ಬೆಂಬಲಿಗರು

ಮಂಗಳವಾರ, ಜೂನ್ 22, 2021

ತಲೆ ಭಾರ

 

ಹಿಂದೆ ಹಳ್ಳಿಗಳು ಆತ್ಮ ನಿರ್ಭರ ಆಗಿದ್ದವು . ಅಡಿಕೆ ಮಾರಾಟಕ್ಕೆ ಮತ್ತು ಕೆಲವು ದಿನಸಿ ವಸ್ತುಗಳಿಗೆ  ಮಾತ್ರ ನಗರವನ್ನು ಅವಲಂಬಿಸ ಬೇಕಿತ್ತು . ಆಹಾರ ಧಾನ್ಯ ಅಕ್ಕಿ .ಉದ್ದು ,ಹೆಸರು ಮತ್ತು ತರಕಾರಿ ಇತ್ಯಾದಿ ನಾವೇ ಬೆಳೆಯುತ್ತಿದ್ದೆವು . ಎಣ್ಣೆಯ ಗಾಣ ನಡೆಸುವವರು ,ಅವಲಕ್ಕಿ ಹೊರಿಯಕ್ಕಿ ತಯಾರಿಸುವವರೂ ಇದ್ದರು . ಕೃಷಿಗೆ ಬೇಕಾದ ಹಾರೆ ಪಿಕ್ಕಾಸು ,ಕತ್ತಿ  ಮತ್ತು ಮಡು (ಕೊಡಲಿ )ಇತ್ಯಾದಿ ,ಮನೆಗೆ ಬೇಕಾದ ಮಣ್ಣಿನ ಪಾತ್ರೆಗಳು ಇತ್ಯಾದಿಗಳನ್ನು  ತಯಾರು ಮಾಡುವ ವೃತ್ತಿಯವರು ,ಮರದ ಕೆಲಸದ ಬಡಗಿ ,ಮಣ್ಣಿನ ಗೋಡೆ ಕಟ್ಟುವವರು ಇತ್ಯಾದಿ ಪ್ರತಿಯೊಂದು ಊರಿನಲ್ಲಿ ಇರುತ್ತಿದ್ದರು . ಒಂದು ರೀತಿಯಲ್ಲಿ  ನಾವು ಲಾಕ್ ಡೌನ್ ಆಗಿಯೇ ಇರುತ್ತಿದ್ದೆವು . 

           ಈಗ ಕೋವಿಡ್ ಲಾಕ್ ಡೌನ್ ಆಗಿ ನನಗೆ ಭಾರೀ ತಾಪತ್ರಯ ಕ್ಕೆ  ಬಂದಿದೆ . ತಿಂಗಳಿಗೆ ಒಮ್ಮೆ  ವ್ರತದಂತೆ  ತಲೆಗೂದಲು  ಕಟಾಯಿಸುತ್ತಿದ್ದ  ನಾನು ಮುಚ್ಚನಾಗಿ ಹುಚ್ಚನಂತೆ ಆಗಿ ಹೋಗಿರುವೆನು ;ಕಿವಿ ಮುಚ್ಚಿ ಹೋಗಿ ಭಾಗಶಃ ಕಿವುಡ ಆಗಿ  ಮನೆಯಲ್ಲಿ ಪತ್ನಿ ,ಆಸ್ಪತ್ರೆಯಲ್ಲಿ ರೋಗಿ ಮತ್ತ್ತು ನರ್ಸ್ ಗಳ  ಅಪಹಾಸ್ಯಕ್ಕೆ ಗುರಿಯಾಗಿರುವೆನು . ನನ್ನನ್ನು ನೋಡಿದರೆ ಜಟಾಧಾರೀ  ಶಂಕರ ಮತ್ತು  ತಪಸ್ಸಿಗೆ ಕುಳಿತ ವಿಶ್ವಾಮಿತ್ರನ ನೆನಪು ಆದರೆ ನನ್ನ ತಪ್ಪಲ್ಲ .ನನ್ನ ಹೆಸರು ಪದ್ಮನಾಭ ಹೋಗಿ ಈಗ 'ಕೇಶ'ವ ಆಗಿದೆ . ಈಗಿನ ತಲೆ (?)ಮಾರಿನವರಿಗೆ  ಕೂದಲು ಬೆಳೆಸುವುದೇ ಫ್ಯಾಷನ್ ಆದುದರಿಂದ  ಅವರು ಸಂಕಷ್ಟದಲ್ಲಿಯೂ  ಅದೃಷ್ಟವನ್ನು ಕಾಣುವರು . ಹರಿದ ಪ್ಯಾಂಟ್ ,ಕೈ ಬಳಿ ಒಟ್ಟೆ(ಹರಿದು ರಂಧ್ರ )ಆದ ರವಿಕೆ ಕೂಡಾ ಈಗ ಆಗಿರುವಂತೆ . 

ಬಾಲ್ಯದಲ್ಲಿ  ಎಂದು ಎಂದು ನಮ್ಮ ತಲೆ ಭಾರ ಹೆಚ್ಚಾಗುವುದೋ ಆಗೆಲ್ಲ ಕಣ್ಣ ಭಂಡಾರಿ ಎಂಬವರು  ತಮ್ಮ ಆಯುಧಗೊಳೊಂದಿಗೆ  ಪ್ರತ್ಯಕ್ಷ ಆಗುತ್ತಿದ್ದರು . ರಜಾ ದಿನ ನೋಡಿಯೇ ಬರುತ್ತಿದ್ದ ಅವರಿಗೆ ನಾವೆಲ್ಲಾ ತಲೆ ಬಾಗುತ್ತಿದ್ದವು ,ಮೇಲೆ ನೋಡಿದರೆ ತಲೆಯನ್ನು ಕೆಳಗೆ ಒತ್ತುವರು ,ಎಡ ಗಡೆ ತಿರುಗಿದರೆ ಬಲಕ್ಕೆ ತಿರುಗಿಸುವರು . ಯಾವುದೇ ಮುಲಾಜು ಇಲ್ಲದೆ ಬೋಳು ಮಂಡೆ ಮಾಡುವಂತೆ ಹಿರಿಯರೇ ಆಜ್ಞೆ ಮಾಡುತ್ತಿದ್ದುದರಿಂದ  ಸಿನಿಮಾ ನಟರಂತೆ ಕ್ರಾಪ್ ಇಡುವ ನಮ್ಮ ಆಸೆ ಹಾಗೆಯೇ ಉಳಿಯುತ್ತಿತ್ತು . ಮಕ್ಕಳಿಗೆ ಕತ್ತರಿ ಮಾತ್ರ ,ಹಿರಿಯರಿಗೆ  ಬಾಳು ಕತ್ತಿ ಸ್ವಲ್ಪ ಉಪಯೋಗಿಸುವರು . ಅವರು ಬಾಳು ಕತ್ತಿಯನ್ನು ಮಸೆಯುವ ಒಂದು ಕಲ್ಲನ್ನೂ ತರುತ್ತಿದ್ದು ಹರಿತ ಮಾಡಿ ಕೊಳ್ಳುವರು .ನನ್ನ ಅಣ್ಣ ಆಗ" ಬಾಳು ಬೆಳಗಿತು' ಎನ್ನುವನು .ನಮ್ಮ ಎದುರು ಗಡೆ ಕನ್ನಡಿ ಇರುತ್ತಿರಲಿಲ್ಲ . ಸಾಮೂಹಿಕ ಕೇಶ ಕರ್ತನದ ಬಳಿಕ ನಾವೆಲ್ಲಾ  ತಿರುಪತಿ ರಿಟರ್ನ್ಡ್ ತರಹ ಕಾಣುತ್ತಿದ್ದೆವು . ಕಣ್ಣನವರ ಬಳಿಕ ಅವರ ತಮ್ಮ ಪಕೀರ ಭಂಡಾರಿ ಬರುತ್ತಿದ್ದರು . ಮನೆಯಲ್ಲಿ ನಡೆಯುವ ಹೇರ್ ಕಟಿಂಗ್ ಗೆ  ಕುರ್ಚಿ ಇಲ್ಲ , ನಾವೆಲ್ಲಾ ಮರದ ಮಣೆಯ ಮೇಲೆಯೇ ಕುಳಿತು ಕೊಳ್ಳುತ್ತಿದ್ದೆವು . 

  ಎಲ್ಲಾ ಮುಗಿದು ಹೋಗುವಾಗ ಅವರ ಸಂಭಾವನೆ ,ತೆಂಗಿನಕಾಯಿ ,ಅಡಿಕೆ ,ವೀಳ್ಯದ ಎಲೆ ಕೊಡುವರು  .ಚಹಾ ಉಪಹಾರ ಸೇವಿಸಿ ಮುಂದೆ ಹೋಗುವರು . ಈಗ ಲಾಕ್ ಡೌನ್ ಸಮಯದಲ್ಲಿ ಅವರ ನೆನಪು ಆಗುವುದು ,ಜೀವನ ಎಷ್ಟು ಸರಳ ಆಗಿತ್ತು . ನಮ್ಮ ಬೇಕುಗಳು ಹೆಚ್ಚಿನವು ಅನಾಯಾಸವಾಗಿ ನೆರವೇರುತ್ತಿದ್ದವು . 

ನಿಮಗೆ ತಿಳಿದಿರ ಬಹುದು .ಒಂದು ಕಾಲಕ್ಕೆ ಯುರೋಪ್ ನಲ್ಲಿ  ಕ್ಷೌರಿಕ ರೇ  ಶಸ್ತ್ರ ಚಿಕಿತ್ಸಕ ರಾಗಿದ್ದು , ಈಗಿನ ರಾಯಲ್ ಕಾಲೇಜು ಒಫ್ ಸರ್ಜನ್ಸ್ ನ ಹುಟ್ಟು ರೋಯಲ್ ಕಾಲೇಜು ಒಫ್ ಬಾರ್ಬರ್ಸ್ ನಿಂದ ಆಯಿತು . ಅವರ ಸಂಭಾವನೆ ವೈದ್ಯರ ಫೀಸ್ ಗಿಂತಲೂ ಹೆಚ್ಚಾಗಿದ್ದ ಸಮಯ ಇತ್ತು . ಹೀಗೆ ಚಾರಿತ್ರಿಕ ನೆಲೆಯಲ್ಲಿ ಆದರೂ ಅಧಿಕಾರಿಗಳು  ಸಲೂನ್ ತೆರೆಯಲು ಅನುಮತಿ ನೀಡಿದರೆ ನನ್ನಂತಹವರಿಗೆ ಅನುಕೂಲ ಆಗುತ್ತಿತ್ತು . ನನಗೆ ಒಂದು ಸಂದೇಹ ಈ ಲಾಕ್ ಡೌನ್ ಯಾರಿಗೆ ಎಲ್ಲಾ ಎಂದು ನಿರ್ಧರಿಸುವವರು  ಬೋಳು ಮಂಡೆಯವರು ಇರಬಹುದು ,ನಮ್ಮಂಥವರ ಮೇಲೆ ಸ್ವಲ್ಪ ಅಸೂಯೆ ಇರಬೇಕು .

ಗುರುವಾರ, ಜೂನ್ 10, 2021

ಏನೂ ಇಲ್ಲದ ತಲೆಯಲ್ಲಿ ಹೇನೂ ಇಲ್ಲವೇ

                                 ತಲೆಯ  ಹೇನಿನ ಕಾಟ 

"ಏನೂ ಇಲ್ಲದ ತಲೆಯಲ್ಲಿ ಹೇನೂ ಇಲ್ಲವೇ ?" 

                

       Nitpicking: Why We Do It & 2 Questions To Stop Doing It | Marissa Bracke |  Digital Business Strategy & Implementationಮನೆ  ಮನೆಗಳಲ್ಲಿ  ಹೆಚ್ಚಾಗಿ ಸಂಜೆ ಹೊತ್ತು ತಲೆಯಿಂದ ಹೇನು ಹೆಕ್ಕುವುದು  ಸಾಮಾನ್ಯ ಕಂಡು ಬರುವ ದೃಶ್ಯ ಆಗಿತ್ತು ಮತ್ತು ಕೆಲವು ಕಡೆ ಈಗಲೂ ಇದೆ . ಈ ಹೇನಿನ ಉಪಟಳ ಶತಮಾನಗಳಿಂದ  ಜಗತ್ತಿನ ಎಲ್ಲಾ ಕಡೆ ಇದೆ . ಹೇನಿಗೆ ಇಂಗ್ಲಿಷ್ ನಲ್ಲಿ  ಲೌಸ್ ಎನ್ನುವರು . ಆ ಭಾಷೆಯಲ್ಲಿ ಒಂದು ಲೌಸಿ ಎಂಬ ನುಡಿಗಟ್ಟು ಇದೆ ಅರ್ಥಾತ್ ಅಸಹ್ಯ ಅಥವಾ ಚೆನ್ನಾಗಿಲ್ಲದ್ದು .. ಹೇನಿನ ಮೊಟ್ಟೆಗೆ ಇಂಗ್ಲಿಷ್ ನಲ್ಲಿ  ನಿಟ್ಸ್ ಎನ್ನುವರು . ನಿಟ್ ಪಿಕ್ಕಿಂಗ್ ಎಂಬ ಉಪಯೋಗ ಇದೆ ,ಇದರ ಅರ್ಥ ಯಾವುದಾದರೂ ವಿಷಯವನ್ನು ಒಕ್ಕಿ ಒಕ್ಕಿ(ಕೆದಕಿ ಕೆದಕಿ ) ನೋಡುವದು . ಇದನ್ನೇ ಗೋಯಿಂಗ್ ಓವರ್ ದಿ ಥಿಂಗ್ಸ್ ವಿಥ್ ಫೈನ್ ಟೂತ್  ಕಾಂಬ್ ಎಂದು ಬಳಸುವದೂ ಇದೆ . 

ತಲೆಯ ಹೇನು ಒಂದು ಪರಾವಲಂಬಿ ಜೀವಿ . ನೈರ್ಮಲ್ಯ ಕೊರತೆ ಮತ್ತು ಕಿಕ್ಕಿರಿದ ಮನೆಗಳು ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡಲು ಸಹಾಯಕಾರಿ . ಹೆಣ್ಣು ಮಕ್ಕಳಲ್ಲಿ ಇದರ ಉಪಟಳ ಜಾಸ್ತಿ . ತಲೆಯ ಚರ್ಮದಿಂದ ರಕ್ತ ಹೀರಿ  ಬದುಕುವ ಇವು ,ಅಲ್ಲಿಯೇ ಮೊಟ್ಟೆ  ಇಟ್ಟು ಸಂತಾನ ಬೆಳೆಸುವವು ..ಸ್ವಲ್ಪ ಹಳದಿ ,ಹೆಚ್ಚು ಬಿಳಿ ಇರುವ ಮೊಟ್ಟೆಗಳು ಕೂದಲ ಬುಡಕ್ಕೆ ಅಂಟಿಕೊಂಡು ಇರುವವು .. ಇವು ಮೊದಲು ತರುಣ ಆಮೇಲೆ  ಪ್ರಬುದ್ಧ ಆಗುವವು . 

                     Head louse - Wikipedia ಇವುಗಳ ಕಡಿತದಿಂದ ವಿಪರೀತ ತುರಿಕೆ ಉಂಟಾಗುವದು .

ಹಿಂದೆ  ನೈರ್ಮಲ್ಯ ಕೊರತೆಯಿಂದ ಇದರ ಹಾವಳಿ ಸರ್ವ ವ್ಯಾಪಿ ಆಗಿದ್ದು ,ಅದು ಒಂದು ಸಹಜ ಉಪಟಳ ಎಂದು ಎಲ್ಲರೂ ಭಾವಿಸುತ್ತ್ತಿದ್ದರು .ಹೇನು ತೆಗೆಯುವ ಬಾಚಣಿಗೆ ಎಂದೇ ಎಲ್ಲರ ಮನೆಯಲ್ಲಿ ಪ್ರತ್ಯೇಕ ಇರುತ್ತಿತ್ತು .ತಾಯಿ ಸಮಯ ಸಿಕ್ಕಾಗ ಮಗಳನ್ನು ತನ್ನ ಕಾಲ್ಗಳ ನಡುವೆ ಕೂರಿಸಿ ಹೇನು ಹೆಕ್ಕಿ ಅದನ್ನು ಉಗುರುಗಳ ನಡುವೆ ಚಿಟುಕ್ಕೆಂದು ಕೊಲ್ಲು ತ್ತಿದ್ದರು .ಕೆಲವರು ಈ ಕೆಲಸಕ್ಕೆ ಕತ್ತಿ (ಮಚ್ಚು )ಯನ್ನೂ ಬಳಸುತ್ತಿದ್ದರು . ಇದೇ  ವೇಳೆಯನ್ನು ಕೆಲವು ತಾಯಿ ಮಕ್ಕಳು ಪರಸ್ಪರ ಗುಟ್ಟು ಮಾತನಾಡಿ ಕೊಳ್ಳಲು ,ಇನ್ನು ಕೆಲವು ಅಮ್ಮಂದಿರು ಮಗ್ಗಿ ಬಾಯಿಪಾಠ  ಮಾಡಿಸಲು ಉಪಯೋಗಿಸುವರು .ಕೋಪ ಬಂದಾಗ ಮಗಳ ತಲೆಗೆ ಕುಟ್ಟುವರು .ತಾಯಿ ಮಕ್ಕಳನ್ನು ಸ್ವಲ್ಪ ಹತ್ತಿರ ಮಾಡಿದ ಶ್ರೇಯ ಹೇನಿಗೆ  ಸಿಗಬೇಕು .  ಪುನರಪಿ ಜನನ ಆಗಿ ಕೆಲವು ದಿನಗಳ ನಂತರ  ಇದೇ ಹೇನು ಸಂಹಾರ ಕಾರ್ಯದ ಪುನರಾವರ್ತನೆ ಆಗುವುದು . 

  ಈ  ಕಾಟಕ್ಕೆ ಈಗ ಒಳ್ಳೆಯ ಔಷಧಿಗಳು ಬಂದಿವೆ .  ಪೆರ್ಮೆಥ್ರಿನ್ ನ ೧% ಲೋಷನ್ , ೧% ಲಿಂಡೇನ್ , ೦.೫% ಮ್ಯಾಲಾಥಿಯೊನ್ ಮತ್ತು  ೦.೫%  ಐವರ್ ಮೆಕ್ಟಿನ್ ಲೋಷನ್ ಇತ್ಯಾದಿ .ಇವುಗಳನ್ನು ಸಾಮಾನ್ಯ ಶಾಂಪೂ ಉಪಯೋಗಿಸಿ ಒಣಗಿಸಿದ  ತಲೆಗೆ  ಹಚ್ಚಿ  ೧೦ ನಿಮಿಷಗಳ ಕಾಲ ಬಿಟ್ಟು ಕೂದಲು ತೊಳೆಯ ಬೇಕು .ತಲೆಯನ್ನು  ಬಗ್ಗಿಸಿ  ತೊಳೆಯುವುದರಿಂದ  ಶರೀರಕ್ಕೆ ಔಷಧಿ  ಸೇರದಂತೆ ಮಾಡ ಬಹುದು . ಇವುಗಳಲ್ಲಿ  ಹೆಚ್ಚಿನ ಔಷಧಿಗಳು  ಮೊಟ್ಟೆಗಳನ್ನು  ಸಂಪೂರ್ಣ ನಾಶ ಮಾಡವು ,ಆದುದರಿಂದ  ೧೦ ದಿನ ಬಿಟ್ಟು ಪುನಃ ಔಷಧಿ ಪ್ರಯೋಗ ಮಾಡುವುದು .ಕಣ್ಣಿನ ಒಳಗೆ ಔಷಧಿ ಹೋಗದಂತೆ ನೋಡಿ ಕೊಳ್ಳ ಬೇಕು .ಕಣ್ಣ ರೆಪ್ಪೆಗೆ ವ್ಯಾಸಲಿನ್ ಹಚ್ಚುವುದರಿಂದ  ಹೇನು ನಿವಾರಿಸ ಬಹುದು . 

ಮನುಷ್ಯರ ಮತ್ತು ಪ್ರಾಣಿಗಳ ಹೇನುಗಳು ಬೇರೆ .ಪ್ರಾಣಿಗಳ ಹೇನು ನಮ್ಮ ತಲೆಗೆ ಬಾರದು ;ಆದರೂ ಸಾಕು ಪ್ರಾಣಿಗಳ ಮೈಯಲ್ಲಿ ನಮ್ಮ ತಲೆಯಿಂದ ಬಿದ್ದ ಹೇನು ಮತ್ತು ಮೊಟ್ಟೆ ಇರ ಬಹುದು . ಮನುಜರ ಹೇನು ತಲೆಯಿಂದ ಹೊರ ಬಿದ್ದ ಕೆಲವು ಗಂಟೆಗಳಲ್ಲಿ ಸಾವನ್ನು ಅಪ್ಪುವುದು . ನಮ್ಮ ಬಟ್ಟೆಗಳಲ್ಲಿ ಹೇನಿನ  ಮೊಟ್ಟೆ  ಇರುವುದರಿಂದ ಕುದಿಯುವ ಬಿಸಿ ನೀರಿನಲ್ಲಿ ಅದ್ದಬೇಕು . ಬಿಸಿ ನೀರಿನಲ್ಲಿ ಹಾಕ  ಬಾರದ ಬಟ್ಟೆಗಳನ್ನು  ಡ್ರೈ ವಾಶ್  ಮಾಡಿ  ಎರಡು ವಾರ ಚೀಲದ ಒಳಗೆ ಇಡಬೇಕು . ಬಾಚಣಿಕೆ ಯನ್ನು ಸ್ವಚ್ಛ ವಾಗಿ ಇಡಬೇಕಲ್ಲದೆ ಒಬ್ಬರದ್ದು ಅವರೇ ಉಪಯೋಗಿಸುವುದು ಉತ್ತಮ ,

ಬುಧವಾರ, ಜೂನ್ 9, 2021

ಏಳು ಸುತ್ತಿನ ಕೋಟೆ

              ಏಳು  ಸುತ್ತಿನ  ಕೋಟೆ 


ಬಾಲ್ಯದಲ್ಲಿ  ಆಗಾಗ ಕೇಳುತ್ತಿದ್ದ ಕತೆಯ ಪ್ರೋಟೋ  ಟೈಪ್ ,. ಏಳು  ಕೋಟೆಗಳ  ಒಳಗೆ  ಒಬ್ಬ  ರಾಜಕುಮಾರಿ  .  ಅವಳನ್ನು  ಗೆದ್ದು ಮದುವೆ ಯಾಗುವ  ಮನಸುಳ್ಳ  ಒಬ್ಬ  ರಾಜಕುಮಾರ  .ಆದರೆ ಅಲ್ಲಿಗೆ  ಹೋಗುವ ದಾರಿ ಸುಗಮ  ಅಲ್ಲ . ಮೊದಲನೇ  ಕೋಟೆಯ  ಬಾಗಿಲಿನಲ್ಲಿ  ಒಬ್ಬಳು ಮುದುಕಿ .ಅವಳು ಕೇಳಿದ ಮೂರು ಪ್ರಶ್ನೆಗಳಿಗೆ  ಸರಿಯಾದ  ಉತ್ತರ ಕೊಟ್ಟರೆ  ಎರಡನೇ  ಕೋಟೆಯ  ಬಾಗಿಲು  ತೆರೆಯುವುದು .ಅಲ್ಲಿ  ಒಂದು  ಗಿಳಿ .ಅದು  ರಾಜಕುಮಾರನಿಗೆ ಒಂದು ಗುಪ್ತ ಸಂಕೇತ  ನೀಡುವುದು .ಅದನ್ನು  ಕಾವಲುಗಾರರಿಗೆ ಹೇಳಿದರೆ ಆರನೇ  ಬಾಗಿಲು ವರೆಗೆ ಹೋಗ ಬಹುದು . ಅಲ್ಲಿ  ಏಳು ಹಕ್ಕಿಯಗಳ  ಗೂಡುಗಳು, ಏಳನೇ ಹಕ್ಕಿಯ  ಕೊರಳೊಳಗೆ ಒಂದು ಮಣಿ . ಆ ಮಣಿಯನ್ನು ತೋರಿಸಿ  ಅಜ್ಜಿ ಹೇಳಿದ ಗುಪ್ತ ಸಂಕೇತ  ಹೇಳಿದರೆ  ರಾಜಕುಮಾರಿಯ  ದರ್ಶನ. 

ಇಂತಹದೇ  ಅನುಭವ ನನಗೆ ನಿನ್ನೆ ಆಯಿತು .ಎಲ್ಲರೂ ಮಾಡುತ್ತಾರೆ ಎಂದು  ಇಂಟರ್ನೆಟ್  ಬ್ಯಾಂಕಿಂಗ್  ಮೂಲಕ  ಹಣ ಕಳುಹಿಸಲು ಎಂದು ಯೂಸರ್  ನೇಮ್  ಮತ್ತು  ಪಾಸ್ ವರ್ಡ್  ಕ್ಯಾಪ್ ಚಾ   ಹಾಕಿದರೆ   ತೆರೆಯಲಿಲ್ಲ .ಬದಲಿಗೆ  ನಿಮ್ಮ  ಮೊಬೈಲ್ ಗೆ  ಬಂದ  ಲಾಗ್ ಇನ್  ಓ ಟಿ ಪಿ ಹಾಕಿರಿ ಎಂದಿತು .ಮೊಬೈಲ್ ನಲ್ಲಿ  ನಾನು  ಸಂದೇಶ  ಓದು ವಷ್ಟರಲ್ಲಿ  ಮೊಬೈಲ್ ದೀಪ ಅರಿತು .ಪುನಃ ಆನ್ ಮಾಡಿದಾಗ  ಮೊಬೈಲ್ ಪಿನ್ ಕೇಳಿತು .ಅದನ್ನು  ಹಾಕಿ ಮೆಸ್ಸೆಂಜರ್  ಗೆ  ಹೋಗಿ  ಓ ಟಿ ಪಿ ಕಾಪಿ ಮಾಡಲು  ಇನ್  ವ್ಯಾಲಿಡ್  ಎಂದು ಬರಲು  ಪುನಃ  ಸರಿಯಾಗಿ  ನೋಡಿ ಎಂಟರ್  ಮಾಡಲು  ನಿಮ್ಮ  ಸೆಶನ್  ಮುಗಿದಿದೆ ,ಪುನಃ  ಆರಂಭಿಸಿರಿ  ಎಂದು ಬಂತು . ಛಲ ಬಿಡದ  ತ್ರಿವಿಕ್ರಮನಂತೆ  ಮತ್ತೆ ಲಾಗ್ ಇನ್  , ಓ ಟಿ ಪಿ  ಯೆಲ್ಲಾ  ಆದಾಗ  ಮೊದಲನೇ  ಬಾಗಿಲು ತೆರೆಯಿತು . 

ಇಷ್ಟೆಲ್ಲ  ಆಗಿ  ನಾನು ಕಳುಹಿಸ ಬೇಕಿದ್ದವರ  ಹೆಸರು ,ಅಕೌಂಟ್ ನಂಬರ್  ಮೊತ್ತ ಇತ್ಯಾದಿ ಹಾಕಿದಾಗ ಇದನ್ನು ಕಳುಹಿಸಲು  ನಿಮ್ಮ ಮೊಬೈಲ್ ನಲ್ಲಿ ಸೆಕ್ಯೂರಿಟಿ  ಓ ಟಿ ಪಿ  ಆಪ್  ಡೌನ್ ಲೋಡ್ ಮಾಡಿರಿ ,ಮತ್ತು ಅದರಲ್ಲಿ  ಬರುವ ಸೆಕ್ಯೂರಿಟಿ ಕೋಡ್  ಎಂಟರ್ ಮಾಡಿರಿ ಎಂದು ಬಂತು .ಗೂಗಲ್ ಪೇ  ಯಲ್ಲಿ  ಆಪ್  ಡೌನ್ಲೋಡ್ ಮಾಡಿ  activate  ಮಾಡಲು  ಪುನಃ ಲಾಗ್ ಇನ್ ಹೆಸರು ಮತ್ತು ಪಾಸ್ವರ್ಡ್  ಕೇಳಿತು .ಮುಂದೆ ಮುಂದುವರಿಯಲು ಅವರೇ ಕೊಡುವ ಉಂಡು ಸಂದೇಶ ಅವರಿಗೆ  ಎಸ್  ಎಂ  ಎಸ್   ಮಾಡಲು ಹೇಳಿತು . ಆಮೇಲೆ ನಾವು ನಮ್ಮ ಪಾಸ್ ವರ್ಡ್ ಪುನಃ ಹಾಕಬೇಕು .ಅಲ್ಲಿಗೆ ಸೆಕ್ಯೂರಿಟಿ  ಓ ಟಿ ಪಿ ಆಪ್ ನ  ಪಿನ್ ರಚಿಸುವ ಹಕ್ಕು ಬಂತು .ಅದನ್ನು ಎರಡು ಬಾರಿ ಹಾಕಿದಾಗ  ನೀವು ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್  ಸೈಟ್ ನಲ್ಲಿ  ಪ್ರೊಫೈಲ್ ಗೆ  ಹೋಗಿ  ಅಲ್ಲಿ  ನಿಮ್ಮ ಮೊಬೈಲ್ ಗೆ  ಬಂದ  ಓ ಟಿ ಪಿ ಯನ್ನು validate  ಸೆಕ್ಯೂರಿಟಿ  ಅಪ್ ಪಿನ್ ಎಂಬ ಭಾಗಕ್ಕೆ ಹೋಗಿ  ಎಂಟರ್ ಮಾಡಿದಾಗ  ಆಪ್ ಕಾರ್ಯ ನಿರತವಾಗುವುದು .ಆಮೇಲೆ  ನೀವು ರಚಿಸಿದ ಪಿನ್ ಹಾಕಿ ತೆರೆದು ಒಂದು ಸೆಕ್ಯೂರಿಟಿ ಓ ಟಿ ಪಿ ದಯಪಾಲಿಸು ಎಂದಾಗ ಬರುವ ಸಂಖ್ಯೆಯನ್ನು  ನಾವು ಇಂಟರ್ನೆಟ್  ಬ್ಯಾಂಕಿಂಗ್ ನಲ್ಲಿ ಹಣ ಪಾವತಿ ಹಂತದಲ್ಲಿ ಎಂಟರ್ ಮಾಡಿದಾಗ ಮಾತ್ರ  ಕೆಲಸ ಆಯಿತು . 

ಇದು ಎಲ್ಲಾ ನಮ್ಮ ಗಳಿಕೆಯ  ಸುರಕ್ಷಿತತೆ ಗೆ  ಎಂದು ಮಾಡಿದ್ದು ಆದರೂ ದಿನದಿಂದ ದಿನಕ್ಕೆ  ಸಂಕೀರ್ಣವೂ ,ನಮ್ಮಂತಹವರಿಗೆ  ಕಬ್ಬಿಣದ ಕಡಲೆಯೂ ಆಗಿ , ಬ್ಯಾಂಕಿಂಗ್ ಕೆಲಸ  ಮುಗಿಯುವಾಗ ತಲೆ ಚಿಟ್ಟು  ಹಿಡಿಯುವುದು

ಚಿಮಿಣಿ

  ಚಿಮಿಣಿ ದೀಪ 

                                  
Brass Antique Oil Lamp Or kerosene Lamp

ಚಿಕ್ಕಂದಿನಲ್ಲಿ ಮನೆಯಲ್ಲಿ ವಿದ್ಯುತ್ ಸೌಕರ್ಯ ಇರಲಿಲ್ಲ .ಹತ್ತು ಬುಡ್ಡಿ ದೀಪ ,ಎರಡು ಲಾಂಪ್ ಮತ್ತು ಒಂದೆರಡು ಲಾಟೀನು ಇರುತ್ತಿತ್ತು .ಪ್ರತಿ ದಿನ ಸಾಯಂಕಾಲ ಈ ದೀಪಗಳ ಬತ್ತಿ ಸರಿ ಮಾಡುವುದು ,ಎಣ್ಣೆ ತುಂಬಿಸುವುದು ,ಮತ್ತು ಲಾಂಪ್ ,ಲಾಟೀನುಗಳ ಗಾಜಿನ ಮಸಿ ಒರಸುವುದು ಒಬ್ಬರ ಕೆಲಸ . ಚಿಮಿಣಿ ಬುಡ್ಡಿಗಳ ಕೊರತೆ ಉಂಟಾದರೆ ಸಣ್ಣ ಔಷಧಿ ಬಾಟಲಿನ ಮುಚ್ಚಳ ದಲ್ಲಿ ಒಟ್ಟೆ ಮಾಡಿ ಬತ್ತಿ ಇಳಿಸಿ ಚಿಮಿಣಿ ದೀಪ ತಯಾರು ಮಾಡುತ್ತಿದ್ದೆವು . ಮಕ್ಕಳಿಗೆ ಓದಲು ಇಂತಹ ಸಣ್ಣ ಚಿಮಿಣಿ ದೀಪಗಳು .ನಮ್ಮ ಮನೆ ತುಂಬಾ ಮಕ್ಕಳಿದ್ದು ಇಬ್ಬರಿಗೆ ಒಂದರಂತೆ ಒಂದು ದೀಪ . 

  ನಾನು ಮತ್ತು ಅಕ್ಕ ಭಾಗ್ಯಲಕ್ಷ್ಮಿ ಒಂದು ದೀಪವನ್ನು ಹೆಚ್ಚಾಗಿ ಷೇರ್ ಮಾಡಿಕೊಳ್ಳುತ್ತಿದ್ದೆವು . ಅವಳು ಓದುವಾಗ ತನ್ನ ಬಳಿ ಕಾಪಿಟ್ಟ ಸಾಂತಣಿ ಪುಳಿಂಕೊಟ್ಟೆ ನನಗೂ ಕೊಟ್ಟು ತಿನ್ನುವಳು . ಇಬ್ಬರೂ ಗಟ್ಟಿಯಾಗಿ ಓದುವೆವು .ನಾವು ಓದುತ್ತಿದ್ದುದು ನಮ್ಮ ಅರಿವಿಗೋ ಅಥವಾ ಹಿರಿಯರನ್ನು ಸಮಾಧಾನ ಪಡಿಸಲೋ ಎಂಬ ಸಂಶಯ ನನಗೆ ಈಗ ಬರುತ್ತಿದೆ .ಇಬ್ಬರೂ ಒಂದೇ ದೀಪದ ಬೆಳಕಿನಲ್ಲಿ ಓದುವಾಗ  ಕೊನ್ಫ್ಲಿಕ್ಟ್ಸ್ ಆಫ್ ಇಂಟರೆಸ್ಟ್ ಬರುತ್ತದೆ . ಕೆಲವೊಮ್ಮೆ ದೀಪ ಅವಳ ಬಳಿಗೆ  ಹೆಚ್ಚು ಸರಿಸಿದ್ದಾಳೆ ;ನನಗೆ ಕಾಣುವುದಿಲ್ಲ  ಎಂದು ಸಣ್ಣ ಜಗಳ ವಾದದ್ದು ಇದೆ .ಇಂತಹ ಅಧ್ಯಯನ ಕ್ರಾಸ್  ಲರ್ನಿಂಗ್  ಗೆ  ಕಾರಣ ವಾದದ್ದು  ಅನೇಕ ಬಾರಿ . ಉದಾಹರಣೆಗೆ ನಾನು ರನ್ನನ ಗಧಾ ಯುದ್ಧದ ,'ಆ ರವಮಂ ನಿರಸ್ತ ಘನ  ರವಮಂ ನಿರ್ಜಿತ ಕಂಠೀ ರವ ರವಮಂ ,ಕೋಪಾರುಣ ನೇತ್ರಮ್ ಕೇಳ್ದಾ    ನೀರೊಳಗಿದ್ದೂಬೆಮರ್ತನುರಾಗಪತಾಕಮ್"ಗಟ್ಟಿಯಾಗಿ ಬಾಯಿಪಾಠ ಮಾಡುವಾಗ ಅವಳು ' ಇಂಡಿಯ ಈಸ್ ರಿಚ್ ಕಂಟ್ರೀ ಇನ್ಹಬೀಟೆಡ್ ಬೈ ಪೂರ್ ಪೀಪುಲ್; ಟುಡೇಸ್  ಲುಕ್ಷುರಿ ಈಸ್  ಟುಮರೋಸ್ ನೆಸೇಸಿಟಿ" ಎಂದು ಎಕನಾಮಿಕ್ಸ್ ನೋಟ್ಸ್ ಕಂಠ ಪಾಟ ಗಟ್ಟಿಯಾಗಿ ಮಾಡುವಳು .ಇದರಿಂದ ನನ್ನ ಪದ್ಯ ಅವಳಿಗೂ ಅವಳ ನೋಟ್ಸ್ ನನಗೂ ತಪ್ಪದೇ ಬರುವುದು , ನಮಗೆ ಬೇಕಾದ್ದು ಅಲ್ಲ.

ಚಿಮಿಣಿ  ದೀಪಗಳಿಗೆ  ಹಾತೆಗಳು ಆತ್ಮಹತ್ಯೆ  ಮಾಡಿಕೊಳ್ಳಲು  ಬರುವವು . ಅವುಗಳ  ಮೃತ ಶರೀರ  ನಮ್ಮ ಪಠ್ಯ ಪುಸ್ತಕಗಳ ಪುಟಗಳ  ಒಳಗಡೆ   ಶಾಶ್ವತ  ಸ್ಮಾರಕ ಪಡೆಯುವವು . ನೊಣಂಪ್ರತಿ ಎಂಬ  ಶಬ್ದ  ಹುಟ್ಟಿದ್ದೇ ಹೀಗೆ . ಇನ್ನುಳಿದ  ಕೀಟಗಳನ್ನು  ಹಲ್ಲಿಗಳು ಹೊಂಚು  ಹಾಕಿ  ತಿನ್ನುವುವು . ಇವುಗಳೆಲ್ಲ  ಜೀವಿಗಳ ನಡುವೆ  ನಮ್ಮ ಅನ್ಯೋನ್ಯ  ಬಾಳು .ಹಲವು ಬಾರಿ  ಚಿಮಿಣಿ ದೀಪದ  ಎದುರು  ಓದುವುದಕ್ಕೆ  ಕುಳಿತಲ್ಲಿಯೇ ನಿದ್ದೆ  ತೂಗಿ  ನಮ್ಮ ತಲೆ ಗೂದಲಿಗೆ ಬೆಂಕಿ ಹಿಡಿದು  ವಾಸನೆ ಬರುವಾಗ   ಎಚ್ಚರ  ಆದದ್ದು ಇದೆ

ಸಂಜೆ ಹೊತ್ತು  ಒಂದು ದೀಪವನ್ನು  ಒಲೆಯ ಬೆಂಕಿಯ ಸಹಾಯದಿಂದ  ಹಚ್ಚಿ  ,ಮತ್ತೆ ಅದರ  ಬೆಳಕನ್ನು  ಒಂದೊಂದಾಗಿ ಇತರ ದೀಪಗಳಿಗೆ  ಹಂಚುವುದು  ಜ್ನಾನವನ್ನು  ಒಬ್ಬರಿಂದ  ಇನ್ನೊಬ್ಬರಿಗೆ  ಪಸರಿಸುವ ಕ್ರಿಯೆಯನ್ನು ಸಂಕೇತಿಸುವುದು.ಬಚ್ಚಲು ಮನೆಗೊ ಹಿತ್ತಿಲಿಗೋ ಹೋಗುವಾಗ ಕೈಯಲ್ಲಿ ಒಂದು ಚಿಮ್ಮಿಣಿ ದೀಪ ,ಆದರೆ ದೀಪದ ಕೆಳಗೆ ಕತ್ತಲೆಯೇ .

ಭಾನುವಾರ, ಜೂನ್ 6, 2021

ಕೊಡೆ

                        ಕೊಡೆ 


       

THULU ORIPUGA-kavyasutha : ಪಣೊಲಿ,ಪಣೋರು ,ಗೊರಬೆ -panoli,panoru,gorabe                                          ಮಳೆ ಗಾಲ ಆರಂಭವಾಗಿದೆ .ಕೊಡೆ ಗಳು ಹೊರಗೆ ಬಂದಿವೆ . 

ಚಿಕ್ಕಂದಿನಲ್ಲಿ ನಾವು ಮನೆಯಲ್ಲಿ ಉಪಯೋಗಿಸುತ್ತಿದ್ದುದು ಗೊರಬೆ .ಮನೆ ಭಾಷೆಯಲ್ಲಿ ಅದನ್ನು ಕಿರಿಂಜೆಲು ಎನ್ನುತ್ತಿದ್ದೆವು . ಇದರಲ್ಲಿ ಎರಡು ವಿಧ ಇದ್ದುವು .ಒಂದು ತೆಂಗಿನ ಓಲೆ (ಮಡಲು)ಯಿಂದ ಮಾಡಿದ್ದು .ನಾವು ಹೆಚ್ಚಾಗಿ ಉಪಯೋಗಿಸುತ್ತಿದ್ದುದು .ಅದರ ತಲೆ ಭಾಗದಲ್ಲಿ ಹುಂಜದಂತೆ ಒಂದು ಜುಟ್ಟು ಇರುತ್ತಿತ್ತು . ಇನ್ನೊಂದು ತಾಳೆ ಓಲೆಯಿಂದ ಮಾಡಿದುದು . ಹಿರಿಯರು ಮತ್ತು ಕಾರ್ಮಿಕರು ಹೆಚ್ಚಾಗಿ ಉಪಯೋಗಿಸುತ್ತಿದುದು. ಚಿತ್ರದಲ್ಲಿ ಕಾಣುವುದು ಇದುವೇ. ನಮ್ಮ ಮನೆಯ ಹತ್ತಿರ  ರಾಚು ಆಚಾರಿ ಎಂಬವರು ಇದ್ದರು.ಅವರು ಚೆನ್ನಾಗಿ ಗೊರಬೆ ಹಣೆಯುತ್ತಿದ್ದು ನಮ್ಮ ಬೇಡಿಕೆಗಳನ್ನು ಪೂರೈಸುತ್ತಿದ್ದರು . ಜೋರಾಗಿ ಮಳೆ ಬರುವಾಗ ಕೊಡೆಗಿಂತ ಗೊರಬೆ ಉತ್ತಮ .ಕಡೇ ಪಕ್ಷ ಬೆನ್ನು ಬೆಚ್ಚಗೆ ಉಳಿಯುವುದು . 'ಮರಳಿ ಮಣ್ಣಿಗೆ 'ಕಾದಂಬರಿಯಲ್ಲಿ ಸರಸೋತಿಯದ್ದೋ  ಪಾರೋತಿಯದ್ದೋ ಮದುವೆ ದಿಬ್ಬಣ ವನ್ನು ಕಾರಂತರು ವರ್ಣಿಸುವಾಗ ಮಳೆಯಿಂದಾಗಿ  ಮದುವೆ ಮನೆಗೆ ತಲುಪುವಾಗ ಬೆನ್ನು ಮಾತ್ರ ಒದ್ದೆಯಾಗದೆ ಉಳಿದದ್ದು ಎಂದು ಬರೆದ ನೆನಪು . ಶಾಲೆಗೆ ಕೂಡ ಅರ್ಧದಷ್ಟು ಮಕ್ಕಳು ಗೊರಬೆ ಧಾರಿ  ಗಳಾಗಿ  ಬರುತ್ತಿದ್ದರು . ನಮ್ಮ ಕಿವಿ ಗೊರಬೆಯ ಒಳಗೆ ಇರುತ್ತಿದ್ದರಿಂದ  ಮತ್ತು ಮಳೆಯ ಶಬ್ದ ಎರಡೂ ಸೇರಿ ನಮ್ಮನ್ನು ಭಾಗಶಃ  ಕಿವುಡ ರನ್ನಾಗಿ ಮಾಡುವುದು .

 

ನೇಜಿ ನೆಡುವ ಸಮಯ ಎಲ್ಲರೂ ಸಾಲಾಗಿ ಬಾಗಿ ಗೊರಬೆಗಳ ಸಾಲು ತೇಲುತ್ತ ಇರುವಂತೆ ಕಾಣುವುದು. ಮಳೆ ಇಲ್ಲದ ಸಮಯ ಹುಣಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಕೂಡಾ ನೆನಪಿಗೆ ಬರುವುದು.
ಗದ್ದೆ ತೋಟಕ್ಕೆ ಹೋಗುವಾಗ ಗೊರಬೆ ಮರೆತು ಹೋದಾಗ ಹಠಾತ್ ಮಳೆ ಬಂದರೆ ಮುಂಡಿ ಎಲೆ ಸಿಕ್ಕಿದರೆ ಅದನ್ನೇ ತುಂಡು ಮಾಡಿ ತಲೆಗೆ ಹಿಡಿದುಕೊಂಡು ಬರುವುದು .

ಮುಂದೆ ಕೊಡೆ ಬಂತು . ನಮ್ಮ ಊರ ಮಳೆಗೆ ಕೊಡೆ ಮಾನಸಿಕ ರಕ್ಷಣಾ ಭಾವಕ್ಕೆ ಮಾತ್ರ .ಜೋರಾಗಿ ಗಾಳಿ ಮಳೆ ಬಂದರೆ ವರುಣನಿಂದ ನಮ್ಮನ್ನು ರಕ್ಷಿಸದು .ಗದ್ದೆಯ ಹುಣಿಯಲ್ಲಿ ನಡೆಯುವಾಗ ಗಾಳಿ ನಮ್ಮನ್ನು ಕೊಡೆ ಸಹಿತ  ಧರಾ ಶಾಯಿ ಯಾಗಿ ಮಾಡಿದ್ದು ಇದೆ . ಮಳೆಗೆ ಮೈಲು ಗಟ್ಟಲೆ ನಡೆದು ಶಾಲೆಗೆ ತಲುಪುವಾಗ ಕೆಲವು ದಿನ ಚಂಡಿ ಪುಂಡಿ . ವರ್ಷದಲ್ಲಿ ಮೂರು ನಾಲ್ಕು ದಿನವಾದರೂ ಹೆಡ್ ಮಾಸ್ತರು ನಮ್ಮ ಸ್ಥಿತಿ ಗಮನಿಸಿ ರಜೆ ಘೋಷಿಸುವರು .ನಮಗೆ ಭಾರೀ ಖುಷಿ . ತುಂಬಾ ದಿನಗಳ ರಜೆ ಬಂದಾಗ ಯಾವಾಗ ಶಾಲೆ ಶುರು ಆಗುವುದೊ ಎಂಬ ಚಿಂತೆ ,ಶಾಲೆ ಆರಂಭ ಆದ ಮೇಲೆ ರಜೆ ಯಾವಾಗ ಬರುವುದೋ ಎಂಬ ಯೋಚನೆ ಮಕ್ಕಳಿಗೆ ಅನಾದಿ ಕಾಲದಿಂದಲೂ ಇದ್ದದ್ದು .

ಕೊಡೆ ನಮಗೆ ಚಿಕ್ಕಪ್ಪ ಮಂಗಳೂರು ಅಡಿಕೆ ಬಂಡಸಾಲೆ ಯಿಂದ ಬರುವಾಗ ತರುತ್ತಿದ್ದುದು .ಅದರ ಬಟ್ಟೆಯಲ್ಲಿ ಸಿಲ್ವರ್ ಪೈಂಟ್ನಿಂದ ನಮ್ಮ ಹೆಸರು ಬರೆಸುತ್ತಿದ್ದರು .ನಮ್ಮ ಹೆಮ್ಮೆಯ ಸೊತ್ತು .ಈಗಿನಂತೆ ವರ್ಷಕ್ಕೆ ಒಂದು ಕೊಡೆ ಕೊಳ್ಳುವುದು ಇರಲಿಲ್ಲ . ಹಲವು ಭಾರಿ ಅದಕ್ಕೆ ಸರ್ವೀಸ್ ಮಾಡುವುದು . ಕೆಲವೊಮ್ಮೆ ಬಟ್ಟೆಯನ್ನೇ ಬದಲಾಯಿಸುದು .ಮಳೆಗಾಲ ಮುಗಿಯುತ್ತಲೇ ಆಟ್ಟ ಸೇರುವುದು .

ಮದುವೆ ದಿಬ್ಬಣದಲ್ಲಿ ಕೊಡೆ ಮುಖ್ಯ ವಸ್ತು .ನನ್ನ ಮದುವೆ ದಿನ ಅದನ್ನು ಕೊಂಡು ಹೋಗಲು ಬಿಟ್ಟು ಹೋಗಿತ್ತು . ಕಡೆಗೆ ಹುಡುಗಿಯ ಕೊಡೆಯನ್ನೇ ತತ್ಕಾಲ ತೆಗೆದು ಕೊಂಡೆವು .ಕೊಡೆ ಇಲ್ಲದ್ದ ಮಾಣಿಗೆ (ಗಂಡಿಗೆ) ಕೂಸಿನ (ಹುಡುಗಿಯ )ಕೊಡೆ .ಎಂಬುದು ಒಳ್ಳೆಯ ಪನ್ ಆಯಿತು .

ಎ ಜೆ ಗಾರ್ಡ್ನರ್  ಅವರ ಅಂಬ್ರೆಲ್ಲ ಮೋರಲ್ಸ್ ಎಂಬ ಪ್ರಸಿದ್ದ ಲಲಿತ ಪ್ರಬಂಧ ಇದೆ .ಇದರಲ್ಲಿ ಸಮಾರಂಭ ,ಚರ್ಚ್ ಇತ್ಯಾದಿ ಗಳಿಗೆ  ಹೋಗಿ ವಾಪಾಸು ಬರುವಾಗ ಗಡಿಬಿಡಿ ಯಲ್ಲಿ  ನಾವು ನಮ್ಮ ಹಳೇ ಕೊಡೆ ಬದಲಿಗೆ ಇನ್ಯಾರದೋ ಹೊಸ ಕೊಡೆ ತಪ್ಪಿ ತೆಗೆದು ಕೊಳ್ಳುವುದು ,ನಂತರ ಅರ್ಧ ದಾರಿಯಲ್ಲಿ ಅದನ್ನು ನೋಡಿ "ಛೇ ತಪ್ಪಾಯಿತಲ್ಲಾ ,ಇದ್ಯಾರದೋ ಬೇರೆ ಕೊಡೆ "ಎಂದು ಕೊಂಡು ಪುನಃ ಹೋಗಿ ಮರಳಿಸುವಾ ಎಂದು ಆತ್ಮ ಸಾಕ್ಷಿ ಹೇಳುವುದು . ವಾಸ್ತವ ಪ್ರಜ್ನೆ" ನಾನು ಪುನಃ ಹೋಗುವಷ್ಟರಲ್ಲಿ  ಇದರ ಯಜಮಾನ ಇನ್ಯಾರದೋ ಕೊಡೆ ತೆಗೆದು ಕೊಂಡು ಮನೆಗೆ ಹೋಗಿರುವನು .ಇದು ನನಗೇ ಆಯಿತು.ನಾನು ಉದ್ದೇಶ ಪೂರ್ವಕ ಬದಲಿಸಿದ್ದು ಅಲ್ಲವಲ್ಲ .(ಯಾಕೆಂದರೆ ಇದು ಹೊಸ ಕೊಡೆ !)"ಎಂದು ಸಮಜಾಯಿಷಿ ನೀಡುವುದು .ದೇವಸ್ಥಾನಕ್ಕೆ ಹೊಸಾ ಕೊಡೆ ತೆಗೆದು ಕೊಂಡು ಹೋದರೆ ನಮ್ಮ ಮನಸು ಹೊರಗೆ ಇಟ್ಟ ಕೊಡೆ ಮೇಲೇ ಇರುವುದರಿಂದ ಛತ್ರಿ ಚಿತ್ತರಾಗಿ ಭಾಗವಂತನನ್ನು ಪ್ರಾರ್ಥಿಸುತ್ತೇವೆ .

ಗುರುವಾರ, ಜೂನ್ 3, 2021

ಮಲೇರಿಯಾ ಜೀವನ ಚರಿತ್ರೆ

   ಮಲೇರಿಯಾ ಜೀವನ ಚಕ್ರ ಅಥವಾ ಚರಿತ್ರೆ 


ಪ್ರಕೃತಿಯ ಸೃಷ್ಟಿ ಬಹು ವಿಚಿತ್ರ . ಮನುಷ್ಯ ನ ದೇಹದಲ್ಲಿ ಸಂಕೀರ್ಣವಾದ   ರೋಗ ನಿರೋಧಕ  ವ್ಯವಸ್ಥೆ ಇಟ್ಟಿದೆ  .ಅದೇ ಸಮಯ ಅವನನ್ನು ಹಣಿಯಲು ಬೇಕಾದ ಪ್ರಬಲ ಆಯುಧ ಗಳು ಉಳ್ಳ ರೋಗಾಣುಗಳನ್ನೂ . 

ಉದಾಹರಣೆಗೆ ಇಂದು ನಾವು ಮಲೇರಿಯಾ ಕಾಯಿಲೆಯನ್ನು ಪರಿಗಣಿಸುವ . ಹಿಂದೆ ನಾವು ಕೊಕ್ಕೆ ಹುಳದ ಬಗ್ಗೆ  ತಿಳಿದಿದ್ದೇವೆ . ಅದು ಏಕ ಪ್ರಾಣಿ ವೃತಸ್ತ  . ಮನುಷ್ಯ ಓರ್ವ ಇದ್ದರೆ ಸಾಕು ಅದರ ಬಾಲ್ಯ ,ಯೌವನ ,ಸಂತಾನೋತ್ಪತ್ತಿ  ನಮ್ಮೊಳಗೇ ನಡೆದು ಮುಗಿಯುವುದು .ಅದರ ಮೊಟ್ಟೆ ಮಣ್ಣಿನಲ್ಲಿ ಸ್ವಲ್ಪಕಾಲ ಬೆಳೆದು ಬೆಳವಣಿಗೆ ಕಂಡು ಮತ್ತೆ ಮನುಷ್ಯನ ಶರೀರ ಸೇರಿ .ಪುನರಪಿ ಜನನಂ ಪುನರಪಿ ಮರಣಂ ಪುನರಪಿ ನರನ ಜಠರೇ (ಕರುಳೇ )ಶಯನಂ . 

ಆದರೆ ಮಲೇರಿಯಾ ಜೀವನ ಚರಿತ್ರೆ ಹಾಗಲ್ಲ ; ಇನ್ನೂ ರೋಚಕ .. 

ಈ ಪರೋಪಜೀವಿ ಗೆ  ಎರಡು ಆತಿಥೇಯರು ಬೇಕೇ ಬೇಕು . ಒಂದು ನಿರ್ಣಾಯಕ -ಹೆಣ್ಣು ಅನೋಫಿಲಿಸ್ ಸೊಳ್ಳೆ ಮತ್ತೊಂದು ಮಧ್ಯವರ್ತಿ -ಮನುಷ್ಯ . ಗಂಡು ಸೊಳ್ಳೆ ಅಹಿಂಸಾ ವಾದಿ ,ನಮ್ಮ ಸುದ್ದಿಗೆ ಬರದು ,ಸಾಧು .ಸಸ್ಯಾಹಾರಿ .ಹೆಣ್ಣು ಸೊಳ್ಳೆ ರಕ್ತ ಪಿಪಾಸು , ಅದರ ರೆಕ್ಕೆಯ ಚಲನೆ ಉಚಿತವಾದ ಸಂಗೀತ ಉಂಟು ಮಾಡುವುದು . ನಮ್ಮನ್ನು ಕಚ್ಚಿದಾಗ ಅದರ ಲಾಲಾರಸದಲ್ಲಿ  ಇರುವ ರಾಸಾಯನಿಕಗಳು ರಕ್ತ ಕೂಡಲೇ ಹೆಪ್ಪುಗಟ್ಟದಂತೆ ಮಾಡಿ ಹೆಚ್ಚು ರಕ್ತ ಅದಕ್ಕೆ ಸಿಗುವಂತೆ ಮಾಡುವವು . ಬದಲಿಗೆ ಸೊಳ್ಳೆಯ ಬಾಯಿಯ ಮೂಲಕ ಮಲೇರಿಯಾ ರೋಗಾಣು  ಪ್ಲಾಸ್ಮೋಡಿಯಂ ನಮ್ಮ ಶರೀರ ಸೇರುವುದು ;ಕಡಿತದ ವ್ಯಾಪಾರ . ಸೊಳ್ಳೆಯನ್ನು  ಮಲೇರಿಯ ಕಾಡುವುದಿಲ್ಲ 

  ಸೊಳ್ಳೆ ಮಲೇರಿಯ ರೋಗಾಣುವಿನ ನಿರ್ಣಾಯಕ ಅತಿಥೇಯ ಎಂದೆವಲ್ಲ .ಅದರ ಅರ್ಥ ಅದರ ವೈವಾಹಿಕ ಜೀವನ ಮತ್ತು ಸಂತಾನೋತ್ಪತ್ತಿ ಹೆಣ್ಣು ಅನೋಫಿಲಿಸ್ ಸೊಳ್ಳೆಯ ಒಳಗೇ ನಡೆಯುವದು . ಸ್ವಲ್ಪ ಬೆಳೆದ ಮರಿಗಳು ಮನುಷ್ಯನ ಶರೀರ ರಕ್ತದ ಮೂಲಕ ಸೇರಿ ,ಅದರ ಬ್ರಹ್ಮಚಾರಿ ಜೀವನ ಅಲ್ಲಿ ನಡೆಯುವದು . ಮೊದಲು ಲಿವರ್ ಸೇರಿ ಅಲ್ಲಿ ಕೆಲವು ಹಂತದ ಬೆಳವಣಿಗೆ ,ಆಮೇಲೆ  ಎಳೆಯ ಕೆಂಪು ರಕ್ತ ಕಣಗಳ ಮೇಲೆ ಧಾಳಿ ,ಅಲ್ಲಿ ಅತಿಥಿಯಾಗಿ ಸೇವೆ ಸಲ್ಲಿಸಿ ಬೆಳವಣಿಗೆ ಹೊಂದಿ ಪುರಾಣದ ವಾತಾಪಿಯಂತೆ  ಅತಿಥೇಯನ (ಅಂದರೆ ಕೆಂಪು ರಕ್ತ ಕಣಗಳ )ಶರೀರ ಛೇದಿಸಿ ಹೊರ ಬರುವವು .ಕೆಲವು ಪುನಃ ಲಿವರ್ ಯಾತ್ರೆ ಕೈಗೊಂಡರೆ ಮತ್ತೆ ಹಲವು ಪುನಃ ಕೆಂಪು ರಕ್ತ ಕಣ ಸೇರಿ ಕಾರ್ಯಕ್ರಮ ಮುಂದು ವರಿಸುವವು .  ರೋಗಾಣು ಮತ್ತು ನಶಿಸುತ್ತಿರುವ ರಕ್ತ ಕಣಗಳಿಂದ ಉಂಟಾದ ವಸ್ತುಗಳು ಜ್ವರ ಕಾರಕಗಳು .ಈ ತರಹ ಉಂಟಾದ ಮರಿಗಳು ಬೆಳೆದು ಕೆಲವು ಗಂಡು ಮತ್ತು ಕೆಲವು ಹೆಣ್ಣು ಆಗಿ ,ಸೊಳ್ಳೆಯ ಕಡಿತಕ್ಕೆ ಕಾದು ,ಮುಂದೆ ಅದರ ಶರೀರದಲ್ಲಿ ವಿವಾಹ ,ಮಧುಚಂದ್ರ ಮತ್ತು ಸಂತಾನೋತ್ಪತ್ತಿ ನಡೆಸುವವು . ಮುಂದಿನ ಹಂತದ ಜೀವನ ಮನುಷ್ಯ ಶರೀರದಲ್ಲಿ

   ನಮ್ಮ ಊರಿನಲ್ಲಿ ವೈ ವಾಕ್ಸ್ ಮತ್ತು ಫಾಲ್ಸಿಫಾರಂ ಎಂಬ ಎರಡು ತರಹದ ಮಲೇರಿಯ ಕಾಯಿಲೆ ರೋಗಾಣುಗಳು ಕಾಡುತ್ತಿವೆ ,ಇದರಲ್ಲಿ  ಫಾಲ್ಸಿಫಾರಂ ಸ್ವಲ್ಪ ಅಪಾಯಕಾರಿ .ಅದು ಮೆದುಳು ,ಮೂತ್ರಪಿಂಡ ಇತ್ಯಾದಿಗಳಿಗೆ ಹಾನಿ ಮಾಡುವದು ಹೆಚ್ಚು . ಮಲೇರಿಯ ಲಿವರನ್ನು ಕಾಡುವುದರಿಂದ ಮತ್ತು ಕೆಂಪು ರಕ್ತಕಣಗಳನ್ನು ನಾಶ ಮಾಡುವದುದರಿಂದ ಮಲೇರಿಯಾ ದಲ್ಲಿ ಹಳದಿ ಕಾಮಾಲೆ ಬರ ಬಹುದು .ಇದನ್ನು ಕಾಮಾಲೆ ರೋಗ ಹಳ್ಳಿ ಮದ್ದು ಮಾಡುವೆವು ಎಂದು ಕುಳಿತರೆ ಪ್ರಾಣಾಪಾಯ ಆದೀತು . 

   ನೋಡಿ ಪ್ರಕೃತಿಯ ವಿಚಿತ್ರ ಆಟ .ನಾವು ಬಾರಿಯ ದಾಳದ ಪಗಡೆಯಾಳುಗಳು . 


EID_lec17_slide8-largehttps://youtu.be/A2-XTlHBf_4

ಕೊಕ್ಕೆ ಹುಳದ ಜೀವನ ಚರಿತ್ರೆ

      ಕೊಕ್ಕೆ ಹುಳದ ಜೀವನ ಚಕ್ರ 

 

 ಪ್ರತಿಯೊಂದು ಕರುಳ ಜಂತುವಿನ ಜೀವನ ಚಕ್ರ ಸಂಕೀರ್ಣವಾಗಿದ್ದು ಪ್ರಕೃತಿಯ ವೈಚಿತ್ರ್ಯವನ್ನು ಸಾರುತ್ತದೆ . ಉದಾಹರಣೆಗೆ  ರಕ್ತ ಹೀರುವ ಕೊಕ್ಕೆ ಹುಳ (Hookworm )ನ್ನು ತೆಗೆದು ಕೊಳ್ಳುವ . ಗಂಡು ಮತ್ತು ಹೆಣ್ಣುಹುಳಗಳು ಕರುಳ ಒಳಗಣ ಮಿಲನದ ಫಲವಾಗಿ ಹೆಣ್ಣು ಹುಳಗಳು ದಿನಕ್ಕೆ ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ .ಈ ಮೊಟ್ಟೆಗಳು ಮಲದ ಮೂಲಕ ನೆಲ ಸೇರಿ ಕೆಲ ದಿನಗಳಲ್ಲಿ ಹಂತ ಹಂತವಾಗಿ ಎರಡು ರೂಪದ ಲಾರ್ವಾ ಆಗಿ ಪರಿವರ್ತನೆ ಗೊಳ್ಳುವುದು . ಎರಡನೇ ರೂಪದ ಲಾರ್ವಾ ನಮ್ಮ ಕಾಲಿನ ಗಾಯ ಮತ್ತು ಕೂದಲ ರಂಧ್ರಗಳ ಮೂಲಕ ಶರೀರದ ಪ್ರವೇಶ ಪಡೆಯುವುದು . ಅಲ್ಲಿ ಅದು ರಕ್ತನಾಳಗಳನ್ನು ಪ್ರವೇಶಿಸಿ ಶ್ವಾಸಕೋಶ ಸೇರಿ ,ರಕ್ತ ನಾಳ ಭೇದಿಸಿ ಶ್ವಾಸ ಕೋಶ ,ಶ್ವಾಸ ನಾಳ ಮೂಲಕ ಗಂಟಲು ಸೇರಿ ,ಅನ್ನ ನಾಳದಲ್ಲಿ ಇಳಿದು ತನ್ನ ನಿವಾಸವಾದ ಕರುಳು ಸೇರುವುದು .ಇಲ್ಲಿ ಲಾರ್ವಾ ರೂಪದಿಂದ ಪ್ರಬುದ್ಧ ಗಂಡು ಮತ್ತು ಹೆಣ್ಣು ಕೊಕ್ಕೆ ಹುಳವಾಗಿ ಮಾರ್ಪಡುವುದು .. ಅಲ್ಲಿ ಕರುಳ ಗೋಡೆಗೆ ಆತು ಕೊಂಡು ರಕ್ತ ಹೀರುವುದು . 

ಈ ಹುಳದ ಲಾರ್ವಾ ಚರ್ಮ ಪ್ರವೇಶಿಸಿದ ಭಾಗದ ಸುತ್ತ ಮುತ್ತ ಅಲ್ಲರ್ಜಿ ಯಿಂದ ತುರಿಕೆ ಮತ್ತು ಕೆಂಪು ಉಂಟಾಗ ಬಹುದು .ಶ್ವಾಸ ಕೋಶದ ಮೂಲಕ ನಡೆಯುವ ಸವಾರಿ ಮತ್ತು ಕಟ್ಟೆ  ಪೂಜೆಯಿಂದ ಕೆಮ್ಮು ಮತ್ತು ಅಸ್ತಮಾ ಉಂಟಾಗ ಬಹುದು . ಇವು ಅಲರ್ಜಿ ಅಥವಾ ಅತಿ ಸಂವೇದನೆಯಿಂದ ಉಂಟಾಗುವ ತೊಂದರೆಗಳು . ಕರುಳಿನ ರಕ್ತ ಹೀರುವಿಕೆಯಿಂದ ತೀವ್ರ ತರ ರಕ್ತ ಹೀನತೆ ಉಂಟಾಗ ಬಹುದು . 

                ಇಂತಹ ಪರೋಪಜೀವಿಗಳು ಸೇರಿದಾಗ ಮಾನವ ನ ರಕ್ತದಲ್ಲಿ ಇಯೋಸಿನೋಫಿಲ್ ಎಂಬ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗುವುದು ;ಇದನ್ನು .ಇಯೋಸಿನೋಫಿಲಿಯಾ ಎನ್ನುವರು . ಇಯೋಸಿನೋಫಿಲಿಯಾ ಎಂಬುದು ಒಂದು ಕಾಯಿಲೆಯಲ್ಲ .ಹಲವು ಕಾಯಿಲೆಗಳಲ್ಲಿ ಅದು ಇರ ಬಹುದು . ಬಹಳ ಮಂದಿ ನನಗೆ ಇಯೋಸಿನೋಫಿಲಿಯಾ ಕಾಯಿಲೆ ಇದೆ ಎಂದು ಬರುತ್ತಾರೆ . 

ಕೊಕ್ಕೆ ಹುಳ ತಡೆಗಟ್ಟಲು ಬಯಲು ಶೌಚ ನಿರ್ಮೂಲನೆ ಮತ್ತು ಪಾದರಕ್ಷೆ ಹಾಕಿ ನಡೆಯುವುದು ಮುಖ್ಯ .ಆದರೆ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಯಲ್ಲಿ ತೊಡಗಿರುವಾಗ ಎರಡನೇಯದು ಸ್ವಲ್ಪ ಕಷ್ಟ . 

ನಾಯಿ ಮತ್ತು ಬೆಕ್ಕುಗಳಲ್ಲಿಯೂ ಕೊಕ್ಕೆ ಹುಳ ಕಾಟ ಇದ್ದು ಅವುಗಳು ಮನುಷ್ಯರಿಗೆ ಹರಡ ಬಹುದು .ಆದರೆ ಅವು ಹೆಚ್ಚಾಗಿ ಚರ್ಮದ ತುರಿಕೆ ಮತ್ತು ಕೆಂಪು ಉಂಟು ಮಾಡಬಹುದು . ಅವು ಅಲ್ಲಿಯೇ ಕೊನೆಯುಸಿರು ಎಳೆಯುವದು ಸಾಮಾನ್ಯವಾದ್ದರಿಂದ  ಕರುಳಿನ ವರೆಗೆ ತಲುಪುವುದು ಅಪರೂಪ ..ಏನೇ ಇರಲಿ ಸಾಕು ಪ್ರಾಣಿಗಳಿಗೂ ಹುಳದ ಔಷಧ ಆಗಾಗ ಕೊಡುತ್ತಿರ ಬೇಕು 

 

CDC - Hookworm - Biology