ಸಮಾರಂಭಗಳಿಗೆ ಬಂಧು ಮಿತ್ರರೊಡಗೂಡಿ ಬನ್ನಿರಿ ಎಂದು ಆಮಂತ್ರಿಸುವ ಹಳೇ ಒಕ್ಕಣೆ ಈಗಲೂ ಚಾಲ್ತಿಯಲ್ಲಿ ಇದೆ .ಇಂದು ಕರೆಸಿಕೊಂಡ ಬಂಧುಗಳನ್ನೇ ವಿಚಾರಿಸುವವವರು ಇಲ್ಲದಿರುವಾಗ ಮಿತ್ರರನ್ನು ಕರೆದು ಕೊಂಡು ಹೋಗುವುದು ಅರ್ಥಹೀನ .
ಬಂಧುಗಳಿಗಿಂತಲೂ ಒಂದು ಅಳತೆ ಮೇಲು ಒಳ್ಳೆಯ ಮಿತ್ರರ ಸಹವಾಸ ಎಂಬುದು ಬಲ್ಲವರ ಅಭಿಪ್ರಾಯ . ಮೊನ್ನೆ ನಾನು ಮಾತೃಭೂಮಿ ಅಕ್ಷರ ಜಾತ್ರೆಯಲ್ಲಿ ಭಾಗವಾಸಿಸಲು ತಿರುವನಂತಪುರ ಕ್ಕೆ ಹೋಗಿದ್ದೆನಷ್ಟೆ . ಅದರ ವಾಸನೆ ನನ್ನ ಮಿತ್ರ ಡಾ ಜೋಸ್ ಚೆರಿಯನ್ ಅವರಿಗೆ ಸಿಕ್ಕಿತು . ಅವರು ತಿರುವನಂತಪುರದಿಂದ ೧೨೦ ಕಿ ಮೀ ದೂರದ ತಿರುವೆಲ್ಲಾ ನಗರದ ವಾಸಿ .ಅಲ್ಲಿ ತಜ್ಞ ವೈದ್ಯ .ಅವರ ಪತ್ನಿ ಸೆಲ್ವಿ ಮತ್ತು ಮಗಳು ಕೂಡಾ ವೈದ್ಯರು .
೫ನೇ ತಾರೀಕು ಭಾನುವಾರ ಇದ್ದಕ್ಕಿದ್ದಂತೆ ಸಮ್ಮೇಳನ ಮಂಟಪಕ್ಕೆ ಆಗಮಿಸಿ ನಮಗೆ ಸಂತೋಷ ಮತ್ತು ಆಶ್ಚರ್ಯ ಉಂಟು ಮಾಡಿದರು . ಬರುವಾಗ ಮಿತ್ರನಿಗಾಗಿ ತಮ್ಮ ಊರಿಂದ ವಿಶೇಷ ತಿಂಡಿ ತಿನಸು ಕೂಡಾ .
ಜೋಸ್ ಚೆರಿಯನ್ ನನ್ನ ಎಂ ಬಿ ಬಿ ಎಸ ಸಹಪಾಠಿ ,ಅಲ್ಲದೆ ಸುಮಾರು ಎರಡು ವರ್ಷ ರೂಮ್ ಮೇಟ್ ಕೂಡಾ .ಅವರ ತಂದೆ ಅಂಡಮಾನ್ ನಿಕೋಬಾರ್ ,ಅರಣ್ಯ ಇಲಾಖೆ ಅಧಿಕಾರಿ ಆಗಿದ್ದು ಅಖಿಲ ಭಾರತ ಸೇವಾ ಕೋಟ ದಲ್ಲಿ ಅವರಿಗೆ ಸೀಟ್ ಲಭಿಸಿತ್ತು . ಜೋಸ್ ಅತೀ ಸೌಮ್ಯ ಸ್ವಭಾವದ ವ್ಯಕ್ತಿ .ರಜೆಗೆ ಊರಿಗೆ ಹೋಗಿ ಬರುವಾಗ ಬೆಲ್ಲ ಹಾಕಿ ಹುರಿದ ಅಕ್ಕಿ ಪುಡಿ ತರುತ್ತಿದ್ದು ನಾವು ಅದನ್ನು ಸವಿಯುತ್ತಿದ್ದೆವು . ನನ್ನ ಮಲಯಾಳ ಅಭಿರುಚಿ ಮತ್ತು ಜ್ಞಾನ ವೃದ್ಧಿಸಲು ಅವರ ಒಡನಾಟ ಮುಖ್ಯ ಕಾರಣ ಎಂದು ತಿಳಿದು ಕೊಂಡಿದ್ದೇನೆ .ಹುಬ್ಬಳ್ಳಿ ಸಂಗೀತ ಹೊಟೇಲ್ ,ಪೈ ಹೊಟೇಲ್ ನಲ್ಲಿ ಬ್ರೆಡ್ ಬೋಂಡ ,ಚಿವುಡ,ಚಹಾ ಜತೆಗೆ ಸವಿದ ದಿನಗಳು ಎಷ್ಟೋ ?ಉಣಕಲ್ ಬೆಟ್ಟದಲ್ಲಿ ,ಬಂಡಿ ವಾಡ ಅಗಸಿಯಲ್ಲಿ ಅಡ್ಡಾಡಿದ ನೆನಪುಗಳು ಎಷ್ಟೋ ?ಕಂಡ ಸೆಕಂಡ್ ಶೋ ಸಿನೆಮಾ ಗಳು ಎಷ್ಟೋ ?
ನಮ್ಮೊಡನೆ ಸಮಯ ಕಳೆದು ಸಂತೋಷ ಪಡಿಸಿ ,ಶರವಣ ಭವನ ದಲ್ಲಿ ಪುಷ್ಕಳ ಊಟ ಕೂಡಾ ಹಾಕಿ ಸಂಜೆ ತಿರುವೆಲ್ಲಾ ಕ್ಕೆ ಮರಳಿದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ