ಬೆಂಬಲಿಗರು

ಭಾನುವಾರ, ಅಕ್ಟೋಬರ್ 25, 2026

ಚಿತ್ತ ಭಿತ್ತಿಯ ಪತ್ತಾಯ



 ಕೆಲವು ವರ್ಷಗಳ ಹಿಂದೆ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದ  ಶ್ರೀಮತಿ  ಶಕುಂತಲಾ ಕಿಣಿ ಯವರ ಬಳ್ಳಂಬೆಟ್ಟಿನ ಬಾಲ್ಯ ಓದಿ ಸಂತೋಷ ಪಟ್ಟಿದ್ದೆ . ಸಹಜತೆಯಿಂದ ಕೂಡಿದ ಮತ್ತು ನನ್ನ ಅಜ್ಜನ ಮನೆಯ ಪರಿಸರದ ಕತೆ ಯಾಗಿದ್ದರಿಂದ ಅಪ್ಯಾಯ ಮಾನ ಆಗಿತ್ತು . ಈಗ ಅದೇ ಕಾಸರಗೋಡು ಎಣ್ಮಕಜೆ ಗ್ರಾಮ ದಲ್ಲಿ ಹುಟ್ಟಿ ಬೆಳೆದು  ದಕ್ಷಿಣ ಕನ್ನಡ ದ  ಕೆಮ್ಮಾರ (ಆಮೇಲೆ ಕುಂತೂರು )ಕ್ಕೆ ಮದುವೆಯಾಗಿ ಬಂದು ಮುಂದೆ ಎರಡು ಬಾರಿ ಪುತ್ತೂರಿನ ಶಾಸಕಿ ಯಾಗಿ  ಶಕು ಅಕ್ಕ ಎಂದೇ ಜನಪ್ರಿಯ ರಾದ  ಶ್ರೀಮತಿ ಶಕುಂತಲಾ ಶೆಟ್ಟಿ ಯವರ ಆತ್ಮ ಚರಿತ್ರೆ 'ಚಿತ್ತ ಭಿತ್ತಿಯ ಪತ್ತಾಯ 'ವನ್ನು ಓದಿ ಮುಗಿಸಿದಾಗ ಒಳ್ಳೆಯ  ಕೃತಿ ಓದಿದ ತೃಪ್ತಿ ಆಯಿತು . ಅಡ್ಕಸ್ಥಳದಿಂದ ಉಕ್ಕಿನಡ್ಕ ,ಸ್ವರ್ಗ ಪಡ್ರೆ ಯಿಂದ ಶೇಣಿ ಯ ವರೆಗೆ ಪಸರಿಸಿರುವ ಎಣ್ಮಕಜೆ ಗ್ರಾಮ ಯಕ್ಷಗಾನ ಮೇರು ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ ,ಪೆರ್ಲ ಕೃಷ್ಣ ಭಟ್ ,ಪಡ್ರೆ ಚಂದ್ರು ,ಅಡ್ಕಸ್ಥಳ ನಾರಾಯಣ ರೈ ,ಬಲಿಪ ನಾರಾಯಣ ಭಾಗವತ ,ಕಾಟುಕುಕ್ಕೆ ಅಯ್ಯಪ್ಪ ಮಣಿಯಾಣಿ, ಬಳ್ಳಂಬೆಟ್ಟು ಶೀನಪ್ಪ ರೈ  ಮತ್ತು ಅಡ್ಕಸ್ಥಳ ಸಂಜೀವ ರೈ  ,ಹಿರಿಯ ಪಿಟೀಲು ವಾದಕ ಗುತ್ತು ಗೋವಿಂದ ಭಟ್ ,ಪ್ರಸಿದ್ಧ ಪರಿಸರ ಮತ್ತು ಕೃಷಿ ತಜ್ಞ ಶ್ರೀಪಡ್ರೆ ಮುಂತಾದವರ ಹುಟ್ಟೂರು . ಆದುದರಿಂದ ಶ್ರೀಮತಿ ಶಕುಂತಲಾ ಶೆಟ್ಟಿ ಅವರಲ್ಲಿ ಇತ್ತೀಚಿಗೆ ಮುಖ್ಯವಾಗಿ ರಾಜಕಾರಿಣಿಗಳಲ್ಲಿ  ಅಪರೂಪವಾಗಿರುವ ಸಾಹಿತ್ಯ ವಾಸನೆ ಇರುವುದು ಕಂಡು ಸಂತೋಷ ವಾಯಿತು . ಆತ್ಮಕತೆಯ ಭಾಷೆ ಯಾವುದೇ ಉತ್ತಮ  ಸಾಹಿತಿಯ  ಮಟ್ಟಕ್ಕೆ ಕಡಿಮೆ ಇಲ್ಲ ಮತ್ತು ಸಹಜತೆ ಯಿಂದ ಕೂಡಿದೆ . 

 ವಿವಾಹ ಪೂರ್ವದ ಜೀವನ  ಆಗಿನ ಕಾಲದ ಮಧ್ಯಮ ವರ್ಗದ ಜೀವನ ಚಿತ್ರಣ  ,ಪೆರ್ಲ ದ ಅವರ ಮನೆ ಮತ್ತು ಶಾಲೆಯ ಸವಿ ನೆನಪುಗಳು .  ಅವರು ಸ್ಮರಿಸಿದ ಅಧ್ಯಾಪಕರ ಪಟ್ಟಿಯಲ್ಲಿ ನನ್ನ ಶ್ರೀಮತಿಯವರ ತಂದೆ ಕಾನ ಗೋಪಾಲ ಕೃಷ್ಣ ಭಟ್ ಅವರ ಹೆಸರು ಕಂಡು ಸಂತಸ ಆಯಿತು ,ಅವರ ಬಂಧುಗಳಾದ ಮಹಾಬಲ ಶೆಟ್ಟಿ ಮತ್ತು ಶಿವರಾಮ ನೋಂಡ ಅವರನ್ನು ಬಾಲ್ಯದಲ್ಲಿ ನೋಡಿದ್ದೆ .

ವಿವಾಹ ನಂತರದ ಜೀವನ  ಸರಸ ವಿರಸ ಗಳ ಕೂಡಿ ಸಮರಸ ವಾದ ಕತೆ  ಇದೆ .ಕುಂತೂರಿನ ಆಸ್ತಿಯನ್ನು ನೇರ್ಪಕ್ಕೆ ತರಲು ಹೋರಾಟ ದ  ಚಿತ್ರಣ ಇದೆ . ಸಾಮಾನ್ಯ ಕೃಷಿಕನಾಗಿ ಗುಡ್ಡೆಯಿಂದ ಸೊಪ್ಪು ತರುವುದು ,ನೇಜಿ ನೆಡುವುದು ,ಪಶು ಚಾಕರಿ ಇತ್ಯಾದಿ ಗಳನ್ನು  ಮಾಡುತ್ತಿದ್ದ ಕಾರಣ  ಮುಂದೆ  ಪಂಚಾಯತ್ ಸದಸ್ಯೆ ,ಶಾಸಕಿ ಆದಾಗ ಜನಸಾಮಾನ್ಯರ ಸಮಸ್ಯೆ ಅರಿಯುವುದಕ್ಕೆ ,ಮತ್ತು ಅವರಲ್ಲಿ ಸಹಜವಾಗಿ ಒಂದಾಗಿ ಬೆರೆಯುವುದಕ್ಕೆ ಅನುಕೂಲ ಆಗಿರ ಬೇಕು .ಗಾಡ್ ಫಾದರ್ ಇಲ್ಲದ ಹಳ್ಳಿಯ ಓರ್ವ ಹೆಣ್ಣು ಮಗಳು ಸಾರ್ವಜನಿಕ ಜೀವನದಲ್ಲಿ ಮುಂದೆ ಬರಲು ಇರುವ ಅಡಚಣೆಗಳು ಅವಗಳನ್ನೆಲ್ಲಾ ಮೀರಿ ತಾವು ಬೆಳೆದ ಕತೆ ಇದೆ .  ಜಾತಿ ಧರ್ಮ  ಅಂತಸ್ತು ಪರಿಗಣಿಸದೆ ಸ್ತ್ರೀಯರ ಸಂಕಷ್ಟಗಳಿಗೆ ತಾವು ಮಿಡಿದ ಸೋದಾರಣ ಪ್ರಸಂಗಗಳು ಇವೆ .  ಜನರು ಅವರನ್ನು ಸದಾ ಸ್ಮರಿಸುವಂತೆ ಮಾಡಿದ ಶಾಸಕಿಯಾಗಿ ಅವರು ಕ್ಷೇತ್ರದಲ್ಲಿ ಸ್ಥಾಪನೆಗೆ ಪ್ರಯತ್ನಿಸಿದ ಮತ್ತು ಸಾದಿಸಿದ  ಶಾಲೆ ,ಕಾಲೇಜು ,ಆಸ್ಪತ್ರೆ ಇತ್ಯಾದಿಗಳ ವಿವರ ಕೂಡಾ .

 ಆಕೃತಿ  ಆಶಯ ಪ್ರಕಟಣಾಲಯ ದಿಂದ ಮೂಡಿ ಬಂದ ಪುಸ್ತಕ ಎಂದು ಅದರ ಚಂದವೇ ಹೇಳುತ್ತದೆ . 

 

 

 

 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ