ಬೆಂಬಲಿಗರು

ಸೋಮವಾರ, ಮೇ 9, 2022

ಕೆಲ ವೈದ್ಯಕೀಯ ಪರೀಕ್ಷಾ ಕ್ರಮಗಳು

 ವೈದ್ಯಕೀಯ ಪರೀಕ್ಷಣ ದಲ್ಲಿ  ಕೆಲವು ನಿಯಮಗಳು ಇವೆ . ಉದಾಹರಣೆಗೆ  ಬಲ ಬಾಗದ ಕೆಳ ಹೊಟ್ಟೆ ನೋವು ಎಂದು ಬಂದರೆ ನಾವು  ಕೈಯಿಂದ ಮುಟ್ಟಿ ಪರೀಕ್ಷೆ  ಮಾಡುವಾಗ ನೋವು ಇಲ್ಲದ ಭಾಗದಿಂದ ಆರಂಬಿಸಿ ಕೊನೆಗೆ ನೋವು ಇರುವ ಜಾಗಕ್ಕೆ ಬರುತ್ತೇವೆ . ಹಲವು ರೋಗಿಗಳು ಇವರು ನನಗೆ ಬಲ ಬದಿಯಲ್ಲಿ ನೋವು ಇದ್ದರೆ ಎಡ ಬದಿ ಯಾಕೆ ಪರೀಕ್ಷೆ ಮಾಡುತ್ತಿದ್ದಾರೆ ಎಂದು ತಪ್ಪು ತಿಳಿಯುವರು . ನೋವು ಇರುವ ಕಡೆ ಮೊದಲೇ ಮುಟ್ಟಿದರೆ ಉಳಿದ ಕಡೆ ಮುಟ್ಟುವಾಗಲೂ ಹೊಟ್ಟೆಯ ಮೇಲ್ಮೈ ಯ  ಮಾಂಸ ಖಂಡದಳು  ರೋಗಿಯ ಅರಿವಿಲ್ಲದಂತೆಯೇ ಸಂಕುಚನ ಗೊಂಡು (Contracting ) ಗಟ್ಟಿಯಾಗಿ ನಮಗೆ  ಒಳಗಿನ ಅಂಗಗಳ ಬಗ್ಗೆ ತಿಳಿಯುವುದು ಕಷ್ಟವಾಗುವುದು . 

ಇನ್ನು ವೈದ್ಯ ಶಾಸ್ತ್ರದಲ್ಲಿ ಯಾವುದೇ ಉದರ  ಪರೀಕ್ಷೆ ಯು  ಹರ್ನಿಯಾ ಉಂಟಾಗುವ ತಾಣಗಳ (ಉದಾ ತೊಡೆ ಬುಡ )ಮತ್ತು ಗಂಡಸರಲ್ಲಿ ವೃಷಣ ಪರೀಕ್ಷೆ  ಹೊರತಾಗಿ ಅಪೂರ್ಣ ವೆನಿಸುವುದು ಎಂಬ ನಿಯಮ ಇದೆ .ಬಹಳ ವೇಳೆ  ರೋಗಿ ಗೆ ಸಂಕೋಚ ಉಂಟು ಮಾಡುವುದು ಯಾಕೆಂದು ಇದನ್ನು ಬಿಟ್ಟು ಬಿಡುವುದು ಸಾಮಾನ್ಯ .ಕೆಲವೊಮ್ಮೆ  ಇದರಿಂದ ರೋಗ ಪತ್ತೆ ಕೈ ತಪ್ಪುವುದು . 

ಇನ್ನು  ಗುದದ್ವಾರದ ಮತ್ತು ಸುತ್ತಲಿನ ರೋಗ ಲಕ್ಷಣಗಳಿಂದ ಬರುವ ರೋಗಿದಳ ಗುದನಾಳದ ಒಳ ಭಾಗವನ್ನು ತೋರು ಬೆರಳಿನ ಮೂಲಕ ಪರೀಕ್ಷೆ ಮಾಡ ಲೇ  ಬೇಕು ಎಂದು ಶಸ್ತ್ರ ಚಿಕಿತ್ಸಾ ಶಾಸ್ತ್ರದಲ್ಲಿ ಕಲಿಸುವರು . ಆ ಶಾಸ್ತ್ರದ ಜನಪ್ರಿಯ ಪಠ್ಯ ಪುಸ್ತಕ ಬೈಲಿ ಮತ್ತು ಲವ್ ನಲ್ಲಿ If you don’t put your finger in, you might put your foot in it’ ಎಂಬ ಹೇಳಿಕೆ ಇದೆ . 

ಹಿಂದೆ  ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಮೇಲಿನ ಪರೀಕ್ಷಣಗಳನ್ನು ಮಾಡದ ಕಾರಣ  ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಿದ ನಿದರ್ಶನಗಳು ಇವೆ . 

ಹೊಟ್ಟೆಯ ಕಾಯಿಲೆಗಳು ಎದೆಯಲ್ಲಿಯೂ ಮತ್ತು ಎದೆಯ ಕಾಯಿಲೆ ಹೊಟ್ಟೆಯಲ್ಲಿಯೂ ರೋಗ ಲಕ್ಷಣ ಉಂಟು ಮಾಡಬಲ್ಲವು . ಆದುದರಿಂದ ವೈದ್ಯರು ರೋಗಿ ಹೇಳದಿದ್ದರೂ ಎರಡನ್ನೂ ಪರೀಕ್ಷೆ ಮಾಡುವರು .

ಇದೇ  ರೀತಿ ತಲೆ ನೋವು ಎಂದು ಬಂದವರ ಕಾಲು ಕೂಡಾ ಪರೀಕ್ಷೆ ಮಾಡ ಬೇಕಾಗಿ ಬರ ಬಹುದು . ವೈದ್ಯರನ್ನು ತಪ್ಪು  ತಿಳಿಯ ಬಾರದು . 

ಬಾಲಂಗೋಚಿ :ವೈದ್ಯಕೀಯ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ  ರೋಗಿಯನ್ನು ಕೊಟ್ಟು ಪರೀಕ್ಷೆ  ಮಾಡಿ ಡಯಗ್ನೋಸಿಸ್  ಮಾಡಲು ಹೇಳುವರು  . ಇಲ್ಲಿ ರೋಗದ ಇತಿಹಾಸ ಪಡೆದು ಕೊಳ್ಳುವ ರೀತಿ , ಪರೀಕ್ಷಾ ವಿಧಾನ ,ಮತ್ತು  ರೋಗ ನಿಧಾನ ಎಲ್ಲದಕ್ಕೂ  ಅಂಕಗಳು ಇವೆ . ಮೊದಲು ಪರೀಕ್ಷೆ  ಆದ ವಿದ್ಯಾರ್ಥಿಗಳಿಂದ ಕೆಲವು  ಕ್ಲ್ಯೂ  ನಂತರದವರು  ಕೇಳಿ  ತಿಳಿಯುವರು ,ಏನು  ಕೇಸ್ ಇಟ್ಟಿದ್ದಾರೆ   ಏನೇನು ಪ್ರಶ್ನೆ ಕೇಳುತ್ತಾರೆ ಇತ್ಯಾದಿ . ಒಂದು ಪರೀಕ್ಷೆ ಯಲ್ಲಿ  ಮುಖ್ಯ ಕೇಸ್  ಮೆದುಳಿನಲ್ಲಿ  ರಕ್ತ ಹೆಪ್ಪುಗಟ್ಟುವುಕೆ ಯಿಂದ  ಬಲ ಭಾಗದ ಪಾರ್ಶ್ವ  ವಾಯು ಆಗಿದ್ದ ರೋಗಿ .ಅವನಿಗೆ  ಕಾಕತಾಳೀಯವಾಗಿ   ವೃಷಣ ಚೀಲದ ನೀರು (Hydrocele ) ಕೂಡಾ ಇತ್ತು .ಸಾಮಾನ್ಯವಾಗಿ ಇಂತಹ ಕೇಸ್ ನಲ್ಲಿ ನಾವು ವೃಷಣ ಪರೀಕ್ಷೆ ಮಾಡುವುದಿಲ್ಲ . ಮೊದಲು ಪರೀಕ್ಷೆ ಆದ  ವಿದ್ಯಾರ್ಥಿಗಳು ಅಲ್ಲಿ ಬಲ ಬದಿ ಪ್ಯಾರಾಲಿಸಿಸ್  ಕೇಸ್ ಇಟ್ಟಿದ್ದಾರೆ ,ಅವನಿಗೆ ಹೈಡ್ರೋಸೀಲ್ ಕೂಡಾ ಇದೆ ,ನೋಡಲು ಮರೀ  ಬೇಡ ಜಾಗ್ರತೆ ಎಂದು ನಂತರ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ  ಎಚ್ಚರಿಸುತ್ತಾರೆ . ಮರುದಿನ  ಆ ರೋಗಿಯನ್ನು ಬದಲಿಸಿ ಬೇರೆ ವ್ಯಕ್ತಿಯನ್ನು ಇಟ್ಟಿದ್ದರು,ಅವನಿಗೂ  ಬಲ  ಬದಿ ಪಾರ್ಶ್ವ ವಾತ .ನರಾಂಗದ ಮುಖ್ಯ ಪರೀಕ್ಷೆ ಆದ  ಮೇಲೆ ಮರೆಯದೇ  ವೃಷಣ ಪರೀಕ್ಷೆ ಮಾಡಿದ  ಹುಡುಗನಿಗೆ ಅಲ್ಲಿ  ನೀರು ತುಂಬಿದ್ದು ಕಾಣದೆ ನಿರಾಶೆ .  ಪರೀಕ್ಷಕರು  ಅವನ ಪ್ರೆಸೆಂಟೇಷನ್ ಎಲ್ಲಾ  ಕೇಳಿ ವಾಟ್ ಐಸ್ ಯುವರ್ ಡೈಗನೊಸಿಸ್ ?ಎಂದು ಕೇಳಲು ಸರ್ It is a case of stroke with right hemipareris (ಬಲಬದಿ ಪಾರ್ಶ್ವವಾತ) without hydrocele ಎಂದುಉತ್ತರಿಸಿದಾಗ ಪರೀಕ್ಷಕರು ತಬ್ಬಿಬ್ಬು.

ಶನಿವಾರ, ಮೇ 7, 2022

ಪಂಜಾಜೆ ರಾಮ ಭಟ್

                              


                                     ಜನನ   22.01.1934                   ನಿಧನ  02.05.2022

                                                 



                                               ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ,
                                               ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ.”

            ಎಂಟನೇ ತರಗತಿಯಲ್ಲಿ ಇರಬೇಕು .ಬಿ ಎಂ ಶ್ರೀ ಅವರ ಮೇಲಿನ  ಸಾಲುಗಳು ಇರುವ ಕವನ ದ  ಅರ್ಥ ವಿಶ್ಲೇಷಣೆ ಮಾಡಲು ಪರೀಕ್ಷೆಯಲ್ಲಿ ಪ್ರಶ್ನೆ ಕೇಳಿದ್ದರು . ನಮಗೆ ಪಾಠಕ್ಕೆ ಇಲ್ಲದ (ಪಠ್ಯ ಪುಸ್ತಕ ದಲ್ಲಿ ಇಲ್ಲದ )ಒಂದು ಕವನ ದ  ಬಗ್ಗೆ ಒಂದು ಪ್ರಶ್ನೆ ಎಲ್ಲಾ ಪರೀಕ್ಷೆಯಲ್ಲಿಯೂ ಕೇಳುತ್ತಿದ್ದರು . ನನಗೆ ಆಗ ಇದರ ತಲೆ ಬುಡ ಗೊತ್ತಾಗಲಿಲ್ಲ ಮತ್ತು ಪ್ರಾಮಾಣಿಕವಾಗಿ  ನನಗೆ ಅರ್ಥ ಆಗಿಲ್ಲ ಎಂದೇ ಬರೆದೆ .ನಮ್ಮ ಕನ್ನಡ ಮಾಸ್ಟ್ರು ಪ್ರಸಿದ್ಧ ರಾದ ಪಂಜಾಜೆ ಶಂಕರ ಭಟ್ ಅವರು . ನನ್ನ ಉತ್ತರ ಪತ್ರಿಕೆ ಓದಿ ,ಈ ಹೊಸ (ನವೋದಯ )ಕವಿತೆಗಳು ನನಗೂ ಸರಿ ಅರ್ಥ ವಾಗುವುದಿಲ್ಲ ಎಂದರು . ಒಂದರಿಂದ ಪಿ ಯು ಸಿ ವರೆಗೆ ನನ್ನ ಸಹಪಾಠಿ ಮಿತ್ರ ಪಂಜಾಜೆ ನರಸಿಂಹ ಭಟ್ .(ಈಗ ಬೆಂಗಳೂರಿನಲ್ಲಿ ನೆಲಸಿದ್ದಾರೆ )ಅವರ ಚಿಕ್ಕಪ್ಪ  ರಾಮ ಭಟ್ . ಅವರ ಮೂಲಕ ಮೇಲಿನ ಪದ್ಯದ  ನಿಜ  ಭಾವಾರ್ಥ ನನಗೆ ತಿಳಿಯಿತು . 

ರಾಮ ಭಟ್ ಮೊದಲು ಶಿರಂಕಲ್ಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು . ಆಮೇಲೆ ಪಂಡಿತ ಪರೀಕ್ಷೆ ಉತ್ತೀರ್ಣರಾಗಿ ಪುತ್ತೂರು ವಿಕ್ಟರ್ಸ್ ಹೆಣ್ಣು ಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ  ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು . ಇವರ ವಿಶೇಷ ಎಂದರೆ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಅತೀವ ಆಸಕ್ತಿ ಇದ್ದವರು .ಯಾವಾಗಲೂ  ಒಳ್ಳೆಯ ಪುಸ್ತಕ ಹಿಡಿದು ಗೋಡೆಗೆ ಒರಗಿ  ಕುಳಿತು ಓದಿಕೊಂಡು ಇರುತ್ತಿದ್ದರು ಎಂದು ಮಿತ್ರ  ನರಸಿಂಹ ಹೇಳುವರು . ರಾಮ ಭಟ್ ಅವರ ಅಣ್ಣ  ಶಂಕರ ಭಟ್ ನರಸಿಂಹನ ತಂದೆ .  ನಿವೃತ್ತಿ ನಂತರ ಸುಮಾರು ಏಳು ವರ್ಷ ಬೆಂಗಳೂರಿನಲ್ಲಿ ಅಣ್ಣನ ಜತೆ ಇದ್ದು ಅವರು ತೀರಿ ಕೊಂಡ ಮೇಲೆ ಹರಹರದ ತಮ್ಮ ಮಗನ ಮನೆಗೆ ಹೋಗಿ ಇದ್ದರು .  ಇವರ ಶ್ರೀಮತಿಯವರು ಎಳವೆಯಲ್ಲಿಯೇ ತೀರಿಕೊಂಡ ಆಘಾತವನ್ನು ಕೂಡು ಕುಟುಂಬ  ಸಹನೀಯ ಮಾಡಿತು ಎನ್ನ ಬಹುದು . ಶಂಕರ ಭಟ್ ಮತ್ತು ರಾಮ ಭಟ್ ರಾಮ ಲಕ್ಷ್ಮಣ ರಂತೆ ಇದ್ದವರು . ಬಹಳ ಸಾರಿ  ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಲ್ಲಿ ನಾನೂ ರಾಮ ಭಟ್ಟರೂ ಮುಖಾ ಮುಖಿ ಆದದ್ದು ಇದೆ ಎಂದರೆ ಎಷ್ಟು ಪುಸ್ತಕ ಪ್ರಿಯರು ಎಂದು ಊಹಿಸ ಬಹುದು . ಅವರ ಮನೆಗೆ ಕರ್ಮವೀರ ಮತ್ತು ಕಸ್ತೂರಿ  ಆ ಕಾಲದಲ್ಲಿಯೇ ನಿಯತವಾಗಿ ಬರುತ್ತಿತ್ತು .

ರಾಮ ಭಟ್ ಅವರದು ಗೌರವ ವರ್ಣ ,ಬಹಳ ಚಂದದ ನಗು ಮುಖ ,ಅಷ್ಟೇ ಆಕರ್ಷಕ ಅವರ ಮಾತು . ಅವರ ತರಗತಿಗಳು ಎಂದರೆ ವಿದ್ಯಾರ್ಥಿಗಳಿಗೆ ಹಬ್ಬಗ ಎಂದು ಅನೇಕರು ನೆನಪಿಸಿ ಕೊಳ್ಳುತ್ತಾರೆ . 

ಅಣ್ಣ ಶಂಕರ ಭಟ್  ಮೃದುಭಾಷಿ  ,ಸಜ್ಜನ .ಕೃಷಿಯೊಡನೆ ಕನ್ಯಾನದಲ್ಲಿ ಕರೋಪಾಡಿ ಸೊಸೈಟಿಯ ರೇಷನ್ ಅಂಗಡಿ ಉಸ್ತುವಾರಿ  ನೋಡಿ ಕೊಳ್ಳುತ್ತಿದ್ದು  ಆಮೇಲೆ  ಅಕ್ಕಿ ಮಿಲ್ ಕೂಡಾ ನಡೆಸುತಿದ್ದರು  ಎಂದು ನೆನಪು .ಕೆಲವು ವರ್ಷಗಳ ಹಿಂದೆ ತೀರಿ ಕೊಂಡರು

ಬಾಲಂಗೋಚಿ :ಈಗ ವೃತ್ತಿಗಾಗಿ ಕನ್ನಡ ಆರಿಸಿ ಕೊಳ್ಳುವವರು (ಎಂಎ  ಪಿ ಎಚ್ ಡಿ ಇತ್ಯಾದಿ ಇದ್ದವರೂ ಸೇರಿ )ಕೆಲಸಕ್ಕೆ ಸೇರಿದ ಮೇಲೆ ಭಾಷೆ ಮತ್ತು ಸಾಹಿತ್ಯದಲ್ಲಿ ತೋರುವ ಅನಾಸ್ಥೆ  ಕಂಡಾಗ ಬೇಸರ ಆಗುವುದು

ಗುರುವಾರ, ಮೇ 5, 2022

ಇಳಿದು ಬಾ ತಾಯಿ

ಬಹಳ ಮಂದಿ ತಲೆ ನೋವಿನಿಂದ ಬಳಲುವವರು ತಮಗೆ ಶೀತವೇ ಇತ್ತೀಚಿಗೆ ಆಗುವುದಿಲ್ಲ .ಶೀತವಾಗಿ ಮೂಗಿನಿಂದ ಇಳಿದರೆ ತಲೆ ನೋವು ತನ್ನಿಂದ ತಾನೇ ಕಡಿಮೆ ಆಗುವುದು .ಆದ ಕಾರಣ ಶೀತವಾಗಲು ಮದ್ದು ಕೊಡಿ ಎಂದು ಕೇಳುತ್ತಾರೆ . 

ಇದು ಸ್ವಲ್ಪ ನಿಜ ಇರ  ಬಹುದು .ನಮ್ಮ ಮೂಗಿನ ಸುತ್ತ ಮುತ್ತ ಎಲುಬಿನಲ್ಲಿ ಪ್ಯಾರಾ ನೇಸಲ್ (ನಾಸಿಕ ಕ್ಕೆ ಹೊಂದಿಕೊಂಡ )ಸೈನಸ್ ಎಂಬ  ಖಾಲಿ ಜಾಗ  ಇರುತ್ತವೆ . ನಮ್ಮ ಸ್ವರಕ್ಕೆ ವಿಶೇಷ ಗುಣ ಕೊಡುವುದು(ಮ್ಯೂಸಿಕ್ ಸಿಸ್ಟಮ್ ನ ಟೊಳ್ಳು ಸ್ಪೀಕರ್ ಪೆಟ್ಟಿಗೆಯಂತೆ  ) ಮತ್ತು ಮೂಗನ್ನು ಆರ್ದ್ರವಾಗಿ ಇಟ್ಟುಕೊಳ್ಳುವ ದ್ರವ ಉತ್ಪತ್ತಿ  ಇವುಗಳ ಕಾರ್ಯ . ಎಲ್ಲಾ ಸೈನಸ್ ಗಳು ನಾಳಗಳ ಮೂಲಕ ಮೂಗಿಗೆ ಸಂಪರ್ಕ ಪಡೆದಿವೆ . ಶೀತ  ಆದಾಗ ಈ ನಾಳಗಳು  ಮುಚ್ಚಿ ಸೈನಸ್ ಗಳಲ್ಲಿ ಉತ್ಪತ್ತಿ ಆದ  ದ್ರವ್ಯ ಹೊರ ಹೋಗಲು ಸಾಧ್ಯವಿಲ್ಲದೆ ಅಲ್ಲಿಯೇ ತುಂಬಿ ಮತ್ತು ಕೆಲವೊಮ್ಮೆ ಬ್ಯಾಕ್ಟೀರಿಯಾ ಸೋಂಕು ಹೊಂದಿ ನೋವು ಉಂಟು ಮಾಡ ಬಹುದು .ಇದಕ್ಕೆ ಸೈನುಸೈಟಿಸ್ ಎನ್ನುತ್ತಾರೆ . ಇಲ್ಲಿ ಕಫ ಇಳಿದರೆ ತಲೆನೋವು ಕಡಿಮೆ ಆಗುವ ಸಾಧ್ಯತೆ ಇದೆ 

ಇದು ಬಿಟ್ಟರೆ  ಸೋಂಕೇತರ ಕಾರಣಗಳಲ್ಲಿ  ತಲೆ ನೋವು ಬರುವದು ಸಾಮಾನ್ಯಾಗಿ ಉದ್ವೇಗದ ತಲೆನೋವು (ಟೆನ್ಶನ್ ಟೈಪ್ )ಮತ್ತು ಮೈ ಗ್ರೇನ್ . ನಮ್ಮಲ್ಲಿ  ಶೀತ ಇಳಿದು ಹೋಗುವುದಿಲ್ಲ ಎಂದು ಬರುವವರು ಈ ವರ್ಗದವರು ,. ಇದಕ್ಕೂ ಶೀತಕ್ಕೂ ಯಾವ ಸಂಬಂಧವೂ ಇಲ್ಲ . ಅದಕ್ಕೆ ಯೋಗ್ಯ ಔಷಧಿಗಳು ಇವೆ . 

ಶೀತ ಉಂಟು ಮಾಡಲು ನಮ್ಮಲ್ಲಿ ಮದ್ದು ಇಲ್ಲ .ನಾನು ಹಾಗೆ ಕೇಳಿ ಕೊಳ್ಳುವವರಲ್ಲಿ  'ಇಳಿದು ಬಾ ತಾಯಿ ಇಳಿದು ಬಾ  ನನ್ನ ಮೂಗಿಂದ ,ಬದಿಯ ಸೈನಸ್ ನಿಂದ ಇಳಿದು ಬಾ "ಎಂದು ಹಾಡಿರಿ ಎನ್ನುವೆನು .

Definition of paranasal sinus - NCI Dictionary of Cancer Terms - NCI


 

ವಿವಾಹ ಒಂದು ಚಿಂತನೆ

 ಕೆಲ  ತಿಂಗಳ ಹಿಂದೆ ನನ್ನೊಂದಿಗೆ ಕೆಲಸ ಮಾಡುತ್ತಿದ್ದ  ಯುವ ವೈದ್ಯೆ ಕಾಣ ಸಿಕ್ಕಿದರು .ವರ್ಷ ಹಿಂದೆ ಅವರ ಮದುವೆಗೆ ಹೋಗಿದ್ದೆ .ಈ ಬಾರಿ ಸಿಕ್ಕಿದಾಗ ಲೋಕಾಭಿರಾಮವಾಗಿ ಹೇಗಿದೆ ವೈವಾಹಿಕ ಜೀವನ ?ಎಂದು ವಿಚಾರಿಸಲು ನಮ್ಮದು ದೈವೋರ್ಸ್ ಆಯಿತು ಎಂದರು .ಯಾಕಾದರೂ ಕೇಳಿದೆನೋ ಎಂದು ವಿಷಯ ಬದಲಿಸಿ ಕೆಲ ಹೊತ್ತು ಮಾತನಾಡಿದೆ . ಇದು ನನ್ನ ಮೊದಲನೇ ಅನುಭವ ಅಲ್ಲ . ಗಂಡ ಹೆಂಡತಿ ಬೇರೆ ಆಗುವ ಹಲವು ನಿದರ್ಶನ ಇತ್ತೀಚೆಗೆ ಕಂಡಿದ್ದೇನೆ . ಕೆಲವು ಮಕ್ಕಳಾದ ನಂತರ ,ಹಲವು ಅದಕ್ಕಿಂತ ಮೊದಲೇ . ಇನ್ನು ಕೆಲವು ಸಂಬಂಧಗಳು  ನಿಶ್ಚಿತಾರ್ಥ ಆದ ಮೇಲೆ ಮುರಿದಿವೆ .ಇದು ಆದರೂ ಸ್ವಲ್ಪ ಪರವಾಗಿಲ್ಲ ಎನ್ನ ಬಹುದು .

ನೀವು ಗಮನಿಸಿರುವಂತೆ ನಿಶ್ಚಿತಾರ್ಥ ,ಮದುವೆ (ಮದರಂಗಿ ಶಾಸ್ತ್ರ ಇತ್ಯಾದಿ ಸೇರಿ )ಸಮಾರಂಭಗಳು ಇತ್ತೀಚೆಗೆ ಬಹಳ ವೈಭವೇತ ವಾಗಿ ಗೌಜಿ ಗದ್ದಲಗಳಿಂದ ನಡೆಯುತ್ತವೆ .ಹೆಚ್ಚು ಕಡಿಮೆ ನಾವು ವಿದೇಶ . ಉತ್ತರ ಭಾರತ ಮತ್ತು ಹಿಂದಿ ಸಿನೆಮಾ ದಿಂದ ಬಹಳ ಸ್ಪೂರ್ತಿ ಪಡೆದಂತೆ ಕಾಣುತ್ತದೆ . ವಿವಾಹೋತ್ತರ ಸಂಬಂಧ ಹೊಂದಾಣಿಕೆ ಇಲ್ಲದೆ ಶಿಥಿಲ ವಾಗುತ್ತಿದೆ . ಜತೆಗೆ ಕಾವಲು ನಾಯಿ (ವಾಚ್ ಡಾಗ್ )ಗಳಾಗಿ ಹಿರಿಯರೂ ಮಕ್ಕಳ ಜತೆ ಇರುವುದಿಲ್ಲ . ಗಂಡು ಹೆಣ್ಣು ಇಬ್ಬರೂ ಆರ್ಥಿಕವಾಗಿ ಸ್ವಾವಲಂಬಿ ಆಗಿದ್ದು  ಒಬ್ಬರ ಹಂಗಿನಲ್ಲಿ (ಹಾಗೆ ತಿಳಿದರೆ )ಇನ್ನೊಬ್ಬರು ಇರಬೇಕಾಗಿಲ್ಲ .

 ನಮ್ಮಂತಹ ಹಳೆಯ ತಲೆಮಾರಿನವರಿಗೆ ಇದೊಂದು ಸಮಸ್ಯೆ ಎಂದು ತೋರಿದರೆ ಇಂದಿನ ಜನಾಂಗಕ್ಕೆ ಇದುವೇ ಸರಿ ಎನಿಸ ಬಹುದು .ಮೂರು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಪ್ರಸಿದ್ದ ಕತೆಗಾರ ಸಾಹಿತಿ ಯವರೊಡನೆ  ಸಂವಾದ ಕಾರ್ಯಕ್ರಮದಲ್ಲಿ  ನಿವೃತ್ತ ಪ್ರಾಧ್ಯಾಪಿಕೆ ಒಬ್ಬರು ಈ ಗಂಭೀರ ಸಮಸ್ಯೆ ಬಗ್ಗೆ  ಅವರ ಅಭಿಪ್ರಾಯ ಕೇಳಲು "ಇದು ಒಳ್ಳೆಯ ಬೆಳವಣಿಗೆ ,ಪರಸ್ಪರ ಹೊಂದಾಣಿಕೆಯಿಲ್ಲದೆ ಜೀವನ ಪರ್ಯಂತ ಕೊರಗುತ್ತ ಬದುಕುವುದಕ್ಕಿಂತ ಬೇರೆ ಬೇರೆ ಆಗುವುದೇ ಲೇಸು ಅಲ್ಲವೇ ?" ಎಂದು ಉತ್ತರಿಸಿದರು .ಪ್ರಶ್ನೆ ಕೇಳಿದವರು ನಿರೀಕ್ಷಿಸಿದ್ದ ಉತ್ತರ ಅದಲ್ಲ .

ಹಿಂದೆ ಗಂಡ ಹೆಂಡಿರು ಪರಸ್ಪರ ಋಣಾತ್ಮಕ ವಿಚಾರಗಳನ್ನು ಸರಿ ತೂಗಿಸಿ ,ಆದಷ್ಟು ಹೊರಗೆ ಪ್ರಕಟ ಪಡಿಸದೆ ದಾಂಪತ್ಯ ಜೀವನ ನಡೆಸುತ್ತಿದ್ದರು .ನನ್ನ ಬಂಧು ಓರ್ವ ಹಿರಿಯ ಮಹಿಳೆಯ ಗಂಡ ಶೀಘ್ರ ಕೋಪಿ ;ಈಕೆಯಾದರೋ ಅವರಿಗೆ ಹೊಂದಿ ಕೊಂಡು ಹೋಗುವರು .ನೆಂಟರು ಇಷ್ಟರೊಡನೆ ತಮ್ಮ ಗಂಡನ ಕೋಪವನ್ನೇ ಒಂದು ಸದ್ಗುಣ ಎಂದು ಹೇಳಿಕೊಳ್ಳುವರು .(ಎಂತ ಕೋಪ ಇವರಿಗೆ ,ಸಿಟ್ಟು ಬಂದರೆ ದೂರ್ವಾಸರೇ ಇತ್ಯಾದಿ ).ಜೀವನವಿಡೀ ತಗ್ಗಿ ಬಗ್ಗಿ ನಡೆದು ಇಳಿ ವಯಸ್ಸಿನಲ್ಲಿ ಅಮೆರಿಕಾ ದಲ್ಲಿ ಇರುವ ಮಗನ ಮನೆಗೆ ಹೋಗಿ ಇದ್ದು ಬಂದರು .ಅಲ್ಲಿ ಮಗ ಹೆಂಡತಿಗೆ ಕೊಡುವ ಗೌರವ ,ಮಾಡುವ ಸಹಾಯ ,ಮತ್ತು ಹೊರಗಡೆ ಮಹಿಳೆಯ ಸ್ಥಾನ ಮಾನ ಕಂಡು ಜ್ನಾನೋದಯ ಆದಂತಾಗಿ ತಿರುಗಿ ಬಂದವರು ಸಂಪೂರ್ಣ ಬದಲಾದರು.ಹಿಂದಿನ ಬಾಕಿ ತೀರಿಸಲೋ ಎಂಬಂತೆ ಗಂಡ ಮಾಡದಿದ್ದರೂ ತಪ್ಪು ಕಂಡು ಹುಡುಕಿ ಜಗಳ ಮಾಡ ತೊಡಗಿದರು . ಇವರ ಯಜಮಾನರು ದುಷ್ಟ ರೇನೂ ಅಲ್ಲ .ಬಾಲ್ಯದಲ್ಲಿಯೇ ತಂದೆಯನ್ನು ಕಳೆದು ಕೊಂಡು ,ತಮ್ಮ ಮನೆಯನ್ನು ಮತ್ತು ತಮಗಿಂತಲೂ ಕಷ್ಟದಲ್ಲಿ ಇದ್ದ ಸಮೀಪದ ಬಂಧುಗಳ ಜೀವನ ವನ್ನು (ಅಗೆಲ್ಲಾ ಬಂಧು ಮಿತ್ರರಿಗೆ ಸಂಕಷ್ಟದಲ್ಲಿ ಸಹಾಯ ಮಾಡುವುದು ಧರ್ಮ ಆಗಿತ್ತು )ಒಂದು ನೆಲೆಗೆ ತರುವ ಜವಾಬ್ದಾರಿ ಹೊತ್ತಿದ್ದರು .

ಬದಲಾವಣೆ ಗಂಡತಿ ಸಂಬಂಧಕ್ಕೆ ಸೀಮಿತವಾಗಿ ಇಲ್ಲದೆ ಹೆತ್ತವರು -ಮಕ್ಕಳು ,ಗುರು- ಶಿಷ್ಯರು ,ವೈದ್ಯ- ರೋಗಿ ಮತ್ತು ವ್ಯಾಪಾರಿ ಗಿರಾಕಿಗಳ ಸಂಬಂಧದಲ್ಲಿ ಕೂಡಾ ಬಹಳ ಆಗಿದೆ .ತಮ್ಮ  ತಮ್ಮ ಧರ್ಮದ ವ್ಯಾಖ್ಯೆ ಯಿಂದ ಪರಾಂಬಿಸಿದರೆ ಇವು ಅಧಾರ್ಮಿಕ ಎಂದು ಕಾಣುತ್ತವೆಯಾದರೂ . ಧರ್ಮದ ಅಂತಃಸತ್ವದ ಆಚರಣೆಗಿಂತಲೂ ಧಾರ್ಮಿಕತೆಯ ಪ್ರದರ್ಶನ ವೇ ಮುಖ್ಯವಾಗಿ ರುವ  ಮತ್ತು   ಮರೆತು ಪರಸ್ಪರ ಕಾದಾಡಿ ಸಂಬಂದಗಳನ್ನು ಮುರಿಯಲು ಧರ್ಮಕ್ಕೆ ಸಿಗುವ ಆಯುಧ ವಾಗಿರುವಾಗ ಇವುಗಳ ಬಗ್ಗೆ ಯೋಚಿಸಲು ಸಮಯ ವ್ಯವಧಾನ ಎಲ್ಲಿ ?

ಸೋಮವಾರ, ಮೇ 2, 2022

ಡಾ ಸುಬ್ಬರಾಯರ ನೆನಪು

ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಸೂರಿ ಕುಮೇರು ಗೋವಿಂದ ಭಟ್ ಅವರ ಎಪ್ಪತ್ತು ತಿರುಗಾಟಗಳು ಸಮೀಪದಲ್ಲಿ ಓದಿದ್ದೆ . ಬಾಲ್ಯದಲ್ಲಿ ಅನ್ನ ಸಂಪಾದನೆಗಾಗಿ ಮೇಳ ಸೇರಿದ ತನಗೆ ಒಂದು ವರ್ಷ ತಿರುಗಾಟ ಮುಗಿದ ಮೇಲೆ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಬಂದಾಗ  ಮಂಜೇಶ್ವರ ದ  ಡಾ ಸುಬ್ಬ ರಾವ್ ಅವರ ಮನೆಯಲ್ಲಿ ಆಶ್ರಯ ಸಿಕ್ಕಿದ ಬಗ್ಗೆ ,ಡಾಕ್ಟರು ಮತ್ತು ಅವರ ಶ್ರೀಮತಿ ಮನೆಯ ಮಗನಂತೆಯೇ ತನ್ನನ್ನು ನೋಡಿಕೊಂಡುದು ಮತ್ತು ತಮ್ಮ ಮಕ್ಕಳಿಗೆ ನಾಟ್ಯ ಕಲಿಸುವಾಗ ತಮ್ಮನ್ನೂ ಸೇರಿ ಕೊಳ್ಳುವಂತೆ ಹೇಳಿದುದ ಬಗ್ಗೆ ಕೃತಜ್ಞತಾ ಪೂರ್ವಕ ಬರೆದಿದ್ದಾರೆ . 

ಅವರ ಮಾತುಗಳಲ್ಲಿಯೇ ಹೇಳುವುದಾದರೆ 

"ಕೂಡ್ಲು ಮೇಳದ ಆರಂಭದ ದಿನ ಡಾ ಸುಬ್ಬರಾಯರಿಗೆ ,ಅವರ ಹೆಂಡತಿಗೆ  ನಮಸ್ಕರಿಸಿ ಹೊರಡುವಾಗ ಇಪ್ಪತ್ತೈದು ರೂಪಾಯಿ ಮತ್ತು  ಒಂದು ಜತೆ ಅಂಗಿ ಚಡ್ಡಿಯನ್ನು ಕೊಟ್ಟು ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ ಎಂದು ಹರಸಿದರು .ನಾನೊಂದು ವರ್ಷ ಅಲ್ಲಿಯೇ ಇದ್ದರೆ ಒಬ್ಬ ಕಮ್ಯುನಿಸ್ಟ್ 'ಆಗುತ್ತಿದ್ದೆನೇನೋ .ಆಗೆಲ್ಲಾ ಕಮ್ಯೂನಿಸಂ ಎಂದರೆ ಏನೆಂದು ನನಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ .ಆದರೆ ಬಡವ -ಶ್ರೀಮಂತ ಎಂಬ ಆರ್ಥಿಕ ತಾರತಮ್ಯದ ಬಿಸಿ ನನಗೆ ತಟ್ಟಿತ್ತು .ಯಾಕೆಂದರೆ ಆ ಕಾಲದಲ್ಲಿ ಮನುಷ್ಯನಿಗೆ ಸ್ಥಾನಮಾನ ಬೆಲೆ ಸಿಗುತ್ತಿತ್ತುದು ಅವನ ಸಾಮಾಜಿಕ ಸ್ಥಾನ ಮಾನದಿಂದಾಗಿ .ಮನುಷ್ಯನನ್ನು ಅಳೆಯುತ್ತಿದ್ದಿದುದೇ ಅವನ ಆರ್ಥಿಕ ಸ್ಥಿತಿ ಗತಿಯನ್ನು ನೋಡಿ .ಹೀಗಾಗಿ ಶೋಷಣೆಯನ್ನು ಒಪ್ಪದ ,ಖಾಸಗಿ ಒಡೆತನವನ್ನು ನಿರಾಕರಿಸುವ .ಸಮಾಜದ ಅಸ್ತಿ ಎಂಬು'ದು ಎಲ್ಲ ಸಮುದಾಯಕ್ಕೂ ತಲುಪಲಿ ಎಂಬ ಮೂಲ ಆಶಯದ ಕಮ್ಯೂನಿಸಂ ಬಗ್ಗೆ ನನಗೆ ಬೆರಗು ಹುಟ್ಟಿದ್ದು ಸುಳ್ಳಲ್ಲ .ಇಂದು ಕಮ್ಯೂನಿಸಂ ನ್ನು  ಅರ್ಥೈ ಸುವ ರೀತಿಯೇ ಬೇರೆ .ಕಮ್ಯೂನಿಸಂ ನ್ನ ಅರ್ಥವನ್ನು ಸರಿಯಾಗಿ ತಿಳಿಯದೆ .ಕಮ್ಯೂನಿಸಂ ನ್ನು ಓದದೇ ,ಕಮ್ಯುನಿಸ್ಟರೆಂದರೆ ದೇವರು -ಧರ್ಮವನ್ನು ಒಪ್ಪದ ನಾಸ್ತಿಕರೆಂದೋ ಭಾವಿಸಲಾಗಿದೆ .ಆದರೆ ಭಾರತೀಯ ಅನೇಕ ನಿಜ ಕಮ್ಯೂನಿಸ್ಟರು ಗಾಢ ಆಧ್ಯಾತ್ಮಿಕ ಒಲವುಳ್ಳವರು ಎಂಬ ಸಂಗತಿ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ .'ನನ್ನ ಹಾಗೆ ಎಲ್ಲರೂ 'ಎಂದು ಭಾವಿಸ ಬೇಕೆಂದು ಹೇಳುವ ಕಮ್ಯೂನಿಸಂ ನಲ್ಲಿ ಏನು ದೋಷವಿದೆಯೆಂದು ನನಗೆ ಗೊತ್ತಿಲ್ಲ ..'ನನ್ನ ನೋವು ಸಮಾಜದ ನೋವು 'ಎಂದು ತಿಳಿಯುವದಕ್ಕಿಂತ ದೊಡ್ಡ ಅಧ್ಯಾತ್ಮ ಏನಿದೆ ?"

 ಡಾ ಸುಬ್ಬರಾವ್ ೧೯೧೯ ರಲ್ಲಿ ಜನಿಸಿದರು .ಅವರ ತಂದೆ ಡಾ ಕೃಷ್ಣಯ್ಯ . ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಇದ್ದ ಡಾ ಸುಬ್ಬ ರಾವ್ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧಿಸಲ್ಪಟ್ಟು ಮೂರು ವರ್ಷ  ಆಲಿ ಪೂರ್ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದರು . ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದ ಇವರು ವೈದ್ಯಕೀಯ ವೃತ್ತಿಯೊಡನೆ ಸಮಾಜ ಮುಖಿ ಕಾರ್ಯಗಳಲ್ಲಿ ಕೂಡಾ ತೊಡಗಿಸಿ ಕೊಂಡಿದ್ದರು ..ಮಂಜೇಶ್ವರ ಸಹಕಾರಿ ಸಂಘ ಮತ್ತು ಬೀಡಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರೂ ಆಗಿದ್ದರು .ಕಾರ್ಮಿಕ ಮತ್ತು ರೈತ ಸಂಘಟನೆ ಯಲ್ಲಿ ಸಿದ್ದ ಹಸ್ತರಾಗಿದ್ದ ಇವರು "ಜನತಾ ರಂಗ ಭೂಮಿ "ಎಂಬ ಸಾಂಸ್ಕೃತಿಕ ಕೂಟದ ರೂವಾರಿ ಆಗಿದ್ದರು ..೧೯೫೮ ರಿಂದ ೧೯೬೪ ವರೆಗೆ ರಾಜ್ಯ ಸಭಾ ಸದಸ್ಯ ರಾಗಿದ್ದರು 25-1-1980 ರಿಂದ  20-10-1981 ವರೆಗೆ  ಈ ಕೆ ನಾಯನಾರ್ ಮಂತ್ರಿ ಮಂಡಲ ದಲ್ಲಿ ಮಂತ್ರಿ ಯಾಗಿದ್ದು , ೬ ಮತ್ತು ೭ ನೇ ಕೇರಳ ವಿಧಾನ ಮಂಡಲದಲ್ಲಿ ಮಂಜೇಶ್ವರ ಮಂಡಲದಿಂದ  ಶಾಸಕ ರಾಗಿ ಆಯ್ಕೆ ಆಗಿದ್ದರು . ಕಲ್ಲಿಕೋಟೆ ವಿಶ್ವ ವಿದ್ಯಾಲಯ ಸೆನೆಟ್ ನಲ್ಲಿ ಭಾಷಾ ಅಲ್ಪ ಸಂಖ್ಯಾತ ರನ್ನು ಪ್ರತಿನಿಧಿಸಿ ಕಾಸರಗೋಡು ಪ್ರದೇಶ ದಲ್ಲಿ ಕನ್ನಡ ಭಾಷೆ ಭೋಧನೆ ಗೆ  ಪ್ರೋತ್ಸಾಹ ಸಿಗುವಂತೆ ನೋಡಿಕೊಂಡರು . ಮಂಜೇಶ್ವರ ಗೋವಿಂದ ಪೈ ಕಾಲೇಜ್ ಸ್ಥಾಪನೆ ಇವರ ಕಾಲದಲ್ಲಿಯೇ ಆಯಿತು .ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ದುಡಿದ ವ್ಯಕ್ತಿ ಎಂದು ಜನರು ಈಗಲೂ ನೆನಪಿಸಿ ಕೊಳ್ಳುತ್ತಾರೆ .

      14.9.2003 ರಲ್ಲಿ ನಿಧನ ಹೊಂದಿದರು .
                                                        



ಆತ್ಮೀಯ ಅವಿಸ್ಮರಣೀಯ


                   ಆತ್ಮೀಯ  ಅವಿಸ್ಮರಣೀಯ 

              
                                        







                                            

                                               

                                            

                                                    

                                                



                     ನಿನ್ನೆ ಕಯ್ಯಾರಿನ ಡಾ ಕೆ ಪಿ ಹೊಳ್ಳರ ಮೂಲ ಮನೆಯಲ್ಲಿ ಸಂಭ್ರಮ ದ  ವಾತಾವರಣ . ಶ್ರದ್ಧಾ ಭಟ್ ನಾಯರ್ಪಳ್ಳ ಸಂಪಾದಿಸಿದ  "ವೈದ್ಯಯೋಗಿ ಪ್ರಭಾಕರ ಹೊಳ್ಳ " ಕೃತಿ ಬಿಡುಗಡೆ . ಡಾ ಹೊಳ್ಳರ ಒಡನಾಡಿಗಳು  ಬಂಧುಗಳು ಮತ್ತು ಸಹೋದ್ಯೋಗಿಗಳು ತುಂಬಿದ್ದು ಹಬ್ಬದ ವಾತಾವರಣ . 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಪ್ರಸಿದ್ಧ ವೈದ್ಯರೂ ಕೂಟ ಮಹಾ ಜಗತ್ತಿನ ಅಧ್ಯಕ್ಷರೂ ಆದ  ಡಾ ಕೆ ಎಸ ಕಾರಂತರು  ಡಾ ಕೆ ಪಿ ಹೊಳ್ಳರ ವೈದ್ಯಕೀಯ ಹೋರಾಟದ ಸಂಘಟನಾ ಚತುರತೆ ಮತ್ತು ನಾಯಕತ್ವ ವನ್ನು    ಉದಾಹರಣೆ ಸಹಿತ  ತಿಳಿಸಿದರು . 

ಕಾಸರಗೋಡಿನ ಹಿರಿಯ ತಜ್ಞ ವೈದ್ಯ ಡಾ ಬಿ ಎಸ ರಾವ್  ತಮ್ಮ ವಿದ್ಯಾರ್ಥಿ ಜೀವನ ಮತ್ತು ತದನಂತರ ಡಾ ಹೊಳ್ಳರು ತಮಗೆ ನೀಡಿದ ಮಾರ್ಗದರ್ಶನ ಮತ್ತು ಮಾಡಿದ ಸಹಾಯ ಬಗ್ಗೆ ವಿವರಿಸಿ ,ಹೊಳ್ಳರ ಸಹಾಯ ಇಲ್ಲದಿದ್ದರೆ ತಾನು ಎಂ ಡಿ ಅಧ್ಯಯನ ಅರ್ಧಕ್ಕೆ ನಿಲ್ಲಿಸ ಬೇಕಾಗುತ್ತಿತ್ತು ಎಂದರು .ಹೊಳ್ಳರ ಸಹೋದರ ನಿವೃತ್ತ ನ್ಯಾಯಾಧೀಶ ಶ್ರೀ ರಾಧಾಕೃಷ್ಣ ಕಾರಂತ ಅವರು ಅಣ್ಣ ತನ್ನ  ವೃತ್ತಿ ಜೀವನ ರೂಪಿಸುವುದರಲ್ಲಿ ಅಣ್ಣನ ಪಾತ್ರ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆ ಯಿಂದ ವಿವರಿಸಿದರು . ಉತ್ತರಾಖಂಡ ದಲ್ಲಿ    ಸೇವೆ ಸಲ್ಲಿಸುತ್ತಿರುವ ಮಗಳು ಡಾ ಸಂಧ್ಯಾ ಅಪ್ಪನ  ಶಿಸ್ತು ,ಪ್ರೋತ್ಸಾಹ ಮತ್ತು ಧನಾತ್ಮಕ ಚಿಂತನೆಗಳ ಬಗ್ಗೆ ತಿಳಿಸಿದರು . 

ಅಧ್ಯಕ್ಷ ಸ್ಥಾನ ವಹಿಸಿದ್ದ ಈ ಕೃತಿ ರಚನೆಯ ಪ್ರೇರಕ ಹಿರಿಯ ವೈದ್ಯ ,ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಡಾ ರಮಾನಂದ ಬನಾರಿ ,ಹೇಗೆ ಡಾ ಹೊಳ್ಳರು ಒಬ್ಬ ವೈದ್ಯ ಯೋಗಿ ಮತ್ತು  ಕರ್ಮ ಯೋಗಿ ಎಂದು ತಿಳಿಸಿದರು . ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ ಸ್ಥಾಪಿಸಿ ನಡೆಸಿದ ಸಾಹಸ ,ಕಾಸರಗೋಡು ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ . ವೈದ್ಯಕೀಯ ಸಂಘಟನೆ ,ಲಯನ್ಸ್ ಕ್ಲಬ್ ,ಕೂಟ ಮಹಾ ಜಗತ್ತಿನ ಕಾರ್ಯಗಳು ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯ ಇವರ ಸಾಧನೆ . ತನಗೆ ಒಬ್ಬ ಅಣ್ಣನಿದ್ದಂತೆ ಎಂದು ಮನತುಂಬಿ ಹೇಳಿದರು . 

ಕೊನೆಗೆ ಡಾ ಹೊಳ್ಳರು ತಮ್ಮ ಸಾಧನೆಯಲ್ಲಿ ತಮ್ಮ ಪತ್ನಿ ಡಾ ಸುಮತಿ ಹೊಳ್ಳ ,ಮಾತಾ ಪಿತರು ,ಸಿಬ್ಬಂದಿ ಮತ್ತು ಸಹೋದ್ಯೋಗಿಗಳ ಬೆಂಬಲ ವನ್ನು ಸಮಯೋಚಿತವಾಗಿ ನೆನೆದರು

              ನಾನು ಉಪ್ಪಳ ಬಿಟ್ಟು ಹಲ ವರ್ಷಗಳು ಆದರೂ  ಬಂದವರೆಲ್ಲಾ ಆತ್ಮೀಯತೆಯಿಂದ ಗುರುತಿಸಿ ಪ್ರೀತಿಯಿಂದ ಮಾತನಾಡಿಸಿದಾಗ ಸಣ್ಣ ಊರುಗಳಲ್ಲಿ ಹೃದಯ ಮತ್ತು ಮನಸು ದೊಡ್ಡದು ಇರುತ್ತದೆ ಎಂದು ಖಾತರಿ ಆಯಿತು ..ಉಪ್ಪಳ ಕೆ ಏನ್ ಎಚ್ ಆಸ್ಪತ್ರೆಗೆ ಸಂದರ್ಶನಕ್ಕೆ ಬರುತಿದ್ದ ಕಣ್ಣಿನ ವೈದ್ಯ ಡಾ ಮಯ್ಯ ,ಹೊಸಂಗಡಿ ಯ ಡಾ ಶಿವರಾಂ ಇವರು ವರ್ಷಗಳ ಬಳಿಕ ಅದೇ ಪ್ರೀತಿಯಿಂದ ಕಂಡರು .ಎಲ್ಲಕಿಂತ ಹೆಚ್ಚು ಕೆ ಏನ್ ಎಚ್ ಆಸ್ಪತ್ರೆಯ ಶ್ರೀಮತಿ ಸುಮತಿ ಮತ್ತು ಕಸ್ತೂರಿ ಯವರ ಭೇಟಿ  ನನಗೆ ನನ್ನ ಉಪ್ಪಳದ ಸೇವೆ ದಿನಗಳ ಸವಿ   ನೆನಪುಗಳನ್ನು ತಂದಿತು . 

ಬಾಲಂಗೋಚಿ : ಕರ್ನಾಟಕ ಗಡಿ ದಾಟಿ ಕೇರಳ   ಪ್ರವೇಶಿಸಿದ ಒಡನೇ ಎಷ್ಟು ಸುಂದರ ಅಗಲ  ರಸ್ತೆಗಳು ಮತ್ತು ಚಂದದ ದೊಡ್ಡದಾದ ನಾಮ ಫಲಕಗಳು . 

ಭಾನುವಾರ, ಮೇ 1, 2022

ಸೇವಾ ಧನ್ವಂತರಿ ರಾಮ ದ್ವಯರು

ನಮ್ಮೂರಿಗೆಲ್ಲಾ ವಿಟ್ಲವೇ ದೊಡ್ಡ ಪೇಟೆ ಆಗಿತ್ತು .ಪೆರ್ಲ,ಆನೆಕಲ್ಲು ಮತ್ತು ಈ ಕಡೆ ಬಾಯರು ವರೆಗೆ ಹಳ್ಳಿಯ ಜನ ಈ ಪಟ್ಟಣವನ್ನು ಆಶ್ರಯಿಸಿದ್ದು ,ವಿಟ್ಲ ಜಾತ್ರೆ ಸೀಮೆಯ ದೊಡ್ಡ ಜಾತ್ರೆ . ಸಮಾರಂಭಗಳಿಗೆ ನಾಯ್ಕರ ಅಂಗಡಿ ಜೀನಸು ,ಅಪ್ರಾಯರ ಅಂಗಡಿ ಬಟ್ಟೆ .

ರೋಗ ರುಜಿನ ಬಂದಾಗ ವಿಟ್ಲ ಕ್ಕೆ ಕುಪ್ಪಿ ಹಿಡಿದುಕೊಂಡು ಓಡುವುದು. ಹೈ ಸ್ಕೂಲ್ ರಸ್ತೆಯಲ್ಲಿ ಮೂರ್ತಿ ಡಾಕ್ತ್ರ ಷಾಪ್ .ಇವರು ಒಳ್ಳೆಯ ವೈದ್ಯರು ,ನಿಖರ ಡಯಗ್ನೋಸಿಸ್ ,ಆಗಿನ ಎಲ್ಲಾ ವೈದ್ಯರಂತೆ  ಕೈಗೆಟುಕುವ ಫೀಸ್.ಆದರೆ ಅದನ್ನು ವಸೂಲು ಮಾಡುವುದರಲ್ಲಿ ತುಂಬಾ ಕಟ್ಟು ನಿಟ್ಟು . ಬಸ್ ಸ್ಟಾಂಡ್ ಆವರಣದಲ್ಲಿ ಡಾ ಮಂಜುನಾಥ ರೈ ಇದ್ದು ಜನಾನುರಾಗಿ ಆಗಿದ್ದರು .ಮೇಗಿನ ಪೇಟೆಯಲ್ಲಿ ಡಾ ಎಸ್ ಎನ್ ಭಟ್ ಇದ್ದು ತುಂಬಾ ಸಮಾಧಾನ ದವರು ,ಶುದ್ಧ ಆಯುರ್ವೇದ ಪ್ರಾಕ್ಟೀಸ್ . ಇವರೆಲ್ಲಾ ಮಾಡಿದ ಸೇವೆ ನಾವು ನೆನೆಸಿ ಕೊಳ್ಳ ಬೇಕು .ಆಗ ವೈದ್ಯರಲ್ಲಿ ಹೋಗುವಾಗ ಕಿಸೆಯಲ್ಲಿ ಹಣ ಇಲ್ಲದಿದ್ದರೂ  ಹೆಚ್ಚಿನ ವೈದ್ಯರು ಸಾಲ ರೂಪದಲ್ಲಿ ಮದ್ದು ಕೊಡುತ್ತಿದ್ದರು .

 

ವಿಟ್ಲ ಪೇಟೆಯಲ್ಲಿ ಎಂ ಬಿ ಬಿ ಎಸ್ ಮಾಡಿ ಬಂದು ಮೊದಲು ಕ್ಲಿನಿಕ್ ತೆರೆದವರು ಡಾ ರಾಮ ಮೋಹನ್ ಅವರು .ಹೆಸರಿನಂತೆ ಮೋಹಕ ವ್ಯಕ್ತಿತ್ವ . ಉಕ್ಕುಡ ರಸ್ತೆಯಲ್ಲಿ ನಾಯ್ಕರ ಅಂಗಡಿ ಎದುರು ಮಾಳಿಗೆಯಲ್ಲಿ ಅವರ ಷಾಪ್ .ಇವರು ರೋಗಿಗಳ ವೈದ್ಯಕೀಯ ದಾಖಲೆ ಇಡುತ್ತಿದ್ದರು . ಬಹುಬೇಗ ಜನಾನುರಾಗಿ ಆದರು.ಮುಂದೆ ಮಂಗಳೂರು ರಸ್ತೆಗೆ ಮತ್ತು ಆಮೇಲೆ ಈಗ ಇರುವ ಹೈ ಸ್ಕೂಲ್ ರಸ್ತೆಗೆ ಅವರ ಕ್ಲಿನಿಕ್ ಸ್ಥಳಾಂತರ  ಆಯಿತು . ಇವರು ತಮ್ಮ ಪದವಿ ಕೆ ಎಂ ಸಿ  ಮಣಿಪಾಲ್ ನಲ್ಲಿ ಮಾಡಿ ನಂತರ ದೆಹಲಿ ಸಫ್ಧರ ಜಂಗ್ ಆಸ್ಪತ್ರೆ ಯಲ್ಲಿ ರೆಸಿಡೆನ್ಸಿ ಮಾಡಿ ಅನುಭವ ಪಡೆದಿದ್ದು ಉತ್ಸಾಹಿ ಆಗಿದ್ದರು .ಮೈನರ್ ಸರ್ಜರಿ ಮತ್ತು ಡ್ರಿಪ್ ಹಾಕುವುದು ಇತ್ಯಾದಿ ಕ್ಲಿನಿಕ್ ನಲ್ಲಿ ಆರಂಬಿಸಿದ್ದರು . ತಮ್ಮ ವ್ಯಾಪ್ತಿಗೆ ಮೀರಿದ ಕೇಸ್ ಗಳನ್ನು  ಮಂಗಳೂರಿನ ಒಳ್ಳೆಯ ವೈದ್ಯರಲ್ಲಿ  ಕಳುಹಿಸುವುದಲ್ಲದೆ  ಅದರ ಫಾಲೋ ಅಪ್ ಮಾಡುವರು .ವಿಟ್ಲದ ತಮ್ಮ ಕ್ಲಿನಿಕ್ ಗೆ ಪುತ್ತೂರಿನಿಂದ ತಜ್ನ ವೈದ್ಯರನ್ನು ಕರೆಸಿ ಸೇವೆ ಈ ಭಾಗದ ಜನರಿಗೆ ಅವರ ಅನುಭವದ ಲಾಭ ಸಿಗುವಂತೆ ಮಾಡಿದರು .ಕೆಲ ವರ್ಷಗಳ ಹಿಂದೆ ಅವರು ತೀರಿಕೊಂಡಾಗ ಊರಿಗೆ ಊರೇ ಕಣ್ಣೀರು ಮಿಡಿಯಿತು . .ಅವರ ಕ್ಲಿನಿಕ್ ಸಹೋದರ ಮತ್ತು ಮಗ  ಡಾ ಅರವಿಂದ್ ಈಗಲೂ ಮುನ್ನೆಡೆಸಿ ಕೊಂಡು ಬರುತ್ತಿರುವುದು ಸಂತೋಷ .


 

ಡಾ ರಾಮ ಮೋಹನ್ ಕ್ಲಿನಿಕ್ ಆರಂಬಿಸಿ ಆರು ತಿಂಗಳಲ್ಲಿ  (1969ರಲ್ಲಿ ) ಡಾ ಅಲಂಗಾರು ರಾಮ ಭಟ್ ವಿಟ್ಲದಲ್ಲಿ ಪ್ರಾಕ್ಟೀಸ್ ಆರಂಬಿಸಿದರು .ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜ್ ವಿದ್ಯಾರ್ಥಿ . ಹಳೆಯ ಪೋಸ್ಟ್ ಆಫೀಸು ಬಳಿ ಬಸ್ ಸ್ಟಾಂಡ್ ಪರಿಸರದಲ್ಲಿ ಇವರ ಷಾಪ್ .ಈಗಲೂ ಅಲ್ಲಿಯೇ ಇದೆ . ಅತೀವ ತಾಳ್ಮೆ ,ಶಾಸ್ಟ್ರೀಯ ಪರೀಕ್ಷೆ ಮತ್ತು ಚಿಕಿತ್ಸೆ ಇವರ ಹೆಗ್ಗಳಿಕೆ . ಇವರೂ ಪುತ್ತೂರು ಮಂಗಳೂರಿನ ತಜ್ಜ ವೈದ್ಯರ ಸಂಪರ್ಕ ಇತ್ತು ಕೊಂಡು ಅವರ ಸಲಹೆ ಬೇಕಾದಾಗ ಪಡೆದು ಕೊಳ್ಳುವರು .ಈಗ ಇವರಿಗೆ  ಎಂಬತ್ತು ವರ್ಷ ದಾಟಿದೆ .ತಮ್ಮ ವೈದ್ಯಕೀಯ ಸೇವಾ ಹುಮ್ಮಸ್ಸಿಗೆ ಇನ್ನೂ ವಾರ್ಧಕ್ಯ ಬಂದಿಲ್ಲ . ಮಗ ಮತ್ತು ಮಗಳು ಎಂಜಿನಿಯರ್ ಗಳಾಗಿ ವಿದೇಶದಲ್ಲಿ ಇದ್ದರೆ ,ತಾವು ಮತ್ತು ಮಡದಿ ಕೃಷ್ಣವೇಣಿ ಹುಟ್ಟೂರು ಅಲಂಗಾರಿನಲ್ಲಿಯೇ  ನೆಲೆಸಿದ್ದಾರೆ . ಆರಂಭದಲ್ಲಿ ರೋಗಿಗಳ ತಪಾಸಣೆ ,ಚುಚ್ಚು ಮದ್ದು ಕೊಡುವುದು ,ಬ್ಯಾಂಡೇಜ್ ಮಾಡುವುದು ಮತ್ತು  ಔಷಧಿ ವಿತರಣೆ ತಾವೇ ಮಾಡುತ್ತಿದ್ದು ,ಹಳ್ಳಿಯವರ ಮತ್ತು ಪೇಟೆಯ ಬಡವರ ಕೈಗೆ ಎಟಕುವಂತೆ ಇತ್ತು ಮತ್ತು ಈಗಲೂ ಇದೆ .ಡಾ ರಾಮ ಭಟ್ ಹೀಗೆಯೇ ಆರೋಗ್ಯವಾಗಿದ್ದು ತಮ್ಮ ಸೇವೆಯನ್ನು ಮುಂದು ವರಿಸುತ್ತಿರಲಿ.