ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು, ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು----- ವಿ ಸೀ
ಅಂಗಳ ಎಂದೊಡನೆ ನೆನಪಾಗುವುದು ಮೇಲಿನ ಜನಪ್ರಿಯ ಗೀತೆ . ನಮ್ಮ ಜೀವನದಲ್ಲಿ ಮನೆಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಅಂಗಳಕ್ಕೂ ಇದೆ . ಅಂಗಳ ಒಂದು ಚಲನ ಶೀಲ ಬೆಳವಣಿಗಗಳ ತಾಣ .
ನಮ್ಮ ಮನೆಯ ಮುಂದಿನ ಅಂಗಳ ಗದ್ದೆ ಕೊಯ್ಲು ಆದಾಗ ಭತ್ತ ಬಡಿಯಲು ,ಮಕ್ಕಳಿಗೆ ಆಟವಾಡಲು ,ಸ್ತ್ರೀ ವೇಷ ,ಆಟಿಕಳಂಜ ,ಸೋಣೆ ಜೋಗಿ ,ಮಾರ್ನಮಿ ವೇಷ ,ಘಟ್ಟದ ಮೇಲಿಂದ ಬರುವ ಬಸವಣ್ಣ , ಕೊರವಂಜಿ ಕಣಿ ನುಡಿಯುವವರು ಎಲ್ಲರಿಗೂ ಒಂದು ರಂಗ ಸ್ಥಳ . ಇವರೆಲ್ಲರಿಂದದೂ ನಾವು ಕಲಿತಿದ್ದೇವೆ .
ಪಾರ್ಶ್ವದಲ್ಲಿ ದೊಡ್ಡ ಅಂಗಳ ಅಡಿಕೆ ಸಮಯದಲ್ಲಿ ಅಡಿಕೆ ಹಾಕಲು . ಮಳೆಗಾಲ ಸಮೀಸಿದೊಡನೆ ಅದಕ್ಕೆ ಸೋಗೆಯ ಹೊದಿಕೆ .ಮೇಲೆ ನಡೆದಾಡಲು ಅಡಿಕೆ ಮರದ ಕಾಂಡ . ತಾತ್ಕಾಲಿಕ ತರಕಾರಿ ತೋಟ ಏಳುವದು ,ಮುಳ್ಳು ಸೌತೆ ,ಪಡುವಲ ,ಹೀರೆ ಕಾಯಿಗಳನ್ನು ನೇಲಿಸಿಕೊಂಡು ಬೀಗುವ ಚಪ್ಪರ ನೋಡಲು ಬಹು ಸೊಗಸು .ಪಕ್ಕದಲ್ಲಿ ಬೆಂಡೆ ,ಅಲಸಂದೆ ಇತ್ಯಾದಿ .ಸೌತೆ ಮತ್ತು ಬಚ್ಚಂಗಾಯಿ ಮಾತ್ರ ಬೇಸಾಯ ಮುಗಿದ ಮೇಲೆ ಗದ್ದೆಯಲ್ಲಿ . ಮನೆಗೆ ತರಕಾರಿ ಹೊರಗಡೆಯಿಂದ ತರುವುದೆಂದೇ ಇಲ್ಲ . ಏನೂ ಇಲ್ಲದಾಗ ಹಲಸು ,ಗೆಣಸು ,ಪಪ್ಪಾಯಿ ಇವೆಯಲ್ಲ . ಬೆಳೆದ ಸೌತೆ ಕಾಯಿಗಳನ್ನು ಕಂಬಕ್ಕೆ ಕಟ್ಟಿ ,ಯಾವುದಾದರೂ ಮೆತ್ತಗೆ ಆಯಿತೆಂದರೆ ಕತ್ತಿ ಹಾಕುವದು .
ಇಲ್ಲಿಗೆ ಮುಗಿಯಿತೇ ?ಅಡಿಕೆ ಧನಲಕ್ಷ್ಮಿ ಅಲ್ಲವೇ ? ಅದನ್ನು ಸ್ವಾಗತಿಸಲು ಅಂಗಳ ರೆಡಿ ಆಗಬೇಕು ..ಮಳೆಯಿಂದ ಅಂಗಳ ಸವೆತ ತಡೆಯಲು ಹಾಕಿದ ಸೋಗೆ ತೆಗೆದು , ಹೊಳಿ ಮಣೆಯಿಂದ ಗುದ್ದಿ (ರೋಲರ್ ಇರಲಿಲ್ಲ )ಸಮ ಮಾಡುವುದು ದೊಡ್ಡ ಕೆಲಸ . ಪಡಿಗೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ನೆಲಕ್ಕೆ ಹಾಯಿಸಿ ಭಾರದ ಮರದ ಮಣೆ(ಹೊಳಿಮಣೆ)ಯಿಂದ ಗುದ್ದಿ ಸಮತಟ್ಟು ಮಾಡುವದು .
ನಡುವೆ ಮನೆಯಲ್ಲಿ ಮದುವೆ ಮುಂಜಿ ಸಮಾರಂಭ ಗಳು ಬಂದರೆ ಅಂಗಳದಲ್ಲಿ ಚಪ್ಪರ ಎದ್ದು ಕಲ್ಯಾಣ ಮಂಟಪ ಆಗುವುದು . ನೆಂಟರು ಮನೆಯವರು ಚಪ್ಪರದಲ್ಲಿಯೇ ಚಾಪೆ ತಲೆ ದಿಂಬು ಹಾಕಿ ಮಲಗುವರು . ತರಕಾರಿ ಹಚ್ಚುವುದು ,ಇಸ್ಪೇಟು ಆಡುವುದು ಇಲ್ಲಿಯೇ .