ಬೆಂಬಲಿಗರು

ಮಂಗಳವಾರ, ಸೆಪ್ಟೆಂಬರ್ 6, 2022

ಒಂದು ಅನುಭವ

ಹಿಂದೆ ರಾಜರು ,ಮಂತ್ರಿಗಳು ಪ್ರಜೆಗಳ ನಿಜ ಸ್ಥಿತಿ ಅರಿಯಲು ಮಾರು ವೇಷದಲ್ಲಿ ಹೋಗುತ್ತಿದ್ದರು . ಈಗ ಮಂತ್ರಿಗಳು ಬರುವ ಬಗ್ಗೆ ಅವರ ಕಚೇರಿಯಿಂದಲೇ ಸೂಚನೆ ಮೊದಲೇ ಹೋಗುತ್ತದೆ . ಸಂಚರಿಸುವ ದಾರಿ ದಿಢೀರ್ ರಿಪೇರಿ ಆಗುತ್ತದೆ ,ಬಡವರ ಗುಡಿಸಲು ಎತ್ತಂಗಡಿ ಆಗುತ್ತದೆ .ಎಲ್ಲರೂ ಸೌಖ್ಯ ಎಂದು ಬಿಂಬಿಸಲಾಗುತ್ತದೆ . ಯಾರಾದರೂ ಅಧಿಕ ಪ್ರಸಂಗಿ ತನ್ನ ನಿಜ ಕಷ್ಟದ ನಿವೇದನೆ ಮಾಡ ಹೋದರೆ ಸುತ್ತ ಮುತ್ತಲಿನವರು  ತಡೆಯುತ್ತಾರೆ . 

ಒಂದು ಸಾರಿ ನನ್ನ ಮನೆಯವರು ಮದುವೆ ಸಮಾರಂಭದಲ್ಲಿ ಒಬ್ಬ ಅಪರಿಚಿತ  ಮಹಿಳೆಯ ಜತೆ ಉಭಯ ಕುಶಲೋಪರಿ ಮಾತನಾಡುತ್ತಾ ನನ್ನ ಪತಿ ಇಂತಹ ಆಸ್ಪತ್ರೆಯಲ್ಲಿ ಡಾಕ್ಟರು ಎಂದು ಹೆಮ್ಮೆಯಿಂದ ಹೇಳಿ ಕೊಂಡರು . ಅದನ್ನು ಕೇಳಿದ ಕೂಡಲೇ ಆಕೆ ಸಿಟ್ಟಿಗೆದ್ದು ಅವರು ಇಂತಹ ಡಾಕ್ಟರರು ,ಒಂದು ಸ್ಕ್ಯಾನ್ ಮಾಡಿಸುವುದಿಲ್ಲ .ಮದ್ದು ಸರಿ ಕೊಡುವುದಿಲ್ಲ ಎಂದು ಮುಖದ ಮೇಲೆಯೇ ಹೇಳಿದರು . ಈ ಪ್ರಸಂಗದ ನಂತರ  ತನ್ನ ಪತಿಯ ವೃತ್ತಿಯ ಬಗ್ಗೆ ಸುವೋ ಮೋಟೋ ಸ್ಟೇಟ್ಮೆಂಟ್ ಕೊಡುವದುದು ನಿಲ್ಲಿಸಿದಳು . 

ಮೊನ್ನೆ ಭಾನುವಾರ ನಾನು ಕಲ್ಲಡ್ಕದಲ್ಲಿ ನನ್ನ ಬಂಧುವೊಬ್ಬರ ವೈಕುಂಠ ಸಮಾರಾಧನೆ ಗೆ ಬಸ್ಸಿನಲ್ಲಿ ಹೋಗುತ್ತಿದ್ದೆ . ದಾರಿಯಲ್ಲಿ ತುಂಬಾ ಧೂಳು ಇರುವುದರಿಂದ ಮಾಸ್ಕ್ ಹಾಕಿ ಕೊಂಡಿದ್ದೆ . ಅವರೂ ಕಲ್ಲಡ್ಕಕ್ಕೆ . ಎಂದಿನಂತೆ ಪಕ್ಕದ ಸೀಟಿನವರಲ್ಲಿ ಉಭಯ ಕುಶಲೋಪರಿ . ನನ್ನ ಪಕ್ಕದ ಸೀಟಿನಲ್ಲಿ ಇದ್ದವರು ಬೆಟ್ಟಂಪಾಡಿ ಬಳಿಯ ಕೃಷಿಕರು . ನನ್ನ ವೃತ್ತಿ ಕೇಳಲು ನನಗೆ  ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಕೆಲಸ ಎಂದೆ .ಡಾಕ್ಟರು ಎಂದು ಉದ್ದೇಶ ಪೂರ್ವಕ ಹೇಳಲಿಲ್ಲ .ಒಂದು ಡಾಕ್ಟರು ಎಂದ ಒಡನೆ ಅವರು ಆರಾಮವಾಗಿ ಮನ ಬಿಚ್ಚಿ ಮಾತನಾಡುವುದು ನಿಲ್ಲಿಸುತ್ತಾರೆ . ಇನ್ನೊಂದು ನನ್ನ ಪತ್ನಿಗೆ ಆದ ಅನುಭವ. ಅಲ್ಲದೆ ಡಾಕ್ಟರು ಆಗಿ ಇವರು  ಬಸಿನಲ್ಲಿ  ಪ್ರಯಾಣಿಸುವ ಗತಿಗೇಡು ಬಂತಲ್ಲಾ ಎಂದು ಪರಿತಪಿಸುವುದು ಬೇಡ ಎಂಬ ಉದ್ದೇಶ ಕೂಡಾ.

ನನ್ನ ಸಹಯಾತ್ರಿ ನಾನು ನಿಮ್ಮ ಆಸ್ಪತ್ರೆಗೆ ಬಹಳ ಸಾರಿ ಬಂದಿರುವೆನು .ಅಲ್ಲಿ ಡಾಕ್ಟರ್ ಎ ಪಿ ಭಟ್ ಎಂಬವರರದ್ದು ನನ್ನ ಕುಟುಂಬಕ್ಕೆ ಮದ್ದು ;ಎಂದರು . ಹೇಗೆ ಮದ್ದು ?ಎಂದೆ .ಪರವಾಗಿಲ್ಲ ಈಗ ಏನೂ ತೊಂದರೆ ಇಲ್ಲ .ಒಳ್ಳೆ ಡಾಕ್ಟರ್ ಎಂದರು .ಹಾಗೆ ಹೀಗೆ ಮಾತನಾಡುವಾಗ ಕಲ್ಲಡ್ಕ ಬಂತು .ಇಳಿದ ಮೇಲೆ ಜತೆಗೇ ಹೆಜ್ಜೆ ಹಾಕುವಾಗ ನನ್ನ ಮಾಸ್ಕ ತೆಗೆದೆ .ಅವರು ಕೂಡಲೇ ಅಚ್ಚರಿ ಮತ್ತು ಸಂತೋಷದಿಂದ ನೀವೇ ಅಲ್ವ ಸರ್ ನಮ್ಮ ಡಾಕ್ಟರು .ಮಾಸ್ಕ ಇದ್ದುದರಿಂದ ಗುರುತು ಸಿಗಲಿಲ್ಲ ಎಂದರು . ನಾನು ಹೇಳಿದೆ ಇಲ್ಲ ನನ್ನ ಬಗ್ಗೆ ಸರಿಯಾದ ಫೀಡ್ ಬ್ಯಾಕ್ ಸಿಕ್ಕಿತು ಸಂತೋಷ ಎಂದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ