ಪುತ್ತೂರಿಗೆ ಲೈಟ್ ಎಂಜಿನ್ ಆಗಿ ಬಂದ ನಾನು ಪತ್ನಿ ಪುತ್ರರೆಂಬ ಬೋಗಿಗಳು ಸೇರಿ ಪೂರ್ಣ ಪ್ರಮಾಣದ ಟ್ರೈನ್ ಆಗಿ ಮಂಗಳೂರು ರೈಲ್ವೆ ಆರೋಗ್ಯ ಕೇಂದ್ರಕ್ಕೆ ಬಂದೆ .ಮಂಗಳೂರು ಅಥವಾ ಮಂಗಳಾಪುರಂ ಪಾಲಕ್ಕಾಡ್ ವಿಭಾಗಕ್ಕೆ ಸೇರಿದ್ದು ಮೈಸೂರು ವಿಭಾಗಕ್ಕೆ ವಿದಾಯ ಹೇಳಿದೆನು .ಕಂಕನಾಡಿ ಯಿಂದ (ಈಗಿನ ಮಂಗಳೂರು ಜಂಕ್ಷನ್ )ಮಂಗಳೂರು ಸೆಂಟ್ರಲ್ ,ದಕ್ಷಿಣಕ್ಕೆ ತ್ರಿಕಾರಿಪುರ ,ಉತ್ತರಕ್ಕೆ ನವಮಂಗಳೂರು ಬಂದರು ವರೆಗೆ ನನ್ನ ಸುಪರ್ದಿ .ದೊಡ್ಡ ಸಾಮ್ರಾಜ್ಯ .ಪಾಲಕ್ಕಾಡ್ ವಿಭಾಗ ಒಳ್ಳೆಯ ಆಡಳಿತ ,ಸ್ವಚ್ಛತೆ ಗೆ ಹೆಸರು ವಾಸಿ .ಇಲ್ಲಿಯ ನೌಕರರು ವಿದ್ಯಾವಂತರು ಮತ್ತು ಒಳ್ಳೆಯದನ್ನು ಗುರುತಿಸುವವರು .ನನ್ನ ಇಲ್ಲಿಯ ಅವಧಿ ಸಂತೋಷ ಕರ ಆಗಿತ್ತು .ಅರೋಗ್ಯ ಕೇಂದ್ರದಲ್ಲಿ ಮ್ಯಾಥ್ಯು ಎಂಬವರು ಫಾರ್ಮಾಸಿಸ್ಟ್ ಆಗಿದ್ದು ಅವರ ನಂತರ ಮೊದಲು ನನ್ನ ಜತೆಗೆ ಇದ್ದ ವಿಜಯನ್ ಬಂದರು .ನನ್ನ ವಸತಿ ಗೃಹ ಪ್ರಶಾಂತ ವಾತಾವರಣ ದಲ್ಲಿ ಇದ್ದು ,ಹಂಪನಕಟ್ಟೆ ,ಮಾರುಕಟ್ಟೆಗೆ ಸಮೀಪ ಇತ್ತು .ಮಂಗಳೂರಿಗೆ ಬರುವಾಗಲೇ ನನಗೆ ಪದೋನ್ನತಿ ಆಗಿ ನಾನು ಡಿವಿಶನಲ್ ಮೆಡಿಕಲ್ ಆಫೀಸರ್ ಆಗಿದ್ದೆ ,ಮಂಗಳೂರು ರೈಲ್ವೆ ಯಲ್ಲಿ ನಾನೇ ಅತ್ಯಂತ ಹಿರಿಯ .ಇಂಜಿನಿಯರಿಂಗ್ ವಿಭಾಗದಲ್ಲಿ ಅನಿಲ್ ಕುಮಾರ್ ಅಸ್ಸಿಸ್ಟ್ನಟ್ ಇಂಜಿನಿಯರ್ ಆಗಿದ್ದು ಅವರ ಕಚೇರಿ ಮತ್ತು ಮನೆ ನನ್ನ ನಿವಾಸದ ಪಕ್ಕ ಇತ್ತು .
ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಶ್ರೀ ಕಿಟ್ಟಣ್ಣ ಶೆಟ್ಟಿ ಎಂಬ ಸಜ್ಜನರು ಸ್ಟೇಷನ್ ಸುಪರಿಂಟೆಂಡೆಂಟ್ ಆಗಿದ್ದು ಜನಾನುರಾಗಿ ಆಗಿದ್ದರು .ಪರ್ಮನೆಂಟ್ ವೆ ಇನ್ಸ್ಪೆಕ್ಟರ್ ಆಗಿ ಯೂ ಓರ್ವ ಶೆಟ್ಟರು ,ವರ್ಕ್ಸ್ ಇನ್ಸ್ಪೆಕ್ಟರ್ ಆಗಿ ಕಮ್ಮಾರನ್ ,ವಿದ್ಯುತ್ ವಿಭಾಗದಲ್ಲಿ ಶಶಿಧರನ್ (ಮುಂದೆ ಚೆನ್ನೈ ನಲ್ಲಿ ನನಗೆ ಜತೆ ಆಗುವವರು ),ಮೆಕ್ಯಾನಿಕಲ್ ವಿಭಾಗದಲ್ಲಿ ಓರ್ವ ಕ್ರಿಶ್ಚಿಯನ್ ಅಧಿಕಾರಿ (ಹೆಸರು ಜ್ಞಾಪಕ ಬರುತ್ತಿಲ್ಲ ,ಪಾದರಸದಂತೆ ಚುರುಕು )ಇದ್ದು ಎಲ್ಲರೂ ಒಂದು ಕುಟುಂಬದಂತೆ ಕೆಲಸ ಮಾಡುತ್ತಿದ್ದರು .
ಊಟಿ ಮತ್ತು ಕೂನೂರ್ ಪಾಲಕ್ಕಾಡ್ ವಿಭಾಗಕ್ಕೆ ಸೇರಿದ್ದು ನಮ್ಮ ಕುಟುಂಬ ಒಮ್ಮೆ ಅಲ್ಲಿಯ ಪ್ರವಾಸ ಕೈಕೊಂಡಿತು .ಕೂನೂರ್ ನಲ್ಲಿ ಎತ್ತರದ ಪ್ರದೇಶದಲ್ಲಿ ರೈಲ್ವೆ ವಿಶ್ರಾಂತಿ ಗೃಹ ಇದೆ . ಮೆಟ್ಟು ಪಾಳಯಂ ನಿಂದ ಕೂನೂರ್ ವರೆಗಿನ ತೆರೆದ ರೈಲು ಪ್ರಯಾಣ ವಿಶೇಷ ಅನುಭವ .ಅಲ್ಲಲ್ಲಿ ನಿಂತು ಓದುವ ಬಂಡಿ .
ಇದರ ನಡುವೆ ಸಾಯಂಕಾಲ ನಾನು ಭಾರತೀಯ ವಿದ್ಯಾ ಭವನ ಮ್ಯಾನೇಜ್ಮೆಂಟ್ ಕಾಲೇಜು ಸೇರಿ ಒಂದು ವರುಷದ ಡಿಪ್ಲೋಮ ಇನ್ ಪರ್ಸನಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿ ಪರೀಕ್ಷೆ ಉತ್ತೀರ್ಣ ನಾದೆ .ಬಾವಟೆ ಗುಡ್ಡೆಯಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯ ದಿಂದ ಪುಸ್ತಕ ಎರವಲು ತಂದು ಓದುತ್ತಿದ್ದೆನು .ಲೇಡಿ ಗೋಷನ್ ಆಸ್ಪತ್ರೆ ಬಳಿ ಪಾಯ್ಸ್ ಟ್ರೇಡರ್ಸ್ ಎಂಬ ವೈನ್ ಸ್ಟೋರ್ ಇದೆ .ಅಲ್ಲಿ ಒಳ್ಳೆಯ ಚಹಾ ಪುಡಿ ಸಿಗುತ್ತಿದ್ದು ,ಅದು ಬರುವ ದಿನ ಮೊದಲೇ ತಿಳಿಸುತ್ತಿದ್ದರು .ಆದಿನ ಸರತಿ ಸಾಲಿನಲ್ಲಿ ನಿಂತು ಕೊಂಡು ಬರುತ್ತಿದ್ದ ನೆನಪು .ಮಂಗಳೂರಿನಲ್ಲಿ ಬೇಸಗೆಯಲ್ಲಿ ಹಾಲು ಸರಿಯಾಗಿ ಸಿಗುತ್ತಿರಲಿಲ್ಲ .ನೆಂಟರು ಬಂದಾಗ ಕಷ್ಟ ಆಗುತ್ತಿತ್ತು .ರೈಲ್ವೆ ನಿಲ್ದಾಣ ಕ್ಯಾಂಟೀನ್ ನಡೆಸುತ್ತಿದ್ದ ಬಾಳಿಗಾ ಎಂಬವರು ನನ್ನ ರಕ್ಷಣೆಗೆ ಬರುತ್ತಿದ್ದರು .ಮಂಗಳೂರಿನಲ್ಲಿ ಆಗ ಕ್ರೀಡಾ ಪಟು ಮತ್ತು ಮತ್ಸ್ಯವೋದ್ಯಮಿ ಲೋಕನಾಥ ಬೋಳಾರ ಕಾರ್ಮಿಕ ಕಲ್ಯಾಣ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದು ನನಗೆ ಒಳ್ಳೆಯ ಗೆಳೆಯರಾಗಿದ್ದರು .(ಮೊನ್ನೆ ಮೊನ್ನೆ ತೀರಿ ಕೊಂಡರು ).
ನನ್ನ ಯಾವತ್ತಿನ ಕೆಲಸಗಳ ಜತೆ ನಾನು ನೂತನ ಕಾರ್ಯಕ್ರಮಗಳನ್ನು ಆರಂಭಿಸಿದೆನು .ಆಗ ತಾನೇ ಆರಂಭವಾಗಿದ್ದ ಏ ಬಿ ಶೆಟ್ಟಿ ಡೆಂಟಲ್ ಕಾಲೇಜು ನಲ್ಲಿ ನನ್ನ ಹಿರಿಯ ಸ್ನೇಹಿತ ಡಾ ರಾಜೇಂದ್ರ ಪ್ರಸಾದ್ ಇದ್ದರು ,ಅವರ ಸಹಾಯದಿಂದ ಡೆಂಟಲ್ ಕ್ಯಾಂಪ್ ನಡೆಸಿದೆವು .ಇದು ಬಹಳ ಜನಪ್ರಿಯ ಆಗಿ ಮೇಲಧಿಕಾರಿಗಳಿಂದ ನನಗೆ ಪ್ರಶಂಷಾ ಪತ್ರ ಬಂದಿತು .ಇದರ ಜತೆ ಮಂಗಳೂರಿನ ಪ್ರಸಿದ್ಧ ವೈದ್ಯರನ್ನು ಕರೆಯಿಸಿ ಕಾಲೋನಿ ನಿವಾಸಿಗಳಿಗೆ ಅರೋಗ್ಯ ವಿಚಾರ ಮಾಹಿತಿ ಭಾಷಣ ಪ್ರಾತ್ಯಕ್ಷಿಕೆ ನಡೆಸಿದೆವು .ಕೇಂದ್ರ ಸರ್ಕಾರದ ವಾರ್ತ ಮತ್ತು ಪ್ರಸಾರ ಇಲಾಖೆಯವರಿಂದ ಅರೋಗ್ಯ ಬಗ್ಗೆ ಚಲಚಿತ್ರ ಪ್ರದಶನ ನಡೆಸಿದೆವು .ಆಗಿನ್ನೂ ಟಿ ವಿ ಎಲ್ಲರ ಮನೆಗೆ ಬಂದಿದ್ದಿಲ್ಲ ,ನಮ್ಮ ಸಿನೆಮಾ ಶೋ ಜನಪ್ರಿಯ ಆಯಿತು .ಮಂಗಳೂರಿನಲ್ಲಿ ಫೈಲೇರಿಯ ಹಾವಳಿ ಇದೆ ತಾನೇ .ಅದರ ಅಧ್ಯಯನ ಮಾಡಲು ಕಾಲೋನಿ ವಾಸಿಗಳ ರಕ್ತ ಸ್ಯಾಂಪಲ್ ರಾತ್ರಿ ಹೊತ್ತು ಸಂಗ್ರಹಿಸಿ ಮಂಗಳೂರು ಕೆ ಎಂ ಸಿ ಯ ಮೈಕ್ರೋ ಬಯಾಲಜಿ ವಿಭಾಗದಿಂದ ಪರೀಕ್ಷೆ ಮಾಡಿಸಿದೆವು .ಇದರಿಂದ ರೋಗದ ವ್ಯಾಪಕತೆ ಯ ಅರಿವು ಆಯಿತು .ಸಾರ್ವತ್ರಿಕ ವಾಗಿ ಫೈಲೇರಿಯಾ ಔಷಧಿ ವಿತರಿಸಿದೆವು ಮತ್ತು ಸೊಳ್ಳೆ ನಿರೋಧಕ ಕ್ರಮ ಅಧಿಕ ಉತ್ಸಾಹದಿಂದ ನಡೆಯಿತು .ಮೇಲ್ಕಾಣಿಸಿದ ಕೆಲಸಗಳು ನನ್ನ ಸಾಮಾನ್ಯ ಕಾರ್ಯ ವ್ಯಾಪ್ತಿ ಪ್ರದೇಶದಿಂದ ಹೊರಗೆ ಆದರೂ ನಮ್ಮ ಹುದ್ದಗೆ ಹೆಚ್ಚು ಅರ್ಥ ಕೊಡುವ ಶಕ್ತಿ ನಮ್ಮ ಕೈಯಲ್ಲಿ ಇದೆ ಎಂದು ತೋರಿಸಿ ಕೊಟ್ಟ ಸಂತೋಷ .
ಮಂಗಳೂರಿನಲ್ಲಿ ನನ್ನ ಮೊದಲ ಟಿ ವಿ ಕಂತಿನಲ್ಲಿ ಕೊಂಡದ್ದು . ವಿಡಿಯೋಕಾನ್ ಕಲರ್ ಟಿ ವಿ .ಆಗ ಚಿತ್ರಹಾರ್ ,ರಾಮಾಯಣ ,ಒಲಿಯುಮ್ ಒಲಿಯುಮ್ .ಸುರಭಿ ಮತ್ತು ವಾಗ್ಲೆ ಕಿ ದುನಿಯಾ ಜನಪ್ರಿಯ .ಈಗಿನ ಖಾಸಗಿ ನ್ಯೂಸ್ ಚಾನೆಲ್ ಗಳ ಹಾವಳಿ ಇರಲಿಲ್ಲ .
ನಾನು ಮಂಗಳೂರಿನಲ್ಲಿ ಇರುವಾಗ ನಡೆದ ಪ್ರಮುಖ ಘಟನೆ ಕೊಂಕಣ್ ರೈಲ್ವೆ ಕಾಮಗಾರಿ ಉದ್ಘಾಟನೆ .ಈ ಕಾರ್ಯಕ್ರಮದಲ್ಲಿ ಆಧಿಕಾರಿಕವಾಗಿ ಪಾಲ್ಗೊಳ್ಳುವ ಸದವಕಾಶ ನನಗೆ ದೊರೆಯಿತು .೧೯೯೦ ಸೆಪ್ಟಂಬರ್ ೧೫ ಎಂದು ನೆನಪು. ಭಾರತದ ಪಶ್ಚಿಮ ಕರಾವಳಿಯ ಬಹು ದಿನಗಳ ಕನಸು
ನೆನಸಾಗುವ ಸುವರ್ಣ ಘಳಿಗೆ.ಕೊಂಕಣ ರೈಲ್ವೆ ಕಾಮಗಾರಿ ಆರಂಬಿಸುವ ಸಮಾರಂಭ ಉಡುಪಿಯ ಇಂದ್ರಾಳಿಯಲ್ಲಿ .
ನಾನು ಆಗ ಮಂಗಳೂರು ರೈಲ್ವೆ ವೈದ್ಯಾದಿಕಾರಿ..ರೈಲ್ವೆಯಲ್ಲಿ ಕನ್ನಡೇತರರೆ ಹೆಚ್ಚು.ಅದರಿಂದ ಆಹ್ವಾನಿತ ಅತಿಥಿಗಳ ಪರಿಚಯ ಅವರಿಗಿರಲಿಲ್ಲ
ಡಾ ವಿ ಎಸ ಆಚಾರ್ಯ ,ಶ್ರೀ ಬಿ ಎಂ ಇದಿನಬ್ಬ (ಆಗ M L A ಆಗಿದ್ದರು.),ಇತರರನ್ನು ಗುರುತಿಸಿ ಕುಳ್ಳಿರಿಸುವ ಕೆಲಸ ನನಗಾಯಿತು.
ಕರಾವಳಿಯ ಹೆಮ್ಮೆಯ ಪುತ್ರ ಜೋರ್ಜ್ ಫೆರ್ನಾಂಡಿಸ್ ಉದ್ಘಾಟಕರು. ಆಗ ಅರ್ಥ ಮಂತ್ರಿಯಾಗಿದ್ದಮಧು ದಂಡಾವತೆ ಯವರದ್ದು ಪೂರ್ಣ ಬೆಂಬಲ. ನನ್ನ ಪಕ್ಕ ಇದಿನಬ್ಬ ಇದ್ದರು. ಕಾರ್ಯಕ್ರಮ ಪಲಕಗಳು ಇಂಗ್ಲಿಶ್ ನಲ್ಲಿ ಇದ್ದುದು ಕಟ್ಟಾ ಕನ್ನಡ ಪ್ರೇಮಿಯಾದ ಅವರಿಗೆ ಅಸಮಾಧಾನ .ಅದನ್ನು ನನ್ನಲ್ಲಿ ಹೇಳಿದರು ಕೂಡಾ
ಫೆರ್ನಾಂಡಿಸ್ ಅಚ್ಚ ಕನ್ನಡದಲ್ಲಿ ಮಾತನಾಡಿದರು.ಅವರು ಹೇಳಿದ ಒಂದು ವಾಕ್ಯ ನನಗೆ ನೆನಪಿದೆ.
'ಈ ಮಹಾತ್ವಾಕಾಂಕ್ಷೆಯ ಕೆಲಸ ನಾನು ಇರಲಿ ಇಲ್ಲದಿರಲಿ ವೇಳಾಪಟ್ಟಿಯಂತೆ ನಡೆಯುತ್ತದೆ. ದೇಶಪ್ರೇಮಿ ಮತ್ತು ಸಮರ್ಥರು ಆದ ಈ ಶ್ರೀಧರನ್ ಅವರು ಇದರ ನೇತೃತ್ವ ವಹಿಸುತ್ತಾರೆ.ಆದುದರಿಂದ ಯಾವ ಸಂದೇಹವು ಬೇಡ.'ಕೇಂದ್ರ ಸಚಿವರು ಒಬ್ಬರು ಸೇವೆಯಲ್ಲಿ ಇರುವ ಅಧಿಕಾರಿಯನ್ನು ಬಹಿರಂಗವಾಗಿ ಪ್ರಶಂಸೆ ಮಾಡುವುದು ಅಪರೂಪ .
ಕಾರ್ಯಕ್ರಮದಲ್ಲಿ ಎಲ್ಲರ ಕಣ್ಮಣಿ ಈ ಶ್ರೀಧರನ್ ಉಪಸ್ಥಿತರಿದ್ದರು.ಅವರುನಮ್ಮ ದೇಶದ ಹೆಮ್ಮೆಯ ಆಸ್ತಿ. ತಾಂತ್ರಿಕ ಕೌತುಕ ಪಾ೦ಬನ್ ಸೇತುವೆ,ಹಾಸನ ಮಂಗಳೂರು ರೈಲ್ವೆ ಗಳ ರೂವಾರಿ.ಯಶಸ್ವಿಯಾಗಿ ಕೊಂಕಣ ರೈಲ್ವೆ ಕೆಲಸಮುಗಿಸಿದ ಅವರನ್ನು ದೆಹಲಿ ಮೆಟ್ರೋ ಕರೆಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ