ಚಿಕಿತ್ಸೆ ರೋಗಿಗೋ ರಿಪೋರ್ಟಿಗೋ
ನಡೆದ ಘಟ ನೆ . ಕೆಲ ದಿನಗಳಿಂದ ಆಯಾಸ ಎಂದು ಒಬ್ಬರು ಹಿರಿಯರು ವೈದ್ಯರ ಬಳಿಗೆ ಹೋದರು . ಅವರು ಸಾಮಾನ್ಯ ಪರೀಕ್ಷಣಗಳನ್ನು ಮಾಡಿ ರೂಟೀನ್ ರಕ್ತ ಪರೀಕ್ಷಗೆ ಕಳುಹಿಸಿದರು . ಅದರಲ್ಲಿ ಖಾಲಿ ತಿಂಡಿ ತಿಂದ ಮೇಲಿನ ಸಕ್ಕರೆ ಪ್ರಮಾಣ 180mg/dl ( Normal 70-140) ಎಂದು ಬಂತು . ಅದನ್ನು ನೋಡಿ ವೈದ್ಯರು ರೋಗಿಗೆ 'ಸಕ್ಕರೆ ಕಾಯಿಲೆ ಇದೆ ;ಅದಕ್ಕೆ ಚಿಕಿತ್ಸೆ ಆಗಬೇಕು 'ಎಂದರು . ನಿಮಗೆ ಸಣ್ಣ ಸಕ್ಕರೆ ಇರುವ ಕಾರಣ ಕಮ್ಮಿ ಮಿಲಿಗ್ರಾಮ್ ನ ಸಣ್ಣ ಮಾತ್ರೆ ಕೊಡುವೆನು ಎಂದು 2.5 mg ಯ Glibenclamide ಎಂಬ ಮಾತ್ರೆ ಕೊಟ್ಟರು ..ಹಿರಿಯರು ಭಕ್ತಿಯಿಂದ ಅದನ್ನು ಸೇವಿಸಿದರು . ಕೆಲವು ಗಂಟೆಗಳ ನಂತರ ಅವರ ಚೆಹರೆ ಮಾತು ಎಲ್ಲಾ ಬದಲಾಗಿ ಏನೇನೋ ಅರ್ಥವಿಲ್ಲದ ಉದ್ಘಾರಗಳನ್ನು ಮಾಡ ತೊಡಗಿದರು .ಮನೆಯವರು ಇವರಿಗೆ ಹುಚ್ಚು ಹಿಡಿದಿದೆ ಎಂದು ಮಾನಸಿಕ ವೈದ್ಯರ ಬಳಿಗೆ ಒಯ್ಯಲು ಅವರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಸಕ್ಕರೆ ಕಾಯಿಲೆಗೆ ಫಿಸಿಶಿಯನ್ ಗೆ ತೋರಿಸುವಂತೆ ಹೇಳಿದರು . ಫಿಶಿಶಿಯನ್ ರೋಗಿಯ ರೋಗ ಚರಿತ್ರೆ ಕೇಳಿದಾಗ ಇವರಿಗೆ ಇಲ್ಲದ ಸಕ್ಕರೆ ಕಾಯಿಲೆಗೆ ಬೇಡದ ಮಾತ್ರೆ ತಿಂದು ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಆದುದರಿಂದ ಮೆದುಳು ಕಾರ್ಯ ಏರು ಪೇರು ಆಗಿದೆ ಎಂಬ ಅಂಶ ಮೇಲ್ನೋಟಕ್ಕೆ ಮನವರಿಕೆ ಆಯಿತು .ಆದರೂ ರೋಗ ನಿರ್ಣಯಕ್ಕೆ ಬರಲು ಪುನಃ ರಕ್ತದ ಸಕ್ಕರೆ ಪ್ರಮಾಣ ಮತ್ತು ಮೂರು ತಿಂಗಳ ಸರಾಸರಿ ನೋಡಿದಾಗ ನಿರ್ಧಾರ ಗಟ್ಟಿ ಆಯಿತು .
ಇಲ್ಲಿ ನಾರ್ಮಲ್ ೭೦-೧೪೦ ಎಂದು ಬರೆದಿದ್ದದ್ದು ಸರಿ .ಆದರೆ ೧೪೦ ರ ಮೇಲೆ ಇದ್ದರೆ ಸಕ್ಕರೆ ಕಾಯಿಲೆ ಎನ್ನುವುದಿಲ್ಲ . ಆಹಾರದ ಎರಡು ಗಂಟೆಗಳ ತರುವಾಯ ೨೦೦ ಮಿಲಿಗ್ರಾಮ್ ,೮ ಗಂಟೆಗಳ ಉಪವಾಸದ (ರಾತ್ರಿ ಊಟದ ೮ ಗಂಟೆಗಳ ಮೇಲೆ )೧೨೬ ಮಿಲಿಗ್ರಾಮ್ ಅಥವಾ HBA1C ಎಂಬ ಮೂರು ತಿಂಗಳ ಸರಾಸರಿ
೬.೫% ಗಿಂತ ಜಾಸ್ತಿ ಇದ್ದರೆ ಮಾತ್ರ ಸಕ್ಕರೆ ಕಾಯಿಲೆ ಎನ್ನುವರು . ಸಣ್ಣ ಮಟ್ಟದ ಸಕ್ಕರೆ ಕಾಯಿಲೆಗೆ ಪಥ್ಯ ಮಾಡಿದರೆ ಸಾಕು . ಮಾತ್ರೆಗಳಲ್ಲೂ ಅದರ ಶಕ್ತಿ ಗಾತ್ರ ಮತ್ತು ತೂಕದ ಮೇಲೆ ಹೋಗದು ಸಕ್ಕರೆ ಕಾಯಿಲೆಗೆ ಆರಂಭದಲ್ಲಿ ಕೊಡುವ ಮೆಟ್ಫಾರ್ಮಿನ್ ಎಂಬ ಮಾತ್ರೆ ಆಕಾರದಲ್ಲಿ ದೊಡ್ಡದಿದ್ದು ೫೦೦ ,೧೦೦೦ ಮಿಲಿಗ್ರಾಮ್ ಇತ್ಯಾದಿಗಳಲ್ಲಿ ಬರುವುದು .ಆದರೆ ಅದರ ಪವರ್ ಮೇಲೆ ಹೇಳಿದ ಗ್ಲೈ ಬೆಂಕ್ಲಮೈಡ್ (ಉದಾ ಜನಪ್ರಿಯ ಬ್ರಾಂಡ್ ಡಯೋನಿಲ್ )ಗಿಂತ ಎಷ್ಟೋ ಕಮ್ಮಿ ಇದ್ದು ಅಪಾಯಕರವಾಗಿ ಸಕ್ಕರೆ ಪ್ರಮಾಣ ಇಳಿಸದು .. ಸಕ್ಕರೆ ಪ್ರಮಾಣ ತುಂಬಾ ಕಮ್ಮಿ ಆದರೆ ಪ್ರಜ್ಞೆ ತಪ್ಪುವುದು . ಹಾಗಾದರೆ ೭೦ ರಿಂದ ೧೪೦ ನಾರ್ಮಲ್ ಎಂದು ಬರೆದಿದ್ದರೆ ೧೪೦ ರಿಂದ ೨೦೦ ರ ವರೆಗೆ ಇದ್ದರೆ ಏನು ಅನ್ನುವುದು? ಇದನ್ನು ತಪ್ಪಿದ ಸಕ್ಕರೆ ತಾಳ (Impaired Glucose Tolerance )ಎನ್ನುವರು .ನಿಮಗೆ ಸಕ್ಕರೆ ಕಾಯಿಲೆ ಇಲ್ಲ ಆದರೆ ಬರುವ ಸೂಚನೆ ಎನ್ನ ಬಹುದು . ಹಾಗೆ ಮಾನಸಿಕ ಕಾಯಿಲೆಯೂ ಇಲ್ಲ ಡಯಾಬಿಟಿಸ್ ಕೂಡಾ ಇಲ್ಲಾ ಎಂದು ಆಶ್ವಾಸನೆ ಪಡೆದು ನಗು ನಗುತ್ತಾ ಹಿರಿಯರು ಮನೆಗೆ ಮರಳಿದರು .
ಕೆಲವರು ತಮ್ಮ ಅರೋಗ್ಯ ಪರೀಕ್ಷೆಗಳನ್ನು ಕಾಲ ಕಾಲಕ್ಕೆ ಮಾಡಿಸುತ್ತಲಿರುವರು .ಇದು ಒಳ್ಳೆಯದೇ .ಆದರೆ ಕೇವಲ ರಿಪೋರ್ಟ್ ನೋಡಿ ಔಷಧಿ ತೆಗೆದು ಕೊಳ್ಳ ಬಾರದು .
ನಮ್ಮ ರಕ್ತದಲ್ಲಿ ಯೂರಿಕ್ ಆಸಿಡ್ ಎಂಬ ವಸ್ತು ಇದೆ . ಕೆಲವೊಮ್ಮೆ ಗಂಟುಗಳ ಒಳ ಸೇರಿ ಗೌಟ್ ಎಂಬ ಕಾಯಿಲೆ ಉಂಟು ಮಾಡುವುದು . ಯಾವುದೇ ರೋಗ ಲಕ್ಷಣ ಇಲ್ಲದೆ ಇದರ ಪ್ರಮಾಣ ಜಾಸ್ತಿ ಇದ್ದರೆ ಔಷಧಿ ಅಗತ್ಯ ಇಲ್ಲ (ಕ್ಯಾನ್ಸರ್ ಚಿಕಿತ್ಸೆ ಯಲ್ಲಿ ಇರುವವರನ್ನು ಹೊರತು ಪಡಿಸಿ ).
ಇನ್ನು ಸಾಮಾನ್ಯ ಪರೀಕ್ಷೆಯಲ್ಲಿ ಮೂತ್ರದ ಸೋಂಕು ಕಂಡು ಬಂದರೆ ,ಜ್ವರ ,ಉರಿ ಮೂತ್ರ ಮತ್ತು ಹೊಟ್ಟೆನೋವಿನಂತಹ ಯಾವುದೇ ತೊಂದರೆ ಇಲ್ಲದವರಿಗೆ ಅದಕ್ಕೆ ಆಂಟಿಬಯೋಟಿಕ್ ಅವಶ್ಯ ಇಲ್ಲ .(ಗರ್ಭಿಣಿಯರನ್ನು ಹೊರತು ಪಡಿಸಿ ).
ಕೊಲೆಸ್ಟರಾಲ್ ಸ್ವಲ್ಪ ಜಾಸ್ತಿ ಕಂಡು ನಿದ್ದೆ ಗೆಡುವವರು ಇದ್ದಾರೆ . ಅದಕ್ಕೆ ಎಲ್ಲರಿಗೂ ಔಷಧಿ ಚಿಕಿತ್ಸೆ ಬೇಕಿಲ್ಲ .
ವೈ ಡಾಲ್ ಎಂಬ ಟೆಸ್ಟ್ ಇದೆ .ಟೈಪೋಯ್ಡ್ ಕಾಯಿಲೆ ಕಂಡು ಹಿಡಿಯಲು ಉಪಯೋಗಿಸುತ್ತಿದ್ದೆವು . ದುರದೃಷ್ಟ ವಶಾತ್ ಇದರ ನಿಖರತೆ ಪ್ರಶ್ನಾರ್ಹ .ಬೇರೆ ಹಲವು ಕಾಯಿಲೆಗಳಲ್ಲಿಯೂ ಇದು ಪಾಸಿಟಿವ್ ಇರಬಹುದು .ಮತ್ತು ರೋಗ ಬಂದು ಗುಣಮುಖ ಆದ ಮೇಲೂ ಹಾಗೇ ಉಳಿಯುವುದು .(ಇದು ರೋಗ ಪ್ರತಿರೋಧಕ ಗಳನ್ನು ಟೆಸ್ಟ್ ಮಾಡುವ ಕಾರಣ )..ಬಹಳ ಮಂದಿ ಜ್ವರ ಇಲ್ಲದವರೂ ,ಇತರ ಸಾಮಾನ್ಯ ಜ್ವರ ಗಳಿಂದ ಬಳಲುವವರೂ ರಿಪೋರ್ಟ್ ಹಿಡಿದು ಕೊಂಡು ನನಗೆ ಟೈಫಾಯಿಡ್ ಗೆ ಚಿಕಿತ್ಸೆ ಕೊಡಿ ,ಕಳೆದ ಯುಗಾದಿಗೆ ಟೈಫಾಯಿಡ್ ಬಂದಿತ್ತು ,ಮತ್ತೆ ದೀಪಾವಳಿಗೆ ಬಂತು ,ಈ ಸಂಕ್ರಾಂತಿಗೆ ಬಂದಿದೆ ನೋಡಿ ಎಂದು ಅವಲತ್ತು ಕೊಳ್ಳುವರು .
ಇನ್ನು ಜಾಂಡಿಸ್ ನ ಬಗ್ಗೆ ಬೇರೆ ಬರೆದಿರುವೆನು . ಗಿಲ್ಬರ್ಟನ ಕಾಯಿಲೆ ಎಂದು ಇದೆ .ಇದರಲ್ಲಿ ನಶಿಸಿದ ಕೆಂಪು ರಕ್ತ ಕಣಗಳಿಂದ ಬಿಡುಗಡೆ ಅದ ಬೈಲಿರುಬಿನ್ ನೀರಿನಲ್ಲಿ ಕರಗುವ ವಸ್ತುವಾಗಿ ಮಾರ್ಪಡಿಸಲು ಬೇಕಾದ ಕಿಣ್ವಗಳು ಲಿವರಿನಲ್ಲಿ ಭಾಗಶಃ ಕಡಿಮೆ ಇದ್ದು ರಕ್ತದಲ್ಲಿ ಬೈಲಿರುಬಿನ್ ಸ್ವಲ್ಪ ಅಧಿಕ ಕಾಣಿಸಿ ಕೊಂಡು ಸಣ್ಣ ಹಳದಿ ಕಾಯಿಲೆ ಆಗಾಗ ಬರುವುದು ಇದಕ್ಕೆ ಯಾವುದೇ ಔಷಧಿ ಅವಶ್ಯವಿಲ್ಲ ಮತ್ತು ಸಾಮಾನ್ಯವಾದ ಆಹಾರ ತೆಗೆದುಕೊಳ್ಳಬಹುದು . ಕೆಲವರು ರಿಪೋರ್ಟಿನಲ್ಲಿ ಜಾಂಡಿಸ್ ಇದೆ ಎಂದು ಬೇಡದ ಪಥ್ಯ ಮತ್ತು ಔಷಧಿಗಳನ್ನು ಸೇವಿಸುವರು .
ರಿಪೋರ್ಟ್ ಗಳಂತೆ ರೀಡಿಂಗ್ ಗಳೂ .ಉದಾ ರಕ್ತದ ಒತ್ತಡ ಹೆಚ್ಚು ಕಂಡೊಡನೆ ಆ ಕಾಯಿಲೆ ಇದೆ ಎಂದು ಹೇಳುವುದಿಲ್ಲ .ಪುನಃ ಪರೀಕ್ಷೆ ಮಾಡುವೆವು .ಕೆಲವು ಬಾರಿ ಮೈಗ್ರೇನ್ ತಲೆನೋವು ,ಮೂತ್ರದ ಕಲ್ಲಿನ ನೋವು ಮತ್ತು ಉಲ್ಬಣಿಸಿದ ಅಸ್ತಮಾ ಇರುವ ರೋಗಿಗಳಲ್ಲಿ ತಾತ್ಕಾಲಿಕ ಬಿ ಪಿ ಹೆಚ್ಚಳ ಆಗುವುದು .ಮೆದುಳಿನ ಆಘಾತ (Stroke )ಆದಾಗಲೂ ಬಿ ಪಿ ಹೆಚ್ಚಾಗುವುದಾದರೂ ಮೆದುಳಿನ ರಕ್ತ ಗಟ್ಟುವಿಕೆಯಲ್ಲಿ ಕೂಡಲೇ ರಕ್ತದ ಏರು ಒತ್ತಡ ಇಳಿಸ ಬಾರದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ