ಬೆಂಬಲಿಗರು

ಸೋಮವಾರ, ನವೆಂಬರ್ 15, 2021

ಮನಸು ತುಂಬಿದಾಗ ಮಾತು ಹೊರಡುವುದಾದರೂ ಹೇಗೆ ?

 ಮನಸು ತುಂಬಿದಾಗ ಮಾತು ಹೊರಡುವುದಾದರೂ ಹೇಗೆ ?

                




ನಿನ್ನೆ ನನ್ನ ಪುಸ್ತಕ ಬಿಡುಗಡೆ ಸಮಾರಂಭ . ಭಾನುವಾರ ಬೆಳಿಗ್ಗೆ ಇಟ್ಟರೆ ಜನ ಬಾರರು ಎಂದು ಮಿತ್ರ ಪ್ರಕಾಷ್ ಎಚ್ಚರಿಸಿದರೂ ,ಸಾಯಂಕಾಲ ಕಾಡು ವಿನಲ್ಲಿ ರಘು ಅಣ್ಣನ ಕಾರ್ಯಕ್ರಮಕ್ಕೆ ತೊಂದರೆ ಆಗ ಬಾರದು ಎಂದು ರಿಸ್ಕ್ ತೆಗೆದು ಕೊಂಡೇ ಇಟ್ಟದ್ದು .ಅಕಾಲ ಮಳೆಯ ನಡುವೆಯೂ ಆಸಕ್ತರು ಹಿತೈಷಿಯಗಳು ಒಳ್ಳೆಯ ಸಂಖ್ಯೆಯಲ್ಲಿ ಬಂದಿದ್ದರು.ವಿದುಷಿ  ಸುಚಿತ್ರಾ ಹೊಳ್ಳ ಅವರ ತಂಡ ವಚನಗಳು ಮತ್ತು ದೇವರ ನಾಮಗಳನ್ನು ಬಹಳ ಚೆನ್ನಾಗಿ ಹಾಡಿದರು .

ಸಹೋದರಿ ಡಾ ಸುಲೇಖಾ ಚಂದ್ರಗಿರಿ ಕಾರ್ಯಕ್ರಮ ಚೆನ್ನಾಗಿ ನಡೆಸಿ ಕೊಟ್ಟರು .ವರದರಾಜ ಚಂದ್ರಗಿರಿ ಅವರ ಪುಸ್ತಕ ಪರಿಚಯ ಭಾಷಣ ,ಒಳಿತನ್ನು ಹೆಕ್ಕಿ ಹೊಳಪಿಟ್ಟು ಸಿಂಗರಿಪ ಪೋಲೆ ಇದ್ದು ,ನನಗೇ ನನ್ನ ಬರವಣಿಗೆಯಲ್ಲಿ ಕಾಣದ ಗುಣ ಸಹೃದತೆಯ ದ್ಯೋತಕ . ಎಲ್ಲರೂ ಅವರ ಮಾತನ್ನು ಮೆಚ್ಚಿ ಒಪ್ಪಿಕೊಂಡರು . 

ಹಿರಿಯರಾದ ಶ್ರೀ ಲಕ್ಷ್ಮೀಶ ತೊಲ್ಪಾಡಿ ನನ್ನನ್ನು ಒಂದು ಲೇಖಕ ಎಂದು ಘೋಷಿಸಿ ಆಶೀರ್ವಾದ ಮಾಡಿದರು .ಗೆಳಯರಾದ ಹಿರಿಯ ಲೇಖಕ ಪ್ರಾಧ್ಯಾಪಕ ಕೃಷಿಕ ನರೇಂದ್ರ ರೈ ,ವಕೀಲ ಲೇಖಕ ಭಾಸ್ಕರ ಕೊಡಿಂಬಾಳ ನನ್ನ ಫೇಸ್ ಬುಕ್ ಬರಹ ಗಳ ಬಗ್ಗೆ ಒಳ್ನುಡಿಗಳನ್ನು ಆಡಿ ಹರಸಿದರು . ಅಧ್ಯಕ್ಷ ಡಾ ಸೂರ್ಯ ನಾರಾಯಣ ರೂ .

ಕಾರ್ಯಕ್ರಮಕ್ಕೆ ಹಿರಿಯರಾದ ಸುಬ್ರಹ್ಮಣ್ಯ ಕೊಳತ್ತಾಯ ,ಪುರಂಧರ ಭಟ್,ಡಾ ಯೇತಡ್ಕ   ಸುಬ್ರಾಯ ಭಟ್ ಮತ್ತು ಸುಧಾಮ ಕೆದಿಲಾಯ  ತಮ್ಮ ವೃದ್ದಾಪ್ಯ ದ ಸಮಸ್ಯೆಗಳು ಇದ್ದರೂ ಬಂದು ಹರಸಿದ್ದು ನನ್ನ ಮನ ತುಂಬಿ ಬಂದಿದೆ . ಬಂದವರೆಲ್ಲಾ ಕೊನೆ ತನಕ ಕುಳಿತು  ತಾವೂ ಸಂತೋಷ ಪಟ್ಟುದಲ್ಲದೆ  ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು .

ಮಿತ್ರ ಪ್ರಕಾಶರ ಅಭಿಪ್ರಾಯದಂತೆ ಒಂದು ಪುಸ್ತಕ ಬಿಡುಗಡೆ ದಿನ ರೆಕಾರ್ಡ್ ಎನ್ನ ಬಹುದದಂತಹ ಮಾರಾಟ ಆಗಿದೆ ,

ಹಿತೈಷಿಯಗಳು ಕೆಲವರು ಹೇಳಿದರು ನನ್ನ ಪ್ರಸ್ತಾವಿಕ ಭಾಷಣ ಯಾವತ್ತಿನ ಮಟ್ಟಕ್ಕೆ ಬರಲಿಲ್ಲ ಎಂದು . ಒಂಬತ್ತು ತಿಂಗಳು ಹೊತ್ತು ಸುಖ ಪ್ರಸವ ಆಗಿ (ಪುಸ್ತಕ ಪ್ರಕಟನೆಗೆ ಹೋಗಿ ನವ ಮಾಸಗಳು ಸಂದವು .ಕೋವಿಡ್ ಕಾರಣ ತಡವಾಯಿತು )ನಾಮಕರಣಕ್ಕೆ ಇಷ್ಟು ಸನ್ಮನಸುಗಳನ್ನು ಕಂಡಾಗ ಮನವು ತುಂಬಿ ಬಂದಿತ್ತು ,ಮಾತು ಹೊರಡುವುದಾದರೂ ಹೇಗೆ ?

ಎಲ್ಲರಿಗೂ ವಂದನೆಗಳು . ಪುಸ್ತಕ ಬೇಕಾದವರು ಶ್ರೀ ಪ್ರಕಾಶ  ಅವರನ್ನು ವ್ಹಾಟ್ಸ್ ಅಪ್ 9480451560  ನಲ್ಲಿ ಸಂಪರ್ಕಿಸಿ . ಮೊದಲು ಪುಸ್ತಕ ಬೇಕು ಎಂದು ಹೇಳಿದವರೂ ಕೂಡಾ .ಪುಸ್ತಕವನ್ನು ಮಂಗಳೂರಿನ ಜ್ಯೋತಿ ಬಳಿ ಇರುವ ನವಕರ್ನಾಟಕ ಪುಸ್ತಕ ಅಂಗಡಿಯಲ್ಲಿಯೂ ಲಭ್ಯ ಮಾಡುವೆನು .ಅಲ್ಲಿ ಶ್ರೀ ಶಾಂತಾರಾಂ ಅವರನ್ನು ಸಂಪರ್ಕಿಸ ಬಹುದು .ಏನಾದರೂ ಸಮಸ್ಯೆ ಇದ್ದರೆ  ನನಗೆ ಫೇಸ್ ಬುಕ್ ಮೆಸೇಜ್ ಹಾಕಿರಿ .

ಶನಿವಾರ, ನವೆಂಬರ್ 13, 2021

ದೇವಕಾರ್ಯ

 ದೇವಕಾರ್ಯ 

ಮೊನ್ನೆ ಒಂದು ದಂಪತಿ ನನ್ನಲ್ಲಿ ರೋಗ ತಪಾಸಣೆಗೆ ಬಂದವರು ಹೋಗುವಾಗ ಮುಖದಿಂದ ಮಾಸ್ಕ್ ತೆಗೆದು ನಮ್ಮನ್ನು ಗುರುತು ಸಿಕ್ಕಿತಾ ಸಾರ್ ಎಂದು ಕೇಳಿದರು . ನೂರಾರು ಜನರನ್ನು ನೋಡುವ ನಮಗೆ ನೆನೆಪು ಇರುವುದಿಲ್ಲ . ಕ್ಷಮೆ ಕೇಳಿ ಇಲ್ಲವಲ್ಲಾ ಎಂದೆ. "ಸಾರ್ ಎರಡು ವರ್ಷ ಹಿಂದೆ ನಾವು ಔಷಧಿಗೆ ಬಂದಿದ್ದೆವು .ಅದೇ ದಿನ ನಮ್ಮ ಮಗಳಿಗೆ ಯುನಿವರ್ಸಿಟಿ ಗೆ ಸೇರಲು ಕಡೆ ದಿನ.ಫೀಸು ಕಟ್ಟಲು ಹಣ ಕೊರತೆ ಇದೆ ಎಂದಾಗ ನೀವು ಎರಡು ಸಾವಿರ ರೂಪಾಯಿ ಕೊಟ್ಟು ವಾಪಸು ಕೊಡುವುದು ಬೇಡ 'ಎಂದು ಹೇಳಿದ್ದಿರಿ. ಈಗ ಅವಳು ಕಲಿತು ಒಳ್ಳೆಯ ಕೆಲಸದಲ್ಲಿ ಇದ್ದು ಕುಟುಂಬಕ್ಕೆ  ಊರು ಗೋಲು ಆಗಿರುವಳು .ನಿಮ್ಮ ಕೈ ರಾಶಿ "ಎಂದರು . ನನಗೆ ನೆನಪಿಗೆ ಬಂತು .

                         ನನಗೆ ಒಂದು ವೀಕ್ನೆಸ್ ಇದೆ .ಈ ತರಹ ಕೇಳಿದಾಗ ಕಿಸೆಯಲ್ಲಿ ಇದ್ದುದನ್ನು ತೆಗೆದು ಕೊಡುತ್ತೇನೆ . ಅಮೇಲೆ ಅದರ ಬಗ್ಗೆ ಯೋಚಿಸುವುದಿಲ್ಲ .ಒಂದಿಬ್ಬರು ಇದನ್ನು ದುರುಪಯೋಗ ಮಾಡಿಕೊಂಡದ್ದೂ ಇದೆ . ನನ್ನ ಮಟ್ಟಿಗೆ ಇದೇ ದೊಡ್ಡ ದೇವಕಾರ್ಯ . 

ಹೀಗೆ ಕೊಡಲು ನಮಗೂ ಸಂಪಾದನೆ ಬೇಕು . ಕೆಲವರು  ವೈದ್ಯರ ಫೀಜ್ ಕೊಡಲು ಹಿಂದೆ ಮುಂದೆ ನೋಡುತ್ತಾರೆ .ಅದರಲ್ಲೂ ನನ್ನ ಬಳಿಗೆ ಬಂದ ಹಲವು ರೋಗಿಗಳನ್ನು ಪರೀಕ್ಷೆ  ಮಾಡಿದ ಬಳಿಕ ನಿಮಗೆ  ಯಾವ  ಔಷಧಿಯೂ ಬೇಡ ಎಂದು ಹೇಳಿ ಕಳುಹಿಸುವ ಕಾರಣ ಮದ್ದು ಬರೆಯದವರಿಗೆ  ಹಣ ಯಾಕೆ ಕೊಡ ಬೇಕು ಎಂಬ ಭಾವನೆ . ಹೆಚ್ಚಾಗಿ  ಬಡವರು  ಭಕ್ತಿಯಿಂದ  ಫೀಸು ಕೊಡುತ್ತಾರೆ . 'ಬಾಲೆ ಡಾಕ್ತ್ರೆನ ಕಾಸು ಕೊರ್ಲಾ "'ಮೋನೆ ಡಾಕ್ಟ್ರು ಫೀಜ್ ಕೊಡ್ಕಂಡೆ"ಎಂದು ಹಿರಿಯರು ನೆನಪಿಸುವುದನ್ನು ಕಂಡಿದ್ದೇನೆ . ಇನ್ನು ಕೆಲವರು ಮರೆತು ಹೋದವರು ತಿಂಗಳುಗಳ ಬಳಿಕ ತಂದು ಕೊಟ್ಟದ್ದು ಇದೆ. ಉಳ್ಳವರು ಕೆಲವರು  ಸ್ನೇಹಚಾರ ,ನೆಂಟಸ್ತಿಗೆ ಹೇಳಿ ಮಾಯವಾಗುವರು .ಮಂಗಳೂರಿನಲ್ಲಿ ಇದ್ದಾಗ ,ವಿದೇಶದಲ್ಲಿ ಕೆಲಸ ಮಾಡಿ  ಒಳ್ಳೆಯ ಪೆನ್ಷನ್ ಇರುವ  ಹಿರಿಯರು ಪ್ರತಿ ಸಲ ಶುಡ್ ಐ ಪೇ ಯು ಎಂದು ಅತೀ ಕಡಿಮೆ ಬೆಲೆಯ ನೋಟ್ ಕೊಡಲು ಮನಸಿಲ್ಲದೆ ಮುಂದೆ ಹಿಂದೆ ಚಾಚುತ್ತಿದ್ದರು. ಫೀಜ್ ಮನ್ನಾ ಮಾಡುವುದು ನಮ್ಮ ವಿವೇಚನೆಗೆ ಬಿಟ್ಟದ್ದು .ಕೊಡ ಬೇಕಾದವರು ಕೊಡಲೇ ಬೇಕು .

ಶುಕ್ರವಾರ, ನವೆಂಬರ್ 12, 2021

ಡಾ ಎಂ ಕೆ ಭಂಡಿ

                ಡಾ ಎಂ ಕೆ ಭಂಡಿ 

             

MK.BHANDI                 

ಹಿಂದೆ ನಾನು ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ  ಹತ್ತಿರ ದ ಮಂಗಳೂರು ವಿಶ್ವ ವಿದ್ಯಾಲಯದಿಂದ ಅಧ್ಯಾಪಕರು,ಸಿಬ್ಬಂದಿ ಮತ್ತು  ವಿದ್ಯಾರ್ಥಿಗಳು ಚಿಕಿತ್ಸೆಗೆ  ಬರುತ್ತಿದ್ದರು . ಇವರಲ್ಲಿ ಓರ್ವ ಹಿರಿಯರು ಬಹುಪಾಲು ಎಲ್ಲರಿಗೂ ಸಂಗಾತಿಯಾಗಿ ಸಹಾಯಕ್ಕೆ  ಬರುತ್ತಿದ್ದರು . ಹಾಗೆ ಪರಿಚಯ ಆದವರು ಡಾ ಎಂ ಕೆ ಭಂಡಿ .ಅವರು ವಿಶ್ವ ವಿದ್ಯಾಲಯದ ಮುಖ್ಯ ಲೈಬ್ರರಿಯನ್ ಆಗಿದ್ದರು . 

ಮೊದಲೇ ನಾನು ಪುಸ್ತಕ ಪ್ರಿಯ ಮತ್ತು ಅದರ ಬೇಟೆ ಆಡುವವನು . ನಾನು ಅತ್ಯಂತ ಗೌರವಿಸುವ ಮತ್ತು ಕರ್ನಾಟಕದ ವಿದ್ಯಾಕ್ಷೇತ್ರದ ಧ್ರುವ ತಾರೆ ಡಾ  ಡಿ ಸಿ ಪಾವಟೆಯವರು ಅನೇಕ ಗಣಿತ ಪಠ್ಯ ಪುಸ್ತಕಗಳ ಜೊತೆ  ಆತ್ಮ ಚರಿತಾತ್ಮಕವಾದ ಎರಡು ಕೃತಿಗಳನ್ನು ಬರೆದಿದ್ದು ನಾನು ಅವುಗಳನ್ನು ವಾಚನಾಲಯದಿಂದ ತಂದು ಓದಿದ್ದೆ .ಅವುಗಳನ್ನು ಪುನಃ ಓದಬೇಕೆನಿಸಿದಾಗ ಸಿಗಲಿಲ್ಲ . ಔಟ್ ಒಫ್ ಪ್ರಿಂಟ್ . ನಾನು ಶ್ರೀ ಭಂಡಿಯವವನ್ನು ಕೇಳಿಕೊಳ್ಳಲು 'ಸಾರ್ ನೀವು ಚಿಂತಿಸ ಬೇಡಿ "ಎಂದು ಕರ್ನಾಟಕ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಇದ್ದ ಎರಡೂ  ಕೃತಿಗಳನ್ನು ಜೆರಾಕ್ಸ್ ಮಾಡಿ ಬೈಂಡ್ ಹಾಕಿಸಿ ಕೊಟ್ಟರು .ನನ್ನಿಂದ ಯಾವುದೇ ಪ್ರತಿಫಲ ತೆಗೆದು ಕೊಳ್ಳಲಿಲ್ಲ .ಮುಂದೆ ಕರ್ನಾಟಕದ ರಾಜ್ಯಪಾಲರಾಗಿ  ಒಳ್ಳೆಯ ಹೆಸರು ಪಡೆದಿದ್ದ ಶ್ರೀ ಧರ್ಮವೀರ ಅವರ ಆತ್ಮ ಚರಿತ್ರೆಯನ್ನೂ  ಅದೇ ಪ್ರಕಾರ ತೆಗೆಸಿ ಕೊಟ್ಟರು . 

ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು  ಪಿ ಎಚ್ ಡಿ ಮಾಡಿದ್ದಾರೆ .ಫುಲ್ ಬ್ರೈಟ್ ಸ್ಕಾಲರ್ ಆಗಿದ್ದ ಇವರಿಗೆ ಅನೇಕ ಗೌರವಗಳು ಸಂದಿವೆ . 

ನಾಳೆ ನನ್ನ ಪುಸ್ತಕ ಬಿಡುಗಡೆ ಸಂದರ್ಭ ತಟ್ಟನೆ ಅವರ ನೆನಪಾಗಿ  ಫೋನ್ ಮಾಡಿ ಸಂಪರ್ಕಿಸಿದೆ .ಈಗ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ . ಅವರಿಗೆ ಅರೋಗ್ಯ ,ಮನಶಾಂತಿ ಕೋರಿದಾಗ ತುಂಬಾ ಸಂತೋಷ ಪಟ್ಟರು .ಅವರ ಫೋನ್ ಡೈರೆಕ್ಟರಿ ಯಲ್ಲಿ ನನ್ನ ಹೆಸರು ಇನ್ನೂ ಇಟ್ಟು ಕೊಂಡಿರುವರು

ಸೋಮವಾರ, ನವೆಂಬರ್ 8, 2021

ಮಂತ್ರ ಬಿನ್ನಹ

 ನಮ್ಮಲ್ಲಿ ಹಿಂದೆ ಆಗುತ್ತಿದ್ದ ವಿವಾಹಗಳ ವೈಭವ ಮತ್ತು ಆತ್ಮೀಯತೆ ಬಗ್ಗೆ ನಾನು ಹಿಂದೆ ಬರೆದಿದ್ದೆ . ವರನ ದಿಬ್ಬಣ ಬಂದು ,ಸ್ವಾಗತ ,ಅವಲಕ್ಕಿ ಸಜ್ಜಿಗೆ ಕಾಫಿ ಆಗಿ ,ವಾರ ವಧೂ ಅಲಂಕಾರ ,ನಡುವೆ ಚಪ್ಪರದಲ್ಲಿ ಗಂಡಸರು ,ಹೆಂಗಸರು ಸಭೆಯಲ್ಲಿ ತಮ್ಮ ತಮ್ಮ ಸ್ಥಾನದಲ್ಲಿ ಚಾಪೆಯ ಮೇಲೆ ಆಸೀನರಾಗಿ ಎಲೆ ಅಡಿಕೆ ಸೇವಿಸಿಕೊಂಡು ಉಭಯ ಕುಶಲೋಪರಿ ಮಾತನಾಡುವರು .ಮಾಸ್ಟ್ರು ಬರುವ ಮುಂಚಿನ ತರಗತಿಯ ವಾತಾವರಣ .  ಹೊಸ ಬಟ್ಟೆ ಹಾಕಿಕೊಂಡ ಮಕ್ಕಳು ಹೊಸ ಮೈತ್ರಿ ಮಾಡಿಕೊಂಡು ತಮ್ಮದೇ ಲೋಕದಲ್ಲಿ ಲಾಗ ಹಾಕುವರು .ಮುಹೂರ್ತ ಸಮೀಪಿಸಿದಾಗ ಪುರೋಹಿತರು ಎದ್ದು ನಿಂತು ಒಂದು ಕೈಯಿಂದ ಮಂಟಪದ ರೀಪು ಹಿಡಿದು ಕೊಳ್ಳುವರು . ಸಭೆಯಲ್ಲಿ ಪೂರ್ಣ ಮೌನ ಆವರಿಸುವುದು . ಪುರೋಹಿತರು ಮಂತ್ರ ಬಿನ್ನಹ ಆರಂಭಿಸುವರು . ಇದು ಬಹಳ ಅಪ್ಯಾಯ ಮಾನವಾಗಿದ್ದು ನಾನು ಮಂಟಪದ ಬಳಿ ಕುಳಿತು ಆಸಕ್ತಿಯಿಂದ ಕೇಳುತ್ತಿದ್ದೆನು .ಕೆಲವು ಸಾಲು ನನಗೆ ಬಾಯಿ ಪಾಠ ಬರುತ್ತಿದ್ದು ನಾನು ಮನೆಗೆ ಹೋಗಿ ಕಲ್ಪಿತ ಮಂಟಪ ಹಿಡಿದು ಅದನ್ನು ಹೇಳುತ್ತಿದ್ದೆನು . ಈ ಬಿನ್ನಹ ಮಂತ್ರ ಭವಂತು ಸರ್ವಜ್ಞ ಎಂದು ಆರಂಭವಾಗುವುದು ಮತ್ತು ಪುರೋಹಿತರು ಎದ್ದು ನಿಂತು ಹೇಳುತ್ತಿದ್ದರಿಂದ ,ಬಸ್ಸಿನಲ್ಲಿ ಜಾಗ ಸಿಗದೇ ಮೇಲಿನ ಕಂಬಿ ಹಿಡಿದು ನಿಂತು ಬಂದರೆ ಬಸ್ಸಿಲಿ  ಭವಂತು ಸರ್ವಜ್ಞ ಮಾರಾಯ ಎಂದು ಹೇಳುತ್ತಿದ್ದರು . ಈ ಮಂತ್ರದ  ಆರಂಭದಲ್ಲಿ ಸೇರಿದ ಅತಿಥಿಗಳಿಗೆ ಹೇಗೆ ಅಭಿವಂದಿಸಲಿ ಎಂಬ ಜಿಜ್ಞಾಸೆ ಆದರೆ ,ಆಮೇಲೆ ಅತಿಥಿಗಳಿಗೆ ಷೋಡಶೋಪಚಾರ ಯಾವುವು ?ಅವುಗಳಲ್ಲಿ  ಮತ್ತೆ ಪ್ರಾಮುಖ್ಯವಾದದ್ದು ಆರು .ಅದರಲ್ಲಿ ಕೂಡಾ ನಮಸ್ಕಾರವೇ ಶೇಷ್ಠ  ,ನನ್ನಂತಹ ಬಡಪಾಯಿಯ ನಮಸ್ಕಾರವನ್ನೇ ಷಡ್ಯುಪಚಾರವಾಗಿ ಸ್ವೀಕರಿಸಿ  ಇತ್ಯಾದಿ ಬರುತ್ತದೆ . ಪುರೋಹಿತರು ಮೊದಲು ಸಂಸ್ಕೃತದಲ್ಲಿ  ,ಅದರ ಅನುವಾದ ಕನ್ನಡಲ್ಲಿ ಎರಡೂ ರಾಗವಾಗಿ ಹೇಳುವರು .ಕೇಳಲು ಬಹಳ ಹಿತ . ಈಗ ಹಾಲ್ ಗಳಲ್ಲಿ ಇವುಗಳನ್ನು ಗಮನ ಕೊಟ್ಟು ಕೇಳುವುದು ಅಸಾಧ್ಯ . ಪುರೋಹಿತರೂ ಕಾಲಕ್ಕನುಗುಣವಾಗಿ ಅದರಲ್ಲಿ ಕೆಲವು ಕಡಿತ ಮಾಡಿಕೊಳ್ಳುವರು

 ಮಂತ್ರ ಬಿನ್ನಹ ಹೀಗೆ ತೊಡಗುವುದು .

ಭವಂತಃ ಸರ್ವಜ್ಞ :ನೀವೆಲ್ಲರೂ ಸರ್ವಜ್ಞರಾದಂತವರೂ 

ಸಕಲ ಭುವನೇ ರೂಡಾಯಶಸಃ ;ಸಮಸ್ತ ಲೋಕಗಳಲ್ಲಿಯೂ ಕೀರ್ತಿಯುಳ್ಳಂಥವರುಗಳು 

ಯಯಮ್ ತಾವದ್ಬಾಲಾಹ -ನಾವಾದರೋ ಬಾಲಕರು 

ಸರಸ ವಚನೇ ನೈವ ನಿಪುಣಃ -ಸರಸ ವಚನಗಳನ್ನು ಆಡುವುದರಲ್ಲಿ ನಿಪುಣರಲ್ಲ 

ತಥಾಪಿ -ಹಾಗಾದರೂ 

ಇಯಂ ವಾಣೀ -ಈ ವಾಕ್ಯವು 

ವಿಷತು  ಭವತಾ ಕರ್ಣ ಕುಹರಂ ;ನಿಮ್ಮ ಕಿವಿಗಳನ್ನು ಪ್ರವೇಶಿಸಲಿ 

ಕಿಶೋರಸ್ಯಾಲಾಪಃ -ಬಾಲಕನ ತೊದಲು ನುಡಿಯು 

ಖಲು ಭವತಿ ಪಿತ್ರೋರತಿಮುದೇ -ತಾಯಿ ತಂದೆಯರಿಗೆ ಯಾವ ಪ್ರಕಾರವಾಗಿ ಸಂತೋಷ ತರುತ್ತದೆಯೋ ಅದೇ ಪ್ರಕಾರವಾಗಿ ನೀವೆಲ್ಲರೂ ಸಂತೋಷ ಪಡಬೇಕು . 

ಪುತ್ರೋತ್ಸವೇ- ಪುತ್ರೋತ್ಸವ ನಾಮಕರಣದಲ್ಲಿ ;ಮೌಂಜಿ ಬಂಧೇ -ಉಪನಯನದಲ್ಲಿ 

ಕನ್ಯಾಯಃ ಪ್ರಥಮಾರ್ಥವೇ -ಕನ್ನಿಕೆಯ ಪ್ರಥಮ ಋತುವಿನಲ್ಲಿ ಮಾಡತಕ್ಕಂತಹಾ ಬ್ರಹ್ಮೋದನ ಕರ್ಮದಲ್ಲಿ .,

ವಿವಾಹೇ -ವಿವಾಹದಲ್ಲಿ , ಯಜ್ಞ ಸಮಯೇ -ಯಜ್ಞ ಮಾಡುವಾಗ ,ಬಿನ್ನಹಮ್ ಪಂಚ ಸುಸ್ಮೃತಮ್ -ಈ ಐದು ಸಂದರ್ಭಗಳಲ್ಲಿ ಬ್ರಹ್ಮ ಸಭೆಯನ್ನು ಕುರಿತು ಬಿನ್ನಹ ಮಾಡಬೇಕು . 

ಆಶಿಃಪೂರ್ವಕಮಿತ್ಯೆಕೇ -ಆಶೀರ್ವಾದ ಪೂರ್ವಕವಾಗಿ ಬಿನ್ನಹ ಮಾಡಬೇಕೆಂಬುದು ಒಂದು ಮತ ;ನಮಃ ಪೂರ್ವನ್ತು ಕೇಚನಃ -ನಮಸ್ಕಾರ ಪೂರ್ವಕವಾಗಿ ಬಿನ್ನಹ ಮಾಡಿಕೊಳ್ಳಬೇಕು ಎಂದು ಕೆಲವರ ಮತ ;ಬಿನ್ನಹಂ  ವೇದಪೂರ್ವಂ ಸ್ಯಾದಿತಿ ಸರ್ವೆರ್ವಿ ನಿಶ್ಚಿತಂ -ವೇದಪೂರ್ವವಾಗಿ  ಬಿನ್ನಹ ಮಾಡಬೇಕೆಂಬುದುದು ಸರ್ವ ಸಮ್ಮತ . 

ಇವುಗಳ ಪೈಕಿ ಆಶೀ ಪೂರ್ವಕವಾದ ಬಿನ್ನಹವು ಯಾವುದಯ್ಯ ಎಂದರೇ 

ಗಿರಿಜಾ ವಿವಾಹ ಸಮಯೇ -ಪಾರ್ವತಿ ದೇವಿಯ ವಿವಾಹ ಸಮಯದಲ್ಲಿ 

ಸ್ವಸ್ತೀತಿ ಪರಿಭಾಷಿತೋ ಮುನಿವರೈ -ವಶಿಷ್ಠ ವಾಮದೇವಾದಿ ಮುನಿವರರಿಂದ ಮಂಗಲವೆಂದು ಶ್ಲಾಘಿಸಲ್ಪಟ್ಟಂತಹಾ ;ಸಂಸ್ತೂಯ ಮಾನಃ  ಸುರೈ -ದೇವಗಣದಿಂದ ಸ್ತುತಿಸಲ್ಪಟ್ಟಂತಹಾ ;ಪಾರ್ಶ್ವೇ ಪದ್ಮಜ ಪದ್ಮನಾಭ ಪುರುಹೂತಾರ್ದೈ ರ್ಜ್ಯೇರ್ಥರ್ಚಿತ -ಪಾರ್ಶ್ವ ಭಾಗದಲ್ಲಿ ಪದ್ಮನಾಭ ದೇವೇಂದ್ರನೇ ಮೊದಲಾದ ದೇವತೆಗಳಿಂದ ಜಯ ಜಯ ಎಂದು ಪೂಜಿಸಲ್ಪಟ್ಟಂತಹಾ ; ಅಗ್ರೇಚಾಪ್ಸರಸಾಮ್  ಗಣೈ ರಹ ರಹ ನೃತ್ಯದ್ಭಿ ರಾಹ್ಲಾದಿತಃ -ಎದುರಿನಲ್ಲಿ ನಾನಾ  ನೃತ್ಯವನ್ನು ಮಾಡುವ ಅಪ್ಸರ ಸ್ತ್ರೀ ಸಮೂಹದಿಂದ ಸಂತೋಶಿಸಲ್ಪಡುವಂತಹಾ ;ಸಂತುಷ್ಟಮ್ -ಸಂತುಷ್ಟನದಂತಹಾ ;ಮೃಢಮ್ -ಪರಮೇಶ್ವರನೂ .;ಸ್ಯಾತ್ ಸಂಪದೇ -ನಮಗೆ ಉತ್ತರೋತ್ತರ ಮಂಗಲವನ್ನುಂಟು ಮಾಡಲಿ ಎಂಬುದೀಗ ಆಶೀ ಪೂರ್ವಕ ಬಿನ್ನಹ .. 

ನಮಃ ಪುರ್ವಿಕಾ ವಿಜ್ಞಾಪನಾ ಕಥಾಮಿತ್ಯಾಕಾಂಕ್ಷಾಯಾಮಾಹಾ -ನಮಸ್ಕಾರ ಪೂರ್ವಕವಾದ ಬಿನ್ನಹವು ಯಾವುದಯ್ಯಾ ಎಂದರೆ --- ಹೀಗೆ ಮುಂದುವರಿಯುವುದು.ಮುಂದೆ ಸಭೆಯ ವರ್ಣನೆ ,ಅತಿಥಿ ಉಪಚಾರಗಳ  ವರ್ಣನೆ ಇರುವುದು .ಈಗ ಊಟದ ಹೊತ್ತಿಗೆ ಬಹುತೇಕ ಅತಿಥಿಗಳ ಆಗಮನ ಆಗುವುದರಿಂದ ಇವೆಲ್ಲಾ ಅರಣ್ಯ ರೋದನ ಆದಂತೆ ಭಾಸ ಆಗುವುದು .

 

(ಇದರ ಮೂಲ ಸಾಹಿತ್ಯ ಒದಗಿಸಿಕೊಟ್ಟ ನಮ್ಮ ಪುರೋಹಿತರಾದ ಅಮೈ ಶ್ರೀ ಕೃಷ್ಣ ಪ್ರಸಾದ ಭಟ್ಟರಿಗೆ ಆಭಾರಿ )

 

 

ಭಾನುವಾರ, ನವೆಂಬರ್ 7, 2021

ನನ್ನ ಕೀಳರಿಮೆ

 ಬಾಲ್ಯದಲ್ಲಿ' ಭಾಷೆ ಇಲ್ಲದವ' ಎಂದು ಹಲವು ಭಾರಿ ಬೈಗಳು ತಿಂದಿದ್ದೇನೆ . ನಾನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದದ್ದು  ಕನ್ನಡ ಮಾಧ್ಯಮದಲ್ಲಿ ಅದೂ ಸರಕಾರಿ ಶಾಲೆಯಲ್ಲಿ . ಆಮೇಲೆ  ಪಿ ಯು ಸಿ ,ವೈದ್ಯಕೀಯ  ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಇಂಗ್ಲಿಷ್ ಮಾಧ್ಯಮದಲ್ಲಿ . ಅನೇಕ ರಾಜ್ಯಗಲ್ಲಿ ,ದೇಶಗಳಲ್ಲಿ  ,ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡಿದರೂ,ಅಲ್ಪ ಸ್ವಲ್ಪ ಇಂಗ್ಲಿಷ್ ಸಾಹಿತ್ಯ ಓದಿ ಕೊಂಡಿದ್ದರೂ ನಾನು  ಯೋಚಿಸುವುದು ಕನ್ನಡದಲ್ಲಿ . ಬಾಯಲ್ಲಿ ಮೊದಲು ಬರುವುದು ಮಾತೃ ಭಾಷೆ . ನಿಜ ಒಪ್ಪಿ ಕೊಳ್ಳುತ್ತೇನೆ .ನನಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ ;ಮಾತ್ರವಲ್ಲ  ಶುದ್ಧ  ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಭಾರತೀಯರ ಮುಂದೆ ಮಾತನಾಡುವಾಗ ನನಗೆ ಕೀಳರಿಮೆ (inferiority complex ) ಬರುತ್ತದೆ .ಅದು ಮಾತ್ರವಲ್ಲ ಆಧುನಿಕತೆಯೊಡನೆ ತಾಲೂಕು ಹಾಕಿ ಕೊಂಡಿರುವ ತಾರಾ ಸಂಸ್ಕೃತಿ ಎಷ್ಟು ಪ್ರಯತ್ನಿಸಿದರೂ ನನಗೆ ಒಗ್ಗಿಲ್ಲ . ಉದಾ ದೊಡ್ಡ ಐಷಾರಾಮಿ ಹೋಟೆಲ್ ಗಳಲ್ಲಿ ನನಗೆ ಸರಿಯಾಗಿ ನಿದ್ದೆ ಬರದು ,ಅಲ್ಲಿನ ಶವರ್ ಟಬ್ ನಲ್ಲಿ ಸ್ನಾನ ಮಾಡಿದರೆ ಮಾಡಿದ ಹಾಗೆ ಆಗುವುದಿಲ್ಲ . ಇನ್ನು ತೊಡೆಯ ಮೇಲೆ ಟವೆಲ್ ಹಾಕಿಕೊಂಡು ಚಮಚ ,ಮುಳ್ಳು ಚಮಚಗಳಲ್ಲಿ   ಸರ್ಕಸ್ ಮಾಡಿ ತಿಂದರೆ ತಿಂದ ಹಾಗೆ ಆಗದು .ನನಗೆ ಕೈಯಲ್ಲಿ ಕಲಸಿ ಬಾಯಿ ಚಪ್ಪರಿಸಿ ಊಟ ಮಾಡಿದರೇನೇ ಊಟ . 

ಇನ್ನು ಆಸ್ಪತ್ರೆಯಲ್ಲಿ  ರೋಗಿಗಳೊಡನೆ ಅವರ ಮಾತೃ ಭಾಷೆಯಲ್ಲಿ ಮಾತನಾಡಿದರೇನೇ ನನಗೆ ಸಮಾಧಾನ ಆಗುವುದು . ಇಲ್ಲಿ ಒಂದು ಮಾತು ಹೇಳಬೇಕು ;ಮಾತೃಭಾಷೆ ಯಲ್ಲಿ ಮಾತನಾಡಿದರೆ ಸಂತೋಷ ಪಟ್ಟು ಅದೇ ಮಾತಲ್ಲಿ ಉತ್ತರಿಸುವರಲ್ಲಿ ತಮಿಳರು ಮೊದಲನೇ ಸ್ಥಾನ . ಚೆನ್ನೈ ಯಲ್ಲಿ ನಾನು ಇದ್ದಾಗ ರೋಗಿ ವೈದ್ಯರ ಸಂಹವನ ತಮಿಳು ಭಾಷೆಯಲ್ಲಿಯೇ ಇದ್ದು ನಾನು ಬೇಗನೆ ಆ ಭಾಷೆ ಕಲಿಯುವಂತೆ ಆಯಿತು .ಮಲಯಾಳಿಗಳು ಪರವಾಗಿಲ್ಲ .ಕನ್ನಡದವರು ಮಾತ್ರ ಸ್ವಲ್ಪ ಓದಿ ಕೊಂಡಿದ್ದರೆ ಸಾಕು ,ಇಂಗ್ಲಿಷ್ ಶಬ್ದಗಳೇ ಬರುವವು . ನಾನು ಆಸ್ಪತ್ರೆಯಲ್ಲಿ ಸಿಬ್ಬಂದಿ ಯೊಡನೆ  ಅವರ ಭಾಷೆಯಲ್ಲಿ ಮಾತನಾಡಿ ಎನ್ನುವೆನು . ತುಳು ತಾಯಿ ಭಾಷೆ ಇರುವ ಸಿಬ್ಬಂದಿ ಕೂಡಾ ಹಳ್ಳಿಯವರೊಡನೆ ಕನ್ನಡ ,ಇಂಗ್ಲಿಷ್ ನಲ್ಲಿ ಮಾತನಾಡುವರು . ಉದಾಹರಣೆಗೆ 'ಈರೆನೊಟ್ಟುಗು ಏರು ಉಳ್ಳೇರು 'ಎನ್ನುವುದಕ್ಕೆ ಬದಲು ನಿಮ್ಮ  ಪಾರ್ಟಿ ಎಲ್ಲಿದ್ದಾರೆ ಎನ್ನುವರು . ಅದೇ ತರಹ ಕನ್ನಡ ಮಾತ್ರ ಬರುವವರೊಡನೆ ಇಂಗ್ಲಿಷ್ ಪದ ಹೆಚ್ಚು ಬಳಸುವರು . ಇದು ನಮ್ಮ ನಾಡಿನ ವಿಶೇಷ . 

ಇನ್ನು ಈಗಿನ ಯುವ ತಲೆಮೊರೆ ಯ ರೋಗಿಗಳು ,ಮುಖ್ಯವಾಗಿ ಬೆಂಗಳೂರಿನಲ್ಲಿ ಕೆಲಸದಲ್ಲಿ (ಜಾಬ್ ಮಾಡುವವರು )ಇರುವವರು ಅಂತೂ ಬಹುಪಾಲು ಕನ್ನಡದಲ್ಲಿ ಕೇಳಿದ ಪ್ರಶ್ನೆಗಳಿಗೆ  ಉತ್ತರಿಸುವ ಭಾಷೆ ಬೆಂಗಳೂರಿನ ಮೋಡಿಯ ಇಂಗ್ಲಿಷ್ ಕನ್ನಡ ಆಗಿದ್ದು ,ಅವರೊಡನೆ ಮಾತನಾಡಲು ನಾನು ತಡವರಿಸುತ್ತೇನೆ . ಅವರನ್ನು ಸಂತೋಷ ಪಡಿಸಲು ಎಂದು ಇಂಗ್ಲಿಷ್ ಮಾತನಾಡಲು ಹೋದರೆ ನನ್ನ ಜ್ಞಾನ ಅರ್ಧದಲ್ಲಿ ಕೈ ಕೊಡುವುದು .

 ಹೀಗೆ ನಾನು ಇರುವ ಪರಿಸರದ ಪ್ರಭಾವದಿಂದ ನನ್ನ ಭಾಷಾ ಜ್ಞಾನದ ಬಗ್ಗೆ ನಿಜಕ್ಕೂ ನಾನು ಕೀಳರಿಮೆ ಹೊಂದಿದ್ದೇನೆ .ಪುಣ್ಯಕ್ಕೆ ನಾನು ಕಾನ್ವೆಂಟ್ ನಲ್ಲಿ ಓದಿದ ಹುಡುಗಿಯನ್ನು ಪತ್ನಿಯಾಗಿ ಪಡೆದಿಲ್ಲ . 

 

ಸರಳ ಸಂಕೀರ್ಣತೆ

                   ಸರಳ ಸಂಕೀರ್ಣತೆ 

ನಾನು ಮಂಗಳೂರಿನಲ್ಲಿ ಇದ್ದಾಗ ಉಪ್ಪಳದ ಕೆ ಎನ್ ಎಚ್ ಆಸ್ಪತ್ರೆಗೆ ನಿಯಮಿತ ಭೇಟಿ ನೀಡುತ್ತಿದ್ದೆ .ಸುತ್ತ ಮುತ್ತಲಿನ ಹಳ್ಳಿಯವರಿಗೆ ಇದರಿಂದ ಪ್ರಯೋಜನ ಆಗುತ್ತಿತ್ತು . 

   ಒಂದು ಬಾರಿ ಓರ್ವ ತಾಯಿ ಯಾವುದೊ ಕಾಯಿಲೆಗೆ ದಾಖಲು ಆಗಿದ್ದರು . ಡಿಸ್ಚಾರ್ಜ್ ಆಗಿ ಹೋಗುವಾಗ ನನ್ನಲ್ಲಿ  ರಹಸ್ಯವಾಗಿ ಒಂದು ವಿನಂತಿ ಮಾಡಿದರು . ತನ್ನ ಬಿಲ್ ಸ್ವಲ್ಪ ಏರಿಸಿ ಬರೆದು ಕೊಡಬಹುದೋ ?ಎಂಬುದೇ ಅವರ ಬೇಡಿಕೆ .ನನಗೆ ಆಶ್ಚರ್ಯ ಆಯಿತು . ಸರಕಾರಿ ಕಂಟ್ರಾಕ್ಟರ್ ಗಳು ಏರಿಸಿ ಬಿಲ್ ಬರೆಯುವರು ಎಂದು ಕೇಳಿದ್ದೆ .ತನ್ನ ಮನೆಯವರೇ  ಪಾವತಿ ಮಾಡುವ ಬಿಲ್ ಗೆ ಹೀಗೆ ಏಕೆ ಮಾಡುವರು?

                  ವಿಚಾರಿಸಿದಾಗ ತಿಳಿಯಿತು . ಆ ಪ್ರದೇಶದಲ್ಲಿ  ಸಾಮಾನ್ಯವಾಗಿ ಇರುವಂತೆ ಇವರ ಮಗ ಕೂಡಾ   ಗಲ್ಫ್ ಉದ್ಯೋಗಿ .ಆತನ ತಾಯಿ ಹೆಂಡತಿ ಮಕ್ಕಳು ಊರಿನಲ್ಲಿ ಇದ್ದಾರೆ . ಮಗ ಅಲ್ಲಿ ಕಷ್ಟ ಪಟ್ಟು ದುಡಿಯುತ್ತಿದ್ದಾನೆ .ತಾನು  ಸೊಸೆ ಮೊಮ್ಮಗುವಿಗೆ ಪ್ರೀತಿಯಲ್ಲಿ  ಏನಾದರೂ ಕೊಂಡು ಕೊಡಲು ಕಾಸು ಕೇಳಲು ಸಂಕೋಚ .ಆದರೆ  ಔಷಧೋಪಚಾರಕ್ಕೆ  ಎಂದರೆ ಮಗನಿಗೆ ಬೇಸರ ಆಗದು .ಆದ್ದರಿಂದ  ಆ ಬಾಬತ್ತಿನಲ್ಲಿ  ಸ್ವಲ್ಪ ದುಡ್ಡು ಶೇಖರಿಸುವ  ಆಲೋಚನೆ .ನನಗೆ ತಿಳಿದಂತೆ ಈ ತಾಯಿಯೂ ಒಳ್ಳೆಯವರು . ನಾನು ಏನೋ ಸಮಾಧಾನ ಮಾಡಿ ಕಳುಹಿಸಿದೆ . ಮೇಲ್ನೋಟಕ್ಕೆ ಸರಳವಾಗಿ ಕಾಣುವ ಜೀವ ಜೀವನಗಳಲ್ಲಿ ಕೂಡಾ ಎಷ್ಟು ಸಂಕೀರ್ಣತೆ ಅಡಗಿದೆ ಎಂದು ಯೋಚಿಸ ತೊಡಗಿದೆ

        

ಶನಿವಾರ, ನವೆಂಬರ್ 6, 2021

ಸರಳತೆಯ ದಂತ ಕತೆಗಳು

Mangalore: Freedom fighter Sanjeevanath Aikala passes away - Daijiworld.com 

ವರ್ಷಗಳ ಹಿಂದೆ ನಾನು ಕೆ ಎಸ ಹೆಗ್ಡೆ ಮೆಡಿಕಲ್  ಕಾಲೇಜು ನಲ್ಲಿ ಕೆಲಸ ಮಾಡುತ್ತಿರುವ ಸಮಯ ;ಒಂದು ದಿನ ಓ ಪಿ ಡಿ ಯಲ್ಲಿ ಇರುವಾಗ ಓರ್ವ ಬಡ ಕೃಷಣ ಕಾಯರು ಖಾದಿ ದಿರಿಸು ಮತ್ತು ಹಳೇ ಹವಾಯಿ ಚಪ್ಪಲಿ ಧಾರಿ ಯಾಗಿ  ತಮ್ಮ ಊರಿನ ಯಾರೋ ಬಡ ರೋಗಿಗೆ ಉಚಿತ ಚಿಕೆತ್ಸೆ ಕೊಡಿಸಲು ಓಡಾಡುತ್ತಿದ್ದರು . ಅವರು ಹೋದ ಮೇಲೆ ಅವರನ್ನು ಪರಿಚಯ ಇದ್ದ ನನ್ನ ಸಹೋದ್ಯೋಗಿ 'ಸರ್ ಅವರು ಮಾಜಿ ಎಂ ಎಲ್ ಈ ಸಂಜೀವ ನಾಥ ಐಕಳ ಅವರು ಸರ್ ,ಶುದ್ಧ ಗಾಂಧಿವಾದಿ 'ಎಂದರು . ಐಕಳರು ಕಾರ್ನಾಡು ಸದಾಶಿವ ರಾಯರ ಅನುಯಾಯಿ ಆಗಿ ಸ್ವಾತಂತ್ರ್ಯ ಸಮರದಲ್ಲಿ ಭಾಗಿ ಆದವರು ,ಮುಂದೆ ಜಯಪ್ರಕಾಶ ನಾರಾಯಣ ಅವರಿಂದ ಪ್ರಭಾವಿತ ರಾಗಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಸೇರಿ , ಎಂ ಎಲ್ ಎ  ಆಗಿದ್ದು ಸೇವೆ ಮಾಡಿದವರು . ಸರಳ ಪರಿಶುದ್ಧ ಜೀವನ ನಡೆಸಿ ೬.೨ ೨೦೧೪ ರಂದು ತೀರಿ ಕೊಂಡರು .. 

 ನಾನು ಚೆನ್ನೈ ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ಒಂದು ದಿನ ಮುಖ್ಯ ವೈದ್ಯಾಧಿಕಾರಿ ಮತ್ತು ಕಾರ್ಡಿಯೋಲಾಜಿಸ್ಟ್ ಆಗಿದ್ದ ಡಾ ಅಬ್ರಹಾಂ ಅವರನ್ನು ಕಾಣಲು ಹೋಗಿದ್ದೆ ..ರೂಮಿನ ಹೊರಗೆ ಅವರನ್ನು ಕಾಣಲು ಹಲವು ರೋಗಿಗಳ ಕ್ಯೂ ಇತ್ತು . ನನ್ನೊಡನೆ ಮಾತನಾಡುತ್ತಾ "ಅಲ್ಲಿ ಹೊರಗೆ ಧೋತಿ ಉಟ್ಟುಗೊಂಡು ನಿಂತಿದ್ದಾರಲ್ಲಾ ಅವರು ಕೇರಳದ ಮಾಜಿ ಮುಖ್ಯ ಮಂತ್ರಿ ಸಿ ಅಚ್ಚುತ ಮೆನನ್ ಅವರ ಮುಖ್ಯ ಕಾರ್ಯದರ್ಶಿ ಆಗಿದ್ದ ಐ ಎ ಎಸ ಅಧಿಕಾರಿ . ರಾಜನಂತೆ ಮಂತ್ರಿ ;ಎಷ್ಟು ಸರಳರು ನೋಡಿ "ಎಂದರು . ಅಚ್ಚುತ ಮೆನನ್ ಎರಡು ಭಾರಿ ಕೇರಳದ ಮುಖ್ಯ ಮಂತ್ರಿ ಆಗಿದ್ದವರು . ಆಮೇಲೆ ತಮ್ಮ ಊರು ತ್ರಿಚೂರಿನಲ್ಲಿ ಸಾಮಾನ್ಯರಂತೆ ಬದುಕಿದರು .ಒಂದು ದಿನ ಮಾಮೂಲಿನಂತೆ ವಾಕಿಂಗ್ ಮಾಡಿ ರೈಲ್ವೆ ಸ್ಟೇಷನ್ ಪುಸ್ತಕ ಅಂಗಡಿಯಿಂದ ಪತ್ರಿಕೆ ಕೊಂಡು ಹೊರ ಬರುವ ವೇಳೆ ಇವರ ಪರಿಚಯ ಇಲ್ಲದ ಟಿ ಟಿ ಇವರನ್ನು ನಿಲ್ಲಿಸಿ ಟಿಕೆಟ್ ಕೇಳಿ ದಬಾಯಿಸಿದರಂತೆ . ಸಾಮಾನ್ಯರಂತೆ ಸಭೆ ಸಮಾರಂಭ ಗಳಲ್ಲಿ ಭಾಗವಿಸುತ್ತಿದ್ದ ಇವರು ,ಪರವೂರಿಗೆ ಬಸ್ ,ಟ್ರೈನಿನ ಎರಡನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು . 

 C Achutha Menon - Alchetron, The Free Social Encyclopedia