ಇಂದು ಮುಂಜಾನೆ ನಿದ್ದೆಯಲ್ಲಿ ಅಪರೂಪಕ್ಕೆ ಒಂದು ಒಳ್ಳೆಯ ಕನಸು ಬಿತ್ತು . ದಿನ ಪತ್ರಿಕೆ ಮುಖ ಪುಟದಲ್ಲಿ ನನ್ನ ಚಿತ್ರ . ಪತ್ರಿಕೆಯೇನೋ ಅಂತಿಂತಹುದಲ್ಲ ,ಜನರ ಆತ್ಮ ಸಾಕ್ಷಿಯ ಪ್ರತೀಕ ಎಂದು ಕರೆಯಲ್ಪಡುವ ,ಜಾಹಿರಾತು ಕೊಡದೇ ಅಥವಾ ಕೊಡಿಸುವ ಪ್ರಭಾವ ಇಲ್ಲದೆ ಯಾವುದೇ ಸುದ್ದಿಯನ್ನು ಎಷ್ಟೇ ಮಹತ್ವ ಇದ್ದರೂ ಪ್ರಕಟಿಸದ ರಾಜ್ಯ ವ್ಯಾಪಿ ಪ್ರಸಾರದ ಪತ್ರಿಕೆ . ನರೇಂದ್ರ ಮೋದಿ ,ಬೊಮ್ಮಾಯಿ ,ಸಿದ್ದರಾಮಯ್ಯ ನಂತಹವರು ಮಾತ್ರ ಕಾಣಿಸಿಕೊಳ್ಳುವ ಮೊದಲ ಪುಟ . ಈಗಿನ ಫ್ಯಾಷನ್ ನಂತೆ ಆಪರೇಷನ್ ಥೀಯೇಟರ್ ಡ್ರೆಸ್ ಮತ್ತು ಟೋಪಿ ಹಾಕಿಕೊಂಡ ನನ್ನ ಚಿತ್ರ (ಸರ್ಜನ್ ಅಲ್ಲದಿದ್ದರೂ ) ,ಮುಖದಲ್ಲಿ ಒಂದು ಮಂದಹಾಸ . ಡಾ ಎ ಪಿ ಭಟ್ ಅವರಿಗೆ 'ವೈದ್ಯ ರಾಜ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸುದ್ದಿ . ಇವರಿಗೆ ಈ ಮೊದಲೇ ರಾಷ್ಟೀಯ ವೈದ್ಯ ಪರಿಷತ್ ನಿಂದ ' ರೋಗ ಪ್ರತಿ ಭಯಂಕರ ' , ಕಂಪಿ ವಿಶ್ವ ವಿದ್ಯಾಲಯದಿಂದ "ನೋಡೋಜ "(ರೋಗಿ ಗುಣಮುಖನಾಗುವನೋ ಎಂದು ಕೇಳಿದರೆ ನೋಡೋಣ ದೇವರಿದ್ದಾನೆ ಎಂದು ಯಾವಾಗಲೂ ಹೇಳುವರು )., ಲಾಟ್ ಪೋಟ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗಿದೆ ಎಂಬ ಒಗ್ಗರಣೆ ಕೂಡಾ .
ಕೆಳಗಡೆ ನನ್ನ ಬಂಧು ಮಿತ್ರರು ,ಹಿತೈಷಿಗಳು ತಮ್ಮ ಬಣ್ಣ ಬಣ್ಣದ ಭಾವಚಿತ್ರ ಹಾಕಿಕೊಂಡು ವೈದ್ಯ ರಾಜರಿಗೆ ಅಭಿನಂದನೆಗಳು ಎಂಬ ಜಾಹಿರಾತು . ಅಂತೂ ಹೂವಿನೊಡನೆ ದಾರವೂ ದೇವರ ಪಾದ ಸೇರಿದ ಹಾಗೆ ಆಯಿತು .
ಬಹಳ ಆನಂದ ತುಂದಿಲ ನಾಗಿ ಸಂತೋಷ ತಾಳಲಾರದೆ ನೋಡೇ ನೋಡೇ ಎಂದು ಪತ್ನಿಯನ್ನು ಕೂಗಿದೆ (ಕನಸಿನಲ್ಲಿಯೇ -ನಾನು ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಏನು ಸಾಧನೆ ಮಾಡಿದರೂ ಅವಳಿಗೆ ಕ್ಯಾರೇ ಇಲ್ಲ .ಇದೇನು ಮಹಾ ಇದೇನು ಮಹಾ ಎಂದು ಟ್ರಿವಿಯಲೈಸ್ ಮಾಡುವಳು ,ಈಗಲಾದರೂ ಅವಳಿಗೆ ಜ್ಞಾನೋದಯ ಆಗಲಿ ಎಂಬ ಉದ್ದೇಶ . ) ಏನ್ರೀ ನಿಮ್ಮ ಗಲಾಟೆ ?ಇನ್ನೂ ಗಂಟೆ ಆರು ಆಗಿಲ್ಲ ,ಸ್ವಲ್ಪ ನಿದ್ದೆ ಮಾಡಲು ಬಿಡಿ ಎಂದು ನನ್ನನ್ನು ಅಲುಗಾಡಿಸಿದಾಗ ಎಚ್ಚರ ಆಗಿ ರಸ ಭಂಗ ಮತ್ತು ಭ್ರಮ ನಿರಸನ ಆಯಿತು .ಲಕ್ಷ್ಮೀಶ ತೋಲ್ಪಾಡಿ ಮೊನ್ನೆ ಒಂದು ಕಡೆ ಹೇಳಿದ್ದಾರೆ 'ಭ್ರಮೆ ನಿರಸನ 'ಆದರೇ ಒಳ್ಳೆಯದು ಎಂದು .ಆದರೂ ಒಳ್ಳೆಯ ಕನಸು ಕಾಣಿರಿ ಎಂದು ಕಲಾಂ ಹೇಳಿದ ಹಾಗೆ ನಾನು ಕಂಡು ಆನಂದಿಸುತ್ತಿದ್ದುದು ಅಲ್ಪಾಯು ಆಯಿತಲ್ಲಾ ಎಂದು ಬೇಸರ ಆಯಿತು .
ಈ ಕನಸು ಬೀಳಲು ಕಾರಣ ಆಮೇಲೆ ತಿಳಿಯಿತು .ಹಿಂದಿನ ದಿನದ ಪೇಪರ್ ನಲ್ಲಿ ಹತ್ತು ಹದಿನೈದು ಇಂತಹ ಪ್ರಶಸ್ತಿ ವಿಜೇತರ ಸುದ್ದಿ ಓದಿ ನಾನು ವಿಚಲಿತ ನಾಗಿದ್ದೆ . ಓದುಗರ ಬಳಗದಿಂದ ಸಾಹಿತ್ಯ ಚಿಂತಾಮಣಿ ,ಭಜನಾ ಮಂಡಳಿಯಿಂದ ಧರ್ಮ ದುಂಧರ ,ಗಡಿನಾಡ ಬಳಗದಿಂದ ಬೆಲ್ಟ್ ಏರಿಯಾ ಪ್ರಶಸ್ತಿ ,ಕೃಷಿ ಕೂಟದಿಂದ ಕಲ್ಪ ವೃಕ್ಷ ಪ್ರಶಸ್ತಿ ,ಅಡಿಕೆ ಬೆಳೆಗಾರರಿಂದ ಸಿಪ್ಪೆ ಛೇಧನ ಪರಿಣಿತ ಪ್ರಶಸ್ತಿ ,ರಬ್ಬರ್ ಕೂಟದಿಂದ ರಬ್ಬರ್ ಕ್ಷೀರ ಸಂಗ್ರಹ ನಿಪುಟ ಪ್ರಶಸ್ತಿ ಇತ್ಯಾದಿ .ಇವುಗಳಿಗೆ ಎಲ್ಲಾ ಕಳಶವಿಟ್ಟಂತೆ ವಿಶ್ವ ಶಾಂತಿ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ (ಕೋನ್ ವೊಕೇಷನ್ ಟೊಪ್ಪಿ ಹಾಕಿಸಿ ಕೊಂಡ ಚಿತ್ರ ಸಹಿತ ),ಇತ್ಯಾದಿ .
ಇದನ್ನು ಓದಿ ನನಗೆ ಕೀಳರಿಮೆ ಬಂದಿತು . ನಾನು ಖ್ಯಾತ ವೈದ್ಯ ,ಪ್ರೊಫೆಸ್ಸರ್ ಒಫ್ ಮೆಡಿಸಿನ್ ಮತ್ತು ಸಾಲದ್ದಕ್ಕೆ ಲೇಖಕ .ಒಂದು ನಾಡೋಜ ವಾದರೂ ನನಗೆ ಸಿಗಲಿಲ್ಲವಲ್ಲಾ ,ಯಾರೂ ನನಗೆ ಸನ್ಮಾನ ಮಾಡಲಿಲ್ಲವಲ್ಲಾ ಎಂಬ ಚಿಂತೆ ಕಾಡ ತೊಡಗಿತು .ಅದರ ಪರಿಣಾಮವೇ ಈ ಕನಸು ಎಂದು ಕೊಂಡು ,ನನ್ನ ಕನಸು ಭಂಗ ಮಾಡಿದುದಕ್ಕೆ ಮನಸ್ಸಿನಲ್ಲಿಯೇ ಪರಂಚಿ ಕೊಂಡು ನಿತ್ಯ ವ್ಯಾಪಾರದಲ್ಲಿ ಲೀನನಾದೆ .
ಬಾಲಂಗೋಚಿ : ಈಗ ಖಾಸಗಿ ಶಾಲೆಗಳಲ್ಲಿ ಹಾಜರಿ, ,ಅಕ್ಷರ,ವಿಧೇಯತೆ ,ಎಕ್ಸ್ಟ್ರಾ ಕರಿಕುಲರ್ ,ಸ್ಟಡಿ ಎಂದು ಪ್ರಶಸ್ತಿ ,ಬಹುಮಾನ ಕೊಟ್ಟು ಯಾವ ಹೆತ್ತವರಿಗೂ ಬೇಸರ ಆಗದಂತೆ ನೋಡಿ ಕೊಳ್ಳುತ್ತಾರೆ . ಇಲಾಖೆಯಲ್ಲಿ ವಾರ್ಷಿಕ ಪ್ರಶಸ್ತಿ ಬಿರುದುಗಳು ಕೋಟಲೆ ಧಡಾರ ದಂತೆ ಎಲ್ಲರಿಗೂ ಬರುವುದು ಎಂದು ತಮ್ಮ ಮೇಲಧಿಕಾರಿ ಹೇಳುತ್ತಿದ್ದರು ಎಂದು ರಾಜ್ಯದ ಮಾಜಿ ಪೊಲೀಸ್ ನಿರ್ದೇಶಕ ದಿ . ಎ ಪಿ ದುರೈ ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ .
ಇನ್ನು ಕೆಲವು ಅನುಕರಣೆ ಪ್ರಶಸ್ತಿಗಳು ಆರಂಭವಾಗಿವೆ .ಪದ್ಮಶ್ರೀ ,ಭೂಷಣ ,ವಿಭೂಷಣ ,ಭಾರತ ರತ್ನ ಇರುವ ಹಾಗೆ ಉದಾ ಕವಿ ಶ್ರೀ ,ಕವಿ ಭೂಷಣ ,ಕವಿ ವಿಭೂಷಣ ,ಕವಿ ರತ್ನ ಇತ್ಯಾದಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ