ಬೆಂಬಲಿಗರು

ಬುಧವಾರ, ಫೆಬ್ರವರಿ 10, 2021

ನಡೆದಾಡೋ ಅಶ್ವಿನಿ ದೇವತೆಗಳು

    ನಡೆದಾಡೋ  ಅಶ್ವಿನಿ ದೇವತೆಗಳು 

ಆಸ್ಪತ್ರೆಯಲ್ಲಿ  ಕೆಲಸ ಮಾಡುವ  ದಾದಿಯರು ಮಾಡುವ ಕೆಲಸ ಅತ್ಯಂತ ಪವಿತ್ರವಾದುದುದು .ಹಗಲು ಇರುಳೆನ್ನದೆ ರೋಗ ಪೀಡಿತರ ಮಧ್ಯೆ ಅವರ ಸೇವೆ ಮಾಡುವ ಕೆಲಸ ಬಹಳ ತಾಳ್ಮೆ  ಮತ್ತು  ಅನುಕಂಪ ಬೇಡುವ ಉದ್ಯೋಗ . ಒಂದು ಕಡೆ ಬೇರೆ ಬೇರೆ ಮನೋಧರ್ಮ ಇರುವ ವೈದ್ಯರು ಇನ್ನೊಂದು ಕಡೆ ಪೂರ್ಣ ಗಮನ ನಿರೀಕ್ಷಿಸುವ ರೋಗಿಗಳು ಮತ್ತು ಆಗಾಗ್ಗೆ ಕಿರಿ ಕಿರಿ ಎನಿಸುವಷ್ಟು  ತಲೆ ಹಾಕುವ ರೋಗಿಯಸಂಬಂಧಿಗಳು .,ಇವರೆನ್ನೆಲ್ಲಾ ನಿಭಾಯಿಸಿ ಕೊಂಡು ಹೋಗುವ ಕೆಲಸ ಸುಲಭ ಸಾಧ್ಯ ವಲ್ಲ . 

ಆಸ್ಪತ್ರೆಯಲ್ಲಿ  ವೈದ್ಯರ ಟಿಪ್ಪಣಿ ಮತ್ತು ಔಷಧೋಪಚಾರ ನಿರ್ದೇಶಗಳು ಮತ್ತು  ನರ್ಸ್ ಗಳ  ನೋಟ್ಸ್  ಆಂಗ್ಲ ಭಾಷೆಯಲ್ಲಿ ಇರುತ್ತವೆ .. ತಲೆ ತಲಾಂತರಗಳಿಂದ ತಮ್ಮದೇ ಆದ  ಭಾಷೆಯನ್ನು ಅಭಿವೃದ್ಧಿ ಪಡಿಸಿಕೊಂಡಂತೆ  ಕಾಣುತ್ತದೆ . 

ಉದಾಹರಣೆಗೆ  ಮುಂಜಾವಿನ  ರೌಂಡ್ಸ್ ವೇಳೆ  ಮಾತುಕತೆ ಈ ರೀತಿ ಇರುವುದು . 

"ಸಿಸ್ಟೆರ್ ಈ ರೋಗಿ ಗೆ  ಏನು ತೊಂದರೆ ?"

"ಫೋರ್ ಡೇಸ್ ನಿಂದ  ಫೀವರ್ ,ವೊಮಿಟಿಂಗ್ ಅಂತ ಬಂದಿದ್ದು ಸರ್ "

"ಸರಿ ಅವರ ಬಂಧುಗಳು ಯಾರಾದರೂ ಇದ್ದಾರೆಯೇ ?"

"ಪಾರ್ಟಿ (ಬಂಧು ಬಳಗ ,ಅಟೆಂಡೆಂಟ್ ಎಲ್ಲಾ  ಪಾರ್ಟಿ ಎಂದು ಕರೆಯಿಸಿ ಕೊಳ್ಳುವರು ) ಇದ್ದರು ಸಾರ್ ಈಗ ಕ್ಯಾಂಟೀನ್ ಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದಾರೆ "

"ಸರಿ  ಏನೇನು ಪರಿಶೋಧನೆ ಗೆ  ಕಳುಹಿಸಿರುವಿರಿ ?"

"ಸರ್  ಬ್ಲಡ್  ಸಿ ಬಿ ಸಿ .ಡೆಂಗೂ .ಎಂ ಪಿ .(ಮಲೇರಿಯಲ್ ಪ್ಯಾರಾಸೈಟ್ ),ಲೆಪ್ಟಾ  ,ಶುಗರ್  ಸೆಂಡ್ ಆಗಿದೆ ,ಯೂರಿನ್  ರೂಟಿನ್ ಹೋಗಿದೆ "(ಹೋಗಿದೆ ಎನ್ನುವರು ,ಕಳುಹಿದ್ದೇವೆ ಎನ್ನುವುದಿಲ್ಲ )

"ಸರಿ  ಇದುವರೆಗೆ  ಏನೇನು ಕೊಟ್ಟಿರುವಿರಿ ?"

"ಸರ್  ಪಿ ಸಿ ಟಿ (ಪ್ಯಾರಾ ಸಿಟಮಾಲ್ ) ಇನ್ಫ್ಯೂಶನ್ ಹೋಗಿದೆ , ೫ ಡಿ ಹೋಗುತ್ತಿದೆ .(ಗಮನಿಸಿ  ನಾವು ಕೊಡುತ್ತಿದ್ದೇವೆ ಎಂದು ಹೇಳರು .ಹೋಗುತ್ತಿದೆ ಎನ್ನುವರು .ನಾನು ತಮಾಷೆಗೆ  ಅದು ಹೇಗೆ ಹೋಗುವುದು ನಡೆದುಕೊಂಡೋ ಎನ್ನುವೆನು )

"ಸರಿ  ಜ್ವರ ಇದೆಯೇ ?"

"ಸರ್  ,ಟೆಂಪರೇಚರ್  ಈಗ ನಾರ್ಮಲ್ ಇದೆ "

"ಬಿ ಪಿ ?"

"ಸರ್  ೧೦೦/೭೦ ಸಿಗುತ್ತಿದೆ "

"ಅದೇನು ಸಿಗುತ್ತಿದೆ ,೧೧೦/೭೦ ಇದೆ ಎನ್ನಿರಿ "

"ಓ ಕೆ ಸರ್ "

"ಸಾರ್ ಇನ್ನೂರ ಒಂದರಲ್ಲಿ  ಒಂದು ರೆಫರೆನ್ಸ್ ಇದೆ "

"ಏನು ರೆಫರೆನ್ಸ್ ?"

ಡಿ ಎಚ್ ಎಸ್ ಪೇಷೆಂಟ್  ನಿನ್ನೆಯಿಂದ ಕಾಫ್ , ಬ್ರೆಥ್ ಲೆಸ್ ನೆಸ್ಸ್ ಸಾರ್ "ಒ2 ಮತ್ತು ನೆಬ್ ಹೋಗುತ್ತಿದೆ "

ನಮ್ಮಲ್ಲಿ ತುಂಬಾ ಅಬ್ರೆ ವೇಷನ್  ಅಥವಾ ಶಾರ್ಟ್ ಫೋರ್ಮ್ ಉಪಯೋಗ ಇದ್ದು  ನನಗೇ ಕೆಲವೊಮ್ಮೆ ಗಲಿಬಿಲಿ ಆಗುವುದು .

ಎಲ್ ಟಿ ಎಂದರೆ  ಹೆರಿಗೆ ಮನೆ (ಲೇಬರ್ ಥಿಯೇಟರ್) ,ಒ ಟಿ ಶಸ್ತ್ರ ಚಿಕಿತ್ಸಾ ಗೃಹ (ಆಪರೇಷನ್ ಥಿಯೇಟರ್),ಥಿಯೇಟರ್ ಅಂದರೂ ಮನೋರಂಜನೆ ಇಲ್ಲ .ಲ್ಯಾಪ್ ಕೋಲಿ (laparoscopic cholecystectomy)   ಎಂದರೆ ಉದರ ದರ್ಶಕ ಮೂಲಕ ಪಿತ್ತ ಕೋಶ ತೆಗೆಯುವಿಕೆ .ಎಂ ಎಲ್ ಸಿ ಎಂದರೆ ಪೋಲೀಸು ಕೇಸ್ ಇರುವ ಉದಾ  ರಸ್ತೆ ಅಪಘಾತ  ,ಹೊಡೆದಾಟ ಇತ್ಯಾದಿ ಗಳಿಂದ ಆದ  ರೋಗಗಳು.ನೈಟ್ ಸೂಪರ್ ಅಂದರೆ ನೈಟ್ ಸೂಪರ್ವೈಸರ್ ಇತ್ಯಾದಿ .

ಇತ್ತೀಚೆಗೆ  ಯುವ ರೋಗಿಗಳೂ ಇದೇ ತರಹ ಷಾರ್ಟ್ ಫೋರ್ಮ್ ಉಪಯೋಸುವುದು ಸಾಮಾನ್ಯ .

ನೀವು ಏನು ಮಾಡುತ್ತಿರುವಿರಿ ?ಎಂದು ಕೇಳಿದರೆ  ವಿ ಸಿ ಯಲ್ಲಿ ಈಸಿ ಎನ್ನುವರು .ಅಂದರೆ  ವಿವೇಕಾನಂದ  ಇಂಜಿನೀರಿಂಗ್  ಕಾಲೇಜ್ ನಲ್ಲಿ  ಇಲೆಕ್ತ್ರೋನಿಕ್ ಮತ್ತು  ಕಮ್ಯೂನಿಕೇಷನ್ ಎಂದು ಅರ್ಥ .ಇನ್ನೂ ಕೆಲವರು ಸಿ ಎಸ್ ಎನ್ನುವರು ,ಚೀಫ್ ಸೆಕ್ರೆಟರೀ ಅಲ್ಲ ,ಕಂಪ್ಯೂಟರ್ ಸೈನ್ಸ್ .

 ಮುಂಜಾನೆ ರೌಂಡ್ಸ್ ಮುಗಿದ ಮೇಲೆ ನರ್ಸಿಂಗ್ ನೋಟ್ಸ್ ಬರೆದು ವೈದ್ಯರ ಆದೇಶ ಪಾಲನೆಗೆ ಹೊರಡುವಷ್ಟರಲ್ಲಿ ಒಂದು ರೂಮಿನಿಂದ ಬೆಲ್ ಆಗುವುದು ;ಡ್ರಿಪ್ ಮುಗಿದಿದೆ ಅಂತ .ಅದನ್ನು ಸರಿಪಡಿಸುವಷ್ಟರಲ್ಲಿ ಇನ್ನೊಬ್ಬರು ಮಗಳಿಗೆ ಹೆರಿಗೆ ನೋವು ಬಂದಿದೆ ,ಮತ್ತೊಬ್ಬರು ಮಗು ವಾಂತಿ ಮಾಡುತ್ತಿದೆ ಇತ್ಯಾದಿ ಸಮಸ್ಯೆಗೆ ಓಡಿ ಬರುವರು .ನಡುವೆ ಒ ಟಿ ನರ್ಸ್ ಫೋನ್ ಮಾಡಿ ಸರ್ಜರಿಗೆ ರೋಗಿಯನ್ನು ಇನ್ನೂ ಕಳುಹಿಸಿಲ್ಲಾ ಎನ್ನುವರು

ಅದೇನೇ ಇರಲಿ  ರೋಗಿಗಳಿಗೂ  ವೈದ್ಯರಿಗಿಂತ ಹೆಚ್ಚಾಗಿ ತಮ್ಮನ್ನು  ಶುಶ್ರೂಷೆ ಮಾಡಿದ  ದಾದಿಯರ ಮೇಲೆ  ಹೆಚ್ಚು  ಕೃತಜ್ನತಾ ಭಾವ ಇರುವುದು ನ್ಯಾಯ ಮತ್ತು ಸಾಮಾನ್ಯ .ಒಂದು ಸಂಸ್ಥೆಯಲ್ಲಿ  ದುಡಿದ ವೈದ್ಯರನ್ನು  ಆಡಳಿತ ಮಂಡಳಿ ಅಥವಾ  ಸಹ ವೈದ್ಯರಿಗಿಂತ ಈ ಸಹೋದರಿಯರೇ  ಜ್ನಾಪಕದಲ್ಲಿ ಇಟ್ಟು ಕೊಳ್ಳುವರು .

  ರೋಗಿಗಳು ಮತ್ತು ಸಂಭಂದಿಕರು ಆದಷ್ಟು ತಮಗೆ ಆರೈಕೆ ಮಾಡುವ  ನರ್ಸ್ ಸಿಬ್ಬಂದಿಯವರ  ಜತೆ ಜಗಳ ಮಾಡ ಬಾರದು .ಮನಸು ಮುರಿದ ಮೇಲೆ ಒತ್ತಡ ರಹಿತವಾಗಿ ಪೂರ್ವಗ್ರಹ ಇಲ್ಲದೆ ನಿರ್ಭಿತಿಯಿಂದ  ಕೆಲಸ ಮಾಡುವುದು ಕಷ್ಟ .ಅಲ್ಲದೆ  "ಅಲ್ಲಿ  ಸಿಸ್ಟೆರ್ ಗೆ ನರವೇ ಸಿಗುವುದಿಲ್ಲ ,ಚುಚ್ಚಿ ಚುಚ್ಚಿ  ಸಾಯಿಸುತ್ತಾರೆ " ಇತ್ಯಾದಿ ಲಘುವಾಗಿ  ಮಾತನಾಡ  ಬಾರದು  .ಅವರೂ  ನಿಮ್ಮ ಮಕ್ಕಳೇ ಅಥವಾ ಸಹೋದರಿಯರೇ ಎಂದು ಭಾವಿಸ ಬೇಕು .ಯಾಕೆಂದರೆ ಹತ್ತಾರು ರೋಗಿಗಳ ವಿಭಿನ್ನ ತೊಂದರೆಗಳ ಮೇಲೆ ನಿಗಾ ಇಡುವುದು   ಒತ್ತಡದ  ಕಾರ್ಯ .ಅವರ ಕೆಲಸದಲ್ಲಿ ಗಂಭೀರ ಲೋಪ ಕಂಡರೆ  ವೈದ್ಯರಲ್ಲಿ ಅಥವಾ ಮೇಲ್ವಿಚಾರಕರ ಬಳಿ ನಿವೇದಿಸಕೊಳ್ಳ ಬೇಕು ,


 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ