ಮಡಿಕೇರಿ ನೆನಪುಗಳು 2
ಒಂದು ಘಟನೆ ನನ್ನ ಮನಸ್ಸನ್ನು ಇನ್ನೂ ಕೊರೆಯುತ್ತಿದೆ ..ಮಡಿಕೇರಿಯಲ್ಲಿ ನಾನು ಇದ್ದಷ್ಟು ನನ್ನ ಮೇಲೆ ಪ್ರೀತಿ ವಾತ್ಸಲ್ಯ ತೋರಿಸಿದ ಕುಟುಂಬದ ಗರ್ಭಿಣಿ ಸಹೋದರಿ ನಮ್ಮ ಆಸ್ಪತ್ರೆಯ ಮಹಿಳಾ ಸರ್ಜನ್ ಅವರಲ್ಲಿ ನಿಯಮಿತ ತಪಾಸಣೆಗೆ ಬರುತ್ತಿದ್ದರು ಹೆರಿಗೆ ನೋವು ಬಂದಾಗ ಆ ವೈದ್ಯೆ ರಜೆಯಲ್ಲಿ ಇದ್ದು ,ನಾನು ಪರಿಶೀಲನೆ ಮಾಡಲು ಗರ್ಭಸ್ಥ ಶಿಶು ಸಾಮಾನ್ಯವಾಗಿ ಇರುವಂತೆ ತಲೆಯ ಭಾಗ ಕೆಳಗೆ ಇರದೇ ಪಾದ ಇತ್ತ್ತು .ಕೂಡಲೇ ಶಸ್ತ್ರ ಚಿಕಿತ್ಸೆ ಆಗ ಬೇಕು ,ನಮ್ಮ ಸರ್ಜನ್ ರಜೆ .ನಾನು ರೋಗಿ ಮತ್ತ್ತು ಸಂಬಂಧಿಗಳಿಗೆ ಧೈರ್ಯ ಹೇಳಿ ಸರಕಾರಿ ಆಸ್ಪತ್ರೆ ವಸತಿ ಸಮುಚ್ಚಯಕ್ಕೆ ಓಡಿ ಕೊಂಡು ಹೋದೆ .(ಆಗ ನನ್ನಲ್ಲಿ ವಾಹನ ಇರಲಿಲ್ಲ .ಆಸ್ಪತ್ರೆಯ ವಾಹನ ಎಲ್ಲೋ ಹೋಗಿತ್ತು )ಏದುಸಿರು ಬಿಟ್ಟು ಬರುತ್ತಿದ್ದ ನನ್ನನ್ನು ಸರ್ಜನ್ ಚೆನ್ನ ಬಸಪ್ಪ ಸಮಾಧಾನ ಮಾಡಿ ಅರಿವಳಿಕೆ ವೈದ್ಯರೊಂದಿಗೆ ಕೂಡಲೇ ಬರುವುದಾಗಿ ಹೇಳಿ ಕಳಿಸಿ , ಹೇಳಿದಂತೆ ಬಂದು ಶಸ್ತ್ರ ಮಾಡಿ ಮಗು ಹೊರ ತೆಗೆದು ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದರೂ ಕ್ಲಿಷ್ಟವಾದ ಸರ್ಜರಿಯ ಶಿಶುವಿನ ಕೈಯ್ಯ ನರ ಎಳೆದಂತೆ ಆಗಿ ಒಂದು ಕೈ ಊನವಾಯಿತು .ಆದರೂ ನಾನು ಈ ತೋರಿದ ಸಮಯ ಪ್ರಜ್ಞೆ ಗಾಗಿ ಆ ಕುಟುಂಬದವರು ನನ್ನ ಮೇಲೆ ಈಗಲೂ ಪ್ರೀತಿ ಇಟ್ಟಿರುವರು .
ಸ್ವಲ್ಪ ಸಮಯದಲ್ಲಿ ಇನ್ನೂ ಇಬ್ಬರು ವೈದ್ಯರು ಸೇರಿಕೊಂಡರು .ಅವರಲ್ಲಿ ಒಬ್ಬರು ಡಾ ಸಂಪತ್ ಕುಮಾರ್ .ಕಾಲೇಜು ನಲ್ಲಿ ನನ್ನ ಸೀನಿಯರ್ . ಸ್ನೇಹ ಜೀವಿ .ಒಂದು ಸಂಜೆ ಕೆಲಸ ಮುಗಿದು ' ಮುದುಡಿದ ತಾವರೆ ಅರಳಿತು "ಚಿತ್ರ ನೋಡಲು ಚಿತ್ರ ಮಂದಿರಕ್ಕೆ ಹೋಗಿದ್ದೆವು .ಇಂಟರ್ವಲ್ ನಲ್ಲಿ ಬಾತ್ರೂಮ್ ನಲ್ಲಿ ಜಾರಿ ಬಿದ್ದು ಮೊದಲೇ ಕೃಷಣ ಕಾಯರಾಗಿದ್ದ ಅವರ ತೊಡೆಯ ಎಲುಬು ಮುರಿಯಿತು .ಅವರನ್ನು ನಾನೇ ಎತ್ತಿ ಹೊರ ತಂದು ಆಟೋದಲ್ಲಿ ಆಸ್ಪತ್ರೆಗೆ ತಂದು ,ಸರಕಾರೀ ಆಸ್ಪತ್ರೆಯ ಮೂಳೆ ತಜ್ಞರಿಂದ ಚಿಕಿತ್ಸೆ ಮಾಡಿ ಹಾಸನದ ಅವರ ಮನೆಗೆ ಕಳುಹಿಸಿ ಕೊಟ್ಟೆವು .
ಮಡಿಕೇರಿಯಲ್ಲಿ ಸಾಕಷ್ಟು ಮಂದಿ ದಕ್ಷಿಣ ಕನ್ನಡ ದವರು ಇದ್ದಾರೆ .ಕಾಫಿ ತೋಟಗಳಲ್ಲಿ ,ಪೇಟೆ ಅಂಗಡಿಗಳಲ್ಲಿ ,ಹೋಟೆಲ್ ಗಳಲ್ಲಿ ಕೆಲಸ ಮಾಡಲು ಬಂದವರು ಜಾಸ್ತಿ .ಹಿಂದೆ ಘಟ್ಟಕ್ಕೆ ಹೋಗುವುದು ಎಂಬ ರೂಢಿ ಇತ್ತು .ಈಗ ದುಬಾಯ್ ಸೌದಿಗೆ ಹೋದ ಹಾಗೆ .ತುಳು ಸಂಸ್ಕೃತಿಯೂ ಕೆಲವು ಅವರ ಜತೆ .ಆದರೆ ಶಿವಮೊಗ್ಗ ,ಚಿಕ್ಕ ಮಗಳೂರು ಜಿಲ್ಲೆಗೆ ಬಂದಂತೆ ಯಕ್ಷಗಾನ ಮೇಳಗಳು ಬರುತ್ತಿದ್ದುದು ಕಡಿಮೆ .ಮಿತ್ತೂರು ಈಶ್ವರ ಭಟ್ ಎಂಬ ಲೆಕ್ಕ ಪರಿಶೋಧಕರು ಮಡಿಕೇರಿಯಲ್ಲಿ ಯಕ್ಷಗಾನ ಪ್ರೇಮಿಗಳ ಜತೆ ಸೇರಿ ಟೌನ್ ಹಾಲ್ ನಲ್ಲಿ ಬಯಲಾಟ ಏರ್ಪಡಿಸುತ್ತಿದ್ದು ನಾನೂ ಹೋಗುತ್ತಿದ್ದೆ .ಉಳಿದಂತೆ ವಾಚನಾಲಯ ದಿಂದ ಪುಸ್ತಕ ತಂದು ಓದುವುದು .ಭಾಗ ಮಂಡಲ ತಲ ಕಾವೇರಿ ,ಗಾಳಿ ಬೀಡು ಇತ್ಯಾದಿ ಸುತ್ತುವುದು .ಆಸ್ಪತ್ರೆಯಲ್ಲಿ ಅಂತೂ ನಾವು ಭೂತ ಹಿಡಿದವಂತೆ ಕೆಲಸ ಮಾಡುತ್ತಿದ್ದೆವು .ಸಮಯದ ಪರಿಧಿ ಇಲ್ಲ .ಹಗಲು ರಾತ್ರಿ ಎಂದು ಇಲ್ಲ .ಪ್ರಾಯದ ಉತ್ಸಾಹ ಮತ್ತು ಆದರ್ಶ .ನೋವು ,ಸಂಕಟ ಹೊತ್ತು ಹಳ್ಳಿ ಹಳ್ಳಿಗಳಿಂದ ಬರುವ ಜನಕ್ಕೆ ಸಾಂತ್ವನ ಕೊಡುವ ತವಕ .ಇಲ್ಲಿ ಒಂದು ಮಾತು ಹೇಳ ಬೇಕು .ನಾವು ಮೆಡಿಕಲ್ ಕಲಿತು ಹೌಸ್ ಸರ್ಜನ್ಸಿ ಮಾಡುವಾಗ ಎಲ್ಲಾ ವಿಭಾಗಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಅನುಭವ ಗಳಿಸಿರುತ್ತಿದ್ದು ಒಂದು ಆತ್ಮ ವಿಶ್ವಾಸ ಇರುತ್ತಿತ್ತು .ಈಗ ವಿದ್ಯಾರ್ಥಿಗಳು ಈ ಅವಧಿಯನ್ನು ಬಹು ಪಾಲು ಪಿ ಜಿ ಪರೀಕ್ಷೆಗೆ ತಯಾರು ಮಾಡಲು ಉಪಯೋಗಿಸುದರಿಂದ ಇದು ಸ್ವಲ್ಪ ಕಡಿಮೆ .ಮುಂದೆ ವೈದ್ಯಕೀಯ ಕಾಲೇಜು ನಲ್ಲಿ ಅಧ್ಯಾಪನ ಮಾಡಿದ ನಾನು ಕಂಡು ಕೊಂಡದ್ದು
ನಾನು ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಲವು ಹಿರಿಯರ ಪರಿಚಯ ಆಯಿತು
.ಫೀಲ್ಡ್ ಮಾರ್ಷಲ್ ಕರಿಯಪ್ಪ ತಮ್ಮ ಸಹೋದರ ನಂಜಪ್ಪ ನಮ್ಮಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾಗ ನೋಡಲು ಬಂದಿದ್ದರು .ಬಹಳ ಶಿಸ್ತು ಬದ್ಧ ವ್ಯಕ್ತಿತ್ವ . ಇನ್ನು ಹೈ ಕೋರ್ಟು ಮುಖ್ಯ ನ್ಯಾಯಾಧೀಶರಾಗಿದ್ದ ಜಿ ಕೆ ಗೋವಿಂದ ಭಟ್ ಭಟ್ ಅವರು ಒಂದು ದಿನ ಮಡಿಕೇರಿಗೆ ಬರುವಾಗ ದಾರಿಯಲ್ಲಿ ಗಾಯಗೊಂಡು ಬಿದ್ದಿದ್ದ ಓರ್ವ ವ್ಯಕ್ತಿಯನ್ನು ತಮ್ಮ ಕಾರಿನಲ್ಲಿ ತಂದು ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು ಈ ಮಾನವೀಯ ನಡೆ ನನ್ನ ಬಂಧುವೂ ಆದ ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿತು .ನಾನು ಮೊದಲೇ ತಿಳಿಸಿದ ಡಾ ಬೋಪಯ್ಯ ಅವರ ತಾಯಿ (ಅವರ ಪತಿ ಕೊಡಗು ಜಿಲ್ಲಾ ಸರ್ಜನ್ ಆಗಿದ್ದವರು .ಮಾವ ಕೊಡಗು ವಿಧಾನ ಸಭಾ ಸ್ಪೀಕರ್ ಆಗಿದ್ದು ಹೆಸರಾಂತ ಮನೆತನ )ಸಾಮಾಜಿಕ ಕಾರ್ಯಕರ್ತೆ ನನ್ನನ್ನು ಆಗಾಗ ಕರೆದು ಊಟ ಹಾಕುವರು .
ನಾನು
ಮರೆಯಲಾಗದ ಮನೆ ಡಾ ನಂಜುಂಡೇಶ್ವರ ಅವರದು. ನಮ್ಮ ಆಸ್ಪತ್ರೆಯಲ್ಲಿ ಅವರ ಸೇವೆ ಮಾಡುವ ಅವಕಾಶ
ಬಂದಿತ್ತು .ಆ ಮೇಲೆ ಅವರ ಪತ್ನಿ ಮತ್ತು ಕುಟುಂಬ ನನ್ನನ್ನು ಮಗನಂತೆ ಕಂಡರು ,ಅವರ
ಮನೆಯಲ್ಲಿ ಏನು ವಿಶೇಷ ಮಾಡಿದರೂ ನನಗೆ ಅದನ್ನು ಕಳುಹಿಸಿ ಕೊಡುವರು .ಈಗಲೂ ನನ್ನ
ಮೇಲೆ ಅದೇ ವಿಶ್ವಾಸ ಪ್ರೀತಿ ಅವರ ಮಕ್ಕಳು ಇಟ್ಟು ಕೊಂಡಿರುವರು .ಇನ್ನು ನೆನಪಿಗೆ
ಬರುವುದು ಮಕ್ಕಿ ರಾಮಯ್ಯ ದಂಪತಿಗಳು ,ಜಿ ಆರ್ ರಾಘವೇಂದ್ರ ಮತ್ತು ,ನೀರ್ಕಜೆ
ಮಹಾಬಲೇಶ್ವರ ಭಟ್
ನಮ್ಮ ಆಸ್ಪತ್ರೆಯಲ್ಲಿ ರವಿ ಹೆಸರಿನ ಹುಡುಗ ಓ ಟಿ ಟೆಕ್ಣಿ ಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಸ್ಪುರ ದ್ರೂಪಿ :ಉತ್ಸಾಹಿ ಮತ್ತು ಎಲ್ಲರ ಮೆಚ್ಚಿಗೆ ವಿಶ್ವಾಸ ಗಳಿಸಿದ್ದ .ಒಂದು ಸಂಜೆ ಒಂದು ಕಷ್ಟಕರ ಶಸ್ತ್ರ ಚಿಕಿತ್ಸೆ ಇತ್ತು ಅರಿವಳಿಕೆ ಕೊಡಲು ಪುತ್ತೂರಿನಿಂದ ತಜ್ಞರು ಬಂದಿದ್ದು ಅದು ಮುಗಿದ ಮೇಲೆ ಅವರನ್ನು ಬಸ್ ಸ್ಟಾಂಡ್ ಗೆ ಬಿಡಲು ಆಟೋ ತರ ಹೇಳಲು ಅವನನ್ನು ಹುಡುಕಿ ಓ ಟಿ ಬಳಿ ಹೋಗಲು ಅವನ ಶವ ಬಿದ್ದಿತ್ತು ಪಕ್ಕದಲ್ಲಿ ಸಿರಿಂಜ್ ಮತ್ತು ಔಷಧಿ ಅಂಪ್ಯೂಲ್ .ಅವನು ನಿದ್ದೆ ಔಷಧ ಎಂದು ಕೊಂಡು ಮಾಂಸ ಖಂಡ ನಿಶ್ಚಲ ಗೊಳಿಸುವ ಇಂಜೆಕ್ಷನ್ ಕೊಟ್ಟು ಕೊಂಡಿರಬೇಕು ಎಲ್ಲರೂ ಓರ್ವ ಬಂಧುವನ್ನು ಕಳೆದು ಕೊಂಡಂತೆ ದುಃಖಿಸಿದರು .
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಮತ್ತು ಇತರ ಕಚೇರಿಗಳು ಕೊಡಗಿನ ರಾಜನ ಹಳೇ ಅರಮನೆಯಲ್ಲಿ ಇದ್ದವು .ಜಿಲ್ಲಾ ಗ್ರಂಥ ಭಂಡಾರ ಕೂಡ ಇಲ್ಲೇ ಇತ್ತು .ಅಲ್ಲಿಗೆ ಬರುವ ತರುಣದಲ್ಲಿ ನಾನು ಮಾಸ್ತಿ ಯವರ ಚಿಕ್ಕವೀರ ರಾಜೇಂದ್ರ ಕಾದಂಬರಿ ಓದಿದ್ದರಿಂದ ಅದರ ಪಾತ್ರಗಳು ಎದುರು ಬಂದಂತೆ ಭಾಸ ವಾಗುತ್ತಿತ್ತು ..ಇನ್ನೊಂದು ಪ್ರೇಕ್ಷಣೀಯ ತಾಣ ರಾಜಾ ಸೀಟ್ .ಇಲ್ಲಿಂದ ನಿಂತು ನೋಡಿದರೆ ದೊಡ್ಡ ಕಣಿವೆ ,ತಳದಲ್ಲಿ ದೂರದಲ್ಲಿ ಮಂಗಳೂರು ರಸ್ತೆ ,ಸ್ವಲ್ಪ ಮೇಲೆ ಹಿಂದಿನ ಕಾಲು ದಾರಿ .(ಕುದುರೆ ದಾರಿ ಕೂಡ ).ಮೇಲೆ ರಾಜನು ಕುಳಿತುಕೊಳ್ಳುತ್ತಿದ್ದ ಮಂಟಪ ಇದೆ .ಇದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ (?)ಪಡಿಸಿದ್ದಾರೆ .ಪಕ್ಕದಲ್ಲಿಯೇ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಇದೆ .
ಓಂಕಾರೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧ .ಮಡಿಕೇರಿ ಮೈಸೂರು ರಸ್ತೆಯ ಪೂರ್ವ ಅಂಚಿನಲ್ಲಿ ಸುದರ್ಶನ ವೃತ್ತ ಇದೆ .ಅಲ್ಲೇ ದೂರ ಸಂಚಾರ ನಿಗಮದ ಗೋಪುರ ಇದೆ .ಎತ್ತರದ ಆ ತಾವು ನನ್ನ ಮುಂಜಾನೆ ವಾಕಿಂಗ್ ಪ್ರಶಸ್ತ ವಾಗಿತ್ತು .ಪಕ್ಕದಲ್ಲಿಯೇ ಕಾರ್ಯಪ್ಪ ನವರ ಮನೆ ರೋಷನಾರಾ ಇತ್ತು .
ಮಡಿಕೇರಿ ಈಸ್ಟ್ ಎಂಡ್ ಹೋಟೆಲ್ ಬಹಳ ಜನಪ್ರಿಯ ಆಗಿತ್ತು ,ಪ್ರಶಾಂತ ವಾದ ಪರಿಸರ ,ಹಳೆಯ ಕಟ್ಟಡದಲ್ಲಿ ಇತ್ತು .ಮಸಾಲೆ ದೋಸೆ ತಿನ್ನಲು ಹೋಗುತ್ತಿದ್ದೆವು .ಉಳಿದಂತೆ ಒಳ್ಳೆಯ ಸಸ್ಯಾಹಾರಿ ಹೋಟೆಲ್ ಇದ್ದಂತಿಲ್ಲ .
ಸಂಜೆ
ಹೊತ್ತು ಮಡಿಕೇರಿ ಮಂಜಿನಿಂದ ಆವೃತ್ತ ಆಗುವುದು ,ನಗರದ ಬಹು ಮಂದಿ ಬಾರ್ ಸೇರುವರು
.ವ್ಯಾಪಾರ ವಹಿವಾಟು ಕಮ್ಮಿ ಆಗುವುವು .ಮಡಿಕೇರಿಯಲ್ಲಿ ಕಛೇರಿಗಳಲ್ಲಿ ಫ್ಯಾನ್
ಇರುತ್ತಿರಲಿಲ್ಲ ,ಯಾಕೆಂದರೆ ಅವಶ್ಯ ಇರಲಿಲ್ಲ .ನಮ್ಮ ಒ ಪಿ ಡಿ ಯಲ್ಲಿ ಅಗ್ಗಿಷ್ಟಿಕೆ
ಹಾಕಿ ಕೋಣೆ ಬಿಸಿ ಮಾಡುತ್ತಿದ್ದೆವು .ಅಂತಹದ್ದರಲ್ಲಿ ಈಗ ಎಲ್ಲಾ ಕಡೆ ಏ ಸಿ ಬಂದಿವೆ
.ಮಡಿಕೇರಿ ಹವೆ ,ಜನ ಜೀವನ ಬದಲಾಗಿದೆ .ಸುತ್ತ ಮುತ್ತ ಮನೆಗಳು ಹೊಲಿಡೇ ಹೋಮ್ ಗಳಾಗಿ
ಪರಿವರ್ತನೆ ಹೊಂದಿವೆ
ಪಕ್ಕದ ಅಬ್ಬಿ ಜಲಪಾತ ,ಗಾಳಿ ಬೀಡು ನೋಡಲು ಚಂದ .
ಕೊಡಗರು ಪರಾಕ್ರಮಿಗಳು ,ಸೈನಿಕ ಪರಂಪರೆಯವರು .ಕೊಡವ ತರುಣ ತರುಣಿಯರು ಆಕರ್ಷಕ ವ್ಯಕಿತ್ವ ಹೊಂದಿದ್ದು ,ಅವರದೇ ರೀತಿಯ ಉಡುಗೆ ತೊಡುಗೆ ಇದೆ .
ಪಂಜೆ
ಮಂಗೇಶ ರಾವು ,ಜಿ ಟಿ ನಾರಾಯಣ ರಾವು ,ಭಾರತಿ ಸುತ ಮುಂತಾದ ಪ್ರಸಿದ್ದ ಲೇಖಕರ ಕಾರ್ಯ
ಕ್ಷೇತ್ರ .ಪಂಜೆಯವರ ಹುತ್ತರಿ ಹಾಡು ಕೊಡಗಿನ ನೆಲ ಸಂಸ್ಕೃತಿ ಮತ್ತು ಜನಪದವನ್ನು
ಸರಿಯಾಗಿ ಬಿಂಬಿಡುತ್ತದೆ
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ?
ಅಲ್ಲಿ ಆ ಕಡೆ ನೋಡಲಾ!
ಅಲ್ಲಿ ಕೊಡಗರ ನಾಡಲಾ!
ಅಲ್ಲಿ ಕೊಡವರ ಬೀಡಲಾ!
ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?
ಅವರು ಸೋಲ್ ಸಾವರಿಯರು!
ಅವರು ಕಡುಗಲಿ ಗರಿಯರು!
ಅವರೆ ಕೊಡಗಿನ ಹಿರಿಯರು!
ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಂಡ ಕಟ್ಟು ಕಟ್ಟಳೆ, ರೀತಿ ನೀತಿಯ ಕೋಶವು!
ನಮ್ಮ ಕೊಡಗಿದು ಜಮ್ಮದು!
ಜಮ್ಮ ಕೊಡಗಿದು ನಮ್ಮದು!
ನಮ್ಮೊಡಲ್ ಬಿಡಲಮ್ಮದು!
ಇದು ಅಗಸ್ತ್ಯನ ತಪದ ಮಣೆ, ಕಾವೇರಿ ತಾಯ ತವರ್ಮನೆ
ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ!
ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು!
ಇದೊ! ಇದೋ! ಇಲ್ಲು ರುಳ್ದ ಹಾಲೇರಿಯರ ಬಲಗಿರಿ ಶೃಂಗವು!
ವಿಧಿಯ ಮಾಟದ ಕೊಡಗಿದು!
ಮೊದಲೆ ನಮ್ಮದು, ಕಡೆಗಿದು!
ಕದಲದೆಮ್ಮನು; ಬೆಡಗಿದು!
ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
ಸುಮ್ಮನಿತ್ತರೊ ದಟ್ಟಿ ಕುಪ್ಪಸ ಹಾಡು ಹುತ್ತರಿಗೇಳಿರಿ!
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪಡ ಹೊರ ಹೊಮ್ಮಲಿ!
ಅಮ್ಮ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ನೆಮ್ಮದಿಯನಿದು ತಾಳಲಿ!
ಅಮ್ಮೆಯಾ ಬಲ ತೋಳಲಿ
ನಮ್ಮ ಕೊಡಗಿದು ಬಾಳಲಿ!
ಸಾಹಿತ್ಯ: ಪಂಜೆ ಮಂಗೇಶರಾಯರು
ನಾನು ಅಶ್ವಿನಿ ಆಸ್ಪತ್ರೆಯಲ್ಲಿ ಇರುವಾಗ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಪರಿಸರ ತಜ್ನ ಯೆಲ್ಲಪ್ಪ ರೆಡ್ಡಿಯವರು ನಮ್ಮ ಆಸ್ಪತ್ರೆಯ ಸಹಯೋಗದಿಂದ ತೀರಾ ಅರಣ್ಯ ಪ್ರದೇಶಗಳಾದ ಕುಟ್ಟ ಮಾಕುಟ ಗಳಲ್ಲಿ ಕಾಡಿನ ಮೂಲ ನಿವಾಸಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸುವ ಒಳ್ಳೆಯ ಕಾರ್ಯಕ್ರಮ ಆರಂಭ ಮಾಡಿದ್ದರು .ಅಂತಹ ಒಳ್ಳೆಯ ಹಿರಿಯರನ್ನು ಭೇಟಿ ಮಾಡುವ ಸದವಕಾಶ ಬಂದುದು ಸಂತೋಷ.
ಹೀಗೆ
ವರುಷ ಕಳೆದದ್ದೇ ಗೊತ್ತಾಗಲಿಲ್ಲ .ಅಷ್ಟರಲ್ಲಿಯೇ ಕೇಂದ್ರ ಲೋಕ ಸೇವಾ ಆಯೋಗದವರು ರೈಲ್ವೇ
ವೈದ್ಯಕೀಯ ಸೇವೆಗೆ ನನ್ನನ್ನು ಆಯ್ಕೆ ಮಾಡಿದ ಆದೇಶ (ಭಾರತ ದೇಶದ ರಾಷ್ಟ್ರ ಪತಿಯವರು ನಿಮ್ಮನ್ನು ನೇಮಕ ಮಾಡಲು ಸಂತೋಷ ಪಡುತ್ತಾರೆ ಎಂಬ ಒಕ್ಕಣೆ )ಬಂದು ನನ್ನ ಕೆಲಸಕ್ಕೆ ರಾಜೀನಾಮೆ
ಕೊಟ್ಟು ,ಒಲ್ಲದ ಮನಸಿಂದ ಮಡಿಕೇರಿಗೆ ವಿದಾಯ ಹೇಳಿದೆ .(ಮುಗಿಯಿತು )
ರಾಜಾ ಸೀಟ್ ನ ವಿಹಂಗಮ ನೋಟ
ಓಂಕಾರೇಶ್ವರ ದೇವಸ್ಥಾನ
ಮಧುರ ನೆನಪುಗಳು, ಕಣ್ಣಿಗೆ ಕಟ್ಟಿದ ಹಾಗಿದೆ ; ಈಗಲೂ ಅವಕಾಶ ದೊರಕಿದರೆ ಕಾಲಚಕ್ರದಲ್ಲಿ ಹಿಂತಿರುಗುವ ಇಂದು ; ಒಂದೇ ವಿಷಯ ಒಲ್ಲದೆ ಬಂದದ್ದು ಎಂದರೆ ಅಲ್ಲಿಯ ಛಳಿ !
ಪ್ರತ್ಯುತ್ತರಅಳಿಸಿಈಗ ಮೊದಲಿನ ಚಳಿ ಇಲ್ಲಾ ಸಾರ್
ಪ್ರತ್ಯುತ್ತರಅಳಿಸಿ