ಇಂದು ದೀಪಾವಳಿ . ಭಾರತೀಯರು ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ . ಹಿಂದೆ ಅಂಗಡಿಯವರು ಹೊಸ ಲೆಕ್ಕ ಆರಂಭಿಸುವ ಆಮಂತ್ರಣ ಕಳುಹಿಸುತ್ತಿದ್ದರು (ಹಳೆಯ ಸಾಲ ತೀರಿಸುವ ಸೂಚನೆ ).
ಟಿ ವಿ ಯಲ್ಲಿ ನಮ್ಮವರೇ ಆದ ಶ್ರೀಮತಿ ಸುಚಿತ್ರ ಹೊಳ್ಳ ಸುಶ್ರಾವ್ಯವಾಗಿ ಭಾಗ್ಯದ ಲಕ್ಷ್ಮಿ ಬಾರಮ್ಮಾ ಎಂದು ಹಾಡುತ್ತಿದ್ದಾರೆ . ಅವರು ನನ್ನ ಮೆಚ್ಚಿನ ಗಾಯಕಿ . ಒಳ್ಳೆಯ ಶಾರೀರ ಮತ್ತು ಪ್ರಸ್ತುತ ಪಡಿಸುವಿಕೆ . ಮೇಲಾಗಿ ವಿನಯ ಭೂಷಣೆ .
ಭಾಗ್ಯದ ಲಕ್ಷ್ಮಿ ಹಾಡು ಕೇಳುವಾಗಲೆಲ್ಲ ವಿದ್ಯಾರ್ಥಿಯ ತಪ್ಪು ಕಂಡು ಹಿಡಿಯಲು ಕಾಯುತ್ತಿರುವ ಪರೀಕ್ಷಕ ಅಧ್ಯಾಪಕನಂತೆ ನಾನು ಸಾಹಿತ್ಯ ಗಮನ ಕೊಟ್ಟು ಕೇಳುವೆನು .ಮನಕಾಮನೆಯ ಎನ್ನುತ್ತಾರೋ ಮನೆಕೆ ಮನೆಯಾ ಎನ್ನುತ್ತಾರೋ ಎಂದು . ಆದರೆ ಅತ್ತಿತ್ತಗಲದೆ ಭಕ್ತರ ಮನೆಯಲಿ ಇರ ಬೇಕು ಎಂದು ಆದೇಶಿಸುವುದು ಸರಿಯಲ್ಲ ಎಂದು ನನ್ನ ಭಾವನೆ .ಲಕ್ಷ್ಮಿ ಕೈ ಬದಲಿಸಿದಾಗಲೇ ಅದಕ್ಕೆ ಬೆಲೆ .
ತುಂಬಾ ಸಿರಿವಂತರಿಗೆ ಅವರ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಬಿದ್ದಿದ್ದಾಳೆ ಎಂದು ಹೇಳುವುದುಂಟು . ಸ್ವಲ್ಪ ಅಸೂಯೆಯಲ್ಲಿ ಲಕ್ಷ್ಮಿಗೆ ಬೈಯ್ಯುವುದು ಇರ ಬಹುದು . ಆದರೆ ಕೈಕಾಲು ಮುರಿದು ಬಿದ್ದ ಲಕ್ಷ್ಮಿ ನೋನ್ ಪರ್ಫಾರ್ಮಿಂಗ್ ಅಸೆಟ್ ತರಹ . ಚಲಾವಣೆ ಆದರೆ ಮಾತ್ರ ಮೌಲ್ಯ ತಾನೇ ?
ಕಳೆದ ಕೆಲ ದಿನಗಳಿಂದ ಆಬಾಲ ವೃದ್ಧರಾಗಿ ಎಲ್ಲರೂ ಕಲ್ಪಿತ ಎದೆ ನೋವಿಗಾಗಿ ಈ ಸಿ ಜಿ ,ಕೊಲೆಸ್ಟರಾಲ್ ಮಾಡಿಸಲು ಧಾವಿಸುತ್ತಿದ್ದಾರೆ . ಅವರಿಗೆಲ್ಲ ಸಮಾಧಾನ ಹೇಳಿ ಹೇಳಿ ಸುಸ್ತಾಗಿ ನನಗೂ ಸ್ವಲ್ಪ ಎದೆ ಬಚ್ಚಿದ ಹಾಗೆ ಆಗುತ್ತಿದೆ . ಟಿ ವಿ ಯಲ್ಲಿ ವಾರ್ತಾ ಚಾನಲ್ ಸ್ವಲ್ಪ ಕಡಿಮೆ ನೋಡಿ ,ಸಾಧ್ಯವಾದಲ್ಲಿ ನಡೆಯಿರಿ ,ಹಿತ ಮಿತ ಆಹಾರ ಸೇವಿಸಿರಿ ..ಎಲ್ಲರಿಗೂ ದೀಪಾವಳಿ ಶುಭಾಶಯಗಳು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ