ಬೆಂಬಲಿಗರು

ಬುಧವಾರ, ಜುಲೈ 27, 2022

ಒಂದು ನೆನಪು

                                              



 

 1978 ರಲ್ಲಿ ಶಿವರಾಮ ಕಾರಂತರಿಗೆ ಜ್ನಾನಪೀಠ ಪ್ರಶಸ್ತಿ ಬಂದು ಕನ್ನಡಿಗರಿಗೆಲ್ಲ ಸಂತೋಷ .ನಾನು ಆಗ ಕೆ ಎಂ ಸಿ ಹುಬ್ಬಳ್ಳಿ ಯಲ್ಲಿ ವಿದ್ಯಾರ್ಥಿ .ರಾಜ್ಯದ ಎಲ್ಲಾ ಕಡೆಯಂತೆ ಹುಬ್ಬಳ್ಳಿ ಧಾರವಾಡ ದಲ್ಲಿಯೂ ಕಾರಂತರ ಭಾಷಣ ,ಸನ್ಮಾನ ಕಾರ್ಯಕ್ರಮ ಅದ್ದೂರಿಯಂತೆ ಏರ್ಪಡಿಸಿದ್ದರು . ನಮ್ಮ ಕಾಲೇಜಿನ ಕನ್ನಡ ಸಂಘದ ಪರವಾಗಿ ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮಲ್ಲಿ ಬರ ಬಹುದೋ ಎಂದು ಕಾರಂತರಲ್ಲಿ ಕೇಳಿ ಕೊಳ್ಳಲು ,ಎಲ್ಲಾ ಕಾರ್ಯಕ್ರಮ ಕು ಶಿ ಹರಿದಾಸ ಭಟ್ಟರೇ ಏರ್ಪಡಿಸುವುದು ,ಅವರನ್ನು ಸಂಪರ್ಕಿಸುವಂತೆ ಕೇಳಿದರು .ಪ್ರವಾಸ ದುದ್ದಕ್ಕೂ  ಹರಿದಾಸ ಭಟ್ ಕಾರಂತರ ಜತೆಗೆ ಇದ್ದರು .ಸರಿ ,ಅವರನ್ನು ಕಾಣಲು ಲ್ಯಾಮಿಂಗ್ಟನ್ ರಸ್ತೆಯ ಒಂದು ಸಾಮಾನ್ಯ ಹೋಟೆಲ್ ನಲ್ಲಿದ್ದ ಅವರನ್ನು ಕಾಣಲು ಹೋದೆವು .ಅವರು ಅಲ್ಲಿಯೇ ಪಕ್ಕದ ಕೋಣೆಯಲ್ಲಿ ತಂಗಿದ್ದ ಕರ್ನಾಟಕ ಬ್ಯಾಂಕ್ ಛೇರ್ಮನ್  ಶ್ರೀ ಕೆ ಎಸ ಏನ್ ಅಡಿಗರ ಜತೆ ಏನೋ ಗಹನವಾದ ಚಿಂತನೆಯಲ್ಲಿ ಇದ್ದವರು ನಮ್ಮ ಕೋರಿಕೆಯನ್ನು ಈಡೇರಿಸಲು ತಮ್ಮ ಅಶಕ್ತತೆ ವ್ಯಕ್ತ ಪಡಿಸಿದರು . 

ಆದರೆ ನನಗೆ ಆಶ್ಚರ್ಯ ಒಬ್ಬ ಬ್ಯಾಂಕಿನ ಅಧ್ಯಕ್ಷ  ಅಧಿಕೃತ ಕಾರ್ಯ ನಿಮಿತ್ತ ಪರವೂರಿಗೆ ಬಂದಾಗ ಸಾಧಾರಣ ಹೋಟೆಲ್ ನಲ್ಲಿ ಉಳಿದು ಕೊಂಡಿದ್ದು ,ಸುತ್ತ ಮುತ್ತ ವಂದಿ ಮಾಗಧರು ಇಲ್ಲ, ಸರಳ ಖಾದಿ ಉಡುಗೆ . ಅವರಿಗೆ ಬೇಕಿದ್ದಲ್ಲಿ  ಪ್ರವಾಸಿ ಬಂಗ್ಲೆಯೋ ,ವಿಲಾಸಿ ವಸತಿ ಗೃಹಕ್ಕೋ ಹೋಗ ಬಹುದಿತ್ತ್ತು ..ಒಂದು ಕಾಲಕ್ಕೆ ಎಂ ಎಲ್ ಸಿ ಕೂಡಾ ಆಗಿ ಇದ್ದವರು . ಸಾರ್ವಜನಿಕ ಕೆಲಸದಲ್ಲಿ  ಆಡಂಬರ ಕ್ಕೆ ವೆಚ್ಚ ಮಾಡ ಬಾರದು ಎಂಬ ಉದ್ದೇಶ ಇರ ಬೇಕು .  ಅಂತಿದ್ದರು ಅಂದಿನ ನಾಯಕರು .ಸರಳ ಬದುಕು ಹಿರಿಯ ಬಾಳು .

ಸೋಮವಾರ, ಜುಲೈ 25, 2022

ವಿ ಬಿ ಅರ್ತಿಕಜೆ

                                    ವಿ ಬಿ ಅರ್ತಿಕಜೆ 


ನಿಮಗೆಲ್ಲಾ ಇತಿಹಾಸ ಪ್ರಾಧ್ಯಾಪಕ ,ಪತ್ರಕರ್ತ ,ಸಾಹಿತಿ ಮತ್ತು ಸಂಘಟಕ ಎಂದು ಪರಿಚಿತರಾದ  ಶ್ರೀ ವಿ ಬಿ ಅರ್ತಿಕಜೆ  ನನ್ನ ಅಕ್ಕ (ಒಪ್ಪಕ್ಕ )ಭಾಗ್ಯ ಲಕ್ಷ್ಮಿ ಯ  ಪತಿ .  ಹೆಚ್ಚು ಕಡಿಮೆ ಐದು ದಶಕಗಳ ದಾಂಪತ್ಯ ಜೀವನ . 

ನಾನು ಕಂಡಂದಿನಿಂದ ಇಂದಿನ ವರೆಗೆ ಅರ್ತಿಕಜೆ ಯವರ  ದಿನಚರಿ  ಮುಂಜಾನೆ ಕಾವಿ  ಧೋತಿ ಉಟ್ಟು ತಮ್ಮ ಹಿತ್ತಿಲಿನಲ್ಲಿ ಇರುವ ತೆಂಗಿನ ಮರಗಳಿಗೆ  ನೀರು ಉಣಿಸುವದರಿಂದ ಆರಂಭ .ಮೊದಲು ಬಾವಿಯಿಂದ ನೀರು ಸೇದಿ ಕೊಡಪಾನದಲ್ಲಿ ,ಆಮೇಲೆ  ಈಗ ಪೈಪಿನ ಮೂಲಕ . ಮಳೆಗಾಲದಲ್ಲಿ ತೋಟದ ಕಸ  ಗರಿ ಗಳನ್ನು  ತೆಗೆದು ಸ್ವಚ್ಛ ಮಾಡುವುದು . ಆಮೇಲೆ ಪುಸ್ತಕ ರಾಶಿಯಿಂದ ಆವೃತ್ತವಾದ ತಮ್ಮ ಕೋಣೆ ಯಲ್ಲಿ ಕುಳಿತು  ಬರವಣಿಗೆ . ಕಾಪಿ ತಿಂಡಿ ಆದ ಮೇಲೆ  ಕೊಲೇಜಿಗೆ (ನಿವೃತ್ತ ರಾಗುವ ವರೆಗೆ ) .ಪುತ್ತೂರು ಪೇಟೆಯ ವರೆಗೆ ನಡಿಗೆ ಆಮೇಲೆ ನಗರಕ್ಕೆ ಆಟೋ .ನಗರದಿಂದ ಕಾಲೇಜ್ ವರೆಗೆ ಪುನಃ ನಡಿಗೆ . ಸಂಜೆ ಇದೇ ಮನೆ ಕಡೆಗೆ . 

ಈಗ ಕಾಲೇಜ್ ಇಲ್ಲದ ಕಾರಣ ಮುಂಜಾನೆ ಪೇಟೆಗೆ ಒಂದು ನಡಿಗೆ ,ಪೇಪರ್ ಕೊಂಡು ವಾಪಾಸು .. ಆಮೇಲೆ ಯಥಾ ಪ್ರಕಾರ ಬರವಣಿಗೆ . ನೆಂಟರು ,ಅತಿಥಿ ಗಳು ಬಂದರೆ ಅಲ್ಲಿಂದಲೇ ನಮಸ್ಕಾರ ಮಾಡಿ ಬರವಣಿಗೆ ಒಂದು ಹಂತಕ್ಕೆ ಬಂದ ಮೇಲೆ ಬಂದು ಭೇಟಿ . 

ಸಂಜೆ ತಪ್ಪದೇ  ಕುಟುಂಬದ ಜತೆ ಭಜನೆ ಕಾರ್ಯಕ್ರಮ .  

ಶಾಲಾ ಕಾಲೇಜ್ ವಿದ್ಯಾರ್ಜನೆ ಬಡತನದ ನಡುವೆ . ಆಮೇಲೆ ತಾವು ಒಂದು ನೆಲೆಗೆ ಬಂದಮೇಲೆ ಇಡೀ ಕುಟುಂಬದ ಆಧಾರ . ತಂದೆ ತಾಯಿಯನ್ನು ನೋಡಿ ಕೊಳ್ಳುವುದರ ಜತೆ ತಮ್ಮ ತಂಗಿಯರಿಗೆ ಆಸರೆ . 

ಈ ಸಂದರ್ಭದಲ್ಲಿ ಅವರು ಆಗಾಗ ನೆನಪಿಸಿ  ಕೊಳ್ಳುವುದು ಫಿಲೋಮಿನಾ ಹೈ ಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದ ಶ್ರೀ ಡೆನ್ನಿಸ್ ಡಿ ಸೋಜಾ ಅವರ  ನಿಷ್ಕಲ್ಮಶ ಶಿಷ್ಯ ಪ್ರೀತಿ ಮತ್ತು ಪ್ರೋತ್ಸಾಹ . ಅದೇ ಹೈ ಸ್ಕೂಲ್ ನಲ್ಲಿ ಸ್ವಲ್ಪ ಸಮಯ ಅಧ್ಯಾಪನ .ಆಮೇಲೆ ಮೈಸೂರು ವಿಶ್ವ ವಿದ್ಯಾಲಯದಿಂದ ಚರಿತ್ರೆ ಯಲ್ಲಿ  ಎಂ ಎ . ಮಾಡಿ ವಿವೇಕಾನಂದ ಕಾಲೇಜು ನಲ್ಲಿ ಅಧ್ಯಾಪನ .ಕಾಲೇಜಿನ ಸ್ಥಾಪಕ ಆಡಳಿತ ಗಾರ  ದಿ. ಉರಿಮಜಲು ರಾಮ ಭಟ್ ಅವರಲ್ಲಿ ಅತೀವ ಗೌರವ ಮತ್ತು ಪ್ರೀತಿ . 

   ಪ್ರಾಧ್ಯಾಪಕ ರಾಗಿ ಇದ್ದಾಗಲೇ ನವಭಾರತ ,ಉದಯವಾಣಿಗೆ  ನಂತರ ಕರಾವಳಿ ಅಲೆ ,ಹೊಸ ದಿಗಂತ ಪತ್ರಿಕೆಗಳಲ್ಲಿ ನಿಯತವಾಗಿ ಬರವಣಿಗೆ . ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ  ದಶಕಗಳ ನಿರ್ವಹಣೆ ಮತ್ತು ಪ್ರಸ್ತುತ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ದೈನಿಕ ಅಂಕಣ .ವಿವೇಕಾನಂದ ಕಾಲೇಜು ನಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ನಾಂದಿ ಹಾಕಿದವರು . 

ಪುತ್ತೂರಿನಲ್ಲಿ ಬೋಳಂತಕೋಡಿ ಈಶ್ವರ ಭಟ್ ಅವರ ಕನ್ನಡ ಸಂಘ  ಚಟುವಟಿಕೆಗಳು  ಉತ್ತುಂಗ ಸ್ಥಿತಿ ಯಲ್ಲಿ ಇದ್ದ ಕಾಲ . ಬೋಳಂತ ಕೋಡಿ ,ಅರ್ತಿಕಜೆ ಮತ್ತು ಮೊಳೆಯಾರ್ (ವಿ ಬಿ ಮೊಳೆಯಾರ್ )ಎಂಬ ತ್ರಿಮೂರ್ತಿಗಳು  ಊರೆಲ್ಲಾ  ಕಾಲು ನಡಿಗೆಯಲ್ಲಿ ಮತ್ತು ದೂರಕ್ಕೆ ರಾಮ ಭಟ್ಟರ  (ಕಾರ್ ರಾಮ ಭಟ್ ಅವರು )ಕಾರಿನಲ್ಲಿ ಸುತ್ತಿದಕ್ಕೆ ಲೆಕ್ಕ ಇಲ್ಲ . ಅವರು ಸಂಘಟಿಸಿದ ಕಾರ್ಯ ಕ್ರಮಗಳು ಎಷ್ಟೋ ,ಪ್ರಕಟಿಸಿದ ಅಮೂಲ್ಯ ಗ್ರಂಥಗಳು ಎಷ್ಟೋ ?ಬೋಳಂತ ಕೋಡಿ  ಈಶ್ವರ ಭಟ್ ಅವರನ್ನು ಯಾವಾಗಲೂ ಸ್ಮರಿಸುತ್ತ  ಇರುತ್ತಾರೆ . 

ಇಳಿ ವಯಸ್ಸಿನಲ್ಲಿ ಕೂಡಾ ವಿಟ್ಲ ಸಮೀಪ ಮೈತ್ರೆಯೀ ಗುರುಕುಲಕ್ಕೆ ಗೌರವ ಅಧ್ಯಾಪಕೆರಾಗಿ ಹೋಗಿ ಪಾಠ ಮಾಡುತ್ತಿದ್ದರು . 

ಅವರದು ತುಂಬು ಕುಟುಂಬ ಆಗಿತ್ತು . ತಮ್ಮಂದಿರು ,ಅವರ ಕುಟುಂಬ ಮಕ್ಕಳು ,ತಂದೆ ತಾಯಿ ಎಲ್ಲರೂ ಒಟ್ಟಿಗೇ ಇದ್ದು ಮನೆಯಲ್ಲಿ ನಮ್ಮಂತಹ ನೆಂಟರು ಸದಾ ಇರುತ್ತಿದ್ದರು . ಜಾತ್ರೆಯ ಸಮಯ ಇದು ಇನ್ನೂ ಜಾಸ್ತಿ . ಎಲ್ಲಾ ಗದ್ದಲಗಳ ನಡುವೆ ಇವರ ಅಧ್ಯಯನ ಬರವಣಿಗೆ ;ಜತೆಗೆ ಸಭೆ ಸಮಾರಂಭಗಳಿಗೆ ಅಹ್ವಾನ ,ಯುವ ಬರಹಗಾರರಿಗೆ ಸಲಹೆ ,ಮುನ್ನುಡಿ ಇತ್ಯಾದಿ ಬರೆಯುವುದು .ಇವರ ಪುಸ್ತಕ ಸಂಗ್ರಹ ನನಗೆ  ಅಲ್ಲಿ ಆಗಾಗ ಹೋಗಲು ಮುಖ್ಯ ಆಕರ್ಷಣೆ ಆಗಿತ್ತು . ನಾನು ಮತ್ತು ಅವರು ಹಲವು ಪುಸ್ತಕಗಳನ್ನು ವಿನಿಮಯ  ಮಾಡಿ ಕೊಂಡಿದ್ದೇವೆ . ಸಾವಿರಾರು ರೂಪಾಯಿ ಬೆಲೆ ಬಾಳುವ  ಗ್ರಂಥಗಳನ್ನು ಶಾಲೆಗಳಿಗೆ ನೀಡಿದ್ದಾರೆ 

ಸಾಧ್ಯವಾದಷ್ಟು ನಡಿಗೆ ,ಶ್ರಮ ಜೀವನಕ್ಕೆ ಕೊಡದ ವಿರಾಮ ಇವರ ಆರೋಗ್ಯ ಕಾಪಾಡಿದೆ ;ಪಂಚೆ ಷರಟು ಸರಳ ಉಡುಗೆ ಇವರ ಟ್ರೇಡ್ ಮಾರ್ಕ್ . . ಪರ್ಲಡ್ಕದ ಹಳೇ  ಹಂಚಿನ ಮನೆಯಲ್ಲಿ ಈಗಲೂ ವಾಸ 

ಅವರಿಗೆ ದೊರೆತ ಸನ್ಮಾನ ,ಬಿರುದು ಗಳ ಉಲ್ಲೇಖ ನಾನು ಮಾಡುವುದಿಲ್ಲ ..ಬಹಳಷ್ಟು ಗಳಿಕೆಯನ್ನು ಸಾಹಿತ್ಯ ಸೇವೆಗೆ ,ಅಶಕ್ತರ ಸಹಾಯಕ್ಕೆ ಅವರು ವಿನಿಯೋಗಿಸಿದ್ದಾರೆ 

 

 

ಭಾನುವಾರ, ಜುಲೈ 24, 2022

ಎ ವಿ ನಾರಾಯಣ ದಂಪತಿಗಳು

                                 ಪ್ರೊ  ಎ  ವಿ ನಾರಾಯಣ ಮತ್ತು ಪ್ರೊ ವತ್ಸಲಾ ರಾಜ್ಞಿ ದಂಪತಿಗಳು 

 ಶೈಕ್ಷಣಿಕ ರಂಗದಲ್ಲಿ  ಸುಧೀರ್ಘ ಸೇವೆ ಸಲ್ಲಿಸಿ  ನಿವೃತ್ತಿ ಬಳಿಕ (ಯುವಕರನ್ನೂ ನಾಚಿಸುವಂತೆ )ಕ್ರಿಯಾ ಶೀಲವಾಗಿ  ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ  ತಮ್ಮನ್ನು ತೊಡಗಿಸಿ ಗೊಂಡ ದಂಪತಿ ಶ್ರೀ ಎ ವಿ ನಾರಾಯಣ ಮತ್ತು ವತ್ಸಲಾ ಮೇಡಂ . 

ಪ್ರೊ ನಾರಾಯಣ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ದಿಂದ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕ ರಾಗಿ ಸೇರಿ ,ಪ್ರಿನ್ಸಿಪಾಲ್ ಆಗಿ ನಿವೃತ್ತರಾದವರು. ಒಳ್ಳೆಯ ಶಿಕ್ಷಕ ರೂ  ,ಆಡಳಿತ ಗಾರರೂ ಎಂದು ನಿರೂಪಿಸಿದ ಇವರು ನಂತರವೂ ಕಾಲೇಜು  ಆಡಳಿತ ಮಂಡಳಿಯಲ್ಲಿ ಸಕ್ರಿಯರಾಗಿ ಇದ್ದು  ಸಂಸ್ಥೆಯ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ತಮ್ಮ ಯೋಗದಾನ ನೀಡಿದವರು . ಜತೆಗೆ ಸಾಹಿತ್ಯ ಪರಿಷತ್ ,ಹಿರಿಯ ನಾಗರಿಕರ ಸಂಘಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು . ತನು ಮನ ಧನ ದ  ಕೊಡುಗೆ ಎಂಬುದು ಇವರ ವಿಚಾರಕ್ಕೆ ಕ್ಲೀಷೆ ಯಲ್ಲ . ಕನ್ನಡ ಕೆಲಸ ಗಳಲ್ಲಿ ಉತ್ಸಾಹ ದಿಂದ ಓಡಾಡುವದು ಕಾಣ ಬಹುದು . 

ವತ್ಸಲಾ ಮೇಡಂ ಗಣಿತ ಶಾಸ್ತ್ರ ಪ್ರಾಧ್ಯಾಪಕೆರಾಗಿ ಅದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು .  ಕಠಿಣ ವೆಂದು ಪರಿಗಣಿತವಾದ ಈ ವಿಷಯವನ್ನು ಸುಲಿದ ಬಾಳೆಯ ಹಣ್ಣಿನಂತೆ ಮಾಡುವ ಇವರ ಪಾಠ ಪ್ರವಚನ ಗಳನ್ನು  ವಿದ್ಯಾರ್ಥಿಗಳು ಈಗಲೂ ನೆನಪಿಸಿ ಕೊಳ್ಳುತ್ತಾರೆ . 

ಇಬ್ಬರೂ ವಿದ್ಯಾರ್ಥಿ ಮತ್ತು ಆಡಳಿತ ಮಂಡಳಿ ಮನ್ನಣೆ ಪಡೆದವರು . ಮೃದು ಮಿತ ಮತ್ತು ಹಿತ ಭಾಷಿಗಳು . ಇಂತಹವರ ಇರುವಿಕೆಯಿಂದ ಸಮಾಜದ ಶ್ರೀಮಂತಿಕೆ ಇದ್ದದ್ದು ಉಳಿಯುತ್ತದೆ ,ಮತ್ತು ಹೆಚ್ಚುತ್ತದೆ . 

 ಇವರು ಹೀಗೇ ಅರೋಗ್ಯ ,ಸಂತೋಷ ಮತ್ತು ಸಡಗರದಿಂದ ಇದ್ದು ನಮಗೆಲ್ಲಾ ಮಾರ್ಗ ದರ್ಶನ ಮಾಡುತ್ತ ಇರಲಿ

ಬುಧವಾರ, ಜುಲೈ 20, 2022

ಜೇನು ಹುಳ ಕಡಿತ

 Catching a Wild Honeybee Swarm - YouTube

 

ನನ್ನ ಸಹಪಾಠಿ ಮಿತ್ರ ಶಿರಂಕಲ್ಲು ಶಿವರಾಮ ಭಟ್ ನಿನ್ನೆ ಕಾಡು ಜೇನು ಹುಳ ಕಡಿತದಿಂದ ಬಾಧಿತ ರಾಗಿ ಬಂದಿದ್ದರು . 

 ಜೇನು ಹುಳಗಳು ಕಡು ಬಣ್ಣ (ಕಪ್ಪು ,ಕೆಂಪು )ದ್ವೇಷಿಗಳು . ಅರಿವಿಲ್ಲದೆ ಅವರ ಸುದ್ದಿಗೆ ಹೋದರೂ ,ತಿಳಿಯದೇ ಮಾಡಿದ ಪಾಪ ಎಂದು ಅವು ಬಿಡವು . ಅಟ್ಟಿಸಿ ಕೊಂಡು ಬಂದು ಕಚ್ಚ್ಚುವವು . ಜೇನ್ ನೊಣಗಳಿಗೆ ಪ್ರತಿ ಧಾಳಿ ಮಾಡಲು ಹೋಗ ಬಾರದು . ಕಾಲಿಗೆ ಬುದ್ದಿ ಹೇಳುವುದು ಜಾಣ ತನ .ಓಡಿ ಹೋಗಿ ಕೋಣೆಯೊಳಗೋ ,ಕಾರಿನ ಒಳಗೋ ರಕ್ಷಣೆ ಪಡೆಯ ಬೇಕು . ಗೋಣಿಯೋ ,ದಪ್ಪ ಬಟ್ಟೆಯೋ ಇದ್ದರೆ ಕಣ್ಣು ಮಾತ್ರ ಬಿಟ್ಟು ಮುಖ ಸಾಧ್ಯ ವಾದಷ್ಟು ದೇಹ ಮುಚ್ಚಿ ಕೊಳ್ಳ ಬೇಕು . ನೀರಿಗೆ ಹಾರಿ ಮುಳುಗುವುದು ಕ್ಷೇಮ ಅಲ್ಲ .ಅವು ನೀರಿನ ಮೇಲೆ ಹಲವೊಮ್ಮೆ ಕಾಯುತ್ತ ಇರುವವು . 

ಜೇನು ನೊಣದ ಮುಳ್ಳುಗಳನ್ನು ಸಾಧ್ಯ ವಾದಷ್ಟು ತೆಗೆದು ಕೊಳ್ಳ ಬೇಕು . (ಪಾಶ್ಚಾತ್ಯ ಮಾಧ್ಯಮಗಳು ಇದಕ್ಕಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನ ಬದಿ ಉಪಯೋಗಿಸಿ ಎಂದು ಸಲಹೆ ಮಾಡುವರು .)ನೋವು ಶಮನಕ್ಕೆ  ಬಟ್ಟೆಯೊಗೆ ಐಸ್ ಸುತ್ತಿ ಇಡಬಹುದು . ಅಡಿಗೆ ಸೋಡಾ ಕರಡಿಸಿ ಹಚ್ಚಿದರೆ ಉರಿ ಕಡಿಮೆ ಆಗುವುದು ಎನ್ನುವರು . 

ಇದರಲ್ಲಿ ಪ್ರಾಣಾಪಾಯ ಆಗುವುದು ಜೇನ್ ನೊಣದ ವಿಷಕ್ಕೆ ಅಲ್ಲರ್ಜಿ ರಿಯಾಕ್ಷನ್ ಆಗಿ.ಇವರಲ್ಲಿ ಮೈಯೆಲ್ಲಾ ತುರಿಕೆ ರಾಷ್ ,ದಮ್ಮು ಕಟ್ಟುವುದು ,ರಕ್ತದ ಒತ್ತಡ ಕುಸಿತ ಆಗುವುದು .ಅದಕ್ಕೆ ವೈದ್ಯರು  ಜೀವ ಉಳಿಸುವ ಅಡ್ರೆನಲಿನ್ ಇಂಜೆಕ್ಷನ್ ಕೊಡುವರು .ಸಣ್ಣ ಅಲರ್ಜಿ ಗೆ  ಆಂಟಿ ಹಿಸ್ಟಾಮಿನಿಕ್ಸ್ ,ಸ್ಟ್ರೆರೋಯಿಡ್ ಸಾಕು .ನೋವಿಗೆ ಇಬು ಪ್ರೊಫೆನ್ ,ಡೈಕ್ಲೋ ಫೆನಾಕ್ ನಂತ ವೇದನಾ ಹಾರಕ  ಕೊಡುವರು . 

ಬಾಲಂಗೋಚಿ : ಕನ್ನಡದಲ್ಲಿ ಜೇನು ನೊಣ ,ಚೇಳು ಕಡಿತ ಎನ್ನುವರಾದರೂ ಇಂಗ್ಲಿಷ್ ನಲ್ಲಿ ಅದನ್ನು ಬೈಟ್ ಎನ್ನದೆ ಸ್ಟಿಂಗ್ ಎನ್ನುವರು

ಮಂಗಳವಾರ, ಜುಲೈ 19, 2022

                  ಜಲೋದರ 

 Ascites - WikipediaAscites causes, symptoms, diagnosis, prognosis and ascites treatment

 

ನಮ್ಮ  ಉದರದದೊಳಗೆ ಜಠರ ಕರುಳ ಮಾಲೆ ಇತ್ಯಾದಿ ತೇಲುತ್ತಲಿದ್ದು ಅದಕ್ಕೆ  ಸಾಕಷ್ಟು ಸ್ಥಳಾವಕಾಶ ಇದೆ .ಅಲ್ಲದೆ ಅವುಗಳ ಸುಲಲಿತ ಚಲನೆಗೆ ಸುಮಾರು ೫೦ ಮಿಲ್ಲಿ ಲೀಟರ್ ನಷ್ಟು ದ್ರವ ಇದ್ದು ಘರ್ಷಣೆ ನಿವಾರಕ ಆಗಿ ಕೆಲಸ ಮಾಡುವದು .

ಆದರೆ ಕೆಲವು ಸಂದರ್ಭಗಳಲ್ಲಿ ದ್ರವ ಉತ್ಪತ್ತಿ ಮತ್ತು ಶೇಖರಣೆ ಹೆಚ್ಚು ಆಗಿ ಹೊಟ್ಟೆ ಉಬ್ಬುವುದು . ಎದೆಯ ನೀರಿಗಿಂತ ಇಲ್ಲಿ ಹೊರಗೆ ವಿಕಸಿಸಲು ಅವಕಾಶ ಇದೆ . 

ಮದ್ಯಪಾನ ,ಅಥವಾ ಸೋಂಕು ರೋಗಗಳಿಂದ ಲಿವರ್ ಕಾರ್ಯ ನಾಶ ಆದರೆ ಜಲೋದರ ಬರುವದು ಸಾಮಾನ್ಯ . ಹೊಟ್ಟೆಯ ಪೋರ್ಟಲ್ ರಕ್ತ ನಾಳ ಗಳ ಒಳಗೆ ಹೆಚ್ಚಿದ ಒತ್ತಡ , ಲವಣ ಮತ್ತು ನೀರು ಹಿಡಿದು ಕೊಳ್ಳುವ ಅಲ್ದೊ  ಸ್ಟಿರೋನ್ ಎಂಬ ಹಾರ್ಮೋನ್ ಮಿತಿ ಮೀರಿ ಉತ್ಪಾದನೆ ಮತ್ತು ರಕ್ತದಲ್ಲಿ ಸಸಾರ ಜನಕದ (ಲಿವರ್ ಇದರ ಕಾರ್ಖಾನೆ )ಕೊರತೆ ಇದಕ್ಕೆ ಕಾರಣ . 

ಇನ್ನು ಕ್ಷಯ ರೋಗ ,ಕ್ಯಾನ್ಸರ್,ಅಪೌಷ್ಟಿಕತೆ  ಮತ್ತು ಮೂತ್ರ ಪಿಂಡ ಹೃದಯ  ವೈಫಲ್ಯ ದಲ್ಲಿಯೂ ಹೊಟ್ಟೆಯಲ್ಲಿ ನೀರು ತುಂಬಿ ಕೊಳ್ಳ ಬಹುದು . ಸೂಜಿ ಹಾಕಿ ನೀರು ಪರೀಕ್ಷೆ ಮಾಡಿ ಕಾರಣ ತಿಳಿದು ಕೊಳ್ಳುವರು . ಹೊಟ್ಟೆಯ ಸ್ಕ್ಯಾನ್ ಸಹಾಯ ಕಾರಿ


 

ಭಾನುವಾರ, ಜುಲೈ 17, 2022

 ಎದೆಯಲ್ಲಿ  ನೀರು ತುಂಬುವುದು 

 Pleural effusion | HealthEngine BlogPleural Fluid Drainage Frequency - Dr. Flores Pulmonology                                                                                          

ಎದೆಯಲ್ಲಿ ಮುಖ್ಯವಾದ ಎರಡು ಅಂಗಗಗಳು ಇವೆ . ಎರಡು  ಶ್ವಾಸ ಕೋಶಗಳು ಮತ್ತು ಅವುಗಳ ನಡುವೆ ಹೃದಯ .ಶ್ವಾಸ ಕೋಶಗಳಲ್ಲಿ  ಆಮ್ಲಜನಕ ಹೀರಿ ಶುದ್ದವಾದ  ರಕ್ತ  ಶ್ವಾಸಕೋಶದ  ಅಭಿಧಮನಿ ಮೂಲಕ ಹೃದಯದ ಎಡ ಹೃತ್ಕರ್ಣ ,ಹೃತ್ಕುಕ್ಷಿ  ಸೇರಿ ಮಹಾ ಅಪಧಮನಿ ಮೂಲಕ ಶರೀರದ  ಎಲ್ಲಾ ಅಂಗಗಳಿಗೆ ಸರಬರಾಜು ಆಗುವುದು .

 ಅದೇ ರೀತಿ ಶರೀರದಿಂದ ಬಂದ ಕಡಿಮೆ ಆಮ್ಲಜನಕ  ಇರುವ  ಹೆಚ್ಚು ಕಾರ್ಬನ್ ಡಯಾ ಕ್ಸೈಡ್ ಇರುವ ರಕ್ತ  ಬಲ ಹೃತ್ಕರ್ಣ ,ಹೃತ್ಕುಕ್ಷಿ ,ಶ್ವಾಸ ಕೋಶದ ಅಪಧಮನಿ ಮೂಲಕ ಶ್ವಾಸಕೋಶಗಳಿಗೆ ಹೋಗುವುದು .

ಶ್ವಾಸ ಕೋಶ ಮತ್ತು ಹೃದಯಕ್ಕೆ  ಅನುಕ್ರಮ ವಾಗಿ ಪ್ಲೂರಾ ಮತ್ತು ಪೆರಿ ಕಾರ್ಡೀಯಮ್ ಎಂಬ ಎರಡು ಹೊದಿಕೆಯ ರಕ್ಷಣಾತ್ಮಕ ಪೊರೆಗಳು ಇರುತ್ತವೆ .ಇವುಗಳ ಒಳಗೆ 10 ಮಿಲಿ ಲೀಟರ್ ನಷ್ಟು ಲುಬ್ರಿ ಕೆಂಟ್ ದ್ರವ ಇರುತ್ತದೆ .

ಕೆಲವೊಮ್ಮೆ ಕಾಯಿಲೆಯಲ್ಲಿ  ಪ್ಲೂರಾ ದ  ಎರಡು ಹೊದಿಕೆಗಳ ನಡುವೆ ದ್ರವ ತುಂಬಿ ಅದು ಶ್ವಾಸ ಕೋಶವನ್ನು ಒತ್ತಿ ಸರಿಯಾಗಿ ವಿಕಸನ ಆಗಲು ಬಿಡದು .ಎದೆಯ ಗೂಡನ್ನು ಪಕ್ಕೆಲುಬುಗಳು ಕಾಯುವುದರಿಂದ ಹೊರಗಡೆ ವಿಸ್ತರಿಸಲು ಆಗದು ತಾನೇ . ಇದನ್ನು ಪ್ಲೂರಲ್  ಎಫ್ಯೂಶನ್ ಎನ್ನುತ್ತಾರೆ . ಅದೇ ರೀತಿ ಹೃದಯದ ಎರಡು ಹೊದಿಕೆಗಳ ನಡುವೆ ಆದರೆ ಪೆರಿ ಕಾರ್ಡಿಯಲ್  ಎಫ್ಯೂಶನ್ ಎನ್ನುವರು . ಇದು ದೊಡ್ಡ ಪ್ರಮಾಣದಲ್ಲಿ ಇದ್ದರೆ ಹೃದಯ ಸಂಕುಚನ  ವಿಕಸನದಲ್ಲಿ ,ವಿಕಸನಕ್ಕೆ ಅಡ್ಡಿ ಬಂದು ತೊಂದರೆ ಉಂಟು ಮಾಡುವುದು .

ಎರಡೂ ರೀತಿಯ ದ್ರವ ಸಂಗ್ರಹ ಬೇರೆ ಬೇರೆ ಕಾರಣಕ್ಕೆ  ದಮ್ಮು ಕಟ್ಟುವುದು ಉಂಟು ಮಾಡುವುದು .ಮತ್ತು ಅದನ್ನು ಉಂಟು ಮಾಡುವ ಮೂಲ ಕಾಯಿಲೆ ಯಾ ಲಕ್ಷಣ ಗಳಾದ ಕೆಮ್ಮು ಜ್ವರ ಇತ್ಯಾದಿ

ಪ್ಲೂರಲ್ ಎಫ್ಯೂಶನ್ ಗೆ ನಮ್ಮ ದೇಶದಲ್ಲಿ ಮುಖ್ಯ ಕಾರಣ ಕ್ಷಯ ರೋಗ .ಹೃದಯ ವೈಫಲ್ಯ ,ಕಾನ್ಸರ್ ,ಶ್ವಾಸ ಕೋಶದ ಸೋಂಕು, ಇತ್ಯಾದಿ ಇತರ ಕೆಲ ಸಾಮಾನ್ಯ ಕಾರಣಗಳು . ಡೆಂಗು ಜ್ವರದಲ್ಲಿ ಕೂಡಾ ಸಣ್ಣ  ಪ್ಲೂರಲ್ ದ್ರವ ಸಂಗ್ರಹ ಸಾಮಾನ್ಯ .ವೈದ್ಯರು ಎದೆಯ ಮೇಲೆ ಕುಟ್ಟುವುದು (ಮರ್ಧನ)ಮತ್ತು  ಶ್ರವಣ ದ ಮೂಲಕ ನೀರು ತುಂಬಿರುವುದು ಸಂಶಯಿಸಿ  ಎಕ್ಸ್ ರೇ ಮತ್ತು  ಸ್ಕ್ಯಾನ್ ಮೂಲಕ ದೃಢ ಪಡಿಸಿ ಕೊಳ್ಳುವರು . ನೀರು ಇರುವ ಭಾಗಕ್ಕೆ ಪಕ್ಕೆಲುಬುಗಳ ನಡುವಿಂದ ಸೂಜಿ ಹಾಯಿಸಿ ನೀರು ತೆಗೆದು ಪರೀಕ್ಷೆ ಮಾಡಿ ಕಾರಣ ಕಂಡು ಹಿಡಿದು ಚಿಕಿತ್ಸೆ ಮಾಡುವರು .

 ಹೃದಯದ ಸುತ್ತ ನೀರು ನಿಲ್ಲುವುದಕ್ಕೆ ಕ್ಷಯ , ಇತರ ಸೋಂಕು ರೋಗಗಳು ,ಥೈರೊಯ್ಡ್ ಹಾರ್ಮೋನ್ ಕೊರತೆ ಇತ್ಯಾದಿ ಕಾರಣಗಳು . ಹೃದಯದ ಸ್ಕ್ಯಾನ್ -ಏಕೋ ಕಾರ್ಡಿಯೋಗ್ರಫಿ ಮೂಲಕ ದೃಢ ಪಡಿಸಿ ,ದ್ರವ ಸಂಗ್ರಹಿಸಿ ಕಾರಣ ಕಂಡು ಹಿಡಿದು ಚಿಕಿತ್ಸೆ . 

ಅವಘಡ ,ಮತ್ತು ಇನ್ನಿತರ ಕಾರಣಗಳಿಂದ ಪೆಟ್ಟು ಆದಾಗ ಎದೆಯ ಒಳಗೆ ರಕ್ತ ಸ್ರಾವ ಆಗಿ ಪ್ಲೂರಲ್ ಅಥವಾ ಪೆರಿ ಕಾರ್ಡಿಯಲ್ ಗಳ  ಒಳಗೆ ರಕ್ತ ಸಂಗ್ರಹ ಆಗಿ   ದುಷ್ಪರಿಣಾಮ ಉಂಟು ಮಾಡಬಹುದು . 

ಈ ರೀತಿ ಸಂಗ್ರಹ ಆದ  ದ್ರವದ ಪ್ರಮಾಣ  ಉಸಿರುಕಟ್ಟುವಿಕೆ ಉಂಟು ಮಾಡುತ್ತಿದ್ದರೆ   ಸೂಜಿ ಮತ್ತು ಕೊಳಾಯಿ ಮೂಲಕ ಅದನ್ನು ಹೊರತೆಗೆಯುವರು . ಮತ್ತು ಮೂಲ ಕಾರಣಕ್ಕೆ ಚಿಕಿತ್ಸೆ ಮಾಡುವರು

ಶನಿವಾರ, ಜುಲೈ 16, 2022

ಸಾಫ್ಟ್ ಹ್ಯಾಂಡ್ ನ ಸಾಫ್ಟವೆರ್ ಹುಡುಗ ಹುಡುಗಿಯರಿಗೆ ಉಪ್ಪಿಟ್ಟು ಮಾಡುವ ವಿಧಾನ (ಇಬ್ಬರಿಗೆ)

 Image result for upma

ಸಾಫ್ಟ್ ಹ್ಯಾಂಡ್ ನ ಸಾಫ್ಟವೆರ್ ಹುಡುಗ ಹುಡುಗಿಯರಿಗೆ ಉಪ್ಪಿಟ್ಟು ಮಾಡುವ ವಿಧಾನ (ಇಬ್ಬರಿಗೆ)

 ವಿಧಾನ ೧ 

ಮೂರು ಹಸಿಮೆಣಸು ,ಎರಡು ಈರುಳ್ಳಿ ,ಸಣ್ಣ ತುಂಡು ಶುಂಠಿ ಸಣ್ಣಕೆ ಹಚ್ಚಿಕೊಳ್ಳಿರಿ . ಆಮೇಲೆ  ಚೆನ್ನಾಗಿ ಕೈ ತೊಳೆದು ಕೊಳ್ಳಿರಿ . ಒಂದು ಒಲೆಯ ಮೇಲೆ ಬಾಣಲೆಯಲ್ಲಿ  ಎರಡು ಕಪ್ ರವೆ ಹಾಕಿ ಚಿನ್ನದ ಬಣ್ಣ ಬರುವ ವರೆಗೆ ತಿರುವಿ ಅದನ್ನು ಒಂದು ಬಟ್ಟಲಲ್ಲಿ ಸುರುವಿರಿ . ಇನ್ನೊಂದು ಒಲೆಯಲ್ಲಿ ಎರಡು ಕಪ್ ನೀರು  ಕುಡಿಯಲು ಒಂದು ಪಾತ್ರೆಯಲ್ಲಿ ಇಡಿರಿ . ಬಾಣಲೆಗೆ  ದೊಡ್ಡ ಎರಡು ಚಮಚೆ ಎಣ್ಣೆ (ಉದಾ ತೆಂಗಿನ ಎಣ್ಣೆ ,ನೆಲಗಡಲೆ ಎಣ್ಣೆ )ಹಾಕಿ ,ಅದಕ್ಕೆ ಎರಡು ಸಣ್ಣ ಚಮಚ ಸಾಸಿವೆ ,ಉದ್ದಿನ ಬೇಳೆ ಸೇರಿಸಿ ತಿರುವಿರಿ ,ಸಾಸಿವೆ ಚಟ ಚಟ ಹೇಳುವಾಗ ಹಚ್ಚಿ ಇಟ್ಟ ಈರುಳ್ಳಿ,ಹಸಿಮೆಣಸು ,ಶುಂಠಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ . ಚೆನ್ನಾಗಿ ತಿರುವಿರಿ . ಬಟ್ಟಲಲ್ಲಿ ಇಟ್ಟ ರವೆ (ಸಜ್ಜಿಗೆ )ಬಾಣಲೆಗೆ ಹಾಕಿರಿ ,ಒಂದು ಚಮಚ ಪುಡಿ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ತಿರುವಿರಿ . ಅಷ್ಟರಲ್ಲಿ ಇನ್ನೊಂದು ಒಲೆಯ ಮೇಲಿನ ಪಾತ್ರೆಯಲ್ಲಿ ನೀರು ಕುದಿಯಲು ಆರಂಭವಾಗುವದು . ಆ ನೀರನ್ನು ಬಾಣಲೆಗೆ ಹಾಕಿ ತಿರುವಿರಿ .ಆಮೇಲೆ ಒಂದು ಮುಚ್ಚಳ ಮುಚ್ಚಿ ಸ್ವಲ್ಪ ಕಾಯಿರಿ . ನೀರು  ಆರಿದ ಒಡನೆ ಒಲೆಯಿಂದ ಕೆಳಗೆ ತೆಗೆದು ಇಟ್ಟು ,ತುರಿದ ತೆಂಗಿನ ಕಾಯಿ ,ಕೊತ್ತಂಬರಿ ಸೊಪ್ಪು  ಹಾಕಿ ರಿ .ಬಿಸಿ ಬಿಸಿ ಉಪ್ಪಿಟ್ಟು ರೆಡಿ . (ಬಿಸಿ ಪಾತ್ರೆಯನ್ನು ಬರಿ ಕೈಯಲ್ಲಿ ಮುಟ್ಟದಿರಿ .ಬಟ್ಟೆ ಅಥವಾ ಇಕ್ಕುಳ ಉಪಯೋಗಿಸಿ . 

ವಿಧಾನ ೨ 

ನೀವು ಭಯಂಕರ ಬ್ಯುಸಿ ಆಗಿದ್ದು ಸಮಯದ ಅಭಾವ ಇದ್ದರೆ ಎಂ ಟಿ  ಆರ್ ಅಥವಾ ೭೭೭ ಉಪ್ಪಿಟ್ಟು ಮಿಕ್ಸ್ ನ್ನು ಒಂದು ಕಪ್ ಗೆ ಎರಡರಂತೆ ನೀರು ಕುದಿಸಿ ಅದಕ್ಕೆ ಸುರುವಿರಿ .ಉಪ್ಪಿಟ್ಟು ರೆಡಿ ,ತಿನ್ನುವಾಗ ಪೇಪರ್ ಪ್ಲೇಟ್ ನಲ್ಲಿ ತಿಂದರೆ ತೊಳೆಯುವ ಕೆಲಸ ಇಲ್ಲ . 

ಇಷ್ಟೂ ಸಮಯ ಇಲ್ಲದಿದ್ದರೆ  ಸ್ವಿಗ್ಗಿ ಅಥವಾ ಝೋಮ್ಯಾಟೋ ಆಪ್ ಒತ್ತಿ ನಿಮ್ಮ ಇಷ್ಟದ ಹೋಟೆಲ್ ಗೆ ಆರ್ಡರ್ ಮಾಡಿರಿ