ವೈದ್ಯ ಗುರು ಭೀಷ್ಮಾಚಾರ್ಯ ಡಾ ಸಿ ಆರ್ ಬಲ್ಲಾಳ್
ನಮ್ಮ ನಿಮ್ಮೆಲ್ಲರ ಗುರು ಶಸ್ತ್ರ ಚಿಕಿತ್ಸಾ ತಜ್ನ ಮತ್ತು ಪ್ರಾಧ್ಯಾಪಕರ ಅಧ್ಯಾಪಕ ಡಾ ಸಿ ಆರ್ ಬಲ್ಲಾಳ್ ಅವರಿಗೆ ಅಖಿಲ ಭಾರತ ಶಸ್ತ್ರ ಚಿಕಿತ್ಸಾತಜ್ನರ ಸಂಘ ಈ ವರ್ಷ ತನ್ನ ಸಮಾವೇಶದಲ್ಲಿ ಜೀವ ಮಾನದ ಸಾಧನೆಗಾಗಿ ಕೊಡ ಮಾಡುವ ಪ್ರಶಸ್ತಿಗೆ ಆಯ್ಕೆ ಮಾಡಿದೆ .
ಅವಿಭಜಿತ ದಕ್ಷಿಣ ಕನ್ನಡ ,ಕಾಸರಗೋಡು ಮತ್ತು ಸುತ್ತ ಮುತ್ತಲಿನ ಪ್ರದೇಶದ ರೋಗಿಗಳು ಬಹಳ ಹಿಂದೆ ತಮ್ಮ ಶರೀರದ ಲ್ಲಿ ಶಸ್ತ್ರ ಚಿಕಿತ್ಸೆಯ ಗಾಯ ಇದ್ದರೆ ಇದು ಡಾ ವೆಂಕಟ ರಾಯರು ಕಂಕನಾಡಿ ಆಸ್ಪತ್ರೆಯಲ್ಲಿ ಮಾಡಿದ ಆಪರೇಷನ್ ಎಂದು ದೈನ್ಯತಾ ಭಾವದಿಂದ ಹೇಳುತ್ತಿದ್ದರು .ಅವರ ತರುವಾಯ ಬಹುಪಾಲು ರೋಗಿಗಳಿಗೆ ಶಸ್ತ್ರ ಕ್ರಿಯೆ ಮಾಡಿ (ಹಲವು ಬಾರಿ ಜೀವ ಉಳಿಸಿದ )ಗುಣ ಮುಖರಾಗಿ ಮಾಡಿದ ವೈದ್ಯರು ಡಾ ಸಿ ಆರ್ ಬಲ್ಲಾಳ್ .ಅದು ಮಾತ್ರ ಅಲ್ಲ ಅವರು ವಿದ್ಯಾರ್ಥಿ ಮೆಚ್ಚಿದ ಶಿಕ್ಷಕರು .ಕೆ ಎಂ ಸಿ ಮಂಗಳೂರು ,ನಂತರ ಕ್ಷೇಮಾ ದೇರಳಕಟ್ಟೆ ಇಲ್ಲಿ ಪ್ರಾಧ್ಯಾಪಕ ವೃತ್ತಿ .ಇವರ ತರಗತಿಗಳಿಗೆ ವಿದ್ಯಾರ್ಥಿಗಳು ಸಕ್ಕರೆಗೆ ಮುಟ್ಟುವ ಇರುವೆಗಳಂತೆ ಮುತ್ತುವರು .ಜಗತ್ತಿನ ಎಲ್ಲೆಡೆ ಇವರ ವಿದ್ಯಾರ್ಥಿಗಳು ಇರುವರು .ಕ್ಷೇಮಾ ದಲ್ಲಿ ಇವರ ಕಿರಿಯ ಸಹೋದ್ಯೋಗಿ ಆಗುವ ಸದವ ಕಾಶ ನನಗೆ ಬಂದಿತ್ತು.ಅವರು ಕ್ಲಿನಿಕಲ್ ಮೀಟಿಂಗ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅನುಭವ ಮತ್ತು ಜ್ನಾನ ನಮ್ಮೊಡನೆ ಹಂಚಿ ಕೊಳ್ಳುತ್ತಿದ್ದರು. ಸ್ಪಷ್ಟ ಮತ್ತು ತೂಕದ ಮಾತು. ಪಟ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯ .
ಡಾ ಬಲ್ಲಾಳ್ ಮಂಗಳೂರು ಸಂಗೀತ ಪರಿಷತ್ತಿನ ಬೆನ್ನು ಮೂಳೆ.ಅವರ ಸಹಾಯಕ್ಕೆ ಯುವ ಪಡೆ ಇದೆ .ನೀವು ಪರಿಷತ್ತಿನ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ,ಅಲ್ಲಿ ಇವರು ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಯುವಕರನ್ನೂ ನಾಚಿಸುವ ಉತ್ಸಾಹದಲ್ಲಿ ಅತಿಥಿಗಳನ್ನು ಸ್ವಾಗತಿಸುವುದರಿಂದ ಹಿಡಿದು ,ಉಟೋಪಚಾರ ,ಕಾರ್ಯಕ್ರಮ ನಿರ್ವಹಣೆ ,ಸ್ವಾಗತ ಇಲ್ಲವೇ ಧನ್ಯವಾದ ಭಾಷಣ ಇತ್ಯಾದಿಗಳಲ್ಲಿ ತೊಡಗಿಸಿ ಕೊಂಡು ಪಾದರಸದಂತೆ ಓಡಾಡುವುದು ಕಾಣಬಹುದು.
ಸಿ ಆರ್ ಬಲ್ಲಾಳ್ ಸಾರ್ ಹೀಗೆಯೇ ಆರೋಗ್ಯ ಮತ್ತು ಸಂತೋಷದಿಂದ ಇದ್ದು ನಮ್ಮಂತವರಿಗೆ ಮಾರ್ಗ ದರ್ಶನ ಮಾಡುತ್ತಲಿರಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ