ಬೆಂಬಲಿಗರು

ಶನಿವಾರ, ಸೆಪ್ಟೆಂಬರ್ 24, 2022

ಇಷ್ಟು ದಿನ ಈ ವೈಕುಂಠ

            ಐ ಸಿ ಯು ವೈರಾಗ್ಯ 

ವಾರಗಳ ಹಿಂದೆ  ಕುತ್ತಿಗೆ ಬಳಿ ಸಂಕಟ ಬಂದು ಮಂಗಳೂರಿನ ಆಸ್ಪತ್ರೆಗೆ ಕೂಡಲೇ ಹೋಗಿ ನೋಡಿದಾಗ ಹೃದಯದ ಒಂದು ರಕ್ತ ನಾಳದಲ್ಲಿ ಬ್ಲಾಕ್ ಕಂಡು ಬಂದು ಅದನ್ನು ತಗೆದರು . ಆಮೇಲೆ ನನ್ನನ್ನು ತೀವ್ರ ನಿಗಾ ಕ್ಕೆಂದು ಐ ಸಿ ಯು ಗೆ ದಾಖಲಿಸಿದರು . ಆಸ್ಪತ್ರೆಯಲ್ಲಿ  ರೋಗಿಯಾಗಿ ನನ್ನ ಮೊದಲ ಅನುಭವ . ತೀವ್ರ ನಿಗಾ ವಿಭಾಗದಲ್ಲಿ  ದಾಖಲಾಗುವರಿಗೆ ಎಲ್ಲರಿಗೂ ಒಂದೇ ಸಮವಸ್ತ್ರ . ಶ್ರೀಮಂತ ಬಡವ  ಹೆಚ್ಚು ಏಕೆ ಗಂಡು ಹೆಣ್ಣು ಎಂಬ ಭೇದ ವೂ ಐ ಸಿ ಯು ವಿನಲ್ಲಿ ಇಲ್ಲಾ . 

ನನ್ನ ಎರಡು  ಎರಡು ಕೈಗಳಿಗೂ ಡ್ರಿಪ್ ಹಾಕಿದ್ದರು .ಒಂದರಲ್ಲಿ ರಕ್ತದ ಒತ್ತಡ ಕಡಿಮೆ ಆಗದಂತೆ ,ಇನ್ನೊಂದರಲ್ಲಿ ರಕ್ತ ಹೆಪ್ಪುಗಟ್ಟದಂತೆ .;ಇನ್ಫ್ಯೂಶನ್ ಪಂಪ್ ಎಂದು ಇದೆ .ಅದು ನಾವು ಆಜ್ಞಾಪಿಸಿದ್ದಷ್ಟು ಡ್ರಿಪ್ ಪೂರೈಕೆ ಮಾಡುತ್ತದಲ್ಲದೆ ,ಮುಗಿದಾಗ ಅಥವಾ ಡ್ರಿಪ್ ಕೊಳವೆಯಲ್ಲಿ ಏನಾದರೂ ಅಡ್ಡಿ ಅಲಾರಾಂ ಮಾಡುವ ವ್ಯವಸ್ಥೆ ಇದೆ . ನನ್ನ ಎದೆಗೆ ಈ ಸಿ ಜಿ ಲೀಡ್ಸ್ ಹಾಕಿ ಮಾನಿಟರ್ ಗೆ ಕನೆಕ್ಟ್ ಮಾಡಿದ್ದು ಅದು ಬೀಪ್ ಮಾಡುತ್ತಿತ್ತು .ನನ್ನ ಮಾನಿಟರ್ ಗೆ ದೇವಸ್ಥಾನದ ಗಂಟೆಯ ಶಬ್ದ ಇದ್ದು ಕಿವಿಗೆ ಹಿತವಾಗಿ ಇತ್ತು . ಕೈಯ ಬೆರಳಿಗೆ ಪಲ್ಸ್ ಒಕ್ಸಿ ಮೀಟರ್ ಸಿಕ್ಕಿಸಿದ್ದರು . ಇವುಗಳೆಲ್ಲದರ ಬೀಪ್ /ಅಲಾರಾಂ ಸೇರಿ ಒಂದು ಫ್ಯೂಷನ್ ಮ್ಯೂಸಿಕ್ ನಂತೆ ಕೇಳುತ್ತಿತ್ತು . ನಾನು ಸಂಪೂರ್ಣ ಎಚ್ಚರ ಇರುವ ವೈದ್ಯ ರೋಗಿ ಆದುದರಿಂದ ಅಕ್ಕ ಪಕ್ಕದಲ್ಲಿ ಬೀಪ್ /ಅಲಾರಾಂ ವ್ಯತ್ಯಾಸ ಆದಾಗ ಕೂಡಲೇ ತಿಳಿಯುತ್ತಿತ್ತು . ಅದಲ್ಲದೆ ನನ್ನ ಮಾನಿಟರ್ ಕೂಡಾ ತಿರುಗಿ ಆಗಾಗ ನೋಡುವ ಕುತೂಹಲ . 

ದೊಡ್ಡ ಆಸ್ಪತ್ರೆಗಳ ಲ್ಲಿ  ಹಲವು ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಗಳು ಇದ್ದು ಐ ಸಿ ಯು ವಿನಲ್ಲಿ ಇರುವ ಒಬ್ಬ ರೋಗಿಯನ್ನು ಕನಿಷ್ಠ ಮೂರು ನಾಲ್ಕು ಸಬ್ ಸ್ಪೆಷಾಲಿಟಿ ವೈದ್ಯರು ನೋಡ ಬರುವರು .ಮೊದಲು ಅಸಿಸ್ಟೆಂಟ್ ವೈದ್ಯರು ,ಆಮೇಲೆ ಮುಖ್ಯಸ್ಥರು ಜತೆ ಗೂಡಿ 'ಪ್ರತಿ ಸಾರಿಯೂ  ಸಿಸ್ಟರ್ಸ್ ಗಳು ಬಂದು ಮಾಹಿತಿ ನೀಡಿ ಆರ್ಡರ್ ತೆಗೆದು ಕೊಳ್ಳ ಬೇಕು . ಅವರ ಕೆಲಸ ತುಂಬಾ ಕಷ್ಟ .ಯಾವುದನ್ನೂ ಒಂದೇ ಬಾರಿಗೆ ಪೂರ್ಣವಾಗಿ ಮಾಡಿ ಮುಗಿಯಿತು ಎಂದು ಕೊಳ್ಳುವ ಹಾಗೆ ಇಲ್ಲ . ನಡುವೆ ಹೊಸ ರೋಗಿಗಳ ಚಾರ್ಜ್ ತೆಗೆದು ಕೊಳ್ಳುವುದು ,ಉತ್ತಮ ವಾದ ವರನ್ನು ವಾರ್ಡ್ಗೆ ಕಳಿಸುವುದು ;ಎಲ್ಲಾ ಮಾಡಬೇಕು .ಔಷಧಿ ಇಂಡೆಂಟ್ ಮಾಡಬೇಕು .ನಡುವೆ ಕಂಡೀಶನ್ ಸೀರಿಯಸ್ ಆದರೆ ಅಲ್ಲಿಗೆ ಓಡ ಬೇಕು . ನಾನಿದ್ದ ತೀವ್ರ ನಿಗಾ ದಲ್ಲಿ ಕೊಂಕಣಿ ಮತ್ತು ತುಳು ಮಾತನಾಡುವ ಸಿಸ್ಟೆರ್ ಗಳು ಮತ್ತು ಆಯಾ ಗಳು ಇದ್ದು ರೋಗಿಗಳನ್ನು ಚೆನ್ನಾಗಿ ನೋಡಿ ಕೊಳ್ಳುತ್ತಿದ್ದರು . 

ರಾತ್ರಿ ಹೊತ್ತು ನನ್ನ ಎದುರು ಅಕ್ಕ ಪಕ್ಕದ ಬೆಡ್ ಗಳಲ್ಲಿ ಇದ್ದ ಓರ್ವ ಹಿರಿಯರು ತನ್ನಷ್ಟಕ್ಕೆ ತಾವೇ ಮಾತನಾಡುವುದು ,ಪಕ್ಕದ ಬೆಡ್ ನಲ್ಲಿ ಅರೆ ನಿದ್ದೆಯಲ್ಲಿ ಇದ್ದವರು ಅದಕ್ಕೆ ಉತ್ತರ ನೀಡುವದು ನಡೆದಿತ್ತು . 

ಐ ಸಿ ಯು ವಿನಲ್ಲಿ ಇರುವಾಗ ಸಾವಿನ ಭಯ ದೂರ ಹೋಗುತ್ತದೆ .ಗಂಭೀರ ಅತಿ ಗಂಭೀರ ರೋಗಿಗಳ ನಡುವೆ ಇರುವಾಗ  ನಾವು ಆ ಕಡೆ ಅಥವಾ ಈ ಕಡೆ ಹೋಗಲು ಯಾವುದೇ ಸಂಕಟ ಇಲ್ಲದೆ ತಯಾರಾಗುತ್ತೇವೆ .ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ಎನ್ನುವ ವಿದ್ಯಾ ಭೂಷಣ ರ ದೇವರ ನಾಮ ನೆನಪಿಗೆ ಬರುತ್ತಿತ್ತು . 

ನಮ್ಮ ಶರೀರದಲ್ಲಿ ಮೆದುಳು ಕೆಲಸ ಮಾಡುತ್ತಿದ್ದರೆ ಮಾತ್ರ ನಾವು ಇರುವುದು ಮತ್ತು  ಹೆಂಡತಿ ಮಕ್ಕಳು ,ಬಂಧುಗಳು ,ಮನೆ ,ಆಸ್ತಿ ,ಬ್ಯಾಂಕ್ ಡೆಪಾಸಿಟ್ ,ಫೇಸ್ ಬುಕ್ ,ವಾಟ್ಸ್ ಆಪ್  , ಹರಿಪ್ರಸಾದ್ ಹೋಟೆಲ್ ಮಸಾಲೆ ದೋಸೆ ಗಡ್ಬಡ್ ಇತ್ಯಾದಿ ಗಳಿಗೆ ಅಸ್ತಿತ್ವ . ಮೆದುಳು ಕಾರ್ಯ ನಿರ್ವಹಿಸಲು ಹೃದಯ ರಕ್ತ ಪಂಪ್ ಮಾಡಿ ಆಮ್ಲ ಜನಕ ಮತ್ತು ಆಹಾರ ಸರಬರಾಜು ಮಾಡಬೇಕು . ಯಾವುದು ಕೆಟ್ಟರೂ ಅಸ್ತಿತ್ವಕ್ಕೆ ಅಪಾಯ ಇತ್ಯಾದಿ ಸತ್ಯ ಆಗಾಗ ಮನ ಪಟಲದ ಮುಂದೆ ಬರುವದು . 

ಹೀಗೆಯೇ  ೨೪ ಗಂಟೆ ತೀವ್ರ ನಿಗಾದಲ್ಲಿ ಕಳೆದು ರಾತ್ರಿ ಒಂದಿಷ್ಟು ನಿದ್ದೆ ಮಾಡದೇ ನಾನು ಮರುದಿನ ವಾರ್ಡ್ ಗೆ ರವಾನಿಸ ಲ್ಪಟ್ಟೆ . ತೀವ್ರ ನಿಗಾದಲ್ಲಿ ಇದ್ದ ಅತ್ಯಂತ ಆರೋಗ್ಯವಂತ ನಾನೇ ಆಗಿದ್ದು ,ಸ್ಟಾಫ್ ನವರಿಗೆ ಹೆಚ್ಚು ತೊಂದರೆ ಕೊಡದೇ ಬಂದ ಸಮಾಧಾನ .

ಆಸ್ಪತ್ರೆಯ ವಾರ್ಡ್ಗಳಲ್ಲಿ  ಚಲಿಸುವ ಸಿಸ್ಟರ್ಸ್ ಗಳು ಸ್ಥಾವರ  ;ವೈದ್ಯರು ಜಂಗಮರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ