂತ ರಕ್ಕಸನಿಗೆ ರಕ್ತ ಕಾರಿ ಸಾಯಿ ಎಂದು ಶಾಪ ಹಾಕಿತಂತೆ .ಇತ್ಯಾದಿ ಮಾತನಾಡುವುದನ್ನು  ಬೆರಗಾಗಿ ಕೇಳಿದ್ದೇವೆ .

 ಮೂಗಿನಲ್ಲಿ  ಮತ್ತು ಬಾಯಿಯಲ್ಲಿ ರಕ್ತ ಬಂದರೆ  ಹೌಹಾರುವುದು ಸಹಜ . ಆದರೆ ರಕ್ತ ಕಾರುವುದಕ್ಕೆ ಮುಖ್ಯ  ಕಾರಣಗಳು  ಜಠರ ಮತ್ತು ಅನ್ನ ನಾಳದ ಕಾಯಿಲೆಗಳು . ಮೊದಲೇ ಇದ್ದ ರೋಗ  ಹಠಾತ್  ಉಲ್ಬಣ ಗೊಂಡು ವಾಂತಿ ಆಗ  ಬಹುದು .

            ಜಠರ ದ  ಹುಣ್ಣು ಅಥವಾ ಅಲ್ಸರ್ ಮುಖ್ಯ ಕಾರಣವಾಗಿದ್ದು ಇದು ಹೆಲಿಕೊ ಬಾಕ್ಟರ್ ಪೈಲೋರಿ ಎಂಬ ರೋಗಾಣು ಸೋಂಕಿನಿಂದ  ಉಂಟಾಗುವುದು ಹೆಚ್ಚು . ಉಳಿದಂತೆ ನೋವಿನ ಮಾತ್ರೆಗಳ ಅತಿಯಾದ ಸೇವನೆ ,ಮದ್ಯಪಾನ ಮತ್ತು ಮಾನಸಿಕ ಉದ್ವೇಗಗಳು ಕೂಡು ಕಾರಣ ಆಗ ಬಹುದು . ಅಪರೂಪಕ್ಕೆ  ಕಾನ್ಸರ್ ಕೂಡಾ . ಹೊಟ್ಟೆಯ ರಕ್ತ ಸ್ರಾವ  ವಾಂತಿ ರೂಪದಲ್ಲಿ ಹೊರ ಬರ ಬಹುದು ಅಥವಾ  ಕರುಳಿನ ಮೂಲಕ  ಕೆಳಗಡೆಯಿಂದ . ವಾಂತಿ ಕೆಂಪು  ರಕ್ತ ವರ್ಣ ಇದ್ದರೆ ,ಮಲದ್ವಾರದಿಂದ ಹೋಗುವ ರಕ್ತ ಕಪ್ಪು  ಇರುವುದು .ಜಠರ ದಲ್ಲಿ  ಇರುವ  ಆಮ್ಲ ರಕ್ತವನ್ನು  ಆಸಿಡ್ ಹಿಮಟಿನ್ ಎಂಬ ಕಪ್ಪು ವಸ್ತುವಾಗಿ ಮಾರ್ಪಡಿಸುವುದು ;ಮೇಲ್ಗಡೆಯಿಂದ ಹೋದರೆ ವಾಂತಿ ,ಕೆಳಗಡೆಯಿಂದ ಹೋದರೆ ಮೆಲಿನಾ ಎನ್ನುತ್ತಾರೆ .

                        ಹಿಂದೆ ಜಠರ ದ ಅಲ್ಸರ್ ಶಸ್ತ್ರ ಚಿಕಿತ್ಸೆಗಳು ಸಾಮಾನ್ಯ ;ನಾನು ವಿದ್ಯಾರ್ಥಿ ಯಾಗಿದ್ದಾಗ  ಓ ಟಿ ದಿನ ಕನಿಷ್ಠ ಒಂದು  ಆಪರೇಷನ್ ಇರುತ್ತಿತ್ತು .ಈಗ ಒಳ್ಳೆಯ  ಮಾತ್ರೆಗಳು ಬಂದಿದ್ದು  ಶಸ್ತ್ರ ಚಿಕಿತ್ಸೆ  ಅಪರೂಪ ಆಗಿದೆ . 

ಇನ್ನು ಈಗ ರಕ್ತ  ವಾಂತಿಗೆ ಇರುವ ಇನ್ನೊಂದು ಮುಖ್ಯ ಕಾರಣ ಅನ್ನ ನಾಳದ  ರಕ್ತ ನಾಳ(ಅಭಿಧಮನಿ )ಉಬ್ಬಿ  ,ಒಡೆದು  ರಕ್ತ ಸ್ರಾವ ಆಗುವುದು  . ಲಿವರ್ ಕಾಯಿಲೆ  ಸಿರೋಸಿಸ್ ನಲ್ಲಿ ಮತ್ತು  ಕೆಲವೊಮ್ಮೆ  ಹಾಗೆಯೇ ಉಂಟಾಗುವ ತೊಂದರೆ . ಇದನ್ನು ಕೂಡಲೇ ಉದರ ದರ್ಶಕ  ದಿಂದ  ಕಂಡು ಹಿಡಿದು ,ಔಷಧಿ  ಮತ್ತು ಒಸರುವ  ರಕ್ತ ನಾಳದ ಬಾಯಿ ಕಟ್ಟಿ ಶಮನ ಮಾಡುವರು .

ಬಹಳ ಸಾರಿ ರೋಗಿಗಳು ರಕ್ತ ವಾಂತಿ  ಎಂದು  ಹೇಳುವದು ಕೆಮ್ಮಿನಲ್ಲಿ ಬಂದ ರಕ್ತ ಆಗಿದ್ದು ಇದು ಶ್ವಾಸ ಕೋಶದ ಕಾಯಿಲೆಗಳಿಂದ ಉಂಟಾಗುವುದು .ಉದಾ  ಕ್ಷಯ ರೋಗ ,ಕ್ಯಾನ್ಸರ್ ,ಶ್ವಾಸ ಕೋಶದ ರಕ್ತ ನಾಳದ  ರಕ್ತ ಹೆಪ್ಪು ಗಟ್ಟುವಿಕೆ ಮತ್ತು ಕೆಲವೊಮ್ಮೆ ಹೃದಯ ವೈಫಲ್ಯ . ಇದನ್ನು ವೈದ್ಯರು ರೋಗಿಯ ವಿವರಣೆ ಮತ್ತು ಪರೀಕ್ಷೆಯಿಂದ ರಕ್ತ ವಾಂತಿಯಿಂದ ಬೇರ್ಪಡಿಸುವರು

ಭಾನುವಾರ, ಜನವರಿ 2, 2022

 ಎಷ್ಟು ಬೇಗ ಏನೆಲ್ಲಾ ಆಯಿತು ?

ಹದಿನೈದು ಇಪ್ಪತ್ತು ವರ್ಷ ಇರಬಹುದು . ಇಂಟರ್ನೆಟ್ ಬೇಕಾದರೆ ಸೈಬರ್ ಕೇಂದ್ರಗಳಿಗೆ ಹೋಗಿ ಗಂಟೆಗೆ ಇಂತಿಷ್ಟು ಎಂದು ಹಣ ಪಾವತಿಸಿ ಉಪಯೋಗಿಸುತ್ತಿದ್ದೆವು . ಮುಂದೆ ಮನೆಯಲ್ಲಿಯೇ ಫೋನ್ ನಲ್ಲಿ ,ಇಂಟರ್ನೆಟ್ ಉಪಯೋಗಿಸುವಾಗ ಫೋನ್ ಆಫ್ ಮತ್ತು ವೈಸ್ ವೆರ್ಸಾ . ಹಗಲು ಫುಲ್ ಚಾರ್ಜ್ ,ರಾತ್ರಿ ಸ್ವಲ್ಪ ಸಮಯ ಅರ್ಧ ಮತ್ತು ನಡು ರಾತ್ರಿ ಫುಲ್ ಫ್ರೀ ಇತ್ತು ಎಂದು ನೆನಪು . 

ಸಂಗೀತ ,ಚಿತ್ರಗೀತೆ ಮತ್ತು ಸಿನಿಮಾ ಫ್ರೀ ಇರುವುದು  ಜಾಲಾಡಿ ರಾತ್ರಿ ಡೌನ್ಲೋಡ್ ಗೆ ಹಾಕಿ ಮಲಗುತ್ತಿದ್ದೆ .ಬೆಳಿಗ್ಗೆ ಎದ್ದು ಅದು ಪೂರ್ಣವಾಗಿದೆಯೇ ಎಂದು ನೋಡುವುದು .ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಅರ್ಧದಲ್ಲಿಯೇ ನಿಂತಿರುತಿದ್ದು ಕಂಡು ನಿರಾಶೆ . ಡೌನ್ಲೋಡ್ ಆದುದನ್ನು ನೀರೋ ತಂತ್ರಾಂಶ ಬಳಸಿ ಸಿ ಡಿ ,ವಿಸಿಡಿ ಇತ್ಯಾದಿ ಗಳಿಗೆ  ಸುಡುವದು (ಬರ್ನಿಂಗ್ )ಅರ್ಥಾತ್ ಕಾಪಿ ಇಳಿಸುವುದು .ಇಂತಹ ಸಿಡಿ ಗಳನ್ನು ಒಪ್ಪ ಓರಣವಾಗಿ ಆಲ್ಬಮ್ ನಲ್ಲಿ ಶೇಖರಿಸುವುದು . 

ಶಾಸ್ತ್ರೀಯ ಸಂಗೀತದ ದೊಡ್ಡ ಆಕರ sangeethapriya.org  ಆಗಿತ್ತು ,ಈಗಲೂ ಆಗಿದೆ . geetham .net ಮತ್ತು entelokam .com ಗಳಲ್ಲಿ ಒಳ್ಳೆಯ ಸಂಗೀತ ಕಚೇರಿಗಳನ್ನು ಅಪ್ಲೋಡ್ ಮಾಡುತ್ತಿದ್ದರು .ಸದಸ್ಯರಿಗೆ ಮಾತ್ರ ಇದ್ದಂಥವು . (ಉಚಿತ ಸದಸ್ಯತ್ವ ). ತಾವು ಕೇಳಿ ಸಂತೋಷ ಪಟ್ಟುದನ್ನು ಇತರರೂ ಕೇಳಲಿ ಎಂದು ಹಂಚುವ ಇವರನ್ನು ಎಷ್ಟು ಹೊಗಳಿದರೂ ಸಾಲದು .ನಿಮಗೆ ಗೊತ್ತಿರುವಂತೆ ಅಪ್ಲೋಡ್ ಮಾಡಲು ಹೆಚ್ಚು ಸಮಯ ತಾಳ್ಮೆ ಬೇಕು . mediafire ನಂತಹ  ಅಪ್ಲೋಡ್ ಡೌನ್ಲೋಡ್ ಸೈಟ್ ಗಳು ಜನಪ್ರಿಯವಾಗಿದ್ದು ನಾನೂ ಹಲವು ಕಾರ್ಯಕ್ರಮ ಸೇರಿಸಿದ್ದೆ . ಈಗಿನ ಹಾಗೆ ಗೂಗಲ್ ಡ್ರೈವ್ ,ಡ್ರಾಪ್ ಬಾಕ್ಸ್ ಇತ್ಯಾದಿ ಇರಲಿಲ್ಲ ಅಥವಾ ಜನಪ್ರಿಯ ಆಗಿರಲಿಲ್ಲ . 

ಈಗ ಹೆಚ್ಚಿನವು ಯು ಟ್ಯೂಬ್ ನಲ್ಲಿ ಉಚಿತವಾಗಿ ಆಲಿಸಲು  ಮತ್ತು ಕೇಳಲು ಸಿಗುತ್ತವೆ . ಆನ್ಲೈನ್ ರೇಡಿಯೋ ಗಳು ಸ್ಮಾರ್ಟ್ ಫೋನ್ ನಲ್ಲಿ ಸಿಗುತ್ತವೆ . ಕಂಪ್ಯೂಟರ್ ಇಲ್ಲದೆಯೇ ಇವುಗಳ ಮತ್ತು ಸ್ಮಾರ್ಟ್ ಟಿ ವಿ ಮೂಲಕ ನೋಡಬಹುದು . ಮೊಬೈಲ್ ಡೇಟಾ ಸಾಕಷ್ಟು  ಇದ್ದರೆ  ವೈರ್ ಹಾಕುವ ರಗಳೆ ಇಲ್ಲ . 

ನಾನು ಮಳೆಗಾಲದ  ಖರ್ಚಿಗೆ ಎಂದು  ಸಂಗೀತ , ಯಕ್ಷಗಾನ ,ಸಿನೆಮಾ ಗಳನ್ನು ತಟ್ಟೆಗಳಲ್ಲಿ (ಸಿಡಿ ,ಡಿವಿಡಿ )ಗಳಲ್ಲಿ ಕಟ್ಟಿ ಇಟ್ಟದ್ದೇ ಬಂತು .ಈಗ  ಹಾರ್ಡ್ ಡಿಸ್ಕ್ ,ಪೆನ್ ಡ್ರೈವ್ ಬಂದಿವೆ ..ಪುಣ್ಯಕ್ಕೆ ನನ್ನ ಮ್ಯೂಸಿಕ್ ಸಿಸ್ಟಮ್ ನಲ್ಲಿ ಸಿಡಿ .,ಫೆ ಡ್ರೈವ್ ಮತ್ತು ಬ್ಲೂಟೂಥ್ ಪ್ಲೇಯರ್ ಎಲ್ಲಾ ಇದ್ದು ಹುಣ್ಣಿಮೆ ಗೊಮ್ಮೆ ಅಮಾವಾಸ್ಯೆಗೊಮ್ಮೆ ಉಪಯೋಗಕ್ಕೆ ಬರುತ್ತದೆ ,. 




ಶನಿವಾರ, ಜನವರಿ 1, 2022

ಹಾಜರಿ ಸಾರ್

              ಹಾಜರ್ ಸರ್ 

ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ಮೊದಲನೇ ಪಿರಿಯಡ್ ಗೆ ಮಾತ್ರ ಹಾಜರಿ ತೆಗೆದು ಕೊಳ್ಳುವ ಪದ್ಧತಿ ಇತ್ತು . ಹಾಜರಿ ಶಬ್ದ ಉರ್ದು ಮೂಲದ್ದು ಇರಬೇಕು . ಗುರುಗಳು ಕ್ಲಾಸ್ ಮುಗಿಸಿ ಬೆತ್ತವನ್ನು ಮೇಜಿಗೆ ಬಾರಿಸಿ ಸೈಲೆನ್ಸ್ ಸೈಲೆನ್ಸ್ ಎನ್ನುವರು . ಅದು ವರೆಗೆ ಸಂಜೆ ಯಾವ ಆಟ ಆಡುವದು ಎಂದು ಕನಸು ಕಾಣುತ್ತಿದ್ದ ನಾವು ಈ ಲೋಕಕ್ಕೆ ಬರುವೆವು . ಅದ್ರಾಮ .ಇಬ್ರಾಯಿ ,ಕೃಷ್ಣ ,ಗೋಪಾಲ ,ಹಿಲರಿ ,ಪೂವಕ್ಕ ,ಪಾರ್ವತಿ ಹೀಗೆ ಮಾಷ್ಟ್ರು ಕರೆಯುವಾಗ ಹಾಜರಿ ಸರ್ ,ಕೆಲವರು ಇದ್ದೇನೆ ಎನ್ನುವರು . ಮುಂದೆ ಹೈ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಹಾಜರಿ ಸಂಖ್ಯೆ ಕೊಟ್ಟಿದ್ದು ,ಒನ್ ,ಟೂ ,ಥ್ರೀ ,ಫೋರ್ ಆಬ್ಸೆಂಟ್ ಫೈವ್ ಹೀಗೆ ,ಯಾರಾದರೂ  ಗೈರು ಆಗಿದ್ದರೆ ಅವರ ನಂತರದವನು ಅದನ್ನು ಹೇಳುವುದು . 

ಕಾಲೇಜ್ ನಲ್ಲಿ ಕೆಲವು ಅಧ್ಯಾಪಕರು ನಂಬರ್ ಕೂಗುವರು ,ಕೆಲವರು ಹೆಸರು. ಇನ್ನು ಕೆಲವರು ಮುಂದಿನ ಬೆಂಚಿನ ವಿದ್ಯಾರ್ಥಿಯನ್ನು ಕರೆದು ಟೇಕ್ ಅಟೆಂಡೆನ್ಸ್ ಎಂದು ಹೇಳುವರು . 

ನಾನು ವೈದ್ಯಕೀಯ ಕಾಲೇಜು ಅಧ್ಯಾಪಕ ನಾಗಿದ್ದಾಗ  ಎಲ್ಲಾ ವಿದ್ಯಾರ್ಥಿಗಳ ಹೆಸರು ಕೂಗಿ ಕರೆಯುತ್ತಿದ್ದೆನು . ಒಮ್ಮೆ ಒಬ್ಬಳು ಹುಡುಗಿಯ ಹೆಸರು ಹಾಜರಿ ಪುಸ್ತಕದಲ್ಲಿ Vidhya ಎಂದು ಬರೆದಿತ್ತು .ಅವಳು ಜಾಣೆ ,ಪಠ್ಯೇತರ ಚಟುವಟಿಕೆ ಯಲ್ಲೂ ಮುಂದು . ನಾನು  ವಿದ್ಯಾ ಮತ್ತು ವಿದ್ಯಾರ್ಥಿ ಗೆ ಬಾಲ ಇಲ್ಲ ,ಅಧ್ಯಾಪಕರಿಗೆ ಮಾತ್ರ ಬಾಲ ಎಂದು ಹೇಳಿದೆನು . ಅವಳ ಪಕ್ಕದ ಹುಡುಗಿ ಅವಳಿಗೆ ಕೊಂಬು (ಜಂಬ )ಉಂಟು ಸರ್ ಎಂದಳು . 

ಇನ್ನೊಬ್ಬ ಹುಡುಗನ ಹೆಸರು ಬನವಾಸಿ .ಪಂಪನ ಬನವಾಸಿ ಯಿಂದ ಬಂದವನು .ಅವನ ಹೆಸರು ಓದಿದೊಡನೆ ಆರಂಕುಶವ ಇಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶವಂ ಎಂದು ನೆನಪಿಗೆ ಬಂದು ಅದನ್ನು ಹೇಳುತ್ತಿದ್ದೆನು . (ಇದೇ ವಾಕ್ಯವನ್ನು ಬಾಲ್ಯದಲ್ಲಿ ನಾವು  ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನ ಕೋಡಿ ಭಟ್ಟರ ಮಸಾಲೆ ದೋಸೆಯಂ ,ನೀರುಳ್ಳಿ ಬಜ್ಜಿಯಂ ಎಂದು ಅಣುಕು ಮಾಡುತ್ತಿದ್ದೆವು .)

ಒಂದು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ  ವಿದ್ಯಾರ್ಥಿಗಳು ಸುಮ್ಮ ಸುಮ್ಮನೇ ಗೈರು ಹಾಜರಿ ಆಗುವುದನ್ನು ತಪ್ಪಿಸಲು ಒಂದು ದಿನ ಆಬ್ಸೆಂಟ್ ಆದರೆ ನೂರು ರೂಪಾಯಿ ದಂಡ ಕಟ್ಟಬೇಕು ಎಂದು ಸುತ್ತೋಲೆ ಕಳುಹಿಸಿದರು . ಅದರಿಂದ ಹಾಜರಾತಿ ಏನೂ ಹೆಚ್ಚಾಗಲಿಲ್ಲ . ಹೆತ್ತವರು ಮಕ್ಕಳನ್ನು ನೋಡಲು ಬಂದಾಗ ಗೈರು ಹಾಜರಿ ದಂಡ ಎಂದು ಸಾವಿರ ಎರಡು ಸಾವಿರ ಅಡ್ವಾನ್ಸ್ ಆಗಿ ಕಟ್ಟಿ ,ನಮ್ಮ ಮಕ್ಕಳನ್ನು ಮುಂದೆ ಬಂದರೆ ಹಾಯ ಬೇಡಿ ಹಿಂದೆ ಬಂದರೆ ಒದೆಯ ಬೇಡಿ ಎಂದು ವಿನಂತಿ ಮಾಡುತ್ತಿದ್ದರು . ಎಚ್ ನರಸಿಂಹಯ್ಯ ನ್ಯಾಷನಲ್ ಕಾಲೇಜ್ ಹಾಸ್ಟೆಲ್ ನಲ್ಲಿ ಬೆಳಿಗ್ಗೆ ಪ್ರಾರ್ಥನೆಗೆ ಬಾರದವರಿಗೆ ಐವತ್ತು ಪೈಸೆ ದಂಡ ಹಾಕಲು ಒಬ್ಬ ವಿದ್ಯಾರ್ಥಿ ಒಮ್ಮೆಲೇ ಐದು ರೂಪಾಯಿ ತಂದು ಕೊಟ್ಟು ಹತ್ತು ದಿನ ತಂಟೆಗೆ ಬರಬೇಡಿ ಎಂದನಂತೆ .. 

        ನಾನು ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ಹಾಜರಿ ಹಾಕುವ ಪದ್ದತಿಯೇ ಇರಲಿಲ್ಲ .ಎಲ್ಲರೂ ನಿಗದಿತ ಸಮಯಕ್ಕಿಂತ ಮೊದಲೇ ಬಂದು ಕೆಲಸ ಎಲ್ಲಾ ಪೂರ್ಣ ಗೊಳಿಸಿಯೇ ಹೋಗುತ್ತಿದ್ದ ಸಂಸ್ಕೃತಿ ಇತ್ತು . ಈಗ ಎಲ್ಲೆಡೆಯೂ ನಂಬಿಕೆ ಕೊರತೆ. ಸಂಸ್ಥೆಗಳಲ್ಲಿ  ಪ್ರಾಕ್ಸಿ ಹಾಜರಿ ಹಾಕುತ್ತಾರೆ ಎಂದು ಪಂಚಿಂಗ್ ಪದ್ಧತಿ ತಂದಿದ್ದಾರೆ .ಕೆಲವು ವೈದ್ಯಕೀಯ  ಕಾಲೇಜುಗಳಲ್ಲಿ  ಬೆಳಿಗ್ಗೆ ಪಂಚ್ ಮಾಡಿ ತಮ್ಮ ಖಾಸಗಿ ಆಸ್ಪತ್ರೆಗೆ ತೆರಳಿ ಸಂಜೆ ಮತ್ತೆ ಬಂದು ಪಂಚ್ ಮಾಡುವವರು ಇದ್ದಾರೆ ಎಂದು ಓದಿದ್ದೇನೆ . ಆದರೆ ಇಂಥವರು ಪ್ರಭಾವ ಶಾಲಿಗಳು ಆಗಿ ಇರುವುದರಿಂದ ಏನೂ ಮಾಡಲು ಆಗುವುದಿಲ್ಲ .