ಬೆಂಬಲಿಗರು

ಶುಕ್ರವಾರ, ಸೆಪ್ಟೆಂಬರ್ 30, 2022

ಒಂದು ಹಾಡಿನ ನೆನಪು

ಹಿಂದೊಮ್ಮೆ ಮಲಯಾಳಂ ಚಿತ್ರ ಗೀತೆ ಕಾವ್ಯ ಪುಸ್ತಕಮಲ್ಲೋ ಜೀವಿತಮ್ ಎಂಬ ನನ್ನ ಇಷ್ಟದ ಹಾಡು ನಿಮ್ಮೊಡನೆ ಹಂಚಿ ಕೊಂಡಿದ್ದೆ . ಇದರ ಭಾವಾರ್ಥ 

ಜೀವನ ಒಂದು ಕಾವ್ಯ ಪುಸ್ತಕ ,ಇದರಲ್ಲಿ ಲೆಕ್ಕ ಬರೆಯಲು ಹಾಳೆಗಳು ಇಲ್ಲ ,ಇದರ ಒಂದೊಂದು ರಸನಿಮಿಷ ಆಸ್ವಾದಿಸಬೇಕು , ಮೂರ್ಖರು ಮಾತ್ರ ಇದರಲ್ಲಿ ಕೂಡಿ ಕಳೆಯುವ ಲೆಕ್ಕ ಬರೆಯುವರು . ಜೀವವೆಂಬ ಬೆಳಕಿನಲ್ಲಿ ಇದರ ರಸಾಸ್ವಾದ ಮಾಡಬೇಕು ,ಒಮ್ಮೆ ಆ ಬೆಳಕು ಆರಿದರೆ ಎಲ್ಲಾ ಶೂನ್ಯ ಅಂಧಕಾರ .

ಇಂದು ಜಿ ಎಸ್ ಶಿವರುದ್ರಪ್ಪ ಅವರ ಹಣತೆ ಕವಿತೆ ಮತ್ತೆ ಓದುವಾಗ ಯಾಕೋ ಈ ಗೀತೆ ಮತ್ತೆ ನೆನಪಾಯಿತು .ಅದರ ಸಾಲುಗಳು ಹೀಗೆ ಇವೆ .

 

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.
 

ಬುಧವಾರ, ಸೆಪ್ಟೆಂಬರ್ 28, 2022

ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ

               ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ 

            



ನನ್ನಲ್ಲಿ ಬಹಳ ಮಂದಿ ನಿಮಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಹೇಗೆ ಬಂತು ?ಎಂದು ಪ್ರಶ್ನಿಸುತ್ತಾರೆ . 

ನಮ್ಮ ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ . ಅಜ್ಜನ ಮನೆ ದಾಟಿ ಮುಂದೆ ಹೋದರೆ ನೆಲ್ಲಿಕುಂಜೆ ಗುತ್ತು .ಗುತ್ತು ಗೋವಿಂದ ಭಟ್ ಎಂಬವರು ತಮಿಳು ನಾಡಿಗೆ ಹೋಗಿ ಸಂಗೀತ ಕಲಿತು ಬಂದು ಪ್ರಸಿದ್ಧ ವಯಲಿನ್ ವಾದಕ ಎಂದು ಹೆಸರು ಪಡೆದಿದ್ದು ಆಸಕ್ತರಿಗೆ ಕಲಿಸುತ್ತಿದ್ದರು . ಅವರ ಮಗಳನ್ನು ನನ್ನ ದೊಡ್ಡಪ್ಪ ಸಿನೆಮಾ ನಟ ಗಣಪತಿ ಭಟ್ ಅವರಿಗೆ ಮದುವೆ ಮಾಡಿ ಕೊಟ್ಟುದರಿಂದ ನಮ್ಮ ಬಂಧುವೂ ಆಗಿದ್ದರು . ಮಗ  ವಿಘ್ನೇಶ್ವರ ಭಟ್ ಮೃದಂಗ ದಲ್ಲಿ ,ಸದಾಶಿವ ಭಟ್ ಕೊಳಲು ಮತ್ತು ಪಿಟೀಲು ,ಬಾಲಸುಬ್ರಹ್ಮಣ್ಯಂ ಮೋರ್ಸಿಂಗ್ ವಾದನದಲ್ಲಿ ನುರಿತವರಾಗಿ ಇದ್ದು ನಮ್ಮ ಮನೆಯಲ್ಲಿ ಕೂಡಾ ಕೆಲವು ಕಚೇರಿ ನಡೆಸಿದ್ದರು .ನನ್ನ ದೊಡ್ಡಪ್ಪನ ಮಗಳು ಪುಷ್ಪಲತಾ ಅಕ್ಕ ಮದ್ರಾಸ್ ನಲ್ಲಿ ಸಂಗೀತ ಕಲಿಯುತ್ತಿದ್ದು ಊರಿಗೆ ಬಂದಾಗ ಸಣ್ಣ ಸಣ್ಣ ಕಚೇರಿ ನಡೆಯುವುದು . 

ನನ್ನ ದೊಡ್ಡ ಅಕ್ಕ ಪರಮೇಶ್ವರಿ ನನಗಿಂತ ಎಂಟು ವರ್ಷ ದೊಡ್ಡವಳು . ಅವಳ ಬಾಲ್ಯ ,ಶಿಕ್ಷಣ ನನ್ನ ಅಜ್ಜನ ಮನೆಯಲ್ಲಿ . ಅವಳು ಕೂಡಾ ಗುತ್ತು  ಗೋವಿಂದ ಅಜ್ಜನವರ ಬಳಿ ಹಾಡುಗಾರಿಕೆ ಮತ್ತು ಪಿಟೀಲು ಕಲಿಯುತ್ತಿದ್ದ್ದು ರಜೆಯಲ್ಲಿ  ಮನೆಗೆ ಬಂದಾಗ ' ರಾ ರಾ ವೇಣು  ಗೋಪಾ ಬಾ ಲಾ , ಲಂಬೋದರ ಲಕುಮಿಕರಾ ನುಡಿಸುತ್ತಿದ್ದ ನೆನಪು ಇದೆ . ನನಗೆ ಸರಿ ಅರಿವು ಮೂಡುವಾಗ ಅವಳ ಮದುವೆ ಆಗಿ ಗಂಡನ ಮನೆಗೆ ಹೋಗಿ ಆಗಿತ್ತು . 

ಮದುವೆ ಆದ ಬಳಿಕ ಸಂಗೀತ ಕ್ಕೆ ವಿರಾಮ ಬಿದ್ದು ,ಪಿಟೀಲು ಅಟ್ಟ ವೇರಿತ್ತು .ಮತ್ತೆ ನಾಲ್ಕು ಮಕ್ಕಳು ಆದ ಮೇಲೆ ಅವಳಿಗೆ ಸಂಗೀತ ಕಲಿಕೆ ಮುಂದುವರಿಸುವ ಹುಕ್ಕಿ ಬಂದು ,ಅಟ್ಟದಿಂದ ಪಿಟೀಲು ಕೆಳಗಿರಿಸಲು ವಾತಾಪಿ ಗಣಪತಿಯ ವಾಹನ ದ ಮರಿಗಳು ಅದರ ಹೊರಗಿಂದ ಒಂದೊಂದೇ ಬಂದವು .ಅದನ್ನೆಲ್ಲ ಸರಿ ಪಡಿಸಿ ,ತನ್ನ ದೊಡ್ಡ ಮಗಳು ಉಷಾ ಳನ್ನು ಕರೆದು ಕೊಂಡು ಕಾಂಚನ ಐಯ್ಯರ್ ಬಳಿಗೆ ಹೋಗಿ ತಾಯಿ ಮಗಳು ಇಬ್ಬರೂ ಶಿಷ್ಯ ವೃತ್ತಿ ಸ್ವೀಕರಿಸಿದರು .ಆಗ ಅಕ್ಕನ ಮನೆಯಿಂದ ಆರು ಮೈಲು ಉಪ್ಪಿನಂಗಡಿಗೆ ನಡೆದು ಹೋಗ ಬೇಕು .ಅಲ್ಲಿಂದ ಕಾಂಚನಕ್ಕೆ . ಹೀಗೆ ಮಧ್ಯ ವಯಸ್ಸಿನಲ್ಲಿ ಸಂಗೀತ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಮಾಡಿದಳು .ಆಗೆಲ್ಲಾ ಈ ಪರೀಕ್ಷೆ ಮಂಗಳೂರಿನಲ್ಲಿ ನಡೆಯುತ್ತಿದ್ದು ಒಂದು ಪರೀಕ್ಷೆಗೆ ನಾನೇ ಕರೆದು ಕೊಂಡು ಹೋಗಿದ್ದೆ . 

ಪರಿಸರದವರು ಸಂಗೀತ ಕಲಿಯಲು ಕಷ್ಟ ಆಗುವುದನ್ನು ಕಂಡು ಮುಂದೆ ಇಳಂತಿಲ ಮತ್ತು ಉರುವಾಲು ಪದವಿನಲ್ಲಿ ಕಾಂಚನ ಶಿಷ್ಯೆಯರಿಂದ  (ಶ್ರೀಮತಿ ಮೀನಾಕ್ಷಿ ಟೀಚರ್ ಎಂಬುವರು ಚೆನ್ನಾಗಿ ಕಲಿಸುತ್ತಿದ್ದರು ) ಸಂಗೀತ ತರಗತಿಗಳನ್ನು ಆರಂಭಿಸುವಲ್ಲಿ ನನ್ನ ಸಹೋದರಿಯ ಪ್ರಯತ್ನ ಗಮನಾರ್ಹ . ಅಕ್ಕನ ಮಗಳು ಉಷಾ ಮುಂದೆ ಎಂ ಎಸ ಶೀಲಾ ಅವರಲ್ಲಿ ಅಭ್ಯಾಸ ಮುಂದುವರಿಸಿ ವಿದುಷಿ ಆದರೆ ಅವಳ ಮಗಳು ಶಿಖಾ ಇಂಜಿನಿಯರ್ ಪದವೀಧರೆ ಕೂಡಾ ತಾಯಿಯ ಪರಂಪರೆ ಮುಂದುವರಿದ್ದಾಳೆ . 

ನನ್ನ ಎರಡನೇ ಅಣ್ಣ ಕೃಷ್ಣ ಭಟ್ ಸುರತ್ಕಲ್ ನಲ್ಲಿ ಇಂಜಿನಿಯರಿಂಗ್ ಕಲಿಯುವಾಗ ಅಲ್ಲಿ ವೇಣು ವಾದನ ಕಲಿಯುತ್ತಿದ್ದು ,ಈಗ ಇಳಿ ವಯಸ್ಸಿನಲ್ಲಿಯೂ ಅದನ್ನು ಮುಂದು ವರಿಸಿರುವನು . 

ನನ್ನ ಚಿಕ್ಕಮ್ಮ ಸಾವಿತ್ರಿ ಅಮ್ಮ ,ಹಿಂದೂಸ್ತಾನಿ ಹಾಡುಗಾರಿಕೆ ಕಲಿತಿದ್ದು ,ವಾರಕ್ಕೊಮ್ಮೆ ಹಾರ್ಮೋನಿಯಂ ಹಿಡಿದು ಸುಶ್ರಾವ್ಯ ವಾಗಿ ಹಾಡುವಾಗ ನಾವು ಮಕ್ಕಳು ಸುತ್ತಲೂ ಕುಳಿತು ಕೇಳುತ್ತ್ತಿದೆವು . 

ಮೊನ್ನೆ ಬಹುವಚನಮ್ ನಲ್ಲಿ  ಶ್ರೀಶ ಕುಮಾರ್ ಅವರ ಸಹೋದರಿಯರು ನನ್ನ ಅಕ್ಕ ಮತ್ತು ಸೊಸೆಯ ಸಂಗೀತ ಸಾಂಗತ್ಯ ಪುನಃ ಪುನಃ ನೆನೆಸಿ ಕೊಂಡಾಗ ಇದೆಲ್ಲಾ ಜ್ಞಾಪಕಕ್ಕೆ ಬಂತು  .

 Violin - Wikipedia

ಭಾನುವಾರ, ಸೆಪ್ಟೆಂಬರ್ 25, 2022

ಇಂದು ಬರುವರು ನನ್ನ ಗುರುಗಳು

 ಇಂದಿನ ಕಾರ್ಯಕ್ರಮಕ್ಕೆ ನನ್ನ ಮೂವರು ಗುರುಗಳು ಬರುವುದು ನನ್ನ ಭಾಗ್ಯ. 

ಒಬ್ಬರು ಶ್ರೀ ರಾಮ ರಾವ್ .ಪ್ರಾಥಮಿಕ ಶಾಲೆಯಲ್ಲಿ ನನ್ನ ಪಿ  ಟಿ ಟೀಚರ್ . ಕಬಡಿ ,ಕುಟ್ಟಿ ದೊಣ್ಣೆ ,ತಲೆಮು ಮತ್ತು ಕೊಟ್ಟಣಿಕೆ ಕ್ರಿಕೆಟ್ (ಹುಡುಗಿಯರಿಗೆ ಜಿಬಿಲಿ )ಮಾತ್ರ ಸ್ಪೋರ್ಟ್ಸ್ ಅಂಡ್ ಗೇಮ್ಸ್ ಆಗಿದ್ದ ನಮಗೆ ನಿಜವಾದ ಕ್ರಿಕೆಟ್ ,ವಾಲಿ ಬಾಲ್ ,ಖೋಖೋ ,ಶಾಸ್ತ್ರೀಯ ಕಬಡಿ ಇತ್ಯಾದಿ ಪರಿಚಯಿಸಿದವರು ;; ಶಾಲೆಯಲ್ಲಿ ಭಾರತ ಸೇವಾದಳ ಆರಂಭಿಸಿದವರು .ಶಿಸ್ತಿನ ಸಿಪಾಯಿ .ಈಗಲೂ ಅವರ ಸ್ವರ ಕೇಳಿದೊಡನೆ ಅಟೆನ್ಷನ್ ಆಗುವೆನು . 

ಎರಡನೆಯವರು ಶ್ರೀ ಶ್ರೀಪತಿ ರಾವ್ ಅವರು.ಇವರು ಮಾಧ್ಯಮಿಕ ಶಾಲೆಯಲ್ಲಿ ಗುರುಗಳು  . ಮಾದರಿ ವಿಜ್ಞಾನ ಶಿಕ್ಷಕ ಹೇಗೆ ಇರಬೇಕು ಎಂದು ತೋರಿಸಿ ಕೊಟ್ಟವರು . ಜೋಪಾನವಾಗಿ ಕೂಡಿಟ್ಟ ಪ್ರಯೋಗಾಲಯದ ಉಪಕರಣಗಳನ್ನು ಹೊರ ತೆಗೆದು ಪ್ರಾತ್ಯಕ್ಷಿಕೆ ನಡೆಸಿ ತೋರಿಸಿ ವಿಜ್ಞಾನ ದ ಹೊಸ ಲೋಕ ತೆರೆದು ತೋರಿಸಿದವರು .ತರಗತಿ ಆರಂಭಕ್ಕೆ ಮುನ್ನ ಬಂದು ಕರಿಹಲಗೆಯಲ್ಲಿ ಅಂದವಾದ ಡಯಾಗ್ರಾಮ್ ಮಾಡುವರು ,ಅಷ್ಟು ಸಮಯ ಉಳಿಯಲಿ ಎಂದು .ಶಾಲೆಯಲ್ಲಿ ವಿಜ್ಞಾನ ಸಂಘ ಆರಂಭಿಸದವರು . ಮುಂದೆ ಇವರು ಕಲಾ ವಿಷಯದಲ್ಲಿ ಎಂ  ಎ ಮಾಡಿ ಜೂನಿಯರ್ ಕಾಲೇಜು ಗೆ ಹೋದದ್ದು ವಿಜ್ಞಾನ ಶಿಕ್ಷಣಕ್ಕೆ ಆದ ನಷ್ಟ ಎಂದು ದೃಢವಾಗಿ ನಂಬಿದ್ದೇನೆ . ಇವರ ತಂದೆ ಶ್ರೀನಿವಾಸ ರಾವ್ ಪ್ರಾಥಮಿಕ ಶಾಲೆಯಲ್ಲಿ ನಮಗೆ ಮಾಸ್ಟ್ರು .ಆ ಕಾಲದಲ್ಲಿಯೇ 'ನಲಿ ಕಲಿ 'ಆಚರಣೆಗೆ ತಂದವರು .ಶಿಸ್ತಿನ ಸಿಪಾಯಿ

ಮೂರನೆಯವರು ಶ್ರೀ ಕಮ್ಮಜೆ ಸುಬ್ಬಣ್ಣ ಭಟ್ ಅವರು . ಆಗಷ್ಟೇ ಆರಂಭವಾಗಿದ್ದ ಪಿ ಯು ಸಿ ಗೆ ಅರ್ಥ ಶಾಸ್ತ್ರದ ಅಧ್ಯಾಪಕರಾಗಿ ಬಂದವರು .ನಗು ಮುಖ . ಸ್ಪುರದ್ರೂಪ . ಇವರಿಗೆ ಹೈ ಸ್ಕೂಲ್ ತರಗತಿಗಳಿಗೆ ಕೂಡಾ ಕೆಲವು ಕ್ಲಾಸ್ ಕೊಡುತ್ತಿದ್ದು ,ನಮಗೆ ಇಂಗ್ಲಿಷ್ ಹೇಳಿ ಕೊಡಲು ಬರುತ್ತಿದ್ದರು . ಮಕ್ಕಳಲ್ಲಿ ಭಾಷೆಯ ಮತ್ತು ಸಾಹಿತ್ಯದ ಅಭಿರುಚಿ ಹೆಚ್ಚಿಸಲು ಪ್ರಯತ್ನ ಮಾಡುವರು .ಜೊನಾಥನ್ ಸ್ವಿಫ್ಟ್ ,ಜಾನ್ಸನ್ ಮತ್ತು ಬಾಸ್ವೇಲ್ ,ಅಲೆಕ್ಸಾಂಡರ್ ಪೋಪ್ ಇತ್ಯಾದಿ ಬಹರಹಗಾರ ಪಾಠ ಮನ ತಟ್ಟುವಂತೆ ಮಾಡುತ್ತಿದ್ದ ನೆನಪು .ನನ್ನ ಇಂಗ್ಲಿಷ್ ಸಾಹಿತ್ಯ ಓದಿಗೆ ಇವರ ಪ್ರವಚನಗಳೇ ಸ್ಫೂರ್ತಿ .ಇನ್ನು ಇವರ ಎಕನಾಮಿಕ್ಸ್ ತರಗತಿಗಳೂ ವಿದ್ಯಾರ್ಥಿ ಪ್ರಿಯ ಆಗಿದ್ದವು .ಅವರ ನೋಟ್ಸ್ ಗಟ್ಟಿಯಾಗಿ ನನ್ನ ಅಕ್ಕ ಊರು ಹೊಡೆಯುತ್ತಿದ್ದಾಗ ಕೇಳಿದ ."India is a rich county inhabited by poor people".Todays luxury is tomorrows need "ಇತ್ಯಾದಿ ನುಡಿಗಟ್ಟುಗಳು ನನಗೂ ಕೇಳಿ ಬಾಯಿಪಾಠ ಆಗಿದ್ದವು

ಶನಿವಾರ, ಸೆಪ್ಟೆಂಬರ್ 24, 2022

ಇಷ್ಟು ದಿನ ಈ ವೈಕುಂಠ

            ಐ ಸಿ ಯು ವೈರಾಗ್ಯ 

ವಾರಗಳ ಹಿಂದೆ  ಕುತ್ತಿಗೆ ಬಳಿ ಸಂಕಟ ಬಂದು ಮಂಗಳೂರಿನ ಆಸ್ಪತ್ರೆಗೆ ಕೂಡಲೇ ಹೋಗಿ ನೋಡಿದಾಗ ಹೃದಯದ ಒಂದು ರಕ್ತ ನಾಳದಲ್ಲಿ ಬ್ಲಾಕ್ ಕಂಡು ಬಂದು ಅದನ್ನು ತಗೆದರು . ಆಮೇಲೆ ನನ್ನನ್ನು ತೀವ್ರ ನಿಗಾ ಕ್ಕೆಂದು ಐ ಸಿ ಯು ಗೆ ದಾಖಲಿಸಿದರು . ಆಸ್ಪತ್ರೆಯಲ್ಲಿ  ರೋಗಿಯಾಗಿ ನನ್ನ ಮೊದಲ ಅನುಭವ . ತೀವ್ರ ನಿಗಾ ವಿಭಾಗದಲ್ಲಿ  ದಾಖಲಾಗುವರಿಗೆ ಎಲ್ಲರಿಗೂ ಒಂದೇ ಸಮವಸ್ತ್ರ . ಶ್ರೀಮಂತ ಬಡವ  ಹೆಚ್ಚು ಏಕೆ ಗಂಡು ಹೆಣ್ಣು ಎಂಬ ಭೇದ ವೂ ಐ ಸಿ ಯು ವಿನಲ್ಲಿ ಇಲ್ಲಾ . 

ನನ್ನ ಎರಡು  ಎರಡು ಕೈಗಳಿಗೂ ಡ್ರಿಪ್ ಹಾಕಿದ್ದರು .ಒಂದರಲ್ಲಿ ರಕ್ತದ ಒತ್ತಡ ಕಡಿಮೆ ಆಗದಂತೆ ,ಇನ್ನೊಂದರಲ್ಲಿ ರಕ್ತ ಹೆಪ್ಪುಗಟ್ಟದಂತೆ .;ಇನ್ಫ್ಯೂಶನ್ ಪಂಪ್ ಎಂದು ಇದೆ .ಅದು ನಾವು ಆಜ್ಞಾಪಿಸಿದ್ದಷ್ಟು ಡ್ರಿಪ್ ಪೂರೈಕೆ ಮಾಡುತ್ತದಲ್ಲದೆ ,ಮುಗಿದಾಗ ಅಥವಾ ಡ್ರಿಪ್ ಕೊಳವೆಯಲ್ಲಿ ಏನಾದರೂ ಅಡ್ಡಿ ಅಲಾರಾಂ ಮಾಡುವ ವ್ಯವಸ್ಥೆ ಇದೆ . ನನ್ನ ಎದೆಗೆ ಈ ಸಿ ಜಿ ಲೀಡ್ಸ್ ಹಾಕಿ ಮಾನಿಟರ್ ಗೆ ಕನೆಕ್ಟ್ ಮಾಡಿದ್ದು ಅದು ಬೀಪ್ ಮಾಡುತ್ತಿತ್ತು .ನನ್ನ ಮಾನಿಟರ್ ಗೆ ದೇವಸ್ಥಾನದ ಗಂಟೆಯ ಶಬ್ದ ಇದ್ದು ಕಿವಿಗೆ ಹಿತವಾಗಿ ಇತ್ತು . ಕೈಯ ಬೆರಳಿಗೆ ಪಲ್ಸ್ ಒಕ್ಸಿ ಮೀಟರ್ ಸಿಕ್ಕಿಸಿದ್ದರು . ಇವುಗಳೆಲ್ಲದರ ಬೀಪ್ /ಅಲಾರಾಂ ಸೇರಿ ಒಂದು ಫ್ಯೂಷನ್ ಮ್ಯೂಸಿಕ್ ನಂತೆ ಕೇಳುತ್ತಿತ್ತು . ನಾನು ಸಂಪೂರ್ಣ ಎಚ್ಚರ ಇರುವ ವೈದ್ಯ ರೋಗಿ ಆದುದರಿಂದ ಅಕ್ಕ ಪಕ್ಕದಲ್ಲಿ ಬೀಪ್ /ಅಲಾರಾಂ ವ್ಯತ್ಯಾಸ ಆದಾಗ ಕೂಡಲೇ ತಿಳಿಯುತ್ತಿತ್ತು . ಅದಲ್ಲದೆ ನನ್ನ ಮಾನಿಟರ್ ಕೂಡಾ ತಿರುಗಿ ಆಗಾಗ ನೋಡುವ ಕುತೂಹಲ . 

ದೊಡ್ಡ ಆಸ್ಪತ್ರೆಗಳ ಲ್ಲಿ  ಹಲವು ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಗಳು ಇದ್ದು ಐ ಸಿ ಯು ವಿನಲ್ಲಿ ಇರುವ ಒಬ್ಬ ರೋಗಿಯನ್ನು ಕನಿಷ್ಠ ಮೂರು ನಾಲ್ಕು ಸಬ್ ಸ್ಪೆಷಾಲಿಟಿ ವೈದ್ಯರು ನೋಡ ಬರುವರು .ಮೊದಲು ಅಸಿಸ್ಟೆಂಟ್ ವೈದ್ಯರು ,ಆಮೇಲೆ ಮುಖ್ಯಸ್ಥರು ಜತೆ ಗೂಡಿ 'ಪ್ರತಿ ಸಾರಿಯೂ  ಸಿಸ್ಟರ್ಸ್ ಗಳು ಬಂದು ಮಾಹಿತಿ ನೀಡಿ ಆರ್ಡರ್ ತೆಗೆದು ಕೊಳ್ಳ ಬೇಕು . ಅವರ ಕೆಲಸ ತುಂಬಾ ಕಷ್ಟ .ಯಾವುದನ್ನೂ ಒಂದೇ ಬಾರಿಗೆ ಪೂರ್ಣವಾಗಿ ಮಾಡಿ ಮುಗಿಯಿತು ಎಂದು ಕೊಳ್ಳುವ ಹಾಗೆ ಇಲ್ಲ . ನಡುವೆ ಹೊಸ ರೋಗಿಗಳ ಚಾರ್ಜ್ ತೆಗೆದು ಕೊಳ್ಳುವುದು ,ಉತ್ತಮ ವಾದ ವರನ್ನು ವಾರ್ಡ್ಗೆ ಕಳಿಸುವುದು ;ಎಲ್ಲಾ ಮಾಡಬೇಕು .ಔಷಧಿ ಇಂಡೆಂಟ್ ಮಾಡಬೇಕು .ನಡುವೆ ಕಂಡೀಶನ್ ಸೀರಿಯಸ್ ಆದರೆ ಅಲ್ಲಿಗೆ ಓಡ ಬೇಕು . ನಾನಿದ್ದ ತೀವ್ರ ನಿಗಾ ದಲ್ಲಿ ಕೊಂಕಣಿ ಮತ್ತು ತುಳು ಮಾತನಾಡುವ ಸಿಸ್ಟೆರ್ ಗಳು ಮತ್ತು ಆಯಾ ಗಳು ಇದ್ದು ರೋಗಿಗಳನ್ನು ಚೆನ್ನಾಗಿ ನೋಡಿ ಕೊಳ್ಳುತ್ತಿದ್ದರು . 

ರಾತ್ರಿ ಹೊತ್ತು ನನ್ನ ಎದುರು ಅಕ್ಕ ಪಕ್ಕದ ಬೆಡ್ ಗಳಲ್ಲಿ ಇದ್ದ ಓರ್ವ ಹಿರಿಯರು ತನ್ನಷ್ಟಕ್ಕೆ ತಾವೇ ಮಾತನಾಡುವುದು ,ಪಕ್ಕದ ಬೆಡ್ ನಲ್ಲಿ ಅರೆ ನಿದ್ದೆಯಲ್ಲಿ ಇದ್ದವರು ಅದಕ್ಕೆ ಉತ್ತರ ನೀಡುವದು ನಡೆದಿತ್ತು . 

ಐ ಸಿ ಯು ವಿನಲ್ಲಿ ಇರುವಾಗ ಸಾವಿನ ಭಯ ದೂರ ಹೋಗುತ್ತದೆ .ಗಂಭೀರ ಅತಿ ಗಂಭೀರ ರೋಗಿಗಳ ನಡುವೆ ಇರುವಾಗ  ನಾವು ಆ ಕಡೆ ಅಥವಾ ಈ ಕಡೆ ಹೋಗಲು ಯಾವುದೇ ಸಂಕಟ ಇಲ್ಲದೆ ತಯಾರಾಗುತ್ತೇವೆ .ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ಎನ್ನುವ ವಿದ್ಯಾ ಭೂಷಣ ರ ದೇವರ ನಾಮ ನೆನಪಿಗೆ ಬರುತ್ತಿತ್ತು . 

ನಮ್ಮ ಶರೀರದಲ್ಲಿ ಮೆದುಳು ಕೆಲಸ ಮಾಡುತ್ತಿದ್ದರೆ ಮಾತ್ರ ನಾವು ಇರುವುದು ಮತ್ತು  ಹೆಂಡತಿ ಮಕ್ಕಳು ,ಬಂಧುಗಳು ,ಮನೆ ,ಆಸ್ತಿ ,ಬ್ಯಾಂಕ್ ಡೆಪಾಸಿಟ್ ,ಫೇಸ್ ಬುಕ್ ,ವಾಟ್ಸ್ ಆಪ್  , ಹರಿಪ್ರಸಾದ್ ಹೋಟೆಲ್ ಮಸಾಲೆ ದೋಸೆ ಗಡ್ಬಡ್ ಇತ್ಯಾದಿ ಗಳಿಗೆ ಅಸ್ತಿತ್ವ . ಮೆದುಳು ಕಾರ್ಯ ನಿರ್ವಹಿಸಲು ಹೃದಯ ರಕ್ತ ಪಂಪ್ ಮಾಡಿ ಆಮ್ಲ ಜನಕ ಮತ್ತು ಆಹಾರ ಸರಬರಾಜು ಮಾಡಬೇಕು . ಯಾವುದು ಕೆಟ್ಟರೂ ಅಸ್ತಿತ್ವಕ್ಕೆ ಅಪಾಯ ಇತ್ಯಾದಿ ಸತ್ಯ ಆಗಾಗ ಮನ ಪಟಲದ ಮುಂದೆ ಬರುವದು . 

ಹೀಗೆಯೇ  ೨೪ ಗಂಟೆ ತೀವ್ರ ನಿಗಾದಲ್ಲಿ ಕಳೆದು ರಾತ್ರಿ ಒಂದಿಷ್ಟು ನಿದ್ದೆ ಮಾಡದೇ ನಾನು ಮರುದಿನ ವಾರ್ಡ್ ಗೆ ರವಾನಿಸ ಲ್ಪಟ್ಟೆ . ತೀವ್ರ ನಿಗಾದಲ್ಲಿ ಇದ್ದ ಅತ್ಯಂತ ಆರೋಗ್ಯವಂತ ನಾನೇ ಆಗಿದ್ದು ,ಸ್ಟಾಫ್ ನವರಿಗೆ ಹೆಚ್ಚು ತೊಂದರೆ ಕೊಡದೇ ಬಂದ ಸಮಾಧಾನ .

ಆಸ್ಪತ್ರೆಯ ವಾರ್ಡ್ಗಳಲ್ಲಿ  ಚಲಿಸುವ ಸಿಸ್ಟರ್ಸ್ ಗಳು ಸ್ಥಾವರ  ;ವೈದ್ಯರು ಜಂಗಮರು .

ಮಂಗಳವಾರ, ಸೆಪ್ಟೆಂಬರ್ 20, 2022

ಮೊಳಹಳ್ಳಿ ಶಿವರಾಯರು


Shiv Aroor on Twitter: "Old photo! ♥️ Coimbatore in newly independent  India. The little one is my mum. The man in the middle is mum's maternal  grandpa Molahalli Shiva Rao, after whom

Not a day passes over the earth, but men and women of no note do great deeds, speak great words and suffer noble sorrows. -Charles Reade

ವಿ ಸೀ ಅವರ ವ್ಯಕ್ತಿ ಚಿತ್ರ ಸಂಪುಟ ೧ ಓದುತ್ತಿದ್ದೆ .ಅದರಲ್ಲಿ ಮೊಳಹಳ್ಳಿ ಶಿವರಾವ್ ಬಗ್ಗೆ ಒಂದು ಲೇಖನ ಇದೆ . ಚಾರ್ಲ್ಸ್ ರೀಡ್ ನ ಮೇಲಿನ ವಾಖ್ಯ ಉಲ್ಲೇಖ ಮಾಡಿ ಆರಂಭಿಸುತ್ತಾರೆ . ವಿ ಸೀ ಅವರ ಶಬ್ದಗಳಲ್ಲಿ "Of no note 'ಎಂಬ ಮಾತಿನಲ್ಲಿ ಲೋಕ ಪ್ರಖ್ಯಾತಿ ಬೇಕಿಲ್ಲ .ಈಗ್ಗೆ ೩೦-೪೦ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಖ್ಯಾತಿ ಇಂದಿನಂತೆ ದಾಂಧಲೆ ಮಾಡುತ್ತಿರಲಿಲ್ಲ .ವ್ಯಕ್ತಿಗಳು ತಮ್ಮ ತಮ್ಮ ಸ್ಥಾನ ದಲ್ಲಿ ತಮಗೆ ತೋರಿದಂತೆ ದೊಡ್ಡ ಬಾಳು ಬಾಳಿ ,ದೊಡ್ಡ ಕೆಲಸಗಳನ್ನು ಮಾಡಿ ,ಸುತ್ತಲ ಪ್ರದೇಶವನ್ನು ತಮ್ಮ ಕಾರ್ಯಗಳಿಂದ ಸಂಪನ್ನ ಗೊಳಿಸಿದ್ದಾರೆ .ಅಂತಹ ಮಹನೀಯರು ಒಬ್ಬರು ಮೊಳಹಳ್ಳಿ ಶಿವರಾಯರು .ನಾನು ಕಂಡ ಸಾರ್ವಜನಿಕ ಹಿತಸಾಧಕರಲ್ಲಿ ಸದ್ದು ಮಾಡದೇ ದುಡಿದ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಹಿರಿಯರು ಅವರು .ಅವರು ರಾಜಕೀಯಕ್ಕೆ ಕೈ ಹಾಕಲಿಲ್ಲ .ಪುತ್ತೂರು ತಾಲೂಕಿನಲ್ಲಿ ಅವರು ಮಾಡಿದ ಕೆಲಸ ವಿದ್ಯಾಭ್ಯಾಸದ ವಿಸ್ತರಣೆಗೂ ಜನದ ಆರ್ಥಿಕ ಹಿತಕ್ಕೂ ಮೀಸಲಾಯಿತು ."

 ತಂದೆ ರಂಗಪ್ಪಯ್ಯ ಪೊಲೀಸ್ ಅಧಿಕಾರಿ ಯಾಗಿದ್ದು ,ಅವರು ಪುತ್ತೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮೊಳಹಳ್ಳಿ ಶಿವರಾಯರ ಜನನ ೧೮೮೦ ರಲ್ಲಿ ಆಯಿತು .ಶಿವರಾಯರು ವಕೀಲರಾಗಿ ಇಲ್ಲಿಯೇ ವೃತ್ತಿ ಜೀವನ ಆರಂಭಿಸುವುದಾಯಿತು . ಅದು ಪುತ್ತೂರಿನ ಭಾಗ್ಯ . ಇಲ್ಲಿನ ವಿದ್ಯಾಭ್ಯಾಸ ಸಾಂಸ್ಕೃತಿಕ ರಂಗದಲ್ಲಿ ಹೊಸ ಗಾಳಿ ಬೀಸುವಂತೆ ಆಯಿತು . ಶಿವರಾಮ ಕಾರಂತರ ಸರ್ವ ಚಟುವಟಿಕೆಗಳಿಗೂ ಇವರೇ ಬೆನ್ನೆಲುಬು . ನಮ್ಮ ಜಿಲ್ಲೆಯ ಸಹಕಾರಿ ಚಳುವಳಿಯ ಆರಂಭದ ಹರಿಕಾರ ,ಈಗಿನ ಜಿಲ್ಲಾ ಸಹಕಾರ ಬ್ಯಾಂಕ್ ಸ್ಥಾಪನೆಗೆ ಅಡಿಗಲ್ಲು ಆಯಿತು . ಏಷ್ಯದಲ್ಲಿಯೇ ಮೊದಲ ಬಾರಿಗೆ ಪ್ರಥಮ ಎನ್ನಲಾದ ಸರಕಾರಿ ಮುದ್ರಣಾಲಯ ಶಿವರಾಯರು ಮಂಗಳೂರಿನಲ್ಲಿ ತೆರೆದರು . 

ಶಿವರಾಯರು ಪ್ರಸಿದ್ಧ ವಕೀಲರಾಗಿದ್ದರೂ ತಿಂಗಳ ಖರ್ಚಿಗೆ ಆಗುವಷ್ಟೇ ಕೇಸ್ ಕೈಗೆತ್ತಿ ಕೊಂಡು ,ಹೆಚ್ಚಿನ ಸಮಯ ಸಾರ್ವಜನಿಕ ಕೆಲಸಗಳಲ್ಲಿ ವಿನಿಯೋಗಿಸುತ್ತಿದ್ದರು . ವೈಯುಕ್ತಿಕ ಕಾರ್ಯಕ್ಕೆ ಧನ ಶೇಖರಣೆ ಇಲ್ಲ .ಇವರ ಮಗಳ ಮದುವೆಗೆ ಊರವರೇ ಹೊರೆ ಕಾಣಿಕೆ ಮಾಡಿ ವಿಜೃಂಭಣೆಯಿಂದ ಊರವರು ಮನೆ ಸಮಾರಂಭ ಎಂಬಂತೆ ಆಚರಿಸಿದರು ಎಂದು ವಿ ಸೀ ಬರೆದಿದ್ದಾರೆ . ಮದುವೆಗೆ ಎಂದು ಊರವರು ಸಂಗ್ರಹಿದ ಜೀನಸು ತರಕಾರಿ ಇತ್ಯಾದಿ ಉಳಿದಿದ್ದನ್ನು ಇಟ್ಟುಕೊಳ್ಳದೆ ಊರವರಲ್ಲಿ ಹಂಚಿದರು . ಅದೇ ಲೇಖನದಲ್ಲಿ ವಿ ಸೀ ಪುತ್ತೂರಿನ ಪ್ರಸಿದ್ಧ ವಕೀಲರಾಗಿದ್ದ ಶ್ರೀ ಸಿ ಎಸ  ಶಾಸ್ತ್ರೀ ಯವರ ಒಂದು ಮಾತು ಉಲ್ಲೇಖ ಇದೆ .'ನಾನು ಗೆಲ್ಲಬಹುದು ಎಂದು ವಿಶ್ವಾಸ ಇರುವ ಮತ್ತು ಸಾವಿರ ರೂಪಾಯಿ ಫೀಸ್ ಸಿಗುವ ಕೇಸ್ ಬಂದರೂ ಶಿವರಾಯರು ಬೇಡ ಎಂದರೆ ತೆಗೆದು ಕೊಳ್ಳುವುದಿಲ್ಲ "

"ತಾಲೂಕಿನ ಯಾವ ಶಾಲೆಯಲ್ಲಿ ಏನು ಉತ್ಸವ ನಡೆಯಲಿ ಅವರು ಹೋಗ ಬೇಕು .ಒಂದು ದುಂಡು ತೋಳಿನ ಖಾದಿ ಬನಿಯನ್ .ಒಂದು ತುಂಡು ಪಂಚೆ ,ಒಂದು ಟವೆಲ್ ಅಷ್ಟೇ ಅವರ ಸಜ್ಜು .ಕರೆದು ಕೊಂಡು ಹೋಗಲು ಗಾಡಿ ಬರದಿದ್ದರೆ ನಡೆದು ಕೊಂಡೇ ಹೋಗುವರು . ಶಾಲೆಯ ಎರಡು ಬೆಂಚ್ ಜೋಡಿಸಿ ,ತೋಳನ್ನು ತಲೆ ತಿಂಬು ಮಾಡಿ ರಾತ್ರಿ ಮಲಗಿದ್ದು ಬರುವುದು ವಾಡಿಕೆ . ಸಭೆಗಲ್ಲಿ ಹೆಚ್ಚು ಮಾತಾಡುವ ಅಭ್ಯಾಸ ಇಲ್ಲ .ಊರಿನ ಮುಂದಾಳುಗಳನ್ನು ಹುರಿ ಗೊಳಿಸುವದು ,ಕೆಲಸದಲ್ಲಿ ತೊಡಗಿಸುವುದು ,ಹಣ ಮುಂತಾದ ಸಹಾಯ ಬೇಕಿದ್ದರೆ ಏರ್ಪಡಿಸುವುದು ಅವರ ಕೆಲಸ . 

 ಶಿವರಾಯರ  ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಮೈಸೂರು ರಾಜರ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ವಿಶೇಷ ಆಹ್ವಾನಿತರಾಗಿ ಕರೆದು ಸನ್ಮಾನಿಸಿದ್ದಾರಂತೆ .

ಪುತ್ತೂರಿನಲ್ಲಿ ಸ್ವಾತಂತ್ಯ ಹೋರಾಟ ಕಾಲದಲ್ಲಿ ಸಕ್ರಿಯ ವಾಗಿದ್ದು ದಲ್ಲದೆ ತಮ್ಮ ತಮ್ಮ ವೃತಿಯಲ್ಲೂ ಹೆಸರು ಮಾಡಿದ್ದ ವಕೀಲ ಸದಾಶಿವ ರಾವ್ ,ಡಾ ಸುಂದರ ರಾವ್ ಮತ್ತು ಶಿವರಾಮ ಕಾರಂತ ಇವರೆಲ್ಲಾ ಮೊಳಹಳ್ಳಿಯವರಂತೆ ಕುಂದಾಪುರ ಮೂಲದವರು .ಇಲ್ಲಿಯೇ ನೆಲೆಸಿ ಪುತ್ತೂರು ಪರಿಸರದ ಮತ್ತು ಜತೆಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣ ರಾದರು ಎಂಬುದು ಒಂದು ವಿಶೇಷ .

ಬುಧವಾರ, ಸೆಪ್ಟೆಂಬರ್ 14, 2022

ಮಾನವೀಯ ಕಳಕಳಿಯ ಮುತ್ಸದ್ಧಿ ವೈದ್ಯ

 

  ಆದರ್ಶ ವೈದ್ಯ ,ಅಧ್ಯಾಪಕನಾಗಿ  , ಮಾನವೀಯತೆ ಮತ್ತು ಸರಳತೆ  ಮೂರ್ತಿವೆತ್ತಂತಹ ವ್ಯಕ್ತಿತ್ವ  ಹೊಂದಿರುವ ಅಪರೂಪದ ಒಬ್ಬರು  ಡಾ ಚಕ್ರಪಾಣಿ . ಇವರ ವೈದ್ಯಕೀಯ ಜ್ಞಾನ ಭಂಡಾರ ಬಲು ದೊಡ್ಡ . ಚಿಕಿತ್ಸಾ ವಿಧಾನ ವೈಜ್ಞಾನಿಕ ಮತ್ತು  ನೀತಿ ಮೌಲ್ಯಗಳಿಗೆ ಬದ್ಧ . 

ಹಲವು ದಶಕಗಳಿಂದ ಮಂಗಳೂರು ಕೆ ಎಂ ಸಿ ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲಿರುವ ಇವರು ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚು .. ರೋಗಿಗಳಿಗೆ ಇವರ ಅಭಿಪ್ರಾಯ ವೇದ ವಾಕ್ಯ ಮತ್ತು ಇವರ ಸಾಂತ್ವನ  ಚೇತೋಹಾರಿ . 

ಡಾ ಚಕ್ರಪಾಣಿ ಅವರ ತಂದೆ ಡಾ ಮಹಾಬಲ ಭಟ್ ಅವರು ಸರಕಾರಿ ಸೇವೆಯಲ್ಲಿ ಇದ್ದು  ಜನಪ್ರಿಯ ವೈದ್ಯರಾಗಿದ್ದವರು ನಿವೃತ್ತಿ ನಂತರ ಹಲ ವರ್ಷ ಮಂಗಳೂರು  ಪಂಪ್ ವೆಲ್ ಬಳಿ ಕ್ಲಿನಿಕ್ ನಡೆಸುತಿದ್ದರು . 

ಡಾ ಚಕ್ರಪಾಣಿ ಖ್ಯಾತ ವೇಣು ವಾದಕ ದಿ   ಏನ್ ಗೋಪಾಲ ಕೃಷ್ಣ ಅಯ್ಯರ್  ಅವರ ಬಳಿ  ಅಧ್ಯಯನ ಮಾಡಿ ಒಳ್ಳೆಯ ವೇಣು ವಾದಕ ಎಂದು ಹೆಸರು ಗಳಿಸಿದವರು .. 

 

ಬುಧವಾರ, ಸೆಪ್ಟೆಂಬರ್ 7, 2022

ಒಂದು ಅವಲೋಕನ

ಮೊನ್ನೆ ಒಂದು ಕ್ಷೇತ್ರದಲ್ಲಿ ಬಂಧುಗಳ ವೈಕುಂಠ ಸಮಾರಾಧನೆಗೆ ಹೋಗಿದ್ದೆ,ಅಲ್ಲಿ ಎರಡು ಕಟ್ಟಡ ಅಥವಾ ಹಾಲ್ ನಲ್ಲಿ ತಲಾ ಮೂರು ಬೇರೆ ಕಾರ್ಯಕ್ರಮಗಳಿದ್ದು ಜನರು ತುಂಬಿದ್ದರು . ವೈಕುಂಠ ಸಮಾರಾಧನೆ ,ವರ್ಷಾಬ್ದಿಕ ಶ್ರಾರ್ಧ ,ಮತ್ತು ವಾರ್ಷಿಕ ಪುಣ್ಯ ತಿಥಿ ಹೀಗೆ . ಈಗ ಮನೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟ ಎಂದು ಕ್ಷೇತ್ರಗಳಲ್ಲಿ ಮಾಡುತ್ತಾರೆ . 

ಇಲ್ಲಿ ಒಬ್ಬ ಹಿರಿಯರು ಮಾತನಾಡುತ್ತಾ ಹೇಳಿದರು 'ಇತ್ತೀಚಿಗೆ ಮಂಗಳ ಕಾರ್ಯ ಎಂದು ಕರೆಯಲ್ಪಡುವ ಮದುವೆ ,ಮುಂಜಿ ಇತ್ಯಾದಿಗಳಿಗಿಂತ ಅಪರ ಕ್ರಿಯೆ ಎಂದು ಕರೆಯಲ್ಪಡುವ ಕಾರ್ಯಕ್ರಮಗಳಲ್ಲಿ  ಹಾಜರಾಗುವುದೇ ಹೆಚ್ಚು ಎಂದು ಹೇಳಿದರು .ನನಗೂ ಅದು ಸರಿ ಎಂದು ತೋರುತ್ತಿದೆ . ಕಾರಣ ಊಹೆಗೆ ಬಿಟ್ಟದ್ದು . ಎಲ್ಲಾ ಕಡೆಯಲ್ಲಿ ಕಾಣುವಂತೆ ಇಂತಹ ಕಾರ್ಯಕ್ರಮಗಲ್ಲಿ ಕೂಡಾ ಯುವಕರು ಮತ್ತು ಮಕ್ಕಳ ಹಾಜರಾತಿ ಕಡಿಮೆ . ಹಿರಿಯ ನಾಗರಿಕರೇ ಎಲ್ಲೆಲ್ಲೂ ಕಾಣ ಸಿಗುತ್ತಾರೆ . 

ಹಿರಿಯರು ಇನ್ನೂ ಒಂದು ಮಾತು ಹೇಳಿದರು .ಇಂತಹ ಸಾಮೂಹಿಕ ಆಚರಣೆ ಒಂದು ರೀತಿಯಲ್ಲಿ ಈಕ್ವಾ ಲೈಸರ್ ಅಥವಾ ಸಮಾನತೆ ಉಂಟು ಮಾಡುವಂತಹದು ಎಂದು . ಒಪ್ಪತಕ್ಕದ್ದು .  

ನಮ್ಮ ಪುರೋಹಿತರು ಸ್ವಲ್ಪ ಹಾಸ್ಯ ಪ್ರಕೃತಿ ಯವರು . ಮದುವೆ ,ಪೂಜೆ ಇತ್ಯಾದಿ ಕಾರ್ಯಕ್ರಮ ಗಳಿಗೆ ಹೋಗಲು ಇದ್ದರೆ "ಇಂದು ಒಂದು ಸಿವಿಲ್ ಕೇಸ್ ಇದ್ದು "ಎಂದೂ ಬೊಜ್ಜ ಇತ್ಯಾದಿ ಕಾರ್ಯಕ್ರಮ ಇದ್ದರೆ "ಇಂದು ಒಂದು ಕ್ರಿಮಿನಲ್ ಕೇಸ್ "ಎಂದೂ ಸೂಚ್ಯವಾಗಿ ಹೇಳುತ್ತಿದ್ದರು . ಇದನ್ನು ಅಪಹಾಸ್ಯ ಎಂದು ಭಾವಿಸ ಬಾರದು . ಮೃತ ಪಟ್ಟ ವ್ಯಕ್ತಿಗೆ ಹಲವು ಮಕ್ಕಳು ಇದ್ದರೆ ಇಂತಹ ಕಾರ್ಯಕ್ರಮ ಮುಗಿಯುವಾಗ ಪುರೋಹಿತರು ಸೋತು ಹೈರಾಣಾಗುತ್ತಾರೆ .. ಅಲ್ಲದೆ ಮಂಗಳ ಕಾರ್ಯಕ್ಕೆ ಆದರೂ ಬರಲಾಗುವುದಿಲ್ಲ ಎಂದು ಹೇಳ ಬಹುದು  ಅಪರಕ್ರಿಯೆಗೆ ಆಗುವುದಿಲ್ಲ ಅಂದು ಅನ್ನುವರು . ಯಾರಾದರೂ ಮೃತ ಪಟ್ಟಾಗ ಬಂಧು ಬಾಂಧವರು ಒಟ್ಟು ಸೇರಿ ಅವರ ಕುಟುಂಬದವರಿಗೆ ಸಾಂತ್ವನ ಹೇಳುವುದಲ್ಲದೆ ನಾವೆಲ್ಲಾ ಇದ್ದೇವೆ ಎಂದು ಪ್ರಕಟಿಸುವ ಉದ್ದೇಶ ಈ ಕಾರ್ಯಕ್ರಮಗಳದ್ದು ಎಂದು ಭಾವಿಸಿದ್ದೇನೆ. ಹಿಂದೆ ಮದುವೆ ಮತ್ತು ವೈಕುಂಠ ಸಮಾರಾಧನೆ ಎರಡೂ ಇರಿ ವರ್ಸಿಬಲ್  ಪ್ರಾಸೆಸ್ (irreversible)ಆಗಿದ್ದರೆ ಈಗ ಎರಡನೆಯದ್ದು ಮಾತ್ರ .

ಮಂಗಳವಾರ, ಸೆಪ್ಟೆಂಬರ್ 6, 2022

ಒಂದು ಅನುಭವ

ಹಿಂದೆ ರಾಜರು ,ಮಂತ್ರಿಗಳು ಪ್ರಜೆಗಳ ನಿಜ ಸ್ಥಿತಿ ಅರಿಯಲು ಮಾರು ವೇಷದಲ್ಲಿ ಹೋಗುತ್ತಿದ್ದರು . ಈಗ ಮಂತ್ರಿಗಳು ಬರುವ ಬಗ್ಗೆ ಅವರ ಕಚೇರಿಯಿಂದಲೇ ಸೂಚನೆ ಮೊದಲೇ ಹೋಗುತ್ತದೆ . ಸಂಚರಿಸುವ ದಾರಿ ದಿಢೀರ್ ರಿಪೇರಿ ಆಗುತ್ತದೆ ,ಬಡವರ ಗುಡಿಸಲು ಎತ್ತಂಗಡಿ ಆಗುತ್ತದೆ .ಎಲ್ಲರೂ ಸೌಖ್ಯ ಎಂದು ಬಿಂಬಿಸಲಾಗುತ್ತದೆ . ಯಾರಾದರೂ ಅಧಿಕ ಪ್ರಸಂಗಿ ತನ್ನ ನಿಜ ಕಷ್ಟದ ನಿವೇದನೆ ಮಾಡ ಹೋದರೆ ಸುತ್ತ ಮುತ್ತಲಿನವರು  ತಡೆಯುತ್ತಾರೆ . 

ಒಂದು ಸಾರಿ ನನ್ನ ಮನೆಯವರು ಮದುವೆ ಸಮಾರಂಭದಲ್ಲಿ ಒಬ್ಬ ಅಪರಿಚಿತ  ಮಹಿಳೆಯ ಜತೆ ಉಭಯ ಕುಶಲೋಪರಿ ಮಾತನಾಡುತ್ತಾ ನನ್ನ ಪತಿ ಇಂತಹ ಆಸ್ಪತ್ರೆಯಲ್ಲಿ ಡಾಕ್ಟರು ಎಂದು ಹೆಮ್ಮೆಯಿಂದ ಹೇಳಿ ಕೊಂಡರು . ಅದನ್ನು ಕೇಳಿದ ಕೂಡಲೇ ಆಕೆ ಸಿಟ್ಟಿಗೆದ್ದು ಅವರು ಇಂತಹ ಡಾಕ್ಟರರು ,ಒಂದು ಸ್ಕ್ಯಾನ್ ಮಾಡಿಸುವುದಿಲ್ಲ .ಮದ್ದು ಸರಿ ಕೊಡುವುದಿಲ್ಲ ಎಂದು ಮುಖದ ಮೇಲೆಯೇ ಹೇಳಿದರು . ಈ ಪ್ರಸಂಗದ ನಂತರ  ತನ್ನ ಪತಿಯ ವೃತ್ತಿಯ ಬಗ್ಗೆ ಸುವೋ ಮೋಟೋ ಸ್ಟೇಟ್ಮೆಂಟ್ ಕೊಡುವದುದು ನಿಲ್ಲಿಸಿದಳು . 

ಮೊನ್ನೆ ಭಾನುವಾರ ನಾನು ಕಲ್ಲಡ್ಕದಲ್ಲಿ ನನ್ನ ಬಂಧುವೊಬ್ಬರ ವೈಕುಂಠ ಸಮಾರಾಧನೆ ಗೆ ಬಸ್ಸಿನಲ್ಲಿ ಹೋಗುತ್ತಿದ್ದೆ . ದಾರಿಯಲ್ಲಿ ತುಂಬಾ ಧೂಳು ಇರುವುದರಿಂದ ಮಾಸ್ಕ್ ಹಾಕಿ ಕೊಂಡಿದ್ದೆ . ಅವರೂ ಕಲ್ಲಡ್ಕಕ್ಕೆ . ಎಂದಿನಂತೆ ಪಕ್ಕದ ಸೀಟಿನವರಲ್ಲಿ ಉಭಯ ಕುಶಲೋಪರಿ . ನನ್ನ ಪಕ್ಕದ ಸೀಟಿನಲ್ಲಿ ಇದ್ದವರು ಬೆಟ್ಟಂಪಾಡಿ ಬಳಿಯ ಕೃಷಿಕರು . ನನ್ನ ವೃತ್ತಿ ಕೇಳಲು ನನಗೆ  ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಕೆಲಸ ಎಂದೆ .ಡಾಕ್ಟರು ಎಂದು ಉದ್ದೇಶ ಪೂರ್ವಕ ಹೇಳಲಿಲ್ಲ .ಒಂದು ಡಾಕ್ಟರು ಎಂದ ಒಡನೆ ಅವರು ಆರಾಮವಾಗಿ ಮನ ಬಿಚ್ಚಿ ಮಾತನಾಡುವುದು ನಿಲ್ಲಿಸುತ್ತಾರೆ . ಇನ್ನೊಂದು ನನ್ನ ಪತ್ನಿಗೆ ಆದ ಅನುಭವ. ಅಲ್ಲದೆ ಡಾಕ್ಟರು ಆಗಿ ಇವರು  ಬಸಿನಲ್ಲಿ  ಪ್ರಯಾಣಿಸುವ ಗತಿಗೇಡು ಬಂತಲ್ಲಾ ಎಂದು ಪರಿತಪಿಸುವುದು ಬೇಡ ಎಂಬ ಉದ್ದೇಶ ಕೂಡಾ.

ನನ್ನ ಸಹಯಾತ್ರಿ ನಾನು ನಿಮ್ಮ ಆಸ್ಪತ್ರೆಗೆ ಬಹಳ ಸಾರಿ ಬಂದಿರುವೆನು .ಅಲ್ಲಿ ಡಾಕ್ಟರ್ ಎ ಪಿ ಭಟ್ ಎಂಬವರರದ್ದು ನನ್ನ ಕುಟುಂಬಕ್ಕೆ ಮದ್ದು ;ಎಂದರು . ಹೇಗೆ ಮದ್ದು ?ಎಂದೆ .ಪರವಾಗಿಲ್ಲ ಈಗ ಏನೂ ತೊಂದರೆ ಇಲ್ಲ .ಒಳ್ಳೆ ಡಾಕ್ಟರ್ ಎಂದರು .ಹಾಗೆ ಹೀಗೆ ಮಾತನಾಡುವಾಗ ಕಲ್ಲಡ್ಕ ಬಂತು .ಇಳಿದ ಮೇಲೆ ಜತೆಗೇ ಹೆಜ್ಜೆ ಹಾಕುವಾಗ ನನ್ನ ಮಾಸ್ಕ ತೆಗೆದೆ .ಅವರು ಕೂಡಲೇ ಅಚ್ಚರಿ ಮತ್ತು ಸಂತೋಷದಿಂದ ನೀವೇ ಅಲ್ವ ಸರ್ ನಮ್ಮ ಡಾಕ್ಟರು .ಮಾಸ್ಕ ಇದ್ದುದರಿಂದ ಗುರುತು ಸಿಗಲಿಲ್ಲ ಎಂದರು . ನಾನು ಹೇಳಿದೆ ಇಲ್ಲ ನನ್ನ ಬಗ್ಗೆ ಸರಿಯಾದ ಫೀಡ್ ಬ್ಯಾಕ್ ಸಿಕ್ಕಿತು ಸಂತೋಷ ಎಂದೆ

ಭಾನುವಾರ, ಸೆಪ್ಟೆಂಬರ್ 4, 2022

ಉಸ್ತಾದ್ ಕರೀಂ ಖಾನ್ ಮತ್ತ್ತು ಸಂಗೀತ ಪ್ರೇಮಿ ನಾಯಿ ಮರಿ

 Music 7 - The Story Of His Master's Voice - Music 7 - The ...Abdul Karim Khan - Wikipedia ಉಸ್ತಾದ ಕರೀಂ ಖಾನ್ ಸಂಗೀತ ಲೋಕದ ದಂತ ಕತೆ . ಭೀಮ್ ಸೆನ್ ಜೋಶಿ ಯಂತಹವರು ಅವರಿಂದ ಪ್ರಭಾವಿತರಾಗಿದ್ದರು ಎಂದು ಪ್ರತೀತಿ . 

ಖಾನ್ ಸಾಹೇಬರು ಒಂದು ನಾಯಿ ಮರಿ ಸಾಕಿದ್ದರು .ಅದರ ಹೆಸರು ಟೀಪೂ ಮಿಯಾ . ಖಾನ್ ಸಾಹೇಬರು ಸಂಗೀತ ಅಭ್ಯಾಸ ಮಾಡುವಾಗಲೆಲ್ಲಾ ಅದು ಓಡಿ ಬಂದು ಪಕ್ಕದಲ್ಲಿ ಕುಳಿತು ಕೊಳ್ಳುತ್ತಿತ್ತು . ಅದಕ್ಕೂ ಸಾಕಷ್ಟು ಅಭ್ಯಾಸ ಆಗಿರ ಬೇಕು . ಒಂದು ಬಾರಿ ಸತಾರಾ ದಲ್ಲಿ ಮತ್ತೊಮ್ಮೆ ಮುಂಬೈ ಯಲ್ಲಿ ಕಚೇರಿ ಯಲ್ಲಿ ತಾನೂ ಪಾಲ್ಕೊಂಡು ಸ್ವರ ಸೇರಿ ಸಿ  ಶೋತೃಗಳನ್ನು ರೋಮಾಂಚನ ಗೊಳಿಸಿತ್ತು ಎಂಬ  ಪ್ರತೀತಿ . 

 ಗ್ರಾಮೋಫೋನ್ ರೆಕಾರ್ಡ್ ನಲ್ಲಿ ತನ್ನ ಧನಿಯ ದನಿ ಗುರುತಿಸಿ ಅಲ್ಲೇ ಬಂದು ಕುಳಿತು ಕೊಳ್ಳುತ್ತಿತ್ತು . ಅದರ ಭಾವ ಚಿತ್ರವನ್ನೇ ಭಾರತದ  ಎಚ್ ಎಂ ವಿ ಕಂಪನಿ ತನ್ನ ಲೋಗೋ ವಾಗಿ ಮಾಡಿತ್ತು  ಎಂಬ ಅಂಬೋಣ 

ಉಸ್ತಾದ್ ಕರೀಂ ಖಾನ್ ಕರ್ನಾಟಕ ಸಂಗೀತ ದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದರು . ಅವರು ಹಾಡಿದ ತ್ಯಾಗರಾಜರ ಪ್ರಸಿದ್ಧ ಕೃತಿ ರಾಮಾ ನೀ ಸಮಾನ ನೆವರೋ  ಲಿಂಕ್  https://youtu.be/FuUyLQpE22g


 

 Epidemiology triad


 

ಸಮೂಹ ವೈದ್ಯ ಶಾಸ್ತ್ರದಲ್ಲಿ ರೋಗಕಾರಕ  ತ್ರಿಕೋನ ಎಂದು ಇದೆ .ಇದನ್ನು ಎಪಿಡೆಮಿಯೋಜಿಕಲ್ ಟ್ರಯಾಂಗಲ್ ಎನ್ನುವರು. ಒಂದು ರೋಗ  ಬಂದು ಊರಲು ಒಬ್ಬ ಆತಿಥೇಯ , ಒಂದು ರೋಗಕಾರಕ ವಸ್ತು (ಏಜೆಂಟ್ )ಮತ್ತು  ಪೂರಕ ವಾತಾವರಣ ಬೇಕು .ಉದಾಹರಣೆ ಗೆ  ಮಲೇರಿಯ ರೋಗ ಉಂಟಾಗಲು ಈ ರೋಗದ ಕ್ರಿಮಿ ಇದ್ದರೆ ಸಾಲದು . ಅದನ್ನು ಅನುಭವಿಸಲು ಒಬ್ಬ ಬಲಿ ಪಶು (ಮನುಷ್ಯ ) ವಾಹಕ ಸೊಳ್ಳೆ ಮತ್ತು ಅದು ಬೆಳೆಯಲು ಬೇಕಾದ ವಾತಾವರಣ ಇರ ಬೇಕು . ಇಲ್ಲದಿದ್ದರೆ ರೋಗ ಇಲ್ಲ . 

  ನಮ್ಮ ಸಮಾಜದಲ್ಲಿ ಈಗ ಕಂಡು ಬರುವ  ಅಶಾಂತಿ ಅಸಹನೆ ಎಲ್ಲಾ ಯಾವುದೊ ಒಂದು ಹೆಸರಿಡದ ಕಾಯಿಲೆ . ಇದರಿಂದ ಬಳಲುವವರು ಜನ ಸಾಮಾನ್ಯರು . ರೋಗಾಣು ನಿಮ್ಮ ಊಹೆಗೆ ಬಿಟ್ಟದ್ದು . ಪೂರಕ ವಾತಾವರಣದ ಒಂದು ಅಂಶ ಸಮೀಪದಲ್ಲಿ ಬರುತ್ತಿರುವ ಸಾರ್ವತ್ರಿಕ ಚುನಾವಣೆ