ಬೆಂಬಲಿಗರು

ಭಾನುವಾರ, ಫೆಬ್ರವರಿ 28, 2021

ಡೆಂಗು ಅಥವಾ ಡೆಂಗಿ ಜ್ವರ

                         ಡೆಂಗು  ಅಥವಾ ಡೆಂಗಿ  ಜ್ವರ 

 

ಇದು  ವೈರಸ್ ಜನ್ಯ ಕಾಯಿಲೆ . ಈಡಿಸ್ ಸೊಳ್ಳೆ ಸಾರ್ವಜನಿಕ ಸಂಪರ್ಕಾಧಿಕಾರಿ(ಒಬ್ಬರಿನಂದ ಇನ್ನೊಬ್ಬರಿಗೆ ಹರಡುವುದು ) . ಮೊದಲ  ಮಳೆ  (ಈಗಲಂತೂ ಅಕಾಲ ಮಳೆ ಸಾಮಾನ್ಯ ) ಬಿದ್ದ ಕೂಡಲೇ  ಇವುಗಳ ಕಾಟ ಜೋರು .ಅಲ್ಲಲ್ಲಿ  ನಿಂತ ನೀರು  ಕೂಡ ಇವುಗಳ ಉಗಮ ಸ್ಥಾನ . ವೈರಸ್ ವಾಹಕ ಸೊಳ್ಳೆ ಕಡಿತದ  ೪ ರಿಂದ ೧೦ ದಿನಗಳಲ್ಲಿ  ರೋಗ ಲಕ್ಷಣಗಳು ಕಾಣಿಸಿ ಕೊಳ್ಳುವವು .. 

ಜ್ವರ ,ವಿಪರೀತ ತಲೆನೋವು ಅದೂ ಕಣ್ಣ ಹಿಂದಿನ ನೋವು ,ಮೈಕೈ ನೋವು ,ಗಂಟು ನೋವು ಸಾಮಾನ್ಯ ಲಕ್ಷಣಗಳು . ಮೈಯಲ್ಲಿ ಕೆಂಪು ಬೀಳುವುದು,ತುರಿಕೆ(ಇದು ಔಷಧಿ ಯ  ಅಲ್ಲರ್ಜಿ ಅಲ್ಲಾ ),ಹೊಟ್ಟೆ ನೋವು(ಇದು ಸಾಮಾನ್ಯ ಗ್ಯಾಸ್ಟ್ರಿಕ್ ನೋವು ಅಲ್ಲ ) ,ವಾಂತಿ , ಭೇದಿ ,ರಕ್ತ ಸ್ರಾವ ಮತ್ತು  ಪ್ರಜ್ಞಾವಸ್ಥೆ  ಏರು ಪೇರು  ಉಂಟಾಗ ಬಹದು . 

ರೋಗ ಲಕ್ಷಣಗಳು ಮತ್ತು ರಕ್ತ ಪರೀಕ್ಷೆಯಿಂದ  ಈ ಕಾಯಿಲೆ ದೃಢ ಪಡಿಸಿ ಕೊಳ್ಳುವರು . ರಕ್ತದಲ್ಲಿ  ಬಿಳಿ ರಕ್ತ ಕಣಗಳು ಮತ್ತು  ಪ್ಲೇಟಿಲೆಟ್ ಕಡಿಮೆ ಇರುವುದು . ಪ್ಲೇಟಿಲೆಟ್ ಸಂಖ್ಯೆ  ಕಾಯಿಲೆಯ  ತೀವ್ರತೆ ಸೂಚಿಸ ಬಹುದಾದರೂ ಅದರ ಕೊರತೆ ಪ್ರಾಣಾಪಾಯಕ್ಕೆ ಕಾರಣ ವಾಗುವುದು ಅಪರೂಪ . ಯಾವುದೇ ರಕ್ತ ಸ್ರಾವ ಇಲ್ಲದಿದ್ದರೆ  ಪ್ಲೇಟಿಲೆಟ್  ೧೦೦೦೦(ನಾರ್ಮಲ್  ಒಂದುವರೆ ಯಿಂದ ನಾಲ್ಕು ಲಕ್ಷ ) ಕಡಿಮೆ ಆಗುವ ವರೆಗೂ ಪ್ಲೇಟೆಲೆಟ್ ಕೊಡ ಬಾರದು ಎಂದು ಜಾಗತಿಕ ಅರೋಗ್ಯ ಸಂಸ್ಥೆಯೇ ಸೂಚಿಸಿದೆ .ರಕ್ತ  ಪರೀಕ್ಷೆಯಲ್ಲಿ ಪಿ ಸಿ ವಿ (Packed  Cell  Volume ) ಏರುವುದು .ನೀರಿನ ಅಂಶ ಹೊರಹೋಗುವುದರಿಂದ  ರಕ್ತದ ಕೆಂಪು ರಕ್ತ ಕಣ ಮತ್ತು ರಕ್ತ ದ್ರವದ ದಾಮಾಶಯ ಹೆಚ್ಚುವುದು   . .  ರಕ್ತನಾಳ ಗಳಿಂದ  ನೀರಿನ ಅಂಶ ಸೋರಿ ರಕ್ತದ ಒತ್ತಡ ಕಡಿಮೆ ಆಗುವುದು ಅಪಾಯದ ಲಕ್ಷಣ . ಮೊದ  ಮೊದಲು ಕುಳಿತಾಗ ಮತ್ತು ನಿಂತಾಗ  ತಲೆ ತಿರುಗುವುದು ,ಮೈ ಮಾಲುವುದು ಉಂಟಾಗ ಬಹದು . ಮಲಗಿದ ಸ್ಥಿತಿ ಯಲ್ಲಿ  ಬಿ ಪಿ ಸರಿ ಇದ್ದರೂ ಕುಳಿತಾಗ ಕುಸಿಯುವುದು . ಇದರ ಮುಂದುವರಿದ  ರೋಗಸ್ಥಿತಿಗೆ  ಡೆಂಗು  ಶಾಕ್ ಎನ್ನುವರು . ವೈದ್ಯ ಶಾಸ್ತ್ರದಲ್ಲಿ  ಯಾವುದೇ ಕಾರಣಕ್ಕೆ ರಕ್ತದ ಒತ್ತಡ ಕಡಿಮೆ ಆಗಿ  ಅಂಗಾಂಗಗಳಿಗೆ (ಮುಖ್ಯವಾಗಿ ಮೆದುಳು ಮತ್ತು ಮೂತ್ರ ಪಿಂಡ )ಆಹಾರ ಮತ್ತು ಪ್ರಾಣವಾಯು ಸರಬರಾಜು ವ್ಯತ್ಯಯ ಆಗುವುದಕ್ಕೆ  ಶಾಕ್ ಎನ್ನುವರು 

     ಡೆಂಗು  ವೈರಸ್ ಗೆ ಚಿಕಿತ್ಸೆ ಇಲ್ಲ .ಆದುದರಿಂದ ಕಾಯಿಲೆ ತನ್ನಿಂದ ತಾನೇ ಕಡಿಮೆ ಆಗಬೇಕು .ಜ್ವರಕ್ಕೆ  ಪ್ಯಾರಾಸಿಟಮಾಲ್ ಮಾತ್ರೆ ಸಾಕು . ಹೆಚ್ಚಿನವರಿಗೂ  ಮನೆಯಲ್ಲಿ ವಿಶ್ರಾಂತಿ ತೆಗೆದು ಕೊಳ್ಳಲು ಸೂಚಿಸುವರು . 

ತೀವ್ರತರ  ಹೊಟ್ಟೆ ನೋವು ,ವಾಂತಿ ,ರಕ್ತದ ಒತ್ತಡ ಏರುಪೇರು ಇದ್ದರೆ ,ವೃದ್ದರು ,ಗರ್ಭಿಣಿಯರು ಮತ್ತು  ಬೇರೆ ಕಾಯಿಲೆಗಳಿಂದ ಬಳಲುವವರನ್ನು ಆಸ್ಪತ್ರೆಗೆ  ದಾಖಲು ಆಗಲು ಸೂಚಿಸುವರು . ಅವರಿಗೆ ರಕ್ತ ನಾಳಗಳ ಮೂಲಕ ಜಲ ಪೂರಣ ಮತ್ತು ಜ್ವರ ನಿವಾರಕ ಕೊಡುವರು . 

ಪ್ಲಾಟಿಲೆಟ್ ಸಂಖ್ಯೆ ಒಂದು ಮಟ್ಟದ ವರೆಗೆ ಕಡಿಮೆ ಆಗಿ ತನ್ನಿಂದ ತಾನೇ ಸರಿ ಆಗುವುದು .ಅದಕ್ಕೆಂದು ಪಪ್ಪಾಯಿ ಎಲೆ ,ಕಿವಿ  ಹಣ್ಣು ಇತ್ಯಾದಿ ತಿನ್ನ ಬೇಕಿಲ್ಲಾ . ಊರಿನಲ್ಲಿ  ಸುಲಭವಾಗಿ ಸಿಗುವ ಯಾವುದೇ ಹಣ್ಣು ತಿನ್ನ ಬಹುದು . 

ಜ್ವರ ಬಿಟ್ಟ ಕೂಡಲೇ  ಸಂಪೂರ್ಣ ಅಪಾಯ ಮರೆಯಾಗದು  .ಹಠಾತ್  ರಕ್ತದ ಒತ್ತಡ ಕಡಿಮೆ  ಆಗ ಬಹುದು .(ಡೆಂಗು  ಶಾಕ್ ಎನ್ನುವರು )


 

ಬುಧವಾರ, ಫೆಬ್ರವರಿ 24, 2021

ಪೆಟ್ರೋಮ್ಯಾಕ್ಸ್

                    ಪೆಟ್ರೋಮ್ಯಾಕ್ಸ್ 

 

                   ಹಿಂದೆ  ಸಮಾರಂಭಗಳಿಗೆ  ಕಳೆ  ತರಲು   ಪೆಟ್ರೋಮ್ಯಾಕ್ಸ್  ಒಂದು ಅವಶ್ಯ ಸಾಧನ ಆಗಿತ್ತು . ಇದನ್ನು ೧೯೧೦ ರಲ್ಲಿ  ಜರ್ಮನಿಯ  ಮ್ಯಾಕ್ಸ್  ಗ್ರೆಟ್ಜ್ ಕಂಡು ಹಿಡಿದನು . ಪೆಟ್ರೋಲಿಯಂ ಜನಿತ ಸೀಮೆ ಎಣ್ಣೆ ಯನ್ನು  ಪಂಪ್ ಮೂಲಕ ಒತ್ತಡ ಹಾಕಿ ಆವಿ ಯನ್ನಾಗಿಸಿ  ಮೆಂಟ್ಲ್ ಉರಿಸಿದಾಗ ವಿದ್ಯುತ್  ಬೆಳಕಿನ ವಾತಾವರಣ ಉಂಟಾಗಾಗುವುದು . ಪೆಟ್ರೋ ಮತ್ತು ಇದನ್ನು ಕಂಡು ಹಿಡಿದ ಮ್ಯಾಕ್ಸ್ ಸೇರಿ ಪೆಟ್ರೋಮ್ಯಾಕ್ಸ್  ಆಯಿತು ..ಇದರ  ಒಳಗೆ ಮೆಂಟ್ಲ್  ಸಣ್ಣ   ತಟ್ಟೆ ಇದ್ದು ಅದಕ್ಕೆ ಸ್ಪಿರಿಟ್ ಹಾಕಿ ಉರಿಸುವರು .ಆಮೇಲೆ  ಸೀಮೆ ಎಣ್ಣೆ ಪಂಪ್ ಮಾಡುವರು . ಕೆಲವೊಮ್ಮೆ ಸ್ಪಿರಿಟ್ ಇಲ್ಲದೆಯೇ ಎಣ್ಣೆ  ಪಂಪ್ ಮಾಡಿ ಗ್ಯಾಸ್ ಜೆಟ್ ಗೆ ಉರಿ ಹಚ್ಚುವರು . 

ಮದುವೆ  ಇತ್ಯಾದಿ ಸಮಾರಂಭಗಳಿಗೆ  ಗ್ಯಾಸ್ ಲೈಟ್ ಹಚ್ಚಿದಾಗಲೇ ಕಳೆ ಬರುವುದು .ಇದನ್ನು ಬಾಡಿಗೆಗೆ ಕೊಡುವ ಅಂಗಡಿಗಳು ಇದ್ದವು .ಅದರ ಬೆಳಕಿನಲ್ಲಿ  ನೆಂಟರು ಮತ್ತು ಅಕ್ಕ ಪಕ್ಕದ ಮನೆಯವರು ಕುಳಿತು ತರಕಾರಿ ಹಚ್ಚುವರು.  . ಆಮೇಲೆ  ಇಸ್ಪೇಟು ಆಟ .  ಮಕ್ಕಳಿಗೆ ತಮಾಷೆ ,ನಗು ,ನಲಿದಾಟ . ಪಂಪ್ ಮಾಡಿದ ಒತ್ತಡ  ಕಮ್ಮಿ ಆದಾಗ ಲೈಟ್  ಮಂಕಾಗುವುದು . ಆಗ ಪುನಃ ಗಾಳಿ ಹಾಕುವರು ...ಸಾಂಪತ್ತಿಕವಾಗಿ  ಬಡ ಯಕ್ಷಗಾನ ಮೇಳಗಳೂ ಜನರೇಟರ್ ವಿದ್ಯುತ್ ಬದಲಿಗೆ ಗ್ಯಾಸ್ ಲೈಟ್ ಉಪಯೋಗಿಸುತ್ತಿದ್ದರು . ಮೆರವಣಿಗೆ ಯಲ್ಲಿ  ಪೆಟ್ರೋಮ್ಯಾಕ್ಸ್  ಹೊರುವವರು ಇರುತ್ತಿದ್ದರು . 

  ಪೆಟ್ರೋಮ್ಯಾಕ್ಸ್ ನ  ಮೆಂಟ್ಲ್  ಪೆಟ್ಟಿಗೆ ಎಲ್ಲರ ಮನೆಯಲ್ಲಿ ರಾರಾಜಿಸುವುದು .ಎಲೆ ಅಡಿಕೆ ಹೊಗೆಸೊಪ್ಪು ಸುಣ್ಣ ಪೆಟ್ಟಿಗೆ ಯಾಗಿ ಇದರ ಉಪಯೋಗ ವ್ಯಾಪಕ ಆದರೂ ಮನೆಯಲ್ಲಿ  ಚಿಲ್ಲರೆ ಹಣ ಇಡಲು ,ಸಮಾರಂಭಗಳಲ್ಲಿ ದಕ್ಷಿಣೆ ,ಕಾರ್ಮಿಕರಿಗೆ  ಸಂಬಳ ಬಟವಾಡೆ ಇತ್ಯಾದಿಗಳಿಗೆ  ಎಟಿ ಎಂ ಆಗಿ ಉಪಯೋಗ ಆಗುವದು . ನೆಂಟರ ಮನೆಗೆ ಹೋಗುವಾಗ  ಸಂಚಾರಿ ವೀಳ್ಯದ ಸಂಚಿಯೂ ಇದೆ . ಇದು ಹೊರ ಬಂದೊಡನೆ ನಾಲ್ಕಾರು  ಮಂದಿ ದಿಡೀರನೆ ಸುತ್ತ ಕುಳಿತು ಧಾಳಿ ಮಾಡುವರು 

            Fargo lantern Gas Mantles vintage Advertisement usable empty box. i2-88

ಸೋಮವಾರ, ಫೆಬ್ರವರಿ 22, 2021

ಶೌಚ ವಿಚಾರಗಳು

                               ಶೌಚ  ವಿಚಾರಗಳು 

ಮೊನ್ನೆ  ಒಬ್ಬ ರೋಗಿ ಡಾಕ್ಟ್ರೇ' ನನಗೆ ಉರಿ ಒಂದಕ್ಕೆ ಗೆ  ಮದ್ದು ಬೇಕು ಎಂದರು .  ಮೂತ್ರ ಶಂಕೆಗೆ ನಾವು ಹಳ್ಳಿ ಶಾಲೆಯಲ್ಲಿ ಒಂದಕ್ಕೆ ಎಂದು ಕರೆಯುತ್ತಿದ್ದೆವು ಆಮೇಲೆ ಈ ಶಬ್ದ ಇತ್ತೀಚಿಗೆ ನಾನು ಕೇಳಿದ್ದು ಇದೇ ಮೊದಲು .ನಾವು ಶಾಲೆಗೆ ಹೋಗುವಾಗ ಹುಡುಗರಿಗೆ  ಶೌಚಾ ಲಯಗಳು ಇರಲಿಲ್ಲವಾದುದರಿಂದ  ಬಯಲು ಮತ್ತು ಗುಡ್ಡಕ್ಕೆ ಹೋಗುತ್ತಿದ್ದೆವು .ಮನೆಯಲ್ಲೂ  ಅದೇ ಪರಿಸ್ಥಿತಿ .ಆಗ ಅದು ವಿಶೇಷ ಅಥವಾ ಮುಜುಗರ ಎಣಿಸುತ್ತಿರಲಿಲ್ಲ .ಹಳ್ಳಿಯಲ್ಲಿ ನೆಂಟರ ಮನೆ ,ಸ್ನೇಹಿತರ ಮನೆಗೆ ಹೋದಾಗಲೂ ಇದು ಸಮಸ್ಯೆ  ಆಗದು .ಆದರೆ ಇಂದು  ಮನೆಯಲ್ಲಿ ಶೌಚಾಲಯ ಇದ್ದರೆ  ಸಾಲದು  ವೆಸ್ಟೆರ್ನ್ ಸ್ಟೈಲ್  ಕಮೋಡ್ ಇದ್ದರೆ  ಬರುವೆನು ಎನ್ನುವ ನೆಂಟರು ಇದ್ದಾರೆ . 

ನಗರಗಲ್ಲಿ   ದೊಡ್ಡದಾಗಿ   ಇಲ್ಲಿ  ಬಯಲು ಶೌಚ ನಿಷೇಧ ಎಂದು ಫಲಕ ಗಳನ್ನು  ಕಂಡಿದ್ದೀರಿ .ಆದರೆ  ಸುರಕ್ಷಿತ ಶೌಚಾಲಯ ಎಲ್ಲಿದೆ  ಎಂಬ ಸೂಚನೆ ಎಲ್ಲೂ ಕಾಣುವುದಿಲ್ಲ . ಪೇಟೆಯಲ್ಲಿ ಮಹಿಳೆ ಮತ್ತು ವೃದ್ಧರ  ಕಷ್ಟ ಹೇಳ ತೀರದು . ಇದಕ್ಕೆ ಪರಿಹಾರ ಸೂಚಿಸದೆ  ನಮ್ಮ ಊರು ಸಂಪೂರ್ಣ ಸ್ವಚ್ಛ ಎಂದು ಘೋಷಿಸಿ ಪ್ರಯೋಜನ ಇಲ್ಲ . ನಮ್ಮಲ್ಲಿ ಕೆಲವು ಕಡೆ ಶೌಚಾಲಯ ಇದ್ದರೂ ಅದನ್ನು ಗಲೀಜು ಮಾಡುವರು ಎಂದು  ಬೀಗ ಜಡಿದು ಸ್ಮಾರಕಗಳಂತೆ ಇಟ್ಟಿರುವರು ,

    ನಾನು ಹುಬ್ಬಳ್ಳಿ ಯಲ್ಲಿ  ಎಂ ಬಿ ಬಿ ಎಸ್  ವಿದ್ಯಾರ್ಥಿಯಾಗಿದ್ದಾಗ  ಕಂಡಂತೆ  ಅಲ್ಲಿಯ ಜನರು ಮೂತ್ರ ಶಂಕೆಗೆ ಕಾಲ್ಮಡಿ  ಎಂದೂ ಮಲವಿಸರ್ಜನೆಗೆ ಬೈಲಕಡೆ  ಅಥವಾ  ತಂಬಿಗೆ ತೆಗೊಂಡು ಎಂದು ಹೇಳುತ್ತಿದ್ದುದನ್ನು ಕಂಡೆ . ಅಲ್ಲಿ  ಮೈ ತುರಿಸುತ್ತಿದೆ ಎಂಬುದಕ್ಕೆ  ಮೈಯೆಲ್ಲಾ ತಿಂಡಿ ಎನ್ನುತ್ತಿದ್ದರು . 

ಉರಿ ಮೂತ್ರಕ್ಕೆ ಇಂಗ್ಲಿಷ್ ನಲ್ಲಿ  ಬರ್ನಿಂಗ್ ಮಿಕ್ಟುರಿಷನ್ ಎನ್ನುವರು . ಇದನ್ನೇ ಕನ್ನಡಕ್ಕೆ ಒಬ್ಬರು ಹತ್ತಿ ಉರಿಯುತ್ತಿರುವ ಮೂತ್ರ ಎಂದು ಮಾಡಿದ್ದರು . 

ಎಲ್ಲಾ ಉರಿ ಮೂತ್ರಗಳೂ  ಸೋಂಕಿನಿಂದ ಲೇ  ಇರುವುದಿಲ್ಲ .

ಮೂತ್ರಾಶಯ (Urinary Bladder ) ದ  ಮೈಯಲ್ಲಿ  ಇರುವ ನರಗಳು ಅದು ತುಂಬಿದಾಗ  ಬೆನ್ನು ಹುರಿಯ ಮೂಲಕ ಮೆದುಳಿಗೆ ಸಂದೇಶ ರವಾನಿಸುತ್ತವೆ . ಮೆದುಳಿನ ಕೆಳಭಾಗ ದಲ್ಲಿ ಇರುವ ಪೋನ್ಸ್ ಎಂಬ ಭಾಗದಲ್ಲಿ ಇದರ ಕೇಂದ್ರ .ಮುಖ್ಯ ಮೆದುಳಿಗೂ ಸಂದೇಶದ ಪ್ರತಿ ಹೋಗುವುದು .ಮೂತ್ರ ವಿಸರ್ಜನೆಗೆ ಯೋಗ್ಯ ವಾತಾವರಣ ಇದ್ದರೆ  ಮೇಲಿನಿಂದ ಸಂದೇಶ ಹೋಗಿ ಮೂತ್ರಾಶಯ  ಸಂಕುಚಿಸಿ ,ಮೂತ್ರ ದ್ವಾರ ವಿಕಸನ ಗೊಂಡು  ಹೊರ ಹರಿವು ಸುಗಮ ಆಗುವುದು . ಇದರಲ್ಲಿ ಐಚ್ಚಿಕ ಮತ್ತು ಅನೈಚ್ಚಿಕ ಮಾಂಸ ಖಂಡಗಳು ಪೂರಕವಾಗಿ ಕಾರ್ಯ ನಿರ್ವಸಿಸುವವು .   ಗಂಡಸರಲ್ಲಿ  ವಯಸ್ಸು ಆದಾಗ ಪ್ರಾಸ್ಟೇಟ್ ಗ್ರಂಥಿ ಉಪಟಳ ಕೊಡ ಬಹುದು .ಹೆಂಗಸರಲ್ಲಿ ಮೂತ್ರಾಶಯ ಮತ್ತು ಮೂತ್ರನಾಳದ ಸುತ್ತಲಿನ ಮಾಂಸ ಖಂಡಗಳು ಬಲಹೀನ ಗೊಂಡು ತೊಂದರೆ ಬರುವುದು .ಇದರ  ಪರಿಣಾಮಗಳು ಬೇರೆ ಬೇರೆ ಇರುವವು .   ಮೂತ್ರ ತುಂಬಿದ ಅನುಭವ ಆದ  ಕೂಡಲೇ ಮೂತ್ರ ಮಾಡ ಬೇಕಾಗುವುದು ,ಇಲ್ಲದಿದ್ದರೆ ಬಟ್ಟೆಯಲ್ಲೇ ಹೋಗುವುದು .ಮೂತ್ರ ಮಾಡಲು ಹೋದರೆ ಮೂತ್ರ ಬರಲು ಸಮಯ ತೆಗೆದು ಕೊಳ್ಳುವುದು .ಕೆಮ್ಮು ಸೀನು ಬಂದಾಗ ಸ್ವಲ್ಪ ಮೂತ್ರ ಹೊರ ಹೋಗುವುದು  ಇತ್ಯಾದಿ . ಇವುಗಳಿಗೆ ವೈದ್ಯರು ಪರಿಹಾರ ಸೂಚಿಸುವರು . 

ಮಲ ವಿಸರ್ಜನೆಯು ಇಂತದೇ ನರಗಳ  ಆಣತಿಯಂತೆ  ನಡೆಯುವದು .ಆದರೂ ಮೂತ್ರದ ತೊಂದರೆಯಂತಹ ಉಪಟಳ ಕಡಿಮೆ

ಶುಕ್ರವಾರ, ಫೆಬ್ರವರಿ 19, 2021

ಸ್ಟೆಥೋಸ್ಕೋಪ್

                           ಸ್ಟೆಥೋಸ್ಕೋಪ್ 

ವೈದ್ಯಕೀಯ ವ್ಯಾಸಂಗ  ಮಾಡಲು ಅಪೇಕ್ಷಿಸುವವರು ' ಹೇಗೆ ಮೆಡಿಕಲ್ ಗೆ  ಸ್ಕೋಪ್ ಇದೆಯಾ ಎಂದು ಕೇಳಿದರೆ ಕೆಲವರು 'ಏನೂ  ಇಲ್ಲದ್ದಿದ್ದರೂ ಸ್ಟೆಥೋಸ್ಕೋಪ್ ಮತ್ತು ಮೈಕ್ರೋಸ್ಕೋಪ್ ಇದ್ದೇ ಇದೆ "ಎನ್ನುವರು . ಒಂದು ರೀತಿಯಲ್ಲಿ ವೈದ್ಯ ವೃತ್ತಿಯನ್ನು  ಸಂಕೇತಿಸುವ   ಉಪಕರಣ .. ಆಧುನಿಕ ವೈದ್ಯ ಶಾಸ್ತ್ರದ ಪ್ರಕಾರ ರೋಗಿಯ ಪರೀಕ್ಷೆ ಯಲ್ಲಿ  ಮುಟ್ಟುವುದು(Palpation),ತಟ್ಟುವುದು (Percussion)ಮತ್ತು  ಆಲಿಸುವುದು(Auscultation) ಮೂರು ಮುಖ್ಯ ಅನುಕ್ರಮ ವಿಧಾನಗಳು .

೧೮೧೬ ರಲ್ಲಿ ಫ್ರೆಂಚ್ ವೈದ್ಯ ಲೆನ್ನೆಕ್  ಇದರ ಮೂಲ ಆವೃತ್ತಿಯನ್ನು ಕಂಡು ಹಿಡಿದು ಬಳಕೆಗೆ ತಂದನು . ಅದು ಒಂದೇ ಕಿವಿಗೆ ಇಟ್ಟು  ಕೇಳುವ ಒಂದು ಕೊಳವೆ ಆಗಿತ್ತು .ಅದರ  ಒಂದು ತುದಿ  ರೋಗಿಯ ಎದೆಗೆ ಮತ್ತು ಇನ್ನೊಂದು ವೈದ್ಯರ ಕಿವಿಗೆ ಇಟ್ಟು  ಆಲಿಸಿದಾಗ  ಹೃದಯ ಬಡಿತ ಸ್ಪಷ್ಟ ವಾಗಿ ಕೇಳಿಸುತ್ತಿತ್ತು . ಧ್ವನಿ ವರ್ಧಕ ಇದ್ದಂತೆ 

                      

            ಮುಂದೆ ಇದು  ಆವಿಷ್ಕಾರ ಹೊಂದಿ  ಈಗ ಜನಪ್ರಿಯ ಆಗಿರುವ ಎರಡೂ  ಕಿವಿಗಳ ಮೂಲಕ ಅಳಿಸುವ ಉಪಕರಣ ಆಯಿತು . 

                   

ಇದರ ಉಪಯೋಗಗಳು  ಹಲವು . 

೧.  ರಕ್ತದ  ಒತ್ತಡ ಮಾಪನ . ಸಾಂಪ್ರದಾಯಕ ಬಿ ಪಿ . ಮಾಪಕಗಳಲ್ಲಿ ರಕ್ತದ ಒತ್ತಡ  

   ಅಳೆಯುವುದು .ಇದು ಅಷ್ಟು ಕಷ್ಟ ವೇನಲ್ಲ . ನೀವೂ  ನಾವೂ ಮಾಡ ಬಹುದು . 

೨.   ಎದೆಯ ಮೇಲೆ ಶ್ವಾಸೋಚ್ವಾಸ  ಗಳ  ಧ್ವನಿ ಮತ್ತು ಲಯ ಗಳ  ಪರಿಶೀಲನೆ . ಉದಾಹಣೆಗೆ  ಎದೆಯಲ್ಲಿ ಶ್ವಾಸ ಕೋಶದ ಹೊರಗೆ  ನೀರು ಅಥವಾ  ಗಾಳಿ ತುಂಬಿದ್ದರೆ
ಉಸಿರಿನ  ಶಬ್ದ  ಸರಿಯಾಗಿ ಕೇಳಿಸದು .ಅದೇ ನ್ಯುಮೋನಿಯಾ ಕಾಯಿಲೆ ಇದ್ದರೆ ದೊಡ್ಡದಾಗಿ  ಕೇಳಿಸುವುದು . ಅಸ್ತಮಾ ಕಾಯಿಲೆಯಲ್ಲಿ ಉಸಿರು ಹೊರ ಬಿಡುವಾಗ ಸುಯಿನ್ ಸುಯಿನ್ ಎಂಬ ಮತ್ತು  ಶ್ವಾಸ ಕೋಶದ ಸೋಂಕಿನಲ್ಲಿ ಮತ್ತು  ಹೃದಯ ವೈಫಲ್ಯದ ಕಾರಣ  ಪುಪ್ಪುಸದಲ್ಲಿ ನೀರು ನಿಂತಾಗ ಗುರು ಗುರು ಎಂಬ  ಕೋರಸ್ ಇರುವುದು . 

೩ . ಹೃದಯದ ಬಡಿತ  ಆಲಿಸುವುದು .  ಇದರಲ್ಲಿ ಲಬ್  ಡಬ್ ಲಬ್ ಡಬ್ ನ  ತೀಕ್ಸ್ನತೆ , ಗತಿ  ಮತ್ತು ಲಯ ವನ್ನು ಗಮನಿಸುವರು .ತಾಳ ತಪ್ಪಿದರೆ ತಿಳಿಯುವುದು .ಜತೆಗೆ  ಕವಾಟಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ  ಅವುಗಳ ಮೂಲಕ ರಕ್ತ ಸಂಚಾರದ   ಮರ್ಮರ  ಕೇಳಿಸುವುದು . 

೪ . ಕರುಳಿನ ಚಲನೆ  ಗುಳು ಗುಳು ಎಂದು ಆರೋಗ್ಯವಂತರಲ್ಲಿ ಕೇಳಿಸುವುದು .ಉದರದ ಮೇಲೆ ಸ್ಟೆಥೋಸ್ಕೋಪ್ ಇಟ್ಟು ಇದನ್ನು ಆಲಿಸುವರು . 

೫  ಗರ್ಭಿಣಿಯರಲ್ಲಿ ಶಿಶುವಿನ  ಹೃದಯ ಬಡಿತವನ್ನು ಕೇಳಲು  ಕೂಡ ಈ ಉಪಕರಣ ಉಪಯೋಗಿಸ  ಬಹುದು . 

  ಆಸ್ಪತ್ರೆಗೆ  ಹೋಗುವಾಗ  ಸರಳವಾದ ಉಡುಗೆ ತೊಡುಗೆ ಧರಿಸಿ ಹೋಗಬೇಕು . ಬಟ್ಟೆಯ ಮೇಲೆ  ಲೋಹದ ಅಥವಾ ಗಾಜಿನ  ಚಿತ್ತಾರಗಳು ಇದ್ದರೆ  ಸ್ಥೆಥೋಸ್ಕೋಪ್ ಇಟ್ಟಾಗ  ಘರ್ಷಣೆ ಆಗಿ ಆ ಶಬ್ದವೇ ಕೇಳಿಸಿ ಕಿರಿ ಕಿರಿ ಆಗುವುದು . 

ಇನ್ನು  ವೈದ್ಯರು ಕೂಡ  ಆಟಿಗೆಯಂತೆ  ಇದನ್ನು  ನೇಲಿಸಿ ಕೊಂಡು ಹೋಟೆಲ್ ,ಮಾಲ್ ಗಳಲ್ಲಿ ಪ್ರದರ್ಶಿಸುದು  ಶೋಭೆ ಅಲ್ಲ . ಮತ್ತು ಇದನ್ನು ಧರಿಸಿದವರಿಗೆ ಎಲ್ಲಾ ಇದರ ಉಪಯೋಗ ತಿಳಿದಿರ ಬೇಕು ಎಂದು ಇಲ್ಲ .ನಕಲಿ ವೈದ್ಯರೂ ಸ್ಟೆಥೋಸ್ಕೋಪ್  ಧಾರಿಗಳಾಗಿ ಕುಳಿತಿರುವರು . ಆದರೆ ಮನವರಿಯದುದ ಕಿವಿ ಕೇಳಿಸದು . ಹೊಟ್ಟೆ ಪಾಡಿಗಾಗಿ ತಮಗರಿವಿಲ್ಲದೇ ಮಾಡುವ ಪಾಪವ ಕ್ಷಮಿಸಿದರೂ  ಪತ್ತೆಯಾಗದ ರೋಗ ನಿಮ್ಮನ್ನು ಬಿಡದು .

ಸ್ಥೆಥೋಸ್ಕೋಪ್ ನ  ಕಿವಿ ಗೆ ಇಡುವ  ಭಾಗವನ್ನು   ಇಯರ್ ಪೀಸ್ ಎಂದೂ ಎದೆಯಲ್ಲಿ ಇಡುವುದನ್ನು ಚೆಸ್ಟ್ ಪೀಸ್ ಎಂದೂ ಕರೆಯುವರು .ಈ ಉಪಕರಣದ ಅತ್ಯಂತ ಮುಖ್ಯ  ಭಾಗ ಎರಡು  ಇಯರ್ ಪೀಸ್ ಗಳ  ನಡುವೆ (ಎಂದರೆ ನಮ್ಮ ಮೆದುಳು ) ಎಂದು ಹೇಳುವರು .


 

 

                          ಇಲಿ  ಜ್ವರ 

 

ನೀವು  ಇಲಿ ಜ್ವರ ಎಂದು ಕೇಳಿರ ಬಹುದು . ಈ ಅಪಾಯಕಾರಿ ಸೋಂಕು ಗಣಪತಿ ವಾಹನ  ಉಂಟು ಮಾಡುವುದಲ್ಲ . ಲೆಪ್ಟಾಸೈರಾ  ಎಂಬ ಬ್ಯಾಕ್ಟೀರಿಯಾ ಇದಕ್ಕೆ ಕಾರಣ . ಇಲಿ ಹೆಗ್ಗಣ ,ಪಶುಗಳು ,ಹಕ್ಕಿಗಳು ಮತ್ತು ಸರೀಸೃಪಗಳೂ  ಈ ರೋಗಾಣುಗಳ  ದಾಸ್ತಾನು  ಕೇಂದ್ರಗಳು ಮತ್ತು ಕೆಲವೊಮ್ಮೆ ಸಂತ್ರಸ್ತರು . 

ಮೇಲೆ  ಹೇಳಿದ ಸೋಂಕಿತ  ಪ್ರಾಣಿಗಳ ಮಲ ಮೂತ್ರ  ,ಮಾಂಸ ,ಸ್ರಾವಗಳಿಂದ  ರೋಗಾಣುಗಳು  ಮನುಷ್ಯನ ದೇಹದ ಒಳಗೆ ಹೇಗೆ ಪ್ರವೇಶಿವವು ? ಗಾಯ ಗಳಿರುವ  ಚರ್ಮ ,ನೀರು ಮತ್ತು ಆಹಾರ .ಮಾಂಸ ಮತ್ತು ಕೆಲವೊಮ್ಮೆ ಪ್ರಾಣಿಗಳ  ಕಡಿತದ ಮೂಲಕ . ಮಳೆ ಗಾಲದಲ್ಲಿ  ಮತ್ತು ಚರಂಡಿ ನೀರು ಹರಿಯುವಲ್ಲಿ  ಈ ಕಾರ್ಯ  ಸುಲಭ ಆಗುವುದು . 

ಮಾನವ ಶರೀರದಲ್ಲಿ  ಸೇರಿ ಕೊಂಡ ರೋಗಾಣು ತನ್ನ  ರೋಗ ಕಾರಕ  ಪ್ರತಿಭೆ  ಪ್ರದರ್ಶನ ಮಾಡುವುದು . ಜ್ವರ ,ಚಳಿ ನಡುಗುವುದು ,ತಲೆ ನೋವು ,ತೀವ್ರ ತರ  ಮಾಂಸ  ಖಂಡಗಳ  ಸೆಳೆತ ,ಕೆಂಗಣ್ಣು  ಸಾಮಾನ್ಯ ರೋಗ ಲಕ್ಷಣಗಳಾದರೆ  ಕಾಮಾಲೆ ,ಕೆಮ್ಮು ,ಮೂತ್ರ ಪಿಂಡಗಳ ವೈಫಲ್ಯ ,ಮೆದುಳು ,ಹೃದಯ ಕಾರ್ಯಗಳ ಏರು ಪೇರು ಗಂಭೀರ ಪರಿಣಾಮಗಳು . 

ರೋಗ  ಪತ್ತೆ ಮಾಡಲು ರಕ್ತ ಪರೀಕ್ಷೆಗಳು ಇವೆ .ಮತ್ತು ಆರಂಭದ ಹಂತದಲ್ಲಿ ಪತ್ತೆ ಹಚ್ಚಿದರೆ  ಕಡಿಮೆ ವೆಚ್ಚದ  ಆಂಟಿಬಯೋಟಿಕ್ ಗಳಾದ  ಡಾಕ್ಸಿಸೈಕ್ಲಿನ್ , ಸೇಫ್ಟ್ರಿಯಾಕ್ಸೋನ್ ಗಳು  ಉಪಯೋಗಕ್ಕೆ ಬರುವವು.ಮೂತ್ರ ಪಿಂಡಗಳ ವೈಫಲ್ಯ ಆದರೆ ತಾತ್ಕಾಲಿಕ  ಡಯಾಲಿಸಿಸ್ ಮಾಡುವರು .ಪ್ರಾಣಾಪಾಯ ಆಗುವುದೂ ಇದೆ . ಮತ್ತೊಮ್ಮೆ ಗಮನಿಸಿ  ಚಿಕಿತ್ಸೆ ಇರುವ  ಕಾಮಾಲೆಗೆ  ಇದೂ ಒಂದು ಕಾರಣ . ಹಳದಿ ರೋಗ  ಹಳ್ಳಿ ಮದ್ದು ಎಂದು ಕೂರದಿರಿ .


ಗುರುವಾರ, ಫೆಬ್ರವರಿ 18, 2021

ಚಿಕಿತ್ಸೆ ರೋಗಿಗೋ ರಿಪೋರ್ಟಿಗೋ

 ಚಿಕಿತ್ಸೆ  ರೋಗಿಗೋ ರಿಪೋರ್ಟಿಗೋ

 ನಡೆದ  ಘಟ ನೆ .  ಕೆಲ ದಿನಗಳಿಂದ ಆಯಾಸ ಎಂದು ಒಬ್ಬರು ಹಿರಿಯರು ವೈದ್ಯರ ಬಳಿಗೆ ಹೋದರು . ಅವರು ಸಾಮಾನ್ಯ ಪರೀಕ್ಷಣಗಳನ್ನು  ಮಾಡಿ  ರೂಟೀನ್  ರಕ್ತ ಪರೀಕ್ಷಗೆ  ಕಳುಹಿಸಿದರು . ಅದರಲ್ಲಿ  ಖಾಲಿ  ತಿಂಡಿ ತಿಂದ ಮೇಲಿನ ಸಕ್ಕರೆ ಪ್ರಮಾಣ 180mg/dl ( Normal 70-140) ಎಂದು ಬಂತು . ಅದನ್ನು ನೋಡಿ ವೈದ್ಯರು ರೋಗಿಗೆ 'ಸಕ್ಕರೆ  ಕಾಯಿಲೆ  ಇದೆ ;ಅದಕ್ಕೆ ಚಿಕಿತ್ಸೆ ಆಗಬೇಕು 'ಎಂದರು . ನಿಮಗೆ ಸಣ್ಣ ಸಕ್ಕರೆ ಇರುವ ಕಾರಣ ಕಮ್ಮಿ ಮಿಲಿಗ್ರಾಮ್ ನ  ಸಣ್ಣ ಮಾತ್ರೆ ಕೊಡುವೆನು ಎಂದು 2.5 mg ಯ Glibenclamide ಎಂಬ ಮಾತ್ರೆ  ಕೊಟ್ಟರು ..ಹಿರಿಯರು ಭಕ್ತಿಯಿಂದ ಅದನ್ನು ಸೇವಿಸಿದರು . ಕೆಲವು ಗಂಟೆಗಳ ನಂತರ  ಅವರ ಚೆಹರೆ ಮಾತು ಎಲ್ಲಾ ಬದಲಾಗಿ  ಏನೇನೋ ಅರ್ಥವಿಲ್ಲದ  ಉದ್ಘಾರಗಳನ್ನು ಮಾಡ ತೊಡಗಿದರು .ಮನೆಯವರು  ಇವರಿಗೆ  ಹುಚ್ಚು ಹಿಡಿದಿದೆ ಎಂದು  ಮಾನಸಿಕ ವೈದ್ಯರ ಬಳಿಗೆ ಒಯ್ಯಲು ಅವರು ಅವರನ್ನು  ಆಸ್ಪತ್ರೆಗೆ ದಾಖಲು ಮಾಡಿ ಸಕ್ಕರೆ ಕಾಯಿಲೆಗೆ  ಫಿಸಿಶಿಯನ್ ಗೆ ತೋರಿಸುವಂತೆ  ಹೇಳಿದರು . ಫಿಶಿಶಿಯನ್ ರೋಗಿಯ ರೋಗ ಚರಿತ್ರೆ  ಕೇಳಿದಾಗ  ಇವರಿಗೆ ಇಲ್ಲದ ಸಕ್ಕರೆ ಕಾಯಿಲೆಗೆ ಬೇಡದ ಮಾತ್ರೆ ತಿಂದು ರಕ್ತದ ಸಕ್ಕರೆ ಪ್ರಮಾಣ  ಕಡಿಮೆ ಆದುದರಿಂದ  ಮೆದುಳು ಕಾರ್ಯ ಏರು ಪೇರು  ಆಗಿದೆ ಎಂಬ ಅಂಶ ಮೇಲ್ನೋಟಕ್ಕೆ  ಮನವರಿಕೆ ಆಯಿತು .ಆದರೂ ರೋಗ ನಿರ್ಣಯಕ್ಕೆ ಬರಲು ಪುನಃ ರಕ್ತದ ಸಕ್ಕರೆ ಪ್ರಮಾಣ ಮತ್ತು ಮೂರು ತಿಂಗಳ ಸರಾಸರಿ ನೋಡಿದಾಗ ನಿರ್ಧಾರ ಗಟ್ಟಿ ಆಯಿತು . 

ಇಲ್ಲಿ  ನಾರ್ಮಲ್ ೭೦-೧೪೦ ಎಂದು ಬರೆದಿದ್ದದ್ದು ಸರಿ .ಆದರೆ ೧೪೦ ರ ಮೇಲೆ ಇದ್ದರೆ  ಸಕ್ಕರೆ ಕಾಯಿಲೆ ಎನ್ನುವುದಿಲ್ಲ . ಆಹಾರದ ಎರಡು ಗಂಟೆಗಳ ತರುವಾಯ ೨೦೦ ಮಿಲಿಗ್ರಾಮ್ ,೮ ಗಂಟೆಗಳ ಉಪವಾಸದ (ರಾತ್ರಿ ಊಟದ ೮ ಗಂಟೆಗಳ ಮೇಲೆ )೧೨೬ ಮಿಲಿಗ್ರಾಮ್  ಅಥವಾ HBA1C ಎಂಬ ಮೂರು ತಿಂಗಳ ಸರಾಸರಿ 

೬.೫% ಗಿಂತ ಜಾಸ್ತಿ ಇದ್ದರೆ  ಮಾತ್ರ ಸಕ್ಕರೆ ಕಾಯಿಲೆ ಎನ್ನುವರು . ಸಣ್ಣ ಮಟ್ಟದ ಸಕ್ಕರೆ  ಕಾಯಿಲೆಗೆ  ಪಥ್ಯ ಮಾಡಿದರೆ ಸಾಕು . ಮಾತ್ರೆಗಳಲ್ಲೂ ಅದರ ಶಕ್ತಿ  ಗಾತ್ರ ಮತ್ತು  ತೂಕದ ಮೇಲೆ ಹೋಗದು  ಸಕ್ಕರೆ ಕಾಯಿಲೆಗೆ ಆರಂಭದಲ್ಲಿ ಕೊಡುವ ಮೆಟ್ಫಾರ್ಮಿನ್ ಎಂಬ ಮಾತ್ರೆ ಆಕಾರದಲ್ಲಿ  ದೊಡ್ಡದಿದ್ದು ೫೦೦ ,೧೦೦೦ ಮಿಲಿಗ್ರಾಮ್ ಇತ್ಯಾದಿಗಳಲ್ಲಿ  ಬರುವುದು .ಆದರೆ ಅದರ ಪವರ್ ಮೇಲೆ ಹೇಳಿದ ಗ್ಲೈ ಬೆಂಕ್ಲಮೈಡ್ (ಉದಾ ಜನಪ್ರಿಯ ಬ್ರಾಂಡ್  ಡಯೋನಿಲ್ )ಗಿಂತ ಎಷ್ಟೋ ಕಮ್ಮಿ ಇದ್ದು ಅಪಾಯಕರವಾಗಿ ಸಕ್ಕರೆ ಪ್ರಮಾಣ ಇಳಿಸದು .. ಸಕ್ಕರೆ ಪ್ರಮಾಣ  ತುಂಬಾ ಕಮ್ಮಿ ಆದರೆ ಪ್ರಜ್ಞೆ ತಪ್ಪುವುದು . ಹಾಗಾದರೆ  ೭೦ ರಿಂದ ೧೪೦ ನಾರ್ಮಲ್ ಎಂದು ಬರೆದಿದ್ದರೆ ೧೪೦ ರಿಂದ ೨೦೦ ರ ವರೆಗೆ ಇದ್ದರೆ  ಏನು ಅನ್ನುವುದು? ಇದನ್ನು ತಪ್ಪಿದ ಸಕ್ಕರೆ ತಾಳ (Impaired Glucose Tolerance )ಎನ್ನುವರು .ನಿಮಗೆ ಸಕ್ಕರೆ ಕಾಯಿಲೆ ಇಲ್ಲ ಆದರೆ ಬರುವ ಸೂಚನೆ ಎನ್ನ ಬಹುದು . ಹಾಗೆ  ಮಾನಸಿಕ ಕಾಯಿಲೆಯೂ ಇಲ್ಲ  ಡಯಾಬಿಟಿಸ್ ಕೂಡಾ ಇಲ್ಲಾ  ಎಂದು ಆಶ್ವಾಸನೆ ಪಡೆದು ನಗು ನಗುತ್ತಾ  ಹಿರಿಯರು ಮನೆಗೆ ಮರಳಿದರು . 

ಕೆಲವರು  ತಮ್ಮ ಅರೋಗ್ಯ ಪರೀಕ್ಷೆಗಳನ್ನು ಕಾಲ ಕಾಲಕ್ಕೆ ಮಾಡಿಸುತ್ತಲಿರುವರು .ಇದು ಒಳ್ಳೆಯದೇ .ಆದರೆ  ಕೇವಲ ರಿಪೋರ್ಟ್ ನೋಡಿ ಔಷಧಿ ತೆಗೆದು ಕೊಳ್ಳ ಬಾರದು . 

 ನಮ್ಮ ರಕ್ತದಲ್ಲಿ ಯೂರಿಕ್ ಆಸಿಡ್ ಎಂಬ ವಸ್ತು ಇದೆ . ಕೆಲವೊಮ್ಮೆ ಗಂಟುಗಳ ಒಳ ಸೇರಿ ಗೌಟ್ ಎಂಬ ಕಾಯಿಲೆ ಉಂಟು ಮಾಡುವುದು . ಯಾವುದೇ ರೋಗ ಲಕ್ಷಣ ಇಲ್ಲದೆ ಇದರ ಪ್ರಮಾಣ ಜಾಸ್ತಿ ಇದ್ದರೆ  ಔಷಧಿ ಅಗತ್ಯ ಇಲ್ಲ (ಕ್ಯಾನ್ಸರ್ ಚಿಕಿತ್ಸೆ ಯಲ್ಲಿ ಇರುವವರನ್ನು ಹೊರತು ಪಡಿಸಿ ). 

ಇನ್ನು  ಸಾಮಾನ್ಯ ಪರೀಕ್ಷೆಯಲ್ಲಿ  ಮೂತ್ರದ ಸೋಂಕು ಕಂಡು ಬಂದರೆ ,ಜ್ವರ ,ಉರಿ ಮೂತ್ರ ಮತ್ತು ಹೊಟ್ಟೆನೋವಿನಂತಹ  ಯಾವುದೇ ತೊಂದರೆ ಇಲ್ಲದವರಿಗೆ ಅದಕ್ಕೆ ಆಂಟಿಬಯೋಟಿಕ್ ಅವಶ್ಯ ಇಲ್ಲ .(ಗರ್ಭಿಣಿಯರನ್ನು ಹೊರತು ಪಡಿಸಿ ). 

ಕೊಲೆಸ್ಟರಾಲ್  ಸ್ವಲ್ಪ ಜಾಸ್ತಿ ಕಂಡು ನಿದ್ದೆ ಗೆಡುವವರು ಇದ್ದಾರೆ . ಅದಕ್ಕೆ ಎಲ್ಲರಿಗೂ ಔಷಧಿ ಚಿಕಿತ್ಸೆ ಬೇಕಿಲ್ಲ . 

ವೈ ಡಾಲ್  ಎಂಬ ಟೆಸ್ಟ್ ಇದೆ .ಟೈಪೋಯ್ಡ್ ಕಾಯಿಲೆ ಕಂಡು ಹಿಡಿಯಲು ಉಪಯೋಗಿಸುತ್ತಿದ್ದೆವು . ದುರದೃಷ್ಟ ವಶಾತ್ ಇದರ ನಿಖರತೆ ಪ್ರಶ್ನಾರ್ಹ .ಬೇರೆ ಹಲವು ಕಾಯಿಲೆಗಳಲ್ಲಿಯೂ ಇದು  ಪಾಸಿಟಿವ್ ಇರಬಹುದು .ಮತ್ತು ರೋಗ ಬಂದು ಗುಣಮುಖ ಆದ  ಮೇಲೂ ಹಾಗೇ ಉಳಿಯುವುದು .(ಇದು ರೋಗ ಪ್ರತಿರೋಧಕ ಗಳನ್ನು ಟೆಸ್ಟ್ ಮಾಡುವ  ಕಾರಣ )..ಬಹಳ ಮಂದಿ ಜ್ವರ ಇಲ್ಲದವರೂ ,ಇತರ ಸಾಮಾನ್ಯ  ಜ್ವರ ಗಳಿಂದ ಬಳಲುವವರೂ ರಿಪೋರ್ಟ್ ಹಿಡಿದು ಕೊಂಡು ನನಗೆ ಟೈಫಾಯಿಡ್ ಗೆ ಚಿಕಿತ್ಸೆ ಕೊಡಿ ,ಕಳೆದ ಯುಗಾದಿಗೆ ಟೈಫಾಯಿಡ್ ಬಂದಿತ್ತು ,ಮತ್ತೆ ದೀಪಾವಳಿಗೆ ಬಂತು ,ಈ ಸಂಕ್ರಾಂತಿಗೆ ಬಂದಿದೆ ನೋಡಿ ಎಂದು ಅವಲತ್ತು ಕೊಳ್ಳುವರು . 

ಇನ್ನು ಜಾಂಡಿಸ್ ನ ಬಗ್ಗೆ ಬೇರೆ ಬರೆದಿರುವೆನು . ಗಿಲ್ಬರ್ಟನ ಕಾಯಿಲೆ ಎಂದು ಇದೆ .ಇದರಲ್ಲಿ  ನಶಿಸಿದ ಕೆಂಪು ರಕ್ತ ಕಣಗಳಿಂದ ಬಿಡುಗಡೆ ಅದ  ಬೈಲಿರುಬಿನ್   ನೀರಿನಲ್ಲಿ ಕರಗುವ ವಸ್ತುವಾಗಿ ಮಾರ್ಪಡಿಸಲು ಬೇಕಾದ ಕಿಣ್ವಗಳು ಲಿವರಿನಲ್ಲಿ ಭಾಗಶಃ ಕಡಿಮೆ ಇದ್ದು  ರಕ್ತದಲ್ಲಿ  ಬೈಲಿರುಬಿನ್ ಸ್ವಲ್ಪ ಅಧಿಕ ಕಾಣಿಸಿ ಕೊಂಡು ಸಣ್ಣ ಹಳದಿ ಕಾಯಿಲೆ ಆಗಾಗ ಬರುವುದು ಇದಕ್ಕೆ ಯಾವುದೇ ಔಷಧಿ ಅವಶ್ಯವಿಲ್ಲ ಮತ್ತು ಸಾಮಾನ್ಯವಾದ ಆಹಾರ ತೆಗೆದುಕೊಳ್ಳಬಹುದು . ಕೆಲವರು ರಿಪೋರ್ಟಿನಲ್ಲಿ  ಜಾಂಡಿಸ್ ಇದೆ ಎಂದು ಬೇಡದ  ಪಥ್ಯ ಮತ್ತು ಔಷಧಿಗಳನ್ನು ಸೇವಿಸುವರು . 

ರಿಪೋರ್ಟ್ ಗಳಂತೆ  ರೀಡಿಂಗ್ ಗಳೂ .ಉದಾ ರಕ್ತದ ಒತ್ತಡ ಹೆಚ್ಚು ಕಂಡೊಡನೆ ಆ ಕಾಯಿಲೆ ಇದೆ ಎಂದು ಹೇಳುವುದಿಲ್ಲ .ಪುನಃ  ಪರೀಕ್ಷೆ ಮಾಡುವೆವು .ಕೆಲವು ಬಾರಿ ಮೈಗ್ರೇನ್ ತಲೆನೋವು ,ಮೂತ್ರದ ಕಲ್ಲಿನ ನೋವು ಮತ್ತು ಉಲ್ಬಣಿಸಿದ ಅಸ್ತಮಾ ಇರುವ ರೋಗಿಗಳಲ್ಲಿ ತಾತ್ಕಾಲಿಕ ಬಿ ಪಿ ಹೆಚ್ಚಳ ಆಗುವುದು .ಮೆದುಳಿನ ಆಘಾತ (Stroke )ಆದಾಗಲೂ ಬಿ ಪಿ ಹೆಚ್ಚಾಗುವುದಾದರೂ ಮೆದುಳಿನ ರಕ್ತ ಗಟ್ಟುವಿಕೆಯಲ್ಲಿ  ಕೂಡಲೇ ರಕ್ತದ  ಏರು ಒತ್ತಡ ಇಳಿಸ  ಬಾರದು

ಸೋಮವಾರ, ಫೆಬ್ರವರಿ 15, 2021

ಪಿತ್ತ ಕೋಶದ ಕಲ್ಲು

                ಪಿತ್ತ ಕೋಶದ ಕಲ್ಲು 

ನಮ್ಮಲ್ಲಿ ಯಾವುದಾದರೂ ನಿರ್ಮಾಣಕ್ಕೆ ಮೊದಲು ಶಂಕು ಸ್ಥಾಪನೆ ಅಥವಾ ಕಲ್ಲು ಹಾಕುವುದು ಎಂದು ವಾಡಿಕೆಯಲ್ಲಿ ಇದೆ . ಕಲ್ಲು ಹಾಕಿ ಭಾವಚಿತ್ರ ಸುದ್ದಿ ಬಂದ ಮೇಲೆ ಬರೀ ಕಲ್ಲು ಮಾತ್ರ ಉಳಿದದ್ದನ್ನೂ ಕಂಡಿದ್ದೇವೆ . ಪಿತ್ತ ಕೋಶದ ಕಲ್ಲೂ ಮುಂದೆ ಬರುವ ತೊಂದರೆಗಳ ಶಂಕು ಸ್ಥಾಪನೆ ಇರಬಹುದು . 

                     
The Biliary Tree | Radiology Key

ಪಿತ್ತ ಕೋಶ ಎಂದರೆ ಪಿತ್ತ ಜನಕಾಂಗ(ಲಿವರ್ ) ದಿಂದ ಕರುಳಿನ ದಾರಿಯಲ್ಲಿ ಯಲ್ಲಿ ಇರುವ ಒಂದು ಶೇಖರಣಾ ಸಂಚಿ . ಮುಖ್ಯವಾಗಿ ಮೇದಸ್ಸಿನ ಜೀರ್ಣ ಕ್ರಿಯೆಗೆ  ಬೇಕಾದ ಪಿತ್ತ ರಸವನ್ನು ಪಿತ್ತ ಜನಕಾಂಗ ಉತ್ಪಾದಿಸಿ ಕರುಳಿಗೆ  ಕಳುಸಿಸುತ್ತದೆ .ತನ್ನಲ್ಲಿ ಕಾಪಿಟ್ಟ ಪಿತ್ತ ರಸವನ್ನು ಪಿತ್ತ ಕೋಶ ಕೊಬ್ಬು ಉಳ್ಳ ಆಹಾರ ಕರುಳು ತಲುಪಿದಾಗ  ತಾ ನು ಸಂಕುಚಿಸಿ ಪಿತ್ತ ನಾಳದ ಮೂಲಕ ಅಲ್ಲಿಗೆ ರವಾನಿಸುವುದು .ಪಿತ್ತ ರಸದಲ್ಲಿ ಕೊಲೆಸ್ಟರಾಲ್ ಅಧಿಕ ಇದ್ದು ಕೆಲವೊಂದು ಕಾರಣಗಳಿಂದ ಅದು ಹರಳು ಗೊಂಡು ಕಲ್ಲಾಗುವುದು ..ಇದರ ಜೊತೆ ಕೆಂಪು ರಕ್ತ ಕಣದ ಅವಶೇಷಗಳೂ ಸೇರಿ ಕಲ್ಲನ್ನು ವರ್ಣಮಯ ಮಾಡುವುದುಂಟು 

ಈ ಕಲ್ಲು (ಕಲ್ಲುಗಳು ) ತಟಸ್ಥ ವಾಗಿ ಇದ್ದು ಯಾವುದೇ ತೊಂದರೆ ಕೊಡದೇ ಇರುವುದು ಜಾಸ್ತಿ .ಆದರೆ ಕೆಲವೊಮ್ಮೆ ಮುಂದಿನ ಅನಾಹುತಗಳಿಗೆ ಆಹ್ವಾನ ಇರ ಬಹುದು .ಮುಖ್ಯವಾಗಿ  ಪಿತ್ತ ಕೋಶದ ಸೋಂಕು ಮತ್ತು ಅಪರೂಪಕ್ಕೆ ಅದರ ಕ್ಯಾನ್ಸರ್ ಕಾಯಿಲೆ  ಇನ್ನು ಕೆಲವರಲ್ಲಿ ಇಲ್ಲಿ ಉತ್ಪತ್ತಿ ಆದ ಕಲ್ಲುಗಳು ಪಿತ್ತ ನಾಳವನ್ನು ಹೊಕ್ಕು  ಅಲ್ಲಿ ತಡೆ ,ಸೋಂಕು ಇತ್ಯಾದಿ ಉಂಟು ಮಾಡುವುದಲ್ಲದೆ ,ಪಿತ್ತ ನಾಳ ಕರುಳಿಗೆ ಸೇರುವ ಸನಿಹದಲ್ಲಿ ಇರುವ ಮೇದೋಜೀರಕ ಗ್ರಂಥಿಯ ಉರಿಯೂತಕ್ಕೆ ಕಾರಣ  ಆಗುವವು . 

ಶ್ವೇತ ವರ್ಣಿಯರು ,ಬಹು ಪ್ರಸವಿಸಿದ ಹೆಂಗಳೆಯರು ,ಸ್ಥೂಲ ಕಾಯದವರು (ಬೊಜ್ಜು ಇದ್ದು ಹಠಾತ್ ಕಡಿಮೆ ಮಾಡಿಕೊಂಡವರು ಕೂಡ ) ,ಕುಟುಂಬದಲ್ಲಿ ಪಿತ್ತ ಕಲ್ಲಿನ ಇತಿಹಾಸ ಇರುವವರು ಇದರ ಉಪಟಳಕ್ಕೆ ಗುರಿಯಾಗುವುದು ಹೆಚ್ಚು .(Female ,Fertile ,Forty ,Fair ,Family History of gall stones 5 Fs).

ಪಿತ್ತ ಕೋಶದ ಕಲ್ಲುಗಳು  ಬಹುತೇಕ ಯಾವುದೇ ರೋಗ ಲಕ್ಷಣಗಳನ್ನು  ಉಂಟು ಮಾಡದೇ ಮೌನವಾಗಿ ಇರುತ್ತವೆ . ಆದರೆ ಕಲ್ಲು ಪಿತ್ತ ಕೋಶದ ಬಾಯಿಗೆ ಅಡ್ಡ ಬಂದರೆ  ಆಹಾರ ಸೇವನೆ (ಮುಖ್ಯವಾಗಿ ಎಣ್ಣೆ ಪದಾರ್ಥ )ನಂತರ ಉದರದ ಮೇಲ್ಬಾಗ  ನೋವು ತೊಡಗಿ ಕೆಲ ಕಾಲ ಇರುವುದು . 

ಇನ್ನು  ಪಿತ್ತ ಕೋಶದ  ಸೋಂಕು ಉಂಟಾದರೆ ಹೊಟ್ಟೆ ನೋವು ,ವಾಂತಿ ಮತ್ತು  ಜ್ವರ ಬರ ಬಹುದು . 

ಅಲ್ಟ್ರಾ  ಸೌಂಡ್ ಸ್ಕ್ಯಾನ್ ಮೂಲಕ ಈ ಕಲ್ಲುಗಳನ್ನು  ದೃಡೀಕರಿಸುವರು

ಪಿತ್ತ  ಕೋಶದ ಸಣ್ಣ ಕಲ್ಲುಗಳಿಗೆ ಸಾಮಾನ್ಯವಾಗಿ ಯಾವುದೇ  ಚಿಕಿತ್ಸೆ ಬೇಡ .ಕಲ್ಲು  ದೊಡ್ಡದಿದ್ದರೆ ,ಪಿತ್ತ ಕೋಶ ತನ್ನ ಸಂಕುಚನಾ ಸಾಮರ್ಥ್ಯ ಕಳೆದು ಕೊಂಡಿದ್ದರೆ  ಮತ್ತು  ಪಿತ್ತ  ಕೋಶದ ಸೋಂಕು ಉಂಟು ಮಾಡಿದರೆ  ಪಿತ್ತ ಕೋಶ ವನ್ನು ಶಸ್ತ್ರ ಕ್ರಿಯೆಯ ಮೂಲಕ  ತೆಗೆದು ಹಾಕುವರು .ಇದನ್ನು ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮೂಲಕ ಮಾಡಿದರೆ ರೋಗಿ ಬೇಗ ಗುಣಮುಖನಾಗಿ  ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಳ್ಳ ಬಹುದು .ಪಿತ್ತ ಕೋಶದ ಕಲ್ಲು  ಕರಗಿಸುವ ಮಾತ್ರೆಗಳು  ಇದ್ದರೂ  ಅವನ್ನು ನಿಲ್ಲಿಸಿದಾಗ ಕಲ್ಲುಗಳು ಮರುಕಳಿಸುವವು . 

 

 

 

ಭಾನುವಾರ, ಫೆಬ್ರವರಿ 14, 2021

ರೇಬಿಸ್ ಕಾಯಿಲೆ ತಡೆಗಟ್ಟುವಿಕೆ

                       ರೇಬಿಸ್  ಕಾಯಿಲೆ ತಡೆಗಟ್ಟುವುದು 

ನಾನು   ಉದ್ದೇಶ ಪೂರ್ವಕ  ಹುಚ್ಚು ನಾಯಿ ಕಾಯಿಲೆ ಎಂದು ಬರೆದಿಲ್ಲ .ಏಕೆಂದರೆ  ಹುಚ್ಚು  ನಾಯಿ ಕಡಿತದಿಂದ ಬಹುತೇಕ ಬರುವ ರೋಗ ಆದರೂ ಬೆಕ್ಕು ,ರಾಸು ,ಕಾಡು ಪ್ರಾಣಿಗಳು ,ಬಾವಲಿಗಳನಂತಹ  ಇತರ ಸಸ್ತನಿಗಳೂ  ಇದನ್ನು ಹರಡ  ಬಹುದು ,

 ಈ  ಕಾಯಿಲೆ  ಶೇಕಡಾ ನೂರರಷ್ಟು  ಮಾರಣಾಂತಿಕ . ಆದುದರಿಂದ  ಬರದಂತೆ ತಡೆಗಟ್ಟುವುದೇ ಇರುವ   ದಾರಿ . 

ನಾಯಿ  ಕಚ್ಚಿದ ಒಡನೆ ಶುದ್ಧ ನೀರಿನಲ್ಲಿ ಗಾಯವನ್ನು ಸೋಪ್ ಹಾಕಿ ತೊಳೆಯ ಬೇಕು .ಅರಿಶಿಣ ,ಮೆಣಸಿನ ಹುಡಿ ಉಪ್ಪು ಇತ್ಯಾದಿ ಹಚ್ಚಬಾರದು .ವೈರಸ್ ನಿರೋಧಕ ಆಲ್ಕೋಹಾಲ್ ಅಥವಾ ಅಯೋಡೀನ್ ದ್ರಾವಣ ಹಚ್ಚ ಬಹುದು. ಆದಷ್ಟು  ಗಾಯಕ್ಕೆ ಹೊಲಿಗೆ ಹಾಕಬಾರದು .ಒಂದು ವೇಳೆ ಅನಿವಾರ್ಯ   ಅದರೆ  ಗಾಯದ ಸುತ್ತ ರೇಬೀಸ್ ಪ್ರತಿವಿಷ (ಇಮ್ಯೂನೊಗ್ಲೊಬ್ಯೂಲಿನ್ )ಕೊಟ್ಟು ಹೊಲಿಗೆ  ಹಾಕುವರು . 

 ಶಂಕಿತ ರೇಬೀಸ್ ಪ್ರಾಣಿಯ  ಸಂಪರ್ಕ ಮತ್ತು ಗಾಯವನ್ನು  ಮೂರು ತರಹ ವಿ೦ಗ ಡಿಸಿರುವರು

 ೧  ಶಂಕಿತ ಪ್ರಾಣಿಯ ಸ್ಪರ್ಶ ,ಯಾವುದೇ ಗಾಯಗಳಿಲ್ಲದ ಚರ್ಮವನ್ನು ಪ್ರಾಣಿ ನೆಕ್ಕಿದರೆ ಅಥವಾ ಪ್ರಾಣಿಯ ಸ್ರಾವ ಸ್ಪರ್ಶ .ಇಂತಹ ಸಂದರ್ಭ  ಆ ಜಾಗವನ್ನು ಚೆನ್ನಾಗಿ ತೊಳೆದರೆ ಸಾಕು .ರೋಗ ನಿರೋಧಕ ಲಸಿಕೆ ಬೇಡ . 

೨. ರಕ್ತಸ್ರಾವ ಇಲ್ಲದ ಮೇಲ್ಮೈ ಕೆರೆತ ಗಾಯ .ಇದಕ್ಕೆ ಗಾಯವನ್ನು ತೊಳೆದು ಪೂರ್ಣ ಪ್ರಮಾಣದ ರೇಬೀಸ್  ಲಸಿಕೆ    ಹಾಕುವುದು . 

೩.  ಒಂದು ಅಥವಾ ಹೆಚ್ಚು ಆಳವಾದ ಗಾಯ ಅಥವಾ ಮೊದಲೇ ಗಾಯ ಇದ್ದ ಚರ್ಮವನ್ನು ನೆಕ್ಕಿದರೆ . ಇಂತಹ ಸಂದರ್ಭ ಗಾಯದ ಉಪಚಾರದೊಂದಿಗೆ ,  ರೆಡಿ ಮೇಡ್ ರೇಬೀಸ್ ನಿರೋಧಕ (immunoglobulin ),ಜತೆಗೆ ಲಸಿಕೆ ಕೊಡಬೇಕು . 

 ರೇಬೀಸ್ ಲಸಿಕೆ ಹಾಕಿಸಿ ಕೊಳ್ಳುವುದರಲ್ಲಿ ಯಾವದೇ ಚೌಕಾಸಿಗೆ ಆಸ್ಪದ ಇಲ್ಲ .ಮತ್ತು  ಟಿ ಟಿ ಇಂಜೆಕ್ಷನ್ ಕೊಟ್ಟರೆ ಸಾಲದು .ಟಿ ಟಿ ಇರುವದು ಧನುರ್ವಾಯು ಕಾಯಿಲೆ ಬರದಂತೆ ,ರೇಬೀಸ್ ತಡೆಗಟ್ಟದು .ಬಹಳ ಮಂದಿ ನಮ್ಮಲ್ಲಿ  " ನಾಯಿ ಕಚ್ಚಿದೆ ,ಒಳ್ಳೆಯ ನಾಯಿ ,ನಮ್ಮನ್ನು ಕಂಡರೆ ಯಾವಾಗಲೂ ಬಾಲ ಅಲ್ಲಾಡಿಸುತ್ತದೆ . ಇಂಜೆಕ್ಷನ್ ಇಲ್ಲದೇ  ಸುಧಾರಿಸ ಬಹುದೋ ''ಎಂದು ನಮ್ಮ ಬಾಯಿಯಿಂದ ಬೇಡ ಎಂದು ಹೇಳಿಸಲು  ಪ್ರಯತ್ನಿಸುತ್ತಾರೆ .ಇದಕ್ಕೆ ಆಸ್ಪದ ಇಲ್ಲ .ನಾಯಿಗೆ ಆಂಟಿ ರೇಬೀಸ್ ಚುಚ್ಚು ಮದ್ದು ಕೊಟ್ಟಿದ್ದರೂ ನಾವು ತೆಗೆದು ಕೊಳ್ಳುವುದು ಲೇಸು . 

ಲಸಿಕೆಯನ್ನು  ೦ ,೩,೭,೧೪ ಮತ್ತು ೨೮ ನೇ ದಿನ  (ಮೊದಲ ಡೋಸ್  ಕಡಿತದ ಕೂಡಲೇ ಹಾಕಿಸುವುದು ,ಅದು ೦ ದಿನ ) .ಇಂಜೆಕ್ಷನ್ ಭುಜಕ್ಕೆ ಕೊಡುವರು .ಮೊದಲ ಇಂಜೆಕ್ಷನ್ ದಿನದಿಂದ ೧೪ ದಿನಗಳ ನಂತರ  ರೇಬೀಸ್ ಪ್ರತಿರೋಧಕ ಆಂಟಿಬಾಡಿ ನಮ್ಮ ಶರೀರದಲ್ಲಿ ಕಾರ್ಯಾರಂಭ ಮಾಡುವುದು . 

 ಕಚ್ಚಿದ ಪ್ರಾಣಿ  ನಾಯಿ ಅಥವಾ ಬೆಕ್ಕು ಆಗಿದ್ದರೆ ಹತ್ತು ದಿನ ಪೂರ್ಣ ನಿರೀಕ್ಷಣೆಯಲ್ಲಿ ಇಟ್ಟು  ಅವುಗಳ ಅರೋಗ್ಯ ಮತ್ತು ಚಲನವಲನ  ಸಂಪೂರ್ಣ ಮೊದಲಿನಂತೆ ಇದ್ದಾರೆ ೧೪ ನೇ ದಿನದ ಲಸಿಕೆ ಯನ್ನು ಕೊಡಬೇಕಿಲ್ಲ ,೨೮ ನೇ ದಿನ ಮತ್ತೊಂದು ಹಾಕಿಸಿದರೆ ಸಾಕು . ಆದರೆ ಇತರ ಪ್ರಾಣಿಗಳ   ಕಡಿತಕ್ಕೆ ಇದು ಅನ್ವಯ ಆಗುವುದಿಲ್ಲ . 

ಕಾಡು ಪ್ರಾಣಿಗಳ ಕಡಿತಕ್ಕೆ ೩ ನೇ ವರ್ಗದ ಕಡಿತ ದ  ಚಿಕಿತ್ಸೆ ಕೊಡಬೇಕು .ಇಲಿ ಕಡಿತಕ್ಕೆ ರೇಬೀಸ್ ವ್ಯಾಕ್ಸೀನ್ ಬೇಡ .ಭಾರತದಲ್ಲಿ ಬಾವಲಿ ಸಂಪರ್ಕಕ್ಕೂ ಇದರ ಅಗತ್ಯ ಇಲ್ಲ . ಶಂಕಿತ ರೇಬೀಸ್ ಇದ್ದ ದನದ ಹಾಲು ಕಾಯಿಸಿ ಕುಡಿಯಬಹುದು .(ಪ್ಯಾಸ್ಚುರಿ ಕರಿಸಿದ ಹಾಲೂ ).ಮಾಂಸ ಬೇಯಿಸಿ ತಿಂದರೆ ಲಸಿಕೆ ಬೇಡ 

ಒಂದು ವೇಳೆ ಹಲವು ವರ್ಷಗಳ ಹಿಂದೆ ರೇಬೀಸ್ ವ್ಯಾಕ್ಸೀನ್ ತೆಗೆದು ಕೊಂಡಿದ್ದರೆ ಪುನಃ ಕಡಿತಕ್ಕೆ ಒಳಗಾದರೆ  ೦ ಮತ್ತು ೩ ನೇ ದಿನದ ಎರಡು ಡೋಸ್  ಸಾಕು . ೩ನೇ ವರ್ಗದ  ಗಾಯಕ್ಕೂ ರೇಬೀಸ್ ನಿರೋಧಕ  ಇಮ್ಯೂನೊಗ್ಲೊಬ್ಯೂಲಿನ್ ಕೊಡುವ ಅವಶ್ಯಕತೆ ಇಲ್ಲ . 

ಪ್ರಾಣಿಗಳ ಜತೆ ಕೆಲಸ ಮಾಡುವವರು ,ವೈಲ್ಡ್ ಲೈಫ್ ಲೈಫ್ ವಾರ್ಡನ್ ಈ ಕಾಯಿಲೆ ಬರದಂತೆ  ವ್ಯಾಕ್ಸೀನ್ ತೆಗೆದುಕೊಳ್ಳುವುದು ಉತ್ತಮ . ಇವರಿಗೆ  ೦ , ೭ ಮತ್ತು ೨೧ ಅಥವಾ ೨೮ ರಂದು ಹೀಗೆ ಮೂರು  ಡೋಸ್  ಸಾಕು . 

ಮೇಲೆ ತಿಳಿಸಿದ ಡೋಸ್ ಎಲ್ಲಾ ಸಾಮಾನ್ಯವಾಗಿ ಮಾಂಸಖಂಡಗಳಿಗೆ  ಚುಚ್ಚುವ ಇಂಜೆಕ್ಷನ್ ರೀತಿಗೆ .ಇದೇ ಲಸಿಕೆ ಚರ್ಮಕ್ಕೆ ಚುಚ್ಚಿದರೆ  ಕಡಿಮೆ ಪ್ರಮಾಣದ ಲಸಿಕೆ ಸಾಕು ಮತ್ತು  ಕಡಿತದ ನಂತರದ  14 ನೇ ದಿನದ ಡೋಸ್ ಬೇಕಾಗಿಲ್ಲ .ಆದರೆ ಇದನ್ನು ಕೊಡುವವರಿಗೆ ಸೂಕ್ತ ತರಬೇತಿ ಬೇಕು .

 

ಶನಿವಾರ, ಫೆಬ್ರವರಿ 13, 2021

                                          ಸ್ಕ್ರಬ್  ಟೈಫಸ್ ಕಾಯಿಲೆ 

 ನೀವು ಟೈಪೋಯ್ಡ್ ಅಥವಾ ವಿಷಮ ಶೀತ ಜ್ವರದ ಬಗ್ಗೆ ಕೇಳಿರುತ್ತೀರಿ .ಈ ಕಾಯಿಲೆ ಇತ್ತೀಚಿಗೆ  ಅಪರೂಪಕ್ಕೆ ಕಾಣಿಸಿ ಕೊಳ್ಳುತ್ತದೆ .ಬಹಳ ಮಂದಿಗೆ ಶುದ್ಧ ನೀರು ಸಿಗುವುದರಿಂದ  ಅದರ ಪ್ರಸರಣ ಕಡಿಮೆ ಆಗಿದೆ . ಆದರೆ ಡೆಂಗು ಇಲಿ ಜ್ವರ ಮತ್ತು ಸ್ಕ್ರಬ್  ಟೈಫಸ್ ಅಲ್ಲಲ್ಲಿ ಎಗ್ಗಿಲ್ಲದೆ ತಲೆಯೆತ್ತಿ ಹಾವಳಿ ನಡೆಸುತ್ತಿವೆ . 

ಏನಿದು  ಸ್ಕ್ರಬ್ ಟೈಫಸ್ ?

ಇದು  ಓರಿಯೆಂಟ  ಸುಸುಗಾಮುಷಿ ಎಂಬ ಬ್ಯಾಕ್ಟೀರಿಯಾ ದಿಂದ ಬರುವ ರೋಗ . ಇದನ್ನು ಹರಡುವದು ಚಿಗಟಗಳು . ರೋಗಾಣು ಶೇಖರಣಾ ಪ್ರಾಣಿಗಳು ಇಲಿ ಹೆಗ್ಗಣ ಇತ್ಯಾದಿ . ಸ್ಕ್ರಬ್ ಎಂದರೆ ಪೊದೆ ಪ್ರದೇಶ .ಕಾಡಿಗೆ ಸೌದೆಗೆ ಅಥವಾ ಚಾರಣಕ್ಕೆ ಹೋದವರಿಗೆ  ಈ ಚಿಗಟಗಳು ಹೆಚ್ಚು ನೋವಿಲ್ಲದೇ ಕಚ್ಚುವವು .ಅದರ ಮೂಲಕ ಮಾನವ ಶರೀರಕ್ಕೆ ಸೇರಿದ ರೋಗಾಣು ಟೈಫಸ್ ಕಾಯಿಲೆ ಉಂಟು ಮಾಡುವುದು 

                       

ಜ್ವರ  ತಲೆನೋವು,ಮೈಕೈ ನೋವು ,ಚಿಗಟ ಕಚ್ಚಿದ ಜಾಗದಲ್ಲಿ ಸತ್ತ ಜೀವ ಕೋಶಗಳಿಂದ ಆವೃತ್ತವಾದ ಹುಣ್ಣು ,(Eschar ),ಮತ್ತು ಅದರ ಹತ್ತಿರದ ದುಗ್ಧ ಗ್ರಂಥಿಗಳ  ಉರಿಯೂತ (ಗಣಲೆ  ಅಥವಾ ಕರಳೆ ),ಮೈಯಲ್ಲಿ ಕೆಂಪು ಬೀಳುವುದು ಇತ್ಯಾದಿ ಲಕ್ಷಣಗಳು ಇರುತ್ತವೆ . ಇದು ಕೂಡ ಜಾಂಡಿಸ್ ಮತ್ತು ರಕ್ತದಲ್ಲಿ  ಪ್ಲೇಟಿಲೆಟ್ ಕೊರತೆ  ಉಂಟು ಮಾಡಬಹುದು .

                                   



ಈ  ಕಾಯಿಲೆ  ಭಾರತ ದೇಶ ದಲ್ಲಿಯೂ ವ್ಯಾಪಕ ವಾಗಿದ್ದು ,ನಮ್ಮ ರಾಜ್ಯದ ಮಲೆನಾಡು ಪ್ರದೇಶಗಲ್ಲಿ ಹೆಚ್ಚಾಗಿ ಉಪಟಳ ಕೊಡುತ್ತಿರುತ್ತದೆ . 

ಇದರ ರೋಗ ಲಕ್ಷಣಗಳು ಡೆಂಗಿ ಮತ್ತು ಇಲಿ ಜ್ವರದ  ಚಿನ್ಹೆ ಗಳಿಗೂ  ಸಾಮ್ಯತೆ ಇರುವುದರಿಂದ  ಇವುಗಳಿಂದ ಇದನ್ನು ಬೇರ್ಪಡಿಸಿ ಚಿಕಿತ್ಸೆ ಮಾಡ ಬೇಕಾಗುವುದು . 

ಈ  ರೋಗವನ್ನು  ರಕ್ತ ಪರೀಕ್ಷೆ ಮತ್ತು ರೋಗ ಲಕ್ಷಣಗಳಿಂದ  ಪತ್ತೆ ಹಚ್ಚುವರು .ಮತ್ತು  ಕಡಿಮೆ ವೆಚ್ಚದ  ಆಂಟಿಬಯೋಟಿಕ್ ಔಷಧಿ ಗಳಾದ  ಡಾಕ್ಸಿ ಸೈಕ್ಲಿನ್ ,  ಅಜಿತ್ರೊ ಮೈಸಿನ್ ಮತ್ತು ಕ್ಲೋರಿನೆಂಪೆನಿಕೋಲ್ ಗಳು ಈ ರೋಗಕ್ಕೆ  ಪರಿಣಾಮ ಕಾರಿ . 

ಈ  ರೋಗದ ಇರುವಿಕೆಯೇ ಜನರಿಗೆ ಇನ್ನೂ ತಿಳಿಯದಿರುವುದು  ಖೇದ ಕರ

 

ಬುಧವಾರ, ಫೆಬ್ರವರಿ 10, 2021

ನಡೆದಾಡೋ ಅಶ್ವಿನಿ ದೇವತೆಗಳು

    ನಡೆದಾಡೋ  ಅಶ್ವಿನಿ ದೇವತೆಗಳು 

ಆಸ್ಪತ್ರೆಯಲ್ಲಿ  ಕೆಲಸ ಮಾಡುವ  ದಾದಿಯರು ಮಾಡುವ ಕೆಲಸ ಅತ್ಯಂತ ಪವಿತ್ರವಾದುದುದು .ಹಗಲು ಇರುಳೆನ್ನದೆ ರೋಗ ಪೀಡಿತರ ಮಧ್ಯೆ ಅವರ ಸೇವೆ ಮಾಡುವ ಕೆಲಸ ಬಹಳ ತಾಳ್ಮೆ  ಮತ್ತು  ಅನುಕಂಪ ಬೇಡುವ ಉದ್ಯೋಗ . ಒಂದು ಕಡೆ ಬೇರೆ ಬೇರೆ ಮನೋಧರ್ಮ ಇರುವ ವೈದ್ಯರು ಇನ್ನೊಂದು ಕಡೆ ಪೂರ್ಣ ಗಮನ ನಿರೀಕ್ಷಿಸುವ ರೋಗಿಗಳು ಮತ್ತು ಆಗಾಗ್ಗೆ ಕಿರಿ ಕಿರಿ ಎನಿಸುವಷ್ಟು  ತಲೆ ಹಾಕುವ ರೋಗಿಯಸಂಬಂಧಿಗಳು .,ಇವರೆನ್ನೆಲ್ಲಾ ನಿಭಾಯಿಸಿ ಕೊಂಡು ಹೋಗುವ ಕೆಲಸ ಸುಲಭ ಸಾಧ್ಯ ವಲ್ಲ . 

ಆಸ್ಪತ್ರೆಯಲ್ಲಿ  ವೈದ್ಯರ ಟಿಪ್ಪಣಿ ಮತ್ತು ಔಷಧೋಪಚಾರ ನಿರ್ದೇಶಗಳು ಮತ್ತು  ನರ್ಸ್ ಗಳ  ನೋಟ್ಸ್  ಆಂಗ್ಲ ಭಾಷೆಯಲ್ಲಿ ಇರುತ್ತವೆ .. ತಲೆ ತಲಾಂತರಗಳಿಂದ ತಮ್ಮದೇ ಆದ  ಭಾಷೆಯನ್ನು ಅಭಿವೃದ್ಧಿ ಪಡಿಸಿಕೊಂಡಂತೆ  ಕಾಣುತ್ತದೆ . 

ಉದಾಹರಣೆಗೆ  ಮುಂಜಾವಿನ  ರೌಂಡ್ಸ್ ವೇಳೆ  ಮಾತುಕತೆ ಈ ರೀತಿ ಇರುವುದು . 

"ಸಿಸ್ಟೆರ್ ಈ ರೋಗಿ ಗೆ  ಏನು ತೊಂದರೆ ?"

"ಫೋರ್ ಡೇಸ್ ನಿಂದ  ಫೀವರ್ ,ವೊಮಿಟಿಂಗ್ ಅಂತ ಬಂದಿದ್ದು ಸರ್ "

"ಸರಿ ಅವರ ಬಂಧುಗಳು ಯಾರಾದರೂ ಇದ್ದಾರೆಯೇ ?"

"ಪಾರ್ಟಿ (ಬಂಧು ಬಳಗ ,ಅಟೆಂಡೆಂಟ್ ಎಲ್ಲಾ  ಪಾರ್ಟಿ ಎಂದು ಕರೆಯಿಸಿ ಕೊಳ್ಳುವರು ) ಇದ್ದರು ಸಾರ್ ಈಗ ಕ್ಯಾಂಟೀನ್ ಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದಾರೆ "

"ಸರಿ  ಏನೇನು ಪರಿಶೋಧನೆ ಗೆ  ಕಳುಹಿಸಿರುವಿರಿ ?"

"ಸರ್  ಬ್ಲಡ್  ಸಿ ಬಿ ಸಿ .ಡೆಂಗೂ .ಎಂ ಪಿ .(ಮಲೇರಿಯಲ್ ಪ್ಯಾರಾಸೈಟ್ ),ಲೆಪ್ಟಾ  ,ಶುಗರ್  ಸೆಂಡ್ ಆಗಿದೆ ,ಯೂರಿನ್  ರೂಟಿನ್ ಹೋಗಿದೆ "(ಹೋಗಿದೆ ಎನ್ನುವರು ,ಕಳುಹಿದ್ದೇವೆ ಎನ್ನುವುದಿಲ್ಲ )

"ಸರಿ  ಇದುವರೆಗೆ  ಏನೇನು ಕೊಟ್ಟಿರುವಿರಿ ?"

"ಸರ್  ಪಿ ಸಿ ಟಿ (ಪ್ಯಾರಾ ಸಿಟಮಾಲ್ ) ಇನ್ಫ್ಯೂಶನ್ ಹೋಗಿದೆ , ೫ ಡಿ ಹೋಗುತ್ತಿದೆ .(ಗಮನಿಸಿ  ನಾವು ಕೊಡುತ್ತಿದ್ದೇವೆ ಎಂದು ಹೇಳರು .ಹೋಗುತ್ತಿದೆ ಎನ್ನುವರು .ನಾನು ತಮಾಷೆಗೆ  ಅದು ಹೇಗೆ ಹೋಗುವುದು ನಡೆದುಕೊಂಡೋ ಎನ್ನುವೆನು )

"ಸರಿ  ಜ್ವರ ಇದೆಯೇ ?"

"ಸರ್  ,ಟೆಂಪರೇಚರ್  ಈಗ ನಾರ್ಮಲ್ ಇದೆ "

"ಬಿ ಪಿ ?"

"ಸರ್  ೧೦೦/೭೦ ಸಿಗುತ್ತಿದೆ "

"ಅದೇನು ಸಿಗುತ್ತಿದೆ ,೧೧೦/೭೦ ಇದೆ ಎನ್ನಿರಿ "

"ಓ ಕೆ ಸರ್ "

"ಸಾರ್ ಇನ್ನೂರ ಒಂದರಲ್ಲಿ  ಒಂದು ರೆಫರೆನ್ಸ್ ಇದೆ "

"ಏನು ರೆಫರೆನ್ಸ್ ?"

ಡಿ ಎಚ್ ಎಸ್ ಪೇಷೆಂಟ್  ನಿನ್ನೆಯಿಂದ ಕಾಫ್ , ಬ್ರೆಥ್ ಲೆಸ್ ನೆಸ್ಸ್ ಸಾರ್ "ಒ2 ಮತ್ತು ನೆಬ್ ಹೋಗುತ್ತಿದೆ "

ನಮ್ಮಲ್ಲಿ ತುಂಬಾ ಅಬ್ರೆ ವೇಷನ್  ಅಥವಾ ಶಾರ್ಟ್ ಫೋರ್ಮ್ ಉಪಯೋಗ ಇದ್ದು  ನನಗೇ ಕೆಲವೊಮ್ಮೆ ಗಲಿಬಿಲಿ ಆಗುವುದು .

ಎಲ್ ಟಿ ಎಂದರೆ  ಹೆರಿಗೆ ಮನೆ (ಲೇಬರ್ ಥಿಯೇಟರ್) ,ಒ ಟಿ ಶಸ್ತ್ರ ಚಿಕಿತ್ಸಾ ಗೃಹ (ಆಪರೇಷನ್ ಥಿಯೇಟರ್),ಥಿಯೇಟರ್ ಅಂದರೂ ಮನೋರಂಜನೆ ಇಲ್ಲ .ಲ್ಯಾಪ್ ಕೋಲಿ (laparoscopic cholecystectomy)   ಎಂದರೆ ಉದರ ದರ್ಶಕ ಮೂಲಕ ಪಿತ್ತ ಕೋಶ ತೆಗೆಯುವಿಕೆ .ಎಂ ಎಲ್ ಸಿ ಎಂದರೆ ಪೋಲೀಸು ಕೇಸ್ ಇರುವ ಉದಾ  ರಸ್ತೆ ಅಪಘಾತ  ,ಹೊಡೆದಾಟ ಇತ್ಯಾದಿ ಗಳಿಂದ ಆದ  ರೋಗಗಳು.ನೈಟ್ ಸೂಪರ್ ಅಂದರೆ ನೈಟ್ ಸೂಪರ್ವೈಸರ್ ಇತ್ಯಾದಿ .

ಇತ್ತೀಚೆಗೆ  ಯುವ ರೋಗಿಗಳೂ ಇದೇ ತರಹ ಷಾರ್ಟ್ ಫೋರ್ಮ್ ಉಪಯೋಸುವುದು ಸಾಮಾನ್ಯ .

ನೀವು ಏನು ಮಾಡುತ್ತಿರುವಿರಿ ?ಎಂದು ಕೇಳಿದರೆ  ವಿ ಸಿ ಯಲ್ಲಿ ಈಸಿ ಎನ್ನುವರು .ಅಂದರೆ  ವಿವೇಕಾನಂದ  ಇಂಜಿನೀರಿಂಗ್  ಕಾಲೇಜ್ ನಲ್ಲಿ  ಇಲೆಕ್ತ್ರೋನಿಕ್ ಮತ್ತು  ಕಮ್ಯೂನಿಕೇಷನ್ ಎಂದು ಅರ್ಥ .ಇನ್ನೂ ಕೆಲವರು ಸಿ ಎಸ್ ಎನ್ನುವರು ,ಚೀಫ್ ಸೆಕ್ರೆಟರೀ ಅಲ್ಲ ,ಕಂಪ್ಯೂಟರ್ ಸೈನ್ಸ್ .

 ಮುಂಜಾನೆ ರೌಂಡ್ಸ್ ಮುಗಿದ ಮೇಲೆ ನರ್ಸಿಂಗ್ ನೋಟ್ಸ್ ಬರೆದು ವೈದ್ಯರ ಆದೇಶ ಪಾಲನೆಗೆ ಹೊರಡುವಷ್ಟರಲ್ಲಿ ಒಂದು ರೂಮಿನಿಂದ ಬೆಲ್ ಆಗುವುದು ;ಡ್ರಿಪ್ ಮುಗಿದಿದೆ ಅಂತ .ಅದನ್ನು ಸರಿಪಡಿಸುವಷ್ಟರಲ್ಲಿ ಇನ್ನೊಬ್ಬರು ಮಗಳಿಗೆ ಹೆರಿಗೆ ನೋವು ಬಂದಿದೆ ,ಮತ್ತೊಬ್ಬರು ಮಗು ವಾಂತಿ ಮಾಡುತ್ತಿದೆ ಇತ್ಯಾದಿ ಸಮಸ್ಯೆಗೆ ಓಡಿ ಬರುವರು .ನಡುವೆ ಒ ಟಿ ನರ್ಸ್ ಫೋನ್ ಮಾಡಿ ಸರ್ಜರಿಗೆ ರೋಗಿಯನ್ನು ಇನ್ನೂ ಕಳುಹಿಸಿಲ್ಲಾ ಎನ್ನುವರು

ಅದೇನೇ ಇರಲಿ  ರೋಗಿಗಳಿಗೂ  ವೈದ್ಯರಿಗಿಂತ ಹೆಚ್ಚಾಗಿ ತಮ್ಮನ್ನು  ಶುಶ್ರೂಷೆ ಮಾಡಿದ  ದಾದಿಯರ ಮೇಲೆ  ಹೆಚ್ಚು  ಕೃತಜ್ನತಾ ಭಾವ ಇರುವುದು ನ್ಯಾಯ ಮತ್ತು ಸಾಮಾನ್ಯ .ಒಂದು ಸಂಸ್ಥೆಯಲ್ಲಿ  ದುಡಿದ ವೈದ್ಯರನ್ನು  ಆಡಳಿತ ಮಂಡಳಿ ಅಥವಾ  ಸಹ ವೈದ್ಯರಿಗಿಂತ ಈ ಸಹೋದರಿಯರೇ  ಜ್ನಾಪಕದಲ್ಲಿ ಇಟ್ಟು ಕೊಳ್ಳುವರು .

  ರೋಗಿಗಳು ಮತ್ತು ಸಂಭಂದಿಕರು ಆದಷ್ಟು ತಮಗೆ ಆರೈಕೆ ಮಾಡುವ  ನರ್ಸ್ ಸಿಬ್ಬಂದಿಯವರ  ಜತೆ ಜಗಳ ಮಾಡ ಬಾರದು .ಮನಸು ಮುರಿದ ಮೇಲೆ ಒತ್ತಡ ರಹಿತವಾಗಿ ಪೂರ್ವಗ್ರಹ ಇಲ್ಲದೆ ನಿರ್ಭಿತಿಯಿಂದ  ಕೆಲಸ ಮಾಡುವುದು ಕಷ್ಟ .ಅಲ್ಲದೆ  "ಅಲ್ಲಿ  ಸಿಸ್ಟೆರ್ ಗೆ ನರವೇ ಸಿಗುವುದಿಲ್ಲ ,ಚುಚ್ಚಿ ಚುಚ್ಚಿ  ಸಾಯಿಸುತ್ತಾರೆ " ಇತ್ಯಾದಿ ಲಘುವಾಗಿ  ಮಾತನಾಡ  ಬಾರದು  .ಅವರೂ  ನಿಮ್ಮ ಮಕ್ಕಳೇ ಅಥವಾ ಸಹೋದರಿಯರೇ ಎಂದು ಭಾವಿಸ ಬೇಕು .ಯಾಕೆಂದರೆ ಹತ್ತಾರು ರೋಗಿಗಳ ವಿಭಿನ್ನ ತೊಂದರೆಗಳ ಮೇಲೆ ನಿಗಾ ಇಡುವುದು   ಒತ್ತಡದ  ಕಾರ್ಯ .ಅವರ ಕೆಲಸದಲ್ಲಿ ಗಂಭೀರ ಲೋಪ ಕಂಡರೆ  ವೈದ್ಯರಲ್ಲಿ ಅಥವಾ ಮೇಲ್ವಿಚಾರಕರ ಬಳಿ ನಿವೇದಿಸಕೊಳ್ಳ ಬೇಕು ,


 

 

 

 

ಸೋಮವಾರ, ಫೆಬ್ರವರಿ 1, 2021

ತಪ್ಪಿದ ಗುರಿ ರುಮ್ಯಾಟಿಕ್ ಜ್ವರ

   ತಪ್ಪಿದ ಗುರಿ  ರುಮ್ಯಾಟಿಕ್ ಜ್ವರ 

ಯುದ್ಧ ಕಾಲದಲ್ಲಿ ನಮ್ಮದೇ ಹೆಲಿಕ್ಯಾಪ್ಟರ್ ನ್ನು ವಿರೋಧಿಗಳು ಎಂದು ತಪ್ಪು ತಿಳಿದು ಉರುಳಿಸಿದ ಘಟನೆಗಳನ್ನು ಓದಿ ತಿಳಿದಿರ ಬಹುದು . ಹಾಗೆಯೇ ನಮ್ಮ ದೇಹದಲ್ಲಿ ಕೆಲವೊಮ್ಮೆ ಆಗುವುದು ರುಮ್ಯಾಟಿಕ್ ಜ್ವರ ಒಂದು ಉದಾಹರಣೆ . 

ಗಂಟಲಲ್ಲಿ  ಸ್ಟ್ರೆಪ್ಟೋಕೋಕ್ಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು ಉಂಟುಮಾಡಿದಾಗ ನಮ್ಮ ಬಿಳಿ ರಕ್ತ ಕಣಗಳು ಅದರ ವಿರುದ್ಧ ಪ್ರತಿ ವಿಷ (ಆಂಟಿಬಾಡಿ , ಕೆಲ ರಾಸಾಯನಿಕ ಮತ್ತು ವಿಶೇಷ ತರಬೇತಿ ಗೊಂಡ ಕಣಗಳು )ಉಂಟು ಮಾಡುವವು . ಇವು  ಗುರಿ ತಪ್ಪಿ ನಮ್ಮ ದೇಹದ ಹೃದಯ ,ಅವಯವ ಸಂಧಿ ಮತ್ತು ಮೆದುಳಿನ ಮೇಲೆ ಧಾಳಿ ಮಾಡಿ ರುಮ್ಯಾಟಿಕ್  ಜ್ವರ ಉಂಟು ಮಾಡುವುವು ತೀವ್ರ ತರ  ಗಂಟು ಬಾವು ಮತ್ತು ನೋವು;ಒಂದು ಗಂಟಿನ ಭಾದೆ  ಶಮನ ವಾದೊಡನೆ  ಇನ್ನೊಂದು ಗಂಟಿಗೆ ಬರುವುದು . .ಚರ್ಮದಲ್ಲಿ ಕೆಂಪು ಮತ್ತು ಸಣ್ಣ ಗಂಟುಗಳು ಬೀಳಬಹುದು ..ಕೈ ಕಾಲುಗಳಲ್ಲಿ  ಕೆಲವು ಅನಿಯಂತ್ರಿತ ಚಲನೆಗಳು (ಇದನ್ನು  ಕೊರಿಯಾ ಎನ್ನುವರು )ಉಂಟಾಗಬಹುದು .ಈ   ಕಾಯಿಲೆ ಗಂಟುಗಳನ್ನು ನೆಕ್ಕಿ ಹೃದಯವನ್ನು ಕಚ್ಚುವುದು ಎನ್ನುವರು .ಹೃದಯದ ಕವಾಟಗಳು ,ಮಾಂಸಖಂಡ ,ಹೊರ ಪೊರೆ ಗೆ ರೋಗ ಬರ ಬಹುದು . 

ಜ್ವರ ,ಗಂಟು ನೋವು ಇತ್ಯಾದಿ    ಸಾಮಾನ್ಯ ಚಿಕಿತ್ಸೆಯಿಂದ ಶಮನ ಆದರೂ ಹೃದಯ ದ  ವ್ಯಾಧಿ  ಸದ್ದಿಲ್ಲದೇ ಮುಂದುವರಿದು ಮುಂದೆ ಕವಾಟಗಳ ಕಾರ್ಯ ಕ್ಷಮತೆಯಲ್ಲಿ ಏರು ಪೇರು  ಮಾಡಿ ದೊಡ್ಡ ಅರೋಗ್ಯ ಸಮಸ್ಯೆ ಉಂಟು ಮಾಡ ಬಹುದು .ಇದನ್ನು ತಡೆಗಟ್ಟಲು ಒಂದು ಬಾರಿ  ರುಮ್ಯಾಟಿಕ್ ಜ್ವರ ಬಂದವರಿಗೆ ವರ್ಷಗಳ ಪರ್ಯಂತ ಮಾಸ ಮಾಸ ಪೆನಿಸಿಲಿನ್ ಇಂಜೆಕ್ಷನ್ ಕೊಡುವರು . ಮತ್ತು  ಸ್ಟ್ರೆಪ್ತೋ ಕೊಕ್ಕಸ್  ಗಂಟಲು ನೋವಿಗೆ ಹತ್ತು ದಿನಗಳ ವರೆಗಿನ  ಆಂಟಿ ಬಯೋಟಿಕ್ ಸಲಹೆ ಮಾಡುವರು . 

ಇದೇ  ತರಹದ    ಗುರಿ ತಪ್ಪಿದ ದಾಳಿ ಮೂತ್ರ ಪಿಂಡಗಳ ಮೇಲೂ ನಡೆಯುವುದು ಉಂಟು .ಇಲ್ಲಿ ಇದೇ ಬ್ಯಾಕ್ಟಿರಿಯಾ ಚರ್ಮದ ಸೋಂಕು ಉಂಟುಮಾಡಿದಾಗ ಉಂಟಾದ ರೋಗ ನಿರೋಧಕಗಳು ತಪ್ಪಿ ಮೂತ್ರ ಪಿಂಡಗಳ ಮೇಲೆ ಧಾಳಿ ಮಾಡುವುವು .ಇದರಿಂದ ಮುಖದಲ್ಲಿ ನೀರು ಬರುವುದು ,ರಕ್ತದ ಒತ್ತಡ ಏರುವುದು ಮತ್ತು  ದಮ್ಮು ಕಟ್ಟಲು ಆರಂಭ ವಾಗುವುದು .ಇದನ್ನು  ಸ್ಟ್ರೆಪ್ತೋ ಕೊಕ್ಕೋತ್ತರ  ಮೂತ್ರ ಪಿಂಡ ಉರಿಯೂತ ಎನ್ನುವರು