ಬೆಂಬಲಿಗರು

ಮಂಗಳವಾರ, ಸೆಪ್ಟೆಂಬರ್ 20, 2022

ಮೊಳಹಳ್ಳಿ ಶಿವರಾಯರು


Shiv Aroor on Twitter: "Old photo! ♥️ Coimbatore in newly independent  India. The little one is my mum. The man in the middle is mum's maternal  grandpa Molahalli Shiva Rao, after whom

Not a day passes over the earth, but men and women of no note do great deeds, speak great words and suffer noble sorrows. -Charles Reade

ವಿ ಸೀ ಅವರ ವ್ಯಕ್ತಿ ಚಿತ್ರ ಸಂಪುಟ ೧ ಓದುತ್ತಿದ್ದೆ .ಅದರಲ್ಲಿ ಮೊಳಹಳ್ಳಿ ಶಿವರಾವ್ ಬಗ್ಗೆ ಒಂದು ಲೇಖನ ಇದೆ . ಚಾರ್ಲ್ಸ್ ರೀಡ್ ನ ಮೇಲಿನ ವಾಖ್ಯ ಉಲ್ಲೇಖ ಮಾಡಿ ಆರಂಭಿಸುತ್ತಾರೆ . ವಿ ಸೀ ಅವರ ಶಬ್ದಗಳಲ್ಲಿ "Of no note 'ಎಂಬ ಮಾತಿನಲ್ಲಿ ಲೋಕ ಪ್ರಖ್ಯಾತಿ ಬೇಕಿಲ್ಲ .ಈಗ್ಗೆ ೩೦-೪೦ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಖ್ಯಾತಿ ಇಂದಿನಂತೆ ದಾಂಧಲೆ ಮಾಡುತ್ತಿರಲಿಲ್ಲ .ವ್ಯಕ್ತಿಗಳು ತಮ್ಮ ತಮ್ಮ ಸ್ಥಾನ ದಲ್ಲಿ ತಮಗೆ ತೋರಿದಂತೆ ದೊಡ್ಡ ಬಾಳು ಬಾಳಿ ,ದೊಡ್ಡ ಕೆಲಸಗಳನ್ನು ಮಾಡಿ ,ಸುತ್ತಲ ಪ್ರದೇಶವನ್ನು ತಮ್ಮ ಕಾರ್ಯಗಳಿಂದ ಸಂಪನ್ನ ಗೊಳಿಸಿದ್ದಾರೆ .ಅಂತಹ ಮಹನೀಯರು ಒಬ್ಬರು ಮೊಳಹಳ್ಳಿ ಶಿವರಾಯರು .ನಾನು ಕಂಡ ಸಾರ್ವಜನಿಕ ಹಿತಸಾಧಕರಲ್ಲಿ ಸದ್ದು ಮಾಡದೇ ದುಡಿದ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಹಿರಿಯರು ಅವರು .ಅವರು ರಾಜಕೀಯಕ್ಕೆ ಕೈ ಹಾಕಲಿಲ್ಲ .ಪುತ್ತೂರು ತಾಲೂಕಿನಲ್ಲಿ ಅವರು ಮಾಡಿದ ಕೆಲಸ ವಿದ್ಯಾಭ್ಯಾಸದ ವಿಸ್ತರಣೆಗೂ ಜನದ ಆರ್ಥಿಕ ಹಿತಕ್ಕೂ ಮೀಸಲಾಯಿತು ."

 ತಂದೆ ರಂಗಪ್ಪಯ್ಯ ಪೊಲೀಸ್ ಅಧಿಕಾರಿ ಯಾಗಿದ್ದು ,ಅವರು ಪುತ್ತೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮೊಳಹಳ್ಳಿ ಶಿವರಾಯರ ಜನನ ೧೮೮೦ ರಲ್ಲಿ ಆಯಿತು .ಶಿವರಾಯರು ವಕೀಲರಾಗಿ ಇಲ್ಲಿಯೇ ವೃತ್ತಿ ಜೀವನ ಆರಂಭಿಸುವುದಾಯಿತು . ಅದು ಪುತ್ತೂರಿನ ಭಾಗ್ಯ . ಇಲ್ಲಿನ ವಿದ್ಯಾಭ್ಯಾಸ ಸಾಂಸ್ಕೃತಿಕ ರಂಗದಲ್ಲಿ ಹೊಸ ಗಾಳಿ ಬೀಸುವಂತೆ ಆಯಿತು . ಶಿವರಾಮ ಕಾರಂತರ ಸರ್ವ ಚಟುವಟಿಕೆಗಳಿಗೂ ಇವರೇ ಬೆನ್ನೆಲುಬು . ನಮ್ಮ ಜಿಲ್ಲೆಯ ಸಹಕಾರಿ ಚಳುವಳಿಯ ಆರಂಭದ ಹರಿಕಾರ ,ಈಗಿನ ಜಿಲ್ಲಾ ಸಹಕಾರ ಬ್ಯಾಂಕ್ ಸ್ಥಾಪನೆಗೆ ಅಡಿಗಲ್ಲು ಆಯಿತು . ಏಷ್ಯದಲ್ಲಿಯೇ ಮೊದಲ ಬಾರಿಗೆ ಪ್ರಥಮ ಎನ್ನಲಾದ ಸರಕಾರಿ ಮುದ್ರಣಾಲಯ ಶಿವರಾಯರು ಮಂಗಳೂರಿನಲ್ಲಿ ತೆರೆದರು . 

ಶಿವರಾಯರು ಪ್ರಸಿದ್ಧ ವಕೀಲರಾಗಿದ್ದರೂ ತಿಂಗಳ ಖರ್ಚಿಗೆ ಆಗುವಷ್ಟೇ ಕೇಸ್ ಕೈಗೆತ್ತಿ ಕೊಂಡು ,ಹೆಚ್ಚಿನ ಸಮಯ ಸಾರ್ವಜನಿಕ ಕೆಲಸಗಳಲ್ಲಿ ವಿನಿಯೋಗಿಸುತ್ತಿದ್ದರು . ವೈಯುಕ್ತಿಕ ಕಾರ್ಯಕ್ಕೆ ಧನ ಶೇಖರಣೆ ಇಲ್ಲ .ಇವರ ಮಗಳ ಮದುವೆಗೆ ಊರವರೇ ಹೊರೆ ಕಾಣಿಕೆ ಮಾಡಿ ವಿಜೃಂಭಣೆಯಿಂದ ಊರವರು ಮನೆ ಸಮಾರಂಭ ಎಂಬಂತೆ ಆಚರಿಸಿದರು ಎಂದು ವಿ ಸೀ ಬರೆದಿದ್ದಾರೆ . ಮದುವೆಗೆ ಎಂದು ಊರವರು ಸಂಗ್ರಹಿದ ಜೀನಸು ತರಕಾರಿ ಇತ್ಯಾದಿ ಉಳಿದಿದ್ದನ್ನು ಇಟ್ಟುಕೊಳ್ಳದೆ ಊರವರಲ್ಲಿ ಹಂಚಿದರು . ಅದೇ ಲೇಖನದಲ್ಲಿ ವಿ ಸೀ ಪುತ್ತೂರಿನ ಪ್ರಸಿದ್ಧ ವಕೀಲರಾಗಿದ್ದ ಶ್ರೀ ಸಿ ಎಸ  ಶಾಸ್ತ್ರೀ ಯವರ ಒಂದು ಮಾತು ಉಲ್ಲೇಖ ಇದೆ .'ನಾನು ಗೆಲ್ಲಬಹುದು ಎಂದು ವಿಶ್ವಾಸ ಇರುವ ಮತ್ತು ಸಾವಿರ ರೂಪಾಯಿ ಫೀಸ್ ಸಿಗುವ ಕೇಸ್ ಬಂದರೂ ಶಿವರಾಯರು ಬೇಡ ಎಂದರೆ ತೆಗೆದು ಕೊಳ್ಳುವುದಿಲ್ಲ "

"ತಾಲೂಕಿನ ಯಾವ ಶಾಲೆಯಲ್ಲಿ ಏನು ಉತ್ಸವ ನಡೆಯಲಿ ಅವರು ಹೋಗ ಬೇಕು .ಒಂದು ದುಂಡು ತೋಳಿನ ಖಾದಿ ಬನಿಯನ್ .ಒಂದು ತುಂಡು ಪಂಚೆ ,ಒಂದು ಟವೆಲ್ ಅಷ್ಟೇ ಅವರ ಸಜ್ಜು .ಕರೆದು ಕೊಂಡು ಹೋಗಲು ಗಾಡಿ ಬರದಿದ್ದರೆ ನಡೆದು ಕೊಂಡೇ ಹೋಗುವರು . ಶಾಲೆಯ ಎರಡು ಬೆಂಚ್ ಜೋಡಿಸಿ ,ತೋಳನ್ನು ತಲೆ ತಿಂಬು ಮಾಡಿ ರಾತ್ರಿ ಮಲಗಿದ್ದು ಬರುವುದು ವಾಡಿಕೆ . ಸಭೆಗಲ್ಲಿ ಹೆಚ್ಚು ಮಾತಾಡುವ ಅಭ್ಯಾಸ ಇಲ್ಲ .ಊರಿನ ಮುಂದಾಳುಗಳನ್ನು ಹುರಿ ಗೊಳಿಸುವದು ,ಕೆಲಸದಲ್ಲಿ ತೊಡಗಿಸುವುದು ,ಹಣ ಮುಂತಾದ ಸಹಾಯ ಬೇಕಿದ್ದರೆ ಏರ್ಪಡಿಸುವುದು ಅವರ ಕೆಲಸ . 

 ಶಿವರಾಯರ  ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಮೈಸೂರು ರಾಜರ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ವಿಶೇಷ ಆಹ್ವಾನಿತರಾಗಿ ಕರೆದು ಸನ್ಮಾನಿಸಿದ್ದಾರಂತೆ .

ಪುತ್ತೂರಿನಲ್ಲಿ ಸ್ವಾತಂತ್ಯ ಹೋರಾಟ ಕಾಲದಲ್ಲಿ ಸಕ್ರಿಯ ವಾಗಿದ್ದು ದಲ್ಲದೆ ತಮ್ಮ ತಮ್ಮ ವೃತಿಯಲ್ಲೂ ಹೆಸರು ಮಾಡಿದ್ದ ವಕೀಲ ಸದಾಶಿವ ರಾವ್ ,ಡಾ ಸುಂದರ ರಾವ್ ಮತ್ತು ಶಿವರಾಮ ಕಾರಂತ ಇವರೆಲ್ಲಾ ಮೊಳಹಳ್ಳಿಯವರಂತೆ ಕುಂದಾಪುರ ಮೂಲದವರು .ಇಲ್ಲಿಯೇ ನೆಲೆಸಿ ಪುತ್ತೂರು ಪರಿಸರದ ಮತ್ತು ಜತೆಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣ ರಾದರು ಎಂಬುದು ಒಂದು ವಿಶೇಷ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ