ಬೆಂಬಲಿಗರು

ಶುಕ್ರವಾರ, ಮಾರ್ಚ್ 25, 2022

ಹಿರಿಯರ ಆಶೀರ್ವಾದ

                


ಮೇಲಿನ ಚಿತ್ರದಲ್ಲಿ ಇರುವವರು 93 ವರ್ಷದ ಯುವಕ ಬಲ್ನಾಡು ಸುಬ್ಬಣ್ಣ ಭಟ್ ಅವರು .ಸುಬ್ಬಣ್ಣನ ತ್ರಿಪದಿಗಳು ಎಂದು ಅವರ ಚುಟುಕುಗಳು ಹಿಂದೆ ಶಿಂಗಣ್ಣ ರಾಮಕೃಷ್ಣ ಶಾಸ್ತ್ರಿಗಳ 'ಇಂದ್ರ ಧನುಸ್ ' ಮಾಸಿಕ ದಲ್ಲಿ ಓದಿದ ನೆನಪು . ಎಸ್ ಬಿ ಹೇಟ್ ಅವರ ಕಾವ್ಯ ನಾಮ . ಆದಾಗ್ಯೂ ಅವರಲ್ಲಿ ಬರೀ 24  ಕೇರೆಟ್ ಪ್ರೀತಿಯೇ ಹೊರತು ಹೇಟ್ ಹುಡುಕಿದರೂ ಸಿಗದು .ಹಿಂದೆ ಅಡಿಕೆ ಸಂಘದಲ್ಲಿ ಉದ್ಯೋಗಿಯಾಗಿದ್ದು  ಪುತ್ತೂರು ಪರ್ಲಡ್ಕ ದಲ್ಲಿ ವಾಸವಿದ್ದು ಪಕ್ಕದಲ್ಲಿಯೇ ನನ್ನ ಅಕ್ಕನ ಮನೆ ಇತ್ತು . ಸಾತ್ವಿಕರೂ ದೈವ ಭಕ್ತರೂ ಆಗಿರುವ ಇವರು ಸಮಾಜದ ಅಂಕು ಡೊಂಕುಗಳನ್ನು ನವಿರಾದ ಹಾಸ್ಯದೊಡನೆ ತಮ್ಮ  ಚುಟುಕಗಳ ಮೂಲಕ ಹೇಳಲು ಹಿಂಜರಿಯರು .ಈಗ ನರಿಮೊಗರು ಸಮೀಪ' ಪಂಚವಟಿ'ಯಲ್ಲಿ ವಾಸ. ಅವರ ಪುತ್ರ ಪ್ರಸನ್ನ  ಪುತ್ತೂರಿನ ಹೆಸರಾಂತ ಸಿವಿಲ್ ಎಂಜಿನಿಯರ್ .

ಸುಬ್ಬಣ್ಣ ಭಟ್ ಅವರ ಹಾಸ್ಯ ಪ್ರಜ್ನೆ ಪ್ರಸಿದ್ದ . ಹಲವು ಕೃತಿಗಳನ್ನು ರಚಿಸಿದ್ದಾರೆ . ಅವರ ಪತ್ನಿ ನಮ್ಮ  ಗುರುಗಳಾದ ಅಮೈ ಮನೆತನದವರು . 

ಹಿರಿಯರಿಗೆ ನನ್ನ ಕೃತಿ 'ವೈದ್ಯನ ವಗೈರೆಗಳು ' ಪ್ರತಿಯನ್ನು ಪ್ರೀತಿ ಗೌರವಗಳಿಂದ ಕಳುಹಿಸಿದ್ದೆ .

ಇಂದು ಅವರ ಆಶೀರ್ವಾದ ರೂಪದ ಪತ್ರ ತಲುಪಿದೆ .

                                               ಬಲ್ನಾಡು ಸುಬ್ಬಣ್ಣ ಭಟ್ ,'ಪಂಚವಟಿ '

ಡಾ ಎ ಪಿ ಭಟ್ ಅವರಿಗೆ ಸುಬ್ಬಣ್ಣನ ನಮಸ್ಕಾರಗಳು . ನೀವು ಪ್ರೀತಿಯಿಂದ ಕೊಟ್ಟ "ವೈದ್ಯನ ವೈಗೈರೆಗಳು 'ಓದಿ 'ಖುಷಿ ' ಯಾಯಿತು .ತಪ್ಪು ತಿಳುವಳಿಕೆಗಳ ಮೇಲೆ ಬೆಳಕು ಬೀರಿ ಸೋಂಕುಗಳ  ಮೂಲ ಪರಿಚಯ ಮಾಡಿರುವ ಪುಸ್ತಕವಿದು ಎಲ್ಲರ ಮನೆಯಲ್ಲೂ ಇರಬೇಕಾದ ಗ್ರಂಥ .

ತಿಳಿಹಾಸ್ಯದ ಲೇಪನದ ಎರಡನೆಯ ಭಾಗ ನೇಪಥ್ಯ ಸೇರಿದ್ದ ಬಾಲ್ಯದ ನೆನೆಪುಗಳನ್ನು ರಂಗಕ್ಕೆ ತಂದಿರುವುದು  ಶ್ಲಾಘನೀಯ .ದಯವಿಟ್ಟು ಪುಸ್ತಕದ  ಗೌರವ ಧನವನ್ನು ಸ್ವೀಕರಿಸಿರಿ .

ವೃದ್ದಾಪ್ಯ (93 ವರ್ಷ )ಸಹಜ ದೌರ್ಬಲ್ಯಗಳ ಹೊಂದಿ 

ಆಗಿರುವೆ ನಾನಿಂದು  ಮನೆಯೊಳಗೆ ಬಂಧಿ 

ಬಿಡುವು ದೊರೆತರೆ ನಮ್ಮ ಮನೆಗೊಮ್ಮೆ ಬನ್ನಿ 

ಬರುವಾಗ ಜತೆಗೆ 'ನಿಮ್ಮವರ 'ಕರೆತನ್ನಿ .

                             ಇತೀ

                                       ಸುಬ್ಬಣ್ಣ ಭಟ್

                                             
ಜತೆಗೆ  ಎಂಟು ಚೌಪದಿಗಳ ಮೆಚ್ಚುಗೆ ನುಡಿಗಳನ್ನು ರಚಿಸಿ ಕಳುಹಿಸಿದ್ದಾರೆ .ಅವುಗಳನ್ನು ಅಶೀರ್ವಚನ ಎಂದು ಸ್ವೀಕರಿಸಿದ್ದೇನೆ .

 

ವೈದ್ಯರ ವಗೈರೆ ಪುಸ್ತಕದ ಕೃತಿಕಾರ 

ವೈದ್ಯರೇ ನಿಮಗೆ ಸಲಿಸುವೆ ನಮಸ್ಕಾರ 

ಸುಲಿದ ಕದಳಿಯ ಹಣ್ಣಿನಂತಿಹ ವಿಚಾರ 

ತಿಳುವಳಿಕೆಗಳಿಗೆನ್ನ ಪುರಸ್ಕಾರ . ೧

 

ಜಿಜ್ಞಾಸುಗಳ ಬಗೆಗೆ ಇದು ಮಾರ್ಗದರ್ಶಿ 

ಸೋಂಕುಗಳ ಪರಿಚಯಕೆ ಕೃತಿಯೊಂದು ದರ್ಶಿ 

ತಪ್ಪು ತಿಳುವಳಿಕೆಗಳ ಮೇಲೊಂದು ಬೆಳಕು 

ಬೀರಿರುವ ಗ್ರಂಥ ವಿದರೊಳಗುಂಟು ಥಳಕು . ೨

 

ಹತ್ತೂರುಗಳ ಸುತ್ತಿ ತುಂಬಿರುವ ಬುತ್ತಿ 

ಪುತ್ತೂರಿನಲಿ ಬಿಚ್ಚಿ ಉಣಿಸಿಸಿದ ಪ್ರಸಕ್ತಿ 

ಚಿತ್ರ 'ಬಾಲಂಗೋಚಿ 'ಗಳ ಬರಹದಿಂದ 

ವರ್ಧಿಸಿದೆ ಹೊತ್ತಿಗೆಯ ಸೊಬಗು ಒಟ್ಟಿಂದ.  ೩


ಕಷ್ಟ ಸುಖ ಸಂತೋಷದನುಭವ ಪಡೆದು 

ಹುಟ್ಟೂರ ಸೇರಿರುವ ಸಾಹಸವು ಹಿರಿದು 

ಇಷ್ಟಮಿತ್ರರ ನಡುವೆ ವೃತ್ತಿಯ ನಡಿಗೆ 

ಚಿತ್ತದಲಿ ಸಂತುಷ್ಟಿ ಶಾಂತಿಗಳ ಕೊಡುಗೆ .೪


ನಾಗವಲ್ಲಿಯ ದಳಕೆ ಲೇಪಿಸುತ ಸುಣ್ಣ 

ಜಗಿದಾಗ ತುಟಿಗೆ ಬರುವಂತೆ ಕೆಂಬಣ್ಣ 

ಓದಿದನುಭವ ಮೆಲುಕಾಡಿದರೆ ಜ್ನಾನ

ಮೊಸರ ಕಡೆದರೆ ಸಿಗುವ ವರಮಾನ .೫

 

'ಅನುಭವವು ಸವಿಯಲ್ಲ ನೆನಪು ಸವಿಯು '

 ಇದು ಕಡೆಂಗೋಡ್ಲು ಶಂಕರ ಭಟ್ಟರ ಮಾತು 

ಬಾಲ್ಯದಲಿ ಕಂಡು ಸಂಭ್ರಮಿಸಿಸುವ ಮನಸು 

'ಆತ್ಮ ನಿರ್ಭರ 'ಹಳ್ಳಿ ಜೀವನದ ಸೊಗಸು .೬

 

ಆತ್ಮಕತೆಯಂತಿರುವ  ಎರಡನೆಯ ಭಾಗ 

ಜಾತ್ರೆಯಲಿ ಮಣಿಸರಕಿನಂಗಡಿಯ ಜೋಗ 

ಎಲ್ಲವೂ ಉಂಟಲ್ಲಿ ಸುಲಭದಲಿ ಲಭ್ಯ 

ಅರಸುವಡೆ ಶ್ರಮವಿಲ್ಲ ತೆರೆದ ಸೌಲಭ್ಯ .೭

 

ಸಾಹಿತ್ಯ ಕಲೆಗಳಲಿ ನಿಮಗಿರುವ ಪ್ರೀತಿ 

ವೈದ್ಯರೊಳಗಪರೂಪವೆನುವ  ಪ್ರತೀತಿ 

ಜನಹಿತದ ಗ್ರಂಥಗಳು ಬರಲಿ ನಿಮ್ಮಿಂದ 

ಬಲ್ನಾಡು ಸುಬ್ಬಣ್ಣ ಭಟ್ಟ ಹೀಗೆಂದ.೮



 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ