ಬೆಂಬಲಿಗರು

ಬುಧವಾರ, ಅಕ್ಟೋಬರ್ 28, 2026

ಒಂದು ಹಳೆಯ ಕೈಪಿಡಿ

                                                   


 

 

ನನ್ನ ಗ್ರಂಥ ಸಂಗ್ರಹದಲ್ಲಿ ಸಹೃದಯರು ಕೊಡ ಮಾಡಿದ ಕೆಲವು ಹಳೆಯ ಅಮೂಲ್ಯ ಪುಸ್ತಕಗಳು ಇವೆ .ಇವುಗಳಲ್ಲಿ ಒಂದು 1935 ರಲ್ಲಿ    ಬಾಸೆಲ್ ಮಿಷನ್ ಮಂಗಳೂರು ಇವರಿಂದ ಪ್ರಕಟವಾದ 'ಲೋಕ ವ್ಯವಹಾರ ಬೋಧಿನಿ 'ಎಂಬ ಕೃತಿ . ಶ್ರೀ ಎಂ ಜಲಾಲುದ್ದೀನ್ ಎಂಬವರು ಕೃತಿಕಾರ .ಇದನ್ನು ಹೈ ಕೋರ್ಟ್ ವಕೀಲ್ ಯು ಸಿ ಕೃಷ್ಣ ಭಟ್ ಎಂಬವರಿಗೆ ಸಮರ್ಪಿಸಿರುವರು.ಸಾಮಾನ್ಯ ಅರ್ಜಿ ,ಕೌಟುಂಬಿಕ ಪತ್ರಾವಳಿ ಯಿಂದ ಹಿಡಿದು ವಿವಿಧ ಗೇಣಿ ಚುಟುಗಳು ,ಬಾಡಿಗೆ ಚೀಟು ,ಸೋಡಾ ಚೀಟು ,ವೀಲು ,ಪ್ರಾಮಿಸರಿ ನೋಟು ,ಸ್ಟ್ಯಾಂಪ್ ಡ್ಯೂಟಿ ,ಕೋರ್ಟ್ ಗಳ ನಡಾವಳಿ ,ಪರಿಭಾಷೆ  ಗಳಿಂದ ಹಿಡಿದು ಡೈವೋರ್ಸ್ ಅರ್ಜಿ ವರೆಗೆ ಹೇಗೆ ಬರೆಯುವದು ಎಂಬ ವಿವರಣೆ ಇದೆ . ಇದರ ಮುನ್ನುಡಿಯ ಒಂದು ಭಾಗ ಈ ಕೆಳಗಿನಂತಿದೆ 

                 





           
ಪೀಠಿಕೆ   

                                                                                         ವಿದ್ಯಾ ಧನವು ಧನಗಳಲ್ಲಿ ಪ್ರಧಾನವಾದದ್ದು . ವಿದ್ಯಾ ವಿಹೀನ: ಪಶು: ಎಂಬ ಸತ್ಯಾರ್ಥವನ್ನು  ಗ್ರಹಿಸಿ ,ಈ ಕಾಲದಲ್ಲಿ ಸರ್ವೇ ಜನರು ತಮ್ಮ ಮಕ್ಕಳು ಮರಿ ಮಕ್ಕಳನ್ನು ಅಕ್ಷರವಿಚಾರದಲ್ಲಿ ಕುರುಡಾರಾಗಿರ ಬಿಡದೆ ಓದು ಬರಹ ಕಳಿಸುತ್ತಾರೆ . ಆದರೆ ಓದುಬರಹ ಬಂದಾಕ್ಷಣ ಪ್ರಪಂಚ ವ್ಯವಹಾರಕ್ಕೆ ಬೇಕಾದ ತಿಳುವಳಿಕೆ ಬಂದ ಹಾಗಾಗಲಿಲ್ಲ . ಶಾಲೆಯಲ್ಲಿ ಸಾಕಷ್ಟು ವಿದ್ಯಾಭ್ಯಾಸ  ಮಾಡಿ ಕೊಂಡರೂ ,ಜನರೊಡನೆ ವಹಿವಾಟು ನಡಿಸಿ ನಾನಾ ತರದ ಅನುಭವ ವಾಗದವರು ವ್ಯಾವಹಾರಿಕ ಕಾರ್ಯದಲ್ಲಿ ಕುರುಡರೇ ಅಗಿರುತ್ತಾರೆ . 

ಆದಕಾರಣ ದಸ್ತಾವೇಜು ವಗೈರೆಯ ಅನುಭವದಲ್ಲಿ  ವಾಚಕರಿಗೆ ಇರಬಹುದಾದ  ಅಜ್ಞಾನವೂ ನಾಚಿಕೆಯೂ  ಪರಿಹಾರ ವಾಗಬೇಕೆಂಬ ಮೋಹದಿಂದ ಕಾನೂನು ಕಾಯಿದೆಗಳನ್ನೂ ದೇಶರೂಢಿಯನ್ನೂ ಅನುಸರಿಸಿ ಈ ಗ್ರಂಥವನ್ನು ಪ್ರಕಟಿಸ ಮುಂಕೊಂಡಿದ್ದೇನೆ . ಇದರಲ್ಲಿ ನ ನ್ನ ಸ್ವಂತ ಬುದ್ಧಿ ವಂತಿಕೆ ಏನೊಂದೂ ಇರುವುದಿಲ್ಲವಾದರೂ ,ಗ್ರಂಥಗಳಿಂದಲೂ ವಕೀಲರೇ ಮೊದಲಾದವರಿಂದಲೂ  ಅನುಭವ ಪಡೆದು ಸಂಗ್ರಹಿಸಿದ ಈ ಸಣ್ಣ ಕೃತಿಯನ್ನು ಓದಿದ ಮಾತ್ರದಲ್ಲೇ  ಸಾಧಾರಣ ವಿದ್ಯಾಭ್ಯಾಸ ಮಾಡಿರುವ ಯಾವೊಬ್ಬನಿಗಾದರೂ ದಸ್ತಾವೇಜು ,ಗೇಣಿ ಚೀಟು ,ವಿಲ್ ನಾಮೆ ,ಕೈ ಪೇತು .ಫಿರಿಯಾದು ,ನಾನಾ ತರದ ಅರ್ಜಿ ಮುಂತಾದ್ದನ್ನು  ಬರೆಯುವುದಕ್ಕೆ ಒಂದು ಧೈರ್ಯ ವುಂಟಾಗುವುದು ಮಾತ್ರವಲ್ಲ ,ಮೂರಾವರ್ತಿ ಓದಿದರೆ ಯಾ ಇದರಲ್ಲಿ ನಮೂನೆಗಾಗಿ ಕೊಟ್ಟಿರುವ ದಸ್ತಾವೇಜು ವಗೈರೆಗಳ  ನಕಲು ತೆಗೆದರೆ,ಬೇರೆ  ಹೊಸ ದಸ್ತಾವೇಜು ಗಳನ್ನು ಠರಾಯಿಸುವ ಸಾಮರ್ಥ್ಯವೂ ಬಂದೀತೆಂಬ ಭರವಸೆಯಿದೆ .

ಅದಲ್ಲದೆ ಹಳ್ಳಿಪಳ್ಳಿಗಳಲ್ಲಿ ಅನೇಕ ತಂದೆ ತಾಯಿಗಳು ಸಾಕಷ್ಟು ಖರ್ಚು ಮಾಡಿ ,ತಮ್ಮ ಮಕ್ಕಳಿಗೆ ಪ್ರಾಯ್ಮೇರಿ ಪರೀಕ್ಷೆ ವರೆಗಾದರೂ ಕಲಿಸಿದ ಮೇಲೆ ಸಂದರ್ಭ ಬಿದ್ದಾಗ -'ಮಗಾ ಇವನಿಗೊಂದು ರಶೀದಿ ಬರೆದುಕೊಡು ,ಇಲ್ಲವೇ ಚಾಲ ಗೇಣಿ ಚೀಟು ಬರೆದು ಹಾಕು ಎಂತೆಂದರೆ 'ಅದನ್ನು ಹೇಗೆ ಬರೆಯಬೇಕೆಂದು ನನಗೆ ಗೊತ್ತಿಲ್ಲಪ್ಪ್ಪಾ''ಎಂತ ಮಗನು ಹೇಳಲು ,ಇವನಿಗೆ ಬರಹ ಕಲಿಸಲಿಕ್ಕೆ ಮಾಡಿದ ಖರ್ಚು ಅಪ್ರದಂಡವೇ ಎಂತ ಎಣಿಸಿಕೊಳ್ಳುತ್ತ್ತಾರಲ್ಲ !ಬರಹ ಕಲಿತ ಮಗನೋ ಅಳಿಯನೋ ಮನೆರಲ್ಲಿರಲಾಗಿ ಒಂದು ರಶೀದಿಯನ್ನೋ ,ಗೇಣಿ ಚೀಟನ್ನೋ .ಅರ್ಜಿಯನ್ನೋ ಇತರರ ಕಾಲು ಹಿಡಿದು ,ಅವರ ಹೊತ್ತಿಗೆ ಕಾದುಕೊಂಡು ,ಮಗನ ವಿದ್ಯಾಭ್ಯಾಸಕ್ಕಾಗಿ ಮುಂಚೆ ಖರ್ಚು ಮಾಡಿದ ಹಣದ ಬಡ್ಡಿ ಗೆಂಬಂತೆ ತಮ್ಮ ಸಮಯವನ್ನೂ ದುಡ್ಡನ್ನೂ ವ್ಯಯ ಮಾಡ ಬೇಕಾಗುವಾಗ 'ಊಟಕ್ಕಿಲ್ಲದ ಉಪ್ಪಿನಕಾಯಿ ಯಾತಕ್ಕೂ ಬೇಡ 'ಎಂಬಂತೆ ಈ ಕಾಲದ ಶಾಲಾ ವಿದ್ಯೆಯ ಮೇಲೆ ಹಳ್ಳಿಯವರಿಗೆ ನೀರಸ ಹುಟ್ಟುವುದು ಸಹಜವಲ್ಲವೇ   ?

ಅಂತರಂಗದ ಸ್ವಗತ

 

ಹೋದ ವರ್ಷವೇ ಪ್ರಕಟವಾದ ಲೇಖಕಿ ಡಾ ಪಾರ್ವತಿ  ಜಿ ಐತಾಳ ಅವರ ಆತ್ಮ ಚರಿತ್ರೆ ಅನಂತರಂಗದ ಸ್ವಗತ ಸ್ವಲ್ಪ ತಡವಾಗಿಯಾದರೂ ಓದಿದೆ . ಕಾಸರಗೋಡು ತಾಲೂಕು ಧರ್ಮತಡ್ಕ ಸಮೀಪ ಜನನ ,ಅಲ್ಲೇ ಪ್ರಾಥಮಿಕ ಶಾಲೆ ,ಮುಂದೆ ವಿಟ್ಲದಲ್ಲಿ  ಹೈ ಸ್ಕೂಲ್ ,ಪದವಿ ಕಾಸರಗೋಡು ಸರಕಾರಿ ಕಾಲೇಜು . ಮುಂದೆ  ಇಂಗ್ಲಿಷ್ ನಲ್ಲಿ ಎಂಎ ಮೈಸೂರು ವಿಶ್ವ ವಿದ್ಯಾಲಯದಿಂದ .ಡಾ ಅನಂತ ಮೂರ್ತಿ ,ದಾಮೋದರ ರಾವ್ ಅಂತಹ ಖ್ಯಾತ ನಾಮರು ಗುರುಗಳು . ಪ್ರಾಧ್ಯಾಪಕ ವೃತ್ತಿ ಮಂಗಳೂರು ,ಮುಲ್ಕಿ ಮತ್ತು ಕುಂದಾಪುರಗಳಲ್ಲಿ .

ಬಾಲ್ಯದ ಜೀವನ ಚಿತ್ರಣ ನಮ್ಮ ಪ್ರದೇಶ ದ್ದೇ  ಆಗಿದ್ದು ಓದುತ್ತಿದ್ದಾಗ ನಮ್ಮ ಜೀವನ ಅನುಭವಗಳಿಗೆ ಹೋಲುವಂತಹ ಘಟನೆಗಳ ಚಿತ್ರಣ ಇದೆ . ಮುಂದೆ ವೃತ್ತಿ ಜೀವನ ಸುಗಮವಾದರೂ ವೈಯುಕ್ತಿಕ ಜೀವ ನೆಲೆ ನಿಲ್ಲಲು ಅಡೆ ತಡೆಗಳು .

ನಾವು ಲೇಖಕಿಗೆ ಅಭಾರಿಯಾಗ  ಬೇಕಾಗಿ ಇರುವುದು ಅವರ ಅನುವಾದ ಸಾಹಿತ್ಯ ಕೃಷಿಗೆ . ಇಲ್ಲಿಯ ವರೆಗೆ ೪೧ ಕ್ಕೂ ಮಿಕ್ಕ ಕೃತಿಗಳನ್ನು ಅನುವಾದಿಸಿದ್ದಾರೆ .ಮುಖ್ಯವಾಗಿ ತುಳು ಸಂಸ್ಕೃತಿಗೆ ಸಾಮ್ಯತೆ ಇರುವ ಮಲಯಾಳ ದ ಶೇಷ್ಠ ಕೃತಿಗಳ ಅನುವಾದ . ಎಂಟಿವಿ ,ಕಮಲಾ ದಾಸ್ ,ಪಾರಕ್ಕಡವು ,ಸುಕುಮಾರ ಅಳಿಕೋಡ್ ,ಏನ್ ಪಿ ಮೊಹಮ್ಮದ್ ಮುಂತಾದ ಪ್ರಸಿದ್ಧ ಲೇಖಕರ ಕೃತಿಗನ್ನು ಕನ್ನಡ ಕ್ಕೆ ಅನುವಾದಿಸಿದರೆ ,ಕವಿ ಕೆ ವಿ ತಿರುಮಲೇಶ್ ಅವರ ಕವಿತೆಗಳನ್ನು ಮಲಯಾಳಿಗಳಿಗೆ ಪರಿಚಯಿಸಿದ್ದಾರೆ .ಇನ್ನು ಪರ್ಲ್ ಎಸ ಬಕ್ ಅವರ  ಜನಪ್ರಿಯ ಕಾದಂಬರಿ ಗುಡ್ ಅರ್ಥ್ ಮತ್ತು ಹಲವು ಮೌಲಿಕ ಹಿಂದಿ ಕೃತಿಗಳನ್ನು ಕನ್ನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದ್ದಾರೆ . 

ಈ ಸಾಧಕಿಗೆ  ಓರ್ವ ಕನ್ನಡದ ಓದುಗನಾಗಿ  ಆಭಾರಿ .

ಮಂಗಳವಾರ, ಅಕ್ಟೋಬರ್ 27, 2026

ನಾನು ನಾಗರಿಕನೆ ?ಅನಾಗರಿಕನೆ ?

 

ಪೌರಪ್ರಜ್ಞೆ (Civic Sense) ಎಂದರೆ ಸಮಾಜದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬ ನಾಗರಿಕನು ಹೊಂದಿರಬೇಕಾದ ಸಾಮಾಜಿಕ ಜವಾಬ್ದಾರಿ, ಸೌಜನ್ಯ ಮತ್ತು ಸಾಮಾನ್ಯ ಪ್ರಜ್ಞೆ ಎಂದರ್ಥ.

ಇದು ಕೇವಲ ಕಾನೂನುಗಳನ್ನು ಪಾಲಿಸುವುದಷ್ಟೇ ಅಲ್ಲದೆ, ಇತರರ ಹಕ್ಕುಗಳನ್ನು ಗೌರವಿಸುವುದು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಕಾಪಾಡುವ ನಮ್ಮ ನೈತಿಕ ಜವಾಬ್ದಾರಿಯಾಗಿದೆ.

ಪೌರಪ್ರಜ್ಞೆಯ ಪ್ರಮುಖ ಲಕ್ಷಣಗಳು:

  • ಸಾರ್ವಜನಿಕ ಸ್ವಚ್ಛತೆ: ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ,ಆಸ್ಪತ್ರೆ  ,ಶಾಲೆ ಮತ್ತು ಬಸ್  ನಿಲ್ದಾಣಗಳಲ್ಲಿ ಕಸ ಎಸೆಯದೆ, ಕಸವನ್ನು ಡಸ್ಟ್ ಬಿನ್ (ಕಸದ ಬುಟ್ಟಿ) ನಲ್ಲೇ ಹಾಕುವುದು. ಗೋಡೆಗಳ ಮೇಲೆ ಉಗುಳದೆ ಅಥವಾ ಗಲೀಜು ಮಾಡದೆ ಇರುವುದು.

  • ಸಂಚಾರ ನಿಯಮಗಳ ಪಾಲನೆ (Traffic Rules): ಸಿಗ್ನಲ್ ಜಂಪ್ ಮಾಡದಿರುವುದು, ಜೀಬ್ರಾ ಕ್ರಾಸಿಂಗ್‌ನಲ್ಲಿ ನಡೆದಾಡುವುದು, ವಾಹನಗಳನ್ನು ಸರಿಯಾದ ಜಾಗದಲ್ಲಿ ನಿಲ್ಲಿಸುವುದು (Parking) ಮತ್ತು ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದು. ಸುಮ್ಮ ಸುಮ್ಮನೆ ಹಾರ್ನ್ (ಅದೂ ಆಸ್ಪತ್ರೆ ಶಾಲಾ ಪರಿಸರದಲ್ಲಿ )ಮಾಡಿ ಶಬ್ದ ಮಾಲಿನ್ಯ ಕ್ಕೆ ಎಡೆ ಮಾಡಿ ಕೊಡದೆ ಇರುವುದು 

  • ಸಾಮೂಹಿಕ ಸೌಜನ್ಯ: ಸಾರ್ವಜನಿಕ ಸ್ಥಳಗಳಲ್ಲಿ (ಬಸ್, ಮೆಟ್ರೋ, ಆಸ್ಪತ್ರೆ) ಜೋರಾಗಿ ಮಾತನಾಡುವುದು, ಕಿರುಚಾಡುವುದು ಅಥವಾ ಸಂಗೀತ ಕೇಳುವುದನ್ನು ತಪ್ಪಿಸಿ ಇತರರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವುದು. ಸರತಿ ಸಾಲಿನಲ್ಲಿ (Queue) ನಿಲ್ಲುವ ಅಭ್ಯಾಸ ರೂಢಿಸಿಕೊಳ್ಳುವುದು.

  • ಸಾರ್ವಜನಿಕ ಆಸ್ತಿಯ ರಕ್ಷಣೆ: ಸರ್ಕಾರಿ ಬಸ್ಸುಗಳು, ರೈಲುಗಳು, ಉದ್ಯಾನವನಗಳು ಮತ್ತು ಬೀದಿ ದೀಪಗಳಂತಹ ಸಾರ್ವಜನಿಕ ಆಸ್ತಿಯನ್ನು ನಮ್ಮ ಸ್ವಂತ ಸ್ವತ್ತಿನಂತೆ ಕಾಪಾಡುವುದು ಮತ್ತು ಹಾನಿ ಮಾಡದಿರುವುದು.

  • ಸಹಾನುಭೂತಿ ಮತ್ತು ಸಹಾಯ: ವೃದ್ಧರಿಗೆ, ಗರ್ಭಿಣಿಯರಿಗೆ ಮತ್ತು ವಿಕಲಚೇತನರಿಗೆ ಬಸ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಸನ ಬಿಟ್ಟುಕೊಡುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, "ನನಗೆ ಸ್ವಾತಂತ್ರ್ಯವಿರುವಂತೆ ಇತರರಿಗೂ ಬದುಕುವ ಹಕ್ಕಿದೆ" ಎಂಬುದನ್ನು ಅರಿತು, ಇತರರಿಗೆ ತೊಂದರೆ ಕೊಡದೆ ಬದುಕುವುದೆ ನಿಜವಾದ ಪೌರಪ್ರಜ್ಞೆಯಾಗಿದೆ.

 

ಪೌರಪ್ರಜ್ಞೆಯು (Civic Sense) ಯಾವುದೇ ದೇಶ ಅಥವಾ ಸಮಾಜದ ಪ್ರಗತಿಗೆ ಅತ್ಯಂತ ಪ್ರಮುಖವಾದ ಆಧಾರಸ್ತಂಭವಾಗಿದೆ. ಇದು ಕೇವಲ ವ್ಯಕ್ತಿಗತ ನಡವಳಿಕೆಯಲ್ಲ, ಬದಲಾಗಿ ಇಡೀ ಸಮುದಾಯದ ಜೀವನಮಟ್ಟವನ್ನು ಸುಧಾರಿಸುವ ಶಕ್ತಿಯಾಗಿದೆ.

ಸಮಾಜದ ಅಭಿವೃದ್ಧಿಗೆ ಪೌರಪ್ರಜ್ಞೆಯು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ:

  • ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆ: ಪ್ರತಿಯೊಬ್ಬರೂ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿದರೆ, ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬಹುದು. ಇದು ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತದೆ.

  • ಆರ್ಥಿಕ ಉಳಿತಾಯ: ಸಾರ್ವಜನಿಕ ಆಸ್ತಿಗಳನ್ನು (ರಸ್ತೆಗಳು, ಸಾರ್ವಜನಿಕ ವಾಹನಗಳು, ಉದ್ಯಾನವನಗಳು) ಹಾಳುಮಾಡದೆ ಕಾಪಾಡಿದರೆ, ಸರ್ಕಾರವು ಅವುಗಳ ದುರಸ್ತಿಗೆ ಅಥವಾ ಮರುನಿರ್ಮಾಣಕ್ಕೆ ಖರ್ಚು ಮಾಡುವ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ಉಳಿಸಬಹುದು. ಈ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಬಡವರ ಕಲ್ಯಾಣದಂತಹ ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು.

ಭಾನುವಾರ, ಅಕ್ಟೋಬರ್ 25, 2026

ಚಿತ್ತ ಭಿತ್ತಿಯ ಪತ್ತಾಯ



 ಕೆಲವು ವರ್ಷಗಳ ಹಿಂದೆ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದ  ಶ್ರೀಮತಿ  ಶಕುಂತಲಾ ಕಿಣಿ ಯವರ ಬಳ್ಳಂಬೆಟ್ಟಿನ ಬಾಲ್ಯ ಓದಿ ಸಂತೋಷ ಪಟ್ಟಿದ್ದೆ . ಸಹಜತೆಯಿಂದ ಕೂಡಿದ ಮತ್ತು ನನ್ನ ಅಜ್ಜನ ಮನೆಯ ಪರಿಸರದ ಕತೆ ಯಾಗಿದ್ದರಿಂದ ಅಪ್ಯಾಯ ಮಾನ ಆಗಿತ್ತು . ಈಗ ಅದೇ ಕಾಸರಗೋಡು ಎಣ್ಮಕಜೆ ಗ್ರಾಮ ದಲ್ಲಿ ಹುಟ್ಟಿ ಬೆಳೆದು  ದಕ್ಷಿಣ ಕನ್ನಡ ದ  ಕೆಮ್ಮಾರ (ಆಮೇಲೆ ಕುಂತೂರು )ಕ್ಕೆ ಮದುವೆಯಾಗಿ ಬಂದು ಮುಂದೆ ಎರಡು ಬಾರಿ ಪುತ್ತೂರಿನ ಶಾಸಕಿ ಯಾಗಿ  ಶಕು ಅಕ್ಕ ಎಂದೇ ಜನಪ್ರಿಯ ರಾದ  ಶ್ರೀಮತಿ ಶಕುಂತಲಾ ಶೆಟ್ಟಿ ಯವರ ಆತ್ಮ ಚರಿತ್ರೆ 'ಚಿತ್ತ ಭಿತ್ತಿಯ ಪತ್ತಾಯ 'ವನ್ನು ಓದಿ ಮುಗಿಸಿದಾಗ ಒಳ್ಳೆಯ  ಕೃತಿ ಓದಿದ ತೃಪ್ತಿ ಆಯಿತು . ಅಡ್ಕಸ್ಥಳದಿಂದ ಉಕ್ಕಿನಡ್ಕ ,ಸ್ವರ್ಗ ಪಡ್ರೆ ಯಿಂದ ಶೇಣಿ ಯ ವರೆಗೆ ಪಸರಿಸಿರುವ ಎಣ್ಮಕಜೆ ಗ್ರಾಮ ಯಕ್ಷಗಾನ ಮೇರು ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ ,ಪೆರ್ಲ ಕೃಷ್ಣ ಭಟ್ ,ಪಡ್ರೆ ಚಂದ್ರು ,ಅಡ್ಕಸ್ಥಳ ನಾರಾಯಣ ರೈ ,ಬಲಿಪ ನಾರಾಯಣ ಭಾಗವತ ,ಕಾಟುಕುಕ್ಕೆ ಅಯ್ಯಪ್ಪ ಮಣಿಯಾಣಿ, ಬಳ್ಳಂಬೆಟ್ಟು ಶೀನಪ್ಪ ರೈ  ಮತ್ತು ಅಡ್ಕಸ್ಥಳ ಸಂಜೀವ ರೈ  ,ಹಿರಿಯ ಪಿಟೀಲು ವಾದಕ ಗುತ್ತು ಗೋವಿಂದ ಭಟ್ ,ಪ್ರಸಿದ್ಧ ಪರಿಸರ ಮತ್ತು ಕೃಷಿ ತಜ್ಞ ಶ್ರೀಪಡ್ರೆ ಮುಂತಾದವರ ಹುಟ್ಟೂರು . ಆದುದರಿಂದ ಶ್ರೀಮತಿ ಶಕುಂತಲಾ ಶೆಟ್ಟಿ ಅವರಲ್ಲಿ ಇತ್ತೀಚಿಗೆ ಮುಖ್ಯವಾಗಿ ರಾಜಕಾರಿಣಿಗಳಲ್ಲಿ  ಅಪರೂಪವಾಗಿರುವ ಸಾಹಿತ್ಯ ವಾಸನೆ ಇರುವುದು ಕಂಡು ಸಂತೋಷ ವಾಯಿತು . ಆತ್ಮಕತೆಯ ಭಾಷೆ ಯಾವುದೇ ಉತ್ತಮ  ಸಾಹಿತಿಯ  ಮಟ್ಟಕ್ಕೆ ಕಡಿಮೆ ಇಲ್ಲ ಮತ್ತು ಸಹಜತೆ ಯಿಂದ ಕೂಡಿದೆ . 

 ವಿವಾಹ ಪೂರ್ವದ ಜೀವನ  ಆಗಿನ ಕಾಲದ ಮಧ್ಯಮ ವರ್ಗದ ಜೀವನ ಚಿತ್ರಣ  ,ಪೆರ್ಲ ದ ಅವರ ಮನೆ ಮತ್ತು ಶಾಲೆಯ ಸವಿ ನೆನಪುಗಳು .  ಅವರು ಸ್ಮರಿಸಿದ ಅಧ್ಯಾಪಕರ ಪಟ್ಟಿಯಲ್ಲಿ ನನ್ನ ಶ್ರೀಮತಿಯವರ ತಂದೆ ಕಾನ ಗೋಪಾಲ ಕೃಷ್ಣ ಭಟ್ ಅವರ ಹೆಸರು ಕಂಡು ಸಂತಸ ಆಯಿತು ,ಅವರ ಬಂಧುಗಳಾದ ಮಹಾಬಲ ಶೆಟ್ಟಿ ಮತ್ತು ಶಿವರಾಮ ನೋಂಡ ಅವರನ್ನು ಬಾಲ್ಯದಲ್ಲಿ ನೋಡಿದ್ದೆ .

ವಿವಾಹ ನಂತರದ ಜೀವನ  ಸರಸ ವಿರಸ ಗಳ ಕೂಡಿ ಸಮರಸ ವಾದ ಕತೆ  ಇದೆ .ಕುಂತೂರಿನ ಆಸ್ತಿಯನ್ನು ನೇರ್ಪಕ್ಕೆ ತರಲು ಹೋರಾಟ ದ  ಚಿತ್ರಣ ಇದೆ . ಸಾಮಾನ್ಯ ಕೃಷಿಕನಾಗಿ ಗುಡ್ಡೆಯಿಂದ ಸೊಪ್ಪು ತರುವುದು ,ನೇಜಿ ನೆಡುವುದು ,ಪಶು ಚಾಕರಿ ಇತ್ಯಾದಿ ಗಳನ್ನು  ಮಾಡುತ್ತಿದ್ದ ಕಾರಣ  ಮುಂದೆ  ಪಂಚಾಯತ್ ಸದಸ್ಯೆ ,ಶಾಸಕಿ ಆದಾಗ ಜನಸಾಮಾನ್ಯರ ಸಮಸ್ಯೆ ಅರಿಯುವುದಕ್ಕೆ ,ಮತ್ತು ಅವರಲ್ಲಿ ಸಹಜವಾಗಿ ಒಂದಾಗಿ ಬೆರೆಯುವುದಕ್ಕೆ ಅನುಕೂಲ ಆಗಿರ ಬೇಕು .ಗಾಡ್ ಫಾದರ್ ಇಲ್ಲದ ಹಳ್ಳಿಯ ಓರ್ವ ಹೆಣ್ಣು ಮಗಳು ಸಾರ್ವಜನಿಕ ಜೀವನದಲ್ಲಿ ಮುಂದೆ ಬರಲು ಇರುವ ಅಡಚಣೆಗಳು ಅವಗಳನ್ನೆಲ್ಲಾ ಮೀರಿ ತಾವು ಬೆಳೆದ ಕತೆ ಇದೆ .  ಜಾತಿ ಧರ್ಮ  ಅಂತಸ್ತು ಪರಿಗಣಿಸದೆ ಸ್ತ್ರೀಯರ ಸಂಕಷ್ಟಗಳಿಗೆ ತಾವು ಮಿಡಿದ ಸೋದಾರಣ ಪ್ರಸಂಗಗಳು ಇವೆ .  ಜನರು ಅವರನ್ನು ಸದಾ ಸ್ಮರಿಸುವಂತೆ ಮಾಡಿದ ಶಾಸಕಿಯಾಗಿ ಅವರು ಕ್ಷೇತ್ರದಲ್ಲಿ ಸ್ಥಾಪನೆಗೆ ಪ್ರಯತ್ನಿಸಿದ ಮತ್ತು ಸಾದಿಸಿದ  ಶಾಲೆ ,ಕಾಲೇಜು ,ಆಸ್ಪತ್ರೆ ಇತ್ಯಾದಿಗಳ ವಿವರ ಕೂಡಾ .

 ಆಕೃತಿ  ಆಶಯ ಪ್ರಕಟಣಾಲಯ ದಿಂದ ಮೂಡಿ ಬಂದ ಪುಸ್ತಕ ಎಂದು ಅದರ ಚಂದವೇ ಹೇಳುತ್ತದೆ .