ನಿನ್ನೆಯ ದಿನ ನನ್ನ ಜೀವನದ ಅತ್ಯಂತ ಮಧುರ ದಿನ . ಮುಂಜಾನೆ ೯ ಗಂಟೆಗೆ ಪುತ್ತೂರಿನಿಂದ ಮಿತ್ರ ವಿದ್ವಾಂಸ ಡಾ ವರದರಾಜ ಚಂದ್ರಗಿರಿ ಮತ್ತು ಪ್ರಕಾಶ ಕೊಡೆಂಕ್ರಿ ಜತೆ ದೇರಳಕಟ್ಟೆಗೆ ನನ್ನ ಕಾರಿನಲ್ಲಿ ಪ್ರಯಾಣ .ಸಮಾನ ಮನಸ್ಕರು ಜತೆಯಿರಲು ದಾರಿ ಸವೆದದ್ದೇ ತಿಳಿಯಲಿಲ್ಲ . ದೇರಳಕಟ್ಟೆ ಕ್ಷೇಮ ಕ್ಯಾಂಪಸ್ ಪ್ರವೇಶಿಸಿದ ಒಡನೆ ಡಾ ಕಿಶನ್ ಮತ್ತು ಮ್ಯಾನೇಜರ್ ರಚನಾ ಚೆಂಗಪ್ಪ ಅವರ ನಗುಮೊಗದ ಸ್ವಾಗತ . ರಚನಾ ಕೌನ್ಸೆಲರ್ ಆಗಿ ಸೇರಿ ಶ್ರೀ ಬಾಬು ಪೂಜಾರಿ (ಇವರ ಬಗ್ಗೆ ಹಿಂದೆ ಬರೆದಿದ್ದೆ )ಅವರು ನಿವೃತ್ತರಾದ ಮೇಲೆ ಆಫೀಸ್ ಮ್ಯಾನೇಜರ್ ಆದವರು .ಸದಾ ನಗುಮೊಗ ,ಪಾದರಸ ಚಲನೆ .ನನ್ನ ಪರಿಚಯ ಆಯಿತೋ ಎಂದು ಕೇಳಲು 'ಸರ್ ನಿಮ್ಮ ಮರೆಯುವುದುಂಟೋ ನೀವು ಸ್ಥಾಪಕ ಅಧ್ಯಾಪಕ ಗಣ ಭೂಷಣರು "ಎಂದರು .ಕಿಶನ್ ಇಡೀ ಕಾರ್ಯಕ್ರಮ ಏರ್ಪಡಿಸಿದ ಉತ್ಸಾಹಿ ವೈದ್ಯ ,ರೋಗ ಶಾಸ್ತ್ರ ವಿಭಾಗ ಅಧ್ಯಾಪಕ .
ಡೀನ್ ಡಾ ಪ್ರಕಾಶ್ ನಮಗಾಗಿ ಕಾಯುತ್ತಿದ್ದು ಸಹೋದ್ಯೋಗಿಗಳ ಜತೆ ಉಪಹಾರ ನಂತರ ಸರಿ ಹನ್ನೊಂದು ಗಂಟೆಗೆ ನಾನು ಹಿಂದೆ ಪಾಠ ಮಾಡಿದ ಹಾಳ್ ನಂಬರ್ ೧ ರಲ್ಲಿ ಸಭಾ ಕಾರ್ಯಕ್ರಮ .
ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ ಸುಧೀಂದ್ರ ರಾವ್ ಕನ್ನಡದಲ್ಲಿ ಸ್ವಾಗತಿಸಿ ,ನನ್ನ ವಿದ್ಯಾರ್ಥಿಯಾಗಿ ಈಗ ಪ್ರೊಫೆಸರ್ ಆಗಿರುವ ಡಾ ಶಾಮ್ ಪ್ರಕಾಶ್ ನನ್ನ ಪರಿಚಯ ಮಾಡಿದರು .ನಂತರ ಪುಸ್ತಕ ಬಿಡುಗಡೆ .
ನನ್ನ ಮಾತಿನ ಸಾರಾಂಶ ಹೀಗಿತ್ತು .
"ಕ್ಷೇಮಕ್ಕೆ ಬರುವುದೆಂದರೆ ನನಗೆ ತವರು ಮನೆಗೆ ಬಂದಂತೆ ;ನನ್ನ ೪೦ ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಕಡೆ ಕೆಲಸ ಮಾಡಿದ್ದು ಅದರಲ್ಲಿ ಎರಡು ನನ್ನ ಹೃದಯಕ್ಕೆ ಬಲು ಸಮೀಪ .ಒಂದು ರೈಲ್ವೆ ಆಸ್ಪತ್ರೆ ಪೆರಂಬೂರ್ ,ಮತ್ತು ಇನ್ನೊಂದು ಕ್ಷೇಮಾ .ಇದರ ಆರಂಭದ ವರ್ಷಗಳಲ್ಲಿ ಸಂಸ್ಥೆಗೆ ಒಂದು ಇಮೇಜ್ ತರುವಲ್ಲಿ ನನ್ನ ಅಳಿಲು ಸೇವೆಯೂ ಸೇರಿದೆ .ಪಿ ಜಿ ಇಂಟರ್ನ್ ಗಳು ಇಲ್ಲದ ಆ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಕೇಸ್ ಶೀಟ್ ,ಡಿಸ್ಚಾರ್ಜ್ ಸಮ್ಮರಿ ಬರೆಯುವುದು ಇತ್ಯಾದಿ ಕೆಲಸ ಮಾಡಿದ್ದೇವೆ .ಎರಡು ದಿನಕ್ಕೊಮ್ಮೆ ದಿನ ರಾತ್ರಿ ಪಾಳಿ ಮಾಡಿದ್ದು ನಾಲ್ಕನೇ ಮಹಡಿಯ ಡ್ಯೂಟಿ ರೂಮ್ ನಿಂದ ಒಂದನೇ ಫ್ಲೋರ್ ನಲ್ಲಿ ಸುಮಾರು ಕಿಲೋಮೀಟರು ದೂರ ಇರುವ ಐ ಸಿ ಯು ,ಇನ್ನೂ ಕೆಳಗೆ ಓ ಪಿ ಡಿ ಗೆ ನಡೆದು ,ಕೆಲವೊಮ್ಮೆ ಓಡಿ ಹೋಗಿದ್ದೇವೆ ..ಹಗಲು ರಾತ್ರಿ ಇರುತ್ತಿದ್ದರಿಂದ ಇಲ್ಲಿಯ ಎಲ್ಲಾ ಸಿಬ್ಬಂದಿಗಳೂ ಪರಿಚಿತರಾಗಿದ್ದರು .ಇನ್ನು ಪ್ಯಾಥಾಲಜಿ ,ಬಯೋ ಕೆಮಿಸ್ಟ್ರಿ ಮತ್ತು ರೇಡಿಯೊಲೊಜಿ ವಿಭಾಗಕ್ಕೆ ರೋಗಿಗಳ ವಿವರ ಚರ್ಚಿಸಲು ಸ್ವತಃ ಹೋಗುತ್ತಿದ್ದು ಎಲ್ಲರೂ ಮಿತ್ರರು . ನಾನು ವಿಭಾಗಕ್ಕೆ ಯಾವುದಾದರೂ ಕೆಲಸ ಅಪೇಕ್ಷಿಸಿದಾಗ ಕೂಡಲೇ ಆಗುತ್ತಿದ್ದು ಆಮೇಲೆ ಬಂದ ಸಹೋದ್ಯೋಗಿಗಳಿಗೆ ಆಶ್ಚರ್ಯ ಆಗುತ್ತಿತ್ತು . ನನ್ನ ಹೆಸರು ಆಪರೇಷನ್ ಥೀಯೇಟರ್ ನ ಶಸ್ತ್ರಕ್ರಿಯಾ ಪಟ್ಟಿಯಲ್ಲಿ ಕೂಡಾ ಕಾಣ ಬಹುದು ;ರಾತ್ರಿ ಪಾಳಿಯಲ್ಲಿ ಕೆಲವೊಮ್ಮೆ ಮಿತ್ರರಿಗೆ ಅಸಿಸ್ಟ್ ಮಾಡಲು ಸ್ವ ಇಚ್ಛೆಯಿಂದ ಹೋಗಿದ್ದೆ .. ಫುಲ್ ಟೈಮ್ ಕಾರ್ಡಿಯಾಲಜಿಸ್ಟ್ ಬರುವ ತನಕ ಹೃದಯದ ಸ್ಕ್ಯಾನ್ (ಏಕೋ ಕಾರ್ಡಿಯೋಗ್ರಫಿ )ನಾನೇ ಮಾಡುತ್ತಿದ್ದು ರೇಡಿಯಾಲಜಿ ವಿಭಾಗದ ಒಬ್ಬನೂ ಆಗಿದ್ದೆ ,ಮಧ್ಯಾಹ್ನ ಊಟ ಅಲ್ಲಿಯೇ ಡಾ ಶ್ರೀಕೃಷ್ಣ ಭಟ್ ಜತೆ .
ಖ್ಯಾತ ವೈದ್ಯ ಪ್ರಾಧ್ಯಾಪಕ ಡಾ ಕೆ ವಿ ತಿರುವೆಂಗಡಂ ಹೇಳುತ್ತಿದ್ದರು .'"ಕಲಿಕೆಗೆ ಉತ್ತಮ ಮಾರ್ಗ ಕಲಿಸುವುದು .ಇನ್ನೊಬ್ಬನಿಗೆ ಕಲಿಸುವಾಗ ನೀವೂ ಕಲಿಯುವಿರಿ ."ಇದರ ಅರ್ಥ ಇಲ್ಲಿ ನನಗೆ ಆಗಿದೆ .ನಾನು ಕಲಿಸಿದ ಅನೇಕರು ಈಗ ಪ್ರೊಫೆಸರ್ ಆಗಿದ್ದು ನಾನು ಪ್ರೊಫೆಸರ್ ಗಳ ಅಧ್ಯಾಪಕ ಎಂದು ಅಜ್ಜ ನಾದ ಅನುಭವ
ಪುಸ್ತಕಗಳು ಮತ್ತು ವಾಚನಾಲಯ ನನ್ನ ಹೃದಯಕ್ಕೆ ಹತ್ತಿರ .ಇಲ್ಲಿಯ ವಾಚನಾಲಯ ಸಜ್ಜು ಗೊಳಿಸಲು ಈಗ ಡಾಕ್ಟರ್ ಆಗಿರುವ ಯುವತಿ ಲೈಬ್ರರಿಯನ್ ಸುಪ್ರಿತಾ ಶೆಟ್ಟಿ ಯವರಿಗೆ ಕಾಲೇಜಿಗೆ ರಜೆ ಹಾಕಿ ಬಂದು ಸಹಾಯ ಮಾಡಿದ್ದೆ . ಇವನು ಆಸ್ಪತ್ರೆ ಕೆಲಸ ಮಾಡದೇ ಅಂಡಲೆಯುತ್ತಿದ್ದಾನೆ ಎಂದು ಇತರರು ಹೇಳುವುದು ಬೇಡ ಮತ್ತು ನೇರವಾಗಿ ನನ್ನ ವಿಭಾಗಕ್ಕೆ ಸಂಬಂಧಿಸದ ಕಾರ್ಯ ಅಲ್ಲ ಎಂಬ ಕಾರಣಕ್ಕೆ ರಜೆ ಹಾಕಿದ್ದು .
ವೈದ್ಯ ಶಾಸ್ತ್ರ ಅತೀ ವೇಗವಾಗಿ ಮುಂದುವರಿಯುತ್ತಿದ್ದು ಅದರ ಗತಿ ಹಿಡಿಯುವುದರಲ್ಲಿ ವ್ಯಸ್ತರಾದ ನಾವು ಜನ ಸಾಮಾನ್ಯರನ್ನು ಇದ್ದಲ್ಲೇ ಬಿಟ್ಟು ,ಅವರು ವಿವರಗಳಿಗಾಗಿ ಅವೈಜ್ಞಾನಿಕ ಮೂಲಗಳನ್ನು ಅವಲಂಬಿಸ ಬೇಕಾಗಿದೆ .. ನಾವು ನಮ್ಮ ಹಿರಿಯರ ಜ್ಞಾನಕ್ಕೆ ಹೆಮ್ಮೆ ಪಡ ಬೇಕು ;ಅವರ ಮೌಢ್ಯ ಮತ್ತು ಮೂಡ ನಂಬಿಕೆಗಳಿಗೆ ಅಲ್ಲಾ .ಕವಿಗಳು ಹೇಳಿದಂತೆ 'ನಿಮ್ಮ ಪಾದದ ಧೂಳಿ ನಮ್ಮ ಹಣೆಯ ಮೇಲೆ ಇರಲಿ ,ಆದರೆ ಕೆಳಗೆ ಬಂದು ದೃಷ್ಟಿ ಮಸುಕು ಮಾಡದಿರಲಿ "
ನಾನು ಶಾಲಾ ಪಠ್ಯಗಳಲ್ಲಿ ಪ್ರಥಮ ಚಿಕಿತ್ಸೆಗೆ ಆದ್ಯತೆ ನೀಡಿಲ್ಲ .ನನ್ನ ಕೃತಿಯ ಮೊದಲ ಪುಟ ಅದರಿಂದ ಆರಂಭಿಸಿದ್ದೇನೆ .
ಹಲವು ಕಾಯಿಲೆಗಳಿಗೆ ಸ್ಥಳೀಯ ಭಾಷೆಯಲ್ಲಿ ನಾವಿನ್ನೂ ಸರಿಯಾದ ಹೆಸರು ಇಟ್ಟಿಲ್ಲ ..ಉದಾ ಸ್ಟ್ರೋಕ್ ,ಇದು ಮೆದುಳಿನ ರಕ್ತ ಸಂಚಾರ ವ್ಯತ್ಯಯವಾಗಿ ಉಂಟಾಗುವದು ,ಇದನ್ನು ಪಕ್ಷವಾತ ,ಲಕ್ವಾ ಇತ್ಯಾದಿ ಕರೆದರೆ ಕಾಯಿಲೆ ಕೈ ಕಾಲಿನಲ್ಲಿ ಎಂಬ ಭಾವ ಬರುವುದು .ಅದಕ್ಕೆ ನಾನು ಮೆದುಳಿನ ಆಘಾತ ಎಂಬ ಹೆಸರು ಹುಟ್ಟು ಹಾಕಿದ್ದು ಅದರ ಕಾಪಿ ರೈಟ್ ಅಥವಾ ಪೇಟೆಂಟ್ ಕೇಳುವದಿಲ್ಲ . ಇನ್ನು ಹರ್ಪಿಸ್ ಜೊಸ್ಟರ್ ಎಂಬ ರೋಗಕ್ಕೆ ಸರ್ಪ ಸುತ್ತು ಎಂದು ಕರೆಯುವುದರಿಂದ ಒಂದು ಕಳಂಕ ಮತ್ತು ಧಾರ್ಮಿಕ ಬಣ್ಣ ಬಂದು ಜನರು ಲಭ್ಯವಿರುವ ಒಳ್ಳೆಯ ಚಿಕಿತ್ಸೆ ಬದಲಿಗೆ ಬೇರೆ ಮಾರ್ಗದಲ್ಲಿ ಹೋಗಿ ಬವಣೆ ಅನುಭವಿಸುವರು .ಅದಕ್ಕೆ ನಾನು ನರ ಕೋಟಲೆ ಎಂದು ಹೆಸರು ಕೊಟ್ಟಿರುವೆನು .ಸರಕಾರ ರಸ್ತೆ ,ವೃತ್ತಗಳ ಹೆಸರು ಬದಲಿಸಿದಂತೆ ರೋಗಗಳ ಹೆಸರೂ ಬದಲಿಸಿ ಇನ್ನು ಮುಂದೆ ಯಾರದರೂ ಸರ್ಪ ಸುತ್ತು ಎಂಬ ಹೆಸರು ಉಪಯೋಗಿಸಿದರೆ ದಂಡ ಹಾಕ ಬಹುದು .
ಇನ್ನು ಜನರಿಗೆ ಊರಿನಲ್ಲಿ ಇರುವ ಕಾಯಿಲೆಗಳಾದ ಟೈಫಸ್ ,ಆಮ್ನಿಯೋಟಿಕ್ ಫ್ಲೂಯಿಡ್ ಎಂಬೋಲಿಸ್ಮ್ ಇತ್ಯಾದಿಗಳ ಬಗ್ಗೆ ಮಾಹಿತಿ ಇಲ್ಲದುದರಿಂದ ಅವನ್ನು ಪುಸ್ತಕದಲ್ಲಿ ಸೇರಿಸಿದ್ದೇನೆ . ನಾನಾ ಕಾರಣಕ್ಕೆ ಬರುವ ಜಾಂಡಿಸ್ ಅಥವಾ ಮಂಜಪಿತ್ತ ಎಂಬ ರೋಗ ಲಕ್ಷಣವನ್ನು ರೋಗ ಎಂದು ತಿಳಿದು ಆಗುವ ಅನಾಹುತ ಮನನ ಮಾಡುವ ಪ್ರಯತ್ನ ,ಗ್ಯಾಸ್ಟ್ರಿಕ್ ಎಂಬ ಅಸ್ಪಷ್ಟ ರೋಗ ಲಕ್ಷಣ ಬಗ್ಗೆ ಚರ್ಚೆ ಮಾಡಿದ್ದೇನೆ .,ರೋಗಿಯನ್ನು ಇಡಿಯಾಗಿ ಚಿಕಿತ್ಸೆ ಮಾಡದೇ ರಿಪೋರ್ಟ್ ಗೆ ಔಷಧಿ ಕೊಡುವದುದರ ಅಪಾಯ ಬಗ್ಗೆ ವಿವರ ಇದೆ .
ಇವಲ್ಲದೆ ಪುಸ್ತಕದಲ್ಲಿ ಕೆಲವು ವ್ಯಕ್ತಿ ಚಿತ್ರಗಳು ,ನನ್ನ ವಿದ್ಯಾರ್ಥಿ ,ವೃತ್ತಿ ಜೀವನದ ಪಕ್ಷಿನೋಟ ಇದೆ.
ಇವುಗಳನ್ನು ನಾನು ಫೇಸ್ ಬುಕ್ ನಲ್ಲಿ ಸರಣಿಯಾಗಿ ಬರೆಯುತ್ತಿದ್ದು ಹಿರಿಯರಾದ ಡಾ ಸಿ ಆರ್ ಬಲ್ಲಾಳ್ ಮತ್ತು ಅನೇಕ ಮಿತ್ರರು ಆಶಿಸಿದಂತೆ ಪುಸ್ತಕ ರೂಪದಲ್ಲಿ ತಂದಿರುವೆನು .
ನಮಗೆ ಎರಡು ಆಯ್ಕೆ ಇದೆ .ಒಂದು ರೋಗಿಗಳ ಮೌಢ್ಯ ಗಳನ್ನು ಅಲ್ಲ ಗೆಳೆಯದೇ ಅದಕ್ಕೂ ಸೇರಿ ಔಷಧಿ ಬರೆಯುವದು .ಇನ್ನೊಂದು ಅವರ ತಪ್ಪು ತಿಳುವಳಿಕೆ ಗಳನ್ನು ಎತ್ತಿ ತೋರಿಸಿ ,ವೈಜ್ಞಾನಿಕ ಮಾಹಿತಿಗಳನ್ನು ನೀಡುವದು ,ಎರಡನೇಯದಕ್ಕೆ ಸಮಯ ಮತ್ತು ವ್ಯವಧಾನ ಬೇಕು .ಆದರೆ ಅದಕ್ಕೆ ಹೆಚ್ಚಿನ ಧನ ರೂಪದ ಪ್ರತಿಫಲ ನಿರೀಕ್ಷಿಸುವಂತೆ ಇಲ್ಲ .. "
ಡಾ ವರದರಾಜ ಚಂದ್ರಗಿರಿ ನನ್ನ ಮತ್ತು ಪುಸ್ತಕದ ಬಗ್ಗೆ ತಪ್ಪುಗಳನ್ನು ಹೊಟ್ಟೆಗೆ ಹಾಕಿ ಹರಸಿದರು . ಡೀನ್ ಡಾ ಪಿ ಎಸ ಪ್ರಕಾಶ್ ಅಧ್ಯಕ್ಷ ಭಾಷಣ ಮಾಡಿದರು .ಡಾ ಕಿಶನ್ ವಂದನಾರ್ಪಣೆ ಮಾಡುವಾಗ ನನ್ನನ್ನು ಪುನಃ ಕ್ಷೇಮಾ ಕ್ಕೆ ಬರುವಂತೆ ಅಹ್ವಾನ ಇತ್ತರು .
ಹೆಸರು ಬರೆಯ ಹೋಗುವುದಿಲ್ಲ .ನನ್ನ ಹಳೆಯ ಸಹೋದ್ಯೋಗಿಗಳು ಪ್ರೀತಿಯಿಂದ ಬಂದ್ದಿದ್ದು ಅವರ ಆರದ ಪ್ರೀತಿ ಸ್ನೇಹಗಳ ಕಂಡು ಮನಸು ತುಂಬಿ ಬಂತು , ಕಿರಿಯರು ಕೆಲವರು ನನ್ನ ಪಾದ ಮುಟ್ಟಿ ಆಶೀರ್ವಾದ ತೆಗೆದು ಕೊಂಡಾಗ ಈ ಕಾಲದಲ್ಲಿ ಅದೂ ಮೆಡಿಕಲ್ ಕಾಲೇಜಿನಲ್ಲಿ ಇಂತಹ ಸಂಬಂಧಗಳು ಇವೆಯೇ ಎಂದು ನೀವು ಆಲೋಚಿಸ ಬಹುದು