ದೇವಕಾರ್ಯ
ಮೊನ್ನೆ ಒಂದು ದಂಪತಿ ನನ್ನಲ್ಲಿ ರೋಗ ತಪಾಸಣೆಗೆ ಬಂದವರು ಹೋಗುವಾಗ ಮುಖದಿಂದ ಮಾಸ್ಕ್ ತೆಗೆದು ನಮ್ಮನ್ನು ಗುರುತು ಸಿಕ್ಕಿತಾ ಸಾರ್ ಎಂದು ಕೇಳಿದರು . ನೂರಾರು ಜನರನ್ನು ನೋಡುವ ನಮಗೆ ನೆನೆಪು ಇರುವುದಿಲ್ಲ . ಕ್ಷಮೆ ಕೇಳಿ ಇಲ್ಲವಲ್ಲಾ ಎಂದೆ. "ಸಾರ್ ಎರಡು ವರ್ಷ ಹಿಂದೆ ನಾವು ಔಷಧಿಗೆ ಬಂದಿದ್ದೆವು .ಅದೇ ದಿನ ನಮ್ಮ ಮಗಳಿಗೆ ಯುನಿವರ್ಸಿಟಿ ಗೆ ಸೇರಲು ಕಡೆ ದಿನ.ಫೀಸು ಕಟ್ಟಲು ಹಣ ಕೊರತೆ ಇದೆ ಎಂದಾಗ ನೀವು ಎರಡು ಸಾವಿರ ರೂಪಾಯಿ ಕೊಟ್ಟು ವಾಪಸು ಕೊಡುವುದು ಬೇಡ 'ಎಂದು ಹೇಳಿದ್ದಿರಿ. ಈಗ ಅವಳು ಕಲಿತು ಒಳ್ಳೆಯ ಕೆಲಸದಲ್ಲಿ ಇದ್ದು ಕುಟುಂಬಕ್ಕೆ ಊರು ಗೋಲು ಆಗಿರುವಳು .ನಿಮ್ಮ ಕೈ ರಾಶಿ "ಎಂದರು . ನನಗೆ ನೆನಪಿಗೆ ಬಂತು .
ನನಗೆ ಒಂದು ವೀಕ್ನೆಸ್ ಇದೆ .ಈ ತರಹ ಕೇಳಿದಾಗ ಕಿಸೆಯಲ್ಲಿ ಇದ್ದುದನ್ನು ತೆಗೆದು ಕೊಡುತ್ತೇನೆ . ಅಮೇಲೆ ಅದರ ಬಗ್ಗೆ ಯೋಚಿಸುವುದಿಲ್ಲ .ಒಂದಿಬ್ಬರು ಇದನ್ನು ದುರುಪಯೋಗ ಮಾಡಿಕೊಂಡದ್ದೂ ಇದೆ . ನನ್ನ ಮಟ್ಟಿಗೆ ಇದೇ ದೊಡ್ಡ ದೇವಕಾರ್ಯ .
ಹೀಗೆ ಕೊಡಲು ನಮಗೂ ಸಂಪಾದನೆ ಬೇಕು . ಕೆಲವರು ವೈದ್ಯರ ಫೀಜ್ ಕೊಡಲು ಹಿಂದೆ ಮುಂದೆ ನೋಡುತ್ತಾರೆ .ಅದರಲ್ಲೂ ನನ್ನ ಬಳಿಗೆ ಬಂದ ಹಲವು ರೋಗಿಗಳನ್ನು ಪರೀಕ್ಷೆ ಮಾಡಿದ ಬಳಿಕ ನಿಮಗೆ ಯಾವ ಔಷಧಿಯೂ ಬೇಡ ಎಂದು ಹೇಳಿ ಕಳುಹಿಸುವ ಕಾರಣ ಮದ್ದು ಬರೆಯದವರಿಗೆ ಹಣ ಯಾಕೆ ಕೊಡ ಬೇಕು ಎಂಬ ಭಾವನೆ . ಹೆಚ್ಚಾಗಿ ಬಡವರು ಭಕ್ತಿಯಿಂದ ಫೀಸು ಕೊಡುತ್ತಾರೆ . 'ಬಾಲೆ ಡಾಕ್ತ್ರೆನ ಕಾಸು ಕೊರ್ಲಾ "'ಮೋನೆ ಡಾಕ್ಟ್ರು ಫೀಜ್ ಕೊಡ್ಕಂಡೆ"ಎಂದು ಹಿರಿಯರು ನೆನಪಿಸುವುದನ್ನು ಕಂಡಿದ್ದೇನೆ . ಇನ್ನು ಕೆಲವರು ಮರೆತು ಹೋದವರು ತಿಂಗಳುಗಳ ಬಳಿಕ ತಂದು ಕೊಟ್ಟದ್ದು ಇದೆ. ಉಳ್ಳವರು ಕೆಲವರು ಸ್ನೇಹಚಾರ ,ನೆಂಟಸ್ತಿಗೆ ಹೇಳಿ ಮಾಯವಾಗುವರು .ಮಂಗಳೂರಿನಲ್ಲಿ ಇದ್ದಾಗ ,ವಿದೇಶದಲ್ಲಿ ಕೆಲಸ ಮಾಡಿ ಒಳ್ಳೆಯ ಪೆನ್ಷನ್ ಇರುವ ಹಿರಿಯರು ಪ್ರತಿ ಸಲ ಶುಡ್ ಐ ಪೇ ಯು ಎಂದು ಅತೀ ಕಡಿಮೆ ಬೆಲೆಯ ನೋಟ್ ಕೊಡಲು ಮನಸಿಲ್ಲದೆ ಮುಂದೆ ಹಿಂದೆ ಚಾಚುತ್ತಿದ್ದರು. ಫೀಜ್ ಮನ್ನಾ ಮಾಡುವುದು ನಮ್ಮ ವಿವೇಚನೆಗೆ ಬಿಟ್ಟದ್ದು .ಕೊಡ ಬೇಕಾದವರು ಕೊಡಲೇ ಬೇಕು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ