ಮಡಿಕೇರಿ ನೆನಪುಗಳು ೧
ಎಂ
ಬಿ ಬಿ ಎಸ್ ಮಾಡಿ ಮುಂದೇನು ಮಾಡುವುದು ಎಂಬ ಆಲೋಚನೆಯಲ್ಲಿ ಇರುವಾಗ ಹಾಸನದಲ್ಲಿ ನಮ್ಮ
ಊರ ವೈದ್ಯರು ತೀರಿ ಕೊಂಡು ಅವರ ಕ್ಲಿನಿಕ್ ಇದೆಯೆಂದು ನನ್ನ ಸಹೋದರ ತಿಳಿಸಲಾಗಿ ಅಲ್ಲಿ
ಹೋಗಿ ಪ್ರಾಕ್ಟೀಸ್ ಶುರು ಮಾಡಿದೆನು .ಆರು ತಿಂಗಳಿನಲ್ಲಿ ಆಸ್ಪತ್ರೆ ಕೆಲಸ ಇಲ್ಲದೆ ಹೊರ
ರೋಗಿಗಳನ್ನು ಮಾತ್ರ ನೋಡುವ ಕೆಲಸ ,ಏಕತಾನತೆ ಬೇಸರ ಹುಟ್ಟಿಸಿತು .ಒಂದು ದಿನ ಡೆಕ್ಕನ್
ಹೆರಾಲ್ಡ್ ಪತ್ರಿಕೆಯಲ್ಲಿ ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ಮೆಡಿಕಲ್ ಆಫೀಸರ್
ಬೇಕಾಗಿದ್ದಾರೆ ಎಂಬ ಜಾಹೀರಾತು ನೋಡಿ ಅರ್ಜಿ ಹಾಕಿದೆ .ಒಂದು ರವಿವಾರ ಸಂದರ್ಶನಕ್ಕೆ
ಕರೆದರು .ಬೆಳ್ಳ ಬೆಳಗ್ಗೆ ಹಾಸನದಿಂದ ಬಸ್ ನಲ್ಲಿ ಮಡಿಕೇರಿಗೆ ಬಂದು ಇಳಿದಾಗ ನನ್ನ
ಸೀನಿಯರ್ ಒಬ್ಬರು (ಆಗಲೇ ಮಕ್ಕಳ ತಜ್ನ ಎಂ ಡಿ ಮಾಡಿದ್ದವರು )ಸಿಕ್ಕಿದರು .ಏನು ಸಾರ್
ಇಲ್ಲಿ ಎಂದು ಕೇಳಿದ್ದಕ್ಕೆ ಇಲ್ಲಾ ಒಂದು ನೆಂಟರ ಮದುವೆ ಇತ್ತು ಹಾಗೆ ಬಂದೆ ,ಬರುತ್ತೇನೆ
ಎಂದವರೇ ರಿಕ್ಷಾ ಹತ್ತಿ ಹೋದರು.ನಾನೂ ಚಹಾ ಸೇವನೆ ಮಾಡಿ ಇನ್ನೊಂದು ಆಟೋ ಹತ್ತಿ
ಆಸ್ಪತ್ರೆಗೆ ಹೋದರೆ ಅದೇ ವೈದ್ಯರು ಅಲ್ಲಿಯೂ ಸಿಕ್ಕಿದರು .ಅವರೂ ಸಂದರ್ಶನ ಕ್ಕೆ
ಬಂದವರು .ಎಂ ಡಿ ಅದವರು .ನನ್ನೊಡನೆ ಯಾಕೆ ಮುಚ್ಚಿಟ್ಟರು ತಿಳಿಯ ಲಿಲ್ಲ .ನನಗೆ ಕೆಲಸ
ಸಿಕ್ಕಿತು ಅನ್ನಿ .ಇದು 1983 ರ ಕತೆ.ನನ್ನ ಸಂಬಳ 1100 ರೂಪಾಯಿ ಮತ್ತು ಉಚಿತ ವಸತಿ .
ಅಶ್ವಿನಿ ಆಸ್ಪತ್ರೆ ಟ್ರಸ್ಟ್ ನಡೆಸುತ್ತಿದ್ದ ಸಂಸ್ಥೆ .ಮಡಿಕೇರಿ ಮೈಸೂರ್ ರೋಡ್ ನಲ್ಲಿ ಬಸ್ ಸ್ಟಾಂಡ್ ನಿಂದ ಒಂದೂವರೆ ಕಿಲೋಮೀಟರು ದೂರ ಎಡ ಪಾರ್ಶ್ವದಲ್ಲಿ ಶಾಂತವಾದ ಪ್ರದೇಶದಲ್ಲಿ ಇದೆ .ಪೂರ್ವದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೊ ,ಅದಕ್ಕೆ ತಾಗಿ ರಾವು ಬಹದ್ದೂರ್ ಬೋಪಯ್ಯ ಅವರ ಮನೆ ,ಇನ್ನೂ ಮುಂದೆ ಹೋದರೆ ಸುದರ್ಶನ ಸರ್ಕಲ್ .ಆಸ್ಪತ್ರೆಯ ಪಶ್ಚಿಮಕ್ಕೆ ತಾಗಿ ಮಡಿಕೇರಿಯ ಪ್ರಸಿದ್ದ ಸಿ ವಿ ಎಸ್ ಸಹೋದರರ ಪೈಕಿ ಒಬ್ಬರಾದ ಸಿ ವಿ ಶಂಕರ್ ಅವರ ಮನೆ ,ಮುಂದೆ ಕಣಿವೆ ,ನೈರುತ್ಯ ದಲ್ಲಿ ಸ್ವಲ್ಪ ಮುಂದೆ ಹೋದರೆ ಈಸ್ಟ್ ಎಂಡ್ ಹೊಟೇಲ್ .(ಇಲ್ಲಿಯ ಮಸಾಲೆ ದೋಸೆ ಬಹಳ ಪ್ರಸಿದ್ದ ,ಈಗಲೂ ಬರೆಯುತ್ತಿರಬೇಕಾದರೆ ಬಾಯಲ್ಲಿ ನೀರು ಬರುತ್ತದೆ .)ದಕ್ಷಿಣಕ್ಕೆ ಮಂಗಳೂರು ಮೈಸೂರು ಹೆದ್ದಾರಿ .
ಆಸ್ಪತ್ರೆಯಲ್ಲಿ ಮಹಾರಾಷ್ಟ್ರದಿಂದ ಬಂದ ಕೇಲ್ಕರ್ ದಂಪತಿ ಗಳು ವೈದ್ಯರಾಗಿ ಇದ್ದರು.ಡಾ ಕೇಲ್ಕರ್ ಪಿಸಿಶಿಯನ್ ಮತ್ತು ಮುಖ್ಯ ವೈದ್ಯಾಧಿಕಾರಿ ,ಅವರ ಪತ್ನಿ ಸರ್ಜನ್ .ಇನ್ನು ಪ್ರಸೂತಿ ವಿಭಾಗ ಡಾ ಶಾಂತಾ ಎಂಬುವರು ನೋಡಿ ಕೊಳ್ಳುತ್ತಿದ್ದರು .ಇನ್ನೊಬ್ಬರು ಚೆನ್ನಬಸಪ್ಪ ಎಂಬ ಹಿರಿಯ ವೈದ್ಯರು ಇದ್ದರು .ಇನ್ನೊಬ್ಬ ಹಿರಿಯರು ಅರಿವಕೆ ಕೊಡಲು ಬರುತ್ತಿದ್ದರು .ಹೆಸರು ಮರೆತು ಹೋಗಿದೆ . ಡಾ ರಮೇಶ್ ಬೋಪಯ್ಯ ಎಂಬ ಮಕ್ಕಳ ತಜ್ನರು ಗೌರವ ವೈದ್ಯರಾಗಿ ಬರುತ್ತಿದ್ದರು .ಕೇಲ್ಕರ್ ದಂಪತಿ ಕೆಲವು ತಿಂಗಳ ಹಿಂದೆ ಬಂದಿದ್ದರು.ಅವರ ವಸತಿ ಊರ ಹೊರಗೆ ಇತ್ತು .
ಆಸ್ಪತ್ರೆಯ ಎದುರು ಗಡೆ ಒಂದು ಪುಟ್ಟ ದೇವಾಲಯ ,ಅಶ್ವಿನಿ ದೇವತೆಯದ್ದು ಇರಬೇಕು .ಇಲ್ಲಿ ಪೂಜೆಗೆ ಬರುತ್ತಿದ್ದ ಅಶ್ವಿನಿ ಭಟ್ಟರೆಂದೇ ಕರೆಯುತ್ತಿದ್ದರು .ಅದಕ್ಕೆ ಹೊಂದಿ ಕೊಂಡು ಪುಟ್ಟ ಕಾಂಟೀನ್ .ನಾರಾಯಣ ಭಟ್ ದಂಪತಿಗಳು ನಡೆಸುತ್ತಿದ್ದರು .ಅದಕ್ಕೂ ಮೊದಲು ಪ್ರಸಿದ್ದ ಗುಂಡು ಕುಟ್ಟಿ ಮಂಜುನಾಥಯ್ಯ ಅವರಲ್ಲಿ ಕೆಲಸ ಮಾಡುತ್ತಿದ್ದರು.ನನಗೆ ಒಂದು ವರ್ಷ ಪ್ರೀತಿ ಯಿಂದ ಅನ್ನ ಇಟ್ಟವರು.ನಾನು ಮಡಿಕೇರಿ ಬಿಟ್ಟ ಮೇಲೂ ನನ್ನೊಡನೆ ಸಂಪರ್ಕ ಇಟ್ಟುಕೊಡಿದ್ದರು ..ಅಶ್ವಿನಿ ಬಿಟ್ಟ ಮೇಲೆ ಒಂದು ಮೆಸ್ ನಡೆಸಿ ಜೀವನ ಸಾಗಿಸುತ್ತಿದ್ದರು .ಮೆಸ್ಸ್ ಆರಂಭ ಮಾಡಲು ನನ್ನಿಂದ ಹಣಕಾಸು ನೆರವು ಕೇಳಿ ಬಂದಿದ್ದರು .ದುರದೃಷ್ಟವಶಾತ್ ನನ್ನ ಬಳಿ ಆಗ ಸಾಕಷ್ಟು ದುಡ್ಡು ಇಲ್ಲದ ಕಾರಣ ಸಹಾಯ ಮಾಡಲು ಆಗಲಿಲ್ಲ ಎಂಬ ವ್ಯಥೆ ಇದೆ
ಆಸ್ಪತ್ರೆಯ ಆಡಳಿತ ನಡೆಸುತ್ತಿದ್ದುದು ಟ್ರಸ್ಟ್ ಎಂದು ಹೇಳಿದನಷ್ಟೆ .ಅದರ ಮ್ಯಾನೇಜಿಂಗ್ ಟ್ರಸ್ಟಿ ಆಗಿ ಶ್ರೀ ಬಿ ಜಿ ವಸಂತ್ ಇದ್ದರು .ಇವರು ಕತೆ ಗಾರ್ತಿ ಕೊಡಗಿನ ಗೌರಮ್ಮನ ಪುತ್ರ .ಮಡಿಕೇರಿಯಲ್ಲಿ ಆಟೋ ಸರ್ವಿಸ್ ಎಂಬ ವಾಹನ ದುರಸ್ತಿ ಕಾರ್ಯಾಗಾರ ನಡೆಸುತ್ತಿದ್ದರು ,ಎಸ್ಟೇಟ್ ಇತ್ತು .ಮುಂದೆ ಮಾರುತಿ ಏಜನ್ಸಿ ಸಿಕ್ಕಿರ ಬೇಕು .ಅವರನ್ನು ಬೇಬಿ ಸ್ವಾಮಿ ಎಂದು ಕರೆಯುತ್ತಿದ್ದರು .ಇನ್ನೊಬ್ಬರು ಟರ್ಸ್ಟಿ ಹೆಬ್ಬಾರ್ ಎಂಬವರು ಇದ್ದರು ,ವಕೀಲರು .ಅವರ ಮಗಳು ಸೀತಾ ಬಾಲ್ಯದಲ್ಲಿಯೇ ಒಳ್ಳೆಯ ಡ್ಯಾನ್ಸರ್ .ಮುಂದೆ ಗಾಯಕ ಶಶಿಧರ್ ಕೋಟೆಯವರನ್ನು ಮದುವೆಯಾಗಿ ಸೀತಾ ಕೋಟೆ ಆದರು .ಟಿ ವಿ ಕಲಾವಿದೆ .ಆಸ್ಪತ್ರೆಯ ಆಫೀಸ್ ನಲ್ಲಿ ಪೂವಯ್ಯ ಮ್ಯಾನೇಜರ್ ಆಗಿದ್ದು ಅವರಿಗೆ ನಾರಾಯಣ ಎಂಬ ಅಸಿಸ್ಟೆಂಟ್ ಇದ್ದರು .ಲ್ಯಾಬೋರೇಟರಿ ಯಲ್ಲಿ ಸೋಮಯ್ಯ ಎಂಬ ಮಾಜಿ ಸೈನಿಕ ಮುಖ್ಯಸ್ಥ .ಲ್ಯಾಬೋರೇಟರಿ ಕಮ್ ಬ್ಲಡ್ ಬ್ಯಾಂಕ್ .ಆಗಿನ್ನೂ ಏಡ್ಸ್ ಕಾಯಿಲೆ ಮುಂಚೂಣಿಗೆ ಬರದಿದ್ದ ಕಾರಣ ನಾವೇ ರಕ್ತ ವರ್ಗಿಕರಣ ಮಾಡಿ ರಕ್ತ ಸಂಗ್ರಹಿಸಿ ಕೊಡುತ್ತಿದ್ದೆವು .
ನಾನು ಸೇರಿ ಇನ್ನೇನು ಒಂದು ತಿಂಗಳು ಆಗಿಲ್ಲ ,ಮುಖ್ಯ ವೈದ್ಯಾಧಿಕಾರಿ ಮತ್ತು ಹಳೆಯ ಇಬ್ಬರು ವೈದ್ಯರ ನಡುವೆ ಏನೋ ಭಿನ್ನಾಭಿಪ್ರಾಯ ಬಂದು ,ಆ ಇಬ್ಬರು ಹಿರಿಯರನ್ನು ವಜಾ ಮಾಡಿದರು .ಇಲ್ಲಿ ಆಡಳಿತ ಮಂಡಳಿ ಮುಖ್ಯ ವೈದ್ಯಾಧಿಕಾರಿ ಯ ಪರ ವಹಿಸಿದ್ದು ಮೇಲ್ನೋಟಕ್ಕೆ ಎದ್ದು ಕಾಣುತ್ತಿತ್ತು .ನನಗೆ ಇದು ಸರಿ ಕಾಣಲಿಲ್ಲ .ಮುಂದೆ ನನಗೂ ಇದೇ ಉಪಚಾರ ಕಾದಿದೆ ಎಂಬ ಅರಿವು ಬಂದಿತು .ಆದರೂ ತಮ್ಮ ನಡೆ ಸರಿಯಲ್ಲ ಎಂಬುದು ಅವರಿಗೆ ತಿಳಿದಿತ್ತು .ಅಲ್ಲಿಂದ ನನಗೆ ಹೆಚ್ಚು ಉಪಚಾರ ಮತ್ತು ಗಮನ ಸಿಕ್ಕಿತು .
ಆಸ್ಪತ್ರೆಗೆ ಮೈಸೂರು ಕಡೆ ಬೈಲಕುಪ್ಪೆಯಿಂದ ಹಿಡಿದು ಕುಶಾಲ ನಗರ ,ಶುಂಠಿ ಕೊಪ್ಪ ,ದಕ್ಷಿಣಕ್ಕೆ ಭಾಗಮಂಡಲ ,ವಿರಾಜಪೇಟೆ ,ಉತ್ತರಕ್ಕೆ ಸೋಮವಾರ ಪೇಟೆ ಮತ್ತು ಪಶ್ಚಿಮದಲ್ಲಿ ಸಂಪಾಜೆ ವರೆಗೆ ರೋಗಿಗಳು ಬರುತ್ತಿದ್ದರು .ಬೈಲಕುಪ್ಪೆಯಿಂದ ಟಿಬೆಟಿಯನ್ ಜನರು ಬರುತ್ತಿದ್ದು ಅಜಾನುಬಾಹುಗಳಾದ ಅವರಲ್ಲಿ ಕ್ಷಯ ರೋಗ ಮತ್ತು ಥೈರಾಯಿಡ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿತ್ತು .ಹಲವು ಪ್ರತಿಷ್ಠಿತ ಕಾಫಿ ತೋಟಗಳ ಕೆಲಸ ಗಾರರಿಗೆ ಅಧಿಕೃತ ಆಸ್ಪತ್ರೆ ಆಗಿತ್ತು .ಕೊಡವ ,ತುಳು ,ತಮಿಳು ಮತ್ತು ಮಲಯಾಳ ಭಾಷೆಯ ರೋಗಿಗಳು ಬರುತ್ತಿದ್ದರು .ಪೊಲ್ಲ್ಯಾಕ ಜಂಡು ಚಮಚ ಬೈಟ್ ಜಂಡು ಚಮಚ (ಬೆಳಿಗ್ಗೆ ಎರಡು ಚಮಚ ಸಂಜೆ ಎರಡು ಚಮಚ ),ಚಾಯತ್ತುಳ್ಳಿ ರಾ (ಚೆನ್ನಾಗಿ ಇದ್ದೀರಾ )ಇತ್ಯಾದಿ ಕೊಡವ ಶಬ್ದಗಳನ್ನು ಕಲಿತೆನು .ಇನ್ನು ಗೌಡ ಜನಾಂಗದವರದು ಅರೆ ಭಾಷೆ .
ನನ್ನ
ಕೆಲಸ ಸಾಮಾನ್ಯ ಹೊರ ನಿಭಾಯಿಸುವುದು ,ಸಾಮಾನ್ಯ ಹೆರಿಗೆ ಮಾಡಿಸುವುದು ,ಮತ್ತು
ಒಳರೋಗಿಗಳ ದೇಖೇ ರೇಖೆ ,ಮುಖ್ಯ ವೈದ್ಯಾಧಿಕಾರಿಗಳೊಡನೆ ರೌಂಡ್ಸ್ ಇತ್ಯಾದಿ .ಆಗ ಇನ್ನೂ
ಗರ್ಭಿಣಿಯರು ಪ್ರಸವ ಪೂರ್ವ ತಪಾಸಣೆ ಪ್ರವೃತ್ತಿ ಇರಲಿಲ್ಲ .ಸ್ಕ್ಯಾನ್ ಇರಲಿಲ್ಲ
.ಹೆರಿಗೆ ನೋವು ಬಂದ ಮೇಲೆ ನಮ್ಮ ಮೇಲೆ ಆಸ್ಪತ್ರೆಗೆ ಬರುವರು .ಕೆಲವರಿಗೆ ರಕ್ತಸ್ರಾವ
ಇರುವುದು .ಆದರೂ ಆಗ ಹೇಗೆ ಪರಿಸ್ಥಿತಿ ನಿಭಾಯಿಸಿದೆವು ಆಶ್ಚರ್ಯ ಆಗುವುದು .ಒಂದು ನಾನು
ಡೆಲಿವರಿ ಮಾಡಿಸಿದ ತಮಿಳು ಮಗುವಿಗೆ ನಾನೇ ರಜನೀಕಾಂತ್ ಎಂದು ನಾಮಕರಣ ಮಾಡಿದ್ದೆನು
.ಒಂದು ರಾತ್ರಿ ರಕ್ತಸ್ರಾವ ದಿಂದ ಬಳಲುತ್ತಿದ್ದ ಮಹಿಳೆಗೆ ರಾತ್ರಿಯಿಡೀ ರಕ್ತ ಪೂರಣ
ಮಾಡಿ ಜೀವ ಉಳಿಸಿದ್ದ ನೆನಪು ಇದೆ .ಆಗ ನಾವು ರಿಸ್ಕ್ ತೆಗೆದು ಕೊಳ್ಳುತ್ತಿದ್ದೆವು
.ರೋಗಿಗಳಿಗೆ ನಂಬಿಕೆ ಇತ್ತು . (ಮುಂದುವರಿಯುವುದು ).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ