ಸಂಜೆ ಶಾಲೆಯಿಂದ ಬಂದು ಆರಿದ ಬೆಲ್ಲದ ಕಾಪಿ ಯೊಡನೆ ಬೆಳಗಿನ ತಿಂಡಿ ಏನಾದರೂ ಉಳಿದಿದ್ದರೆ ಗಬಗಬ ತಿಂದು ಕತ್ತಲಾಗುವ ಮೊದಲು ಆಟ ಆಡುವ ಆಸೆ .ಕೆಲವೊಮ್ಮೆ ತಿಂಡಿ ಏನೂ ಇರುತ್ತಿರಲಿಲ್ಲ . ಗೆಣಸು ಅಥವಾ ನೇಂದ್ರ ಬಾಳೆ ಹಣ್ಣು ಇದ್ದರೆ ಒಲೆಯ ಕೆಂಡದಲ್ಲಿ ಮುಚ್ಚಿ ಹೋಗಿ ಮತ್ತೆ ಬಂದು ತಿನ್ನುತ್ತಿದ್ದೆವು .ಕೆಲವೊಮ್ಮೆ ಹಪ್ಪಳ ಸುಟ್ಟು ತಿನ್ನುವುದೂ ಇತ್ತು . ಒಂದು ಒಲೆಯಲ್ಲಿ ಯಾವಾಗಲೂ ಕೆಂಡ ಇರುತ್ತಿದ್ದು ಬಹಳ ಉಪಯೋಗಿ .
ಕೆಂಡದ ಬಿಸಿಯಲ್ಲಿಯೇ ಓಡಿನಲ್ಲಿ ಕೆಂಡದಡ್ಯೆ ಬೇಯಲು ಇಡುವುದು . ಹಲಸಿನ ಹಣ್ಣಿನ ಅಡ್ಯೆ ಕೂಡಾ ಆರಂಭದಲ್ಲಿ ಬೆಂಕಿಯಲ್ಲಿ ಉತ್ತರಾರ್ಧದಲ್ಲಿ ಕೆಂಡದ ಬಿಸಿಯಲ್ಲಿ ಬೆಂದು ಮುಂಜಾನೆ ಗಮ ಗಮ ಪರಿಮಳ ಸೂಸುವುದು . ಹೆಸರು ಪಾಯಸವನ್ನು ಒಂದು ಉರುಳಿಯಲ್ಲಿ ಹಾಕಿ ಕೆಂಡದ ಮೇಲೆ ಇಟ್ಟರೆ ಅದು ಗಟ್ಟಿಯಾಗಿ ಉಂಡೆ ಮಾಡಲು ಬರುವುದು ,ಮತ್ತು ತಿನ್ನಲು ರುಚಿ .ನನ್ನ ಅಜ್ಜ ಸ್ವಯಂ ಇದನ್ನು ಮಾಡುತ್ತಿದ್ದರು. ಇನ್ನು ದೀಗುಜ್ಜೆ ಮತ್ತು ಬಸಳೆ ಸಾಂಭಾರು ಮಣ್ಣಿನ ಪಾತ್ರೆಯಲ್ಲಿ ಕೆಂಡ ಇರುವ ಒಲೆಯ ಮೇಲೆ ಇಟ್ಟರೆ ಗಟ್ಟಿಯಾಗಿ ಉಪ್ಪು ಮೆಣಸು ಹೀರಿ ಬಹಳ ರುಚಿ ಇರುತ್ತಿತ್ತು . (ಆಯಾ ದಿನದ ಫ್ರೆಷ್ ಪದಾರ್ಥಕ್ಕಿಂತಲೂ ನಮಗೆ ಅದುವೇ ಹೆಚ್ಚು ಇಷ್ಟವಾಗುತ್ತಿತ್ತು )
ಬಲಿತ ಮಾವಿನ ಕಾಯಿ ಉಪ್ಪಿನಕಾಯಿ (ಇಡಿಕ್ಕಾಯಿ)ಯ ಗೊರಟನ್ನು ಕೆಂಡದಲ್ಲಿ ಬೇಯಿಸಿ ಒಡೆದು ಅದರ ಒಳಗಿನ ಕೋಗಿಲೆ ಸವಿಯುವುದು ಕೂಡಾ ಒಂದು ಹವ್ಯಾಸ . ಬದನೆ ಕಾಯಿ ಸುಟ್ಟು ಗೊಜ್ಜಿ ಮಾಡುತ್ತಿದ್ದರು.
ಮಳೆಗಾಲ ಒಲೆಯ ಪಕ್ಕ ಬಟ್ಟೆ ಒಣಗಲು ಹಾಕುತಿದ್ದು ಅಂತಹ ಬಟ್ಟೆಗಳು ವಿಶಿಷ್ಟವಾದ ಪರಿಮಳ ಹೊಂದಿರುತ್ತಿದ್ದವು .
ಸಂಜೆ ಹೊತ್ತು ಮನೆಯಲ್ಲಿ ಯಾವತ್ತೂ ಇರುತ್ತಿದ್ದ ಎಳೆ ಹಸುಳೆಗಳ ದೃಷ್ಟಿ ತೆಗೆಯಲೆಂದು ಉಪ್ಪು ಸಾಸಿವೆ ಸುತ್ತಿ ಒಲೆಗೆ ಹಾಕಿ ಚಿಟಿಚಿಟಿ ಮಾಡುತ್ತಿದ್ದರು .
ಸರಿಯಾದ ವಾತಾನುಕೂಲ ಇಲ್ಲದ ಅಡಿಗೆ ಮನೆಯಲ್ಲಿ ಹೊಗೆ ಕಾರುವ ಸೌದೆಗಳ ಎದುರು ಊದು ಓಟೆಯಲ್ಲಿ ಕಣ್ಣು ಮೂಗಿನಲ್ಲಿ ನೀರು ಸುರಿಸಿಕೊಂಡು ಗಂಟೆ ಕಟ್ಟಲೆ ಕುಳಿತೇ ದೋಸೆ ಹೊಯ್ಯುವುದು ,ಅಡಿಗೆ ಮಾಡುವುದು ಮಾಡುತ್ತಿದ್ದ ಅಮ್ಮಂದಿರು ಕಣ್ಣ ಮುಂದೆ ಇದ್ದಾರೆ .ಹಲವು ದಮ್ಮು ಉಂಟುಮಾಡುವ ಶ್ವಾಸ ಕೋಶದ ಕಾಯಿಲೆಗಳಿಗೆ ಇದುವೇ ಕಾರಣ ಆಗಿತ್ತು .
ಇಂತಹ ಒಲೆ ಗಳು ,ಹಾಲು ಮಜ್ಜಿಗೆ ಪಾತ್ರೆ ಇಡುವ ಸಿಕ್ಕ ,ಕಲಾಯಿ ಯವರು ಮುಚ್ಚಳ ಮಾಡಿಕೊಟ್ಟ ಖಾಲಿ ಎಣ್ಣೆ ಡಬ್ಬಗಳು (ಅವಲಕ್ಕಿ ಇತ್ಯಾದಿ ಶೇಖರಿಸಲು ) ಇಂದು ಅಪರೂಪ ಆಗಿವೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ