ಬೆಂಬಲಿಗರು

ಮಂಗಳವಾರ, ನವೆಂಬರ್ 24, 2026

ಮೊನ್ನೆ ಭಾನುವಾರ ಮುಂಜಾನೆ ಆಸ್ಪತ್ರೆ ಯಲ್ಲಿ ರೌಂಡ್ಸ್ ಮುಗಿಸಿ ಮನೆಯಲ್ಲಿ ಊಟ (ಒಂದು ದಿನ ಮಾತ್ರ ಮಧ್ಯಾಹ್ನ ಮನೆ ಊಟ )ಅಲ್ಪ ವಿಶ್ರಾಂತಿ . ಸಂಜೆ ಎರಡು ಕಾರ್ಯಕ್ರಮ ಗಳಿಗೆ ಅಹ್ವಾನ ಇತ್ತು . ಒಂದು ವಿಟ್ಲ ಸಮೀಪ ಚಿರಂತನ ಟ್ರಸ್ಟ್ ನವರು ನಡೆಸುತ್ತಿರುವ ಆಲಂಬನ ದಲ್ಲಿ  ಚಕ್ರಕೋಡಿ ನಾರಾಯಣ ಶಾಸ್ತ್ರೀ ಸಂಸ್ಮರಣಾ ಕಾರ್ಯಕ್ರಮ  ,ಇನ್ನೊಂದು ಪುತ್ತೂರು ಪುರಭವನ ದಲ್ಲಿ ಭರತ್ ಸುಂದರ್ ಅವರ ಸಂಗೀತ ಕಚೇರಿ . ಮೊದಲನೆಯದು ನಾಲ್ಕು ಗಂಟೆಗೆ ಆರಂಭ ,ಪುತ್ತೂರಿನ ಕಾರ್ಯಕ್ರಮ ಐದು ಗಂಟೆಗೆ .

ಮೂರ್ತಿ ದೇರಾಜೆ  ರಂಗಕರ್ಮಿ ,ಸಾಹಿತ್ಯ ಸಂಗೀತ ಆಸಕ್ತ .ಅವರ ತಂದೆ ದೇರಾಜೆ ಸೀತಾರಾಮಯ್ಯ ಯಕ್ಷಗಾನ ದ  ದಂತ ಕತೆ . ಮಗ ಭಾರವಿ ಪ್ರತಿಭಾವಂತ ಚಟುವಟಿಕೆಯ ಯುವಕ . ಹಿರಿಯ ನಾಗರಿಕರ ಆರೈಕೆಗಾಗಿ ಸುರತ್ಕಲ್ ನಲ್ಲಿ  ಚಿರಂತನ ಎಂಬ ಆಶ್ರಯ ಧಾಮ ನಡೆಸುತ್ತಿದ್ದು ಅದರ ಅಂಗವಾಗಿ  ವಿಟ್ಲ ಉಕ್ಕುಡ ಸಮೀಪ ಆಲಂಬನ ಎಂಬ  ಈ ವರ್ಷ ಆದಿಯಲ್ಲಿ  ಆರಂಭ ವಾಗಿದೆ . ಎರಡೂ ಕಡೆ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಂಡು ಬರುತ್ತಿದ್ದು ಸಮುಚ್ಚಯದಲ್ಲಿ ಅದಕ್ಕೆ ಸಭಾ ಭವನ ಇದೆ . 

ಪುತ್ತೂರಿನಲ್ಲಿ  ದಂತ ವೈದ್ಯ ಡಾ ಶ್ರೀಪ್ರಕಾಶ ಬಂಗಾರಡ್ಕ ತಮ್ಮ ಹೆತ್ತವರ ನೆನಪಿನಲ್ಲಿ ಸಂಗೀತ ಕಚೇರಿಗಳನ್ನು ಏರ್ಪಡಿಸುತ್ತಿದ್ದು ಪುತ್ತೂರು ಪರಿಸರದ ಆಸಕ್ತರು ಇವರಿಗೆ ಸದಾ ಅಭಾರಿ .

ನನಗೆ ಬಸ್ ಪ್ರಯಾಣ ಇಷ್ಟ . ಒಬ್ಬನೇ ಹೋಗುವಾಗ ಕಾರಿನಲ್ಲಿ ಹೋದರೆ ದೇಶಕ್ಕೇ ನಷ್ಟ . ಅಮೆರಿಕಾ ದೇಶದಲ್ಲಿ ವಾಹನದಲ್ಲಿ ಹೆಚ್ಚು ಪ್ರಯಾಣಿಕರು ಇದ್ದರೆ ಟೋಲ್ ಕಡಿಮೆ ಇರುತ್ತದೆ . ನನ್ನ ಶ್ರೀಮತಿ ಎಚ್ಚರಿಸಿದರು ,'ಬಸ್ ನಲ್ಲಿ ಉಪ್ಪಿನಕಾಯಿ ಹಾಕಿದ ಹಾಗೆ ಜನ ಇರುತ್ತಾರೆ ,ಬೇಡ ಕಾರಿನಲ್ಲಿಯೇ ಹೋಗಿ 'ಎಂದು . ಅದನ್ನು ಲೆಕ್ಕಿಸದೆ ಮಾರ್ಗದ ಬಳಿ ಬಂದು ಬಸ್ ಕಾಯ್ವ ಕಾಯಕದಲ್ಲಿ ತೊಡಗಿದೆ . ನಮ್ಮ ರಾಜ್ಯದ ಸಾರಿಗೆ ಬಸ್ ಬಂತು ಪುತ್ತೂರಿನಿಂದ ವಿಟ್ಲಕ್ಕೆ .ಜನ ತುಂಬಿ ತುಳುಕುತ್ತಿದ್ದರು .ಆದರೂ ಚಾಲಕರು ದಯೆ ತೋರಿ ನಿಲ್ಲಿದರು ಅನ್ನಿ . ಒಳಗಡೆ ಸಿಟ್ಟಿಂಗ್ ಸ್ಟ್ಯಾಂಡಿಂಗ್ ಫುಲ್ ಆಗಿ ಮೆಟ್ಟಲಿನಲ್ಲಿ ಆರು ಜನ ನೇಲುತ್ತಿದ್ದರು . ಅಂದು ಪುತ್ತೂರಿನಲ್ಲಿ ಶಾಸಕರ ಕ್ರಾಯಕ್ರಮ ,ಜತೆಗೆ ಹಲವು  ಮದುವೆ ಸಮಾರಂಭಗಳು .ಸರಿ ಅದನ್ನು ಹತ್ತುವ ಸಾಹಸ ಮಾಡಲಿಲ್ಲ .

ಅದೃಷ್ಟಕ್ಕೆ ಹಿಂದೆಯೇ ಕೇರಳ ರಾಜ್ಯದ ಬಸ್ ಬಂತು .ಏದುತ್ತಾ ಬರುವ ನಮ್ಮ ಬಸ್ ಗೆ ಹೋಲಿಸಿದರೆ ಕೇರಳದ ಬಸ್ ಆರೋಗ್ಯವಂತ ಯುವಕನ ಹಾಗೆ ಕಾಣುತ್ತದೆ . ಕೈ ತೋರಿಸಿದಾಗ ನಿಲ್ಲಿದರು . ಒಳಗಡೆ ಸಿಟ್ಟಿಂಗ್  ಸೀಟ್ ಫುಲ್ .  ಕೇರಳ ಬಸ್ ನಲ್ಲಿಯೂ ಈಗ ಸ್ತ್ರೀಯರಿಗೆ ಉಚಿತ ಇದೆ .  ಮುದರ್ನ ಪೌರರ್ ,ಅಂಧರ್ ,ವಿಕಲಾಂಗರ್ ಗೆ ಕಾಯ್ದಿಟ್ಟ ಸೀಟ್ ಗಳನ್ನು ಅನರ್ಹರು ಆಕ್ರಮಿಸಿ ಕೊಂಡಿದ್ದ ಕಾರಣ ನಾನು" ನಿಂತರ್ "ಕ್ಲಾಸ್  .ನಿಂತು ಕೊಂಡು ಪ್ರಯಾಣಿಸುವದು ಅಷ್ಟು ಕಷ್ಟವಲ್ಲ ,ಟಿಕೆಟ್ ಪಡೆಯುವದು ಕಷ್ಟ .ಕಂಡಕ್ಟರ್ ನ ಕಯ್ಯಿಂದ  ಟಿಕೆಟ್ ಪಡೆದು  ಕಿಸೆಯಿಂದ ಪರ್ಸ್ ತೆಗೆದು  ಹಣ  ಕೊಡುವಾಗ ಬ್ಯಾಲೆನ್ಸ್ ತಪ್ಪಿ ಪಕ್ಕದವರ ಮೇಲೆ ಬಿದ್ದು ಹೋಗುವದು . ಪುತ್ತೂರಿನಿಂದ ಉಕ್ಕುಡಕ್ಕೆ ಹಳೇ ನೆನಪಿನಲ್ಲಿ ಹದಿನೈದು ರೂಪಾಯಿ ಕೊಟ್ಟರೆ ಕಂಡಕ್ಟರ್ ಮಲಯಾಳಿ ಕನ್ನಡದಲ್ಲ್ಲಿ ಸಾರ್ ಈಗ ಮೂವತ್ತಾರು ರೂಪಾಯಿ ಎಂದು ಕನಿಕರ ದಿಂದ ಹೇಳಿದ . ದೇಶ ಬಹಳ ಮುಂದುವರಿದಿದೆ . ಅಂತೂ ಉಕ್ಕುಡದ ವರೆಗೆ ನಿಂತು ಕೊಂಡು ಪ್ರಯಾಣ . ಕೇರಳ ಸಾರಿಗೆ ಬಸ್ ನ ಕಿಟಿಕಿಗಳು ಚೆನ್ನಾಗಿದ್ದು  ಗ್ಲಾಸ್ ಇಲ್ಲದೆ  ಒಳಗಡೆ ಗಾಳಿ ಸರಿಯಾಗಿ ಆಡುವುದು . ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ನಮ್ಮ ಸಾರಿಗೆ ಬಸ್ ಗಳೂ ಇದನ್ನು ಅಳವಡಿಸಿದರೆ ಉತ್ತಮ .

ಸರಿ ಇಪ್ಪತ್ತು ನಿಮಿಷದಲ್ಲಿ ನಾನು ಉಕ್ಕುಡ ತಲುಪಿದೆ . ಮೊದಲು ಇಲ್ಲಿ ಅಕ್ಕಿ ಗೇಟ್ ಇತ್ತು . ಇಲ್ಲಿಂದ ಒಂದು ಫರ್ಲಾಂಗ್ ಹಿಂದೆ ರಾಜ ಮಾರ್ಗದಲ್ಲಿ ವಿಟ್ಲ ಸೈಡಿಗೆ ಕಳಂಜಿ ಮಲೆ ಸೆರಗಿನಲ್ಲಿ ನಡೆದು ಕೊಂಡು ಬಂದರೆ' ಆಲಂಬನ " ಸಿಗುವುದು . ಇಂತಹ ನಡಿಗೆ ಚೇತೋಹಾರಿ ಆದರೂ ಈಗ ಹಳ್ಳಿ ರಸ್ತೆಯ ಬದಿಯೂ ಪಾದಚಾರಿ ಎಡೆಯಿಲ್ಲ , ರಸ್ತೆಯಲ್ಲಿ ಓಡುವ ವಾಹನಗಳಿಗೆ ಕರುಣೆಯಿಲ್ಲ . ಧೈರ್ಯದಿಂದ ನಡೆದು ದಡ ಸೇರಿದೆ .ನನ್ನ ಹಿಂದೆ ಮುಂದೆ ಯಾರೂ ನಡೆಯುವವರು ಕಾಣಿಸಲಿಲ್ಲ . ಎಲ್ಲೆಲ್ಲೂ ದ್ವಿಚಕ್ರ ,ತ್ರಿಚಕ್ರ ,ಮತ್ತು  ಹೆಚ್ಚಿನ ಚಕ್ರ ಅವಲಂಬಿತರು .

ಆಲಂಬನ ಸಭಾಂಗಣ ದಲ್ಲಿ  ಮೊದಲು ಲಕ್ಷ್ಮೀಶ ತೋಲ್ಪಾಡಿ ಅವರು ದೇರಾಜೆ ಸೀತಾರಾಮಯ್ಯ ,ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಬಗ್ಗೆ  ಮಾತನಾಡಿದರು . ಸಭಾಂಗಣ ಹೆಚ್ಚು ಕಮ್ಮಿ ತುಂಬಿತ್ತು . ಸಭೆಗೆ ಮೊದಲು ಮೂರ್ತಿ ದೇರಾಜೆ , ಪಿಟೀಲು ವಿದ್ವಾಂಸ ಶ್ರೀ ವೇಣುಗೋಪಾಲ್ ಶಾನು ಭೋಗ್ ಅವರೊಡನೆ ಮಾತನಾಡುವ ಅವಕಾಶ . " ಆಲಂಬನ "ದ  ವ್ಯವಸ್ಥೆ ,ವಾತಾವರಣ ಚೆನ್ನಾಗಿದೆ ,ಕಲಾತ್ಮಕತೆ ಎದ್ದು ಕಾಣುತ್ತದೆ .

ಸಭಾ ಕಾರ್ಯಕ್ರಮ ನಂತರ ನಾನು ಪುತ್ತೂರಿಗೆ .ಪುರಭವನದಲ್ಲಿ ಭರತ್ ಸುಂದರ್ ಅವರ ಸಂಗೀತ ,ಮೃದಂಗದಲ್ಲಿ ನಮ್ಮವರೇ ಅದ ಸುನಾದ ಕೃಷ್ಣ  ಅಮೈ . ಸುಂದರ್ ಅವರ ಹಾಡುಗಾರಿಕೆ ಶಾಂತವಾಗಿ ಹರಿಯುವ ನದಿಯಂತೆ ,ಇಲ್ಲಿ ಜಲಪಾತದ  ಭೋರ್ಗೆರೆತ ಇಲ್ಲ . ತ್ಯಾಗರಾಜರ  ಇಂತ ಸೌಖ್ಯಮನಿ ನೇ ಜೆಪ್ಪಜಾಲ ಎಂತೋ ಏಮೋ ಎವರಿಕಿ ದೆಲುಸುನೋ

(ಇದು ಇಷ್ಟು ಸೌಖ್ಯವೆಂದು (ಸುಖವೆಂದು) ನಾನು ಹೇಳಲಾರೆನು (ವರ್ಣಿಸಲು ಅಸಾಧ್ಯ). ಅದು ಎಷ್ಟಿದೆ, ಏನಿದೆ ಎಂಬುದು ಯಾರಿಗೆ ತಾನೇ ತಿಳಿದಿದೆಯೋ? )  ಕೃತಿ ಕಾಪಿ ರಾಗದಲ್ಲಿ ಪ್ರಸ್ತುತ ಪಡಿಸಿದ್ದು ಅವರ ಕಚೇರಿಗೆ  ಅನ್ವರ್ಥ ವಾಗಿತ್ತು ಎನ್ನಬಹುದು  .ತನಿ ಆವರ್ತನ ಕೂಡಾ ಅದ್ಭುತವಾಗಿತ್ತು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ