ದಂತ ಕತೆ
ಕೆಲವು ವರ್ಷಗಳ ಹಿಂದೆ ದಂತ ವೈದ್ಯಕೀಯ ಸಂಘದ ಸಮಾರಂಭ ಕ್ಕೆ ನನ್ನನ್ನು ಅತಿಥಿಯಾಗಿ ಕರೆದಿದ್ದರು .ನಾನು ದಂತ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೆನಾದರೂ ಇಂತಹ ಸಭೆಯಲ್ಲಿ ಭಾಷಣ ಮಾಡಿದವನಲ್ಲ .ಪ್ರಥಮ ಚುಂಬದಲ್ಲಿ ದಂತ ಭಗ್ನ ವಾದರೇ ?ಆಮೇಲೆ ಹಾಗೆ ಆದರೂ ಹೋಗುವುದು ದಂತ ವೈದ್ಯರ ಸಭೆಗೇ ಅಲ್ಲವೇ ಎಂದು ಧೈರ್ಯದಿಂದ ಹೋದೆನು .
ದಂತ ವೈದ್ಯ ಶಾಸ್ತ್ರವೂ ಈಗ ಬಹಳ ಮುಂದುವರಿದಿದೆ .ಮಕ್ಕಳ ಹಲ್ಲು ಕಾಯಿಲೆ .ಹಲ್ಲಿನ ಸುತ್ತ ಮುತ್ತ (ನಿಧಿ ಸೇರಿ),ಹಲ್ಲಿನ ಕಾಯಿಲೆ ,ಅದರಲ್ಲೂ ಬೇರಿನ ರೋಗ ,ವಕ್ರದಂತ ನಿವಾರಣೆ ,ದಂತ ಭಗ್ನ ಸರಿಪಡಿಸುವಿಕೆ ,ದವಡೆ ಮತ್ತು ಹಲ್ಲಿನ ಶಸ್ತ್ರ ಚಿಕಿತ್ಸೆ ,ಬಾಯಿ ಕಾಯಿಲೆಗಳು ಇತ್ಯಾದಿ ಪ್ರತ್ಯೇಕ ಶಾಖೆಗಳು ಹುಟ್ಟಿವೆ ..ಇವರ ಕೃಪೆಯಿಂದ ಓರೆ ಹಲ್ಲಿನ ಕೋರೆ ದವಡೆಯ ನತದೃಷ್ಟರು ಐಶ್ವರ್ಯ ರೈ ಯಂತೆ ಆಗುವರು.ಮೂಕಂ ಕರೋತಿ ವಾಚಾಲಂ ಪಂಗು ಲಂಗೈತಿ ಗಿರಿ ಆದಂತೆ ಯತ್ ಕೃಪಾ
ಹಿಂದೆ ಅಜ್ಜ ಅಜ್ಜಿಯರು ಅಡಿಕೆ ಹೋಳು ,ಚಕ್ಕುಲಿ ಇತ್ಯಾದಿಗಳನ್ನು ಸವಿಯಲು ಕೆಳಗೆ ಕಾಣಿಸಿದ ಉಪಕರಣ ದಲ್ಲಿ ಪುಡಿ ಮಾಡಿ ತಿನ್ನ ಬೇಕಿತ್ತು ..ಈಗ ಅವರು ನೇರವಾಗಿ ಕಡಿದು ತಿನ್ನುವರು .ಇದರಿಂದ ಚಿಪ್ಸ್ ಚಕ್ಕುಲಿ ಬೆಲೆ ಏರಿವೆ .ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಆಣತಿಯಂತೆ ನಮಸ್ಕಾರ ಮಾಡಲು ಹಿರಿಯರನ್ನು ಹುಡುಕಿದರೆ ಎಲ್ಲರೂಕೃತಕ ದಂತ ಮತ್ತು ವರ್ಣಲೇಪಿತ ಕೇಶ ಅಲಂಕೃತರಾಗಿ ಎನಗಿಂತ ಎಲ್ಲರೂ ಎನಗಿಂತ ಕಿರಿಯರಯ್ಯಾ ಎಂದು ತೋರಿ ಗಲಿಬಿಲಿ ಆಗುವುದು
ನಮ್ಮಂತೆ ದಂತ ವೈದ್ಯರಿಗೆ ಅಕಾರಣ ವಾಚಾಳಿ ರೋಗಿಗಳ ಭಯ ಇಲ್ಲ .ಯಾಕೆಂದರೆ
ಚಿಕಿತ್ಸೆ ಸಮಯ ಬಾಯಿ ಮೂಜಗ ತೋರುವ ಕೃಷ್ಣನಂತೆ ತೆರೆದು ಕುಳಿತು ಕೊಳ್ಳ
ಬೇಕಾಗುವುದು ..ನಂತರವೂ ಹಲ್ಲಿನ ನಡುವೆ ಹತ್ತಿ ಇಟ್ಟು ಬಾಯಿ ತೆರೆಯದಂತೆ ಮಾಡುವರು
.ಇವರನ್ನು ಕಂಡು ನಮಗೆ ಅಸೂಯೆ ಆಗುವುದು
ಹುಲು ಮನುಜ ಲೋಕದೊಳು ತಪಸ್ವಿಯೋರ್ವನು ಘೋರ ತಪಸ್ಸಿಗೆ ಕೂರೆ ಎಂದಿನಂತೆ ದೇವೇಂದ್ರನ ಸಿಂಹಾಸನ ಗಡ ಗಡ ಅಡ ತೊಡಗಿತು .ಮಾಮೂಲಿ ವರಸೆಯಾದ ಅಪ್ಸರೆಯರನ್ನು ಕಳುಹಿ ತಪೋ ಭಂಗ ಮಾಡ ಬೇಕು .ಈ ಸುದ್ದಿ ಕಿವಿಗೆ ಬಿದ್ದ ಮೇನಕೆ ಮತ್ತು ಊರ್ವಶಿ ,"ಯಾವಾಗಲೂ ನಾವೇ ಯಾಕೆ ಹೋಗಬೇಕು ,ರಂಭೆ ತಿಲೋತ್ತಮೆ ಯಾವಾಗಲೂ ವಿಶ್ವಕರ್ಮ ನಿರ್ಮಿತ ರಂಗಸ್ಥಳ ಬಿಟ್ಟು ಹೊರಗಡೆ ಒಂದು ಹೆಜ್ಜೆ ಹಾಕುವುದಿಲ್ಲ ,ನಾವು ಭೂಲೋಕದ ಕಾಡಿನಲ್ಲಿ ಕಲ್ಲು ಮುಳ್ಳುಗಳ ಮೇಲೆ ನೃತ್ಯ ಮಾಡಿ ಮುನಿಪ ಮುನಿಯ ಶಾಪ ತಾಪಗಳಿಗೆ ತುತ್ತಾದರೂ ಆದೇವೆ .ತಪ ಭಂಗ ಮಾಡಿ ದರೂ ಕೂಡಲೇ ವಾಪಸ್ಸು ಬರಲು ಆಗುವುದಿಲ್ಲ .ನರನೊಡನೆ ಬಾಳಿ ,ಮಗುವನ್ನು ಹೆತ್ತು ,ಪೋಷಿಸಿ ,ಬೆನ್ನು ಬಾಗಿ ,ಹಲ್ಲು ಉದುರಿ ,ಕೂದಲು ಬೆಳ್ಳಗೆ ಆಗಿ ನಾವು ಮಾಜಿಗಳಾಗುತ್ತೇವೆ ."ಎಂದು ಪ್ರತಿಭಟನೆ ಸುರು ಮಾಡಿದರು .(ಎಂತಾದರೂ ಭೂಲೋಕ ರಿಟರ್ನ್ಡ್ ಅಲ್ಲವೇ ).ಈ ಸುದ್ದಿ ಕೇಳಿ ಚಿಂತಾಕ್ರಾಂತನಾದ ದೇವಂದ್ರ ಬೃಹಸ್ಪತಿಯ ಸಲಹೆ ಕೇಳಲು ,ಅವನು "ಎಲೈ ಸಚಿ ಪತಿಯೇ ಮನುಜ ಲೋಕದಲ್ಲಿ ಮಕ್ಕಳಾಗದಂತೆ ಕುಟುಂಬ ಯೋಜನೆ ಎಂಬ ಸುಲಭ ಯೋಜನೆ ತಂದಿರುವರು .ಹಲ್ಲು ಉದುರಿದರೆ ದಾಳಿಂಬೆ ನಾಚಿಸುವ ಕೃತಕ ದಂತ ಪೋಣಿಪರು ,ಕೇಶ ಬಿಳುಪು ಮರೆಯಾಗಿಸುವ ಬಣ್ಣಗಳೂ ಇವೆ ಜತೆಗೆ ಸೌಂದರ್ಯ ತಜ್ಞೆಯರು . ಈ ವಿಚಾರ ದೇವ ನರ್ತಕಿಯರಿಗೆ ತಿಳಿಸಿ ಕಳುಹಿಸುವುದು "ಎಂದು ಸಮಸ್ಯೆ ಪರಿಹಾರ ಮಾಡಿದನು ಎಂಬ ಪ್ರತೀತಿ ಇದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ