ನಿಜವಾದ ಪೂಜೆ
ಸ್ವಾಮಿ ವಿವೇಕಾನಂದ ರು ರಾಮೇಶ್ವರದಲ್ಲಿ ಮಾಡಿದ ಭಾಷಣದಿಂದ ಆಯ್ದ ಭಾಗ
ಧರ್ಮ ಇರುವುದು ಪ್ರೀತಿಯಲ್ಲಿ,ಬಾಹ್ಯಾಚಾರ ದಲ್ಲಿ ಅಲ್ಲ .ಧರ್ಮಕ್ಕೆ ಶುದ್ಧ ನಿಷ್ಕಪಟ ಹೃದಯವೇ ಮುಖ್ಯ .ಒಬ್ಬನ ದೇಹ ಮತ್ತು ಮನಸ್ಸು ಪರಿಶುದ್ದವಿಲ್ಲದೇ ಇದ್ದರೆ ಅವನು ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿದರೆ ಪ್ರಯೋಜನ ಇಲ್ಲ .ಬಾಹ್ಯ ಪೂಜೆ ಆಂತರಿಕ ಪೂಜೆಯ ಸಂಕೇತ ಮಾತ್ರ .ಆಂತರಿಕ ಪೂಜೆಗೆ ಅಂತರಂಗ ಶುದ್ದಿಯೇ ಮುಖ್ಯ .ಇದಿಲ್ಲದೆ ಬರಿಯ ಬಾಹ್ಯ ಪೂಜೆಯಿಂದ ಪ್ರಯೋಜನ ಇಲ್ಲ .
ಕಲಿಯುಗದಲ್ಲಿ ಜನರು ಬಹಳ ಕುಲಗೆಟ್ಟು ಹೋಗಿರುವರು .ಎಂತಹ ಮಹಾಪಾತಕ ಮಾಡಿದರೂ ಪುಣ್ಯ ಕ್ಷೇತ್ರಕ್ಕೆ ಹೋದರೆ ದೇವರು ತಮ್ಮ ಪಾತಕವನ್ನು ಕ್ಷಮಿಸುವನು ಎಂದು ಭಾವಿಸುವರು .ಅಶುದ್ಧ ಮನಸಿನಿಂದ ದೇವಸ್ಥಾನಕ್ಕೆ ಹೋದರೆ ,ತನ್ನಲ್ಲಿರುವ ಪಾಪದ ಮೊತ್ತಕ್ಕೆ ಮತ್ತಷ್ಟನ್ನು ಸೇರಿಸಿಕೊಳ್ಳುವನು .ಮನೆಗೆ ಹೋಗುವಾಗ ಹಿಂದೆ ಇದ್ದುದಕ್ಕಿಂತ ಹೆಚ್ಚು ಹೀನನಾಗಿರುತ್ತಾನೆ .ಅಪವಿತ್ರರು ಇರುವಲ್ಲಿ ನೂರು ದೇವಸ್ಥಾನ ಗಳು ಇದ್ದರೂ ,ತೀರ್ಥವು ಮಾಯವಾಗಿ ಹೋಗುತ್ತದೆ .ತೀರ್ಥ ಕ್ಷೇತ್ರದಶ್ಲ್ಲಿ ವಾಸಿಸುವುದು ಕಷ್ಟ ,ಸಾಧಾರಣ ಸ್ಥಳಗಳಲ್ಲಿ ಮಾಡಿದ ಪಾಪವನ್ನು ಸುಲಭವಾಗಿ ಕಳೆದು ಕೊಳ್ಳ ಬಹುದು .ತೀರ್ಥ ಕ್ಷೇತ್ರದಲ್ಲಿ ಮಾಡಿದ ಪಾಪದಿಂದ ಪಾರಾಗಲು ಆಗುವುದಿಲ್ಲ .ನಾವು ಪರಿಶುದ್ಧ ರಾಗುವುದು ,ಇತರರಿಗೆ ಒಳ್ಳೆಯದನ್ನು ಮಾಡುವುದು ಎಲ್ಲ ಪೂಜೆಯ ಸಾರ.ಯಾರು ದೀನರಲ್ಲಿ ,ರೋಗಿಗಳಲ್ಲಿ ಶಿವನನ್ನು ನೋಡುವರೋ ಅವರೇ ನಿಜವಾಗಿ ಶಿವನನ್ನು ಪೂಜಿಸುವವರು .ಒಬ್ಬನು ಕೇವಲ ವಿಗ್ರಹದಲ್ಲಿ ಮಾತ್ರ ಶಿವನನ್ನು ನೋಡಿದರೆ ಅವನ ಪೂಜೆ ಗೌಣ .ಜಾತಿ -ಕುಲ-ಗೋತ್ರಗಳನ್ನು ಲೆಕ್ಕಿಸದೆ ಯಾರು ಬಡವನಲ್ಲಿ ಶಿವನನ್ನು ನೋಡಿ ಅವನಿಗೆ ಸೇವೆ ಸಲ್ಲಿಸುವರೋ ,ಅವನಿಗೆ ಸಹಾಯ ಮಾಡುವರೋ ,ಅವರ ಮೇಲೆ ಶಿವನಿಗೆ ತನ್ನನ್ನು ಕೇವಲ ವಿಗ್ರಹದಲ್ಲಿ ನೋಡುವವರಿಗಿಂತ ಹೆಚ್ಚು ಪ್ರೀತಿ .
ಪುರಂಧರ ದಾಸರು ಹಾಡಿದ್ದು
ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ
ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ
ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ
ಆರತಿಯನೊಲ್ಲೆಯಯ್ಯಾ ನೀನು.
ಭಾವ ಶುದ್ಭವಿಲ್ಲದವರಲ್ಲಿ
ಧೂಪನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ
ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ
ತಾಂಬೂಲವನೊಲ್ಲೆಯಯ್ಯಾನೀನು.
ಹೃದಯಕಮಲ ಅರಳದವರಲ್ಲಿ
ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು
ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ