ಬೆಂಬಲಿಗರು

ಶುಕ್ರವಾರ, ಫೆಬ್ರವರಿ 19, 2021

ಸ್ಟೆಥೋಸ್ಕೋಪ್

                           ಸ್ಟೆಥೋಸ್ಕೋಪ್ 

ವೈದ್ಯಕೀಯ ವ್ಯಾಸಂಗ  ಮಾಡಲು ಅಪೇಕ್ಷಿಸುವವರು ' ಹೇಗೆ ಮೆಡಿಕಲ್ ಗೆ  ಸ್ಕೋಪ್ ಇದೆಯಾ ಎಂದು ಕೇಳಿದರೆ ಕೆಲವರು 'ಏನೂ  ಇಲ್ಲದ್ದಿದ್ದರೂ ಸ್ಟೆಥೋಸ್ಕೋಪ್ ಮತ್ತು ಮೈಕ್ರೋಸ್ಕೋಪ್ ಇದ್ದೇ ಇದೆ "ಎನ್ನುವರು . ಒಂದು ರೀತಿಯಲ್ಲಿ ವೈದ್ಯ ವೃತ್ತಿಯನ್ನು  ಸಂಕೇತಿಸುವ   ಉಪಕರಣ .. ಆಧುನಿಕ ವೈದ್ಯ ಶಾಸ್ತ್ರದ ಪ್ರಕಾರ ರೋಗಿಯ ಪರೀಕ್ಷೆ ಯಲ್ಲಿ  ಮುಟ್ಟುವುದು(Palpation),ತಟ್ಟುವುದು (Percussion)ಮತ್ತು  ಆಲಿಸುವುದು(Auscultation) ಮೂರು ಮುಖ್ಯ ಅನುಕ್ರಮ ವಿಧಾನಗಳು .

೧೮೧೬ ರಲ್ಲಿ ಫ್ರೆಂಚ್ ವೈದ್ಯ ಲೆನ್ನೆಕ್  ಇದರ ಮೂಲ ಆವೃತ್ತಿಯನ್ನು ಕಂಡು ಹಿಡಿದು ಬಳಕೆಗೆ ತಂದನು . ಅದು ಒಂದೇ ಕಿವಿಗೆ ಇಟ್ಟು  ಕೇಳುವ ಒಂದು ಕೊಳವೆ ಆಗಿತ್ತು .ಅದರ  ಒಂದು ತುದಿ  ರೋಗಿಯ ಎದೆಗೆ ಮತ್ತು ಇನ್ನೊಂದು ವೈದ್ಯರ ಕಿವಿಗೆ ಇಟ್ಟು  ಆಲಿಸಿದಾಗ  ಹೃದಯ ಬಡಿತ ಸ್ಪಷ್ಟ ವಾಗಿ ಕೇಳಿಸುತ್ತಿತ್ತು . ಧ್ವನಿ ವರ್ಧಕ ಇದ್ದಂತೆ 

                      

            ಮುಂದೆ ಇದು  ಆವಿಷ್ಕಾರ ಹೊಂದಿ  ಈಗ ಜನಪ್ರಿಯ ಆಗಿರುವ ಎರಡೂ  ಕಿವಿಗಳ ಮೂಲಕ ಅಳಿಸುವ ಉಪಕರಣ ಆಯಿತು . 

                   

ಇದರ ಉಪಯೋಗಗಳು  ಹಲವು . 

೧.  ರಕ್ತದ  ಒತ್ತಡ ಮಾಪನ . ಸಾಂಪ್ರದಾಯಕ ಬಿ ಪಿ . ಮಾಪಕಗಳಲ್ಲಿ ರಕ್ತದ ಒತ್ತಡ  

   ಅಳೆಯುವುದು .ಇದು ಅಷ್ಟು ಕಷ್ಟ ವೇನಲ್ಲ . ನೀವೂ  ನಾವೂ ಮಾಡ ಬಹುದು . 

೨.   ಎದೆಯ ಮೇಲೆ ಶ್ವಾಸೋಚ್ವಾಸ  ಗಳ  ಧ್ವನಿ ಮತ್ತು ಲಯ ಗಳ  ಪರಿಶೀಲನೆ . ಉದಾಹಣೆಗೆ  ಎದೆಯಲ್ಲಿ ಶ್ವಾಸ ಕೋಶದ ಹೊರಗೆ  ನೀರು ಅಥವಾ  ಗಾಳಿ ತುಂಬಿದ್ದರೆ
ಉಸಿರಿನ  ಶಬ್ದ  ಸರಿಯಾಗಿ ಕೇಳಿಸದು .ಅದೇ ನ್ಯುಮೋನಿಯಾ ಕಾಯಿಲೆ ಇದ್ದರೆ ದೊಡ್ಡದಾಗಿ  ಕೇಳಿಸುವುದು . ಅಸ್ತಮಾ ಕಾಯಿಲೆಯಲ್ಲಿ ಉಸಿರು ಹೊರ ಬಿಡುವಾಗ ಸುಯಿನ್ ಸುಯಿನ್ ಎಂಬ ಮತ್ತು  ಶ್ವಾಸ ಕೋಶದ ಸೋಂಕಿನಲ್ಲಿ ಮತ್ತು  ಹೃದಯ ವೈಫಲ್ಯದ ಕಾರಣ  ಪುಪ್ಪುಸದಲ್ಲಿ ನೀರು ನಿಂತಾಗ ಗುರು ಗುರು ಎಂಬ  ಕೋರಸ್ ಇರುವುದು . 

೩ . ಹೃದಯದ ಬಡಿತ  ಆಲಿಸುವುದು .  ಇದರಲ್ಲಿ ಲಬ್  ಡಬ್ ಲಬ್ ಡಬ್ ನ  ತೀಕ್ಸ್ನತೆ , ಗತಿ  ಮತ್ತು ಲಯ ವನ್ನು ಗಮನಿಸುವರು .ತಾಳ ತಪ್ಪಿದರೆ ತಿಳಿಯುವುದು .ಜತೆಗೆ  ಕವಾಟಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ  ಅವುಗಳ ಮೂಲಕ ರಕ್ತ ಸಂಚಾರದ   ಮರ್ಮರ  ಕೇಳಿಸುವುದು . 

೪ . ಕರುಳಿನ ಚಲನೆ  ಗುಳು ಗುಳು ಎಂದು ಆರೋಗ್ಯವಂತರಲ್ಲಿ ಕೇಳಿಸುವುದು .ಉದರದ ಮೇಲೆ ಸ್ಟೆಥೋಸ್ಕೋಪ್ ಇಟ್ಟು ಇದನ್ನು ಆಲಿಸುವರು . 

೫  ಗರ್ಭಿಣಿಯರಲ್ಲಿ ಶಿಶುವಿನ  ಹೃದಯ ಬಡಿತವನ್ನು ಕೇಳಲು  ಕೂಡ ಈ ಉಪಕರಣ ಉಪಯೋಗಿಸ  ಬಹುದು . 

  ಆಸ್ಪತ್ರೆಗೆ  ಹೋಗುವಾಗ  ಸರಳವಾದ ಉಡುಗೆ ತೊಡುಗೆ ಧರಿಸಿ ಹೋಗಬೇಕು . ಬಟ್ಟೆಯ ಮೇಲೆ  ಲೋಹದ ಅಥವಾ ಗಾಜಿನ  ಚಿತ್ತಾರಗಳು ಇದ್ದರೆ  ಸ್ಥೆಥೋಸ್ಕೋಪ್ ಇಟ್ಟಾಗ  ಘರ್ಷಣೆ ಆಗಿ ಆ ಶಬ್ದವೇ ಕೇಳಿಸಿ ಕಿರಿ ಕಿರಿ ಆಗುವುದು . 

ಇನ್ನು  ವೈದ್ಯರು ಕೂಡ  ಆಟಿಗೆಯಂತೆ  ಇದನ್ನು  ನೇಲಿಸಿ ಕೊಂಡು ಹೋಟೆಲ್ ,ಮಾಲ್ ಗಳಲ್ಲಿ ಪ್ರದರ್ಶಿಸುದು  ಶೋಭೆ ಅಲ್ಲ . ಮತ್ತು ಇದನ್ನು ಧರಿಸಿದವರಿಗೆ ಎಲ್ಲಾ ಇದರ ಉಪಯೋಗ ತಿಳಿದಿರ ಬೇಕು ಎಂದು ಇಲ್ಲ .ನಕಲಿ ವೈದ್ಯರೂ ಸ್ಟೆಥೋಸ್ಕೋಪ್  ಧಾರಿಗಳಾಗಿ ಕುಳಿತಿರುವರು . ಆದರೆ ಮನವರಿಯದುದ ಕಿವಿ ಕೇಳಿಸದು . ಹೊಟ್ಟೆ ಪಾಡಿಗಾಗಿ ತಮಗರಿವಿಲ್ಲದೇ ಮಾಡುವ ಪಾಪವ ಕ್ಷಮಿಸಿದರೂ  ಪತ್ತೆಯಾಗದ ರೋಗ ನಿಮ್ಮನ್ನು ಬಿಡದು .

ಸ್ಥೆಥೋಸ್ಕೋಪ್ ನ  ಕಿವಿ ಗೆ ಇಡುವ  ಭಾಗವನ್ನು   ಇಯರ್ ಪೀಸ್ ಎಂದೂ ಎದೆಯಲ್ಲಿ ಇಡುವುದನ್ನು ಚೆಸ್ಟ್ ಪೀಸ್ ಎಂದೂ ಕರೆಯುವರು .ಈ ಉಪಕರಣದ ಅತ್ಯಂತ ಮುಖ್ಯ  ಭಾಗ ಎರಡು  ಇಯರ್ ಪೀಸ್ ಗಳ  ನಡುವೆ (ಎಂದರೆ ನಮ್ಮ ಮೆದುಳು ) ಎಂದು ಹೇಳುವರು .


 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ