ಬೆಂಬಲಿಗರು

ಶನಿವಾರ, ಮಾರ್ಚ್ 13, 2021

ಮದ್ದಿನ ಕುಪ್ಪಿ

                                ಮದ್ದಿನ ಕುಪ್ಪಿ 

 

ನಮ್ಮ   ಬಾಲ್ಯದಲ್ಲಿ   ಸಣ್ಣ ಸಣ್ಣ ಕಾಯಿಲೆಗಳಿಗೆ  ಅಜ್ಜಿ ಮದ್ದು ನಡೆಯುತ್ತಿತ್ತು . ನಾವು  ಅಸೌಖ್ಯಕ್ಕಾಗಿ  ಶಾಲೆಗೆ ರಜೆ ಹಾಕ್ಕಿದ್ದು ನೆನಪಿಲ್ಲ . ಶಾಲೆಯಲ್ಲಿ ಕಲಿತ ಮಾದರಿ   ರಜೆ ಅರ್ಜಿಯಲ್ಲಿ  ಜ್ವರದಿಂದ ಬಳಲುತ್ತಿರುವುದರಿಂದ  ರಜೆ ದಯ  ಪಾಲಿಸಿ ಎಂದು ಕಲಿತದ್ದಷ್ಟೇ  ಬಂತು . ಮನೆಯಲ್ಲಿ ಹಿರಿಯರು ಕೆಲವೊಮ್ಮೆ  ತಮ್ಮ ಕಾಯಿಲೆಗಳಿಗೆ  ಕನ್ಯಾನ ದಿಂದಲೋ ವಿಟ್ಲ ದಿಂದಲೋ  ಡಾಕ್ಟಲ್ಲಿ ಹೋಗಿ ಮದ್ದು ತರಲು ಹೇಳುತ್ತಿದ್ದರು .ರೋಗ ಲಕ್ಷಣ ಹೇಳಿ ಔಷಧಿ ತರುವುದು .ಆಗ ಒಂದು ಬಿರಡೆ ಇರುವ ಔನ್ಸ್ ಕುಪ್ಪಿ ಕೊಂಡು ಹೋಗುವೆವು .ವೈದ್ಯರು ಅಥವಾ ಕಂಪೌಂಡರ್ ಅದರಲ್ಲಿ ಔಷಧಿ ತುಂಬಿಸಿ ಚೆನ್ನಾಗಿ ಕುಲುಕಿಸಿ ಕುಡಿಯಿರಿ ಎಂದು ಬರೆದ ಚೀಟಿ ಅಂಟಿಸಿ ಕೊಡುವರು .ಕೆಲವರು ಚೂರ್ಣ ಕಟ್ಟಿ ಕೊಟ್ಟು ಜೇನು ತುಪ್ಪದಲ್ಲಿ ಕಲಸಿ ತಿನ್ನಿರಿ ಎನ್ನುವರು . ಎರಡನೆಯದು ನಮಗೆ ಇಷ್ಟ . ಇಲ್ಲದ ಕೆಮ್ಮು ಬರಿಸಿ  ನಾವೂ ಸ್ವಲ್ಪ ಸೇವಿಸುತ್ತಿದ್ದೆವು . 

  ಈಗ  ಈ  ಕುಪ್ಪಿ ಕಾಣಿಸುವುದಿಲ್ಲ .ಕಂಪನಿಯವರು  ಸಣ್ಣ  ಪ್ಲಾಸ್ಟಿಕ್ ಅಥವಾ ಗ್ಲಾಸ್ ಬಾಟಲ್ ನಲ್ಲಿ  ಔಷಧಿ ಹಾಕಿಯೇ  ಕಳುಹಿಸುವರು . 

 ಮಕ್ಕಳಾಗಿದ್ದಾಗ ಎಲ್ಲಾ ಔಷಧಿಗಳಿಗಿಂತಲೂ ಸಾಂತ್ವನ  ನಮ್ಮ ಬಳಿ ತಾಯಿ ಬಂದು ಹಣೆ  ಸವರಿ  ಸೆರಗಿನಲ್ಲಿ ಗಾಳಿ ಹಾಕಿದಾಗ ,ಸೆರಗಿನಿಂದ  ಅಕ್ಕಿ ಹಿಟ್ಟು ,ಸೆಗಣಿ ಮತ್ತು ಬೆವರಿನ  ಮಿಶ್ರಣ (ಅವರು ಬೆಳಗಿನಿಂದ ಸಂಜೆ ತನಕ ಮನೆ ಕೆಲಸ ಮಾಡುತ್ತಿದ್ದುದರಿಂದ )ದ  ಕಂಪು   ಇಂದು ಮಾರ್ಕೆಟ್ ನಲ್ಲಿ ಸಿಗುವ  ಯಾವುದೇ  ಪರ್ಫ್ಯೂಮ್  ಗೆ  ಇಲ್ಲಾ ಎಂದು ಹೇಳ ಬಲ್ಲೆ

ಮರೆಯಲಾಗದ ಬ್ಯಾರಿ ಬಂಧುಗಳು

  ಮರೆಯಲಾಗದ  ಬ್ಯಾರಿ  ಬಂಧುಗಳು

 ನನ್ನ  ಬಾಲ್ಯದಲ್ಲಿ  ಕಂಡ ಒಂದು ವ್ಯಕ್ತಿ ಬಳ್ಳಿ ಬ್ಯಾರಿ .ಅವರಿಗೆ  ಆ ಹೆಸರು ಯಾಕೆ ಬಂತು ಎಂದು  ಜ್ಞಾಪಕ ಇಲ್ಲ . ಆಗಾಗ ಮನೆಗೆ ಬರುತ್ತಿದ್ದು ಮಹಾತ್ಮಾ ಗಾಂಧಿ  ಯವರ  ತದ್ರೂಪದಂತೆ  ಇದ್ದರು .ಮೃದು ಮಾತು .ಅವರನ್ನು ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು . ನಾವು ಮಕ್ಕಳನ್ನೆಲ್ಲಾ ಒಬ್ಬೊಬ್ಬರನ್ನು  ಅಂಗಳದಲ್ಲಿ  ಕುಳ್ಳಿರಿಸಿ  ಬಾಯಲ್ಲಿ  ಮಂತ್ರ ಗುಣು  ಗುಣಿಸಿ ಕೈಯಲ್ಲಿ ಒಂದು  ಎಲೆಯ ಕಟ್ಟಿನಿಂದ  ನಮ್ಮ ತಲೆಗೆ  ನೋವಾಗದಂತೆ  ಬಡಿಯುತ್ತಿದ್ದರು . ದೃಷ್ಟಿ  ತೆಗೆಯುತ್ತಿದ್ದ ವಿಧಾನ .ಆ ಮೇಲೆ ಕೊಟ್ಟ ಕಾಣಿಕೆ ತೆಗೆದು ಕೊಂಡು ಚಾ ಕುಡಿದು ಹೋಗುವರು . 

ಇನ್ನೊಂದು  ಕಲಾಯಿ  ಬ್ಯಾರಿ ಮತ್ತು ಅವರ ತಂಡ .ಎರಡು ವರ್ಷಕ್ಕೊಮ್ಮೆ  ಮನೆಗೆ ಅವರನ್ನು ಕರೆಯಿಸುವರು . ಅವರು ಬಂದು ಒಂದು ಮಣ್ಣಿನ ಒಲೆ  ನಿರ್ಮಿಸಿ ಒಂದು ತುದಿಗೆ  ಚರ್ಮದ ತಿದಿ  ,ಇನ್ನೊಂದು ಕಡೆ  ಇದ್ದಿಲ ಓಲೆ . ಅವರು ತಿದಿಯಿಂದ  ಗಾಳಿ ಹಾಕಿ  ಇದ್ದಲು  ಕೆಂಪಾಗುವಂತೆ ಮಾಡುವುದನ್ನು  ಆಶ್ಚರ್ಯ ದಿಂದ ನೋಡುತ್ತಿದ್ದೆವು . ನಮಗೂ  ತಿದಿ  ಒತ್ತುವ ಆಸೆ ಆಗುತ್ತಿತ್ತು .  ಅವರ ಆಗಮನದೊಂದಿಗೆ  ಮನೆಯ ಎಲ್ಲಾ ಹಿತ್ತಾಳೆ ಪಾತ್ರೆ  ಹಂಡೆಗಳು ಹೊರ ಬರುವವು . ಅದಕ್ಕೆ ಸತುವನ್ನು ಕಾಸಿ  ಬೆಳ್ಳಿಯಂತ ಲೇಪ ಹಾಕಿ ಪಾಲಿಷ್ ಮಾಡಿ ಪಳ ಪಳ ಹೊಳೆಯುವಂತೆ  ಮಾಡುವ ಮಾಂತ್ರಿಕರಂತೆ  ಕಾಣುತ್ತಿದ್ದರು .ಕಲಾಯಿ ಕೆಲಸಕ್ಕೆ ಒಂದೆರಡು ದಿನ ಬೇಕಾಗುತ್ತಿತ್ತು .ಹಳೇ  ಚಿಮಿಣಿ ಮತ್ತು ತೆಂಗಿನ ಎಣ್ಣೆ ಡಬ್ಬಿಗಳ  ಬಾಯಿ ತೆಗೆದು ಅದಕ್ಕೆ ಸುಂದರವಾದ  ಮುಚ್ಚಳ  ಮಾಡಿ ಕೊಡುತ್ತಿದ್ದು ಅದನ್ನು  ಅವಲಕ್ಕಿ ಇತ್ಯಾದಿ ಸಂಗ್ರಹ ಮಾಡಿ ಇಡಲು ಉಪಯೋಗಿಸುತ್ತಿದ್ದರು . 

ಇನ್ನೊಬ್ಬರು  ಬಾಳೆ ಕಾಯಿ ಬ್ಯಾರಿ . ಅವರು ಶ್ರಮ ಜೀವಿ .ಆಗಾಗ ಬಂದು ಬಾಳೆ ಎಲೆ ,ಬಾಳೆಕಾಯಿ  ಕೊಂಡು ಹೋಗುವರು .ನಗು ಮುಖ . ವೃತ್ತಿಯಿಂದಾಗಿ  ಅವರ ಉಡುಗೆ ತೊಡುಗೆ  ಪೂರ್ಣ ಕಲೆಗಳಿಂದ ಕೂಡಿತ್ತು ..  ತಮ್ಮ ಖರೀದಿಯನ್ನು ತಲೆ ಹೊರೆಯಲ್ಲಿ ಎರಡು ಮೈಲು ಹೊತ್ತು ಬಸ್ಸಿನ ಟಾಪ್ ನಲ್ಲಿ  ಏರಿಸಿ ಪೇಟೆಗೊಯ್ದು ಮಾರಿ ಜೀವನ ಸಾಗಿಸುತ್ತಿದ್ದರು . ಆದರೆ  ರೈತರಾಗಲೀ  ಅವರಾಗಲಿ  ದಿಢೀರಾಗಿ  ಯಾರೂ ಶ್ರೀಮಂತರಾದುದುದು ಕಂಡ ನೆನಪಿಲ್ಲ . 

ಗುರುವಾರ, ಮಾರ್ಚ್ 11, 2021

ಕುಕ್ಕಾಜಾ ಮರಾಜಾ

 ನಮ್ಮ  ಮನೆಯಂಗಳ  ಪಶ್ಚಿಮಕ್ಕೆ  ತಡಮ್ಮೆ ದಾಟಿ ಮುಂದಕ್ಕೆ ಹೋದರೆ ಒಂದು ದೊಡ್ಡ  ನೆಲ್ಲಿಕಾಯಿ ಮರ .ಸ್ವಲ್ಪ ದೂರದಲ್ಲಿ ಒಂದು ಕಾಟು ಮಾವಿನ ಮರ .ಅದರ ಹೆಸರು ಸೊನೆ ಕುಕ್ಕು .ಸೊನೆ ಜಾಸ್ತಿ ಇದ್ದರೂ  ಬಹಳ ರುಚಿ .ಮಾವಿನ ಮರದ ಅಡಿಯಲ್ಲಿ ನಿಂತು " ಕುಕ್ಕಾಜಾ ಮಾರಾಜ ಎಕ್ಕೊಂಜಿ ಪ೦ರ್ದು   ಕೊರ್ಲಾ ನಿಕ್ಕೊಂಜಿ ಗೊರಂಟು ಅಡಕ್ಕುಬೆ "ಎಂದು  ಮಾವಿನ ಮರವನ್ನು ಬೇಡುತ್ತಿದ್ದೆವು .ಕೆಲವೊಮ್ಮೆ ತಥಾಸ್ತು ಎಂದು ಮಾಗಿದ ಹಣ್ಣು ಬೀಳುವುದು.(ಮಂತ್ರಕ್ಕೆ ಮಾವಿನ ಕಾಯಿ ಉದುರಿದಂತೆ !) .ಮುಂದೆ ಹೋದರೆ ಪಾರೆ  ತೋಟ ಅಲ್ಲಿ ಒಂದು ಮಾವು .ಪಾರೆ  ತೋಟದ ಮಾವು .  ಮುಂದೆ ತೋಡು ಬದಿಯಲ್ಲಿ ಇರುವ ಹೆಮ್ಮರ ಗಂಡಿ  ಮಾವು . ದಕ್ಷಿಣಕ್ಕೆ  ಎರಡು ಫರ್ಲಾಂಗ್ ನಡೆದರೆ  ಇಡಿಕ್ಕಾಯಿ  ಮಾವು .ಇದು ಸ್ವಲ್ಪ ಬಲಿತ ಮೇಲೆ ( ಬೀಜ ಗೊರಟು ಅಥವಾ  ಕೊರಂಟು ಆದಾಗ )ಉಪ್ಪಿನ ಕಾಯಿ ಹಾಕುವರು . ಇದಲ್ಲದೆ ಗುಡ್ಡೆಯಲ್ಲಿ ಜೀರೆಕ್ಕಿ ಮಾವು ,ಹುಳಿ  ಮಾವು ಇತ್ಯಾದಿ . ನಸುಕಿನಲ್ಲಿ ಕೈ ಬುಟ್ಟಿ  ಹಿಡಿದುಕೊಂಡು  ರಾತ್ರಿ ಬಿದ್ದ ಹಣ್ಣು ಹೆಕ್ಕಲು ಮಕ್ಕಳ ನಡುವೆ  ಪೈಪೋಟಿ . ದೊಡ್ಡ ಸಂಗ್ರಹ ತಂದು ಅಜ್ಜಿಯ ಪ್ರಶಂಶೆ ಗಳಿಸುವ  ಕಾತುರ .ಅಜ್ಜಿ  ಅದನ್ನು ಓಲೆ ಚಾಪೆಯಲ್ಲಿ ಮಾಂಬಳ ಎರೆಯುವರು .ಹಿಂದೆ  ಕಿರಿಯರು  ಹಿರಿಯರ  ಮೆಚ್ಚುಗೆ ಗಳಿಸಲು ಪ್ರಯತ್ನಿಸುತ್ತಿದ್ದರು .ಈಗ  ಉಲ್ಟಾ ಆಗಿದೆ ;  ಹಿರಿಯರು ಮಕ್ಕಳ ಕೋಪ ಮತ್ತು ಅಸಹನೆಗೆ ತುತ್ತಾಗದಂತೆ ಎಷ್ಟು ಜಾಗರೂಕರಾಗಿ ಇದ್ದರೂ ಸಾಲುವುದಿಲ್ಲ . 

    ಇದಲ್ಲದೆ   ಅರೆ ಕಸಿ ಮಾವು ಗಳಾದ  ನೆಕ್ಕರೆ , ಹೊಳೆಮಾವು ಮತ್ತು ಮೂರು  ವರ್ಷದ  ಮಾವಿನ ಮರಗಳು ಸಾಕಷ್ಟು ಇದ್ದವು .ಇವುಗಳ ತುಂಡು ಅಥವಾ ಕೆತ್ತೆ  ಉಪ್ಪಿನಕಾಯಿ ಹಾಕುವರು . 

ಮಾವಿನ ಕಾಯಿ ಚಟ್ನಿ ಬಲು ರುಚಿ . ಕಾಟು ಮಾವಿನ ಹಣ್ಣಿನ ಗೊಜ್ಜಿ ಮತ್ತು  ಸಾಸಮೆ  ಮಾಡುವರು . ಉಪ್ಪು ನೀರಿನಲ್ಲಿ ಹಾಕಿ ಶೇಖರಿಸಿದ ಮಾವಿನ ಕಾಯಿ ಮಳೆಗಾಲದ ನಂತರ ಹೊರ ಬರು ವುದು . ಇದೂ ಚಟ್ನಿ ,ಗೊಜ್ಜು ಮತ್ತು  ಪಲ್ಯಕ್ಕೆ ಉಪಯೋಗ  ಆಗುವುದು .

ಇನ್ನು  ಗೇರುವಿಗೆ  ಬಂದರೆ ಇಲ್ಲಿ ಹಣ್ಣಿಗಿಂತ ಬೀಜಕ್ಕೇ  ಮಣೆ .ಹಣ್ಣು ತುಂಬಾ ಆಕರ್ಷಣೀಯ ಇದ್ದರೆ  ತಿನ್ನುತ್ತಿದ್ದೆವು . ಅದರ ಮತ್ತು ಬಾಳೆಯ ಕಲೆ ನಮ್ಮ ಬಟ್ಟೆಯಲ್ಲಿ ತುಂಬಿ  ನಾವು ಕಲಾ ಭೂಷಣ ಆಗುತ್ತಿದ್ದೆವು . ಇನ್ನೂ ಪಕ್ವವಾಗದ  ಗೇರು ಫಲ ಕ್ಕೆ  ಕಾಯನ  ಎನ್ನುತ್ತಿದ್ದೆವು .ಎಳೇ  ಬೀಜದ ಪಾಯಸ ವಿಷು ಹಬ್ಬಕ್ಕೆ ವಿಶೇಷ . ಗೇರು ಬೀಜ  ಸಂಗ್ರಹ ಮಕ್ಕಳ ಹವ್ಯಾಸ . ನಾಲ್ಕು ಬೀಜಕ್ಕೆ ಒಂದು ಒಡ್ಡಿ . ಬೀಜ  ವನ್ನು ನೆಲದಲ್ಲಿ ಹಾಕಿ  ಇನ್ನೊಂದು ಬೀಜದಿಂದ  ಗುರಿಯಿಟ್ಟು ಹೊಡೆಯುತ್ತಿದ್ದೆವು . ಅದು ಬೀಜವನ್ನು ಮುಟ್ಟಿದರೆ ಮತ್ತು ಒಂದು ಗೇಣು  ಒಳಗೆ ಬಿದ್ದರೆ ಗುರಿಯಿಟ್ಟ ಬೀಜ ನಮಗೆ  ಆಗುತಿತ್ತು.ಇದೇ  ಆಟ  ಮನೆಯ ಜಗಲಿಯಲ್ಲಿ ಕೈಯಿಂದ  ಕೇರಂ ಕಾಯಿನ್ ಗುರಿಯಿಡುವಂತೆ  ಕೂಡಾ  ಆಡುತ್ತಿದ್ದರು . ಬೀಜವನ್ನು ಕೆಂಡದಲ್ಲಿ   ಸುಟ್ಟು ಸಿಪ್ಪೆ ತೆಗೆದು  ತಿನ್ನುತ್ತಿದ್ದೆವು . ಮನೆಯೆಲ್ಲಾ ಅದರ ಕಂಪು

ಭಾನುವಾರ, ಫೆಬ್ರವರಿ 28, 2021

ಡೆಂಗು ಅಥವಾ ಡೆಂಗಿ ಜ್ವರ

                         ಡೆಂಗು  ಅಥವಾ ಡೆಂಗಿ  ಜ್ವರ 

 

ಇದು  ವೈರಸ್ ಜನ್ಯ ಕಾಯಿಲೆ . ಈಡಿಸ್ ಸೊಳ್ಳೆ ಸಾರ್ವಜನಿಕ ಸಂಪರ್ಕಾಧಿಕಾರಿ(ಒಬ್ಬರಿನಂದ ಇನ್ನೊಬ್ಬರಿಗೆ ಹರಡುವುದು ) . ಮೊದಲ  ಮಳೆ  (ಈಗಲಂತೂ ಅಕಾಲ ಮಳೆ ಸಾಮಾನ್ಯ ) ಬಿದ್ದ ಕೂಡಲೇ  ಇವುಗಳ ಕಾಟ ಜೋರು .ಅಲ್ಲಲ್ಲಿ  ನಿಂತ ನೀರು  ಕೂಡ ಇವುಗಳ ಉಗಮ ಸ್ಥಾನ . ವೈರಸ್ ವಾಹಕ ಸೊಳ್ಳೆ ಕಡಿತದ  ೪ ರಿಂದ ೧೦ ದಿನಗಳಲ್ಲಿ  ರೋಗ ಲಕ್ಷಣಗಳು ಕಾಣಿಸಿ ಕೊಳ್ಳುವವು .. 

ಜ್ವರ ,ವಿಪರೀತ ತಲೆನೋವು ಅದೂ ಕಣ್ಣ ಹಿಂದಿನ ನೋವು ,ಮೈಕೈ ನೋವು ,ಗಂಟು ನೋವು ಸಾಮಾನ್ಯ ಲಕ್ಷಣಗಳು . ಮೈಯಲ್ಲಿ ಕೆಂಪು ಬೀಳುವುದು,ತುರಿಕೆ(ಇದು ಔಷಧಿ ಯ  ಅಲ್ಲರ್ಜಿ ಅಲ್ಲಾ ),ಹೊಟ್ಟೆ ನೋವು(ಇದು ಸಾಮಾನ್ಯ ಗ್ಯಾಸ್ಟ್ರಿಕ್ ನೋವು ಅಲ್ಲ ) ,ವಾಂತಿ , ಭೇದಿ ,ರಕ್ತ ಸ್ರಾವ ಮತ್ತು  ಪ್ರಜ್ಞಾವಸ್ಥೆ  ಏರು ಪೇರು  ಉಂಟಾಗ ಬಹದು . 

ರೋಗ ಲಕ್ಷಣಗಳು ಮತ್ತು ರಕ್ತ ಪರೀಕ್ಷೆಯಿಂದ  ಈ ಕಾಯಿಲೆ ದೃಢ ಪಡಿಸಿ ಕೊಳ್ಳುವರು . ರಕ್ತದಲ್ಲಿ  ಬಿಳಿ ರಕ್ತ ಕಣಗಳು ಮತ್ತು  ಪ್ಲೇಟಿಲೆಟ್ ಕಡಿಮೆ ಇರುವುದು . ಪ್ಲೇಟಿಲೆಟ್ ಸಂಖ್ಯೆ  ಕಾಯಿಲೆಯ  ತೀವ್ರತೆ ಸೂಚಿಸ ಬಹುದಾದರೂ ಅದರ ಕೊರತೆ ಪ್ರಾಣಾಪಾಯಕ್ಕೆ ಕಾರಣ ವಾಗುವುದು ಅಪರೂಪ . ಯಾವುದೇ ರಕ್ತ ಸ್ರಾವ ಇಲ್ಲದಿದ್ದರೆ  ಪ್ಲೇಟಿಲೆಟ್  ೧೦೦೦೦(ನಾರ್ಮಲ್  ಒಂದುವರೆ ಯಿಂದ ನಾಲ್ಕು ಲಕ್ಷ ) ಕಡಿಮೆ ಆಗುವ ವರೆಗೂ ಪ್ಲೇಟೆಲೆಟ್ ಕೊಡ ಬಾರದು ಎಂದು ಜಾಗತಿಕ ಅರೋಗ್ಯ ಸಂಸ್ಥೆಯೇ ಸೂಚಿಸಿದೆ .ರಕ್ತ  ಪರೀಕ್ಷೆಯಲ್ಲಿ ಪಿ ಸಿ ವಿ (Packed  Cell  Volume ) ಏರುವುದು .ನೀರಿನ ಅಂಶ ಹೊರಹೋಗುವುದರಿಂದ  ರಕ್ತದ ಕೆಂಪು ರಕ್ತ ಕಣ ಮತ್ತು ರಕ್ತ ದ್ರವದ ದಾಮಾಶಯ ಹೆಚ್ಚುವುದು   . .  ರಕ್ತನಾಳ ಗಳಿಂದ  ನೀರಿನ ಅಂಶ ಸೋರಿ ರಕ್ತದ ಒತ್ತಡ ಕಡಿಮೆ ಆಗುವುದು ಅಪಾಯದ ಲಕ್ಷಣ . ಮೊದ  ಮೊದಲು ಕುಳಿತಾಗ ಮತ್ತು ನಿಂತಾಗ  ತಲೆ ತಿರುಗುವುದು ,ಮೈ ಮಾಲುವುದು ಉಂಟಾಗ ಬಹದು . ಮಲಗಿದ ಸ್ಥಿತಿ ಯಲ್ಲಿ  ಬಿ ಪಿ ಸರಿ ಇದ್ದರೂ ಕುಳಿತಾಗ ಕುಸಿಯುವುದು . ಇದರ ಮುಂದುವರಿದ  ರೋಗಸ್ಥಿತಿಗೆ  ಡೆಂಗು  ಶಾಕ್ ಎನ್ನುವರು . ವೈದ್ಯ ಶಾಸ್ತ್ರದಲ್ಲಿ  ಯಾವುದೇ ಕಾರಣಕ್ಕೆ ರಕ್ತದ ಒತ್ತಡ ಕಡಿಮೆ ಆಗಿ  ಅಂಗಾಂಗಗಳಿಗೆ (ಮುಖ್ಯವಾಗಿ ಮೆದುಳು ಮತ್ತು ಮೂತ್ರ ಪಿಂಡ )ಆಹಾರ ಮತ್ತು ಪ್ರಾಣವಾಯು ಸರಬರಾಜು ವ್ಯತ್ಯಯ ಆಗುವುದಕ್ಕೆ  ಶಾಕ್ ಎನ್ನುವರು 

     ಡೆಂಗು  ವೈರಸ್ ಗೆ ಚಿಕಿತ್ಸೆ ಇಲ್ಲ .ಆದುದರಿಂದ ಕಾಯಿಲೆ ತನ್ನಿಂದ ತಾನೇ ಕಡಿಮೆ ಆಗಬೇಕು .ಜ್ವರಕ್ಕೆ  ಪ್ಯಾರಾಸಿಟಮಾಲ್ ಮಾತ್ರೆ ಸಾಕು . ಹೆಚ್ಚಿನವರಿಗೂ  ಮನೆಯಲ್ಲಿ ವಿಶ್ರಾಂತಿ ತೆಗೆದು ಕೊಳ್ಳಲು ಸೂಚಿಸುವರು . 

ತೀವ್ರತರ  ಹೊಟ್ಟೆ ನೋವು ,ವಾಂತಿ ,ರಕ್ತದ ಒತ್ತಡ ಏರುಪೇರು ಇದ್ದರೆ ,ವೃದ್ದರು ,ಗರ್ಭಿಣಿಯರು ಮತ್ತು  ಬೇರೆ ಕಾಯಿಲೆಗಳಿಂದ ಬಳಲುವವರನ್ನು ಆಸ್ಪತ್ರೆಗೆ  ದಾಖಲು ಆಗಲು ಸೂಚಿಸುವರು . ಅವರಿಗೆ ರಕ್ತ ನಾಳಗಳ ಮೂಲಕ ಜಲ ಪೂರಣ ಮತ್ತು ಜ್ವರ ನಿವಾರಕ ಕೊಡುವರು . 

ಪ್ಲಾಟಿಲೆಟ್ ಸಂಖ್ಯೆ ಒಂದು ಮಟ್ಟದ ವರೆಗೆ ಕಡಿಮೆ ಆಗಿ ತನ್ನಿಂದ ತಾನೇ ಸರಿ ಆಗುವುದು .ಅದಕ್ಕೆಂದು ಪಪ್ಪಾಯಿ ಎಲೆ ,ಕಿವಿ  ಹಣ್ಣು ಇತ್ಯಾದಿ ತಿನ್ನ ಬೇಕಿಲ್ಲಾ . ಊರಿನಲ್ಲಿ  ಸುಲಭವಾಗಿ ಸಿಗುವ ಯಾವುದೇ ಹಣ್ಣು ತಿನ್ನ ಬಹುದು . 

ಜ್ವರ ಬಿಟ್ಟ ಕೂಡಲೇ  ಸಂಪೂರ್ಣ ಅಪಾಯ ಮರೆಯಾಗದು  .ಹಠಾತ್  ರಕ್ತದ ಒತ್ತಡ ಕಡಿಮೆ  ಆಗ ಬಹುದು .(ಡೆಂಗು  ಶಾಕ್ ಎನ್ನುವರು )


 

ಬುಧವಾರ, ಫೆಬ್ರವರಿ 24, 2021

ಪೆಟ್ರೋಮ್ಯಾಕ್ಸ್

                    ಪೆಟ್ರೋಮ್ಯಾಕ್ಸ್ 

 

                   ಹಿಂದೆ  ಸಮಾರಂಭಗಳಿಗೆ  ಕಳೆ  ತರಲು   ಪೆಟ್ರೋಮ್ಯಾಕ್ಸ್  ಒಂದು ಅವಶ್ಯ ಸಾಧನ ಆಗಿತ್ತು . ಇದನ್ನು ೧೯೧೦ ರಲ್ಲಿ  ಜರ್ಮನಿಯ  ಮ್ಯಾಕ್ಸ್  ಗ್ರೆಟ್ಜ್ ಕಂಡು ಹಿಡಿದನು . ಪೆಟ್ರೋಲಿಯಂ ಜನಿತ ಸೀಮೆ ಎಣ್ಣೆ ಯನ್ನು  ಪಂಪ್ ಮೂಲಕ ಒತ್ತಡ ಹಾಕಿ ಆವಿ ಯನ್ನಾಗಿಸಿ  ಮೆಂಟ್ಲ್ ಉರಿಸಿದಾಗ ವಿದ್ಯುತ್  ಬೆಳಕಿನ ವಾತಾವರಣ ಉಂಟಾಗಾಗುವುದು . ಪೆಟ್ರೋ ಮತ್ತು ಇದನ್ನು ಕಂಡು ಹಿಡಿದ ಮ್ಯಾಕ್ಸ್ ಸೇರಿ ಪೆಟ್ರೋಮ್ಯಾಕ್ಸ್  ಆಯಿತು ..ಇದರ  ಒಳಗೆ ಮೆಂಟ್ಲ್  ಸಣ್ಣ   ತಟ್ಟೆ ಇದ್ದು ಅದಕ್ಕೆ ಸ್ಪಿರಿಟ್ ಹಾಕಿ ಉರಿಸುವರು .ಆಮೇಲೆ  ಸೀಮೆ ಎಣ್ಣೆ ಪಂಪ್ ಮಾಡುವರು . ಕೆಲವೊಮ್ಮೆ ಸ್ಪಿರಿಟ್ ಇಲ್ಲದೆಯೇ ಎಣ್ಣೆ  ಪಂಪ್ ಮಾಡಿ ಗ್ಯಾಸ್ ಜೆಟ್ ಗೆ ಉರಿ ಹಚ್ಚುವರು . 

ಮದುವೆ  ಇತ್ಯಾದಿ ಸಮಾರಂಭಗಳಿಗೆ  ಗ್ಯಾಸ್ ಲೈಟ್ ಹಚ್ಚಿದಾಗಲೇ ಕಳೆ ಬರುವುದು .ಇದನ್ನು ಬಾಡಿಗೆಗೆ ಕೊಡುವ ಅಂಗಡಿಗಳು ಇದ್ದವು .ಅದರ ಬೆಳಕಿನಲ್ಲಿ  ನೆಂಟರು ಮತ್ತು ಅಕ್ಕ ಪಕ್ಕದ ಮನೆಯವರು ಕುಳಿತು ತರಕಾರಿ ಹಚ್ಚುವರು.  . ಆಮೇಲೆ  ಇಸ್ಪೇಟು ಆಟ .  ಮಕ್ಕಳಿಗೆ ತಮಾಷೆ ,ನಗು ,ನಲಿದಾಟ . ಪಂಪ್ ಮಾಡಿದ ಒತ್ತಡ  ಕಮ್ಮಿ ಆದಾಗ ಲೈಟ್  ಮಂಕಾಗುವುದು . ಆಗ ಪುನಃ ಗಾಳಿ ಹಾಕುವರು ...ಸಾಂಪತ್ತಿಕವಾಗಿ  ಬಡ ಯಕ್ಷಗಾನ ಮೇಳಗಳೂ ಜನರೇಟರ್ ವಿದ್ಯುತ್ ಬದಲಿಗೆ ಗ್ಯಾಸ್ ಲೈಟ್ ಉಪಯೋಗಿಸುತ್ತಿದ್ದರು . ಮೆರವಣಿಗೆ ಯಲ್ಲಿ  ಪೆಟ್ರೋಮ್ಯಾಕ್ಸ್  ಹೊರುವವರು ಇರುತ್ತಿದ್ದರು . 

  ಪೆಟ್ರೋಮ್ಯಾಕ್ಸ್ ನ  ಮೆಂಟ್ಲ್  ಪೆಟ್ಟಿಗೆ ಎಲ್ಲರ ಮನೆಯಲ್ಲಿ ರಾರಾಜಿಸುವುದು .ಎಲೆ ಅಡಿಕೆ ಹೊಗೆಸೊಪ್ಪು ಸುಣ್ಣ ಪೆಟ್ಟಿಗೆ ಯಾಗಿ ಇದರ ಉಪಯೋಗ ವ್ಯಾಪಕ ಆದರೂ ಮನೆಯಲ್ಲಿ  ಚಿಲ್ಲರೆ ಹಣ ಇಡಲು ,ಸಮಾರಂಭಗಳಲ್ಲಿ ದಕ್ಷಿಣೆ ,ಕಾರ್ಮಿಕರಿಗೆ  ಸಂಬಳ ಬಟವಾಡೆ ಇತ್ಯಾದಿಗಳಿಗೆ  ಎಟಿ ಎಂ ಆಗಿ ಉಪಯೋಗ ಆಗುವದು . ನೆಂಟರ ಮನೆಗೆ ಹೋಗುವಾಗ  ಸಂಚಾರಿ ವೀಳ್ಯದ ಸಂಚಿಯೂ ಇದೆ . ಇದು ಹೊರ ಬಂದೊಡನೆ ನಾಲ್ಕಾರು  ಮಂದಿ ದಿಡೀರನೆ ಸುತ್ತ ಕುಳಿತು ಧಾಳಿ ಮಾಡುವರು 

            Fargo lantern Gas Mantles vintage Advertisement usable empty box. i2-88

ಸೋಮವಾರ, ಫೆಬ್ರವರಿ 22, 2021

ಶೌಚ ವಿಚಾರಗಳು

                               ಶೌಚ  ವಿಚಾರಗಳು 

ಮೊನ್ನೆ  ಒಬ್ಬ ರೋಗಿ ಡಾಕ್ಟ್ರೇ' ನನಗೆ ಉರಿ ಒಂದಕ್ಕೆ ಗೆ  ಮದ್ದು ಬೇಕು ಎಂದರು .  ಮೂತ್ರ ಶಂಕೆಗೆ ನಾವು ಹಳ್ಳಿ ಶಾಲೆಯಲ್ಲಿ ಒಂದಕ್ಕೆ ಎಂದು ಕರೆಯುತ್ತಿದ್ದೆವು ಆಮೇಲೆ ಈ ಶಬ್ದ ಇತ್ತೀಚಿಗೆ ನಾನು ಕೇಳಿದ್ದು ಇದೇ ಮೊದಲು .ನಾವು ಶಾಲೆಗೆ ಹೋಗುವಾಗ ಹುಡುಗರಿಗೆ  ಶೌಚಾ ಲಯಗಳು ಇರಲಿಲ್ಲವಾದುದರಿಂದ  ಬಯಲು ಮತ್ತು ಗುಡ್ಡಕ್ಕೆ ಹೋಗುತ್ತಿದ್ದೆವು .ಮನೆಯಲ್ಲೂ  ಅದೇ ಪರಿಸ್ಥಿತಿ .ಆಗ ಅದು ವಿಶೇಷ ಅಥವಾ ಮುಜುಗರ ಎಣಿಸುತ್ತಿರಲಿಲ್ಲ .ಹಳ್ಳಿಯಲ್ಲಿ ನೆಂಟರ ಮನೆ ,ಸ್ನೇಹಿತರ ಮನೆಗೆ ಹೋದಾಗಲೂ ಇದು ಸಮಸ್ಯೆ  ಆಗದು .ಆದರೆ ಇಂದು  ಮನೆಯಲ್ಲಿ ಶೌಚಾಲಯ ಇದ್ದರೆ  ಸಾಲದು  ವೆಸ್ಟೆರ್ನ್ ಸ್ಟೈಲ್  ಕಮೋಡ್ ಇದ್ದರೆ  ಬರುವೆನು ಎನ್ನುವ ನೆಂಟರು ಇದ್ದಾರೆ . 

ನಗರಗಲ್ಲಿ   ದೊಡ್ಡದಾಗಿ   ಇಲ್ಲಿ  ಬಯಲು ಶೌಚ ನಿಷೇಧ ಎಂದು ಫಲಕ ಗಳನ್ನು  ಕಂಡಿದ್ದೀರಿ .ಆದರೆ  ಸುರಕ್ಷಿತ ಶೌಚಾಲಯ ಎಲ್ಲಿದೆ  ಎಂಬ ಸೂಚನೆ ಎಲ್ಲೂ ಕಾಣುವುದಿಲ್ಲ . ಪೇಟೆಯಲ್ಲಿ ಮಹಿಳೆ ಮತ್ತು ವೃದ್ಧರ  ಕಷ್ಟ ಹೇಳ ತೀರದು . ಇದಕ್ಕೆ ಪರಿಹಾರ ಸೂಚಿಸದೆ  ನಮ್ಮ ಊರು ಸಂಪೂರ್ಣ ಸ್ವಚ್ಛ ಎಂದು ಘೋಷಿಸಿ ಪ್ರಯೋಜನ ಇಲ್ಲ . ನಮ್ಮಲ್ಲಿ ಕೆಲವು ಕಡೆ ಶೌಚಾಲಯ ಇದ್ದರೂ ಅದನ್ನು ಗಲೀಜು ಮಾಡುವರು ಎಂದು  ಬೀಗ ಜಡಿದು ಸ್ಮಾರಕಗಳಂತೆ ಇಟ್ಟಿರುವರು ,

    ನಾನು ಹುಬ್ಬಳ್ಳಿ ಯಲ್ಲಿ  ಎಂ ಬಿ ಬಿ ಎಸ್  ವಿದ್ಯಾರ್ಥಿಯಾಗಿದ್ದಾಗ  ಕಂಡಂತೆ  ಅಲ್ಲಿಯ ಜನರು ಮೂತ್ರ ಶಂಕೆಗೆ ಕಾಲ್ಮಡಿ  ಎಂದೂ ಮಲವಿಸರ್ಜನೆಗೆ ಬೈಲಕಡೆ  ಅಥವಾ  ತಂಬಿಗೆ ತೆಗೊಂಡು ಎಂದು ಹೇಳುತ್ತಿದ್ದುದನ್ನು ಕಂಡೆ . ಅಲ್ಲಿ  ಮೈ ತುರಿಸುತ್ತಿದೆ ಎಂಬುದಕ್ಕೆ  ಮೈಯೆಲ್ಲಾ ತಿಂಡಿ ಎನ್ನುತ್ತಿದ್ದರು . 

ಉರಿ ಮೂತ್ರಕ್ಕೆ ಇಂಗ್ಲಿಷ್ ನಲ್ಲಿ  ಬರ್ನಿಂಗ್ ಮಿಕ್ಟುರಿಷನ್ ಎನ್ನುವರು . ಇದನ್ನೇ ಕನ್ನಡಕ್ಕೆ ಒಬ್ಬರು ಹತ್ತಿ ಉರಿಯುತ್ತಿರುವ ಮೂತ್ರ ಎಂದು ಮಾಡಿದ್ದರು . 

ಎಲ್ಲಾ ಉರಿ ಮೂತ್ರಗಳೂ  ಸೋಂಕಿನಿಂದ ಲೇ  ಇರುವುದಿಲ್ಲ .

ಮೂತ್ರಾಶಯ (Urinary Bladder ) ದ  ಮೈಯಲ್ಲಿ  ಇರುವ ನರಗಳು ಅದು ತುಂಬಿದಾಗ  ಬೆನ್ನು ಹುರಿಯ ಮೂಲಕ ಮೆದುಳಿಗೆ ಸಂದೇಶ ರವಾನಿಸುತ್ತವೆ . ಮೆದುಳಿನ ಕೆಳಭಾಗ ದಲ್ಲಿ ಇರುವ ಪೋನ್ಸ್ ಎಂಬ ಭಾಗದಲ್ಲಿ ಇದರ ಕೇಂದ್ರ .ಮುಖ್ಯ ಮೆದುಳಿಗೂ ಸಂದೇಶದ ಪ್ರತಿ ಹೋಗುವುದು .ಮೂತ್ರ ವಿಸರ್ಜನೆಗೆ ಯೋಗ್ಯ ವಾತಾವರಣ ಇದ್ದರೆ  ಮೇಲಿನಿಂದ ಸಂದೇಶ ಹೋಗಿ ಮೂತ್ರಾಶಯ  ಸಂಕುಚಿಸಿ ,ಮೂತ್ರ ದ್ವಾರ ವಿಕಸನ ಗೊಂಡು  ಹೊರ ಹರಿವು ಸುಗಮ ಆಗುವುದು . ಇದರಲ್ಲಿ ಐಚ್ಚಿಕ ಮತ್ತು ಅನೈಚ್ಚಿಕ ಮಾಂಸ ಖಂಡಗಳು ಪೂರಕವಾಗಿ ಕಾರ್ಯ ನಿರ್ವಸಿಸುವವು .   ಗಂಡಸರಲ್ಲಿ  ವಯಸ್ಸು ಆದಾಗ ಪ್ರಾಸ್ಟೇಟ್ ಗ್ರಂಥಿ ಉಪಟಳ ಕೊಡ ಬಹುದು .ಹೆಂಗಸರಲ್ಲಿ ಮೂತ್ರಾಶಯ ಮತ್ತು ಮೂತ್ರನಾಳದ ಸುತ್ತಲಿನ ಮಾಂಸ ಖಂಡಗಳು ಬಲಹೀನ ಗೊಂಡು ತೊಂದರೆ ಬರುವುದು .ಇದರ  ಪರಿಣಾಮಗಳು ಬೇರೆ ಬೇರೆ ಇರುವವು .   ಮೂತ್ರ ತುಂಬಿದ ಅನುಭವ ಆದ  ಕೂಡಲೇ ಮೂತ್ರ ಮಾಡ ಬೇಕಾಗುವುದು ,ಇಲ್ಲದಿದ್ದರೆ ಬಟ್ಟೆಯಲ್ಲೇ ಹೋಗುವುದು .ಮೂತ್ರ ಮಾಡಲು ಹೋದರೆ ಮೂತ್ರ ಬರಲು ಸಮಯ ತೆಗೆದು ಕೊಳ್ಳುವುದು .ಕೆಮ್ಮು ಸೀನು ಬಂದಾಗ ಸ್ವಲ್ಪ ಮೂತ್ರ ಹೊರ ಹೋಗುವುದು  ಇತ್ಯಾದಿ . ಇವುಗಳಿಗೆ ವೈದ್ಯರು ಪರಿಹಾರ ಸೂಚಿಸುವರು . 

ಮಲ ವಿಸರ್ಜನೆಯು ಇಂತದೇ ನರಗಳ  ಆಣತಿಯಂತೆ  ನಡೆಯುವದು .ಆದರೂ ಮೂತ್ರದ ತೊಂದರೆಯಂತಹ ಉಪಟಳ ಕಡಿಮೆ

ಶುಕ್ರವಾರ, ಫೆಬ್ರವರಿ 19, 2021

ಸ್ಟೆಥೋಸ್ಕೋಪ್

                           ಸ್ಟೆಥೋಸ್ಕೋಪ್ 

ವೈದ್ಯಕೀಯ ವ್ಯಾಸಂಗ  ಮಾಡಲು ಅಪೇಕ್ಷಿಸುವವರು ' ಹೇಗೆ ಮೆಡಿಕಲ್ ಗೆ  ಸ್ಕೋಪ್ ಇದೆಯಾ ಎಂದು ಕೇಳಿದರೆ ಕೆಲವರು 'ಏನೂ  ಇಲ್ಲದ್ದಿದ್ದರೂ ಸ್ಟೆಥೋಸ್ಕೋಪ್ ಮತ್ತು ಮೈಕ್ರೋಸ್ಕೋಪ್ ಇದ್ದೇ ಇದೆ "ಎನ್ನುವರು . ಒಂದು ರೀತಿಯಲ್ಲಿ ವೈದ್ಯ ವೃತ್ತಿಯನ್ನು  ಸಂಕೇತಿಸುವ   ಉಪಕರಣ .. ಆಧುನಿಕ ವೈದ್ಯ ಶಾಸ್ತ್ರದ ಪ್ರಕಾರ ರೋಗಿಯ ಪರೀಕ್ಷೆ ಯಲ್ಲಿ  ಮುಟ್ಟುವುದು(Palpation),ತಟ್ಟುವುದು (Percussion)ಮತ್ತು  ಆಲಿಸುವುದು(Auscultation) ಮೂರು ಮುಖ್ಯ ಅನುಕ್ರಮ ವಿಧಾನಗಳು .

೧೮೧೬ ರಲ್ಲಿ ಫ್ರೆಂಚ್ ವೈದ್ಯ ಲೆನ್ನೆಕ್  ಇದರ ಮೂಲ ಆವೃತ್ತಿಯನ್ನು ಕಂಡು ಹಿಡಿದು ಬಳಕೆಗೆ ತಂದನು . ಅದು ಒಂದೇ ಕಿವಿಗೆ ಇಟ್ಟು  ಕೇಳುವ ಒಂದು ಕೊಳವೆ ಆಗಿತ್ತು .ಅದರ  ಒಂದು ತುದಿ  ರೋಗಿಯ ಎದೆಗೆ ಮತ್ತು ಇನ್ನೊಂದು ವೈದ್ಯರ ಕಿವಿಗೆ ಇಟ್ಟು  ಆಲಿಸಿದಾಗ  ಹೃದಯ ಬಡಿತ ಸ್ಪಷ್ಟ ವಾಗಿ ಕೇಳಿಸುತ್ತಿತ್ತು . ಧ್ವನಿ ವರ್ಧಕ ಇದ್ದಂತೆ 

                      

            ಮುಂದೆ ಇದು  ಆವಿಷ್ಕಾರ ಹೊಂದಿ  ಈಗ ಜನಪ್ರಿಯ ಆಗಿರುವ ಎರಡೂ  ಕಿವಿಗಳ ಮೂಲಕ ಅಳಿಸುವ ಉಪಕರಣ ಆಯಿತು . 

                   

ಇದರ ಉಪಯೋಗಗಳು  ಹಲವು . 

೧.  ರಕ್ತದ  ಒತ್ತಡ ಮಾಪನ . ಸಾಂಪ್ರದಾಯಕ ಬಿ ಪಿ . ಮಾಪಕಗಳಲ್ಲಿ ರಕ್ತದ ಒತ್ತಡ  

   ಅಳೆಯುವುದು .ಇದು ಅಷ್ಟು ಕಷ್ಟ ವೇನಲ್ಲ . ನೀವೂ  ನಾವೂ ಮಾಡ ಬಹುದು . 

೨.   ಎದೆಯ ಮೇಲೆ ಶ್ವಾಸೋಚ್ವಾಸ  ಗಳ  ಧ್ವನಿ ಮತ್ತು ಲಯ ಗಳ  ಪರಿಶೀಲನೆ . ಉದಾಹಣೆಗೆ  ಎದೆಯಲ್ಲಿ ಶ್ವಾಸ ಕೋಶದ ಹೊರಗೆ  ನೀರು ಅಥವಾ  ಗಾಳಿ ತುಂಬಿದ್ದರೆ
ಉಸಿರಿನ  ಶಬ್ದ  ಸರಿಯಾಗಿ ಕೇಳಿಸದು .ಅದೇ ನ್ಯುಮೋನಿಯಾ ಕಾಯಿಲೆ ಇದ್ದರೆ ದೊಡ್ಡದಾಗಿ  ಕೇಳಿಸುವುದು . ಅಸ್ತಮಾ ಕಾಯಿಲೆಯಲ್ಲಿ ಉಸಿರು ಹೊರ ಬಿಡುವಾಗ ಸುಯಿನ್ ಸುಯಿನ್ ಎಂಬ ಮತ್ತು  ಶ್ವಾಸ ಕೋಶದ ಸೋಂಕಿನಲ್ಲಿ ಮತ್ತು  ಹೃದಯ ವೈಫಲ್ಯದ ಕಾರಣ  ಪುಪ್ಪುಸದಲ್ಲಿ ನೀರು ನಿಂತಾಗ ಗುರು ಗುರು ಎಂಬ  ಕೋರಸ್ ಇರುವುದು . 

೩ . ಹೃದಯದ ಬಡಿತ  ಆಲಿಸುವುದು .  ಇದರಲ್ಲಿ ಲಬ್  ಡಬ್ ಲಬ್ ಡಬ್ ನ  ತೀಕ್ಸ್ನತೆ , ಗತಿ  ಮತ್ತು ಲಯ ವನ್ನು ಗಮನಿಸುವರು .ತಾಳ ತಪ್ಪಿದರೆ ತಿಳಿಯುವುದು .ಜತೆಗೆ  ಕವಾಟಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ  ಅವುಗಳ ಮೂಲಕ ರಕ್ತ ಸಂಚಾರದ   ಮರ್ಮರ  ಕೇಳಿಸುವುದು . 

೪ . ಕರುಳಿನ ಚಲನೆ  ಗುಳು ಗುಳು ಎಂದು ಆರೋಗ್ಯವಂತರಲ್ಲಿ ಕೇಳಿಸುವುದು .ಉದರದ ಮೇಲೆ ಸ್ಟೆಥೋಸ್ಕೋಪ್ ಇಟ್ಟು ಇದನ್ನು ಆಲಿಸುವರು . 

೫  ಗರ್ಭಿಣಿಯರಲ್ಲಿ ಶಿಶುವಿನ  ಹೃದಯ ಬಡಿತವನ್ನು ಕೇಳಲು  ಕೂಡ ಈ ಉಪಕರಣ ಉಪಯೋಗಿಸ  ಬಹುದು . 

  ಆಸ್ಪತ್ರೆಗೆ  ಹೋಗುವಾಗ  ಸರಳವಾದ ಉಡುಗೆ ತೊಡುಗೆ ಧರಿಸಿ ಹೋಗಬೇಕು . ಬಟ್ಟೆಯ ಮೇಲೆ  ಲೋಹದ ಅಥವಾ ಗಾಜಿನ  ಚಿತ್ತಾರಗಳು ಇದ್ದರೆ  ಸ್ಥೆಥೋಸ್ಕೋಪ್ ಇಟ್ಟಾಗ  ಘರ್ಷಣೆ ಆಗಿ ಆ ಶಬ್ದವೇ ಕೇಳಿಸಿ ಕಿರಿ ಕಿರಿ ಆಗುವುದು . 

ಇನ್ನು  ವೈದ್ಯರು ಕೂಡ  ಆಟಿಗೆಯಂತೆ  ಇದನ್ನು  ನೇಲಿಸಿ ಕೊಂಡು ಹೋಟೆಲ್ ,ಮಾಲ್ ಗಳಲ್ಲಿ ಪ್ರದರ್ಶಿಸುದು  ಶೋಭೆ ಅಲ್ಲ . ಮತ್ತು ಇದನ್ನು ಧರಿಸಿದವರಿಗೆ ಎಲ್ಲಾ ಇದರ ಉಪಯೋಗ ತಿಳಿದಿರ ಬೇಕು ಎಂದು ಇಲ್ಲ .ನಕಲಿ ವೈದ್ಯರೂ ಸ್ಟೆಥೋಸ್ಕೋಪ್  ಧಾರಿಗಳಾಗಿ ಕುಳಿತಿರುವರು . ಆದರೆ ಮನವರಿಯದುದ ಕಿವಿ ಕೇಳಿಸದು . ಹೊಟ್ಟೆ ಪಾಡಿಗಾಗಿ ತಮಗರಿವಿಲ್ಲದೇ ಮಾಡುವ ಪಾಪವ ಕ್ಷಮಿಸಿದರೂ  ಪತ್ತೆಯಾಗದ ರೋಗ ನಿಮ್ಮನ್ನು ಬಿಡದು .

ಸ್ಥೆಥೋಸ್ಕೋಪ್ ನ  ಕಿವಿ ಗೆ ಇಡುವ  ಭಾಗವನ್ನು   ಇಯರ್ ಪೀಸ್ ಎಂದೂ ಎದೆಯಲ್ಲಿ ಇಡುವುದನ್ನು ಚೆಸ್ಟ್ ಪೀಸ್ ಎಂದೂ ಕರೆಯುವರು .ಈ ಉಪಕರಣದ ಅತ್ಯಂತ ಮುಖ್ಯ  ಭಾಗ ಎರಡು  ಇಯರ್ ಪೀಸ್ ಗಳ  ನಡುವೆ (ಎಂದರೆ ನಮ್ಮ ಮೆದುಳು ) ಎಂದು ಹೇಳುವರು .