ಬೆಂಬಲಿಗರು

ಭಾನುವಾರ, ಸೆಪ್ಟೆಂಬರ್ 12, 2021

ಶ್ರೀ ಪುರಂಧರ ಭಟ್

                                              ಶ್ರೀ ಪುರಂಧರ ಭಟ್ 

                                      

                                  ನಾನು ಹತ್ತು ವರ್ಷಗಳ ಹಿಂದೆ ಪುತ್ತೂರಿಗೆ ಮರಳಿ ಮಣ್ಣಿಗೆ ಎಂಬಂತೆ ಪುನಃ ಪಾದಾರ್ಪಣೆ  ಮಾಡಿದಾಗ ಇಲ್ಲಿಯ ಸಾಂಸ್ಕೃತಿಕ ರಂಗದ ಬೆನ್ನೆಲುಬು ಮತ್ತು ವೇಗವರ್ಧಕ ಆಗಿದ್ದ ಶ್ರೀ ಬೋಳಂತಕೋಡಿ ಈಶ್ವರ ಭಟ್ ತೀರಿ ಕೊಂಡಿದ್ದರು . ನನಗೆ ಅದೊಂದು ದೊಡ್ಡ ನಿರಾಶೆ . ಆದರೆ ಅದನ್ನು ನಿವಾರಿಸಿದವರು ಶ್ರೀ ಪುರಂಧರ ಭಟ್ ಅವರು . ಬೋಳಂತ ಕೋಡಿ ,ಪುರಂಧರ ಭಟ್ ಮತ್ತು ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಮೂವರು ಹಿರಿಯ ವಕೀಲರು ತಮ್ಮ ವೃತ್ತಿಯ ಹೊರತಾಗಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಡಿದ್ದವರು . 

             ಪುರಂಧರ ಭಟ್ ವರ್ಷಕ್ಕೆ ಒಮ್ಮೆ ತಮ್ಮ ಅನುರಾಗ ವಠಾರದಲ್ಲಿ ಸಾಹಿತ್ಯ ,ಸಂಗೀತ ಮತ್ತು ಸಾಂಸ್ಕೃತಿಕ ಸಪ್ತಾಹ ನಡೆಸುತ್ತಿದ್ದು ,ನಾಡಿದ ವಿವಿದೆಡೆಯಿಂದ ಉದ್ದಾಮ ಸಾಹಿತಿಗಳು ,ಸ್ಥಳೀಯ ಕಲಾವಿದರು ಭಾಗವಹಿಸುತ್ತಿದ್ದರು .  ಊಟ ತಿಂಡಿ ಸೇರಿ ಹೆಚ್ಚಿನ ವೆಚ್ಚವನ್ನು ತಾವೇ ಭರಿಸುತ್ತಿದ್ದರೂ ಎದುರು ಕಾಣಿಸಿ ಕೊಳ್ಳದೆ ಮೂಲೆಯಲ್ಲಿ ಕುಳಿತು ಸಂತೋಷ ಪಡುವರು . 

ಅನುರಾಗ ವಠಾರದ ಅಟ್ಟ ಪುತ್ತೂರಿನಲ್ಲಿ ಜನಪ್ರಿಯ ತಾಣ . ಶ್ರೀ ಲಕ್ಷ್ಮೀಶ ತೋಲ್ಪಾಡಿ ಯವರ ಮಂಕುತಿಮ್ಮನ ಕಗ್ಗ ,ಮಹಾಭಾತದ ಶಾಂತಿ ಪರ್ವ ಇತ್ಯಾದಿಗಳ ಉಪನ್ಯಾಸಕ್ಕೆ ನಾನೂ ಹಾಜರಾಗಿದ್ದೇನೆ.ಇನ್ನು ಪುತ್ತೂರಿಗೆ ಪರವೂರಿನಿಂದ ಲೇಖಕರು ಬಂದಾಗ ಇಲ್ಲಿ ಕರೆಸಿ ಭಾಷಣ ಮಾಡಿಸುವರು .ವಸುದೇಂದ್ರ ,ನಾಗ ಐತಾಳರ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ .  

ಪುತ್ತೂರಿನ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘನೆಗಳಿಗೆ ಅನುರಾಗ ವಠಾರದ ಅಟ್ಟವೇ ವೇದಿಕೆ .ಪುತ್ತೂರು ಕರ್ನಾಟಕ ಸಂಘ ,ಕುಶಲ ಹಾಸ್ಯ ಸಂಘ ,ಹವ್ಯಾಸಿ ಪತ್ರ ಕರ್ತರ ಸಂಘ ,ಗ್ರಾಹಕರ ವೇದಿಕೆ ,ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ,ರಿಕ್ಷಾ ಚಾಲಕ ಮಾಲಕರ ಸಂಘ ಇತ್ಯಾದಿಗಳಿಗೆ ಆಶ್ರಯ . 

 ತರುಣದಲ್ಲಿ ನಾಟ್ಯ ,ನಟನೆ ಎರಡರಲ್ಲಿಯೂ ಕೈಯಾಡಿಸಿದ ಇವರು ಸ್ವತಃ ಕವಿ ಮತ್ತು ಲೇಖಕ . ತುರ್ತು ಪರಿಸ್ಥಿತಿ ಸಮಯ ಜೈಲು ವಾಸ . ಈಗಲೂ ಗಾಂಧಿ ಕಟ್ಟೆ ಉಳಿಸಿ ಇತ್ಯಾದಿ ಚಳುವಳಿಗಳಲ್ಲಿ ಸಕ್ರಿಯ . ಯಾವುದನ್ನೂ ಮತ್ತು ಯಾರನ್ನೂ ಅಂಧ ಭಕ್ತಿಯಲ್ಲಿ ಹಿಂಬಾಲಿಸುವರಲ್ಲ . 

ಬಹಳ ಸರಳ ಜೀವಿಯಾದ ಇವರು ಆಸ್ಪತ್ರೆಗೆ ಬಂದಾಗ ವಿಶೇಷ ಗಮನ ನಿರೀಕ್ಷೆ ಮಾಡದೇ ಸಾಮಾನ್ಯರಂತೆ ಬರುವರು .ಅವರ ಸೇವೆ ಕಿಂಚಿತ್ ಮಾಡ ಸಿಕ್ಕಿದ್ದು ನನ್ನ ಭಾಗ್ಯ . ಅವರ ಮನೆಗೆ ಆಗಾಗ ಭೇಟಿ ನೀಡಿ ಕ್ಷೇಮ ವಿಚಾರಿಸುವೆನು . ನಾನು ಯಾವುದಾದರೂ ಪುಸ್ತಕ ಕೇಳಿದರೆ ಉತ್ಸಾಹದಿಂದ ಹುಡುಕಿ ಕೊಡುವರು . ಕೆಲವೊಮ್ಮೆ ಅದನ್ನು ಚೆನ್ನಾಗಿ ಒರಸಿ ಕಟ್ಟು ಮಾಡಿ ಯಾರ ಬಳಿಯಾದರೂ ಕಳುಹಿಸುವರು . 

 ಅವರು ಅರೋಗ್ಯ ಮತ್ತು ಶಾಂತಿಯಿಂದ ಇರಲಿ ಎಂಬುದೇ ಎಲ್ಲರ ಹಾರೈಕೆ . 


 

ಇಬ್ಬರು ಮಲಯಾಳಿ ಮಿತ್ರರು

                                  ಇಬ್ಬರು ಮಲಯಾಳಿ ಮಿತ್ರರು 

ಮಲಯಾಳ ತುಳುನಾಡಿನಲ್ಲಿ ಹಾಸು ಹೊಕ್ಕಾದ ಭಾಷೆ . ಕಾಸರಗೋಡಿನ ಹವ್ಯಕ ,ತುಳು ಮತ್ತು ಕನ್ನಡದಲ್ಲಿ ಹಲವು ಮಲಯಾಳ ಶಬ್ದಗಳು ಇವೆ .ಉದಾ ಮೋಳೆ,               ಕೊರೆ ಙ, ಇತ್ಯಾದಿ.ಅಲ್ಲದೆ ಇಲ್ಲಿಯ ಗಾಣಿಗರು ,ಬೆಳ್ಚಪ್ಪಾಡ ,ಭಂಡಾರಿಗಳು ಮತ್ತು ಬ್ಯಾರಿಗಳ ಮನೆಮಾತು ಮಲೆಯಾಳ.ತುಳುನಾಡ ಕೃಷಿ ಪದ್ದತಿ ,ಆಚರಣೆಗಳು(ಉದಾ ವಿಶು), ಮತ್ತು  ಸಂಸ್ಕೃತಿ( ಉದಾ ಭೂತಾರಾಧನೆ- ತೆಯ್ಯಂ,ಯಕ್ಷಗಾನ-ಕಥಕ್ಕಳಿ),ಉಡುಗೆ ತೊಡುಗೆ, ಆಹಾರ ಇತ್ಯಾದಿ ಮಲಯಾಳಕ್ಕೆ ಹತ್ತಿರವಾದವು,ನಮ್ಮ ದೇವಾಲಯಗಳ ವಾಸ್ತು ಕೂಡಾ.ಮಲಯಾಳಿ ಸಿನೆಮಾದಲ್ಲಿ ಭಾಷೆ ಒಂದು ಬಿಟ್ಟರೆ ಮಿಕ್ಕಲ್ಲಾ ನಮಗೆ ಹತ್ತಿರ. 

ಮಲಯಾಳಿಗಳು  ಒಳ್ಳೆಯ ಸಾಹಿತ್ಯಾಭಿಮಾನಿ ಗಳು . ಶ್ರೀಕೃಷ್ಣ  ಅಲನಹಳ್ಳಿ ಯವರ ಭುಜಂಗಯ್ಯನ  ದಶಾವತಾರ ಗಳು  ಕಾದಂಬರಿಯನ್ನು  ಕನ್ನಡಿಗರಿಗಿಂತ  ಹೆಚ್ಚು ಮಲಯಾಳಿಗಳು (ಅನುವಾದದಲ್ಲಿ )ಓದಿರ ಬಹುದು . 

ಎಸ್ ಕೆ ಪೊಟ್ಟೆಕ್ಕಾಟ್ ,ಮಹಮ್ಮದ್ ಬಶೀರ್ ,ಎಂ ಟಿ ವಾಸುದೇವನ್ ನಾಯರ್ ,ತಗಳಿ ಶಿವಶಂಕರ ಪಿಳ್ಳೈ ,ಲಲಿತಾಂಬಿಕ ಅಂತರ್ಜನಮ್ ,ಪುನತಿಲ್ ಕುನ್ಹಬ್ದುಲ್ಲಾ ,ಮುಕುಂದನ್ ಮುಂತಾದ ಲೇಖಕರ ಕೃತಿಗಳ ಅನುವಾದ ರೂಪವನ್ನು ಮೆಚ್ಚಿದ್ದೇನೆ . ಅವು ನಮಗೆ ಆಪ್ಯಾಯಮಾನವಾಗಲು ಪಾತ್ರಗಳು ಹಿನ್ನಲೆ ಮತ್ತು ನಮಗೆ ಸಮೀಪ ವಾಗಿದ್ದು ಕಾರಂತರ ಕಾದಂಬರಿಗಳನ್ನು ಹೋಲುತ್ತವೆ .ಗಡಿ ಜಿಲ್ಲೆಯವರಾದ ನಾವು (ಮುಖ್ಯವಾಗಿ ವಿದ್ಯಾರ್ಥಿಗಳು )ಮಲಯಾಳ ಸಾಹಿತ್ಯ ,ಸಿನೆಮಾ ಇತ್ಯಾದಿಗಳತ್ತ ಮಡಿವಂತಿಗೆ ಇಲ್ಲದೆ ನೋಡುವಂತಾಗ ಬೇಕು .

ನನಗೆ ಎರಡು ಮರೆಯಲಾಗದ  ಮಲೆಯಾಳಿ ಮಿತ್ರರು ಇದ್ದಾರೆ.

1 .ಶ್ರೀ  ಜೋಸ್ ಚೆರಿಯನ್


 

                                        

                       
ಇವರು ಎಂ ಬಿ ಬಿ ಎಸ್ ನಲ್ಲಿ ನನ್ನ ಸಹಪಾಠಿ ,ಅಷ್ಟೇ ಅಲ್ಲ ಎರಡು ವರ್ಷ ಹಾಸ್ಟಲ್ ನಲ್ಲಿ  ರೂಂ ಮೇಟ್ . ಇವರ ತಂದೆ ಅಂಡಮಾನ್ ನಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು  ಪ್ರಧಾನ ರಕ್ಷಕರಾಗಿ ನಿವೃತ್ತಿ ಹೊಂದಿದರು . ಜೋಸ್ ತಮ್ಮ ಮೃದು ಸ್ವಭಾವ ಮತ್ತು  ಸ್ನೇಹಶೀಲ  ಗುಣಕ್ಕೆ ಹೆಸರಾಗಿದ್ದವರು . ನನ್ನ  ಮಲಯಾಳ ಗುರುಗಳು .ಇವರಲ್ಲಿ  ಮಾತನಾಡಿ ನನ್ನ ಮಲಯಾಳ ಜ್ನಾನ ವೃದ್ದಿಸಿತು . ರಜೆಯಿಂದ ಬರುವಾಗ  ಸಿಹಿ ಅಕ್ಕಿ ಪುಡಿ ತರುತ್ತಿದ್ದರು .ಅಂಡಮಾನ್ ನಿಂದ ನಮ್ಮ ಮನೆಗೆ ಒಳ್ಳೆಯ ಶಂಖ ತಂದು ಕೊಟ್ಟಿದ್ದರು . ಇವರ ಹೆತ್ತವರು  ಬಂದಿದ್ದಾಗ ಜತೆಗೆ ಬೆಂಗಳೂರು ಪ್ರವಾಸದಲ್ಲಿ  ನಾನೂ ಜತೆಯಾಗಿದ್ದೆ . ಹುಬ್ಬಳ್ಳಿಗೆ  ಸಮೀಪ ಉತ್ತರ  ಕನ್ನಡದ  ಮುಂಡಗೊಡ ದಲ್ಲಿ ಟಿಬೆಟ್ ಪುನರ್ವಾಸ ಇದೆ .ಇಲ್ಲಿ  ನಮ್ಮ ನೆಲ್ಯಾಡಿಯಂತೆ ತಲೆಮಾರುಗಳ  ಹಿಂದೆ ಬಂದ  ಮಲಯಾಳಿ ಕುಟುಂಬಗಳು ಇವೆ . ನಾನು ಮತ್ತು  ಜೋಸ್  ಜತೆಯಾಗಿ ಅಲ್ಲಿ ಇಂತಹ ಒಂದು ಕುಟುಂಬದ ಅತಿಥಿಯಾಗಿ ಹೋಗಿದ್ದೆವು .

ಜೋಸ್ ಈಗ ಕೇರಳ ದ  ತಿರುವೆಲ್ಲಾ ಸಮೀಪ ಈ ಎನ್ ಟಿ ತಜ್ನರಾಗಿ ಕೆಲಸ ಮಾಡುತ್ತಿದ್ದು ಅವರ ಪತ್ನಿ ಡಾ ಸಿಲ್ವಿ ಪ್ರಸೂತಿ ತಜ್ನೆ . ನನ್ನ ಮತ್ತು ಅವರ ಕುಟುಂಬ ಜತೆಯಾಗಿ  ಮಲಶಿಯಾ ಪ್ರವಾಸ ಕೈಗೊಂಡಿದ್ದೆವು  .ಎರಡು ವರ್ಷಗಳ  ಹಿಂದೆ ನಾನು ಅವರ ಮನೆಗೆ  ಭೇಟಿ ನೀಡಿ  ಆತಿಥ್ಯ  ಸ್ವೀಕರಿಸಿ ,ಹಳೆಯ ನೆನಪುಗಳನ್ನು ಮೆಲುಕು ಹಾಕಿದೆವು .ಪುತ್ತೂರಿಗೂ ಡಾ ಜೋಸ್ ಭೇಟಿ ನೀಡಿದ್ದಾರೆ .

2  ಶ್ರೀ ವಿಜಯನ್ 

ಇವರು  ರೈಲ್ವೇ ಯಲ್ಲಿ ಫರ್ಮಾಸಿಸ್ಟ್ ಆಗಿ ಮಂಗಳೂರಿನಲ್ಲಿ ಇದ್ದಾರೆ . ನಾನು ಹಿಂದೆ ಪುತ್ತೂರು ರೈಲ್ವೇ ಆರೋಗ್ಯ ಕೇಂದ್ರದಲ್ಲಿ ಇದ್ದಾಗ ಮೊದಲು  ನೆಟ್ಟಣ (ಸುಬ್ರಹ್ಮಣ್ಯ ರೋಡ್ )ಮೆಡಿಕಲ್ ಔಟ್ ಪೋಸ್ಟ್ ನಲ್ಲಿ ,ಆಮೇಲೆ ಪುತ್ತೂರು  ಆರೋಗ್ಯ ಕೇಂದ್ರ ದಲ್ಲಿ ನನ್ನ ಜತೆ ಇದ್ದು ,ನಾನು ಮಂಗಳೂರಿಗೆ ವರ್ಗ ಆದಾಗ ಅಲ್ಲಿಗೆ ಕೂಡಾ ಬಂದರು .ಪುತ್ತೂರಿನಿಂದ ನಾನು ವಾರಕ್ಕೆ  ಎರಡು ಬಾರಿ ನೆಟ್ಟಣಕ್ಕೆ  ಕರ್ತವ್ಯ ದಲ್ಲಿ  ಹೋಗುತ್ತಿದ್ದು ಅವರ ವಸತಿ ಗೃಹದಲ್ಲಿಯೇ ಊಟ.ಸಂಜೆ  ನಾವು ಬಿಳಿನೆಲೆ ಅಥವಾ ಸಿರಿವಾಗಿಲು ಕಡೆ ನಡಿಗೆಯಲ್ಲಿ ಹೋಗುತ್ತಿದ್ದೆವು ,ವಿಜಯನ್ ಮೂಲತಃ  ಕಾಸರಗೋಡ್ ಸಮೀಪ  ಪನತ್ತಡಿ ಯವರು . ಒಳ್ಳೆಯ ಓದುಗರು ,ಮಲಯಾಳ ಸಾಹಿತ್ಯ ಓದಿ ನನ್ನೊಡನೆ ಚರ್ಚಿಸುವರು .ನೆಟ್ಟಣದ ಹುಡುಗಿಯನ್ನು ಪ್ರೀತಿಸಿ ವಿವಾಹವಾದರು.ನಾನು ಹಿಂದೆ ರೈಲ್ವೇ ಉದ್ಯೋಗಿಯಾಗಿ  ಚೆನ್ನೈ ನಲ್ಲಿ ಇದ್ದಾಗ ದಾರಿಯಲ್ಲಿ ಇವರ ಮನೆಯಲ್ಲಿ ತಂಗಿ ಊಟ ಮಾಡಿಯೇ ಮುಂದುವರಿಯುತ್ತಿದ್ದೆ .ಚೆನ್ನೈ ನಲ್ಲಿ ನಾವು ಇದ್ದಾಗ ಕುಟುಂಬ ಸಹಿತ ಬಂದು ನಮ್ಮೊಡನೆ ಇದ್ದರು.

ಮುಂದೆ ನಾನು ರೈಲ್ವೇ ಬಿಟ್ಟು ಮಂಗಳೂರಿಗೆ ಬಂದಾಗ ಕೂಡಾ ಅವರ ಸಂಪರ್ಕ ಮುಂದುವರಿಯಿತು . ನನ್ನ ಮಲಯಾಳ ಜ್ನಾನ ಉಳಿಸಿ ಬೆಳೆಸಲು ಇವರೂ ಕಾರಣ .

                         




 

ಶುಕ್ರವಾರ, ಸೆಪ್ಟೆಂಬರ್ 10, 2021

ಶಿರಂಕಲ್ಲು ಪಶುಪತಿ ಶಾಸ್ತ್ರಿ

                                      ಶಿರಂಕಲ್ಲು ಪಶುಪತಿ ಶಾಸ್ತ್ರಿ 

                                                 





ಶ್ರೀ ಪಶುಪತಿ ಶಾಸ್ತ್ರಿ ನನ್ನ ಸೋದರ ಅತ್ತೆಯ ಮಗ . ಇವರುಮೂಲತಃ ನೀರ್ಕಜೆಯವರು. ಇವರ ತಂದೆಯವರನ್ನು ನಾವು ನೀರ್ಕಜೆ ಮಾವ ಎಂದು ಕರೆಯುತ್ತಿದ್ದೆವು .ನೀರ್ಕಜೆ ತಿರುಮಲೇಶ್ವರ ಭಟ್ (ಎನ್ ಟಿ ಭಟ್ ) ರ ಚಿಕ್ಕಪ್ಪನ  ಮಗ .ಬಾಲ್ಯದಲ್ಲಿಯೇ  ತಾಯಿಯನ್ನು  ಕಳೆದು ಕೊಂಡು ಚಿಕ್ಕಮ್ಮ ಅಕ್ಕಂದಿರ  ಲಾಲನೆಯಲ್ಲಿ ಬೆಳೆದವರು . ತಂದೆಯವರು ಕೂಡಾ ಬೇಗನೆ ತೀರಿ ಕೊಂಡರು.

 ಅಣ್ಣ ವಿಶ್ವನಾಥ ಶಾಸ್ತ್ರಿ  ಎಳವೆಯಲ್ಲಿ  ಯಕ್ಷಗಾನಕ್ಕೆ  ಸೇರುವ  ಹಂಬಲದಿಂದ  ಮನೆ ಬಿಟ್ಟು ಮೇಳ ಸೇರಿದವರು  ಮೈಮೇಲೆ ಗಂಜಿ  ಬಿದ್ದು ಅಸ್ವಸ್ಥರಾಗಿ ಮನೆ  ಸೇರಿದರು . ಆಗಿನ  ಕಾಲದಲ್ಲಿ (ಯಕ್ಷಗಾನ ) ಆಟಕ್ಕೆ ಸೇರುವುದು ಎಂದರೆ ಗೌರವದ ಕೆಲಸ ಆಗಿರಲಿಲ್ಲ .ಆದರೆ ಇವರಿಗೆ ಕಲಾ ವಾಸನೆ ಇತ್ತು .ನಮ್ಮಲ್ಲಿಗೆ ಬಂದಾಗ ಪ್ರಸಂಗಗಳ ಬಗ್ಗೆ ನನ್ನಲ್ಲಿ  ಚರ್ಚಿಸುತ್ತಿದ್ದರು . ಪುಸ್ತಕ ಓದುವ ಹವ್ಯಾಸ ಕೂಡಾ ಇದ್ದಿತು .ಮುಂದೆ  ಮಾವ ನವರು ತೀರಿ ಹೋದ ಮೇಲೆ ಮಕ್ಕಳೆಲ್ಲಾ ತುಂಬಾ ಕಷ್ಟ ಪಟ್ಟರು.ನಂಬಿದವರು ಕೈಕೊಟ್ಟು  ಇದ್ದ ಆಸ್ತಿಯೂ ಹೋಯಿತು .

                ಪಶುಪತಿ ಶಾಸ್ತ್ರಿ ನನಗಿಂತ  ಒಂದು ವರ್ಷ ಜೂನಿಯರ್ .ಕಲಿಯುವಿಕೆಯಲ್ಲಿ  ಜಾಣ .ಹೈ ಸ್ಕೂಲ್  ಕನ್ಯಾನ ದಲ್ಲಿ .ನನ್ನ ಹಳೆಯ ಪಠ್ಯ ಪುಸ್ತಕ ಅವನಿಗೆ . ಮುಂದೆ ಕಲಿಯುವಿಕೆ ಹೇಗೇ?ಅಜ್ಜನ ಮನೆಯಾದ ನಮ್ಮಲ್ಲಿ ಕೂಡಾ ಪಾಲು ಆಗಿ ತುಂಬಾ ಕಷ್ಟದಲ್ಲಿ  ಇದ್ದೆವು . ಪಶುಪತಿಯ ಅಕ್ಕ ಪುಂಡಿಕಾಯಿ ಲಕ್ಷ್ಮಿ ಅಮ್ಮ (ಪ್ರೀತಿಯಿಂದ ಕರೆಯುವುದು ಅಕ್ಕಯ್ಯ ಅತ್ತಿಗೆ )ತಮ್ಮನ ಪದವಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡರೆ .ಬಿ ಎಡ್ ಮಾಡಲು  ಶ್ರೀ ಎನ್ ಟಿ ಭಟ್ ಸಹಾಯ ಮಾಡಿದರು .ಪುಂಡಿಕಾಯಿ ಲಕ್ಷ್ಮಿಅಕ್ಕನ ಮಗ ವೆಂಕಟರಮಣ ಭಟ್ ಹನುಮ ಲೈವ್ ಕಾಸೆಟ್ ಎಂಬ ಹೆಸರಿನಲ್ಲಿ ಹಲವು ಯಕ್ಷಗಾನ ಪ್ರಸಂಗಗಳ ಸಿ ಡಿ , ಡಿ ವಿ ಡಿ  ಹೊರ ತಂದಿದ್ದಾರೆ.

ಪಶುಪತಿ ಮುಂದೆ ಕಲ್ಲ ಮುಂಡ್ ಕೂರ್  ಸರ್ವೋದಯ ಹೈ ಸ್ಕೂಲ್ ನಲ್ಲಿ ಅಧ್ಯಾಪಕನಾಗಿ ಸೇರಿ ಮುಖ್ಯೋಪಾಧ್ಯಾಯನಾಗಿ ನಿವೃತ್ತಿ ಹೊಂದಿದರು .ಕಟೀಲಿಗೆ ಸಮೀಪ ಮನೆ ಮಾಡಿಕೊಂಡು ಇದ್ದಾರೆ. ಇವರಿಗೂ ಪರಂಪರಾಗತ ಯಕ್ಷಗಾನ ಆಸಕ್ತಿ .ಒಳ್ಳೆಯ ಅರ್ಥಧಾರಿಗಳು .ವೇಷವನ್ನೂ ಹಾಕಿದ್ದಾರೆ . ಕಟೀಲಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ  ಸಕ್ರಿಯ .ಜತೆಗೆ ಮಲ್ಲಿಗೆ ಕೃಷಿ ಕೂಡಾ ಇದೆ .

ಇವರ ಮಗಳು ಸಾವಿತ್ರಿ ಶಾಸ್ತ್ರಿ ತಾಳಮದ್ದಳೆ ಅರ್ಥಗಾರ್ತಿ . ಅವಳ ಪತಿ ಅರ್ಜುನ್ ಭಾರದ್ವಾಜ್ ಇತ್ತೀಚೆಗಷ್ಟೇ ಎ ಆರ್ ಕೃಷ್ಣ ಶಾಸ್ತ್ರಿ ಅವರ ವಚನ ಭಾರತವನ್ನು ಇಂಗ್ಲಿಷ್ ಗೆ ಅನುವಾದಿಸಿ ಪ್ರಕಟಿಸಿದ್ದಾರೆ . 

ಬದುಕಿನಲ್ಲಿ ಬಂದ ಬವಣೆಗಳನ್ನು ಮೆಟ್ಟಿ ನಿಂತು ಒಳ್ಳೆಯ ಜೀವನ ಕಟ್ಟಿ ಕೊಂಡ ಇವರ ಬಗ್ಗೆ ನಮಗೆ ಹೆಮ್ಮೆ .

ಇವರ ಅಕ್ಕಂದಿರು  ಮದುವೆಯಾಗಿ ಊರಿನಲ್ಲಿ ನೆಲೆಸಿದ್ದರೆ ತಂಗಿ ಭಾರ್ಗವಿ ಮೊದಲು ಸಕಲೆಶಪುರ ಹಾರ್ಲೆಯಲ್ಲಿ ಇದ್ದು ಈಗ ಕೊಡಗಿನಲ್ಲಿ ನೆಲೆಸಿದ್ದಾರೆ.




ಗುರುವಾರ, ಸೆಪ್ಟೆಂಬರ್ 9, 2021

ಪಾರ್ಕಿನ್ಶನ್ ಕಾಯಿಲೆ

 ಪಾರ್ಕಿನ್ಶನ್  ಕಾಯಿಲೆ

ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಬರುವ ನರದ ಕಾಯಿಲೆ . ಮೆದುಳಿನ ಕೆಲವು ಕೋಶಗಳಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಕೊರತೆ ಏರ್ಪಟ್ಟು ಈ ರೋಗ ಪ್ರಕಟವಾಗುವುದು .

೧೮೧೭ ರಲ್ಲಿ ಜೇಮ್ಸ್ ಪಾರ್ಕಿನ್ಸನ್ ಎಂಬ ವೈದ್ಯ ವಿಜ್ಞಾನಿ ಈ ರೋಗದ ಬಗ್ಗೆ ನಿಖರವಾಗಿ ಒಂದು ಪ್ರಬಂಧದಲ್ಲಿ  ಪ್ರಕಟ ಪಡಿಸಿದುದರಿಂದ ಈ ಹೆಸರು ಬಂತು 

 

ಇದರ ಮೂರು ಮುಖ್ಯ ಲಕ್ಷಣಗಳು . 

೧. ನಡುಕ .ಇದು ಆರಂಭದಲ್ಲಿ ಒಂದು ಕೈಯ್ಯಲ್ಲಿ ತೊಡಗಿ ಎಲ್ಲಾ ಅವಯವಗಳಿಗೆ ಹರಡುವುದು .ಕೈ ಸುಮ್ಮನೇ ಇರುವಾಗ ನಡುಕ ಹೆಚ್ಚು ,ಏನಕ್ಕಾದರೂ ಉಪಯೋಗಿಸುವಾಗ ಕಡಿಮೆ ಇರುತ್ತದೆ . 

೨ . ಚಲನೆಯ ನಿಧಾನತೆ . ಎಲ್ಲಾ ಚಲನೆಗಳು ನಿಧಾನವಾಗುವವು .ಕೈ ಕಾಲಿನ ಶಕ್ತಿ ನಿಜಾರ್ಥದಲ್ಲಿ ಕಡಿಮೆ ಆಗುವುದಿಲ್ಲ . 

೩ ಮಾಂಸ ಖಂಡಗಳ ಬಿಗಿ  . ನೀಡಿದ ಕೈಯನ್ನು ಮಡಿಚುವಾಗ ಜರ್ಕಿ  ಪ್ರತಿರೋಧ ಇರುವುದು . 

ಮುಖದ ಮೂಲಕ ಭಾವನೆಗಳನ್ನು ಪ್ರಕಟ ಪಡಿಸುವ ಮಾಂಸ ಖಂಡಗಳು ಈ ರೋಗಕ್ಕೆ ಒಳಗಾದಾದ  ಅಡಗಿಸಿದ ಮುಖಚಹರೆ ಎನ್ನುವರು . ಕೈಬರಹದ ಅಕ್ಷರಗಳ ಗಾತ್ರ ಸಣ್ಣದಾಗುತ್ತಾ ಹೋಗುವುದು . ನಡೆಯುವಾಗ ಕೈಗಳು ಉಳಿದವರಂತೆ ಬೀಸವು . ನಡೆಯ ಹೆಜ್ಜೆಗಳು ಕಿರಿದಾಗುವವು . ಸಮತೋಲ ತಪ್ಪುವದು . ಮಾತು ತೊದಲುವುದು ,ಅಸ್ಪಷ್ಟ ಆಗುವದು . 

ಇದರೊಡನೆ ವಾಸನಾ ಶಕ್ತಿ ಕುಂಟುವುದು ,ಮರೆವು ,ಮಲಬದ್ಧತೆ ,ಖಿನ್ನತೆ ಇತ್ಯಾದಿ ಕೂಡಾ ಸೇರಿ ಕೊಳ್ಳುವವು .. 

            

Parkinson's Disease: Causes, Symptoms & Treatment

https://youtu.be/ODX2-C2uEAs


ಬುಧವಾರ, ಸೆಪ್ಟೆಂಬರ್ 8, 2021

ವಧು ಪರೀಕ್ಷೆ

                             ವಧು ಪರೀಕ್ಷೆ

ನಾವು  ಎದುರಿಸುವ ಅತ್ಯಂತ ಕಠಿಣ ಪರೀಕ್ಷೆ ವಧು ಅಥವಾ ವರ ಪರೀಕ್ಷೆ .ಹಿಂದೆ  ವಧುವಿನ ಜಾತಕ ನೋಡಿ ಸರಿಯೆನಿಸಿದರೆ (ಇದನ್ನು ಹುಡುಗಿ ಕಡೆಯವರಿಗೆ ಹೇಳಲು ಇಲ್ಲ )ಒಂದು ದಿನ ಹುಡುಗಿ ನೋಡಲು ಬರುತ್ತೇವೆ ಎಂದು ತಿಳಿಸಿ ,ಒಂದು ದೊಡ್ಡ ಇನ್ಸ್ಪೆಕ್ಷನ್ ಟೀಮ್ ಬರುವುದು .ಹುಡುಗನ ತಂದೆ  ಸೋದರ ಮಾವ ,ಅಕ್ಕ ತಂಗಿ (ಇವರಿಗೆ ಒಂದು ಕೋಡು  ಜಾಸ್ತಿ .ಹುಡುಗನ ಪೈಕಿ ಎಂದು ಸೇಲೆ )ಮತ್ತು ಇತ್ತಂಡಕ್ಕೂ ಪರಿಚಯದ ಒಬ್ಬರು . ಕಾರಿನಲ್ಲಿ ಬರುವುದಿದ್ದರೆ ದೂರದಿಂದಲೇ ಹಾರ್ನ್ ಮಾಡುವರು . ಬಂದ್ರು ಬಂದ್ರು ಎಲ್ಲರೂ ಅಲರ್ಟ್ ಆಗುವರು . ಹುಡುಗಿ ಇನ್ನೊಮ್ಮೆ ಕನ್ನಡಿ ನೋಡಿ  ಪೌಡರ್ ಮೆತ್ತಿ ಕೊಳ್ಳುವಳು . ತಂಡ  ಅಂಗಳಕ್ಕೆ ಆಗಮಿಸಿದೊಡನೆ ಕೈಕಾಲಿಗೆ ನೀರು ಬೈರಾಸು .ಹುಡುಗ ಕೊಂಚವೂ ನಗದೆ  ಗಂಭೀರವಾಗಿ ಇರುವನು (ಮತ್ತು ಇರ ಬೇಕು ). ಮನೆಯ ಅಜ್ಜಿ ಮತ್ತು ಇತರ ರು  ಗಿಳಿವಾಗಿಲ ದಳಿಯೊಳಗಿಯಿಂದ  ವರ  ಮಹಾಶಯನ  ಸೌಂದರ್ಯ ಕಣ್ತುಂಬಿ ಕೊಂಡು ಕೃತಾರ್ಥರಾಗುವರು . 

ಬಂದವರೇ ಉಭಯ ಕುಶಲೋಪರಿ .ಮಳೆ ,ಬೆಳೆ ಮತ್ತು ಸೆಖೆ ಇತ್ಯಾದಿ ಬಗ್ಗೆ . ಇನ್ಸ್ಪೆಕ್ಷನ್ ಟೀಮ್ ಮೂಲೆ ಮೂಲೆಗೆ ಕಣ್ಣಾಡಿಸುವುದು . ನಡುವೆ ಹುಡುಗಿ  ಸೀರೆ ಉಟ್ಟುಕೊಂಡು  ಕೊಡಪಾನ ಸಹಿತ ಮನೆ ಮುಂದಿನ ಬಾವಿಗೆ ಹೋಗಿ ನೀರು ಸೇದಿ ತರಬೇಕು . ಅವಳ ಕೈಕಾಲು ಸರಿ ಇದೆಯೇ ,ಊನ  ಏನಾದರೂ ಉಂಟೋ ಎಂದು ತಿಳಿಯುವ ವಿಧಾನ .ಈಗಿನ ಬ್ಯೂಟಿ ಕಂಟೆಸ್ಟ್ ಗಳ  ಕ್ಯಾಟ್ ವಾಕ್ ನಂತೆ .ಒಂದೇ ವ್ಯತ್ಯಾಸ ಎರಡನೆಯದರಲ್ಲಿ ವಸ್ತ್ರವು ಮುಚ್ಚುವುದಕ್ಕಿಂತ ತೋರಿಸುವುದು ಹೆಚ್ಚು . 

ಮುಂದಿನ  ಕಾರ್ಯಕ್ರಮ ತಿಂಡಿ ಕಾಪಿ (ಅಥವಾ ಶರಬತ್ )ಕೊಡುವುದು . ಹುಡುಗಿ ಗಡ ಗಡ  ನಡುಗಿ ಕೊಂಡು , ಮುಖ ಎಲ್ಲಾ ನಾಚಿಕೆಯಿಂದ ಕೆಂಪೇರಿಸಿ  ರಂಗಸ್ಥಳಕ್ಕೆ ಬರುವಳು . ಹುಡುಗನೂ ನೋಡದ ಹಾಗೆ ಮಾಡಿ ನೋಡುವ ಪ್ರಯತ್ನ ಮಾಡುವನು . 

ಕೇಸರಿ ಬಾತ್ ಕಾಪಿ ಸೇವನೆ ಆಗುವದು . ಹುಡುಗಿಗೆ ಹಾಡಲು ಬರುವದೋ ?ಒಂದೆರಡು ದೇವರ ನಾಮ ಹಾಡಿಸುವರು . ಮಾತು ಸರಿ ಬರುತ್ತದೆ ಎಂದು ಪರೀಕ್ಷಿಸುವ  ಪರಿ . ಕನ್ಯೆ ಧರಣಿ ಮುಖಿಯಾಗಿ ಹಾಡುವಳು

ಎಂಥ ಚೆಲುವಗೆ ಮಗಳನು ಕೊಟ್ಟನುಗಿರಿರಾಜನು ನೋಡಮ್ಮಮ್ಮ |

ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮ||

ಮನೆಯೆಂಬುದು ಸ್ಮಶಾನವು ನೋಡೇಗಜಚರ್ಮಾಂಬರವಮ್ಮಮ್ಮ |
ಹಣವೊಂದೆಂಬುದು ಕೈಯೊಳಗಿಲ್ಲವುಕಪ್ಪರವಿದೆ ನೋಡಮ್ಮಮ್ಮ ||

ಮೋರೆಗಳೈದು-ಮೂರು ಕಣ್ಣಗಳುವಿಪರೀತವ ನೋಡಮ್ಮಮ್ಮ
ಘೋರವಾದ ರುಂಡಮಾಲೆಉರಗಭೂಷಣವನು ನೋಡಮ್ಮಮ್ಮ ||

ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |
ಈತನ ನಾಮವು ಒಂದೇ ಮಂಗಳಕರವುಹರನ ನೋಡಮ್ಮಮ್ಮ ||

ತಲೆಯೆಂಬುದು ನೋಡಿದರೆ ಜಡೆಯುಹೊಳೆಯುತಿದೆ ನೋಡಮ್ಮ
ಮ್ಮಹಲವು ಕಾಲದ ತಪಸಿ ರುದ್ರನಮೈಬೂದಿಯು ನೋಡಮ್ಮಮ್ಮ ||

ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ
ಇಂದಿರೆರಮಣನ ಪುರಂದರವಿಠಲನಹೊಂದಿದವನ ನೋಡಮ್ಮಮ್ಮ|

ಸಂಗೀತದ ಗಂಧ ಗಾಳಿ ಇಲ್ಲದಿದ್ದರೂ ಹುಡುಗನ ತಾಯಿ ,ಸಹೋದರಿ ಗಂಭೀರವಾಗಿ ತಲೆ ಆಡಿಸುವರು . ಇಲ್ಲಿಗೆ ಕಾರ್ಯಕ್ರಮ ಮುಕ್ತಾಯ . ಹುಡುಗ ಗಂಭೀರವಾಗಿ ಎದ್ದು ಕರ ವಸ್ತ್ರದಿಂದ  ಮುಖ ಒರಸಿಕೊಳ್ಳುವನು . ಗಂಡಿನ ಕಡೆಯವರು ಅಂಗಳದ ತುದಿಗೆ ಹೋಗಿ ಗುಸು ಗುಸು ಮಾತನಾಡಿ ಆಮೇಲೆ ತಿಳಿಸುವೆವು ಎಂದು ಮರಳುವರು .. 

 ಅಜ್ಜಿ ಹುಡುಗಿಯೊಡನೆ ಹುಡುಗ ಇಷ್ಟವಾಯಿತೇ ಎಂದು ಕಣ್ಣು ಮಿಟಿಕಿಸಿದಾಗ ಮೊಮ್ಮಗಳು ಥೂ ಹೋಗಜ್ಜಿ ಎಂದು ಹುಸಿ ನಾಚಿಕೆ ತೋರಿಸಿದರೆ ಇಷ್ಟವಾಗಿದೆ ಎಂದು ಅರ್ಥ ,ಮಾತನಾಡದೇ ಇದ್ದರೆ ಇಲ್ಲ ಎಂದು ಸೂಚನೆ .

ಹುಡುಗ ಹುಡುಗಿ ಮಾತನಾಡುವ ಪದ್ಧತಿ ಆಗ ಇರಲಿಲ್ಲ . ಆಗಿನ ನಾಚಿಕೆ ಎಲ್ಲಾ ಈಗ ಯಕ್ಷಗಾನದ ಸ್ತ್ರೀ ವೇಷಗಳಲ್ಲಿ ಮಾತ್ರ ಕಾಣಬಹುದು ,

ನಾನು ಮದುವೆಯಾದ  ಹುಡುಗಿ ನೋಡಲು ಮೊದಲು ಒಬ್ಬನೇ  ಹೇಳದೇ ಹೋದೆನು . ಹುಡುಗಿ ದನದ ಹಟ್ಟಿಯಲ್ಲಿ  ತುಂಟ ಕರುವನ್ನು ಕಟ್ಟಲು ಪ್ರಯಾಸ ಪಡುತ್ತಿದ್ದಳು(ಮುಂದೆ ನನ್ನನ್ನು ಸಂಸಾರವೆಂಬ ಗೂಟಕ್ಕೆಬಂದಿಸುವ ಮುನ್ಸೂಚನೆ )  . ನೋಡಲು ಬಂದುದನ್ನು ತಿಳಿದು ಓಡಿ ಹೋಗಿ ಮುಖ ತೊಳೆದು ,ಬಟ್ಟೆ ಬದಲಿಸಿ ಬಂದಳು .ಆ ಕಾಲಕ್ಕೆ ಹುಡುಗ ಹುಡುಗಿ ಮಾತನಾಡಲು ಬಿಡುತ್ತಿದ್ದರು .ಆಕೆ ಎಕನಾಮಿಕ್ಸ್ ಎಂ ಎ . ಆದುದರಿಂದ ನಾನು ಸಮೀಪದಲ್ಲಿ ಓದಿದ್ದ  ಕೆನ್ನೆತ್ ಗಾಲ್ಬ್ರೈಟ್ಚ್ ಪುಸ್ತಕದ  ಬಗ್ಗೆ ಕೇಳಿದೆ(ಇಂಪ್ರೆಸ್ ಮಾಡಲು ) . ಅವಳಿಗೆ ಅದು ಗೊತ್ತಿರಲಿಲ್ಲ . ಎಂತಹ ಅರಸಿಕ ಇವ ಎಂದು ತಿಳಿದುಕೊಂಡಿರಬೇಕು . 

ಮಲಯಾಳ ಸಿನೆಮಾ ಒಂದರಲ್ಲಿ ಹುಡುಗಿ ನೋಡಲು ಬಂದ  ನಾಯಕ ಹುಡುಗಿಯ ಬಳಿ "ರಾಧೆ ನಿನ್ನ ಹೆಸರೇನು "ಎಂದು ಹುಡುಗಿ ರಾಧೆಯ ಬಳಿ ಕೇಳುವನು .ಆಮೇಲೆ ತನ್ನ ತಪ್ಪಿನ ಅರಿವಾಗಿ" ಮದುವೆಯಾಗುವುದು ಮೊದಲನೇ ಸಲ ;ಅದರಿಂದ ಒಂದು ಟೆನ್ಶನ್ 'ಎನ್ನುವನು . ಹುಡುಗಿ ಅಥವಾ ಹುಡುಗ ನೋಡುವುದು ಹೇಗೆ ಎಂದು ಒಂದು ಕೋರ್ಸ್ ಮಾಡುವುದು ಉತ್ತಮ . 

ಮಲಯಾಳಂ ಸಿನೆಮಾ "ಸಂದೇಶಂ ' ನಲ್ಲಿ ಒಂದು ಪ್ರಸಿದ್ಧ ಕನ್ಯಾ ಪರೀಕ್ಷೆಯ ಸೀನು ಇದೆ . ಎಡ ಪಕ್ಷದ ಕಾರ್ಯಕರ್ತ (ವಕೀಲ ಕೂಡಾ ) ಹೆಣ್ಣು ನೋಡಲು ಹೋಗುವ ದೃಶ್ಯ.ನೋಡಲು  ಕೆಳಗೆ ಕೊಟ್ಟ ಲಿಂಕ್ ಒತ್ತಿರಿ . 

https://youtu.be/IcYuV1Rwmhs

 

ನನ್ನ ಮದುವೆ

                             ನಾನೂ ಮದುವೆಯಾದೆ.

ನಮ್ಮದು 35 ವರ್ಷಗಳ ಅನ್ಯೋನ್ಯ ದಾಂಪತ್ಯ . ಅನ್ಯ ಅಂದರೆ ವಿರಸ ಓನ್ಯ ಅಂದರೆ ಸರಸ (ಇದು ನನ್ನದೇ ಅರ್ಥ ವಿನ್ಯಾಸ ).ಹಾಗೆ ಸಮರಸ ದಿಂದ ನಡೆದಿದೆ .ಪತ್ನಿಯ ಹೆಸರು ಉಷಾ .ಬಾಳ ಸಂಧ್ಯೆಯಲ್ಲಿ ಕೂಡಾ ಉಷಾ ಕಿರಣ ಸಾನ್ನಿಧ್ಯ .

 ನನ್ನ ಹೆಂಡತಿ ಕೋಪ ಬಂದಾಗ ಒಂದು ಮೂಲ ಭೂತ ಪ್ರಶ್ನೆ ಕೇಳುತ್ತಾಳೆ ."ನಿಮ್ಮಂತ ವರಿಗೆ ಮದುವೆ ಏಕೆ ಬೇಕಿತ್ತು ?ಎಲ್ಲರೂ ಮದುವೆ ಆಗುವರೆಂದು ನೀವು ಅದುದೋ ? " ಇದನ್ನು ಗಹನವಾಗಿ ಆಲೋಚಿಸುತ್ತಿದ್ದೇನೆ . ಈಗ ತೋರುತ್ತದೆ ಇಷ್ಟರ ವರೆಗೆ ಬ್ರಹ್ಮಚಾರಿ ಆಗಿ ಉಳಿಯಬಹುದಿತ್ತು ;ಆದರೆ  ಮುದಿ ವಯಸ್ಸಿನಲ್ಲಿ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ದೊಡ್ಡ ಊರುಗೋಲು .ವೈದ್ಯರ  ಕುಟುಂಬ (ಗಂಡ ಅಥವಾ ಹೆಂಡತಿ )ತುಂಬಾ ತ್ಯಾಗ ಮಾಡಬೇಕಾಗುತ್ತದೆ . 

ನಾನು ಹುಡುಗಿಯ ಜಾತಕ  ನೋಡದೆ ಮದುವೆಯಾದೆ .  ನನ್ನ ಪತ್ನಿಗೆ ಆ ಬಗ್ಗೆ ಹೆಮ್ಮೆ ಮತ್ತು ಕೃತಜ್ನತೆ ಇಲ್ಲ .  ಆಗಾಗ ನೀವು ಅದೆಲ್ಲಾ ನೋಡದೆ ಮದುವೆಯಾದದ್ದೇ ಅವಾಂತರಕ್ಕೆ ಕಾರಣ ಎಂದು . 

ನನ್ನ ವಿವಾಹ ೨೫. ೧. ೧೯೮೭ ರಂದು ಕಂಬಳಿ ಬೆಟ್ಟಿನಲ್ಲಿ ನೆರವೇರಿತು . ನಾನು ಆಗ ಪುತ್ತೂರು ರೈಲ್ವೆ ಅರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ .ನನ್ನ ಬಳಿ ಸಾಲ ಮಾಡಿ ಕೊಂಡ ಒಂದು ಬೈಕ್ ಇತ್ತು . ಬ್ಯಾಂಕ್ ಬ್ಯಾಲೆನ್ಸ್ ಬಂದ ಸಂಬಳ ಮಾತ್ರ .ಚಿಮಿಣಿ ಎಣ್ಣೆ ಸ್ಟವ್ ಮತ್ತು ಒಂದು ಸಿಲಿಂಡರ್ ಗ್ಯಾಸ್ ಸ್ಟವ್,ಅರೆಯುವ ಕಲ್ಲು ಇದ್ದುದು ಮದುವೆಗೆ ಅರ್ಹತೆ . 

ಮದುವೆ ದಿಬ್ಬಣ ಸರ್ವಿಸ್ ಬಸ್ ನಲ್ಲಿ . ನನ್ನ ಮದುವೆಗೆ ನೆಂಟರಿಷ್ಟರು ನೂರೈವತ್ತು ಜನ ಆದರೆ ರೈಲ್ವೆ ನೌಕರರು ಅಷ್ಟೇ ಮಂದಿ ಬಂದಿದ್ದರು .ರೈಲ್ವೆ ಯಲ್ಲಿ  ಕಠಿಣ ಪರಿಶ್ರಮಿಗಳಾದ ಗ್ಯಾಂಗ್ ಮೆನ್  ಗಳನ್ನು  ನೀವು ನೋಡಿರ ಬಹುದು . ಹಳಿಯನ್ನು ಸುಸ್ಥಿತಿ ಯಲ್ಲಿ ಇಡಲು ದುಡಿಯುತ್ತಿರುತ್ತಾರೆ . ಅವರೇ ಬಂದವರಲ್ಲಿ ಅಧಿಕ .ನನ್ನ ಆಪ್ತರಾದ ನಾಗರಾಜಪ್ಪ ಎಂಬವರು ಅವರಿಗೆಲ್ಲ ಉಸ್ತುವಾರಿ ಎಂಜಿನಿಯರ್ .ದೊಡ್ಡ ಮನಸು ಮಾಡಿ ತಮ್ಮ ಲೋರಿಯನ್ನೇ ಮದುವೆಗೆ ಹೋಗಲು ಕೊಟ್ಟಿದ್ದರು .ಇದರಿಂದ ಲೋರಿ ಯಂತಹ ದೊಡ್ಡ ವಾಹನದಲ್ಲಿ ಮದುವೆಗೆ ಅತಿಥಿಗಳು ಬಂದ ಹೆಮ್ಮೆ ನನಗೆ . 

          ಹಿಂದೆಯೇ ನಾನು ಬರೆದಂತೆ ಮದುವೆಯ ದಿನ ವರನಿಗೆ ಹಿಡಿಯಲು ಕೊಡೆ ಒಯ್ಯಲು ಮರೆತಿದ್ದೆವು .ಕೊನೆಗೆ ಹುಡುಗಿಯ ಕೊಡೆಯನ್ನೇ ಕಡ ತೆಗೆದುಕೊಂಡಾಗ 'ಕೊಡೆ ಇಲ್ಲದ ಹುಡುಗನಿಗೆ ಹುಡುಗಿಯ ಕೊಡೆ "ಎಂಬ ಪನ್ ಹುಟ್ಟಿಕೊಂಡಿತು . 

                ಜಾತಿ ಅಂತಸ್ತು ನೋಡದೆ ಎಲ್ಲರೂ ಊಟ ಮಾಡಿದರು .ಆಗಿನ್ನೂ ಬಫೆ ಆರಂಭವಾಗಿ ಇರಲಿಲ್ಲ . ಪರವೂರಿನ ನೌಕರರಿಗೆ ನಮ್ಮ ಭಟ್ರ ಮದುವೆ ಊಟದ ಕ್ರಮಾವಳಿ ತಿಳಿದಿಲ್ಲವೆ ಎಡವಟ್ಟಾಯಿತು . ನಮ್ಮಲ್ಲಿ ಮೊದಲು ಅನ್ನ ಸಾರು ,ಪುನಃ ಅದರ ವಿಚಾರಣೆ ,ಮುಂದೆ ಸಾಂಬಾರು ಮತ್ತು ವಿಚಾರಣೆ ,ಪಾಯಸ,ಸ್ವೀಟ್  ,ಮಜ್ಜಿಗೆ ಹುಳಿ ,ಕೊನೆಗೆ ಮಜ್ಜಿಗೆ ಬರುವದು .ಹೊರಗಿಂದ ಬಂದವರು ಎರಡು ಎರಡು ಸಾರಿ ಸಾರು ಮತ್ತು ಸಾಂಭಾರ್ ನಲ್ಲಿ ಅನ್ನ ಕಲಸಿ ಹೊಟ್ಟೆ ತುಂಬಿಸಿ ಕೊಂಡು ಇನ್ನೂ ಐಟಂ ಗಳು ಬರುವಾಗ ಕೈ ಬಾಯಿ ಬಿಟ್ಟರು . ಈಗ ಬಫೆ ಬಂದಿದೆ ;ಮತ್ತು ಮೆನು ಕೂಡಾ ಹಾಕಿರುತ್ತಾರೆ . 

ಮದುವೆಗೆ ನನ್ನ ಎಂ ಬಿ  ಬಿ ಎಸ್ ಸಹಪಾಠಿ ಡಾ ಶ್ರೀಪತಿ ಒಬ್ಬರೇ ಬಂದಿದ್ದು .ಆಗ ಇನ್ನೂ ಮೊಬೈಲ್ ವ್ಹಾಟ್ಸ್ ಅಪ್ಪ್ ಇತ್ಯಾದಿ ಬಿಟ್ಟು ಲ್ಯಾಂಡ್ ಲೈನ್ ಕೂಡಾ ಇಲ್ಲದ ಕಾಲ . ನನ್ನ ಮಗನ ಮದುವೆ  ಕಾಲಕ್ಕೆ ಕಡಿದುಹೋದ   ಸಂಪರ್ಕ ಪುನಃ ಸ್ಥಾಪಿಸಲ್ಪಟ್ಟು ಸುಮಾರು  40 ಮಂದಿ  ಕುಟುಂಬ ಸಮೇತ  ಬಂದು ಹರಸಿದ್ದು  ವಿಶೇಷ .

ನನ್ನ ಮದುವೆಯ ಫೋಟೋಗ್ರಾಫರ್ ನಿಮಗೆಲ್ಲಾ ಪರಿಚಿತರಾದ ಶ್ರೀ ಶಂಕರ ಸಾರಡ್ಕ .ಕೊಡೆ ಹಿಡಿದವರು  ನನ್ನ ಅಕ್ಕನ ಗಂಡ ವಿ ಬಿ ಅರ್ತಿಕಜೆ .





 

 

ಮಂಗಳವಾರ, ಸೆಪ್ಟೆಂಬರ್ 7, 2021

ಮದುರೈ ಸೋಮಸುಂದರಂ

                       ಮದುರೈ ಸೋಮಸುಂದರಂ

                        
                              Madurai Somasundaram | Shankar Krish's Blog

                        (9.2.1919 ---9.12.1989)

ಬೆಂಗಳೂರು ಕೋಟೆ ಹೈ ಸ್ಕೂಲ್ ರಾಮ ನವಮಿ ಸಂಗೀತೋತ್ಸವ ದಲ್ಲಿ  ,ತಿಂಗಳು ಪೂರ್ಣ ನಡೆಯುವ ಇತರ ಕಚೇರಿಗಳಿಗೆ ಒಂದು ಸೀಸನ್ ಟಿಕೆಟ್ ಕೊನೆಯ ಐದು ಕಚೇರಿಗಳಿಗೆ ಬೇರೆ ಟಿಕೆಟ್ ಇತ್ತು ,ಕೊನೆಯ ಈ ಕಛೇರಿಗಳು ಭಾರೀ ಜನಸಂದಣಿ ಸೇರುವಂತಹವು .ಅದರಲ್ಲಿ ಎಂ ಎಸ್ ಸುಬ್ಬಲಕ್ಷ್ಮಿ ,ಕೆ ಜೆ ಜೇಸುದಾಸ್ ಮುಂತಾದವರೊಂದಿಗೆ ಮದುರೈ  ಸೋಮಸುಂದರಂ ಅವರ ಕಚೇರಿ ಇರುವುದು .ನಾನು ಅವರನ್ನು ನೋಡುವಾಗ ಅವರಿಗೆ ವಯಸ್ಸಾಗಿತ್ತು.ಅವರ ಸ್ವರಕ್ಕೆ ,ಹಾಡುವ ಉತ್ಸಾಹಕ್ಕೆ ,ಭಕ್ತಿ ಭಾವಕ್ಕೆ  ಮುಪ್ಪು ತಗಲಿರಲಿಲ್ಲ .

ಸೋಮಸುಂದರಂ ಅವರ ಹುಟ್ಟು ಹೆಸರು ಪರಮ ಶಿವನ್. ಮದುರೈ ಸೋಮಸುಂದರೇಶ್ವರ ದೇವರ ಆಶೀರ್ವಾದದಿಂದ ಮದುರೈ ಸೋಮಸುಂದರಂ ಆದರು.

ಮುರುಗ (ಸುಬ್ರಹ್ಮಣ್ಯ )ಮತ್ತು ಮದುರೈ ಮೀನಾಕ್ಷಿ  ಕೃತಿಗಳನ್ನು ಹಾಡುವಾಗ ಭಕ್ತಿ ಪರವಶರಾಗುವರು. ಕಣ್ಣಲ್ಲಿ ನೀರು ಜಿನುಗುವುದು . ಅವರ ಒ ರಾಮ ನಿನ್ನಾಮಮ್,ರಾಮ ನಾಮಮು ಜನ್ಮ ರಕ್ಷಕ ಮಂತ್ರಮ್  ಬೆಂಗಳೂರು ಆಕಾಶವಾಣಿ ಸಂಗೀತ ಸುಧಾ ಕಾರ್ಯ ಕ್ರಮದಲ್ಲಿ ಆಗಾಗ ಬಂದು ಜನಪ್ರಿಯ ಆಗಿತ್ತು . 

https://www.youtube.com/watch?v=pyUacBPgWrc

https://www.youtube.com/watch?v=im1Ooa-AgJA