ಬೆಂಬಲಿಗರು

ಗುರುವಾರ, ಜನವರಿ 13, 2022

ಒಂದು ಚಿಂತನೆ

 

ಹಿಂದೆ ಆಸ್ಪತ್ರೆ ಅಥವಾ ಮನೆಯಲ್ಲಿ ಹಿರಿಯರು ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆಗಿ ಪ್ರಜ್ಞೆ ಇಲ್ಲದೆ ಮಲಗಿದ್ದರೆ ಅವರನ್ನು ಉಪಚರಿಸಲು ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳು ತಾ ಮುಂದು ತಾ ಮುಂದು ಎಂದು ಹೋಗುತ್ತಿದ್ದರು . ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಕೆಲವೊಮ್ಮೆ ಎರಡು ಕಣ್ಣುಗಳೂ ಒಂದೇ ದಿಕ್ಕಿಗೆ ಹೊರಳಿರುತ್ತವೆ . ತಾತ ನನ್ನನ್ನೇ ನೋಡುತ್ತಿದ್ದರು ಎಂದು ಆ ಕಡೆ ಇರುವವರು ಹೇಳಿದರೆ ನನ್ನನ್ನು ನೋಡಿ ದುಖಃ ತಡೆಯಲಾರದೆ ಆ ಕಡೆ ನೋಡಿದರು ಇನ್ನೊಂದು ಕಡೆ ಇರುವವರು ಹೇಳುವರು . ರೋಗಿಗೆ ಇದರ ಪರಿವು ಇರುವುದಿಲ್ಲ . ಇನ್ನು ಇನ್ನು ಕೆಲವು ಮೆದುಳಿನ ರಕ್ತ ಸಂಚಾರ ತೊಂದರೆಯಲ್ಲಿ (ಉದಾ ಸೂಡೋ ಬಲ್ಬಾರ್ ಪಾಲ್ಸಿ )ರೋಗಿಯು ಪ್ರಜ್ಞೆಯಲ್ಲಿ ಇದ್ದರೂ ಅನೈಚ್ಚಿಕ ವಾಗಿ ಆಳುವರು ಅಥವಾ ನಗುವರು .ಪಕ್ಕದಲ್ಲಿ ಇರುವವರು ಅದನ್ನು ತಮ್ಮ ಭಾವಕ್ಕೆ ಸರಿಯಾಗಿ ವಿಶ್ಲೇಸಿಸುವರು . ಮೊಮ್ಮಗನನ್ನು ನೋಡಿ ಅತ್ತರು ಅಥವಾ ನಕ್ಕರು ಇತ್ಯಾದಿ . ಇನ್ನು ಕೆಲವು ರೋಗದಲ್ಲಿ ಕೈ ಯ  ಚಲನೆ ಉಂಟಾಗುವದು .ನನ್ನ ಅಪ್ಪ ಕೆಳಗಿನ ತೋಟ ನಾನೇ ನೋಡಿಕೊಳ್ಳಲಿ  ಎಂದು ಕೈ ಭಾಷೆ ಮಾಡಿದರು ಎಂದು ಪಕ್ಕದಲ್ಲಿ ಇರುವ ಮಗ ಹೇಳಿಕೊಳ್ಳುವನು . 

ಈಗ ಇಂತಹ ಅರ್ಥೈಸಿ ಕೊಳ್ಳುವ ಸನ್ನಿವೇಶಗಳು ಬಹಳ ಕಡಿಮೆ .ಹಿರಿಯರು ಹಾಸಿಗೆ ಹಿಡಿದರೆ ಎಲ್ಲರಿಗೂ ತೊಂದರೆ .ಪಕ್ಕದಲ್ಲಿ ಯಾರೂ ಇರರು . ದೊಡ್ಡ ಪೆನ್ಷನ್ ಏನಾದರೂ ಬರುತ್ತಿದ್ದರೆ ಸ್ವಲ್ಪ ಉಪಚಾರ ಸಿಕ್ಕೀತು . ನಾನು ಹಿಂದೆ ಬರೆದಂತೆ ನಮ್ಮೊಳಗೆ ಇರುವ ಹಾರ್ಮೋನ್ ಗಳು ಉದಾ ಆಕ್ಸಿಟೋಸಿನ್ ರಕ್ತ ಬಂಧ ಮೋಹ ಉಂಟು ಮಾಡುವವು . ಅಕಾಲದಲ್ಲಿ ಈಸ್ಟ್ರೋಜೆನ್ ,ಟೆಸ್ಟೊ ಸ್ಟೆರೊನ್ ಗಳು  ಕಡಿಮೆ ಆಗುವಂತೆ ಇವೂ ಕಡಿಮೆಯಾಗುತ್ತಿವೆಯೋ ಏನೋ ?ಯಾವುದೇ ಆರ್ಥಿಕ ಲಾಭವಿಲ್ಲದೆ ಯಾರನ್ನೂ ಹಚ್ಚಿಕೊಳ್ಳುವ ಪದ್ಧತಿ ಈಗ ಇಲ್ಲ .ಮನೆಗಳಲ್ಲಿ ಹಿಂದಿನಂತೆ ಸಹಾಯಕ್ಕೆ ಜನರೂ ಕಡಿಮೆ .ಈಗ ಚಲನೆ ಖಾಯಂ ಆಗಿ ಯಾವಾಗ ನಿಲ್ಲುವುದೋ ಎಂದು ಕಾಯುತ್ತಿರುವವರೇ ಹೆಚ್ಚು .


ಹಿಂದೊಮ್ಮೆ ಬರೆದಂತೆ ನನ್ನ ಸಹೋದ್ಯೋಗಿ ತಮಾಷೆಗಾಗಿ ಹೇಳಿದ ಮಾತು ನೆನಪಾಗುತ್ತದೆ . "ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ರೋಗಿ ಬದುಕಿ ಉಳಿದರು "ಎಂದು ಸಂಬಂಧಿಕರನ್ನು ಸಂತಯಿಸ ಬೇಕಾಗುತ್ತದೆ .. 

 ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು                       || ಪ ||

ಸತ್ಯ ಸದಾಚಾರ ಇಲ್ಲದವನು
ಜಪ ಹತ್ತುಸಾವಿರ ಮಾಡಿ ಫಲವೇನು                || ಅ.ಪ ||

ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು
ಬಿನ್ನಾಣದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು                      || ೧

ತುಂಡು ಧನದಿಂದ ತಂದೆ ಮಾತು ಕೇಳದ
ತೊಂಡ ಮಗನು ಇದ್ದು ಫಲವೇನು
ಭಂಡು ಮಾಡಿ ಅತ್ತೆ ಮಾವನ ಬೈವ
ಪುಂಡು ಸೋಸೆಯಿದ್ದು ಫಲವೇನು                  || ೨ ||

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು
ಕಾನನ ದೊಳಗಿದ್ದು ಫಲವೇನು
ಆನಂದ ಮೂರುತಿ ಪುರಂದರ ವಿಠ್ಠಲನ್ನ
ನೆನೆಯದ ತನುವಿದ್ದು ಫಲವೇನು                     || ೩
||

ಮಂಗಳವಾರ, ಜನವರಿ 11, 2022

ಮರೆಯಾದ ಚಂಪಾ

                           ಮರೆಯಾದ ಚಂಪಾ 

 'ಕನ್ನಡ ಕಾವ್ಯದ ಭೂತ ಭವಿಷ್ಯವ

                                                                                                                 ಬಣ್ಣಿಸಿ ಹೇಳೋ ಗಾಂಪಾ;                                                                        

ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ' 

ಇದು ನಿನ್ನೆ ದಿವಂಗತರಾದ ಕವಿ ಚಂದ್ರ ಶೇಖರ ಪಾಟೀಲರು ತಮ್ಮನ್ನು ತಾವೇ ವಿನೋದವಾಗಿ ಪರಿಚಯಿಸುವ ರೀತಿ . ಇನ್ನು ಈಗಿನ ಪರಿಸ್ಥಿತಿಗೆ ಅನ್ವಯವಾಗುವಂತಿರುವ ಅವರ ಹಳೇ ಕವನ ,ಸೈದ್ದಾಂತಿಕ ಸೇತುವೆ ಪುನರ್ನಿಮಾಣದ ಆಶಯದಲ್ಲಿ ಹೀಗಿದೆ .

ಯಾವಾಗ ಹೇಗೆ ಯಾರಿಂದ ಯಾಕೆ 

ಅದೆಲ್ಲಾ ಯಾಕೆ ?ಅಂತೂ ಸೇತುವೆ 

ಕಡಕೊಂಡು ಮುರಿದು ಬಿದ್ದಿದೆ . 

ಶಬ್ದಗಳಿಂದ ಮುರಿದಿರ ಬಹುದು ,

ಮೌನದಿಂದ ಮುರಿದಿರ ಬಹುದು . 

ಆ ಕಡೆ ನಿಂತ ನಿನ್ನ ಈ ಕಡೆ ನಿಂತ ನನ್ನ 

ಶಬ್ದಗಳು ಈ ಹುಚ್ಚು ಹೊಳೆಯ ಮೌನದಲಿ 

ತೇಲುತ್ತವೆ .ಮೌನಗಳು ಅದರ ಶಬ್ದದಲ್ಲಿ 

ಮುಳುಗುತ್ತವೆ. 

ದುರ್ಬೀನು ಹಚ್ಚಿ ಮುಖ ಮುಖ ಕಂಡೇವು 

ಟೆಲಿಫೋನ್  ಮಾಡಿ  ಮಾತು ಕೇಳೇವು 

ಆದರೆ ಕೈಕುಲುಕಿದ ಕಾವಿನಲಿ 

ಮೈ ಚಳಿ ಬಿಡ ಬೇಕೆಂದಿದ್ದರೆ..

ಮತ್ತೆ ಕಟ್ಟಲೇ ಬೇಕು ಮುರಿದ ಸೇತುವೆಯನ್ನು .

              

ಹಿರಿಯರಿಗೆ ಮತ್ತು ಅವರಿಗೆ ಗೌರವ ಕೊಡ ಬೇಕಾದರೂ ಅಂಧ ಶ್ರದ್ದೆ ಸಲ್ಲ ಎಂಬುದನ್ನು 

"ನಿಮ್ಮ ಪಾದದ ಧೂಳಿ ನಮ್ಮ ಹಣೆಯ ಮೇಲಿರಲಿ ,ಕೆಳಗಡೆ ಬಂದು ದೃಷ್ಟಿ ಮಸುಕಾಗಿಸದಿರಲಿ "ಇದು ಅವರ ಸಂದೇಶ .

ನಾನು ಹುಬ್ಬಳ್ಳಿಯಲ್ಲಿ  ವಿದ್ಯಾರ್ಥಿಯಾಗಿದ್ದಾಗ  ಧಾರವಾಡ ವಿದ್ಯಾವರ್ಧಕ  ಸಂಘದ ಕಾರ್ಯದರ್ಶಿ  ಆಗಿದ್ದರು . ಆಗಷ್ಟೇ ತುರ್ತು ಪರಿಸ್ತಿತಿ ಕೊನೆಗೊಂಡಿತ್ತು .ತುರ್ತು  ಪರಿಸ್ಥಿತಿ ವಿರೋಧಿಸಿ  ಚಂಪಾ  ಜೈಲಿಗೂ ಹೋದವರು . ಅಡಿಗ ,ಲಂಕೇಶ ,ಅನಂತ ಮೂರ್ತಿ .ಕಾರಂತ ಮುಂತಾದವರನ್ನು  ಕರೆಸಿ ಭಾಷಣ ಸಂವಾದ  ಏರ್ಪಡಿಸುವರು . ಎಲ್ಲಾ ಸಂದರ್ಭದಲ್ಲಿಯೂ  ತಮ್ಮ  ಚಾಟೂಕ್ತಿ ಯಿಂದ  ಗಮನ ಸೆಳೆಯುವರು ; ಅವರ  ಛೂಬಾಣ ಗಳನ್ನು  ಎಂತಹವರೂ ಎದುರಿಸ ಬೇಕಿತ್ತು . 

ತಾವು ಕಟುವಾಗಿ  ವೈಚಾರಿಕವಾಗಿ ಟೀಕಿಸುತ್ತಿದ್ದವರನ್ನು ಕೂಡಾ ವೈಯುಕ್ತಿಕವಾಗಿ ಗೌರವಿಸುತ್ತಿದ್ದರು . ನಾಲ್ಕು ವರ್ಷಗಳ ಹಿಂದೆ  ಧಾರವಾಡ ಸಾಹಿತ್ಯ ಸಂಭ್ರಮ ಕ್ಕೆ  ಬೆಂಗಳೂರಿನಿಂದ  ಬಂದವರು  ಬಸವೇಶ್ವರ ಖಾನಾವಳಿ ಯಲ್ಲಿ  ರಾತ್ರಿ ರೊಟ್ಟಿ ಊಟಕ್ಕೆ ಬಂದವರು ಸಿಕ್ಕಿದ್ದರು . ಧಾರವಾಡ ದಿಂದ ಬೆಂಗಳೂರಿಗೆ ವಾಸ ಬದಲಿಸಿದ ತಮ್ಮನ್ನು ನೋನ್ ರೆಸಿಡೆಂಟ್  ಧಾರವಾಡ ದವ ಎಂದು ಕರೆದು ಕೊಳ್ಳುತ್ತಿದ್ದರು . ತಮ್ಮ ಶಿಷ್ಯ ಪೋಲೀಸು ಅಧಿಕಾರಿ ವೇದಿಕೆಯಲ್ಲಿ ಇದ್ದಾಗಲೇ 'ಧಾರವಾಡದಲ್ಲಿ ನಮ್ಮ ಮನೆ  ಪೋಲೀಸು ಸ್ಟೇಷನ್ ಪಕ್ಕದಲ್ಲಿ ಇತ್ತು ,ಆದುದರಿಂದ ಕಳ್ಳರ ಭಯ ಇರಲಿಲ್ಲ ,ಪೊಲೀಸರದ್ದೇ ಭಯ "ಎಂದು ಹೇಳಿದ ನೆನಪು .

ನಿನ್ನೆ ತಳುಕಿನ ವೆಂಕಣ್ಣಯ್ಯ ಗ್ರಂಥ ಮಾಲೆಯವರು ಪ್ರಕಟಿಸಿದ ಅವರ ಚಂಪಾಂಕಣ ಓದುತ್ತಿದ್ದೆ . ಇಂತಹ ಅಬಿವ್ಯಕ್ತಿ ಈಗ ಸಾಧ್ಯವೇ ?ಎಂದು ಆಲೋಚಿಸುತ್ತಿದ್ದೆ .




ಸೋಮವಾರ, ಜನವರಿ 10, 2022

ಆರ್ಜಿತ ಬುದ್ಧಿ ಮಾಂದ್ಯತೆ

                 ಆರ್ಜಿತ ಬುದ್ಧಿ ಮಾಂದ್ಯತೆ 

ನೀವೆಲ್ಲಾ ಡಿಮೆನ್ಷಿಯಾ (dementia )ಎಂಬ ಶಬ್ದ ಆಗಾಗ ಕೇಳಿರ ಬಹುದು . ಬುದ್ದಿ ಒಮ್ಮೆ ವಯಸ್ಸಿಗನುಗುಣವಾಗಿ ಬೆಳೆದು ಅಕಾಲದಲ್ಲಿ ಕುಂದಿದರೆ ಅದನ್ನು ಈ ಹೆಸರಿನಿಂದ ಕರೆಯುವರು . 

ಇದು ಒಂದು ರೋಗ ಲಕ್ಷಣ .ಆಲೋಚನಾ ,ಜ್ಞಾಪಕ ಮತ್ತು ತಾರ್ಕಿಕ ಮಥನ ಶಕ್ತಿ ಕುಂದುವುದು ಇದರ ಮುಖ್ಯ ಅಂಗಗಳು . 

ಜಗತ್ತಿನಾಧ್ಯಂತ ಅಲ್ಜ್ಹಿಮರ್ಸ್ ಕಾಯಿಲೆ ಇದಕ್ಕೆ ಮುಖ್ಯ ಕಾರಣ ವಾದರೆ ,ಮದ್ಯಪಾನ ,ಖಿನ್ನತೆ ,ಪಾರ್ಕಿನ್ಸನ್ಸ್ ಕಾಯಿಲೆ ,ಮೆದುಳಿನ ರಕ್ತ ಸಂಚಾರ ವ್ಯತ್ಯಯ ,ಥೈರಾಯಿಡ್ ಹಾರ್ಮೋನ್ ಕೊರತೆ ಇತ್ಯಾದಿ ಕೂಡಾ ಈ ರೋಗ ಲಕ್ಷಣ ಉಂಟು ಮಾಡುವವು . 

ಮೊದಲನೇ ಹಂತ ;

ಮರಗುಳಿತನ , ಸಮಯದ ಪರಿವು ತಪ್ಪುವುಕೆ 

ಮೊದಲೇ ಪರಿಚಯ ಪರಿಸರವೂ ಹೊಸತರಂತೆ ತೋರುವದು 

ಎರಡನೇ ಹಂತ :

ಇತ್ತೀಚೆಗಿನ ಘಟನೆಗಳು ಮರೆತು ಹೋಗುವುದು ,ಅದರೊಂದಿಗೆ ಜನರ ಹೆಸರೂ 

ಮನೆಯೊಳಗಿದ್ದರೂ ಎಲ್ಲಿಯೋ ಇದ್ದಂತೆ ಗೊಂದಲ ,ಸಂಭಾಷಣೆಗೆ ಕಷ್ಟ ಪಡುವುದು ,ಸ್ವಂತ ಚಾಕರಿಗೆ ಅನ್ಯರ ಸಹಾಯದ ಅವಶ್ಯಕತೆ ,ದಾರಿ ತಪ್ಪುವುದು,ನಡವಳಿಕೆ ಯಲ್ಲಿ  ಬದಲಾವಣೆ ,ಪುನಃ ಪುನಃ ಹೇಳಿದ್ದನ್ನೇ ಹೇಳುವದು 

ಮೂರನೇ ಹಂತದಲ್ಲಿ ಮೇಲೆ ಹೇಳಿದ ಲಕ್ಷಣಗಳು ಉಲ್ಬಣವಾಗಿ ,ಸಂಪೂರ್ಣ ಬೇರೆಯವರ ಅವಲಂಬನೆ ,ಕೆಲವೊಮ್ಮೆ ಕ್ರುದ್ಧತೆ ,ಸಂಪೂರ್ಣ ಮರೆವು ಇತ್ಯಾದಿ ಉಂಟಾಗಿ ಇವರ ಆರೈಕೆ ಮಾಡುವದು ಬಹಳ ಕಷ್ಟದ ಕೆಲಸ ಆಗುವದು . 

ಅಲ್ಜ್ಹಿಮರ್ ಕಾಯಿಲೆ 

೧೯೦೧ ರಲ್ಲಿ  ಜರ್ಮನಿಯ ವೈದ್ಯ ಅಲೋಯಿಸ್ ಅಲ್ಜ್ಹಿಮರ್ ,ನೆನಪು ಶಕ್ತಿ ಕುಂದಿದ್ದಲ್ಲದೆ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದ  ೫೧ ವರ್ಷದ ಮಹಿಳೆಯನ್ನು  ಕುತೂಹಲದಿಂದ ದಾಖಲೀಕರಿಸಿದ್ದಲ್ಲದೆ ೧೯೦೬ ರಲ್ಲಿ ಆಕೆ ತೀರಿ ಕೊಂಡಾಗ ಅವಳ ಮೆದುಳಿನ ಮರಣೋತ್ತರ ಪರೀಕ್ಷೆ ಮಾಡಲಾಗಿ ಅದರಲ್ಲಿ ಕೆಲವು ಆಯಕಟ್ಟಿನ  ಜಾಗಗಳಲ್ಲಿ  ಅಮಲಾಯ್ಡ್ ಎಂಬ ವಸ್ತು ಶೇಖರಣೆ ಆದದ್ದು ಕಂಡು ಬಂತು . ೧೯೦೭ ರಲ್ಲಿ ಈ ರೋಗದ ರೂಪು ರೇಷೆಗಳ ಬಗ್ಗೆ ಆತ ಪ್ರಬಂಧ ಮಂಡಿಸಿದನು . ಅಲ್ಲಿಂದ ಇಂದಿನ ವರಗೆ ರೋಗ ಪತ್ತೆ ಹಚ್ಚುವಲ್ಲಿ ಅನೇಕ ಆವಿಷ್ಕಾರಗಳು( ಉದಾ :ಎಂ ಆರ್ ಐ ಸ್ಕ್ಯಾನ್ )ಆಗಿದ್ದರೂ ರೋಗದ ಮೂಲ ಕಾರಣ ಮತ್ತು ಚಿಕಿತ್ಸೆ ಇನ್ನೂ ಮರೀಚಿಕೆಯಾಗಿಯೇ  ಉಳಿದಿದೆ .ಅಮೇರಿಕಾದ ಅಧ್ಯಕ್ಷ ರಾಗಿದ್ದ  ರೊನಾಲ್ಡ್ ರೇಗನ್ ,ಉಕ್ಕಿನ ಮಹಿಳೆ ಬ್ರಿಟನ್ ನ ಮಾರ್ಗರೆಟ್ ತ್ಯಾಚೆರ್ ಮುಂತಾಗಿ ಹಲವು ಜಾಗತಿಕ ವಾಗಿ ಹೆಸರು ಮಾಡಿದವರು ಈ ರೋಗಕ್ಕೆ ತುತ್ತಾಗಿದ್ದಾರೆ . 

ಇತ್ತೀಚೆಗೆ ನನ್ನ ಪರಿಚಯದ ಹೆಸರಾಂತ ಕನ್ನಡ ಲೇಖಕರನ್ನು ವರ್ಷದ ನಂತರ ಕಾಣಲು ಹೋಗಿದ್ದೆ .ಪ್ರತಿ ಸಾರಿ ನಾವು ಉಭಯ ಕುಶಲೋಪರಿ ,ಸಾಹಿತ್ಯ ಮತ್ತು ಶಿಕ್ಷಣ ಬಗ್ಗೆ  ಮಾತನಾಡುತ್ತಿದ್ದೆವು .ಈ ಬಾರಿ ನನ್ನನ್ನು ಕಂಡವರು ನೀವು ಯಾರು ?ಎಲ್ಲಿಂದ ಬಂದಿರಿ ?ಎಂದು ಆರಂಭಿಸಿದರು . ನಾನು ಪುತ್ತೂರಿನಿಂದ ಎಂದಾಗ ಅದು ಎಲ್ಲಿದೆ ?ಎಂದು ಕೇಳಿದರು . 

ನನ್ನ ಸಹಪಾಠಿ ಒಬ್ಬಾಕೆ ,ಪ್ರತಿಭಾವಂತೆ , ಬಿಎ ,ಎಂ ಎ ಯಲ್ಲಿ ಆಗಿನ ಮೈಸೂರು ವಿಶ್ವ ವಿದ್ಯಾಲಯಕ್ಕೆ ರಾಂಕ್ ಹೋಲ್ಡರ್ ,ಒಂದು ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಇದ್ದು ವಿಶ್ರಾಂತ ರಾದ ಮರುವರ್ಷದಿಂದ ನೆನಪು ಶಕ್ತಿ ಕಳೆದು ಕೊಳ್ಳ ತೊಡಗಿದರು .ಇತ್ತೀಚಿಗೆ ಅವನ್ನು ಕಾಣಲು ಹೋದರೆ ನನ್ನನ್ನು ಗುರುತೇ ಹತ್ತಲಿಲ್ಲ . 

ಇಂತಹ ವ್ಯಕ್ತಿಗಳ ಆರೈಕೆ ಮಾಡುವವರಿಗೆ ತಾಳ್ಮೆ ಮತ್ತು ತರಬೇತಿ ಬಹಳ ಆವಶ್ಯ . 

ಬಾಲಂಗೋಚಿ :ಪುರಾಣಗಳಲ್ಲಿ ಗುರು ಶಿಷ್ಯನಿಗೆ ಶಸ್ತ್ರ ವಿದ್ಯೆ ಬೇಕಾದಾಗ ನೆನಪಿಗೆ ಬರದೇ ಇರಲಿ ಎಂದು  ಶಾಪ ಕೊಟ್ಟ ಕಾರಣ ಬಂದ ಮರೆವು ,ದುಶ್ಯಂತನಿಗೆ ಶಕುಂತಲೆಯ ಗುರುತು ಸಿಕ್ಕದ್ದು ಮತ್ತು  ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಓದಿದ್ದು ನೆನಪಿಗೆ ಬಾರದೇ ಇರುವುದು ಈ ರೋಗಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ .

ಮಲಯಾಳಂ ನಲ್ಲಿ ಮೋಹನ್ ಲಾಲ್ ಅಭಿನಯಿಸಿದ ಚಿತ್ರ 'ತನ್ಮಾತ್ರ "ನಲ್ಲಿ ಈ ಸಮಸ್ಯೆಯನ್ನು ಚೆನ್ನಾಗಿ ಚಿತ್ರಿಸಿದ್ದು ಅವರ ಅಭಿನಯ ಹೃದಯಂಗಮ ವಾಗಿ  ಬಂದಿದೆ. 

 https://youtu.be/PEJ_hWg_F3c

 

 

ಭಾನುವಾರ, ಜನವರಿ 9, 2022

ಎಡ್ರಿನಲ್ ಗ್ರಂಥಿ

                                     Illu adrenal gland.jpg

 ಆಂಗ್ಲ ಭಾಷೆಯಲ್ಲಿ  ರೀನಲ್ ಎಂದರೆ ಮೂತ್ರ ಪಿಂಡಕ್ಕೆ ಸಂಬಂದಿಸಿದುದು ಎಂದು ಅರ್ಥ . ರೀನಲ್ ಸ್ಟೋನ್ ಎಂದರೆ ಮೂತ್ರ ಪಿಂಡದ ಕಲ್ಲು ,ರೀನಲ್ ಫೈಲ್ಯೂರ್ ಎಂದರೆ ಮೂತ್ರ ಪಿಂಡಗಳ ವೈಫಲ್ಯ ಇತ್ಯಾದಿ .  ಎಡ್ರಿನಲ್ ಎಂದರೆ ಮೂತ್ರ ಪಿಂಡದ  ಮೇಲೆ ಸ್ಥಾಪಿತ ವಾಗಿರುವ( ಗ್ರಂಥಿ ). 

ಈ  ಗ್ರಂಥಿ ಗೆ  ಒಳಗೊಂದು ಹೊರಗೊಂದು ಪ್ರತ್ಯೇಕ ಭಾಗ ಇದೆ .ಹೊರ ಭಾಗ ಅಥವಾ ಕಾರ್ಟೆಕ್ಸ್  ಜೀವಕ್ಕೆ ಅತ್ಯಾವಶ್ಯವಾದ ಕಾರ್ಟಿಸೋಲ್ ಹಾರ್ಮೋನ್ ಸ್ರವಿಸುವದು . ಈ ಹಾರ್ಮೋನ್ ಗಳು ಕೊಲೆಸ್ಟರಾಲ್ ನಿಂದ ಜನ್ಯ ವಸ್ತುಗಳು ಆಗಿದ್ದು  ಸ್ಟೆರೋಯಿಡ್ ಹಾರ್ಮೋನ್ ಎಂದು ಕರೆಯುವರು .ನಾವು ಚಿಕಿತ್ಸೆಗಾಗಿ ಕೊಡುವ ಸ್ಟೆರೋಯಿಡ್ ಗಳು ಇವುಗಳ ಕೃತಕ ಸೃಷ್ಟಿ ಅಷ್ಟೇ . 

ಸ್ಟೆರೋಯಿಡ್ ಹಾರ್ಮೋನ್ ಗಳಲ್ಲಿ  ಸಕ್ಕರೆ (ಗ್ಲುಕೋಸ್ ) ,ಲವಣ ಮತ್ತು  ಲೈಂಗಿಕ ಎಂಬ  ಮೂರು ಪ್ರಭೇದಗಳು . ಮೊದಲನೆಯದು ರಕ್ತದಲ್ಲಿ ಸಕ್ಕರೆ ಪ್ರಮಾಣ ಸಾಕಷ್ಟು ಇರುವಂತೆ ನೋಡಿಕೊಂಡರೆ ,ಎರಡನೆಯದು ಸೋಡಿಯಂ ಪ್ರಮಾಣವನ್ನು ಮತ್ತು ಮೂರನೆಯದು ಲಘು ಲೈಂಗಿಕ ಚೋದಕ . ಅಡ್ರಿನಲ್ ಹಾರ್ಮೋನ್  ಕೊರತೆಯಾದರೆ ರಕ್ತದ   ಗ್ಲುಕೋಸ್ ಪ್ರಮಾಣ ಅಪಾಯಕಾರಿಯಾಗಿ ಕಡಿಮೆ ಆಗಿ ಬಳಲಿಕೆಯಿಂದ ಹಿಡಿದು ಪ್ರಜ್ಞೆ ತಪ್ಪುವ ವರೆಗೆ ಆಗ ಬಹುದು . ಸೋಡಿಯಂ ಪ್ರಮಾಣ ಕಡಿಮೆ ಆದಾಗ ಹೆಚ್ಚು ಕಡಿಮೆ ಇವೇ ಲಕ್ಷಣಗಳು . 

ಅಡ್ರಿನಲ್ ಗ್ರಂಥಿಯ ಒಳಮೈ ಅಥವಾ ಮೆಡುಲ್ಲಾ ದಿಂದ ಅಡ್ರಿನಲಿನ್ ಮತ್ತು ನೋರ್ ಅಡ್ರಿನಲಿನ್ ಹಾರ್ಮೋನ್ ಗಳು ಉತ್ಪತ್ತಿ ಆಗುವವು . ಇವು ಜೀವ ರಕ್ಷಣೆಗೆ ಅತೀ ಅವಶ್ಯ  ಅಪಾಯ ಬಂದಾಗ ಹೋರಾಡು  ಇಲ್ಲವೇ ಓಡಿ ಪಾರಾಗು ಎಂಬ ಗುರಿ . 

ಅಡ್ರಿನಲ್ ಗ್ರಂಥಿ ಗಳ ಶೈಥಿಲ್ಯ ಉಂಟಾಗಲು ಸ್ವಯಮ್ ನಿರೋಧ (ಆಟೋ ಇಮ್ಮ್ಯೂನ್ )ಕಾಯಿಲೆ ಮುಖ್ಯ ಕಾರಣ ವಾದರೆ , ಕ್ಷಯ ,ಕ್ಯಾನ್ಸರ್ ಇತ್ಯಾದಿ ಇತರ ಕಾರಣಗಳು . ಅಡ್ರಿನಲ್  ಸ್ಟೆರೋಯಿಡ್ ಗಳ ಕೊರತೆ ಯಾದರೆ ರಕ್ತದ ಒತ್ತಡ ಕಡಿಮೆಯಾಗಿ ಎದ್ದು ನಿಲ್ಲಲು ಕಷ್ಟವಾಗುವದು . ಚರ್ಮದಲ್ಲಿ ಕಪ್ಪು ಬಣ್ಣದ ಲೇಪ ಬರುವದು ,ಮಾಂಸ ಖಂಡಗಳು ಬಲಹೀನ ಆಗುವುವು ,ಸ್ತ್ರೀಯರಲ್ಲಿ ಮುಟ್ಟು ಅಸ್ತವ್ಯಸ್ತ ಆಗುವದು .ಮೊದಲೇ ತಿಳಿಸಿದಂತೆ ಕೆಲವರಲ್ಲಿ ಯಾವುದೇ ಕಾರಣ ವಿಲ್ಲದೆ ಸಕ್ಕರೆ ಪ್ರಮಾಣ ಅಪಾಯಕಾರಿ ಯಾಗಿ ಕಡಿಮೆ ಆಗುವುದು .ನಾನು ಪುತ್ತೂರಿನಲ್ಲಿ ಈ ರೀತಿ  ಸಕ್ಕರೆ ಕಡಿಮೆ ಆಗಿ ಪ್ರಜ್ಞಾಹೀನರಾಗಿ ಬಂದ ಅಡ್ರಿನಲ್ ಕೊರತೆಯ ಮೂರು ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಮಾಡಿದ್ದೇನೆ . 

ಅಡ್ರಿನಲ್ ಹಾರ್ಮೋನ್ ಲೆಕ್ಕಕ್ಕಿಂತ ಹೆಚ್ಚು   ಉತ್ಪತ್ತಿ ಆದರೆ ಕುಶಿಂಗನ ಕಾಯಿಲೆ ಬರುವದು . ಇದರಲ್ಲಿ ಬೊಜ್ಜು ,ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕ,ರಕ್ತದ ಒತ್ತಡ ಏರಿಕೆ ,ಋತು ಚಕ್ರ ನಿಲ್ಲುವುದು ಇತ್ಯಾದಿ ಉಂಟಾಗುವದು .ಈ ಲಕ್ಷಣಗಳು    ಬೇರೆ ಕಾಯಿಲೆಗಳಿಗೆ  ದೀರ್ಘ ಕಾಲ ಸ್ಟೀರಾಯ್ಡ್ ಕೊಡುವುದರಿಂದ ಕೂಡಾ ಉಂಟಾಗ ಬಹುದು . 

ಇನ್ನು ಅಡ್ರಿನಲ್ ಒಳಮೈ ಯ ಗಡ್ಡೆಯಾದ ಫಿಯೋ ಕ್ರೋಮೋ ಸೈಟೋಮಾ ಎಂಬ ಕಾಯಿಲೆಯಲ್ಲಿ  ಹಾರ್ಮೋನುಗಳಾದ ಅಡ್ರಿನಲಿನ್ ,ನೊರಾಡ್ರೆನಲಿನ್ ಅಧಿಕವಾಗಿ ಎದೆ ಬಡಿತ ಅಧಿಕವಾಗುವದು ,ರಕ್ತದ ಒತ್ತಡ ಅಪಾಯಕಾರಿ ಯಾಗಿ ಏರುವದು ಮತ್ತು ವಿಪರೀತ ತಲೆನೋವು ಬರ ಬಹುದು .

Addisons vs Cushing's | Nursing school survival, Nursing school tips,  Nursing school studying

ಜೀವಿಗಳ ಷಡ್ ಮಿತ್ರರು

 ನಾವು ಮನುಷ್ಯರ (ಮತ್ತು ಸಕಲ ಪ್ರಾಣಿಗಳ )ಮಿತ್ರರು .ನಮ್ಮನ್ನು ವಿನಾ ಕಾರಣ ವೈರಿಗಳು , ಅರಿ ಷಡ್ ವೈರಿ ಗಳು ಅಂದು ಅರಿವಿಲ್ಲದವರು ಕರೆದು ತಮ್ಮ ಕೃತಘ್ನ ತೆಯನ್ನು ಮತ್ತು ಅಜ್ಞಾನವನ್ನು ತೋರಿಸುವದು ಕಂಡಾಗ "ತಂದೆ, ಅರಿಯದೇ ನಿನ್ನ ಮಕ್ಕಳು ಮಾಡುತ್ತಿರುವ ಅಪರಾಧವನ್ನು ಕ್ಷಮಿಸು "ಎಂದು ಹೇಳುತ್ತೇವೆ ,

ನಮ್ಮ ವಿವರ  ಹೀಗಿದೆ . 

 ಕಾಮ ಮತ್ತು ಮೋಹ . ನಾವು ಜೀವಿಗಳ ಸಂತತಿ ಮುಂದುವರಿಯಲು ಪ್ರಕೃತಿ ಅಥವಾ ದೇವರು ಇಟ್ಟ ಭಾವ . ಇದಕ್ಕಾಗಿ ಪಿಟ್ಯುಟರಿ ಗ್ರಂಥಿಯಿಂದ ಫೋಲಿಕ್ಯುಲರ್ ಪ್ರಚೋದಕ ,ಲ್ಯೂಟಿನೈಸಿಂಗ್ ಹಾರ್ಮೋನ್ ,ಆಕ್ಸಿಟೋಸಿನ್ ಇತ್ಯಾದಿ ರಾಸಾಯನಿಕಗಳು ಗಂಡಸರಲ್ಲಿ ವೃಷಣದ ಮೇಲೂ ,ಹೆಂಗಸರಲ್ಲಿ ಅಂಡಾಶಯದ ಮೇಲೂ ಪರಿಣಾಮ  ಬೀರಿ ಈಸ್ಟ್ರೋಜೆನ್ ,ಟೆಸ್ಟೋಸ್ಟೆರಾನ್ ಇತ್ಯಾದಿ  ಹಾರ್ಮೋನ್ ಉತ್ಪತ್ತಿ ಆಗಿ ಗಂಡು ಹೆಣ್ಣಿನ ನಡುವೆ ಆಕರ್ಷಣೆ (ಇವೇ ಪುರಾಣದ ಕಾಮ ಬಾಣಗಳು ),ವಂಶಾಭಿವೃದ್ಧಿ ಆಗುವುದು . ಅಲ್ಲದೆ ತನ್ನ ಕುಡಿ ಎಂಬ ಮೋಹ ಕೂಡಾ . ಮೋಹವೇ ಮಗುವನ್ನು ಜತನದಿಂದ ಸಾಕುವಂತೆ ಮಾಡುವುದು . ಆಯಿತು ಮುದುಕರಾದ ನಾವು ಇವರನ್ನು ಬಿಟ್ಟು ಹೋಗುವಾ ಎಂದರೆ ನಮ್ಮ ಪ್ರಚೋದನೆಯೇ ಇವರನ್ನು  ನೋಡಿ ಕೊಳ್ಳುವಂತೆ ಪ್ರೇರೇಪಿಸುವದು . 

ಕ್ರೋಧ,ದ್ವೇಷ 

ನಿಮ್ಮ ದೇಹದಲ್ಲಿ ಅಡ್ರಿನಲ್ ಗ್ರಂಥಿ ಇದೆ ,ಜೀವಕ್ಕೆ ಅತ್ಯಾವಶ್ಯ ಅಂಗ . ಇದರಿಂದ ಉತ್ಪತ್ತಿ ಆಗುವ  ಕಾರ್ಟಿಸೋಲ್ ,ಅಡ್ರಿನಲಿನ್ ,ನೋರ್ ಅಡ್ರೆನಲಿನ್  ಹಾರ್ಮೋನ್

ಗಳು  ಜೀವಿಯ  ಇರುವಿಕೆಗೆ ಅಪಾಯ ಬಂದಾಗ ರಕ್ಷಿಸಲು ಅನುವು ಮಾಡಿಕೊಡಲು ತಯಾರಿ ಮಾಡುವವವು . ಹೋರಾಡು ಇಲ್ಲವೇ ಓಡಿ ಪಾರಾಗು ಎಂಬ ಧ್ಯೇಯ . ಇವಕ್ಕೆ ಪೂರಕವಾಗಿ ಈ ಹಾರ್ಮೋನ್ ಗಳು ಅಲ್ಲದೆ  ಮೆದುಳಿನ ಡೋಪಮಿನ್ ಒಕ್ಷಿಟೋಸಿನ್ ಕೂಡಾ  ಸೇರಿ ಬೇಕಾದಾಗ ಕೋಪ ಮತ್ತು ದ್ವೇಷ ಬರುವಂತೆ ಮಾಡುವವವು . ಅಸ್ತಿತ್ವಕ್ಕೆ  ಪ್ರತ್ಯಕ್ಷ ಅಥವಾ ಪರೋಕ್ಷ ಅಪಾಯ ತರುವ ಯಾವುದೇ ಸನ್ನಿವೇಶ ಎದುರಿಸಲು ಅತೀ ಅವಶ್ಯ .

ಮದ ,ಮತ್ಸರ ಇವು ಪರೋಕ್ಷ ಅಥವಾ ದೂರ ಗಾಮಿ ಅಪಾಯ ಎದುರಿಸಲು ಇರುವ ಭಾವ ರೂಪಗಳು . 

ನಮ್ಮನ್ನು ಅರಿ ಷಡ್ ವೈರಿಗಳು  ಎಂದು ಕರೆಯುವ ಮೊದಲು ನಮ್ಮನ್ನು ವೈಜ್ನಾನಿಕ ವಾಗಿ  ಸ್ವಲ್ಪ ಅರಿರುವ ಯತ್ನ ಮಾಡಿರಿ . ನೀವೇ (ಮನುಜ ರು) ನಿರ್ಮಿಸಿ ಕೊಂಡ ಸಾಮಾಜಿಕ ಪರಿಧಿಗಳನ್ನು ನಾವು ದಾಟಿದರೆ ಅದು ನಮ್ಮ ತಪ್ಪಲ್ಲ . ಬೇಕಾದ್ದಕಿಂತ ಹೆಚ್ಚು ಉಂಡು ಅಜೀರ್ಣ ಆದರೆ ಅನ್ನವನ್ನು ನೀವು ವೈರಿ ಎಂದು ಕರೆಯುವಿರೇ. ಇನ್ನು ಅರಿ ಶಡ್ವೈರಿ ಗಳನ್ನು ತ್ಯಜಿಸಿದ ಮುನಿ(ಮುನಿದರೆ ಆತ ಹೇಗೆ ಮುನಿಯಾದಾನು ?)ಗಳು ಹಿಂದೆ ಶಾಪ ಕೊಟ್ಟದ್ದು ಪ್ರೀತಿಯಿಂದಲೇ ?ಅವರಿಗೂ ಕೋಪ ಇರಲಿಲ್ಲವೇ . ವಿಶ್ವಾಮಿತ್ರ ತಪಸ್ಸು ಮಾಡುತ್ತಿರಲು ಅದನ್ನು ಲೋಕ ಕಲ್ಯಾಣಕ್ಕಾಗಿ ಕೆಡಿಸಲು ಕಾಮವೇ ಬೇಕಾಯಿತು .

ದಯಮಾಡಿ ಇನ್ನಾದರೂ ನಮ್ಮನ್ನು ವೈರಿಗಳೆಂದು ಕರೆಯದಿರಿ . ನಮ್ಮ ಸಹಾಯ ಅವವರತ ಜೇವಿಗಳಿಗೆ ಬೇಕು ಎಂಬ ಅರಿವು ನಮ್ಮನ್ನು ತ್ಯಜಿಸಲು ಹೇಳುವವರಿಗೂ ಇರಲಿ .

 ಇನ್ನು ಕೆಲವು ಪಂಡಿತರು ನಮ್ಮನ್ನು ಸಾತ್ವಿಕ(ತಾಮಸಿಕ ) ಕಾಮ ,ಸಾತ್ವಿಕ(ತಾಮಸಿಕ ) ಕೋಪ , ಇತ್ಯಾದಿ ಕರೆದು ನಮ್ಮನ್ನು ಬಳಸುತ್ತಿರುವದನ್ನು ನೀವು ಕಂಡಿರ ಬಹುದು .ನಮ್ಮಲ್ಲಿ ಆ ಪ್ರಬೇಧ ನಿಮ್ಮಂತೆ ಇಲ್ಲ . 

ಶುಕ್ರವಾರ, ಜನವರಿ 7, 2022

ಪ್ರೀತಿಯ ಜಯತ್ತೆಗೆ ಶ್ರದ್ದಾಂಜಲಿ

                                               

ನಾನು ೧೯೮೭ ೯೦ ರಲ್ಲಿ ಪುತ್ತೂರಿನ ರೈಲ್ವೆ ಅರೋಗ್ಯ ಕೇಂದ್ರ ದಲ್ಲಿ ಕೆಲಸ ಮಾಡುತ್ತಿದ್ದೆ . ನಮ್ಮ ವಸತಿ ಗೃಹ ಹಾರಾಡಿಯಲ್ಲಿ  ಇತ್ತು . ನಮಗೆ ಅನೇಕ ಮಿತ್ರರು ಇದ್ದು ಜೀವನ ಸಂತೋಷ ದಾಯಕ  ಆಗಿತ್ತು . ನಮ್ಮ  ಮನೆಯ ಪಶ್ಚಿಮಕ್ಕೆ ಸ್ವಲ್ಪ ದೂರ ಒಳದಾರಿಯಲ್ಲಿ ಹೋದರೆ ಬಡೆಕ್ಕಿಲ ಡಾ ಶಂಕರ ಭಟ್ ಅವರ ಮನೆ . ಕಾಂಪೌಂಡ್ ಹೊಗ್ಗುವಲ್ಲಿ ಒಂದು ಫಲಭರಿತ ಮಾವಿನ ಮರ  . ಪೂರ್ವದಲ್ಲಿ ಅರ್ಧ ಕಿಲೋ ಮೀಟರ್ ಹೋದರೆ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಮೂಡಿತ್ತಾಯರ ಮನೆ . ಉತ್ತರಕ್ಕೆ ಅಷ್ಟೇ ದೂರದಲ್ಲಿ ಬಂಧುಗಳಾದ  ಮಹಾಲಿಂಗೇಶ್ವರ ಭಟ್ ಮತ್ತು ದುರ್ಗಾ ಮಣಿ  ಕುಟುಂಬ . ನಾವು ಅವರಲ್ಲಿ ಹೋಗುವುದು ಮತ್ತು ಅವರು ನಮ್ಮಲ್ಲಿ ಬರುವುದು . ಕಲರವ ,ಸಂತೋಷ . ಈಗ ಲೂ  ನೆನೆಸಿ ಮನಸು ಮುದ ಗೊಳ್ಳುತ್ತದೆ . 

               ನಮ್ಮ ಕಾಲೋನಿ ಗೆ ತಾಗಿ ಅತೀ ಸಮೀಪದಲ್ಲಿ ಇದ್ದುದು ಬಡೆಕ್ಕಿಲ ಶಂಕರ ಡಾಕ್ಟ್ರ ಮನೆ . ಅವರ ಪತ್ನಿ ಜಯಲಕ್ಷ್ಮಿ ಅಕ್ಕ  . ನಾವು ಜಯತ್ತೆ ಎಂದು ಕರೆಯುವುದು . ಅವರಿಗೆ ಏಳು  ಹೆಣ್ಣು ಮಕ್ಕಳು  ಸ್ವರ್ಣ ,ವಿದ್ಯಾ ,ರೇಖಾ ,ಶ್ಯಾಮಲಾ ,ಕಿರಣ ,ರಮ್ಯಾ ಮತ್ತು ಮಾಲಾ . ಎಲ್ಲಾ ಸಣ್ಣ ಸಣ್ಣವರು . ಕೆಲವರು ಬೋರ್ಡ್ ಹೈ ಸ್ಕೂಲ್ ಮತ್ತೆ ಸಣ್ಣವರು ಹಾರಾಡಿ ಶಾಲೆಗೆ . ಡಾ ಶಂಕರ ಭಟ್ ಪೊಲೀಸ್ ಸ್ಟೇಷನ್ ಬಳಿ ಕ್ಲಿನಿಕ್ ಹೊಂದಿದ್ದರು . ಬಹಳ  ಸಾಧು ಸ್ವಭಾವ ಮತ್ತು ಮಕ್ಕಳ ಮನಸ್ಸಿನವರು . ಜಯತ್ತೆ ಸ್ನೇಹ ಜೀವಿ  .   ಆಗಾಗ ಸಂಜೆ ಅವರ ಮನೆಯಲ್ಲಿ ನಮ್ಮ ಕೂಟ .ನಗು ಸಂತೋಷ . ನನ್ನ ವಿವಾಹ ಈ ಅವಧಿಯಲ್ಲಿಯೇ ನಡೆದು ,ಅವರ ಕುಟುಂಬ ನಮ್ಮ ಮನೆಯವರಂತೆಯೇ ಸಡಗರದಿಂದ ಪಾಲ್ಗೊಂಡಿದ್ದರು . ನನ್ನ ಮಗ ಹುಟ್ಟಿದ ಮೇಲೆ ಈ ಮಕ್ಕಳು ಮನೆಗೆ ಬಂದು ಅವನನ್ನು ಎತ್ತಿ ಆಡಿಸುವರು . 

 ಮುಂದೆ ನಾನು ವರ್ಗವಾಗಿ ಬೇರೆ ಕಡೆ ಹೋದ ವರ್ಷದಲ್ಲಿಯೇ  ಶಂಕರ ಡಾಕ್ಟ್ರು ತೀರಿ ಕೊಂಡ ವಾರ್ತೆ ಬಂತು .ಮಕ್ಕಳೆಲ್ಲರೂ ಬೇರೆ ಬೇರೆ ಹಂತದಲ್ಲಿ ಓದುತ್ತಿದ್ದ ಸಮಯ . ಜಯತ್ತೆ ದೃತಿ ಗೆಡದೆ ಎಲ್ಲರನ್ನೂ ವಿದ್ಯಾಭ್ಯಾಸ ಕೊಡಿಸಿ ,ಯೋಗ್ಯ ವರರನ್ನು ಹುಡುಕಿ ಮದುವೆ ಮಾಡಿಸಿ ಒಂದು ನೆಲೆಗೆ ತಂದದ್ದು ಒಂದು ಸಂತೋಷಕರ ಪವಾಡ . 

ನಮ್ಮ ಕುಟುಂಬ ಪುತ್ತೂರಿಗೆ ಪುನಃ  ಬಂದ ಮೇಲೆಯೂ ನಿರಂತರ ಸಂಪರ್ಕ ಇಟ್ಟು ಗೊಂಡಿದ್ದು ,ಅವರೂ  ಅವರ ಮಕ್ಕಳೂ  ಹಿಂದಿನ ಪ್ರೀತಿ ವಿಶ್ವಾಸ ಮುಂದುವರಿಸಿದ್ದಾರೆ . 

ನಿನ್ನೆಯಷ್ಟೇ  ಜಯತ್ತೆ ಹೃದಯಾಘಾತದಿಂದ ತೀರಿ ಕೊಂಡ ವಾರ್ತೆ ಬಂದಿದ್ದು ,ಹಳೆಯ ನೆನಪುಗಳು ಸರ ಮಾಲೆಯಾಗಿ  ಬರುತ್ತಿವೆ . ಇಂತಹ ಹಿತೈಷಿ ಗಳ ಸಂಗವೇ ನಮ್ಮ ಜೀವನದ ದೊಡ್ಡ ಸಂಪತ್ತು . 

ಜಯತ್ತೆಗೆ ಭಾವ ಪೂರ್ಣ ಶ್ರದ್ಧಾಂಜಲಿ 🙏🙏🙏🙏


ಗುರುವಾರ, ಜನವರಿ 6, 2022

ಮದ್ಯಪಾನ ಮತ್ತು ಆರೋಗ್ಯ 2

 (ಮುಂದುವರಿದುದು )

  ಲಿವರ್  ಸಿರೋಸಿಸ್

 Cirrhosis - Wikipedia                   ಲಿವರ್ ಹಾನಿ ಗೊಂಡಂತೆಲ್ಲಾ, ರಕ್ತದಲ್ಲಿ  ಅಲ್ಬುಮೀನ್ ಎಂಬ ಮುಖ್ಯ ಸಸಾರಜನಕ ಕಡಿಮೆ ಆಗಿ , ರಕ್ತದ ನೀರು ಹಿಡಿದು ಇಟ್ಟು ಕೊಳ್ಳುವ ಶಕ್ತಿ ಕಡಿಮೆಯಾಗಿ   ಹೊಟ್ಟೆ ,ಕೈಕಾಲುಗಳಲ್ಲಿ  ನೀರು ತುಂಬಿ ಕೊಳ್ಳುವುದು . ಕೈಕಾಲುಗಳು  ಕೃಶವಾಗುವವು . ಶರೀರದಲ್ಲಿ ಗಂಡು ಹಾರ್ಮೋನ್ ಗಳು ಕಡಿಮೆಯಾಗಿ  ಸ್ತ್ರೀ  ಹಾರ್ಮೋನ್ ಗಳು ಅಧಿಕವಾಗಿ  ಗಂಡಸರಲ್ಲಿ  ಸ್ತನಗಳು ದೊಡ್ಡದಾಗುವವು ,ಲೈಂಗಿಕ  ದೌರ್ಬಲ್ಯ ಉಂಟಾಗುವದು . ಅನ್ನ ನಾಳದ ಒಳ ಮೈಯ್ಯಲ್ಲಿನ ರಕ್ತ ನಾಳಗಳು  ಹಿಗ್ಗಿ  ರಕ್ತ ವಾಂತಿಗೆ ಕಾರಣ ಆಗುವದು . ರಕ್ತದಲ್ಲಿ ನೈಸರ್ಗಿಕವಾಗಿ ಉಂಟಾದ  ಕೆಟ್ಟ ರಾಸಾಯನಿಕಗಳ  ವಿಲೇವಾರಿ  ಸರಿ ಆಗದೆ ಅವು ಮೆದುಳು ಸೇರಿದಾಗ  ನೆನಪು ,ಜ್ಞಾನ ಕ್ಷಯ ಮತ್ತು ಭೋಧ ಕ್ಷಯ ಉಂಟಾಗುವುದು . ರಕ್ತ ಸರಿಯಾಗಿ ಹೆಪ್ಪು ಗಟ್ಟದು . 

  ಪ್ಯಾಂಕ್ರಿಯಾಟೈಟಿಸ್ 

ಮದ್ಯಪಾನಿಗಳಲ್ಲಿ  ಮೇದೋಜೀರಕ ಗ್ರಂಥಿ ಯ  ಉರಿಯೂತ ಉಂಟಾಗಿ ತೀವ್ರ ತರ ಸಮಸ್ಯೆ ಉಂಟಾಗ ಬಹುದು . ತೀವ್ರ ತರ ಹೊಟ್ಟೆ ನೋವು ಮತ್ತು ವಾಂತಿ ಇದರ ಆರಂಭಿಕ ಲಕ್ಷಣಗಳು . 

ಆಲ್ಕೊಹಾಲಿಕ್ ಗ್ರಾಸ್ಟ್ರೈಟಿಸ್ 

ಪದೇ ಪದೇ ಮದ್ಯಪಾನ ಸೇವನೆಯಿಂದ ಜಠರದ ಒಳ ಪದರ ಹಾನಿಗೊಳಗಾಗುವದು . ಇದರಿಂದ ಹೊಟ್ಟೆ ನೋವು ,ಹಸಿವು ಇಲ್ಲದಿರುವುದು  ವಾಂತಿ ಇತ್ಯಾದಿ ಉಂಟಾಗುವದು

ಮೆದುಳು ಮತ್ತು ನರಗಳು ದುರ್ಬಲ  ಗೊಳ್ಳುವುವು . ನೆನಪಿನ ಶಕ್ತಿ ಕುಂದುವುದು ,ಖಿನ್ನತೆ  ಉಂಟಾಗುವುದು . ಶರೀರದ ಸಮತೂಲ ಕಾಯ್ದು ಕೊಳ್ಳುವ ಅಂಗಗಳಿಗೆ ಹಾನಿಯಾಗಿ ಬಾಲನ್ಸ್ ತಪ್ಪುವುದು .ವಿಟಮಿನ್ ಬಿ 1 ಅನ್ನಾಂಗದ ಕೊರತೆ ಉಂಟಾಗುವುದೂ ಒಂದು ಕಾರಣ . 

ರಕ್ತದ ಉತ್ತಡ ಹೆಚ್ಚುವುದು .ಹೃದಯದ ಮಾಂಸ ಖಂಡಗಳು ದುರ್ಬಲ ಗೊಳ್ಳುವುವು . 

ಮದ್ಯ ವ್ಯಸನಿಗಳಲ್ಲಿ ಕಾನ್ಸರ್ ಬರುವುದು ಹೆಚ್ಚು . ಕುಡಿತದ ಅಮಲಿನಲ್ಲಿ ಅರಿವಿಲ್ಲದೆಯೇ ಬಿದ್ದು ಪಕ್ಕೆಲುಬು  ಫ್ರಾಕ್ತ್ಚರ್ ಆಗಿ ಎದೆ ನೋವು ಎಂದು ವೈದ್ಯರಲ್ಲಿ ಬರುವುದು ಸಾಮಾನ್ಯ .

ಇನ್ನು ಕುಡಿದು ವಾಹನ ಚಾಲನೆ ಮಾಡಿ ಅವಘಡಗಳು ಸಂಭವಿಸುವುದು ಒಂದಾದರೆ ,ಕುಡಿದು ತಾವೇ ವಾಹನಗಳ ಅಡಿಗೆ ಬೀಳುವವರು ಕಡಿಮೆಯೇನಲ್ಲ .

 Symptoms and effects of alcoholism patient. Illustration about health problem of people with alcohol addiction.