ಬೆಂಬಲಿಗರು

ಭಾನುವಾರ, ಫೆಬ್ರವರಿ 14, 2021

ರೇಬಿಸ್ ಕಾಯಿಲೆ ತಡೆಗಟ್ಟುವಿಕೆ

                       ರೇಬಿಸ್  ಕಾಯಿಲೆ ತಡೆಗಟ್ಟುವುದು 

ನಾನು   ಉದ್ದೇಶ ಪೂರ್ವಕ  ಹುಚ್ಚು ನಾಯಿ ಕಾಯಿಲೆ ಎಂದು ಬರೆದಿಲ್ಲ .ಏಕೆಂದರೆ  ಹುಚ್ಚು  ನಾಯಿ ಕಡಿತದಿಂದ ಬಹುತೇಕ ಬರುವ ರೋಗ ಆದರೂ ಬೆಕ್ಕು ,ರಾಸು ,ಕಾಡು ಪ್ರಾಣಿಗಳು ,ಬಾವಲಿಗಳನಂತಹ  ಇತರ ಸಸ್ತನಿಗಳೂ  ಇದನ್ನು ಹರಡ  ಬಹುದು ,

 ಈ  ಕಾಯಿಲೆ  ಶೇಕಡಾ ನೂರರಷ್ಟು  ಮಾರಣಾಂತಿಕ . ಆದುದರಿಂದ  ಬರದಂತೆ ತಡೆಗಟ್ಟುವುದೇ ಇರುವ   ದಾರಿ . 

ನಾಯಿ  ಕಚ್ಚಿದ ಒಡನೆ ಶುದ್ಧ ನೀರಿನಲ್ಲಿ ಗಾಯವನ್ನು ಸೋಪ್ ಹಾಕಿ ತೊಳೆಯ ಬೇಕು .ಅರಿಶಿಣ ,ಮೆಣಸಿನ ಹುಡಿ ಉಪ್ಪು ಇತ್ಯಾದಿ ಹಚ್ಚಬಾರದು .ವೈರಸ್ ನಿರೋಧಕ ಆಲ್ಕೋಹಾಲ್ ಅಥವಾ ಅಯೋಡೀನ್ ದ್ರಾವಣ ಹಚ್ಚ ಬಹುದು. ಆದಷ್ಟು  ಗಾಯಕ್ಕೆ ಹೊಲಿಗೆ ಹಾಕಬಾರದು .ಒಂದು ವೇಳೆ ಅನಿವಾರ್ಯ   ಅದರೆ  ಗಾಯದ ಸುತ್ತ ರೇಬೀಸ್ ಪ್ರತಿವಿಷ (ಇಮ್ಯೂನೊಗ್ಲೊಬ್ಯೂಲಿನ್ )ಕೊಟ್ಟು ಹೊಲಿಗೆ  ಹಾಕುವರು . 

 ಶಂಕಿತ ರೇಬೀಸ್ ಪ್ರಾಣಿಯ  ಸಂಪರ್ಕ ಮತ್ತು ಗಾಯವನ್ನು  ಮೂರು ತರಹ ವಿ೦ಗ ಡಿಸಿರುವರು

 ೧  ಶಂಕಿತ ಪ್ರಾಣಿಯ ಸ್ಪರ್ಶ ,ಯಾವುದೇ ಗಾಯಗಳಿಲ್ಲದ ಚರ್ಮವನ್ನು ಪ್ರಾಣಿ ನೆಕ್ಕಿದರೆ ಅಥವಾ ಪ್ರಾಣಿಯ ಸ್ರಾವ ಸ್ಪರ್ಶ .ಇಂತಹ ಸಂದರ್ಭ  ಆ ಜಾಗವನ್ನು ಚೆನ್ನಾಗಿ ತೊಳೆದರೆ ಸಾಕು .ರೋಗ ನಿರೋಧಕ ಲಸಿಕೆ ಬೇಡ . 

೨. ರಕ್ತಸ್ರಾವ ಇಲ್ಲದ ಮೇಲ್ಮೈ ಕೆರೆತ ಗಾಯ .ಇದಕ್ಕೆ ಗಾಯವನ್ನು ತೊಳೆದು ಪೂರ್ಣ ಪ್ರಮಾಣದ ರೇಬೀಸ್  ಲಸಿಕೆ    ಹಾಕುವುದು . 

೩.  ಒಂದು ಅಥವಾ ಹೆಚ್ಚು ಆಳವಾದ ಗಾಯ ಅಥವಾ ಮೊದಲೇ ಗಾಯ ಇದ್ದ ಚರ್ಮವನ್ನು ನೆಕ್ಕಿದರೆ . ಇಂತಹ ಸಂದರ್ಭ ಗಾಯದ ಉಪಚಾರದೊಂದಿಗೆ ,  ರೆಡಿ ಮೇಡ್ ರೇಬೀಸ್ ನಿರೋಧಕ (immunoglobulin ),ಜತೆಗೆ ಲಸಿಕೆ ಕೊಡಬೇಕು . 

 ರೇಬೀಸ್ ಲಸಿಕೆ ಹಾಕಿಸಿ ಕೊಳ್ಳುವುದರಲ್ಲಿ ಯಾವದೇ ಚೌಕಾಸಿಗೆ ಆಸ್ಪದ ಇಲ್ಲ .ಮತ್ತು  ಟಿ ಟಿ ಇಂಜೆಕ್ಷನ್ ಕೊಟ್ಟರೆ ಸಾಲದು .ಟಿ ಟಿ ಇರುವದು ಧನುರ್ವಾಯು ಕಾಯಿಲೆ ಬರದಂತೆ ,ರೇಬೀಸ್ ತಡೆಗಟ್ಟದು .ಬಹಳ ಮಂದಿ ನಮ್ಮಲ್ಲಿ  " ನಾಯಿ ಕಚ್ಚಿದೆ ,ಒಳ್ಳೆಯ ನಾಯಿ ,ನಮ್ಮನ್ನು ಕಂಡರೆ ಯಾವಾಗಲೂ ಬಾಲ ಅಲ್ಲಾಡಿಸುತ್ತದೆ . ಇಂಜೆಕ್ಷನ್ ಇಲ್ಲದೇ  ಸುಧಾರಿಸ ಬಹುದೋ ''ಎಂದು ನಮ್ಮ ಬಾಯಿಯಿಂದ ಬೇಡ ಎಂದು ಹೇಳಿಸಲು  ಪ್ರಯತ್ನಿಸುತ್ತಾರೆ .ಇದಕ್ಕೆ ಆಸ್ಪದ ಇಲ್ಲ .ನಾಯಿಗೆ ಆಂಟಿ ರೇಬೀಸ್ ಚುಚ್ಚು ಮದ್ದು ಕೊಟ್ಟಿದ್ದರೂ ನಾವು ತೆಗೆದು ಕೊಳ್ಳುವುದು ಲೇಸು . 

ಲಸಿಕೆಯನ್ನು  ೦ ,೩,೭,೧೪ ಮತ್ತು ೨೮ ನೇ ದಿನ  (ಮೊದಲ ಡೋಸ್  ಕಡಿತದ ಕೂಡಲೇ ಹಾಕಿಸುವುದು ,ಅದು ೦ ದಿನ ) .ಇಂಜೆಕ್ಷನ್ ಭುಜಕ್ಕೆ ಕೊಡುವರು .ಮೊದಲ ಇಂಜೆಕ್ಷನ್ ದಿನದಿಂದ ೧೪ ದಿನಗಳ ನಂತರ  ರೇಬೀಸ್ ಪ್ರತಿರೋಧಕ ಆಂಟಿಬಾಡಿ ನಮ್ಮ ಶರೀರದಲ್ಲಿ ಕಾರ್ಯಾರಂಭ ಮಾಡುವುದು . 

 ಕಚ್ಚಿದ ಪ್ರಾಣಿ  ನಾಯಿ ಅಥವಾ ಬೆಕ್ಕು ಆಗಿದ್ದರೆ ಹತ್ತು ದಿನ ಪೂರ್ಣ ನಿರೀಕ್ಷಣೆಯಲ್ಲಿ ಇಟ್ಟು  ಅವುಗಳ ಅರೋಗ್ಯ ಮತ್ತು ಚಲನವಲನ  ಸಂಪೂರ್ಣ ಮೊದಲಿನಂತೆ ಇದ್ದಾರೆ ೧೪ ನೇ ದಿನದ ಲಸಿಕೆ ಯನ್ನು ಕೊಡಬೇಕಿಲ್ಲ ,೨೮ ನೇ ದಿನ ಮತ್ತೊಂದು ಹಾಕಿಸಿದರೆ ಸಾಕು . ಆದರೆ ಇತರ ಪ್ರಾಣಿಗಳ   ಕಡಿತಕ್ಕೆ ಇದು ಅನ್ವಯ ಆಗುವುದಿಲ್ಲ . 

ಕಾಡು ಪ್ರಾಣಿಗಳ ಕಡಿತಕ್ಕೆ ೩ ನೇ ವರ್ಗದ ಕಡಿತ ದ  ಚಿಕಿತ್ಸೆ ಕೊಡಬೇಕು .ಇಲಿ ಕಡಿತಕ್ಕೆ ರೇಬೀಸ್ ವ್ಯಾಕ್ಸೀನ್ ಬೇಡ .ಭಾರತದಲ್ಲಿ ಬಾವಲಿ ಸಂಪರ್ಕಕ್ಕೂ ಇದರ ಅಗತ್ಯ ಇಲ್ಲ . ಶಂಕಿತ ರೇಬೀಸ್ ಇದ್ದ ದನದ ಹಾಲು ಕಾಯಿಸಿ ಕುಡಿಯಬಹುದು .(ಪ್ಯಾಸ್ಚುರಿ ಕರಿಸಿದ ಹಾಲೂ ).ಮಾಂಸ ಬೇಯಿಸಿ ತಿಂದರೆ ಲಸಿಕೆ ಬೇಡ 

ಒಂದು ವೇಳೆ ಹಲವು ವರ್ಷಗಳ ಹಿಂದೆ ರೇಬೀಸ್ ವ್ಯಾಕ್ಸೀನ್ ತೆಗೆದು ಕೊಂಡಿದ್ದರೆ ಪುನಃ ಕಡಿತಕ್ಕೆ ಒಳಗಾದರೆ  ೦ ಮತ್ತು ೩ ನೇ ದಿನದ ಎರಡು ಡೋಸ್  ಸಾಕು . ೩ನೇ ವರ್ಗದ  ಗಾಯಕ್ಕೂ ರೇಬೀಸ್ ನಿರೋಧಕ  ಇಮ್ಯೂನೊಗ್ಲೊಬ್ಯೂಲಿನ್ ಕೊಡುವ ಅವಶ್ಯಕತೆ ಇಲ್ಲ . 

ಪ್ರಾಣಿಗಳ ಜತೆ ಕೆಲಸ ಮಾಡುವವರು ,ವೈಲ್ಡ್ ಲೈಫ್ ಲೈಫ್ ವಾರ್ಡನ್ ಈ ಕಾಯಿಲೆ ಬರದಂತೆ  ವ್ಯಾಕ್ಸೀನ್ ತೆಗೆದುಕೊಳ್ಳುವುದು ಉತ್ತಮ . ಇವರಿಗೆ  ೦ , ೭ ಮತ್ತು ೨೧ ಅಥವಾ ೨೮ ರಂದು ಹೀಗೆ ಮೂರು  ಡೋಸ್  ಸಾಕು . 

ಮೇಲೆ ತಿಳಿಸಿದ ಡೋಸ್ ಎಲ್ಲಾ ಸಾಮಾನ್ಯವಾಗಿ ಮಾಂಸಖಂಡಗಳಿಗೆ  ಚುಚ್ಚುವ ಇಂಜೆಕ್ಷನ್ ರೀತಿಗೆ .ಇದೇ ಲಸಿಕೆ ಚರ್ಮಕ್ಕೆ ಚುಚ್ಚಿದರೆ  ಕಡಿಮೆ ಪ್ರಮಾಣದ ಲಸಿಕೆ ಸಾಕು ಮತ್ತು  ಕಡಿತದ ನಂತರದ  14 ನೇ ದಿನದ ಡೋಸ್ ಬೇಕಾಗಿಲ್ಲ .ಆದರೆ ಇದನ್ನು ಕೊಡುವವರಿಗೆ ಸೂಕ್ತ ತರಬೇತಿ ಬೇಕು .

 

ಶನಿವಾರ, ಫೆಬ್ರವರಿ 13, 2021

                                          ಸ್ಕ್ರಬ್  ಟೈಫಸ್ ಕಾಯಿಲೆ 

 ನೀವು ಟೈಪೋಯ್ಡ್ ಅಥವಾ ವಿಷಮ ಶೀತ ಜ್ವರದ ಬಗ್ಗೆ ಕೇಳಿರುತ್ತೀರಿ .ಈ ಕಾಯಿಲೆ ಇತ್ತೀಚಿಗೆ  ಅಪರೂಪಕ್ಕೆ ಕಾಣಿಸಿ ಕೊಳ್ಳುತ್ತದೆ .ಬಹಳ ಮಂದಿಗೆ ಶುದ್ಧ ನೀರು ಸಿಗುವುದರಿಂದ  ಅದರ ಪ್ರಸರಣ ಕಡಿಮೆ ಆಗಿದೆ . ಆದರೆ ಡೆಂಗು ಇಲಿ ಜ್ವರ ಮತ್ತು ಸ್ಕ್ರಬ್  ಟೈಫಸ್ ಅಲ್ಲಲ್ಲಿ ಎಗ್ಗಿಲ್ಲದೆ ತಲೆಯೆತ್ತಿ ಹಾವಳಿ ನಡೆಸುತ್ತಿವೆ . 

ಏನಿದು  ಸ್ಕ್ರಬ್ ಟೈಫಸ್ ?

ಇದು  ಓರಿಯೆಂಟ  ಸುಸುಗಾಮುಷಿ ಎಂಬ ಬ್ಯಾಕ್ಟೀರಿಯಾ ದಿಂದ ಬರುವ ರೋಗ . ಇದನ್ನು ಹರಡುವದು ಚಿಗಟಗಳು . ರೋಗಾಣು ಶೇಖರಣಾ ಪ್ರಾಣಿಗಳು ಇಲಿ ಹೆಗ್ಗಣ ಇತ್ಯಾದಿ . ಸ್ಕ್ರಬ್ ಎಂದರೆ ಪೊದೆ ಪ್ರದೇಶ .ಕಾಡಿಗೆ ಸೌದೆಗೆ ಅಥವಾ ಚಾರಣಕ್ಕೆ ಹೋದವರಿಗೆ  ಈ ಚಿಗಟಗಳು ಹೆಚ್ಚು ನೋವಿಲ್ಲದೇ ಕಚ್ಚುವವು .ಅದರ ಮೂಲಕ ಮಾನವ ಶರೀರಕ್ಕೆ ಸೇರಿದ ರೋಗಾಣು ಟೈಫಸ್ ಕಾಯಿಲೆ ಉಂಟು ಮಾಡುವುದು 

                       

ಜ್ವರ  ತಲೆನೋವು,ಮೈಕೈ ನೋವು ,ಚಿಗಟ ಕಚ್ಚಿದ ಜಾಗದಲ್ಲಿ ಸತ್ತ ಜೀವ ಕೋಶಗಳಿಂದ ಆವೃತ್ತವಾದ ಹುಣ್ಣು ,(Eschar ),ಮತ್ತು ಅದರ ಹತ್ತಿರದ ದುಗ್ಧ ಗ್ರಂಥಿಗಳ  ಉರಿಯೂತ (ಗಣಲೆ  ಅಥವಾ ಕರಳೆ ),ಮೈಯಲ್ಲಿ ಕೆಂಪು ಬೀಳುವುದು ಇತ್ಯಾದಿ ಲಕ್ಷಣಗಳು ಇರುತ್ತವೆ . ಇದು ಕೂಡ ಜಾಂಡಿಸ್ ಮತ್ತು ರಕ್ತದಲ್ಲಿ  ಪ್ಲೇಟಿಲೆಟ್ ಕೊರತೆ  ಉಂಟು ಮಾಡಬಹುದು .

                                   



ಈ  ಕಾಯಿಲೆ  ಭಾರತ ದೇಶ ದಲ್ಲಿಯೂ ವ್ಯಾಪಕ ವಾಗಿದ್ದು ,ನಮ್ಮ ರಾಜ್ಯದ ಮಲೆನಾಡು ಪ್ರದೇಶಗಲ್ಲಿ ಹೆಚ್ಚಾಗಿ ಉಪಟಳ ಕೊಡುತ್ತಿರುತ್ತದೆ . 

ಇದರ ರೋಗ ಲಕ್ಷಣಗಳು ಡೆಂಗಿ ಮತ್ತು ಇಲಿ ಜ್ವರದ  ಚಿನ್ಹೆ ಗಳಿಗೂ  ಸಾಮ್ಯತೆ ಇರುವುದರಿಂದ  ಇವುಗಳಿಂದ ಇದನ್ನು ಬೇರ್ಪಡಿಸಿ ಚಿಕಿತ್ಸೆ ಮಾಡ ಬೇಕಾಗುವುದು . 

ಈ  ರೋಗವನ್ನು  ರಕ್ತ ಪರೀಕ್ಷೆ ಮತ್ತು ರೋಗ ಲಕ್ಷಣಗಳಿಂದ  ಪತ್ತೆ ಹಚ್ಚುವರು .ಮತ್ತು  ಕಡಿಮೆ ವೆಚ್ಚದ  ಆಂಟಿಬಯೋಟಿಕ್ ಔಷಧಿ ಗಳಾದ  ಡಾಕ್ಸಿ ಸೈಕ್ಲಿನ್ ,  ಅಜಿತ್ರೊ ಮೈಸಿನ್ ಮತ್ತು ಕ್ಲೋರಿನೆಂಪೆನಿಕೋಲ್ ಗಳು ಈ ರೋಗಕ್ಕೆ  ಪರಿಣಾಮ ಕಾರಿ . 

ಈ  ರೋಗದ ಇರುವಿಕೆಯೇ ಜನರಿಗೆ ಇನ್ನೂ ತಿಳಿಯದಿರುವುದು  ಖೇದ ಕರ

 

ಬುಧವಾರ, ಫೆಬ್ರವರಿ 10, 2021

ನಡೆದಾಡೋ ಅಶ್ವಿನಿ ದೇವತೆಗಳು

    ನಡೆದಾಡೋ  ಅಶ್ವಿನಿ ದೇವತೆಗಳು 

ಆಸ್ಪತ್ರೆಯಲ್ಲಿ  ಕೆಲಸ ಮಾಡುವ  ದಾದಿಯರು ಮಾಡುವ ಕೆಲಸ ಅತ್ಯಂತ ಪವಿತ್ರವಾದುದುದು .ಹಗಲು ಇರುಳೆನ್ನದೆ ರೋಗ ಪೀಡಿತರ ಮಧ್ಯೆ ಅವರ ಸೇವೆ ಮಾಡುವ ಕೆಲಸ ಬಹಳ ತಾಳ್ಮೆ  ಮತ್ತು  ಅನುಕಂಪ ಬೇಡುವ ಉದ್ಯೋಗ . ಒಂದು ಕಡೆ ಬೇರೆ ಬೇರೆ ಮನೋಧರ್ಮ ಇರುವ ವೈದ್ಯರು ಇನ್ನೊಂದು ಕಡೆ ಪೂರ್ಣ ಗಮನ ನಿರೀಕ್ಷಿಸುವ ರೋಗಿಗಳು ಮತ್ತು ಆಗಾಗ್ಗೆ ಕಿರಿ ಕಿರಿ ಎನಿಸುವಷ್ಟು  ತಲೆ ಹಾಕುವ ರೋಗಿಯಸಂಬಂಧಿಗಳು .,ಇವರೆನ್ನೆಲ್ಲಾ ನಿಭಾಯಿಸಿ ಕೊಂಡು ಹೋಗುವ ಕೆಲಸ ಸುಲಭ ಸಾಧ್ಯ ವಲ್ಲ . 

ಆಸ್ಪತ್ರೆಯಲ್ಲಿ  ವೈದ್ಯರ ಟಿಪ್ಪಣಿ ಮತ್ತು ಔಷಧೋಪಚಾರ ನಿರ್ದೇಶಗಳು ಮತ್ತು  ನರ್ಸ್ ಗಳ  ನೋಟ್ಸ್  ಆಂಗ್ಲ ಭಾಷೆಯಲ್ಲಿ ಇರುತ್ತವೆ .. ತಲೆ ತಲಾಂತರಗಳಿಂದ ತಮ್ಮದೇ ಆದ  ಭಾಷೆಯನ್ನು ಅಭಿವೃದ್ಧಿ ಪಡಿಸಿಕೊಂಡಂತೆ  ಕಾಣುತ್ತದೆ . 

ಉದಾಹರಣೆಗೆ  ಮುಂಜಾವಿನ  ರೌಂಡ್ಸ್ ವೇಳೆ  ಮಾತುಕತೆ ಈ ರೀತಿ ಇರುವುದು . 

"ಸಿಸ್ಟೆರ್ ಈ ರೋಗಿ ಗೆ  ಏನು ತೊಂದರೆ ?"

"ಫೋರ್ ಡೇಸ್ ನಿಂದ  ಫೀವರ್ ,ವೊಮಿಟಿಂಗ್ ಅಂತ ಬಂದಿದ್ದು ಸರ್ "

"ಸರಿ ಅವರ ಬಂಧುಗಳು ಯಾರಾದರೂ ಇದ್ದಾರೆಯೇ ?"

"ಪಾರ್ಟಿ (ಬಂಧು ಬಳಗ ,ಅಟೆಂಡೆಂಟ್ ಎಲ್ಲಾ  ಪಾರ್ಟಿ ಎಂದು ಕರೆಯಿಸಿ ಕೊಳ್ಳುವರು ) ಇದ್ದರು ಸಾರ್ ಈಗ ಕ್ಯಾಂಟೀನ್ ಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದಾರೆ "

"ಸರಿ  ಏನೇನು ಪರಿಶೋಧನೆ ಗೆ  ಕಳುಹಿಸಿರುವಿರಿ ?"

"ಸರ್  ಬ್ಲಡ್  ಸಿ ಬಿ ಸಿ .ಡೆಂಗೂ .ಎಂ ಪಿ .(ಮಲೇರಿಯಲ್ ಪ್ಯಾರಾಸೈಟ್ ),ಲೆಪ್ಟಾ  ,ಶುಗರ್  ಸೆಂಡ್ ಆಗಿದೆ ,ಯೂರಿನ್  ರೂಟಿನ್ ಹೋಗಿದೆ "(ಹೋಗಿದೆ ಎನ್ನುವರು ,ಕಳುಹಿದ್ದೇವೆ ಎನ್ನುವುದಿಲ್ಲ )

"ಸರಿ  ಇದುವರೆಗೆ  ಏನೇನು ಕೊಟ್ಟಿರುವಿರಿ ?"

"ಸರ್  ಪಿ ಸಿ ಟಿ (ಪ್ಯಾರಾ ಸಿಟಮಾಲ್ ) ಇನ್ಫ್ಯೂಶನ್ ಹೋಗಿದೆ , ೫ ಡಿ ಹೋಗುತ್ತಿದೆ .(ಗಮನಿಸಿ  ನಾವು ಕೊಡುತ್ತಿದ್ದೇವೆ ಎಂದು ಹೇಳರು .ಹೋಗುತ್ತಿದೆ ಎನ್ನುವರು .ನಾನು ತಮಾಷೆಗೆ  ಅದು ಹೇಗೆ ಹೋಗುವುದು ನಡೆದುಕೊಂಡೋ ಎನ್ನುವೆನು )

"ಸರಿ  ಜ್ವರ ಇದೆಯೇ ?"

"ಸರ್  ,ಟೆಂಪರೇಚರ್  ಈಗ ನಾರ್ಮಲ್ ಇದೆ "

"ಬಿ ಪಿ ?"

"ಸರ್  ೧೦೦/೭೦ ಸಿಗುತ್ತಿದೆ "

"ಅದೇನು ಸಿಗುತ್ತಿದೆ ,೧೧೦/೭೦ ಇದೆ ಎನ್ನಿರಿ "

"ಓ ಕೆ ಸರ್ "

"ಸಾರ್ ಇನ್ನೂರ ಒಂದರಲ್ಲಿ  ಒಂದು ರೆಫರೆನ್ಸ್ ಇದೆ "

"ಏನು ರೆಫರೆನ್ಸ್ ?"

ಡಿ ಎಚ್ ಎಸ್ ಪೇಷೆಂಟ್  ನಿನ್ನೆಯಿಂದ ಕಾಫ್ , ಬ್ರೆಥ್ ಲೆಸ್ ನೆಸ್ಸ್ ಸಾರ್ "ಒ2 ಮತ್ತು ನೆಬ್ ಹೋಗುತ್ತಿದೆ "

ನಮ್ಮಲ್ಲಿ ತುಂಬಾ ಅಬ್ರೆ ವೇಷನ್  ಅಥವಾ ಶಾರ್ಟ್ ಫೋರ್ಮ್ ಉಪಯೋಗ ಇದ್ದು  ನನಗೇ ಕೆಲವೊಮ್ಮೆ ಗಲಿಬಿಲಿ ಆಗುವುದು .

ಎಲ್ ಟಿ ಎಂದರೆ  ಹೆರಿಗೆ ಮನೆ (ಲೇಬರ್ ಥಿಯೇಟರ್) ,ಒ ಟಿ ಶಸ್ತ್ರ ಚಿಕಿತ್ಸಾ ಗೃಹ (ಆಪರೇಷನ್ ಥಿಯೇಟರ್),ಥಿಯೇಟರ್ ಅಂದರೂ ಮನೋರಂಜನೆ ಇಲ್ಲ .ಲ್ಯಾಪ್ ಕೋಲಿ (laparoscopic cholecystectomy)   ಎಂದರೆ ಉದರ ದರ್ಶಕ ಮೂಲಕ ಪಿತ್ತ ಕೋಶ ತೆಗೆಯುವಿಕೆ .ಎಂ ಎಲ್ ಸಿ ಎಂದರೆ ಪೋಲೀಸು ಕೇಸ್ ಇರುವ ಉದಾ  ರಸ್ತೆ ಅಪಘಾತ  ,ಹೊಡೆದಾಟ ಇತ್ಯಾದಿ ಗಳಿಂದ ಆದ  ರೋಗಗಳು.ನೈಟ್ ಸೂಪರ್ ಅಂದರೆ ನೈಟ್ ಸೂಪರ್ವೈಸರ್ ಇತ್ಯಾದಿ .

ಇತ್ತೀಚೆಗೆ  ಯುವ ರೋಗಿಗಳೂ ಇದೇ ತರಹ ಷಾರ್ಟ್ ಫೋರ್ಮ್ ಉಪಯೋಸುವುದು ಸಾಮಾನ್ಯ .

ನೀವು ಏನು ಮಾಡುತ್ತಿರುವಿರಿ ?ಎಂದು ಕೇಳಿದರೆ  ವಿ ಸಿ ಯಲ್ಲಿ ಈಸಿ ಎನ್ನುವರು .ಅಂದರೆ  ವಿವೇಕಾನಂದ  ಇಂಜಿನೀರಿಂಗ್  ಕಾಲೇಜ್ ನಲ್ಲಿ  ಇಲೆಕ್ತ್ರೋನಿಕ್ ಮತ್ತು  ಕಮ್ಯೂನಿಕೇಷನ್ ಎಂದು ಅರ್ಥ .ಇನ್ನೂ ಕೆಲವರು ಸಿ ಎಸ್ ಎನ್ನುವರು ,ಚೀಫ್ ಸೆಕ್ರೆಟರೀ ಅಲ್ಲ ,ಕಂಪ್ಯೂಟರ್ ಸೈನ್ಸ್ .

 ಮುಂಜಾನೆ ರೌಂಡ್ಸ್ ಮುಗಿದ ಮೇಲೆ ನರ್ಸಿಂಗ್ ನೋಟ್ಸ್ ಬರೆದು ವೈದ್ಯರ ಆದೇಶ ಪಾಲನೆಗೆ ಹೊರಡುವಷ್ಟರಲ್ಲಿ ಒಂದು ರೂಮಿನಿಂದ ಬೆಲ್ ಆಗುವುದು ;ಡ್ರಿಪ್ ಮುಗಿದಿದೆ ಅಂತ .ಅದನ್ನು ಸರಿಪಡಿಸುವಷ್ಟರಲ್ಲಿ ಇನ್ನೊಬ್ಬರು ಮಗಳಿಗೆ ಹೆರಿಗೆ ನೋವು ಬಂದಿದೆ ,ಮತ್ತೊಬ್ಬರು ಮಗು ವಾಂತಿ ಮಾಡುತ್ತಿದೆ ಇತ್ಯಾದಿ ಸಮಸ್ಯೆಗೆ ಓಡಿ ಬರುವರು .ನಡುವೆ ಒ ಟಿ ನರ್ಸ್ ಫೋನ್ ಮಾಡಿ ಸರ್ಜರಿಗೆ ರೋಗಿಯನ್ನು ಇನ್ನೂ ಕಳುಹಿಸಿಲ್ಲಾ ಎನ್ನುವರು

ಅದೇನೇ ಇರಲಿ  ರೋಗಿಗಳಿಗೂ  ವೈದ್ಯರಿಗಿಂತ ಹೆಚ್ಚಾಗಿ ತಮ್ಮನ್ನು  ಶುಶ್ರೂಷೆ ಮಾಡಿದ  ದಾದಿಯರ ಮೇಲೆ  ಹೆಚ್ಚು  ಕೃತಜ್ನತಾ ಭಾವ ಇರುವುದು ನ್ಯಾಯ ಮತ್ತು ಸಾಮಾನ್ಯ .ಒಂದು ಸಂಸ್ಥೆಯಲ್ಲಿ  ದುಡಿದ ವೈದ್ಯರನ್ನು  ಆಡಳಿತ ಮಂಡಳಿ ಅಥವಾ  ಸಹ ವೈದ್ಯರಿಗಿಂತ ಈ ಸಹೋದರಿಯರೇ  ಜ್ನಾಪಕದಲ್ಲಿ ಇಟ್ಟು ಕೊಳ್ಳುವರು .

  ರೋಗಿಗಳು ಮತ್ತು ಸಂಭಂದಿಕರು ಆದಷ್ಟು ತಮಗೆ ಆರೈಕೆ ಮಾಡುವ  ನರ್ಸ್ ಸಿಬ್ಬಂದಿಯವರ  ಜತೆ ಜಗಳ ಮಾಡ ಬಾರದು .ಮನಸು ಮುರಿದ ಮೇಲೆ ಒತ್ತಡ ರಹಿತವಾಗಿ ಪೂರ್ವಗ್ರಹ ಇಲ್ಲದೆ ನಿರ್ಭಿತಿಯಿಂದ  ಕೆಲಸ ಮಾಡುವುದು ಕಷ್ಟ .ಅಲ್ಲದೆ  "ಅಲ್ಲಿ  ಸಿಸ್ಟೆರ್ ಗೆ ನರವೇ ಸಿಗುವುದಿಲ್ಲ ,ಚುಚ್ಚಿ ಚುಚ್ಚಿ  ಸಾಯಿಸುತ್ತಾರೆ " ಇತ್ಯಾದಿ ಲಘುವಾಗಿ  ಮಾತನಾಡ  ಬಾರದು  .ಅವರೂ  ನಿಮ್ಮ ಮಕ್ಕಳೇ ಅಥವಾ ಸಹೋದರಿಯರೇ ಎಂದು ಭಾವಿಸ ಬೇಕು .ಯಾಕೆಂದರೆ ಹತ್ತಾರು ರೋಗಿಗಳ ವಿಭಿನ್ನ ತೊಂದರೆಗಳ ಮೇಲೆ ನಿಗಾ ಇಡುವುದು   ಒತ್ತಡದ  ಕಾರ್ಯ .ಅವರ ಕೆಲಸದಲ್ಲಿ ಗಂಭೀರ ಲೋಪ ಕಂಡರೆ  ವೈದ್ಯರಲ್ಲಿ ಅಥವಾ ಮೇಲ್ವಿಚಾರಕರ ಬಳಿ ನಿವೇದಿಸಕೊಳ್ಳ ಬೇಕು ,


 

 

 

 

ಸೋಮವಾರ, ಫೆಬ್ರವರಿ 1, 2021

ತಪ್ಪಿದ ಗುರಿ ರುಮ್ಯಾಟಿಕ್ ಜ್ವರ

   ತಪ್ಪಿದ ಗುರಿ  ರುಮ್ಯಾಟಿಕ್ ಜ್ವರ 

ಯುದ್ಧ ಕಾಲದಲ್ಲಿ ನಮ್ಮದೇ ಹೆಲಿಕ್ಯಾಪ್ಟರ್ ನ್ನು ವಿರೋಧಿಗಳು ಎಂದು ತಪ್ಪು ತಿಳಿದು ಉರುಳಿಸಿದ ಘಟನೆಗಳನ್ನು ಓದಿ ತಿಳಿದಿರ ಬಹುದು . ಹಾಗೆಯೇ ನಮ್ಮ ದೇಹದಲ್ಲಿ ಕೆಲವೊಮ್ಮೆ ಆಗುವುದು ರುಮ್ಯಾಟಿಕ್ ಜ್ವರ ಒಂದು ಉದಾಹರಣೆ . 

ಗಂಟಲಲ್ಲಿ  ಸ್ಟ್ರೆಪ್ಟೋಕೋಕ್ಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು ಉಂಟುಮಾಡಿದಾಗ ನಮ್ಮ ಬಿಳಿ ರಕ್ತ ಕಣಗಳು ಅದರ ವಿರುದ್ಧ ಪ್ರತಿ ವಿಷ (ಆಂಟಿಬಾಡಿ , ಕೆಲ ರಾಸಾಯನಿಕ ಮತ್ತು ವಿಶೇಷ ತರಬೇತಿ ಗೊಂಡ ಕಣಗಳು )ಉಂಟು ಮಾಡುವವು . ಇವು  ಗುರಿ ತಪ್ಪಿ ನಮ್ಮ ದೇಹದ ಹೃದಯ ,ಅವಯವ ಸಂಧಿ ಮತ್ತು ಮೆದುಳಿನ ಮೇಲೆ ಧಾಳಿ ಮಾಡಿ ರುಮ್ಯಾಟಿಕ್  ಜ್ವರ ಉಂಟು ಮಾಡುವುವು ತೀವ್ರ ತರ  ಗಂಟು ಬಾವು ಮತ್ತು ನೋವು;ಒಂದು ಗಂಟಿನ ಭಾದೆ  ಶಮನ ವಾದೊಡನೆ  ಇನ್ನೊಂದು ಗಂಟಿಗೆ ಬರುವುದು . .ಚರ್ಮದಲ್ಲಿ ಕೆಂಪು ಮತ್ತು ಸಣ್ಣ ಗಂಟುಗಳು ಬೀಳಬಹುದು ..ಕೈ ಕಾಲುಗಳಲ್ಲಿ  ಕೆಲವು ಅನಿಯಂತ್ರಿತ ಚಲನೆಗಳು (ಇದನ್ನು  ಕೊರಿಯಾ ಎನ್ನುವರು )ಉಂಟಾಗಬಹುದು .ಈ   ಕಾಯಿಲೆ ಗಂಟುಗಳನ್ನು ನೆಕ್ಕಿ ಹೃದಯವನ್ನು ಕಚ್ಚುವುದು ಎನ್ನುವರು .ಹೃದಯದ ಕವಾಟಗಳು ,ಮಾಂಸಖಂಡ ,ಹೊರ ಪೊರೆ ಗೆ ರೋಗ ಬರ ಬಹುದು . 

ಜ್ವರ ,ಗಂಟು ನೋವು ಇತ್ಯಾದಿ    ಸಾಮಾನ್ಯ ಚಿಕಿತ್ಸೆಯಿಂದ ಶಮನ ಆದರೂ ಹೃದಯ ದ  ವ್ಯಾಧಿ  ಸದ್ದಿಲ್ಲದೇ ಮುಂದುವರಿದು ಮುಂದೆ ಕವಾಟಗಳ ಕಾರ್ಯ ಕ್ಷಮತೆಯಲ್ಲಿ ಏರು ಪೇರು  ಮಾಡಿ ದೊಡ್ಡ ಅರೋಗ್ಯ ಸಮಸ್ಯೆ ಉಂಟು ಮಾಡ ಬಹುದು .ಇದನ್ನು ತಡೆಗಟ್ಟಲು ಒಂದು ಬಾರಿ  ರುಮ್ಯಾಟಿಕ್ ಜ್ವರ ಬಂದವರಿಗೆ ವರ್ಷಗಳ ಪರ್ಯಂತ ಮಾಸ ಮಾಸ ಪೆನಿಸಿಲಿನ್ ಇಂಜೆಕ್ಷನ್ ಕೊಡುವರು . ಮತ್ತು  ಸ್ಟ್ರೆಪ್ತೋ ಕೊಕ್ಕಸ್  ಗಂಟಲು ನೋವಿಗೆ ಹತ್ತು ದಿನಗಳ ವರೆಗಿನ  ಆಂಟಿ ಬಯೋಟಿಕ್ ಸಲಹೆ ಮಾಡುವರು . 

ಇದೇ  ತರಹದ    ಗುರಿ ತಪ್ಪಿದ ದಾಳಿ ಮೂತ್ರ ಪಿಂಡಗಳ ಮೇಲೂ ನಡೆಯುವುದು ಉಂಟು .ಇಲ್ಲಿ ಇದೇ ಬ್ಯಾಕ್ಟಿರಿಯಾ ಚರ್ಮದ ಸೋಂಕು ಉಂಟುಮಾಡಿದಾಗ ಉಂಟಾದ ರೋಗ ನಿರೋಧಕಗಳು ತಪ್ಪಿ ಮೂತ್ರ ಪಿಂಡಗಳ ಮೇಲೆ ಧಾಳಿ ಮಾಡುವುವು .ಇದರಿಂದ ಮುಖದಲ್ಲಿ ನೀರು ಬರುವುದು ,ರಕ್ತದ ಒತ್ತಡ ಏರುವುದು ಮತ್ತು  ದಮ್ಮು ಕಟ್ಟಲು ಆರಂಭ ವಾಗುವುದು .ಇದನ್ನು  ಸ್ಟ್ರೆಪ್ತೋ ಕೊಕ್ಕೋತ್ತರ  ಮೂತ್ರ ಪಿಂಡ ಉರಿಯೂತ ಎನ್ನುವರು


 

ಭಾನುವಾರ, ಜನವರಿ 17, 2021

ಜೋಕೆ !ನಾನು ಬಳ್ಳಿಯ ಮಿಂಚು

.

   ಜೋಕೆ! ನಾನು ಬಳ್ಳಿಯ ಮಿಂಚು

 Uganda lightning strike kills 10 children playing football in Arua - BBC  News

ಇತ್ತೀಚಿಗೆ ಸಿಡಿಲು ಬಡಿದು ಆಗುವ ಅನಾಹುತಗಳು ಹೆಚ್ಚಿವೆ .ಏರುತ್ತಿರುವ ಭೂಮಿಯ ತಾಪಮಾನ ಇದಕ್ಕೆ ಕಾರಣ ಎಂಬ ವಾದ ಇದೆ. ಸಿಡಿಲಿನ ಬಗ್ಗೆ ಜನರಲ್ಲಿ ಕೆಲವು ಕಲ್ಪನೆಗಳು ಇವೆ . 

ನಮ್ಮಲ್ಲಿ ಮಿಂಚು ಸಿಡಿಲು ಬಂದಾಗ ಕಬ್ಬಿಣದ ಕತ್ತಿ (ಮಚ್ಚು ) ಮನೆಯಿಂದ ಹೊರಗೆ ಎಸೆಯುವರು .ಅದು  ಮಿಂಚನ್ನು ಆಕರ್ಷಿಸಿ ಮನೆಗೆ ಬಡಿಯದಂತೆ ಮಾಡುವುದು ಎಂಬ ನಂಬಿಕೆ .ಒಂದು ವೇಳೆ  ಆ ಆಯುಧಕ್ಕೆ ಮಿಂಚು ಬಡಿದರೆ ಅದು ಚಿನ್ನವಾಗುವುದು ಎಂದೂ ಹೇಳುತ್ತಿದ್ದರು . ಸಂಕಷ್ಟದ ಸಮಯವೂ ಒಂದು ಸದಾಶಯ .ಆದರೆ ಇವು ಮೂಢನಂಬಿಕಗಳು . ಸಿಡಿಲು ಬಡಿಯುವುದನ್ನು ಯಾವ ರೀತಿಯೂ ತಪ್ಪಿಸಲು ಆಗದು . 

ಇನ್ನು ಗುಡುಗು ಮಿಂಚು ಇರುವಾಗ ದೊಡ್ಡ ಮರದ ಅಡಿಯಲ್ಲಿ ನಿಂತರೆ ಅಪಾಯ ಜಾಸ್ತಿ .ಕೂಡಲೇ  ಯಾವುದಾದರೂ ಕಟ್ಟಡದ ಒಳಗೆ ಆಶ್ರಯ ಪಡೆಯುವುದು ಉತ್ತಮ .ಮನೆಯ ಒಳಗೆ ಕೂಡ ತಂತಿ ,ಪೈಪ್ ,ಸ್ವಿಚ್  ಮತ್ತು ಫೋನ್ ಇತ್ಯಾದಿಗಳಿಂದ ದೂರ ಇರ ಬೇಕು ..ಸ್ನಾನ ಗೃಹದ ಶವರ್ ನಿಂದಲೂ .ಮನೆಗೆ ಸಿಡಿಲು ಬಡಿದಾಗ ಅದು ಮೇಲೆ ಹೇಳಿದ ಮಾರ್ಗಗಳ ಮೂಲಕ ಪ್ರವಹಿಸುವ ಸಾಧ್ಯತೆ ಹೆಚ್ಚು .ಮೊಬೈಲ್ ಫೋನ್ ಸಿಡಿಲನ್ನು ಆಕರ್ಷಿಸದು ,ಲ್ಯಾಂಡ್ ಲೈನ್ ನಿಂದ ದೂರ ಇರ ಬೇಕು .ಟಿ ವಿ ಕೇಬಲ್ ಕೂಡಾ  ಅಪಾಯ . 

ಕಾರಿನ  ಒಳಗೆ ಕುಳಿತಾಗ ಅಪಾಯ ಕಡಿಮೆ .ಯಾಕೆಂದರೆ ಲೋಹದ ಬಾಡಿ ಮಿಂಚನ್ನು ತನ್ನ ಮೂಲಕ ನೆಲಕ್ಕೆ ಒಯ್ಯುವುದು .ಆದರೆ ಲೋಹದ ಬಾಗಿಲುಗಳಿಂದ ದೂರ ಇರ ಬೇಕು 

ಮನೆ ಕಟ್ಟಡಗಳನ್ನು ಮಿಂಚು ವಾಹಕ ಗಳನ್ನು  ಅಳವಡಿಸುವುದರಿಂದ ಆಗ ಬಹುದಾದ  ಹಾನಿ ಕಡಿಮೆ ಮಾಡ ಬಹುದು . ಜನರು ತಿಳಿದಂತೆ ಇವು ಸಿಡಿಲನ್ನು ತಮ್ಮ ಕಡೆ ಆಕರ್ಷಿಸುವುದಿಲ್ಲ .ತಮ್ಮ ಸನಿಹ ಬಡಿದರೆ ಸಾಧ್ಯವಾದಷ್ಟು ಭೂಮಿಗೆ ಅದನ್ನು ಒಯ್ಯುವ ಕೆಲಸ ಮಾಡುವವು . 

ಸಿಡಿಲು ಅಗಾಧ ಶಕ್ತಿಯ  ನೇರ ವಿದ್ಯುತ್ .ಇದರ ಶಕ್ತಿ ಮತ್ತು  ದೂರ ಹೊಂದಿ ಕೊಂಡು ಮನುಷ್ಯನಿಗೆ ಅಪಾಯ ಬರುವುದು .ಸಾಮಾನ್ಯ ವಿದ್ಯುತ್ ಶಾಕ್ ಬಡಿದಾಗ ಆಗುವ ಗಾಯಗಳಿಗಿಂತ ಹಲವು ಪಟ್ಟು ಅಧಿಕ ತೀವ್ರತೆ .ಹೃದಯ ಕ್ರಿಯೆ ನಿಲುಗಡೆ ,ಮೆದುಳಿನ ಮೇಲೆ ವಿದ್ಯುತ್ ಪ್ರವಾಹ ,ಮಾಂಸ ಖಂಡಗಳ ಹನನ ಮತ್ತು ಸುಟ್ಟ ಗಾಯ ,ಬಹು ಅಂಗಾಂಗ ವೈಫಲ್ಯ ಇತ್ಯಾದಿ ಗಳು ಪ್ರಾಣಾಂತಕ ಆಗ ಬಹುದು .

 Lightning rod - Wikipedia

ಶುಕ್ರವಾರ, ಜನವರಿ 15, 2021

ವೆರಿಕೋಸ್ ವೇಯಿನ್ ಪೈಲ್ಸ್ ಇತ್ಯಾದಿ

   ವೆರಿಕೋಸ್  ವೇಯಿನ್ ಪೈಲ್ಸ್ ಇತ್ಯಾದಿ 

ಕೆಲವರಲ್ಲಿ  ಅದೂ ಹೆಚ್ಚಾಗಿ ವಯಸ್ಸಾದ ಮಹಿಳೆಯರಲ್ಲಿ ಕಾಲಿನ ಅಭಿಧಮನಿಗಳು (ನರ )ಉಬ್ಬಿರುವದನ್ನು ಕಂಡಿದ್ದೀರಿ .ಇದನ್ನು  ವರಿಕೋಸ್ ವೆಯಿನ್  ಎನ್ನುವರು .ಕಾಲಿನ ಮೇಲ್ಪದರದ  ಅಭಿಧಮನಿಗಳು ಅಶುದ್ಧ ರಕ್ತವನ್ನು ಒಳಗಿನ ದೊಡ್ಡ ಅಭಿಧಮನಿಗಳ ಮೂಲಕ ಹೃದಯಕ್ಕೆ ರವಾನಿಸುವವು .ಒಳಗಿನ ರಕ್ತನಾಳಗಳು ಬಲವಾದ ಮಾಂಸ ಖಂಡಗಳಿಂದ  ಸುತ್ತುವರಿದಿದ್ದು ಅವುಗಳು ಸಂಕುಚಿಸುವಾಗ ಅಭಿಧಮನಿಗಳ ಒಳಗಿರುವ ರಕ್ತ  ಮೇಲಕ್ಕೆ ಪಂಪ್ ಮಾಡಲ್ಪಡುವುದು .ಕಾಲಿನ ಮಾಂಸ ಖಂಡಗಳನ್ನು ಹೊರಭಾಗದ  ಹೃದಯ ಎಂದು ಕರೆಯುವರು .ಆದರೆ ಮೇಲ್ಪದರದ ಅಭಿಧಮನಿಗಳಿಗೆ ಇಂತಹ ಸೌಕರ್ಯ ಇಲ್ಲ .ಇವುಗಳಿಂದ ಒಳ ನಾಳಗಳಿಗೆ ಹೋದ ರಕ್ತ ವಾಪಾಸು ಬರದಂತೆ  ಕವಾಟಗಳು ಇವೆ . 

ನರಗಳು ಉಬ್ಬಿಕೊಳ್ಳಲು ಕಾರಣವೇನು ?

೧  ವಂಶ ಪಾರಂಪರ್ಯ 

೨. ಹೆಚ್ಚು ನಿಂತೇ ಕೆಲಸ ಮಾಡುವುದು .ಇಲ್ಲಿ ಗುರುತ್ವಾಕರ್ಷಣೆ ರಕ್ತ ಮೇಲ್ಸಂಚಾರಕ್ಕೆ ಅಡಚಣೆ 

೩ ಒಳ  ರಕ್ತ ನಾಳಗಳಿಂದ ಮೇಲ್ಪದರಕ್ಕೆ ಬರದಂತೆ ತಡೆಗಟ್ಟುವ ಕವಾಟಗಳ ಕುಂದಿದ  ಕಾರ್ಯ ಕ್ಷಮತೆ . 

೪.ಗರ್ಭಿಣಿಯರಲ್ಲಿ  ಹಾರ್ಮೋನ್ ಗಳ  ಪ್ರಭಾವದಿಂದ ಅಭಿಧಮನಿಗಳು ವಿಕಸಿತ ಗೊಳ್ಳುವುವು .ಹಲವು ಮಕ್ಕಳನ್ನು ಹೆತ್ತವರಲ್ಲಿ ಜಾಸ್ತಿ ಇರಬಹದು 

ವರಿಕೋಸ್ ವೇಯ್ನ್ ಗಳಿಂದ  ತೊಂದರೆಗಳು 

೧ ನೋಡಲು  ಚೆನ್ನಾಗಿರದು 

೨ ಅಶುದ್ಧ ರಕ್ತ ಸಂಚಯ ಗೊಂಡು  ಕಾಲಿನಲ್ಲಿ ಚರ್ಮ ರೋಗ ,ಅಲ್ಸರ್ (ಹುಣ್ಣು )ಮತ್ತು ಬಾವು  ಬರುವದು ,

೩ ಕಾಲು ಭಾರ ಎನಿಸುವುದು ಮತ್ತು ನೋವು ಉಂಟಾಗುವುದು . ಈ ನೋವು ನಡೆದಾಗ ಮತ್ತು ಕಾಲು ಎತ್ತಿ ಮಲಗಿದಾಗ ಕಡಿಮೆ ಆಗುವುದು .(ಅಪಧಮನಿಗಳ ಸಮಸ್ಯೆಯಲ್ಲಿ ಇದಕ್ಕೆ ವಿರುದ್ಧ ).. 

ಪರೀಕ್ಷಣಗಳು 

ಕಾಲಿನ  ರಕ್ತ ನಾಳಗಳ  ಡಾಪ್ಲರ್ ಅಲ್ಟ್ರಾ ಸೌಂಡ್ ಸ್ಕ್ಯಾನ್ ಸುಲಭ ಪರೀಕ್ಷಣಾ ವಿಧಾನ . 

ಚಿಕಿತ್ಸೆ . 

ಕಾಲಿನ  ಅಭಿಧಮನಿಗಳಿಗೆ  ಶಕ್ತಿ ಕೊಡುವ ಎಲಾಸ್ಟಿಕ್ ಬ್ಯಾಂಡೇಜ್ ಅಥವಾ ಸ್ಟಾಕಿಂಗ್ಸ್  ಹ್ ಆರಂಭದ ಹಂತದಲ್ಲಿ  ಅಲ್ಪ ಅನುಕೂಲ ಮಾಡುವವು .. 

ಇನ್ನು  ಕೆಲವು ರಾಸಾಯನಿಕಗಳನ್ನು  ಅಭಿಧಮನಿಗಳಿಗೆ ಇಂಜೆಕ್ಷನ್ ಮೂಲಕ ಒಳಗೆ ಹಾಕಿದಾಗ ಅವುಗಳ  ಮೇಲ್ಮೈ ಗಳು ಒಂದಕ್ಕೆ ಒಂದು ಆಂಟಿ ಕೊಂಡು ಕಮರಿ ಹೋಗುವುವು .ಇದೇ  ಪರಿಣಾಮ ತರುವ ಲೇಸರ್ ಚಿಕಿತ್ಸೆ ಯೂ ಇದೆ . 

ಇದು  ಯಾವುದೂ ಸರಿ ಹೋಗದಿದ್ದರೆ  ಶಸ್ತ್ರ ಚಿಕಿತ್ಸೆ ಮೂಲಕ  ಉಬ್ಬಿದ ಅಭಿಧಮನಿಗಳನ್ನು  ಹೊರ ತೆಗೆಯುವರು . 

ಕಾಲಿನಲ್ಲಿ  ಅಭಿಧಮನಿಗಳು ಉಬ್ಬಿಕೊಂಡಂತೆ  ಗುದ ನಾಳದಲ್ಲಿ ಕೂಡ ಶಕ್ತಿ ಕುಂದಿ ಹಿರಿದಾದ ರಕ್ತನಾಳಗಳನ್ನು  ಪೈಲ್ಸ್ ಅಥವಾ ಹೆಮರೊಯಿಡ್ಸ್ ಎಂದು ಕರೆಯುತ್ತಾರೆ . ಇವು ಒಡೆದು ರಕ್ತ ಸ್ರಾವ ಆಗುವುದು .ಇದರ ಚಿಕಿತ್ಸೆ ಯೂ ವರಿಕೋಸ್ ವೆಯಿನ್ ಚಿಕಿತ್ಸೆ ಯನ್ನು  ಹೋಲುವುದು . 

ಇನ್ನು   ತೀವ್ರ ಯಕೃತ್ ಕಾಯಿಲೆಗಳಲ್ಲಿ ಅನ್ನ  ನಾಳ ಜಠರ ಸೇರುವಲ್ಲಿನ ಅಭಿಧಮನಿಗಳು ಹಿಗ್ಗಿ  ಅನ್ನನಾಳದ ವೆರಿಕೋಸ್  ಅಥವಾ  ವೇರಿಸಸ್ ಉಂಟಾಗುವುದು .ಇದು ಕೆಲವೊಮ್ಮೆ ಅಪಾಯಕಾರಿ ರಕ್ತ ವಾಂತಿ ಮತ್ತು ಭೇದಿ ಉಂಟು ಮಾಡ ಬಹುದು.

                                       




                           




ಗುರುವಾರ, ಜನವರಿ 14, 2021

ಜ್ವರ

                       ಜ್ವರ 

ಮುನುಜರಲ್ಲಿ  ನಿತ್ಯ  ವ್ಯಾಪಾರ ಸರಿಯಾಗಿ ನಡೆಯಲು ಶರೀರದ ಉಷ್ಣಾಂಶ  ಒಂದೇ ರೀತಿ  ಕಾಯ್ದು ಕೊಳ್ಳ ಬೇಕಾಗುವುದು .ಇದು 36.8 ± 0.4°C (98.2 ± 0.7°F) ರೇಂಜಿನಲ್ಲಿ  ಇರುವುದು .ಇದು ದಿನವಿಡೀ ಒಂದೇ ತರಹ ಇರದೇ ಬೆಳಿಗ್ಗೆ ಕಡಿಮೆ ಮತ್ತು ಸಂಜೆ ಜಾಸ್ತಿ ಇರುವುದು ಬೆಳಿಗ್ಗೆ ಹೆಚ್ಚೆಂದರೆ 37.2°C (98.9°F) ಇದ್ದು ಸಂಜೆ 37.7°C (99.9°F ) ಇರ ಬಹುದು. ಸಂಜೆ ಉಷ್ಣಾಂಶ ಸ್ವಲ್ಪ ಜಾಸ್ತಿ ಇದ್ದರೆ ಅದನ್ನು ಜ್ವರ ಎಂದು ತಿಳಿಯ ಬಾರದು ಬೆಳಗ್ಗೆ .  37.2°C ಕ್ಕಿಂತ (98.9°F) ಸಂಜೆ37.7°C (99.9°F)  ಕ್ಕಿಂತ ಹೆಚ್ಚು ಇದ್ದರೆ  ಜ್ವರ ಎನ್ನ ಬಹುದು . ಮಹಿಳೆಯರಲ್ಲಿ  ಋತು ಚಕ್ರ ದ  ಮಧ್ಯದ ದಿನಗಳಿಂದ ಬೆಳಿಗಿನ ಉಷ್ಣಾಂಶ  0.6°C (1.0°F)ಅಧಿಕ ಇರುವುದು ಸಾಮಾನ್ಯ .

 

Thermoregulation and Exercise: A Review – Ostéopathe Shawinigan | Antoine  Del Bello Ostéopathe

  ನಮ್ಮ  ಶರೀರದ  ಉಷ್ಣ ನಿರಂತ್ರಕ ಮೆದುಳಿನ ಹೈಪೋಥಲಾಮಸ್ ಎಂಬ ಭಾಗದಲ್ಲಿ ಇದೆ .ಇದರ ಆಜ್ಞೆಯಂತೆ ತಾಪ ಎರ ಬೇಕಾದಾಗ ಯಕೃತ್ ,ಮೆದುಳು ,ಮಾಂಸ ಖಂಡ ಗಳು  ಮತ್ತು ಇತರ ಅಂಗಗಳು ಗ್ಲುಕೋಸ್ ,ಕೊಬ್ಬು ಮತ್ತು ಅಮೈನೊ ಆಮ್ಲ ಉರಿಸಿ ಶಾಖೋತ್ಪಾದನೆ ಮಾಡುವವು .ಚರ್ಮಕ್ಕೆ ರಕ್ತ ಸಂಚಾರ ಕಡಿಮೆ ಮಾಡಿ ಶಾಖ  ನಷ್ಟ ವಾಗದಂತೆ  ನೋಡಿಕೊಳ್ಳುವುದು . 

ಜ್ವರ ಉಂಟು ಮಾಡುವ ವಸ್ತುಗಳಿಗೆ ಪೈರೋಜನ್  ಅಥವಾ ಜ್ವರ ಕಾರಕಗಳು ಎನ್ನುವರು . ಇವುಗಳಲ್ಲಿ ಎರಡು ತರಹ .ಒಂದು ಹೊರಗಿನಿಂದ  ಬಂದವುಗಳು ,ಮತ್ತು ಎರಡನೆಯದು ಶರೀರ ಉಳಗೇ  ಉತ್ಪತ್ತಿಯಾದವು .ಉದಾಹರಣೆಗೆ ಒಂದು ಬ್ಯಾಕ್ಟೀರಿಯಾ  ಶರೀರ ಪ್ರವೇಶಿಸಿದಾಗ ಬಿಳಿ ರಕ್ತ ಕಣಗಳು ಧಾಳಿ ಮಾಡುವುವು .ಈ ಕಾಳಗದಲ್ಲಿ  ಗಾಯಗೊಂಡ ,ಮೃತವಾದ ಮತ್ತು ಇತರ ಬಿಳಿ ರಕ್ತ ಕಣ  ಮತ್ತು ಬ್ಯಾಕ್ಟೀರಿಯಾ ಗಳಿಂದ  ಜ್ವರ ಕಾರಕ ರಾಸಾಯನಿಕ ವಸ್ತುಗಳು ಬಿಡುಗಡೆ ಗೊಂಡು ರಕ್ತದ ಮೂಲಕ  ತಾಪ ನಿಯಂತ್ರಣ ಕೇಂದ್ರಕ್ಕೆ ಎಚ್ಚರಿಸುವವು .ಅದು ಶರೀರದ ತಾಪಮಾನವನ್ನು ತನಗೆ ಅನ್ನಿಸಿದಷ್ಟು ಏರಿಸಿ ಪ್ರಕಟಿಸುವುದು .ಪೆಟ್ರೋಲ್ ಬಂಕ್ ನಲ್ಲಿ  ದರ ಏರಿಸಿ ಬರೆದಂತೆ .ಕೂಡಲೇ ಶಾಖೋತ್ಪನ್ನ ಕೇಂದ್ರಗಳಿಗೆ ಸಂದೇಶ ರವಾನೆ ಆಗುವುದು ,ಇದರಲ್ಲಿ ಮಾಂಸ ಖಂಡಗಳು ವೇಗವಾಗಿ ಸಂಕುಚನ ವಿಕಸನ ಗೊಂಡು ನಡುಗುವುದನ್ನು  ರೈಗರ್ ಅಥವಾ ಜ್ವರದ ನಡುಕ ಎನ್ನುವರು . 

  ಜ್ವರದ ಉದ್ದೇಶ ಆಕ್ರಮಿಗಳನ್ನು ಕೊಲ್ಲುವುದು ಮತ್ತು ಸೋಂಕು ವಿರೋಧಿ ಚಟುವಟಿಕೆಗೆ ವೇಗ ಕೊಡುವುದೂ ಇರ ಬಹುದು  .

ಎಲ್ಲಾ ಜ್ವರಗಳು  ಬ್ಯಾಕ್ಟೀರಿಯಾ  ,ವೈರಸ್ ಇತ್ಯಾದಿಗಳಿಂದಲೇ ಬರುವುದು ಎಂದು ಇಲ್ಲ . ಸ್ವಯಮ್ ನಿರೋಧಕ ಕಾಯಿಲೆಗಳಲ್ಲಿಯೂ ಜ್ವರ ಬರುವುದು .(ಉದಾ SLE ,ರುಮಟಾಯ್ಡ್ ಆರ್ಥ್ರೈಟಿಸ್ ).ತಾಪಮಾನ ಕಡಿಮೆ ಆಗ ಬೇಕು  ಎಂದಾಗ ಚರ್ಮ ಮತ್ತು ಬೆವರು ಗ್ರಂಥಿ ಗಳಿಗೆ ಆದೇಶ ಹೋಗಿ ಅಧಿಕ ಬೆವರು ಉತ್ಪತ್ತಿಯಾಗಿ ತನ್ಮೂಲಕ  ಶಾಖ ವೂ ಹೊರ ಹೋಗುವುದು .ಜ್ವರ ಬಿಡುವಾಗ ಬೆವರುವುದು ಇದೇ ಕಾರಣಕ್ಕೆ .ನಮ್ಮ ನಿಶ್ವಾಸದ ಮೂಲಕವೂ ತಾಪಮಾನ ಹೊರಹೋಗುವುದು .

 ಸಣ್ಣ ಜ್ವರಕ್ಕೆ ಜ್ವರ ಕಡಿಮೆ ಮಾಡುವ ಔಷಧಿ ಬೇಡ .ಏರು ಜ್ವರ ಇದ್ದರೆ ರೋಗಿಯು ಬಳಲುವನು .ಆಗ ಪ್ಯಾರಾಸಿಟಮಾಲ್ ನಂತಹ ಔಷಧಿ ಕೊಡುವರು .ಈ ಔಷಧಿ ಜ್ವರ ನಿಯಂತ್ರಕ ವನ್ನು ಪ್ರಚೋದಿಸುವ ರಾಸಾಯನಿಕಗಳ ವಿರುದ್ಧ ಕಾರ್ಯ ಮಾಡುವದು . ಆದರೆ ಮುಖ್ಯ ಚಿಕಿತ್ಸೆ (ಇದ್ದರೆ ) ಮೂಲ ರೋಗಕ್ಕೆ ಉದಾ ಟೈಪೋಯ್ಡ್ ,ಮಲೇರಿಯ ಇತ್ಯಾದಿ . 

ಬಾಲಂಗೋಚಿ ;  ಆಸ್ಪತ್ರೆಯಲ್ಲಿ ಸಿರಿಂಜ್ ಮತ್ತು ಗ್ಲುಕೋಸ್ ಬಾಟಲ್ಲುಗಳ  ಮೇಲೆ  ಪೈರೋಜನ್ ಫ್ರೀ ಎಂದು ಬರೆದಿರುತ್ತಾರೆ .ಇದರ ಅರ್ಥ ಜ್ವರ ಉಂಟು ಮಾಡುವ ರೋಗಾಣು ಅಥವಾ ಕಲ್ಮಶ ಇಲ್ಲಾ .ಕೆಲವರು ಇದನ್ನು ಓದಿ ಈ ಫ್ರೀ ಯಾಗಿ ಕೊಡುವ ವಸ್ತು ಎಲ್ಲಿ ಎಂದು ಕೇಳಿದ್ದುಂಟು