ಬೆಂಬಲಿಗರು

ಗುರುವಾರ, ಡಿಸೆಂಬರ್ 31, 2020

ವೈದ್ಯ ಗುರು ಭೀಷ್ಮಾಚಾರ್ಯ ಡಾ ಸಿ ಆರ್ ಬಲ್ಲಾಳ್

                                                 ವೈದ್ಯ ಗುರು ಭೀಷ್ಮಾಚಾರ್ಯ ಡಾ ಸಿ ಆರ್ ಬಲ್ಲಾಳ್

ನಮ್ಮ ನಿಮ್ಮೆಲ್ಲರ  ಗುರು ಶಸ್ತ್ರ ಚಿಕಿತ್ಸಾ ತಜ್ನ ಮತ್ತು ಪ್ರಾಧ್ಯಾಪಕರ ಅಧ್ಯಾಪಕ ಡಾ ಸಿ ಆರ್ ಬಲ್ಲಾಳ್ ಅವರಿಗೆ ಅಖಿಲ ಭಾರತ ಶಸ್ತ್ರ ಚಿಕಿತ್ಸಾತಜ್ನರ ಸಂಘ ಈ ವರ್ಷ ತನ್ನ ಸಮಾವೇಶದಲ್ಲಿ  ಜೀವ ಮಾನದ ಸಾಧನೆಗಾಗಿ   ಕೊಡ ಮಾಡುವ ಪ್ರಶಸ್ತಿಗೆ ಆಯ್ಕೆ ಮಾಡಿದೆ . 

ಅವಿಭಜಿತ  ದಕ್ಷಿಣ ಕನ್ನಡ ,ಕಾಸರಗೋಡು ಮತ್ತು ಸುತ್ತ ಮುತ್ತಲಿನ ಪ್ರದೇಶದ  ರೋಗಿಗಳು ಬಹಳ ಹಿಂದೆ ತಮ್ಮ ಶರೀರದ ಲ್ಲಿ   ಶಸ್ತ್ರ ಚಿಕಿತ್ಸೆಯ ಗಾಯ ಇದ್ದರೆ ಇದು ಡಾ ವೆಂಕಟ ರಾಯರು ಕಂಕನಾಡಿ ಆಸ್ಪತ್ರೆಯಲ್ಲಿ ಮಾಡಿದ ಆಪರೇಷನ್ ಎಂದು ದೈನ್ಯತಾ ಭಾವದಿಂದ ಹೇಳುತ್ತಿದ್ದರು .ಅವರ ತರುವಾಯ ಬಹುಪಾಲು ರೋಗಿಗಳಿಗೆ ಶಸ್ತ್ರ ಕ್ರಿಯೆ ಮಾಡಿ (ಹಲವು ಬಾರಿ ಜೀವ ಉಳಿಸಿದ )ಗುಣ ಮುಖರಾಗಿ ಮಾಡಿದ ವೈದ್ಯರು ಡಾ ಸಿ ಆರ್ ಬಲ್ಲಾಳ್ .ಅದು ಮಾತ್ರ ಅಲ್ಲ ಅವರು ವಿದ್ಯಾರ್ಥಿ ಮೆಚ್ಚಿದ ಶಿಕ್ಷಕರು .ಕೆ ಎಂ ಸಿ ಮಂಗಳೂರು ,ನಂತರ  ಕ್ಷೇಮಾ ದೇರಳಕಟ್ಟೆ ಇಲ್ಲಿ ಪ್ರಾಧ್ಯಾಪಕ ವೃತ್ತಿ .ಇವರ ತರಗತಿಗಳಿಗೆ  ವಿದ್ಯಾರ್ಥಿಗಳು ಸಕ್ಕರೆಗೆ ಮುಟ್ಟುವ ಇರುವೆಗಳಂತೆ ಮುತ್ತುವರು .ಜಗತ್ತಿನ ಎಲ್ಲೆಡೆ ಇವರ ವಿದ್ಯಾರ್ಥಿಗಳು ಇರುವರು .ಕ್ಷೇಮಾ ದಲ್ಲಿ  ಇವರ ಕಿರಿಯ  ಸಹೋದ್ಯೋಗಿ ಆಗುವ ಸದವ ಕಾಶ ನನಗೆ ಬಂದಿತ್ತು.ಅವರು ಕ್ಲಿನಿಕಲ್ ಮೀಟಿಂಗ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅನುಭವ ಮತ್ತು  ಜ್ನಾನ ನಮ್ಮೊಡನೆ  ಹಂಚಿ  ಕೊಳ್ಳುತ್ತಿದ್ದರು. ಸ್ಪಷ್ಟ ಮತ್ತು ತೂಕದ ಮಾತು. ಪಟ್ಯೇತರ ಚಟುವಟಿಕೆಗಳಲ್ಲಿಯೂ  ಸಕ್ರಿಯ . 

             ಡಾ ಬಲ್ಲಾಳ್  ಮಂಗಳೂರು ಸಂಗೀತ ಪರಿಷತ್ತಿನ  ಬೆನ್ನು ಮೂಳೆ.ಅವರ  ಸಹಾಯಕ್ಕೆ  ಯುವ ಪಡೆ ಇದೆ .ನೀವು  ಪರಿಷತ್ತಿನ ಯಾವುದೇ  ಕಾರ್ಯಕ್ರಮಕ್ಕೆ  ಹೋದರೂ ,ಅಲ್ಲಿ  ಇವರು ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ  ಯುವಕರನ್ನೂ ನಾಚಿಸುವ  ಉತ್ಸಾಹದಲ್ಲಿ  ಅತಿಥಿಗಳನ್ನು  ಸ್ವಾಗತಿಸುವುದರಿಂದ  ಹಿಡಿದು ,ಉಟೋಪಚಾರ ,ಕಾರ್ಯಕ್ರಮ ನಿರ್ವಹಣೆ ,ಸ್ವಾಗತ ಇಲ್ಲವೇ ಧನ್ಯವಾದ ಭಾಷಣ ಇತ್ಯಾದಿಗಳಲ್ಲಿ  ತೊಡಗಿಸಿ ಕೊಂಡು  ಪಾದರಸದಂತೆ  ಓಡಾಡುವುದು ಕಾಣಬಹುದು.

 

           ಸಿ ಆರ್ ಬಲ್ಲಾಳ್   ಸಾರ್  ಹೀಗೆಯೇ  ಆರೋಗ್ಯ ಮತ್ತು ಸಂತೋಷದಿಂದ ಇದ್ದು ನಮ್ಮಂತವರಿಗೆ ಮಾರ್ಗ ದರ್ಶನ ಮಾಡುತ್ತಲಿರಲಿ.

ಬುಧವಾರ, ಡಿಸೆಂಬರ್ 30, 2020

ಔಷಧಿ ಬರೆಯುವುದು

                                     ಔಷಧಿ  ಬರೆಯುವುದು 

ಒಬ್ಬ ರೋಗಿಯ ರೋಗ ಚರಿತ್ರೆ ತೆಗೆದುಕೊಂಡು ಪರೀಕ್ಷೆ ಮಾಡಿ ಔಷಧಿ ಬರೆಯುವುದು ಸ್ವಲ್ಪ ಕಷ್ಟದ ಕೆಲಸವೇ .ಯಾಕೆಂದರೆ ಔಷಧಿ ಬರೆಯುವ ಮೊದಲು ಕೆಳಗಿನ ಕೆಲವು ವಿಚಾರಗಳನ್ನು  ಗಮನಿಸ ಬೇಕಾಗುವುದು . 

೧ ರೋಗಿಯ ವಯಸ್ಸು .ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಕೆಲವು ಔಷಧಿ ಕೊಡ ಬಾರದು .ಕೊಡುವುದಿದ್ದರೂ ಪ್ರಮಾಣ ಬೇರೆ ಇರುವುದು . 

೨. ರೋಗಿ ಮಹಿಳೆ ಯಾಗಿ ಇದ್ದಲ್ಲಿ ವಿವಾಹಿತೆಯೋ ?ಹೌದಾದರೆ ಗರ್ಭಿಣಿಯೋ ಅಥವಾ ಮೊಲೆ ಹಾಲುಣಿಸುವ ಮಗು ಇದೆಯೋ ?

೩.  ಬೇರೆ ಕಾಯಿಲೆ (ಸಕ್ಕರೆ ಕಾಯಿಲೆ ,ಅಪಸ್ಮಾರ ,ಹೃದ್ರೋಗ ಇತ್ಯಾದಿ )ಗಳಿಗೆ ಚಿಕಿತ್ಸೆ ನಡೆಯುತ್ತಲಿದೆಯೋ ?

೪. ಯಾವುದಾದರೂ  ಔಷಧಿ ತೆಗೆದು ಕೊಂಡಾಗ ಅಲರ್ಜಿ ಆಗಿದೆಯೋ 

೫ ಮೂತ್ರ ಪಿಂಡ ಮತ್ತು  ಲಿವರ್ ಕಾಯಿಲೆ ಇದೆಯೋ 

ಇತ್ಯಾದಿ  ವಿವರ ಅತ್ಯಾವಶ್ಯಕ .ಇದನ್ನು ರೋಗಿಗಳೇ ವೈದ್ಯರಿಗೆ ಕೊಡ ಬೇಕು ..ಎಷ್ಟೋ ಬಾರಿ ನಿಮಗೆ ಬೇರೆ ಯಾವುದಾದರೂ ಕಾಯಿಲೆ ಇದೆಯೋ ಎಂದು ಕೇಳುವಾಗ  ಇಲ್ಲಾ  ಎಂದು ಹೇಳಿ ಆಮೇಲೆ ಸ್ವಲ್ಪ ಶುಗರ್ ಇದೆ ,ಬಿ ಪಿ ಗೆ ಒಂದು ಮಾತ್ರೆ ಇದೆ ಎಂದು ಹೇಳುವರು .. 

ಇನ್ನು ದೊಡ್ಡ ಕಷ್ಟ  ದೇವರಲ್ಲಿ ಇರುವಂತೆ ಔಷಧಿ ಒಂದು ನಾಮ ಹಲವು (ಕಂಪೆನಿ ಹೊಂದಿಕೊಂಡು )ಇವೆ .ಇವುಗಳನ್ನು  ನೆನಪು ಇಟ್ಟು  ಕೊಳ್ಳುವುದು ಹರ ಸಾಹಸ .ಕೆಲವು ಔಷಧಿಗಳು  ಬೇರೆ ಬೇರೆ ಆದರೂ ಟ್ರೇಡ್ ನೇಮ್ ನಲ್ಲಿ ಅತಿ ಸಾಮ್ಯತೆ ಇರುತ್ತವೆ ..ನಾವು ಕಷ್ಟ ಪಟ್ಟು ಕೆಲವು ಬ್ರಾಂಡ್ ನೆನಪು ಇಟ್ಟು  ಕೊಂಡರೂ  ಬೇರೆ ವೈದ್ಯರ ಪ್ರಿಸ್ಕ್ರಿಪ್ಷನ್ ನ ಔಷಧಿ ಯಾವುದೆಂದು ತಿಳಿಯುವುದೂ  ಒಂದು ತಲೆ ನೋವು .ಹಲವು ಬಾರಿ ರೋಗಿಗಳು ತಮ್ಮ ಚಾಲ್ತಿಯಲ್ಲಿರುವ  ಔಷಧಿ ಚೀಟಿ ತರದೇ ಕೆಂಪು ಮಾತ್ರೆ ,ದೊಡ್ಡ ಗೆರೆ  ಇರುವ ಮಾತ್ರೆ ಇತ್ಯಾದಿ ಹೇಳುವರು . 

ಅದಕ್ಕೇ  ಡಾ ಎಂ ಕೆ ಮಣಿ ಯವರು ಔಷಧ ಶಾಸ್ತ್ರ  ಪುಸ್ತಕ ಮೇಜಿನ ಮೇಲೆ ಇಟ್ಟು  ಕೊಂಡು  ಸಂದೇಹ ಇದ್ದಲ್ಲಿ ಅದನ್ನು ಓದಿ ಆಮೇಲೆ ಮದ್ದು ಬರೆಯುವಂತೆ ಹೇಳುತ್ತಿದ್ದರು .ಆದರೆ ನಾನು ಹಾಗೆ ಮಾಡಿದಾಗ ಕೆಲವರು ಇವನು ಎಂತ ಡಾಕ್ಟ್ರು ,ಪುಸ್ತಕ ಓದಿ ಮದ್ದು ಬರೆಯುವವನು ಎಂದರು .ಅದಕ್ಕೆ ಒಂದು ಉಪಾಯ ಮಾಡಿದ್ದೇನೆ .ಈಗ ಕಂಪ್ಯೂಟರ್ ನಲ್ಲಿ ಮಾಹಿತಿ ಪಡೆಯುತ್ತೇನೆ ..ಡಾಕ್ಟ್ರು ಕಂಪ್ಯೂಟರ ನೋಡಿ ಔಷಧಿ ಕೊಟ್ರು ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದಾರೆ . 

             ಇನ್ನು ರೋಗಿಯ ವಿವರವಾದ ಪರೀಕ್ಷೆ ಮಾಡಿ ಔಷಧಿ ಅವಶ್ಯವಿಲ್ಲ ಎಂದು ಧೈರ್ಯ ಹೇಳಿದರೆ ,ಇವರು ಮದ್ದೇ ಕೊಡಲಿಲ್ಲ ,ಫೀಸು ಯಾಕೆ ಎಂದು ಕೆಲವರು ಪಾಟಿ ಸವಾಲು ಹಾಕುವರು 

ಶನಿವಾರ, ಡಿಸೆಂಬರ್ 26, 2020

ಬಸ್ ಪುರಾಣ ವೂ ಬಾಬೂ ಭಾಯಿ ಜೆ ಪಟೇಲರೂ

                               ಬಸ್ ಪುರಾಣವೂ ಭಾಬೂ ಭಾಯ್ ಜೆ ಪಟೇಲರೂ

ಗಡಿ ಪ್ರದೇಶದಲ್ಲಿ ಓಡುವ ಮಲಬಾರ್ ಟ್ರಾವೆಲ್ಸ್ ಎಂಬ ಕೇರಳ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ನೀವು ಪ್ರಯಾಣಿಸಿರ ಬಹುದು .ಇದರಲ್ಲಿ ಸೂಚನೆ ಗಳು ಮಲಯಾಳದಲ್ಲಿ ಇರುತ್ತವೆ .ನೀವು ಬಸ್ಸಿಗೆ ಏರಿ ಕುಳಿತು ಕೊಳ್ಳಲು ಆಲೋಚಿಸುತ್ತಿರುವಾಗ ಅದರ ಮೇಲೆ ಕಂಡಕ್ಟರ್ ,ಮುದರ್ನ ಪೌರರ್ (ಹಿರಿಯ ನಾಗರಿಕರು ),ಅಂಧರ್ (ಅಂಧರು ),ವಿಕಲಾಂಗರ್ (ಅಂಗ ವಿಕಲರು )ಮತ್ತು ಉಳಿದ ಹಾಲ ಸಾಲುಗಳು ಸ್ತ್ರೀಕಳ್ (ಮಹಿಳೆಯರು )ಎಂದು ಬರೆದಿದ್ದು  ಸಾಮಾನ್ಯ ವರ್ಗದ ಪುರುಷರು ಸೀಟಿಗೆ  ಹುಡುಕಾಡ ಬೇಕಾಗುವುದು .ಪುಣ್ಯಕ್ಕೆ ಲೋಕಲ್ ಬಸ್ ಗಳಲ್ಲಿ  ಎಂ ಎಲ್ ಎ ಸೀಟ್ ಇಲ್ಲ .ಮಹಿಳೆಯರ ಸೀಟ್ ಗಳು ಚಾಲಕರ ಹಿಂದೆ ಇವೆ .ಕೆಲವು ವರುಷಗಳ ಹಿಂದೆ   ಬಸ್ ಅವಘಡಗಳು ಮೇಲಿಂದ ಮೇಲೆ ಸಂಭವಿಸಿದಾಗ ಇದಕ್ಕೆ ಚಾಲಕನ ಸೀಟ್ ನ ಹಿಂದೆ ಮಹಿಳೆಯರು ಇರುವುದರಿಂದ ,ಆತ ರೋಡ್ ಮತ್ತು ಸುತ್ತ ಮುತ್ತ ನೋಡುವುದು ಬಿಟ್ಟು ಹಿಂದೆ ಕುಳಿತ  ಸುಂದರಿಯರತ್ತವೇ ಗಮನ ಹರಿಸುವುದು ಕಾರಣ ಎಂದು ಉನ್ನತ ಸಾರಿಗೆ ಅಧಿಕಾರಿ ಒರ್ವರು ಮಹಿಳೆಯರಿಗೆ ಮೀಸಲಿಟ್ಟ ಸೀಟ್ ಗಳನ್ನು  ಹಿಂದಿನ ನಾಲ್ಕು ಸಾಲಿಗೆ ಬದಲಿಸಿ ಆದೇಶ ಹೊರಡಿಸಿದರು .ಆದರೆ ಕುಲುಕಾಟ ತಡೆಯಲಾರದೇ ಸ್ತ್ರೀಯರು ನಮಗೆ ಅದು ಬೇಡ ಎಂದು ಪ್ರತಿಭಟಿಸಿದ ಪರಿಣಾಮ ಆ ಆದೇಶ ಹಿಂತೆಗೆಯಲ್ಪಟ್ಟಿತು .

    ಕರ್ನಾಟಕದ ದೂರ ಸಾರಿಗೆ ಬಸ್ ಗಳಲ್ಲಿ  ಈಗಲೂ ಎಂ ಎಲ್ ಎ ಸೀಟ್ ಎಂದು ಕಾದಿರಿಸಿ ಇಟ್ಟಿರುತ್ತಾರೆ .ಆದರೆ ಇತ್ತೀಚಿನ ದಿನಗಳಲ್ಲಿ  ದೇಶ ಪ್ರಗತಿ ಹೊಂದಿ ಜನ ಪ್ರತಿನಿಧಿಗಳು ಸಾಕಷ್ಟು ಸ್ಥಿತಿ ವಂತರು ಆಗಿರುವುದರಿಂದ ಅವರನ್ನು ಬಸ್ ನಲ್ಲಿ ಕಾಣುವುದು ಅಪರೂಪ .ಮೊನ್ನೆ ಮೊನ್ನೆ ವರೆಗೆ ಸ್ವಾತಂತ್ರ್ಯ ಹೋರಾಟ ಗಾರರಿಗೆ ಎಂಬ ಮೀಸಲಾತಿ ಇತ್ತು .

ಜನ ಪ್ರತಿನಿಧಿ ಬಸ್ ಎನ್ನುವಾಗ ಗುಜರಾತಿನ ಮುಖ್ಯ ಮಂತ್ರಿ ಆಗಿದ್ದ  ಗಾಂಧೀವಾದಿ  ಭಾಬೂ ಬಾಯ್ ಜೆ ಪಟೇಲ್ ನೆನಪಿಗೆ ಬರುವರು 


ಖ್ಯಾತ ಲೇಖಕ ಎಸ ಎಲ್ ಭೈರಪ್ಪನವರ ಆತ್ಮ ಚರಿತ್ರೆ ಭಿತ್ತಿ ಯಲ್ಲಿ ಅವರು ಗುಜರಾತಿನ ವಲ್ಲಭ ಭಾಯಿ ಪಟೇಲ್ ವಿಶ್ವವಿದ್ಯಾನಿಲಯಕ್ಕೆ

ತತ್ವ ಶಾಸ್ತ್ರ ಅಧ್ಯಾಪಕರಾಗಿ ಹೋದ ಪ್ರಸ್ತಾಪ ಬರುತ್ತದೆ.ಅವರನ್ನು ಆಯ್ಕೆ ಮಾಡಿದ ಸಮಿತಿಯ ಅದ್ಯಕ್ಷರಾಗಿದ್ದವರು ನಿವೃತ್ತ  ಐ ಸಿ ಎಸಅಧಿಕಾರಿ ಮತ್ತು ಮುಂದೆ ಕೇಂದ್ರದ ಅರ್ಥ ಸಚಿವರಾದ ಎಚ್ ಎಂ ಪಟೇಲ್ ಅವರು.ಆಗ ವಿಶ್ವ ವಿದ್ಯಾನಿಲಯದ ಉಪಕುಲಪತಿಯಾಗಿದ್ದವರು  ಶ್ರೀ ಬಾಬು ಭಾಯಿ ಪಟೇಲ್ ಅವರು .ಇವರು ಗಾಂಧಿ ವಾದಿಯಾಗಿದ್ದುದಲ್ಲದೆ ಅಲ್ಲದೆ ಉತ್ತಮ ಆಢಳಿತಗಾರರು ಆಗಿದ್ದರೆಂದು ಭೈರಪ್ಪನವರು ಬರೆದಿರುವರು. ತತ್ವ್ಸ ಶಾಸ್ತ್ರ ವಿಭಾಗ ಆರಂಬಿಸಿ ಅದಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿ ಕೊಟ್ಟರು ಎಂದು ನೆನಪಿಸಿಕೊಳ್ಳುತ್ತಾರೆ.ಒಮ್ಮ ಹಾಸ್ಟೆಲ್ ನ ಕೆಲವು ಹುಡುಗರು ಊಟದ ಏಕತಾನತೆಯ ಬಗ್ಗೆ ಇವರಲ್ಲಿ ಪ್ರಸ್ತಾಪಿಸಿ ರಜಾ ದಿನಗಳಲ್ಲಿ ಭೂರಿಭೋಜನ  ಕೊಡಬೇಕೆಂಬ ಬೇಡಿಕೆ ಇತ್ತರು .ಅದಕ್ಕೆ ಅವರು'' ಭೂರಿ ಭೋಜನ ಗಳಿಂದ ಮೆಸ್ಸ್ ಬಿಲ್ ಅಧಿಕ ವಾಗುವುದು .ಎಷ್ಟೋವಿದ್ಯಾರ್ಥಿಗಳು ಸಾಲ ಸೋಲ ಮಾಡಿ ಕಲಿಯುತ್ತಿರುತ್ತಾರೆ.ನಮ್ಮ ಪ್ರಾಚೀ ನ ಗುರುಕುಲಗಳಲ್ಲಿ ರಾಜನ ಮಗನಾಗಲೀ ,ಶ್ರೀಮಂತವ್ಯಾಪಾರಿಯ ಮಗನಾಗಲೀ ,ಬಡಗಿ ಕಮ್ಮಾರ ದನಗಾಹಿಯ ಮಗನಾಗಲೀ ಎಲ್ಲರೂ ಒಂದೇ ತರಹದ ವಸ್ತ್ರ ಧರಿಸುತ್ತಿದ್ದರು.ಹತ್ತಿರದಊರಿಗೆ ಹೋಗಿ ಭವತಿ ಭಿಕ್ಷಾಂದೇಹಿ ಅಂತ ಬೇಡಿ ತರುತ್ತಿದ್ದರು .ಅವರ ಅನ್ನ ಅವರೇ ದುಡಿಯಬೇಕು.ಸಹನಾವವತು ಸಹನವ್ ಭುನಕ್ತು ಎಂದರೆ ಇದು ಅರ್ಥ.ನಮ್ಮ ಸಹಪಾಠಿಗಳು ಮಾಡುವ ಊಟ ನಮಗೆ ಬೇಡ ,ಬಡಾ ಖಾನ ಬೇಕೆಂದರೆ ಏನರ್ಥ'' ?ಎ೦ದ ರಂತೆ.

ಒಮ್ಮೆ ಕಾಳಿದಾಸ ಜಯಂತಿಯಂದು ಅವರು ಮಾಡಿದ ಆಶು ಭಾಷಣ ಸಂಸ್ಕೃತ ವಿದ್ವಾಂಸರು ಮಾಡಿದ್ದುದಕ್ಕಿಂತಲೂ ಅಮೋಘ ವಾಗಿತ್ತುಎಂದು ಭೈರಪ್ಪ ಅಭಿಪ್ರಾಯ ಪಡುತ್ತಾರೆ.

                                        List of Chief Minister of Gujarat with Bio and Timeline - Cool Gujarati |  All about Gujarat and Gujaratis

ಮುಂದೆ ಇದೆ ಭಾಬು ಭಾಯಿ ೧೯೭೭ ರಲ್ಲಿ ಗುಜರಾತಿನ  ಮಂತ್ರಿ  ಮತ್ತು  ಮುಖ್ಯ ಮಂತ್ರಿ ಗಳಾದರು. ಮಂತ್ರಿಗಳಾಗಿದ್ದಾಗ ಅವರ ವೇಷ ಭೂಷಣಸರಳ ಉಡುಪು ಕೈಯ್ಯಲ್ಲಿ ಒಂದು ಹತ್ತಿ ಬಟ್ಟೆಯ ಚೀಲ .ಅದಿಕೃತ ಪ್ರವಾಸ ವೇಳೆಯಲ್ಲಿ ಅವರುಪಯಣಿಸುತ್ತಲೇ ಊಟ ಉಪಹಾರ ಮುಗಿಸುತ್ತಿದ್ದರು .ಅದಕ್ಕಾಗಿ ಪ್ರವಾಸಿ ಬಂಗಲೆಗೆ ಹೋಗುತ್ತಿರಲಿಲ್ಲ .ಮಂತ್ರಿಯಾಗಿರುವಾಗ ತಮ್ಮ ಸಮಯ ವೆಲ್ಲ ಸಾರ್ವ ಜನಿಕರಿಗೆ ಮೀಸಲಿರಬೇಕೆಂಬುದು ಅವರ ನಂಬಿಕೆ.ಇನ್ನು ಸರಕಾರಿ ವೆಚ್ಚದಲ್ಲಿ ಐಶಾರಮಿ ಹೋಟೆಲುಗಳಿಗೆ (ಈಗಿನ ರಾಜಕಾರಿಣಿಗಳಂತೆ) ಹೋಗುವ ಮಾತೆಲ್ಲಿ?

 ಅವರು ಮಂತ್ರಿ ಯಾಗಿದ್ದಾಗ ವಾರಕ್ಕೆ ಒಮ್ಮೆ ಅಹಮದಾಬಾದ್ ನಿಂದ ತಮ್ಮ ಊರು  ನಾನ್ದ್ಯಾದ್ ಗೆ ಸರಕಾರೀ ಬಸ್ ನಲ್ಲಿ ಬರುತಿದ್ದರು.ತಮ್ಮ ಮನೆಗಿಂತ ನಾಕು ನೂರು  ಯಾರ್ಡ್ ಮೊದಲಿನ ಬಸ್ ಸ್ಟಾಪ್ ನಲ್ಲಿ ಇಳಿದು ನಡೆಯುತ್ತಿದ್ದರು.(ಅವರ ಮನೆ ರಸ್ತೆ ಬದಿಯಲ್ಲಿ ಇದ್ದರೂ  ಎಕ್ಸ್ ಪ್ರೆಸ್ ಬಸ್ ಸ್ಟಾಪ್ ಇರಲಿಲ್ಲ ) ಬೇಕೆಂದರೆ ಡ್ರೈವರ್ ಇವರ ಮನೆಯ ಮುಂದೆ ನಿಲ್ಲಿಸುತ್ತಿದ್ದ. ಇದರಲ್ಲಿ ಕಷ್ಟ ವಾಗುತ್ತಿದ್ದುದು ಆ ಭಾಗದ ರೆವೆನ್ಯೂ ವಿಭಾಗದ ಮುಖ್ಯನಿಗೆ .ಸಚಿವರು ತನ್ನ ಏರಿಯಾಕ್ಕೆಬರುವಾಗ ರಾಜ ಮರ್ಯಾದೆಗಳೊಂದಿಗೆ  ಸ್ವೀಕರಿಸುವುದು ಪ್ರೋಟೋಕಾಲ್ ಅಲ್ಲವೇ? ಆದರೆ ಭಾಬು ಭಾಯಿ ನೀವು ಬರುವ ಅವಶ್ಯಕತೆವಿಲ್ಲ :ನಾನು ನನ್ನ ಮನೆಗೆ ಹಿಂತಿರುಗುತ್ತಿದ್ದೇನೆ ಅಷ್ಟೆ ಎಂದರಂತೆ.

 

ಮೂಲ  ೧ ಭಿತ್ತಿ  ಲೇ ಎಸ ಎಲ್ ಭೈರಪ್ಪ

          ೨ The Insiders View by Javid Choudhury

 

ಬುಧವಾರ, ಡಿಸೆಂಬರ್ 23, 2020

ನೋವು ವರವೋ ಶಾಪವೊ ?

        ನೋವು ವರವೋ ಶಾಪವೋ ?

ಅಂತರ ರಾಷ್ಟೀಯ ನೋವು ಅಧ್ಯಯನ ತಜ್ಞರ ವ್ಯಾಖ್ಯೆ ಯ ಪ್ರಕಾರ "ನೋವು ಎಂದರೆ ಜೀವಕೋಶಗಳಿಗೆ ನೈಜ ,ಪ್ರಚ್ಚನ್ನ ಹಾನಿ ಅಥವಾ ಕಲ್ಪಿತ ಹಾನಿಯಿಂದ ಉಂಟಾಗುವ    ಅಹಿತಕರ ಸಂವೇದನಾ  ಮತ್ತು ಭಾವನಾತ್ಮಕ ಅನುಭವ ,"

ಈ ವ್ಯಾಖ್ಯೆ ಓದಿ ತಲೆ ನೋವು ಬಂದಿತೋ ?

ನಮ್ಮ ಶರೀರದಾತ್ಯಂತ ನೋವಿನ  ಸೆನ್ಸಾರ್ ಗಳು ಇವೆ .ಇವು ನೋವು ಉಂಟು ಮಾಡುವ ಕ್ರಿಯೆಯನ್ನು ಗ್ರಹಿಸಿ ನರಗಳ ಮೂಲಕ (ಅವಯವಗಳಿಂದ ಬೆನ್ನು ಹುರಿಯ ಮೂಲಕ ,ಮುಖದಿಂದ ನೇರವಾಗಿ )ಮೆದುಳಿಗೆ ರವಾನಿಸುತ್ತವೆ .ಅಲ್ಲಿ ಬಂದ ಸಂದೇಶದ ವಿಶ್ಲೇಷಣೆ ಆಗಿ ನೋವಿನ ಅರಿವಾಗಿ ,ರಕ್ಷಣಾ ಕಾರ್ಯಕ್ಕೆ ಆದೇಶ ಹೋಗುವುದು . 

ನೋವಿನಲ್ಲಿ ಸ್ಥೂಲ ವಾಗಿ ನಾಲ್ಕು ಪ್ರಬೇಧಗಳು . 

೧.  ಗಾಯದಿಂದ ಆದ  ನೋವು 

೨  ಗಾಯ ,ಏಟು ,ಸೋಂಕು ,ಸ್ವಯಮ್ ನಿರೋಧಕ (autoimmune )ಪ್ರತಿಯಾಗಿಅಂಗಗಳಲ್ಲಿ ಆಗುವ ಉರಿಯೂತದ (inflammation )ನೋವು .ಉದಾ ಅಪ್ಪೆಂಡಿಸೈಟಿಸ್ ,ರುಮಟಾಯ್ಡ್ ಆರ್ಥ್ರೈಟಿಸ್ ,ಕೈಕಾಲಿನ ಗಾಯ  ಸೋಂಕು (ಇನ್ಫೆಕ್ಷನ್)

೩.  ಸ್ಪರ್ಶ ವಾಹಕ ನರಗಳಿಗೇ  ಕಾಯಿಲೆ ಉದಾ ಡಯಾಬಿಟಿಕ್ ನ್ಯೂರೋಪತಿ ,ನರ ಕೋಟಲೆ (ಸರ್ಪಸುತ್ತು ). 

೪ ವಿನಾ(ಕಾರಣ  ಕಂಡು ಹಿಡಿಯಲಾಗದ )ಕಾರಣ ನೋವು . ಉದಾ ಮನಸಿನ ಉದ್ವೇಗ

ನೋವು ನಮಗೆ ವರ .ಉದಾಹಣೆಗೆ ಸಕ್ಕರೆ ಕಾಯಿಲೆ ಇರುವ ಕೆಲವರಲ್ಲಿ ನೋವು ವಾಹಕಗಳು ನಿಷ್ಕ್ರಿಯ ವಾಗಿರುತ್ತವೆ .ಅವರು ಕಾಲಿಗೆ ಗಾಯ ವಾದರೆ ನೋವು ಇರದ ಕಾರಣ ನಿರ್ಲಕ್ಷ್ಯ ಮಾಡಿ ಕೂಡಲೇ ಚಿಕಿತ್ಸೆ ಮಾಡಲುಹೋಗರು .ಇದರಿಂದ ಸೋಂಕು ಅವರ ಅರಿವಿಲ್ಲದೇ  ಉಲ್ಬಣಿಸಿ ಕಾಲಿಗೆ ಮತ್ತು ಕೆಲವೊಮ್ಮೆ ಜೀವಕ್ಕೆ ಸಂಚಕಾರ ಬರ ಬಹುದು .ಇದೇ  ರೀತಿ ಹೃದಯಾಘಾತ ಆದಾಗ ಇಂತಹವರಿಗೆ ಎದೆ ನೋವು ಇರದು ..ಕಾರಣ  ಗಂಭೀರತೆ ಗಮನಕ್ಕೆ ಬಾರದೆ ತೊಂದರೆ ಆಗುವುದು . 

ಇನ್ನು ಹೆರಿಗೆ ನೋವನ್ನೇ ತೆಗೆದು ಕೊಳ್ಳೋಣ .ಒಂದು ವೇಳೆ ಈ ನೋವು ಇಲ್ಲದಿದ್ದರೆ 

ಹೆರಿಗೆ ಯ ಮುನ್ಸೂಚನೆ ಇರುತ್ತಿರಲಿಲ್ಲ .ನೋವು ಆರಂಭ ಆದೊಡನೆ ಸುರಕ್ಷಿತ ತಾಣ ,ಬೇಕಾದ ಪರಿಕರಗಳ ಜೋಡಣೆ ಮಾಡುವುದರಿಂದ ತಾಯಿ ಮಗು ಆರೋಗ್ಯವಾಗಿ ಇರುವರು .ಕೆಲವೊಮ್ಮೆ ನೋವಿಲ್ಲದೇ  ಕ್ಷಣ ಮಾತ್ರದಲ್ಲಿ ಬಾತ್ರೂಮ್ ನಲ್ಲೋ ದಾರಿಯಲ್ಲೋ ಹೆರಿಗೆ ಆದ  ವಾರ್ತೆ ನೀವು ಓದಿರಬೇಕು . 

ಒಳ ಅಂಗಗಳಿಗೆ ಸೋಂಕು ಆದಾಗ ನೋವು ಬಂದರೆ ಮಾತ್ರ ನಮಗೆ ತಿಳಿಯುವುದು .ಉದಾ ಅಪ್ಪೆಂಡಿಸಿಟಿಸ್ ,ಪಿತ್ತ ಕೋಶದ ಸೋಂಕು ಇತ್ಯಾದಿ . 

ಮೂತ್ರ ಪಿಂಡದ ಕಲ್ಲು ಕೆಳಗೆ ಜಾರಿ ಹೊರ ಹೋಗುವಾಗ ನೋವು ಬರುವುದು (ಹೆರಿಗೆ ನೋವಿನಂತೆ ).ಕೆಲವು ಕಲ್ಲುಗಳು ಮೂತ್ರ ಪಿಂಡದ ಒಳಗೇ ವೇದನಾ ರಹಿತ ವಾಗಿ ಬೆಳೆದು ಈ ಅಂಗಕ್ಕೇ  ಸರಿಪಡಿಸಲಾಗದ ಹಾನಿ  ಮಾಡುವವು . 

ನೋವು ಉಂಟು ಮಾಡದೇ ಬೆಳೆವ ಗಡ್ಡೆಗಳು  ಉಂಟುಮಾಡುವ ಗಡ್ಡೆಗಳಿಗಿಂತ ಹೆಚ್ಚು ಅಪಾಯಕಾರಿ ಅದೇ ರೀತ ವೇದನಾರಹಿತ ಗಾಯ,ಹುಣ್ಣುಗಳೂ.

 

ಮಂಗಳವಾರ, ಡಿಸೆಂಬರ್ 22, 2020

ದಂತ ಕತೆ

                                                        ದಂತ ಕತೆ

 

ಕೆಲವು ವರ್ಷಗಳ ಹಿಂದೆ ದಂತ ವೈದ್ಯಕೀಯ ಸಂಘದ ಸಮಾರಂಭ ಕ್ಕೆ ನನ್ನನ್ನು ಅತಿಥಿಯಾಗಿ ಕರೆದಿದ್ದರು .ನಾನು ದಂತ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೆನಾದರೂ ಇಂತಹ ಸಭೆಯಲ್ಲಿ ಭಾಷಣ ಮಾಡಿದವನಲ್ಲ .ಪ್ರಥಮ ಚುಂಬದಲ್ಲಿ  ದಂತ ಭಗ್ನ ವಾದರೇ ?ಆಮೇಲೆ ಹಾಗೆ ಆದರೂ ಹೋಗುವುದು ದಂತ ವೈದ್ಯರ ಸಭೆಗೇ ಅಲ್ಲವೇ ಎಂದು ಧೈರ್ಯದಿಂದ ಹೋದೆನು . 

 ದಂತ ವೈದ್ಯ ಶಾಸ್ತ್ರವೂ ಈಗ ಬಹಳ ಮುಂದುವರಿದಿದೆ .ಮಕ್ಕಳ ಹಲ್ಲು ಕಾಯಿಲೆ .ಹಲ್ಲಿನ ಸುತ್ತ ಮುತ್ತ (ನಿಧಿ ಸೇರಿ),ಹಲ್ಲಿನ ಕಾಯಿಲೆ ,ಅದರಲ್ಲೂ ಬೇರಿನ ರೋಗ ,ವಕ್ರದಂತ ನಿವಾರಣೆ ,ದಂತ ಭಗ್ನ ಸರಿಪಡಿಸುವಿಕೆ ,ದವಡೆ ಮತ್ತು ಹಲ್ಲಿನ ಶಸ್ತ್ರ ಚಿಕಿತ್ಸೆ ,ಬಾಯಿ ಕಾಯಿಲೆಗಳು ಇತ್ಯಾದಿ  ಪ್ರತ್ಯೇಕ  ಶಾಖೆಗಳು ಹುಟ್ಟಿವೆ ..ಇವರ ಕೃಪೆಯಿಂದ ಓರೆ ಹಲ್ಲಿನ ಕೋರೆ ದವಡೆಯ ನತದೃಷ್ಟರು ಐಶ್ವರ್ಯ ರೈ ಯಂತೆ ಆಗುವರು.ಮೂಕಂ ಕರೋತಿ ವಾಚಾಲಂ  ಪಂಗು ಲಂಗೈತಿ ಗಿರಿ ಆದಂತೆ ಯತ್ ಕೃಪಾ 

                    ಹಿಂದೆ ಅಜ್ಜ ಅಜ್ಜಿಯರು ಅಡಿಕೆ ಹೋಳು ,ಚಕ್ಕುಲಿ ಇತ್ಯಾದಿಗಳನ್ನು ಸವಿಯಲು ಕೆಳಗೆ ಕಾಣಿಸಿದ ಉಪಕರಣ ದಲ್ಲಿ ಪುಡಿ ಮಾಡಿ ತಿನ್ನ ಬೇಕಿತ್ತು ..ಈಗ ಅವರು ನೇರವಾಗಿ ಕಡಿದು ತಿನ್ನುವರು .ಇದರಿಂದ ಚಿಪ್ಸ್ ಚಕ್ಕುಲಿ ಬೆಲೆ ಏರಿವೆ .ಮದುವೆ ಇತ್ಯಾದಿ ಸಮಾರಂಭಗಳಲ್ಲಿ  ಆಣತಿಯಂತೆ ನಮಸ್ಕಾರ ಮಾಡಲು ಹಿರಿಯರನ್ನು ಹುಡುಕಿದರೆ ಎಲ್ಲರೂಕೃತಕ ದಂತ ಮತ್ತು ವರ್ಣಲೇಪಿತ ಕೇಶ ಅಲಂಕೃತರಾಗಿ ಎನಗಿಂತ ಎಲ್ಲರೂ ಎನಗಿಂತ ಕಿರಿಯರಯ್ಯಾ ಎಂದು ತೋರಿ ಗಲಿಬಿಲಿ ಆಗುವುದು 

            ನಮ್ಮಂತೆ ದಂತ ವೈದ್ಯರಿಗೆ  ಅಕಾರಣ ವಾಚಾಳಿ ರೋಗಿಗಳ  ಭಯ ಇಲ್ಲ .ಯಾಕೆಂದರೆ ಚಿಕಿತ್ಸೆ    ಸಮಯ  ಬಾಯಿ ಮೂಜಗ ತೋರುವ ಕೃಷ್ಣನಂತೆ ತೆರೆದು ಕುಳಿತು ಕೊಳ್ಳ ಬೇಕಾಗುವುದು ..ನಂತರವೂ ಹಲ್ಲಿನ ನಡುವೆ ಹತ್ತಿ ಇಟ್ಟು ಬಾಯಿ ತೆರೆಯದಂತೆ ಮಾಡುವರು .ಇವರನ್ನು ಕಂಡು  ನಮಗೆ  ಅಸೂಯೆ ಆಗುವುದು

 

ಹುಲು ಮನುಜ ಲೋಕದೊಳು ತಪಸ್ವಿಯೋರ್ವನು ಘೋರ ತಪಸ್ಸಿಗೆ ಕೂರೆ ಎಂದಿನಂತೆ ದೇವೇಂದ್ರನ ಸಿಂಹಾಸನ  ಗಡ ಗಡ ಅಡ ತೊಡಗಿತು .ಮಾಮೂಲಿ ವರಸೆಯಾದ ಅಪ್ಸರೆಯರನ್ನು ಕಳುಹಿ ತಪೋ ಭಂಗ ಮಾಡ ಬೇಕು .ಈ ಸುದ್ದಿ ಕಿವಿಗೆ ಬಿದ್ದ ಮೇನಕೆ ಮತ್ತು ಊರ್ವಶಿ ,"ಯಾವಾಗಲೂ ನಾವೇ ಯಾಕೆ ಹೋಗಬೇಕು  ,ರಂಭೆ ತಿಲೋತ್ತಮೆ ಯಾವಾಗಲೂ ವಿಶ್ವಕರ್ಮ ನಿರ್ಮಿತ ರಂಗಸ್ಥಳ ಬಿಟ್ಟು ಹೊರಗಡೆ ಒಂದು ಹೆಜ್ಜೆ ಹಾಕುವುದಿಲ್ಲ ,ನಾವು ಭೂಲೋಕದ ಕಾಡಿನಲ್ಲಿ ಕಲ್ಲು ಮುಳ್ಳುಗಳ ಮೇಲೆ ನೃತ್ಯ ಮಾಡಿ ಮುನಿಪ ಮುನಿಯ ಶಾಪ ತಾಪಗಳಿಗೆ ತುತ್ತಾದರೂ ಆದೇವೆ .ತಪ ಭಂಗ ಮಾಡಿ ದರೂ ಕೂಡಲೇ ವಾಪಸ್ಸು ಬರಲು ಆಗುವುದಿಲ್ಲ .ನರನೊಡನೆ ಬಾಳಿ ,ಮಗುವನ್ನು ಹೆತ್ತು ,ಪೋಷಿಸಿ ,ಬೆನ್ನು ಬಾಗಿ ,ಹಲ್ಲು ಉದುರಿ ,ಕೂದಲು ಬೆಳ್ಳಗೆ ಆಗಿ ನಾವು ಮಾಜಿಗಳಾಗುತ್ತೇವೆ ."ಎಂದು ಪ್ರತಿಭಟನೆ ಸುರು ಮಾಡಿದರು .(ಎಂತಾದರೂ ಭೂಲೋಕ ರಿಟರ್ನ್ಡ್ ಅಲ್ಲವೇ ).ಈ ಸುದ್ದಿ ಕೇಳಿ ಚಿಂತಾಕ್ರಾಂತನಾದ ದೇವಂದ್ರ ಬೃಹಸ್ಪತಿಯ ಸಲಹೆ ಕೇಳಲು ,ಅವನು "ಎಲೈ ಸಚಿ ಪತಿಯೇ ಮನುಜ ಲೋಕದಲ್ಲಿ ಮಕ್ಕಳಾಗದಂತೆ ಕುಟುಂಬ ಯೋಜನೆ ಎಂಬ ಸುಲಭ ಯೋಜನೆ ತಂದಿರುವರು .ಹಲ್ಲು ಉದುರಿದರೆ ದಾಳಿಂಬೆ ನಾಚಿಸುವ ಕೃತಕ ದಂತ ಪೋಣಿಪರು ,ಕೇಶ ಬಿಳುಪು ಮರೆಯಾಗಿಸುವ ಬಣ್ಣಗಳೂ ಇವೆ ಜತೆಗೆ ಸೌಂದರ್ಯ ತಜ್ಞೆಯರು . ಈ ವಿಚಾರ ದೇವ ನರ್ತಕಿಯರಿಗೆ ತಿಳಿಸಿ ಕಳುಹಿಸುವುದು "ಎಂದು ಸಮಸ್ಯೆ ಪರಿಹಾರ ಮಾಡಿದನು ಎಂಬ ಪ್ರತೀತಿ ಇದೆ .

                          
Metal Copper Mortar And Pestle Isolated On White Background Stock Photo -  Download Image Now - iStock


ಮಂಗಳವಾರ, ಡಿಸೆಂಬರ್ 15, 2020

ಮಂಗಳೂರಿನ ನಿವಾಸಿ (ಮೊದಲನೇ ಕಂತು )

 ಪುತ್ತೂರಿಗೆ ಲೈಟ್ ಎಂಜಿನ್ ಆಗಿ ಬಂದ  ನಾನು ಪತ್ನಿ ಪುತ್ರರೆಂಬ ಬೋಗಿಗಳು ಸೇರಿ ಪೂರ್ಣ ಪ್ರಮಾಣದ ಟ್ರೈನ್ ಆಗಿ ಮಂಗಳೂರು ರೈಲ್ವೆ ಆರೋಗ್ಯ ಕೇಂದ್ರಕ್ಕೆ ಬಂದೆ .ಮಂಗಳೂರು ಅಥವಾ ಮಂಗಳಾಪುರಂ ಪಾಲಕ್ಕಾಡ್ ವಿಭಾಗಕ್ಕೆ ಸೇರಿದ್ದು ಮೈಸೂರು ವಿಭಾಗಕ್ಕೆ ವಿದಾಯ ಹೇಳಿದೆನು .ಕಂಕನಾಡಿ ಯಿಂದ (ಈಗಿನ ಮಂಗಳೂರು ಜಂಕ್ಷನ್ )ಮಂಗಳೂರು ಸೆಂಟ್ರಲ್ ,ದಕ್ಷಿಣಕ್ಕೆ ತ್ರಿಕಾರಿಪುರ ,ಉತ್ತರಕ್ಕೆ  ನವಮಂಗಳೂರು ಬಂದರು ವರೆಗೆ ನನ್ನ ಸುಪರ್ದಿ .ದೊಡ್ಡ ಸಾಮ್ರಾಜ್ಯ .ಪಾಲಕ್ಕಾಡ್ ವಿಭಾಗ ಒಳ್ಳೆಯ ಆಡಳಿತ ,ಸ್ವಚ್ಛತೆ ಗೆ ಹೆಸರು ವಾಸಿ  .ಇಲ್ಲಿಯ ನೌಕರರು ವಿದ್ಯಾವಂತರು ಮತ್ತು ಒಳ್ಳೆಯದನ್ನು ಗುರುತಿಸುವವರು .ನನ್ನ ಇಲ್ಲಿಯ ಅವಧಿ ಸಂತೋಷ ಕರ ಆಗಿತ್ತು .ಅರೋಗ್ಯ ಕೇಂದ್ರದಲ್ಲಿ ಮ್ಯಾಥ್ಯು  ಎಂಬವರು ಫಾರ್ಮಾಸಿಸ್ಟ್ ಆಗಿದ್ದು ಅವರ ನಂತರ ಮೊದಲು ನನ್ನ ಜತೆಗೆ ಇದ್ದ ವಿಜಯನ್  ಬಂದರು .ನನ್ನ ವಸತಿ ಗೃಹ ಪ್ರಶಾಂತ ವಾತಾವರಣ ದಲ್ಲಿ ಇದ್ದು ,ಹಂಪನಕಟ್ಟೆ ,ಮಾರುಕಟ್ಟೆಗೆ ಸಮೀಪ ಇತ್ತು .ಮಂಗಳೂರಿಗೆ ಬರುವಾಗಲೇ ನನಗೆ ಪದೋನ್ನತಿ ಆಗಿ  ನಾನು ಡಿವಿಶನಲ್ ಮೆಡಿಕಲ್ ಆಫೀಸರ್ ಆಗಿದ್ದೆ ,ಮಂಗಳೂರು ರೈಲ್ವೆ ಯಲ್ಲಿ ನಾನೇ ಅತ್ಯಂತ ಹಿರಿಯ .ಇಂಜಿನಿಯರಿಂಗ್ ವಿಭಾಗದಲ್ಲಿ ಅನಿಲ್ ಕುಮಾರ್ ಅಸ್ಸಿಸ್ಟ್ನಟ್ ಇಂಜಿನಿಯರ್ ಆಗಿದ್ದು ಅವರ ಕಚೇರಿ ಮತ್ತು ಮನೆ ನನ್ನ ನಿವಾಸದ ಪಕ್ಕ ಇತ್ತು . 

ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಶ್ರೀ ಕಿಟ್ಟಣ್ಣ ಶೆಟ್ಟಿ ಎಂಬ ಸಜ್ಜನರು ಸ್ಟೇಷನ್ ಸುಪರಿಂಟೆಂಡೆಂಟ್ ಆಗಿದ್ದು ಜನಾನುರಾಗಿ ಆಗಿದ್ದರು .ಪರ್ಮನೆಂಟ್ ವೆ ಇನ್ಸ್ಪೆಕ್ಟರ್ ಆಗಿ ಯೂ  ಓರ್ವ ಶೆಟ್ಟರು ,ವರ್ಕ್ಸ್ ಇನ್ಸ್ಪೆಕ್ಟರ್ ಆಗಿ ಕಮ್ಮಾರನ್ ,ವಿದ್ಯುತ್ ವಿಭಾಗದಲ್ಲಿ ಶಶಿಧರನ್ (ಮುಂದೆ ಚೆನ್ನೈ ನಲ್ಲಿ ನನಗೆ ಜತೆ ಆಗುವವರು ),ಮೆಕ್ಯಾನಿಕಲ್ ವಿಭಾಗದಲ್ಲಿ ಓರ್ವ ಕ್ರಿಶ್ಚಿಯನ್ ಅಧಿಕಾರಿ (ಹೆಸರು ಜ್ಞಾಪಕ ಬರುತ್ತಿಲ್ಲ ,ಪಾದರಸದಂತೆ ಚುರುಕು )ಇದ್ದು ಎಲ್ಲರೂ ಒಂದು ಕುಟುಂಬದಂತೆ ಕೆಲಸ ಮಾಡುತ್ತಿದ್ದರು . 

ಊಟಿ ಮತ್ತು ಕೂನೂರ್  ಪಾಲಕ್ಕಾಡ್ ವಿಭಾಗಕ್ಕೆ ಸೇರಿದ್ದು ನಮ್ಮ ಕುಟುಂಬ ಒಮ್ಮೆ ಅಲ್ಲಿಯ ಪ್ರವಾಸ ಕೈಕೊಂಡಿತು .ಕೂನೂರ್ ನಲ್ಲಿ ಎತ್ತರದ ಪ್ರದೇಶದಲ್ಲಿ ರೈಲ್ವೆ ವಿಶ್ರಾಂತಿ ಗೃಹ ಇದೆ . ಮೆಟ್ಟು ಪಾಳಯಂ  ನಿಂದ  ಕೂನೂರ್  ವರೆಗಿನ ತೆರೆದ ರೈಲು ಪ್ರಯಾಣ ವಿಶೇಷ ಅನುಭವ .ಅಲ್ಲಲ್ಲಿ ನಿಂತು ಓದುವ ಬಂಡಿ . 

                             







                                                              Nilgiri Mountain Railway - Wikipedia

ಇದರ ನಡುವೆ ಸಾಯಂಕಾಲ ನಾನು ಭಾರತೀಯ ವಿದ್ಯಾ ಭವನ ಮ್ಯಾನೇಜ್ಮೆಂಟ್ ಕಾಲೇಜು ಸೇರಿ ಒಂದು ವರುಷದ ಡಿಪ್ಲೋಮ ಇನ್ ಪರ್ಸನಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿ ಪರೀಕ್ಷೆ ಉತ್ತೀರ್ಣ ನಾದೆ .ಬಾವಟೆ ಗುಡ್ಡೆಯಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯ ದಿಂದ ಪುಸ್ತಕ ಎರವಲು ತಂದು ಓದುತ್ತಿದ್ದೆನು .ಲೇಡಿ ಗೋಷನ್ ಆಸ್ಪತ್ರೆ ಬಳಿ ಪಾಯ್ಸ್  ಟ್ರೇಡರ್ಸ್ ಎಂಬ ವೈನ್ ಸ್ಟೋರ್ ಇದೆ .ಅಲ್ಲಿ ಒಳ್ಳೆಯ ಚಹಾ ಪುಡಿ ಸಿಗುತ್ತಿದ್ದು ,ಅದು ಬರುವ ದಿನ ಮೊದಲೇ ತಿಳಿಸುತ್ತಿದ್ದರು .ಆದಿನ  ಸರತಿ ಸಾಲಿನಲ್ಲಿ ನಿಂತು ಕೊಂಡು ಬರುತ್ತಿದ್ದ ನೆನಪು .ಮಂಗಳೂರಿನಲ್ಲಿ ಬೇಸಗೆಯಲ್ಲಿ ಹಾಲು ಸರಿಯಾಗಿ ಸಿಗುತ್ತಿರಲಿಲ್ಲ .ನೆಂಟರು ಬಂದಾಗ ಕಷ್ಟ ಆಗುತ್ತಿತ್ತು .ರೈಲ್ವೆ ನಿಲ್ದಾಣ ಕ್ಯಾಂಟೀನ್ ನಡೆಸುತ್ತಿದ್ದ ಬಾಳಿಗಾ ಎಂಬವರು ನನ್ನ ರಕ್ಷಣೆಗೆ ಬರುತ್ತಿದ್ದರು .ಮಂಗಳೂರಿನಲ್ಲಿ ಆಗ ಕ್ರೀಡಾ ಪಟು ಮತ್ತು ಮತ್ಸ್ಯವೋದ್ಯಮಿ ಲೋಕನಾಥ ಬೋಳಾರ  ಕಾರ್ಮಿಕ ಕಲ್ಯಾಣ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದು ನನಗೆ ಒಳ್ಳೆಯ ಗೆಳೆಯರಾಗಿದ್ದರು .(ಮೊನ್ನೆ ಮೊನ್ನೆ ತೀರಿ  ಕೊಂಡರು ). 

ನನ್ನ ಯಾವತ್ತಿನ ಕೆಲಸಗಳ ಜತೆ ನಾನು ನೂತನ ಕಾರ್ಯಕ್ರಮಗಳನ್ನು ಆರಂಭಿಸಿದೆನು .ಆಗ ತಾನೇ ಆರಂಭವಾಗಿದ್ದ  ಏ ಬಿ ಶೆಟ್ಟಿ ಡೆಂಟಲ್ ಕಾಲೇಜು ನಲ್ಲಿ ನನ್ನ ಹಿರಿಯ ಸ್ನೇಹಿತ ಡಾ ರಾಜೇಂದ್ರ ಪ್ರಸಾದ್ ಇದ್ದರು ,ಅವರ ಸಹಾಯದಿಂದ ಡೆಂಟಲ್ ಕ್ಯಾಂಪ್ ನಡೆಸಿದೆವು .ಇದು ಬಹಳ ಜನಪ್ರಿಯ ಆಗಿ ಮೇಲಧಿಕಾರಿಗಳಿಂದ ನನಗೆ ಪ್ರಶಂಷಾ ಪತ್ರ ಬಂದಿತು .ಇದರ ಜತೆ ಮಂಗಳೂರಿನ ಪ್ರಸಿದ್ಧ ವೈದ್ಯರನ್ನು ಕರೆಯಿಸಿ ಕಾಲೋನಿ ನಿವಾಸಿಗಳಿಗೆ ಅರೋಗ್ಯ ವಿಚಾರ ಮಾಹಿತಿ ಭಾಷಣ ಪ್ರಾತ್ಯಕ್ಷಿಕೆ ನಡೆಸಿದೆವು .ಕೇಂದ್ರ ಸರ್ಕಾರದ ವಾರ್ತ ಮತ್ತು ಪ್ರಸಾರ ಇಲಾಖೆಯವರಿಂದ ಅರೋಗ್ಯ ಬಗ್ಗೆ  ಚಲಚಿತ್ರ ಪ್ರದಶನ ನಡೆಸಿದೆವು .ಆಗಿನ್ನೂ ಟಿ ವಿ ಎಲ್ಲರ ಮನೆಗೆ ಬಂದಿದ್ದಿಲ್ಲ ,ನಮ್ಮ ಸಿನೆಮಾ ಶೋ ಜನಪ್ರಿಯ ಆಯಿತು .ಮಂಗಳೂರಿನಲ್ಲಿ ಫೈಲೇರಿಯ ಹಾವಳಿ ಇದೆ ತಾನೇ .ಅದರ ಅಧ್ಯಯನ ಮಾಡಲು ಕಾಲೋನಿ ವಾಸಿಗಳ ರಕ್ತ  ಸ್ಯಾಂಪಲ್ ರಾತ್ರಿ ಹೊತ್ತು ಸಂಗ್ರಹಿಸಿ ಮಂಗಳೂರು ಕೆ ಎಂ ಸಿ ಯ ಮೈಕ್ರೋ ಬಯಾಲಜಿ ವಿಭಾಗದಿಂದ ಪರೀಕ್ಷೆ ಮಾಡಿಸಿದೆವು .ಇದರಿಂದ ರೋಗದ ವ್ಯಾಪಕತೆ ಯ ಅರಿವು ಆಯಿತು .ಸಾರ್ವತ್ರಿಕ ವಾಗಿ ಫೈಲೇರಿಯಾ ಔಷಧಿ ವಿತರಿಸಿದೆವು ಮತ್ತು ಸೊಳ್ಳೆ ನಿರೋಧಕ ಕ್ರಮ ಅಧಿಕ ಉತ್ಸಾಹದಿಂದ ನಡೆಯಿತು .ಮೇಲ್ಕಾಣಿಸಿದ ಕೆಲಸಗಳು ನನ್ನ ಸಾಮಾನ್ಯ ಕಾರ್ಯ ವ್ಯಾಪ್ತಿ ಪ್ರದೇಶದಿಂದ ಹೊರಗೆ ಆದರೂ ನಮ್ಮ ಹುದ್ದಗೆ ಹೆಚ್ಚು ಅರ್ಥ ಕೊಡುವ ಶಕ್ತಿ ನಮ್ಮ ಕೈಯಲ್ಲಿ ಇದೆ ಎಂದು ತೋರಿಸಿ ಕೊಟ್ಟ ಸಂತೋಷ .

ಮಂಗಳೂರಿನಲ್ಲಿ ನನ್ನ ಮೊದಲ ಟಿ ವಿ ಕಂತಿನಲ್ಲಿ ಕೊಂಡದ್ದು . ವಿಡಿಯೋಕಾನ್ ಕಲರ್ ಟಿ ವಿ .ಆಗ ಚಿತ್ರಹಾರ್ ,ರಾಮಾಯಣ ,ಒಲಿಯುಮ್ ಒಲಿಯುಮ್ .ಸುರಭಿ ಮತ್ತು ವಾಗ್ಲೆ ಕಿ ದುನಿಯಾ ಜನಪ್ರಿಯ .ಈಗಿನ ಖಾಸಗಿ ನ್ಯೂಸ್ ಚಾನೆಲ್ ಗಳ  ಹಾವಳಿ ಇರಲಿಲ್ಲ . 

ನಾನು ಮಂಗಳೂರಿನಲ್ಲಿ ಇರುವಾಗ ನಡೆದ ಪ್ರಮುಖ ಘಟನೆ ಕೊಂಕಣ್ ರೈಲ್ವೆ ಕಾಮಗಾರಿ ಉದ್ಘಾಟನೆ .ಈ ಕಾರ್ಯಕ್ರಮದಲ್ಲಿ ಆಧಿಕಾರಿಕವಾಗಿ ಪಾಲ್ಗೊಳ್ಳುವ ಸದವಕಾಶ ನನಗೆ ದೊರೆಯಿತು .೧೯೯೦ ಸೆಪ್ಟಂಬರ್ ೧೫ ಎಂದು ನೆನಪು. ಭಾರತದ  ಪಶ್ಚಿಮ ಕರಾವಳಿಯ  ಬಹು ದಿನಗಳ ಕನಸು                               
ನೆನಸಾಗುವ   ಸುವರ್ಣ ಘಳಿಗೆ.ಕೊಂಕಣ ರೈಲ್ವೆ ಕಾಮಗಾರಿ ಆರಂಬಿಸುವ ಸಮಾರಂಭ ಉಡುಪಿಯ ಇಂದ್ರಾಳಿಯಲ್ಲಿ .

ನಾನು ಆಗ ಮಂಗಳೂರು ರೈಲ್ವೆ ವೈದ್ಯಾದಿಕಾರಿ..ರೈಲ್ವೆಯಲ್ಲಿ  ಕನ್ನಡೇತರರೆ ಹೆಚ್ಚು.ಅದರಿಂದ ಆಹ್ವಾನಿತ  ಅತಿಥಿಗಳ ಪರಿಚಯ ಅವರಿಗಿರಲಿಲ್ಲ

ಡಾ ವಿ ಎಸ ಆಚಾರ್ಯ ,ಶ್ರೀ ಬಿ ಎಂ ಇದಿನಬ್ಬ (ಆಗ M L A ಆಗಿದ್ದರು.),ಇತರರನ್ನು ಗುರುತಿಸಿ ಕುಳ್ಳಿರಿಸುವ ಕೆಲಸ ನನಗಾಯಿತು.

ಕರಾವಳಿಯ ಹೆಮ್ಮೆಯ ಪುತ್ರ ಜೋರ್ಜ್ ಫೆರ್ನಾಂಡಿಸ್ ಉದ್ಘಾಟಕರು. ಆಗ ಅರ್ಥ ಮಂತ್ರಿಯಾಗಿದ್ದಮಧು ದಂಡಾವತೆ ಯವರದ್ದು ಪೂರ್ಣ ಬೆಂಬಲ. ನನ್ನ ಪಕ್ಕ ಇದಿನಬ್ಬ ಇದ್ದರು. ಕಾರ್ಯಕ್ರಮ ಪಲಕಗಳು ಇಂಗ್ಲಿಶ್ ನಲ್ಲಿ ಇದ್ದುದು ಕಟ್ಟಾ ಕನ್ನಡ ಪ್ರೇಮಿಯಾದ ಅವರಿಗೆ ಅಸಮಾಧಾನ .ಅದನ್ನು ನನ್ನಲ್ಲಿ ಹೇಳಿದರು ಕೂಡಾ

ಫೆರ್ನಾಂಡಿಸ್ ಅಚ್ಚ ಕನ್ನಡದಲ್ಲಿ ಮಾತನಾಡಿದರು.ಅವರು ಹೇಳಿದ ಒಂದು ವಾಕ್ಯ ನನಗೆ ನೆನಪಿದೆ.

'ಈ ಮಹಾತ್ವಾಕಾಂಕ್ಷೆಯ ಕೆಲಸ ನಾನು ಇರಲಿ ಇಲ್ಲದಿರಲಿ ವೇಳಾಪಟ್ಟಿಯಂತೆ ನಡೆಯುತ್ತದೆ. ದೇಶಪ್ರೇಮಿ ಮತ್ತು ಸಮರ್ಥರು ಆದ ಈ ಶ್ರೀಧರನ್ ಅವರು ಇದರ ನೇತೃತ್ವ ವಹಿಸುತ್ತಾರೆ.ಆದುದರಿಂದ  ಯಾವ ಸಂದೇಹವು ಬೇಡ.'ಕೇಂದ್ರ ಸಚಿವರು ಒಬ್ಬರು ಸೇವೆಯಲ್ಲಿ ಇರುವ ಅಧಿಕಾರಿಯನ್ನು ಬಹಿರಂಗವಾಗಿ ಪ್ರಶಂಸೆ ಮಾಡುವುದು ಅಪರೂಪ .


ನಮ್ಮ ರಾಜ್ಯದ  ಅತ್ಯುತ್ತಮ ಸಮರ್ಥ ದೂರ ದೃಷ್ಟಿ ಇದ್ದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅವರ ಟಿಪಿಕಲ್ ಗುಲ್ಬರ್ಗ ಕನ್ನಡದಲ್ಲಿ  ಮಾತು. ತಮ್ಮ ಪಕ್ಷ  ಬೇರೆಯಾದರೂ  ರಾಜ್ಯದ ಅಭಿವೃದ್ದಿ ಕಾರ್ಯದಲ್ಲಿ ಸಂಪೂರ್ಣ ಸಹಕಾರ ಇದೆ .ಸ್ಥಳೀಯ ಮಂತ್ರಿ ಮನೋರಮಾ ಮಧ್ವರಾಜ್  ರೈಲ್ವೆ ಯೋಜನೆಗೆ  ಜಮೀನು  ಕಳೆದು ಕೊಳ್ಳುವವರನ್ನು ಯಾರು ಕೇಳುವುದಿಲ್ಲ ಎಂದದ್ದ್ದಕ್ಕೆ ನಿಮ್ಮನ್ನೇ ಅದರ ಉಸ್ತುವಾರಿಗೆ  ನೇಮಿಸುತ್ತೇನೆ ಎಂದು ಸ್ಥಳದಲ್ಲಿಯೇ ಪಾಟೀಲ್ ಘೋಷಣೆ ಮಾಡಿದರು .


 
 
E. Sreedharan - WikipediaGeorge Fernandes - WikipediaVeerendra Patil | Chief Minister of Karnataka| Personalities

                   ಈ ಶ್ರೀಧರನ್                           ಜೋರ್ಜ್ ಫೆರ್ನಾಂಡಿಸ್              ವೀರೇಂದ್ರ ಪಾಟೀಲ್ 

 

 

 

ಕಾರ್ಯಕ್ರಮದಲ್ಲಿ ಎಲ್ಲರ ಕಣ್ಮಣಿ ಈ ಶ್ರೀಧರನ್  ಉಪಸ್ಥಿತರಿದ್ದರು.ಅವರುನಮ್ಮ ದೇಶದ ಹೆಮ್ಮೆಯ ಆಸ್ತಿ. ತಾಂತ್ರಿಕ ಕೌತುಕ  ಪಾ೦ಬನ್ ಸೇತುವೆ,ಹಾಸನ ಮಂಗಳೂರು ರೈಲ್ವೆ ಗಳ ರೂವಾರಿ.ಯಶಸ್ವಿಯಾಗಿ ಕೊಂಕಣ ರೈಲ್ವೆ ಕೆಲಸಮುಗಿಸಿದ ಅವರನ್ನು ದೆಹಲಿ ಮೆಟ್ರೋ ಕರೆಯಿತು.

ಮುಂದೆ ಕೊಂಕಣ ರೈಲ್ವೇ ನಿರ್ಮಾಣ ನಿಗಮ ಕಚೇರಿಗೆ ಯೋಗ್ಯ ಕಟ್ಟಡ ಹುಡುಕುವ ಕೆಲಸಕ್ಕಾಗಿ ಮಣಿಪಾಲಕ್ಕೆ ನಾನೂ ಹೋಗಿದ್ದೆ .ಸಿಂಡಿಕೇಟ್ ಬಂಕಿನ ಹಿರಿಯ ಅಧಿಕಾರಿ ಶ್ರೀ ಗಾಣಿಗ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಮ್ಯಾಜಿಕ್ ಶಂಕರ್ ನಮಗೆ ಸಹಾಯ ಮಾಡಿದ್ದ ನೆನಪು


 
ಲಾರಿಗಳ ರೋ ರೋ ಸೇವೆ 
 
ಕೊಂಕಣ ರೈಲ್ವೆ ವಿಹಂಗಮ ನೋಟ 

 
 
  ಮಂಗಳೂರಿನಿಂದ ನನಗೆ ಚೆನ್ನೈ ಪ್ರಸಿದ್ಧ ಪೆರಂಬೂರು ರೈಲ್ವೆ ಆಸ್ಪತ್ರೆಗೆ ವರ್ಗ ಆಯಿತು 


ಭಾನುವಾರ, ಡಿಸೆಂಬರ್ 13, 2020

ಒಂದನೇ ಅವಧಿಯ ಪುತ್ತೂರು ವಾಸ

            ಮೊದಲ ಅವಧಿಯ ಪುತ್ತೂರು ವಾಸ

ಪುತ್ತೂರು (ರೈಲ್ವೇ ಭಾಷೆಯಲ್ಲಿ ಕಬಕಪುತ್ತೂರು  )ರೈಲ್ವೇ ಆರೋಗ್ಯ ಕೇಂದ್ರದ ವೈದ್ಯರು ವರ್ಗಾವಣೆ ಅಪೇಕ್ಷೆ ಪಟ್ಟು ವಿನಂತಿ ಮಾಡಿಕೊಂಡ ಮೇರೆಗೆ ಆ ಜಾಗದಲ್ಲಿ ನನ್ನನ್ನು ನೇಮಿಸಲು ನಾನೇ ಕೇಳಿಕೊಂಡೆ .ಪುತ್ತೂರು ನನ್ನ ಊರು ಕನ್ಯಾನಕ್ಕೆ ಸಮೀಪ .ವಾರಕ್ಕೊಮ್ಮೆ ವಯೋವೃದ್ದ ಹೆತ್ತವರನ್ನು ಕಾಣಬಹುದು .ಅಲ್ಲದೆ ನನ್ನ ತಂಗಿಗೆ ಮದುವೆ ಮಾಡಿ ಆ ಮೇಲೆ ನಾನು ಮದುವೆ ಆಗ ಬೇಕಿತ್ತು .ಇದಕ್ಕೆಲ್ಲಾ ಊರ ಸಮೀಪ ಇದ್ದರೆ ಅನುಕೂಲ .ಇಲ್ಲಿಗೆ ಬರಲು ಬೇರೆ ಯಾರೂ ಸ್ಪರ್ದಿಗಳು ಇಲ್ಲದಿದ್ದರಿಂದ ಅನಾಯಾಸ ವಾಗಿ ಸಿಕ್ಕಿತು .ಮಂಗಳೂರು ಪಡೀಲ್ ನಿಂದ ನೆಟ್ಟಣ(ಸುಬ್ರಹ್ಮಣ್ಯ ರೋಡ್ ) ವರೆಗಿನ ಸಾಮ್ರಾಜ್ಯ .ಆಗ ಇನ್ನೂ ರೈಲು ಹಳಿ ನಿರ್ಮಾಣ ಮುಗಿದಿದ್ದು ಅದರ ಪಳೆಯುಳಿಕೆಗಳು ನೌಕರ ಶಾಹಿ ಇನ್ನೂ ಉಳಿದಿದ್ದವು .ಪುತ್ತೂರಿನ ವಸತಿ ಗೃಹ ವಿಶಾಲವಾಗಿ ಮರಗಳ ನಡುವೆ ಇದ್ದಿತು .ಆದರೆ ಆರೋಗ್ಯ ಕೇಂದ್ರ ರೋಗ ಗ್ರಸ್ತ ನಂತೆ ಒಂದು ಶೆಡ್ ನಲ್ಲಿ ಇದ್ದಿತು .ಸುಬ್ರಹ್ಮಣ್ಯ ರೋಡ್ ನಲ್ಲಿ ಒಂದು ಉಪ ಕೇಂದ್ರ ಮತ್ತು ಫರ್ಮಾಸಿಸ್ಟ್ ಇದ್ದರು.

ರಘುವೀರ್ ಎಂಬ ಹಿರಿಯರು ಪುತ್ತೂರಿನ ಫರ್ಮಾಸಿಸ್ಟ್ ,ವೆಂಕಟಯ್ಯ ಡ್ರೆಸ್ಸರ್ ಮತ್ತು  ಕಾಂತಮ್ಮ ,ಮೂಡ್ಲಿ ಗೌಡ ಎಂಬ ನೌಕರರು .ಹೆಲ್ತ್ ಇನ್ಸ್ಪೆಕ್ಟರ್ ಆಗಿ ಮುರುಗೇಶನ್ ಎಂಬ ತಮಿಳು ತರುಣ ಆಮೇಲೆ ಸೇರಿ ಕೊಂಡರು.ವೆಂಕಟಯ್ಯ ಮದ್ಯ ವ್ಯಸನಿ ,ಆದರೆ  ನೂರಕ್ಕೆ ನೂರು ವಿಧೇಯ .ನೆಟ್ಟಣದ ತಮಿಳು ಹುಡುಗಿಯನ್ನು ಎರಡನೇ ವಿವಾಹ ಮಾಡಿಕೊಂಡು ನಮ್ಮ ಊರಿನ ಅಳಿಯನಾದ.ಆಸ್ಪತ್ರೆಯಲ್ಲಿ ಗಾಯ ಡ್ರೆಸ್ ಮಾಡುವುದರ ಜತೆ ವಾರಕ್ಕೆ ಎರಡು ದಿನ ನನ್ನ ಸುಬ್ರಹ್ಮಣ್ಯ ರೋಡ್ ಸವಾರಿ ಯಲ್ಲಿ 

ಜತೆ ಬರುತ್ತಿದ್ದ .ಕಾಂತಮ್ಮ ತಮಿಳು ಹೆಂಗಸು .ಗಂಭೀರ ,ಮತ್ತು ಲಕ್ಷಣ ಮುಖ ,ಮನೆ ತುಂಬಾ ಮಕ್ಕಳು ,ಅವಳ ಗಂಡ ತೀರಿ ಹೋಗಿ ಅನುಕಂಪ ನೆಲೆಯಲ್ಲಿ ಕೆಲಸ . ಸುಸಂಸ್ಕೃತ ನಡೆ ನುಡಿ .ನನ್ನ ಮನೆಯವರು ಮತ್ತು ನೆಂಟರಿಷ್ಟರೆಲ್ಲರಿಗೂ ಅವಳ ಪರಿಚಯ .ನನ್ನ ವಸತಿ ಗೃಹಕ್ಕೆ ಹೋಗುವ ದಾರಿಯಲ್ಲಿ ಒಂದು ಹಳೇ ಮನೆಯಲ್ಲಿ ವಾಸವಿದ್ದಳು .ಸ್ವಲ್ಪ ಸಮಯದ ನಂತರ ಮುದ್ಲಿಗೌಡ ವರ್ಗವಾಗಿ ಲಕ್ಷ್ಮಮ್ಮ ಎಂಬಾಕೆ ಮತ್ತು ಫರ್ಮಾಸಿಸ್ಟ್ ಆಗಿ ಕೇರಳದಿಂದ ಒಬ್ಬರು ಬಂದರು .

ನಾನು ಬಂದ ದಿನದಿಂದ ಹೆಲ್ತ್ ಯೂನಿಟ್ ನ್ನು ಒಂದು ಗೌರವಾನ್ವಿತ ತಾಣಕ್ಕೆ ಬದಲಾಯಿಸಲು ಹೊಂಚು ಹಾಕುತ್ತಿದ್ದೆ .ಸ್ಟೇಟಸ್ ಕ್ವೋ ಯಿಸ್ಟ್ ಗಳಾದ ನನ್ನ ಮೇಲಿನ ಅಧಿಕಾರಿಗಳ ಸಹಕಾರ ಸ್ವಲ್ಪವೂ ಇರಲಿಲ್ಲ .ಕೆಳಗೆ ಕಾಣುವುದು ನಾನು ಚಾರ್ಜ್ ತೆಗೆದು ಕೊಂಡ ಆರೋಗ್ಯ ಕೇಂದ್ರದ ಈಗಿನ ಚಿತ್ರ

                  

ರೈಲ್ವೇ ಸಿಗ್ನಲ್ ವಿಭಾಗದವರಿಗೆ ಸ್ವಲ್ಪ ದೊಡ್ಡದಾದ ಶೆಡ್ ಇದ್ದಿತು .ಅದನ್ನು ವಿಭಾಗದ ಸಹಾಯಕ ಎಂಜಿನಿಯರ್ ಸುಬ್ರಹ್ಮಣ್ಯಂ ಮತ್ತು ಪುತ್ತೂರಿನ ಪರ್ಮನೆಂಟ್ ವೇ ಇನ್ಸ್ಪೆಕ್ಟರ್ (ಹಳಿ ಎಂಜಿನಿಯರ್ )ನಾಗರಾಜಪ್ಪ ನವರ  ಸಹಾಯದಿಂದ ಸ್ವಲ್ಪ ಬದಲಾವಣೆ ಮಾಡಿ ಈಗ ಇರುವ ಜಾಗಕ್ಕೆ ಶಿಫ್ಟ್ ಮಾಡಿದ ಮೇಲೆ ದೊಡ್ಡವರಿಗೆ ತಿಳಿಸಿದೆನು.

                 


ಆಗ ಆರೋಗ್ಯ ಕೇಂದ್ರದಲ್ಲಿ ಇದ್ದ ದೂರವಾಣಿಯನ್ನು ದೂರ ಸಂಚಾರ ಇಲಾಖೆಯವರು ಹೊಸ ಜಾಗಕ್ಕೆ ಅನೌಪಚಾರಿಕ ವಾಗಿ ವರ್ಗಾಯಿಸಿ  ಕೊಟ್ಟರು .  (ಎಂದರೆ ಯಾವುದೇ ಅರ್ಜಿ ,ಶುಲ್ಕ ಇಲ್ಲದೆ .ಅಗೆಲ್ಲ ಫೋನ್ ಒಂದು ರೂಮಿನಿಂದ ಇನ್ನೊಂದು ರೂಮಿಗೆ ಸ್ಥಳಾಂತರಿಸಲು ಅನುಮತಿ ಕೇಳಿ ,ನಿಗದಿತ ಫೀಜ್ ಪಾವತಿಸ ಬೇಕಿತ್ತು .).ಇದರಿಂದ ರೈಲ್ವೇ ಗೆ ಹಣ ಉಳಿತಾಯ ಆಯಿತು .ಆದರೆ ನನ್ನ ಮೇಲಿನವರು ಈ ತರಹದ ಒಕ್ಕಣೆಯ ಪತ್ರ ನನಗೆ ಬರೆದರು ."ನಿಮ್ಮ  ಕಾರ್ಯೋತ್ಸಾಹ ಮತ್ತು ಇನಿಶಿಯೆಟಿವ್ ನಾವು ಮೆಚ್ಚುವುದಾದರೂ ಇಂತಹ ಕಾರ್ಯಗಳಲ್ಲಿ ಪ್ರಾಪರ್ ಚಾನಲ್ ಮೂಲಕ ಲಿಖಿತ ಅನುಮತಿ ತೆಗೆದು ಕೊಂಡೇ ಮುಂದುವರಿಸುವುದು "ಈಗ ನನಗೆ ಅನಿಸುತ್ತದೆ ಈ ಪ್ರಾಪರ್ ಚಾನಲ್ ಮೂಲಕ ಹೋಗಿದ್ದರೆ ಹಳೇ ಜಿಂಕ್ ಶೀಟ್ ಕಟ್ಟಡವೇ ನಮಗೆ ಗತಿ ಆಗುತ್ತಿತ್ತು .

          ಮೇಲಿನ ಸ್ಟೇಟಸ್ ಕ್ವೋ ಅಧಿಕಾರಿಗಳೆ ಹೆಚ್ಚು ಇದ್ದುದರಿಂದ ಮಂಗಳೂರು ಬೆಂಗಳೂರು ರೈಲು ಇನ್ನೂ ಕುಂಟಿ ಕೊಂಡು ಹೋಗುತ್ತಿತ್ತು .ರಾತ್ರಿ ಹೊತ್ತು ಪ್ರಯಾಣಿಕ ರೈಲು ಸುರಕ್ಷಾ ಕರಣಗಳಿಂದ ಘಾಟ್ ಮೂಲಕ ಹೋಗುವಂತಿಲ್ಲ ಎಂಬ ಕುಂಟು ನೆಪ .ಆಗ ನಮ್ಮೆಲ್ಲರ ಪುಣ್ಯಕ್ಕೆ ರಾಮ್ ಕುಮಾರ್ ಎಂಬ ವಿಭಾಗೀಯ ಅಧಿಕಾರಿ ಬಂದರು .ಅವರು ತಮ್ಮೆಲ್ಲ ಸಂಪನ್ಮೂಲ ಮತ್ತು ಶಕ್ತಿ ಉಪಯೋಗಿಸಿ ರಾತ್ರಿ ಅಪಾಯ ರಹಿತವಾಗಿ ಗಾಡಿ ಓಡಿಸ ಬಹುದು ಎಂದು ಟ್ರಾಯಲ್ ಮೂಲಕ ಸಾಬೀತು ಪಡಿಸಿ ಸಂಜೆ ಮಂಗಳೂರಿನಿಂದ ಹೊರಟು ಮುಂಜಾನೆ ಬೆಂಗಳೂರಿಗೆ ರೈಲು ಓಡುವ ಹಾಗೆ ಮಾಡಿದರು .ಈ ಟ್ರಾಯಲ್ ಗಳಲ್ಲಿ ನಾನೂ ಭಾಗವಸಿದ್ದೆ.ನಾವೆಲ್ಲ ಹರಿಯಾಣ ಮೂಲದ ಈ ಮಹಾನುಭಾವನಿಗೆ ಕೃತಜ್ನ ರಾಗಿ ಇರಬೇಕು .

  ಪುತ್ತೂರು ನಮ್ಮ ಪಕ್ಕದ ಮನೆ ಹಳಿ ಎಂಜಿನಿಯರ್ ನಾಗರಾಜಪ್ಪ ನವರದು .ಅವರ ಪತ್ನಿ ಪ್ರೇಮಾ ,ಮಕ್ಕಳು ಕಿರಣ್ ,ಸಂದೇಶ್ ಮತ್ತು ಮಮತಾ .ಜತೆಗೆ ಅವರ ಬಿಡಾರ ದಲ್ಲಿ ಸಂಬಂದಿ ವಿಟ್ಲ ಅಡಿಕೆ ಸಂಶೋಧನಾ ಕೇಂದ್ರದ  ವಿಜ್ನಾನಿ ಮಲ್ಲಿಕಾರ್ಜುನ ಸ್ವಾಮಿ ,ಪತ್ನಿ ಪ್ರಮೀಳಾ ,ಮಗ ಭಾನು ಮತ್ತು ಅಣ್ಣನ ಮಗ ಪ್ರದೀಪ್ ಇದ್ದರು .(ಕೆಲ ಕಾಲದ ನಂತರ ಸಮೀಪ ಬೇರೆ ಬಾಡಿಗೆ ಮನೆಗೆ ಹೋದರು.)ನಾಗರಾಜಪ್ಪ ಕುಟುಂಬ ನಮಗೆ ಮನೆಯವರಂತೆಯೇ ಆಗಿ ಹೋದರು.ರಜಾ ದಿನಗಳಂದು ನಮ್ಮ ದೊಡ್ಡ ಗೋಷ್ಠಿ ಅಲ್ಲಿ ನಡೆಯುತ್ತಿತ್ತು .ಪ್ರೇಮ ಅಕ್ಕನ ರಾಗಿ ರೊಟ್ಟಿ ಚಹಾ ಸರಬರಾಜು .ಕಿರಣ್ ನನಗೆ ತುಂಬಾ ಆತ್ಮೀಯ ,ಈಗಲೂ ಸಂಪರ್ಕ ಇದೆ .ಕಿರಣ್ ಮತ್ತು ಸಂದೇಶ್ ಮೈಸೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ .ನಾನು ಮತ್ತು ಈ ಮಕ್ಕಳ ಗುಂಪು (ತರಲೆ ಪಟಾಲಂ )ಊರೆಲ್ಲಾ ಸುತ್ತುತ್ತಿದ್ದೆವು .ಪುತ್ತೂರು ಜಾತ್ರೆ ಇತ್ಯಾದಿ .ನನ್ನ ಮನೆಯ ಎಲ್ಲಾ ಸಮಾರಂಭಗಳಿಗೆ ಅವರು ಬರುತ್ತಿದ್ದರು .ಆಗ ಹಾರಾಡಿಯ ವಸತಿ ಗೃಹದಿಂದ ಪೇಟೆಗೆ ಎದುರಿನ ಗದ್ದೆಯ ಮೂಲಕ ಒಳ ದಾರಿಯಲ್ಲಿ ಕೊಂಬೆಟ್ಟು ಮೂಲಕ ನಡೆದು ಕೊಂಡು ಹೋಗುತ್ತಿದ್ದೆವು .ಧರ್ಭೆ ಫಿಲೋಮೀನಾ ಶಾಲೆಗೆ ಕೂಡ ನಡೆದೇ ಹೋಗುವುದು .

ಕೆಲವು ತಿಂಗಳು ನನ್ನೊಡನೆ ನನ್ನ ಅಣ್ಣನ ಕುಟುಂಬ ವಾಸವಾಗಿತ್ತು .ಎಂಜಿನಿಯರ್ ಆಗಿರುವ ಅಣ್ಣ ಲಿಬಿಯಾ ದೇಶದಿಂದ ವಾಪಸು ಆಗಿ ಮುಂಬೈ ಯಲ್ಲಿ ಬೇರೆ ಕೆಲಸಕ್ಕೆ ಸೇರಿದ ತರುಣ ದಲ್ಲಿ .ಅಣ್ಣನ ಮಕ್ಕಳಾದ ಮುರಳಿ ಮತ್ತು ನಳಿನಿ ನನಗೆ ಒಳ್ಳೆಯ ಕಂಪನಿ .ನನ್ನೊಡನೆ ಆಸ್ಪತ್ರೆ ,ಸುಬ್ರಹ್ಮಣ್ಯ ರೋಡ್ ,ಪೇಟೆ ಎಲ್ಲಾ ಸುತ್ತಿದ್ದೆ ಸುತ್ತಿದ್ದು .

  ಆಗಿನ್ನೂ ಟಿ ವಿ ಬಂದಿದ್ದು ನಾಗರಾಜಪ್ಪ ನವರ ಮನೆಯಲ್ಲಿ ಒಂದು ಕಪ್ಪು ಬಿಳುಪು ಟಿ ವಿ ಇದ್ದಿತು .ಅದಕ್ಕೆ ಮನೆ ಹಿಂದಿನ ಎತ್ತರದ ಮರಕ್ಕೆ ಒಂದು ಆಂಟೆನ್ನಾ.ಭಾನುವಾರ ರಾಮಾಯಣ ನೋಡಲು ಎಲ್ಲರೂ ಕೂಡುತ್ತಿದ್ದೆವು .

ಪುತ್ತೂರಿಗೆ ಯಕ್ಷಗಾನ ಬಯಲಾಟ ಸಾಕಷ್ಟು ಬರುತ್ತಿದ್ದು ಹೋಗುತ್ತಿದ್ದೆನು.ಬೋಳಂತ ಕೋಡಿ ಈಶ್ವರ ಭಟ್ ಅವರ ನೇತೃತ್ವದಲ್ಲಿ ಸಾಹಿತ್ಯ ಕಾರ್ಯಕ್ರಮಗಳು ಆಗಾಗ ನಡೆಯುತ್ತ ಇದ್ದವು .ಅವರ ಗೆಳೆಯರು ನಡೆದು ಕೊಂಡೇ ಊರು ಸುತ್ತಿ ಧನ ಸಂಗ್ರಹ ಮಾಡುತ್ತಿದ್ದು ನನ್ನ ಮನೆಗೂ ಹಲವು ಬಾರಿ ಬಂದಿದ್ದರು.ಈಶ್ವರ ಭಟ್ ಉದಯವಾಣಿ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ಭಾತ್ಮಿದಾರರೂ ಆಗಿದ್ದು ನಮ್ಮ ರೈಲ್ವೇ ಕಾರ್ಯ ಕ್ರಮಗಳಿಗೆ ಬರುತ್ತಿದ್ದರು .ಅವರೊಂದಿಗೆ ಶ್ರೀ ಪ್ರೊ ವಿ ಬಿ ಮೊಳೆಯಾರ್,ಪುರಂಧರ ಭಟ್ ಮತ್ತು ನನ್ನ ಅಕ್ಕನ ಗಂಡ  ಪ್ರೊ ವಿ ಬಿ ಅರ್ತಿಕಜೆ ಇರುತ್ತಿದ್ದರು .ಸಾಹಿತ್ಯ ಪ್ರಿಯನಾದ ನನಗೆ ಇದು ಆಪ್ಯಾಯಮಾನ ವಾಗಿತ್ತು .

ಪುತ್ತೂರಿನಲ್ಲಿ ಇರುವಾಗಲೇ ನನ್ನ ತಂಗಿಯಂದಿರ ಮದುವೆ ,ನನ್ನ ವಿವಾಹ ,ಮತ್ತು ತಮ್ಮಂದಿರ ವಿವಾಹ ನಡೆಯಿತು .ನನ್ನ ಪತ್ನಿ ಉಷಾ ಕಾಸರಗೋಡು ತಾಲೂಕು ಪೆರ್ಲ ಸಮೀಪದವಳು ಅವಳ ತಂದೆ ಪೆರ್ಲ ಸಾತ್ಯನಾರಾಯಣ ಶಾಲೆಯಲ್ಲಿ ಅಧ್ಯಾಪಕ ,ಮದುವೆ ವಿಟ್ಲ ಪುತ್ತೂರು ನಡುವಿನ ಕಂಬಳಿ ಬೆಟ್ಟು ಹಾಲ್ ನಲ್ಲಿ ನನ್ನ ಮದುವೆಗೆ ಇಲಾಖಾ ಸಿಬ್ಬಂದಿ ಲಾರಿ ಯಲ್ಲಿ ತುಂಬಿ ಕೊಂಡು ಬಂದದ್ದು ವಿಶೇಷ .ನನ್ನ ಮಗ ನಿತಿನ್ ಪುತ್ತೂರಿನ ಪತ್ರಾವೋ ಆಸ್ಪತ್ರೆಯಲ್ಲಿ ಹುಟ್ಟಿದ್ದು .

ಈ ಅವಧಿಯಲ್ಲಿಯೇ ನನ್ನ ಮೊದಲನೇ ವಾಹನ ಕಾವಸಾಕಿ ಬಜಾಜ್ ಮೋಟಾರ್ ಸೈಕಲ್  ಕೊಂಡದ್ದು .ನನ್ನ ಕಿರಿಯ ಸಹೋದರ ಶ್ರೀನಿವಾಸ ಬೆಂಗಳೂರಿನಿಂದ ತಂದು ಕೊಟ್ಟುದು .ಆಗ ಇಂತಹ ವಾಹನಗಳು ಬರ ತೊಡಗಿದ್ದ ಕಾಲ,ನಾನು ಪೇಟೆಯಲ್ಲಿ ಗಾಡಿ ನಿಲ್ಲಿಸಿದಾಗ ಅಕ್ಕ ಪಕ್ಕದವರು ಬೆಂಜ್ ಕಾರ್ ನೋಡಿದವರಂತೆ ಕುತೂಹಲ ದಿಂದ ನೋಡುತ್ತಿದ್ದರು .ಇದೇ ವಾಹನ ಮುಂದೆ ಹತ್ತು ವರುಷ ನನ್ನ ನಂಬಿಕೆಯ ಸಾರಥಿ ಆಯಿತು .

ಆಗ ನಮ್ಮ ಮನೆಯಲ್ಲಿ ಗ್ರೈಂಡರ್ ಇರಲಿಲ್ಲ ,ಸಂಟಿಯಾರ್ ನಿಂದ ತಂದ ಅರೆಯುವ ಕಲ್ಲು ,ಒಂದೇ ಗ್ಯಾಸ್ ಸಿಲಿಂಡರ್ ಇದ್ದು ಅದು ಮುಗಿದ್ದಾಗ ಸೀಮೆ ಎಣ್ಣೆ ಸ್ಟೌ ,ಈಗಿನಂತೆ ಬೇಕಾದಷ್ಟೂ ಹಾಲು ಸರಬರಾಜು ಇಲ್ಲ .ಆದರೂ ಪೇಟೆಗೆ ಬಂದ ಹತ್ತಿರ ಮತ್ತು ದೂರದ ನೆಂಟರಿಷ್ಟರು ಮನೆಗೆ ಬರುತ್ತಿದ್ದರು ಮತ್ತು ಬಂದಾಗ ಸಂತೋಷ ಆಗುತ್ತಿತ್ತು .ಈಗಿನ ಹಾಗೆ ಫೋನ್ ಮಾಡಿ ಬರಲು ಅದೂ ಇರಲಿಲ್ಲ .ರಾತ್ರಿ ಬೆಂಗಳೂರಿಗೆ ರೈಲು ಮತ್ತು ಬಸ್ ಹಿಡಿಯಲು ಬಂದವರೂ ಬರುತ್ತಿದ್ದರು .ವಿದ್ಯುತ್ ಶಕ್ತಿ ಆಗಾಗ ಕೈ ಕೊಡುವುದು .

ಪುತ್ತೂರಿನ ಪರ್ಲಡ್ಕ ಕಾರಂತ ಬಾಲ ವನ ದ ಬಳಿ ನನ್ನ ಅಕ್ಕ ಭಾಗ್ಯ ಲಕ್ಷ್ಮಿ ಮನೆ .ಅಲ್ಲಿಗೆ ಆಗಾಗ ನಡಿಗೆಯಲ್ಲಿಯೇ ಸವಾರಿ .ಅವರದು ಕೂಡು ಕುಟುಂಬ ಆಗಿದ್ದು ಯಾವತ್ತೂ ಸಂಭ್ರಮ .ಭಾವ ವಿ ಬಿ ಅರ್ತಿಕಜೆ ವಿವೇಕಾನಂದ ಕಾಲೇಜ್ ನಲ್ಲಿ ಇತಿಹಾಸ ಪ್ರಾಧ್ಯಾಪಕರು ,ಲೇಖಕರು ಮತ್ತು ಪತ್ರಕರ್ತರು ಆಗಿ ಯಾವಾಗಲೂ ಬ್ಯುಸಿ ಆಗಿ ಇರುತ್ತಿದ್ದರು .ಅವರ ಮಗ ಬ್ಯಾಂಕ್ ಅಧಿಕಾರಿ ಮಗಳು ಬೆಂಗಳೂರಿನಲ್ಲಿ ಗೃಹಿಣಿ .

ನನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಬಂಧು ಮಹಾಲಿಂಗೇಶ್ವರ ಭಟ್ ಮತ್ತು ದುರ್ಗಾಮಣಿ ,(ಅಧ್ಯಾಪಕ ದಂಪತಿಗಳು )ವಾಸವಿದ್ದು ನಮ್ಮಲ್ಲಿ ಪರಸ್ಪರ ಭೇಟಿ ಆಗುತ್ತಿತ್ತು .ಅವರ ಮಗಳು ವೈಶಾಲಿ ನನ್ನ ಪುಟ್ಟ ಗೆಳತಿ .ನಮ್ಮ ಆರೋಗ್ಯ ಕೇಂದ್ರದ ಸಮೀಪ  ಶ್ರೀ ಮೂಡಿತ್ತಾಯ ಮನೆ ಕಟ್ಟಿ ವಾಸವಿದ್ದು ಪ್ರತಿಭಾವಂತರಾದ ಅವರ ಮಕ್ಕಳು ನಮ್ಮಲ್ಲಿ ಆಗಾಗ ಬರುತ್ತಿದ್ದು ನನ್ನ ಸಂಗ್ರಹ ದಿಂದ ಪುಸ್ತಕ ಒಯ್ದು ಓದುತ್ತಿದ್ದರು.ಅಗೆಲ್ಲ ಮಕ್ಕಳು ಸಮೀಪದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದು ಹಾರಾಡಿ ಪ್ರಾಥಮಿಕ ಶಾಲೆ ,ಕೊಂಬೆಟ್ಟು ವಿನಲ್ಲಿ ಇದ್ದ ಬೋರ್ಡ್ ಹೈಯರ್ ಸೆಕೆಂಡರಿ ಶಾಲೆ ಪ್ರತಿಷ್ಠಿತ ಸಂಸ್ಥೆ ಗಳಾಗಿದ್ದವು .

ನಮ್ಮ ಮನೆಯ ಸಮೀಪ ಬಡೆಕ್ಕಿಲ ಶಂಕರ ಭಟ್ ಎಂಬ ಆಯುರ್ವೇದ ವೈದ್ಯರ ಮನೆ ಇತ್ತು .ಅವರ ಶ್ರೀಮತಿ ಜಯಲಕ್ಶ್ಮಿ .ಅವರಿಗೆ ಏಳು ಹೆಣ್ಣು ಮಕ್ಕಳು .ಶಾಲೆಗೆ ಹೋಗುವವರು .ಶಂಕರ ಭಟ್ ಅವರಿಗೆ ಪುತ್ತೂರ ಪೋಲೀಸು ಸ್ಟೇಷನ್ ಬಳಿ ಕ್ಲಿನಿಕ್ ಇತ್ತು .ಅವರ ಅಣ್ಣ ಪುತ್ತೂರಿನ ಪ್ರಸಿದ್ದ ವೈದ್ಯ ಶಿವರಾಮ ಭಟ್ .(ಮುಂಗ್ಲಿ ಮನೆ ಮರಿಯಪ್ಪ ಭಟ್ಟರ ಅಳಿಯ ).ಶಂಕರ ಭಟ್ ಮತ್ತು ಅವರ ಕುಟುಂಬ ನಮಗೆ ಬಹಳ ಆತ್ಮೀಯರಾದರು .ಮುಂದೆ ನಾವು ಪುತ್ತೂರು ಬಿಟ್ಟ ಕೆಲ ದಿನಗಳಲ್ಲಿ ಅವರು ಹಠಾತ್ ನಿಧನ ರಾದ ವಾರ್ತೆ ಬಂದು ಬಹಳ ವ್ಯಥೆಯಾಯಿತು .ಆ ತಾಯಿ ದೃತಿ ಗೆಡದೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ,ಯೋಗ್ಯ ವರರಿಗೆ ಮದುವೆ ಮಾಡಿಕೊಟ್ಟು ಸೈ ಎನ್ನಿಸಿ ಕೊಂಡಿದ್ದಾರೆ .ಈಗಲೂ ನಮ್ಮೊಡನೆ ಸಂಪರ್ಕ ಇರಿಸಿ ಕೊಂಡಿರುವರು .

     ಹೀಗೆ ಸಮಯ ಹೋಗುತ್ತಿರಲು ಒಂದು ದಿನ ಚೆನ್ನೈನಿಂದ ಮುಖ್ಯ ವೈದ್ಯಾಧಿಕಾರಿ ಡಾ ಯೋಗಿ ಮಹ್ರೋತ್ರಾ ಇನ್ಸ್ಪೆಕ್ಷನ್ ಗೆ ಬಂದಿದ್ದವರು ನನ್ನೊಡನೆ ನಿನ್ನಂತಹ ಉತ್ಸಾಹಿ ಯುವಕರು ಮುಂದೆ ಕಲಿಯ ಬೇಕು ಮತ್ತು ಪೆರಂಬೂರ್ ರೈಲ್ವೇ ಆಸ್ಪತ್ರೆಯಂತಹ ಕಡೆ ಇರಬೇಕು .ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ ಬರೆ .ಆಮೇಲೆ ನಾನು ಪೆರಂಬೂರಿಗೆ ಕರೆಸಿಕೊಳ್ಳುವೆ .ನಡುವೆ ಒಂದು ವರ್ಷ ಮಂಗಳೂರು ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡು ಎಂದು ಹಾರೈಸಿದರು .ಅವರ ಆಶೀರ್ವಾದದಿಂದ ಮುಂದೆ ನಾನು ಪಿ ಜಿ ಮಾಡುವಂತೆ ಆಯಿತು .

ಮುಗಿಸುವ ಮುನ್ನ ನನ್ನ ಸುಬ್ರಹ್ಮಣ್ಯ ರೋಡ್ ಫರ್ಮಾಸ್ಸಿಸ್ಟ್  ವಿಜಯನ್ ಬಗ್ಗೆ .ಇವರು ಪ್ರಮಾಣಿಕ ಕೆಲಸ ಗಾರ : ಸಾಹಿತ್ಯ ಪ್ರಿಯ ,ಮಲಯಾಳ ಸಾಹಿತ್ಯದ ಬಗ್ಗೆ ನನಗೆ ಓನಾಮ ಹಾಕಿದವರು .ನಾನು ಸುಬ್ರಹ್ಮಣ್ಯ ರೋಡ್ ಗೆ ಹೋದಾಗ ಸಂಜೆ ಅವರೊಡನೆ ಬಿಳಿ ನೆಲೆ  ಅಥವಾ ಸಿರಿವಾಗಿಲು ಕಡೆ ಮಾತನಾಡಿಕೊಂಡು ವಾಕಿಂಗ್ ಹೋಗುತ್ತಿದ್ದೆವು .ಈಗ ಮಂಗಳೂರು ರೈಲ್ವೇ ಆರೋಗ್ಯ ಕೇಂದ್ರ ದಲ್ಲಿ ಇದ್ದು ನನ್ನ ಕುಟುಂಬಕ್ಕೆ ಆತ್ಮೀಯರು

 

ಶನಿವಾರ, ಡಿಸೆಂಬರ್ 12, 2020

ಸಕಲೇಶಪುರದಲ್ಲಿ ಒಂದು ವರುಷ

    ಸಕಲೇಶ ಪುರದಲ್ಲಿ ಒಂದು ವರುಷ 

ಮೈಸೂರಿನಿಂದ ಗಾಡಿ ಸಕಲೇಶಪುರಕ್ಕೆ ಹೊರಟಿತು ,ಸರಕಾರಿ ಸೇವೆಯೇ ಹಾಗೆ ಡಿ ವಿ ಜಿ ಯವರ ಜಟಕಾ ಬಂಡಿ ತರಹ ಮೇಲಿನವರು ಹೇಳಿದಲ್ಲಿಗೆ ಹೋಗಬೇಕು .ಒಂದು ತಹರ ಇದು ನಮಗೆ ಇಲ್ಲಿ ಯಾವುದೂ ಸ್ಥಿರವಲ್ಲ ಎಂಬ ವೇದಾಂತ ಕಲಿಸಿ ಕೊಡುವುದು .ವರ್ಗಾವಣೆ ಆದಾಗ ಜಾಯಿನಿಂಗ್ ಟೈಮ್ ಅಂತ ಪುಕ್ಕಟೆ ರಜೆ ಮತ್ತು ವರ್ಗ ಭತ್ಯೆ ಸಿಗುವುದು .ನಮ್ಮಂತಹ ಅವಿವಾಹಿತರಿಗೆ ಅದು ಒಂದು ಗಳಿಕೆಯೇ .

ಸಕಲೇಶ ಪುರ ರೈಲ್ವೇ ನಿಲ್ದಾಣ ಹೇಮಾವತಿ ನದಿ ದಂಡೆಗೆ ಸಮೀಪ ಇದೆ .ಸ್ಟೇಷನ್ ಹಿಂದು ಗಡೆ ಗುಡ್ಡ .ರೈಲ್ವೇ ನಿಲ್ದಾಣದಿಂದ ಪೇಟೆಗೆ ಹೋಗುವ ರಸ್ತೆ ಈ ಗುಡ್ಡ ಏರಿ ಹೋಗುವುದು .ಎರಡೂ ಕಡೆ ವಸತಿ ಗೃಹಗಳು .ಗುಡ್ಡದ ತುದಿಯಲ್ಲಿ ಕಛೇರಿಗಳು .ರೈಲ್ವೇ ಆರೋಗ್ಯ ಕೇಂದ್ರ ಕೂಡ ಎತ್ತರದಲ್ಲಿ ಇದೆ .ಅದೇ ದಾರಿಯಲ್ಲಿ ಮುಂದೆ ರೈಲ್ವೇ ಅಧಿಕಾರಿಗಳ ವಿಶ್ರಾಂತಿ ಗೃಹ ಇದೆ .ಇದರ ಅಂಗಳದಲ್ಲಿ ನಿಂತು ನೋಡಿದರೆ ಹೇಮಾವತಿ ನದಿ ಪೂರ್ವದಿಂದ ದಕ್ಷಿಣಕ್ಕೆ ವಯ್ಯಾರದಿಂದ ಹರಿವ  ಮನಮೋಹಕ ದೃಶ್ಯ ಕಾಣ ಬಹುದು .ಇದು ರೈಲ್ವೇ ಹಳಿಗೆ ಕೆಲ ದೂರ ಸಮಾಂತರ ಇದ್ದು ,ರೈಲು ಸ್ಟೇಷನ್ ನಿಂದ ನಿಧಾನ ಹೊರಟಾಗ ತಾ ಮುಂದು ತಾ ಮುಂದು ಎಂದು ರೈಲು ಮತ್ತು ನದಿ ಹರಿವು ಪೈಪೋಟಿ ಮಾಡಿದಂತೆ ಕಾಣುವುದು .

ನನ್ನ ವಸತಿ ಗೃಹ ಕೂಡ ಎತ್ತರದಲ್ಲಿ ಇದ್ದು ನದೀ ದರ್ಶನ ಆಗುತ್ತಿತ್ತು .ಸಕಲೇಶ ಪುರದಲ್ಲಿ ಶ್ರೀ ರೋಹಿಡೇಕರ್ ಇಂಜಿನೀರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದು ನನಗೆ ಒಳ್ಳೆಯ ಸ್ನೇಹಿತರಾದರು .ನನ್ನ ಪಕ್ಕದ ಮನೆಯಲ್ಲಿ ರಾಜಗೋಪಾಲ ಎಂಬ ಗೃಹಸ್ಥ ರು ಕುಟುಂಬ ಸಮೇತ ಇದ್ದರು .ಅವರು ಪರ್ಮನೆಂಟ್ ವೇ (ರೈಲು ಹಳಿ )ನಿರೀಕ್ಷಕರು .ನನ್ನ ಹಿತೈಷಿಗಳಾದರು .ಅರೋಗ್ಯ ಕೇಂದ್ರದಲ್ಲಿ ಆನಂದ ಮೇಲಾಡಿ ಫಾರ್ಮಾಸಿಸ್ಟ್ ಆಗಿದ್ದು  ಪ್ರಾಮಾಣಿಕರು ಮತ್ತು ನ್ಯಾಯ ನಿಷ್ಟುರರು .ಅರೋಗ್ಯ ನಿರಿಕ್ಷಕರಾಗಿ ತಮಿಳ್ನಾಡಿನ ಯುವಕ ಮುರುಗೇಶನ್ ಎಂಬವರು ಸಹಾಯಕ್ಕೆ ಇದ್ದು ಎಳೆಯ ಹುಡುಗನಾದರೂ ಕಾರ್ಯ ಕ್ಷಮತೆ ಯುಳ್ಳವರು .ಆಸ್ಪತ್ರೆಯಲ್ಲಿ ಪಾಂಡುರಂಗ ಎಂಬ ಅನುಭವಿ ಡ್ರೆಸ್ಸೆರ್ ಇದ್ದರು . 

ನನ್ನ  ಸಾಮ್ರಾಜ್ಯ ಹಾಸನದಿಂದ ನೆಟ್ಟಣ (ಸುಬ್ರಹ್ಮಣ್ಯ ರೋಡ್ )ವರೆಗೆ ಇತ್ತು .ವಾರದಲ್ಲಿ ಒಂದು ದಿನ ನೆಟ್ಟಣಕ್ಕೆ ಸವಾರಿ . ದಾರಿಯ ನಿಲ್ದಾಣದಲ್ಲಿ ನೌಕರರು ಮತ್ತು ಕುಟುಂಬ ರೈಲಿನೊಳಗೆ ಬಂದು ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಿ ತೆಗೆದು ಕೊಳ್ಳುವರು .ನೆಟ್ಟಣದಲ್ಲಿ ಒಂದು ಸಣ್ಣ ಮೆಡಿಕಲ್ ಔಟ್ ಪೋಸ್ಟ್ ಇದೆ .ಅಲ್ಲಿಯೂ ನಮ್ಮ ಸೇವೆ ನಡೆಯುವುದು .ಈ ವಿಭಾಗ ಕಾಡಿನ ನಡುವೆ ಸೇತುವೆ  ಮತ್ತು ಸುರಂಗ ಗಳಿಂದ ಕೂಡಿ  ನಯನ ಮನೋಹರ.





 


ಸಕಲೇಶ ಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವೆ ದೋಣಿಗಲ್ ,ಎಡಕುಮೇರಿ ಮತ್ತು ಸಿರಿಬಾಗಿಲು ನಿಲ್ದಾಣಗಳು ಇವೆ .ಇವುಗಳ ಪೈಕಿ ಎಡ ಕುಮೇರಿ  ಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲ .ಇಲ್ಲಿ ನೌಕರರಿಗೆ ಏನಾದರೂ ಹಠಾತ್ ಕಾಯಿಲೆ ಆದರೆ ಟ್ರಾಲಿ ಅಥವಾಲೈಟ್  ಎಂಜಿನ್ (ಬೋಗಿಗಳಿಲ್ಲದ ಬರೀ ಎಂಜಿನ್ ಗೆ ರೈಲ್ವೆ ಭಾಷೆಯಲ್ಲಿ ಲೈಟ್ ಎಂಜಿನ್ ಎನ್ನುವರು ಅದು ಬಾರೀ  ಭಾರದ ಸಾಧನ ಆದರೂ )ಮೂಲಕ ಹೋಗುವ ವ್ಯವಸ್ಥೆ ಇದ್ದಿತು .ಈ ವಿಭಾಗದಲ್ಲಿ ಹಲವು ದುರ್ಗಮ ಸೇತುವೆಗಳು ಇದ್ದ ಕಾರಣ ಸೇತುವೆ ನಿರೀಕ್ಷಕರ ಹುದ್ದೆ ಇತ್ತು .ಕೇರಳದ ಕೋಯಾ ಎಂಬುವರು ಆ ಹುದ್ದೆಯಲ್ಲಿ ಇದ್ದು ಅವರ ಮಾಪಿಳ್ಳೆ  ಖಲಾಸಿಗಳು ಶೂರರು ಮತ್ತು ಸಾಹಸ ಕುಶಲ ಕಾರ್ಯ ಪ್ರವೀಣರು .ಅವರ ಬಳಿ ಮತ್ತು ಪರ್ಮನೆಂಟ್ ವೆ ಇನ್ಸ್ಪೆಕ್ಟರ್ ಬಳಿ ಟ್ರಾಲಿ ಗಳು ಇದ್ದವು .ಅದರಲ್ಲಿ ತಳ್ಳು ಟ್ರಾಲಿ ಮತ್ತು ಮೋಟಾರ್ ಟ್ರಾಲಿ ಎಂದು ಎರಡು ವಿಧ .ನಡೆಸಲು ಟ್ರಾಲಿ ಮೆನ್ ಎಂಬ ನೌಕರರು .ನಾನು ರೈಲ್ವೆ ಸೇವಕ ನಾದ್ದರಿಂದ ಸುಂದರ ಘಾಟಿ ಪ್ರದೇಶದಲ್ಲಿ ತೆರದ ಗಾಡಿಯಲ್ಲಿ ರೈಲು ಹಳಿಗಳ ಮೇಲೆ ಸಂಚರಿಸುವ  ಭಾಗ್ಯ ದೊರಕಿತು .ಇದರಲ್ಲಿ ಹೋಗಲು ರೈಲು ಗಳಂತೆ ಸ್ಟೇಷನ್ ಮಾಸ್ಟರ್ ರಿಂದ ಸಿಗ್ನಲ್ ಪಡೆದೇ ಹೋಗುತ್ತಿದ್ದೆವು .                                                                 

 ಮಂಗಳೂರಿನಿಂದ ಬೆಂಗಳೂರಿಗೆ ಹಾಸನ ಅರಸೀಕೆರೆ ಮೂಲಕ ಪ್ರಯಾಣಿಕ ರೈಲು ಮಧ್ಯಾಹ್ನ ಒಂದು ಗಂಟೆಗೆ ಹೊರಟು ರಾತ್ರಿ ೭ ಗಂಟೆ ಸುಮಾರಿಗೆ ಸಕಲೇಶಪುರ ತಲುಪುತ್ತಲಿತ್ತು .ಘಾಟಿ ಪ್ರದೇಶ ದಲ್ಲಿ ಸುರಕ್ಷಾ ದೃಷ್ಟಿ ಯಿಂದ ಹಗಲೇ ರೈಲು ಸಂಚರಿಸ ಬೇಕಿತ್ತು .ಮುಂದೆ ಅದನ್ನು ಬದಲಾಯಿಸಿದರೆನ್ನಿ .ಈ ಸೆಕ್ಷನ್ ಒಂದು ಪ್ರವಾಸಿ ಆಕರ್ಷಣೆಯ ಮಾರ್ಗ ಆಗಿದ್ದು ಬಹಳ ಪ್ರಯಾಣಿಕರು ಅದರ ಆನಂದ ಪಡೆಯಲೆಂದೇ ಬರುತ್ತಿದ್ದರು .ನನ್ನ ಬಂಧು ಮಿತ್ರರೂ ಹಲವರು ನನ್ನ ಇರುವಿಕೆಯ ಪ್ರಯೋಜನ ಪಡೆದರು .ಬೆಂಗಳೂರಿನಿಂದ ಮಂಗಳೂರಿಗೆ ಬರುವ ಟ್ರೈನ್ ಬೆಳಿಗ್ಗೆ ಎಡಕುಮೆರಿಯಲ್ಲಿ ತಿಂಡಿ ಕಾಫಿ ಗೆ ನಿಲ್ಲುತ್ತಿತ್ತು .ಅಲ್ಲಿ ಒಬ್ಬ ಮಲಯಾಳಿ ಕಾಂಟೀನ್ ನಡೆಸುತ್ತಿದ್ದು ಅಲ್ಲಿಯ ದೋಸೆ ಬಹಳ ಜನಪ್ರಿಯ ಆಗಿತ್ತು ..ಮಂಗಳೂರಿಂದ ಬರುವ ರೈಲು ಸಾಯಂಕಾಲ ಟೀ ,ಉಪಹಾರಕ್ಕೆ ಇಲ್ಲೇ ನಿಲ್ಲುತ್ತಿತ್ತು .ಸುಮಾರು ಇಪ್ಪತ್ತು ನಿಮಿಷದ ನಿಲುಗಡೆ ಇದ್ದು ಆರಾಮವಾಗಿ  ನಿಸರ್ಗ ಸೌದರ್ಯ ಸವಿಯುತ್ತಿದ್ದರು .ಮುಂದೆ ರಾತ್ರಿ ರೈಲು ಶುರುವಾಗಿ ಈ ನಿಲ್ದಾಣದ ಪ್ರಾಮುಖ್ಯತೆ ಕಡಿಮೆ ಆಯಿತು .

ಟ್ರಾಲಿ ಮತ್ತು ಲೈಟ್ ಎಂಜಿನ್



Track maintenance staff in SWR receive GPS units as assistance | Hubballi  News - Times of India


ಸಕಲೇಶಪುರದಿಂದ ಹಾಸನ ದಾರಿ ಬಯಲು ಪ್ರದೇಶ .ಮತ್ತು ಎಲ್ಲಾ ಕಡೆ ರಸ್ತೆ ಸಂಪರ್ಕ ಇದ್ದ ಕಾರಣ  ಜೀಪ್ ನಲ್ಲಿ ಹೋಗುತ್ತಿದ್ದೆನು .ಈ ವಾಹನ ಕೂಡ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ್ದು ನಮ್ಮ ಬಳಿ ವಾಹನ ಇರಲಿಲ್ಲ .ನನ್ನ ಸ್ವಂತ ವಾಹನವೂ ಇರಲಿಲ್ಲ .ಪೇಟೆಗೆ ಹೋಗುವಾಗ ನಡೆದೇ ಹೋಗುತ್ತಿದ್ದೆವು .. 

ಅರೋಗ್ಯ ಕೇಂದ್ರದಲ್ಲಿ ದಿನಕ್ಕೆ ಸರಾಸರಿ ಇಪ್ಪತ್ತು ರೋಗಿಗಳು ಬರುತ್ತಿದ್ದು ,ಸಮಯ ಕಳೆಯುವುದು ಕಷ್ಟ ಆಗಿತ್ತು .ಗ್ರಂಥ ಭಂಡಾರದಿಂದ ಪುಸ್ತಕ ತಂದು ಓದುತ್ತಿದ್ದೆನು ..ಹಾಸನ ಮಂಗಳೂರು ನಿರ್ಮಾಣ ಕಾಲದಲ್ಲಿ ಸಕಲೇಶಪುರ ಭಾರೀ ಚಟುವಟಿಕೆ ಯಿಂದ ಕೂಡಿದ ಕೇಂದ್ರ ಆಗಿತ್ತು .ಅವರು ಬಿಟ್ಟು ಹೋದ ವಾಚನಾಲಯದಲ್ಲಿ ಒಳ್ಳೆಯ ಪುಸ್ತಕಗಳು ಇದ್ದವು .ಅವನ್ನು ಮತ್ತು ಕೆಲವು ಒಳಾಂಗಣ ಕ್ರೀಡೆಗಳನ್ನು ಸೇರಿಸಿ ಒಂದು ಕ್ಲಬ್ ಆರಂಭಿಸಿದೆವು . 

ರೈಲ್ವೆ ನಿಲ್ದಾಣ ದಿಂದ ನಗರಕ್ಕೆ ಹೋಗುವ ರಸ್ತೆ ಬದಿ ತುಂಬಾ ಲಂಟಾನ ಬೆಳೆದು ಸರೀಸೃಪಗಳಿಗೆ ಆಶ್ರಯ ತಾಣ ಆಗಿತ್ತು .ನಮ್ಮ ಇಲಾಖೆಯ ನೌಕರರ ಸಹಾಯದಿಂದ ಅದನ್ನು ಕಿತ್ತು ಸ್ವಚ್ಛ ಮಾಡಿದೆವು ,ಈ ಕೆಲಸದಲ್ಲಿ ನಾನೂ ನನ್ನ ಅರೋಗ್ಯ ನಿರೀಕ್ಷಕರೂ ಸ್ವಯಂ ಭಾಗಿಗಳಾಗುತ್ತಿದ್ದೆವು .ನೆಟ್ಟಣ ಅರಣ್ಯ ಇಲಾಖೆಯ ನರ್ಸರಿಯಿಂದ ಉಚಿತವಾಗಿ ಸಸಿಗಳನ್ನು ನೆಟ್ಟು ಆರೈಕೆ ಮಾಡಿದೆವು .ಅವೇ ಇಂದು ಮರಗಳಾಗಿ ದಾರಿ ಹೋಕರಿಗೆ ನೆರಳು ನೀಡುತ್ತಿವೆ . 

 ಈ ಮರಗಳನ್ನು ನೋಡುವಾಗ ನಮ್ಮ ಮನ  ಸಾರ್ಥಕತೆ ಯಿಂದ ಮೆರೆಯುವುದು,. 


 

                ಒಂದು ಘಟನೆ ನೆನಪಿಗೆ ಬರುತ್ತಿದೆ .ರೈಲ್ವೆ ಹಳಿ ಕಾಯಲು ಹಗಲು ರಾತ್ರಿ ಗ್ಯಾಂಗ್ ಮೆನ್ ಹಳಿಯುದ್ದಕ್ಕೂ ನಡೆದು ಹೋಗುವರು .ಅವರ ಕೈಯಲ್ಲಿ ಒಂದು ಪೀಪಿ ,ಮತ್ತು ಬೋಲ್ಟ್ ನಟ್  ಟೈಟ್ ಮಾಡುವ ಉದ್ದದ ಸ್ಪಾನರ್ ಇರುತ್ತದೆ .ಒಂದು ಸಂಜೆ ಗೂಡ್ಸ್ ರೈಲೊಂದು ಇಂತಹ ನೌಕರನ ಮೇಲೆ ಹಾದು ಹೋಯಿತು ,ಸೇತುವೆ ಪಕ್ಕದ ಸುರಂಗ .ಅವನ ದೇಹ ಛಿದ್ರ ಛಿದ್ರ ಆಗಿ ಅಲ್ಲೇ ಮೃತ ಪಟ್ಟನು .ರಾತ್ರಿ ಮಂಗಳೂರಿನಿಂದ ಬರುವ ಪ್ರಯಾಣಿಕರ ಗಾಡಿಯನ್ನು ನೌಕರರು ನಿಲ್ಲಿಸಿದರು .ನಾವು ಕೂಡಲೇ ಲೈಟ್ ಎಂಜಿನ್ ನಲ್ಲಿ ಸ್ಥಳಕ್ಕೆ ಧಾವಿಸಿದೆವು .ನನಗೆ ಇಂತಹ ಸಂದರ್ಭ ಏನು ಮಾಡ ಬೇಕು ಎಂದು ತಿಳಿದಿರಲಿಲ್ಲ .ಮೇಲಿನವರಲ್ಲಿ ಕೇಳಲು ಫೋನ್ ಇಲ್ಲ .ರೈಲ್ವೆ ತಂತಿಗೆ ಸಿಕ್ಕಿಸಿ ಫೋನ್ ಕನೆಕ್ಟ್ ಮಾಡಿದರೂ ಸ್ಪಷ್ಟ ಇಲ್ಲ .ಕೊನೆಗೆ ನಾನೇ ಬಂಡು  ಧೈರ್ಯದಲ್ಲಿ ಮೃತ ದೇಹವನ್ನು ಗೌರವ ಪೂರ್ವಕ ಬದಿಗೆ ಸ್ಟ್ರೆಚರ್ ನಲ್ಲಿ ಇಟ್ಟು ಪ್ರಯಾಣಿಕ ರೈಲು ಹೋಗಲು ಅನುವು ಮಾಡಿದೆನು .ಬಾಡಿ ಸಕಲೇಶಪುರಕ್ಕೆ ಸಾಗಿಸಿ ಪೋಸ್ಟ್ ಮಾರ್ಟಮ್ ಮಾಡಿ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು ..ಆಮೇಲೆ ಪೋಲಿಸಿನವರು ಘಟನೆ ನಡೆದ ಸ್ಟಳ ದಕ್ಷಿಣ ಕನ್ನಡವೋ ಹಾಸನ ಜಿಲ್ಲೆಯೋ  ಎಂಬ ತಮ್ಮ ಕನ್ಫ್ಯೂಶನ್ ತೀರಿಸಲು ಕೆಲವು ಸಮಯ ತೆಗೆದು ಕೊಂಡು ನನ್ನ ಹೇಳಿಕೆ ತೆಗೆದುಕೊಂಡರು .ಸ್ಥಳ ಮಹಜರು ಮಾಡಬೇಕಿತ್ತು ಎಂದು ನನ್ನ ಲೋಪ ತೋರಿಸಿದರು .ರೈಲ್ವೆ ಯಲ್ಲಿ ಇಂತಹ ಘಟನೆ ಸಂಭವಿಸಿದಾಗ ಒಂದು ವಿಭಾಗೀಯ ತನಿಖೆ ನಡೆದು ಯಾರದ್ದಾದರೂ ತಲೆಗೆ ಜವಾಬ್ದಾರಿ ಹೊರಿಸುವುದು ಪದ್ಧತಿ ಅದೂ ನಡೆದು ನನ್ನ ಸಮಯ ಪ್ರಜ್ಞೆಗೆ ಪ್ರಶಂಸೆ ದೊರೆಯಿತು .. 

ರೈಲ್ವೆಯಲ್ಲಿ  ನಿರ್ಮಾಣ ಕಾಲದಲ್ಲಿ ಇದ್ದ ಕೆಲವು ಅಧಿಕಾರಿಗಳು ಮುಂದೆಯೂ ಅಲ್ಲಿಯೇ ಮುಂದುವರಿದಿದ್ದರು .ಹೆಚ್ಚಿನವರು ಮಲಯಾಳಿಗಳು .ಅವರ ಪೈಕಿ ಕೋಯಾ ಅವರ ಬಗ್ಗೆ ಆಗಲೇ ಸೂಚಿಸಿದ್ದೇನೆ ,ಅವರ ಬಳಿ ಕೆಲ ದಿನ ಅರೇಬಿಕ್ ಭಾಷೆ ಕಲಿತೆ .ಇನ್ನು ವಕ್ಸ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ A ಕುಟ್ಟಿ ಮತ್ತು B ಕುಟ್ಟಿ ಎಂಬ ಇಬ್ಬರು ಇದ್ದರು .ರೈಲ್ವೆ ಕಟ್ಟಡಗಳ ನಿರ್ವಹಣೆ ಅವರ ಜವಾಬ್ದಾರಿ .ಇವರು ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಮೇಲಧಿಕಾರಿಗಳು ಇನ್ಸ್ಪೆಕ್ಷನ್ ಗೆ ಬರುವಾಗ ಅವರವರ ಭಾವಕ್ಕೆ ಅನುಗುಣವಾಗಿ ಪೂಜೆಗೆ ತುಳಸಿ ,ಹಾಲಿನಿಂದ ಹಿಡಿದು ,ರಾತ್ರಿ ಊಟಕ್ಕೆ ಬೇಕಾದ ಆಲ್ಕೋಹಾಲ್ ವರೆಗೆ ತಮ್ಮದೇ ಖರ್ಚಿನಲ್ಲಿ ಕಡಿಮೆ ಸಮಯದ ಸೂಚನೆಯಲ್ಲಿ ಏರ್ಪಾಡು ಮಾಡುತ್ತಿದ್ದರು .(Addtional Works Inspector ಗೆ ಅಪರ ಕರ್ಮ ನಿರೀಕ್ಷಕ ರೆಂದು ಕರೆಯ ಬಹುದೋ ?).A ಕುಟ್ಟಿ ಸ್ನೇಹ ಪರ ವ್ಯಕ್ತಿ ,ನನಗೆ ವಾಚನಾಲಯ ಕ್ಲಬ್ ಮಾಡಲು ತುಂಬಾ ಸಹಕರಿಸಿದರು .ಅವರ ಅಂತ್ಯ ಒಂದು ದುರಂತವಾದುದು ಖೇದಕರ

ಅರೋಗ್ಯ ಕೇಂದ್ರದಲ್ಲಿ ಅನಾರೋಗ್ಯ ಇರುವವರಿಗೆ ಚಿಕಿತ್ಸೆ ಮಾಡುವುದರೊಂದಿಗೆ ಹಲವು ನೌಕರರು ರಜೆಗೆ ಬೇಕಾಗಿ ಸಿಕ್ ಆಗಿ ಬರುತ್ತಿದ್ದ್ದವರನ್ನು ನೋಡಬೇಕು .ಅಗತ್ಯ ಕೆಲಸಗಳಿಗೆ ತಮ್ಮ ವಿಭಾಗದ ಮುಖ್ಯಸ್ಥರು ರಜೆ ನಿರಾಕರಿಸಿದರೆ ನಮ್ಮ ಬಳಿಗೆ ಬಂದು ದುಂಬಾಲು ಬೀಳುವರು .ಕೆಲವರಿಗಇದುವೇ ಚಾಳಿ .ಇನ್ನು ಕೆಲವೊಮ್ಮೆ ಮೇಲಿನ ಅಧಿಕಾರಿಗಳು ತಮ್ಮ ಜವಾಬ್ದಾರಿ ತಪ್ಪಿಸಲು ರಜೆ ಕೊಡಲು ಆಗುವುದಿಲ್ಲ ಬೇಕಾದರೆ ಸಿಕ್ ಲೀವ್ ತೆಗೊ ಎಂದು ನನ್ನಲ್ಲಿಗೆ ಮೆಮೊ ಕೊಟ್ಟು ರವಾನಿಸುವರು .ಇವರನ್ನು ಕಂಡಾಗ ನನಗೆ ನಮ್ಮ ದೇಶದಲ್ಲಿ ಖಾಯಂ ಕೆಲಸ ಇಲ್ಲದೆ ದುಡಿಯುವ ಕೋಟ್ಯಂತರ  ಪ್ರಜೆಗಳ ಚಿತ್ರ ಬರುವುದು .ಹೆಚ್ಚಾಗಿ ನಾನು ಈ ವಿಷಯದಲ್ಲಿ ಕಟ್ಟು ನಿಟ್ಟು .ಕೆಲವು ಅಸಂತುಷ್ಟ ನೌಕರರು ಯೂನಿಯನ್ ಮೊರೆ ಹೋಗಿ ನನ್ನ ಮೇಲೆ ಪ್ರಭಾವ ಬೀರುವರು . 

ರೈಲ್ವೆ ಗೆ ತನ್ನದೇ  ಆದ ದೂರವಾಣಿ ಜಾಲ ಇದೆ .ಸ್ಟೇಷನ್ ಮಾಸ್ಟರ್ ಮೈಸೂರಿನ ವಿಭಾಗೀಯ ಕಂಟ್ರೋಲ್ ರೂಮ್ ಮೂಲಕ ಸಂಪರ್ಕ ಇದೆ .ಅಲ್ಲಿಂದ ಸಂದೇಶಗಳು ಸ್ಟೇಷನ್ ಮೂಲಕ ನಮಗೆ ಬರುವವು .ಇನ್ನು ನಮ್ಮ ಅಧಿಕಾರಿಕ ಟಪ್ಪಾಲು  ಫ್ರೀ ಸರ್ವಿಸ್ (ಎಫ್ ಎಸ್ )ಮೂಲಕ  ಟ್ರೈನಿನಲ್ಲಿ ಹೋಗುವವು .ತಿಂಗಳು ತಿಂಗಳು ಹಾಜರಿ ಪಟ್ಟಿ ಮಾತ್ರ ಓರ್ವ ನೌಕರನ ಮೂಲಕ ಮೈಸೂರಿಗೆ ಹೋಗುವುದು .ಸಕಲೇಶಪುರದಿಂದ  ಮೈಸೂರಿಗೆ ನೇರ ರೈಲು ಸಂಚಾರ ಇರಲಿಲ್ಲ .ಆದ ಕಾರಣ ಬೆಂಗಳೂರಿಗೆ ಹೋಗಿ ಅಲ್ಲಿಂದ ಮೈಸೂರು ಗಾಡಿ  ಹಿಡಿಯಬೇಕು .ಇದರಿಂದ ನಮ್ಮ ಓಲೇಕಾರನಿಗೆ ಹೋಗಿ ಬರಲು ಮೂರು  ದಿನ ಬೇಕಾಗುತ್ತಿತ್ತು .ಮೂರು ದಿನದ ಕೆಲಸ ಮತ್ತು ಟಿ ಎ  ಡಿ ಎ  ಸೇರಿ ನೂರಾರು ರೂಪಾಯೀ ಖರ್ಚು .ಅದಕ್ಕೆ ನಾನು ಒಂದು ಉಪಾಯ ಮಾಡಿ ಹಾಜರಿಯನ್ನು ಸರ್ವಿಸ್ ಸ್ಟ್ಯಾಂಪ್ ಹಾಲಿ ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸ ತೊಡಗಿದೆನು ಇದರ ವೆಚ್ಚ ಇಪ್ಪತ್ತು ರೂಪಾಯಿ .ನಮ್ಮ ಅಧಿಕಾರ ಶಾಹಿ ಹೇಗೆ ಇದೆಯೆಂದರೆ ಸರ್ವಿಸ್ ಸ್ಟ್ಯಾಂಪ್ ಮರು ಪೂರಣಕ್ಕೆ  ಕೇಳಿದಾಗ ಇಷ್ಟು ದಿನ ಸ್ಟ್ಯಾಂಪ್ ಗೆ ಇಲ್ಲದ ಬೇಡಿಕೆ ಈಗ ಯಾಕೆ ಎಂಬ ಮೆಮೊ ಬಂತು .ಅದಕ್ಕೆ ಸಕಾರಣ ಉತ್ತರ ಕೊಟ್ಟೆ . ನಮಗೆ ಅನ್ನ ಹಾಕುವ ಸಂಸ್ಥೆ ಮತ್ತು ಅದನ್ನು ಸಾಕುವ ಜನತೆಯ ಶ್ರೇಯ ಬಯಸುವಾಗ ಪಟ್ಟ ಭದ್ರರು ಮತ್ತು ಯಥಾ ಸ್ಥಿತಿ ವಾದಿಗಳ ಕಿರಿ ಕಿರಿ ಅನುಭವಿಸ ಬೇಕಾಗುತ್ತದೆ . 

ನಮ್ಮ ವಿಭಾಗದಲ್ಲಿ ಸುಮಾರು ೧೫ -೨೦ ನೌಕರರು ಇದ್ದರು ನಾನು ಸೇರಿ ಎಲ್ಲರಿಗೂ ಸಂಬಳ ನಗದು ಆಗಿ ಕೊಡುತ್ತಿದ್ದರು ,ಸಂಬಳದ ದಿನ ಮೈಸೂರಿನಿಂದ ಕ್ಯಾಶಿಯರ್ ಬಂದು ಬಟವಾಡೆ ಮಾಡುವರು .ನಗದು ಸಿಕ್ಕಿದ ಹಣ ಖಾಲಿಯಾಗುವುದು ಬೇಗ .ಅದಕ್ಕೆ ನಾನು ನಮ್ಮ ಸಿಬ್ಬಂದಿ ಗಳಿಗೆ ಖಡ್ಡಾಯ ಪೋಸ್ಟ್ ಆಫೀಸ್ ಉಳಿತಾಯ ಖಾತೆ ತೆರೆಸಿ ಅದರಲ್ಲಿ ಸಂಬಳವನ್ನು ಹಾಕಲು ತಾಕೀತು ಮಾಡಿದೆನು .ಖಾತೆ ತೆರೆಯಲು ಬೇಕಾದ ರೂಪಾಯಿ ಹತ್ತು ನಾನೇ ಪಾವತಿ ಮಾಡಿದೆನು .ಇದು ಭಾಗಷ ಯಶಸ್ವೀ ಆಯಿತು . 

ಸಕಲೇಶ ಪುರದಲ್ಲಿ ಇರುವಾಗಲೇ ನಾನು ನನ್ನ ಸ್ಟೀಲ್ ಅಲ್ಮೇರಾ ಕೊಂಡದ್ದು .ಮುಖ್ಯವಾಗಿ ನನ್ನ ಪುಸ್ತಕಗಳನ್ನು ಇಡಲೆಂದು ಪುತ್ತೂರಿನ ಸೋಜ ರ ಅಂಗಡಿಯಿಂದ ಕೊಂಡ ಈ ಕಪಾಟು ಈಗಲೂ ಗಟ್ಟಿ ಮುಟ್ಟಾಗಿ  ಸೇವೆ ಸಲ್ಲಿಸುತ್ತಿದೆ 


ಸಕಲೇಶಪುರ ಹಳೇ  ಬಸ್ ನಿಲ್ದಾಣದ ಬಳಿ ಪುತ್ತೂರಿನ ಪ್ರಸಿದ್ಧ ವೈದ್ಯರಾಗಿದ್ದ ಡಾ ಪಿ ಎಸ ಭಟ್ ಅವರ ಮಗಳು ಡಾ ಲೀಲಾವತಿ ಮತ್ತು ಅಳಿಯ ಡಾ ಜನಾರ್ಧನ ಶ್ರೀನಿವಾಸ ನರ್ಸಿಂಗ್ ಹೋಂ ನಡೆಸುತ್ತಿದ್ದು ತೀವ್ರತರ ರೋಗಿಗಳನ್ನು ಅಲ್ಲಿಗೆ ಕಳುಹಿಸುತ್ತಿದ್ದೆನು .ಅವರ ಮಗ ಡಾ ಅಲೋಕ್ ಮುಂದೆ ಕ್ಷೇಮಾ ದಲ್ಲಿ ನನ್ನ ವಿದ್ಯಾರ್ಥಿ ಆಗಿದ್ದನು .

ಒಂದು ದಿನ ಪಕ್ಕದ ಪ್ರಸಿದ್ಧ ಹಾರ್ಲೆ ಎಸ್ಟೇಟ್ ನ ಗಣಪಯ್ಯ ನವರು ತಮ್ಮ ತೋಟದ ವಾರ್ಷಿಕೋತ್ಸವ ಇದೆ ,ನೀವು ಬರ ಬೇಕು ಎಂದು ಹೇಳಿ ಕಳುಹಿಸದರು .ಸಂಜೆ ಕಾರ್ಯಕ್ರಮ .ಹೋಗಲು ನನ್ನ ಬಳಿ ವಾಹನ ಇರಲಿಲ್ಲ .ಇಲಾಖೆ ಜೀಪ್ ಕಾರ್ಯ ನಿಮಿತ್ತ ಎಲ್ಲೋ ಹೋಗಿತ್ತು .ನನ್ನ ಕಷ್ಟ ನೋಡಿ ರಾಜಗೋಪಾಲ್ ತಮ್ಮ ಲಾರಿ ಕೊಡುಗೆ ಮಾಡಿದರು .ಹಾಗೆ ಲಾರಿಯಲ್ಲಿ ಅಲ್ಲಿ ಹೋಗಿ ಸ್ವಲ್ಪ ದೂರ ನಿಲ್ಲಿಸಿ ನಡೆದು ಹೋದೆನು .ಆ ದಿನ ಮಾಜಿ ಕೇಂದ್ರ ಸಚಿವ ಸಿ ಎಂ ಪೂಣಚ್ಚ ಮುಖ್ಯ ಅತಿಥಿಯಾಗಿ ಬಂದಿದ್ದರು .ಎಸ್ಟೇಟ್ ಡೇ ಯಲ್ಲಿ ನೌಕರರ ನಾಟಕ ಇತ್ಯಾದಿ ಮನೋರಂಜನಾ ಕಾರ್ಯಕ್ರಮ ಇದ್ದು ಅವರ ಸಂತೋಷ ಉತ್ಸಾಹ ದಲ್ಲಿ ಪಾಲುಗೊಳ್ಳುವ ಅವಕಾಶ ಸಿಕ್ಕಿತು .ಗಣಪಯ್ಯ ಮತ್ತು ಅವರ ಮಗ ನನ್ನನು ಪ್ರೀತಿಯಿಂದ ಉಪಚರಿಸಿದರು. 

   ಹೀಗೆ ವರುಷ ಕಳೆಯುವಾಗ ಇನ್ನೊಂದು ವರ್ಗಾವಣೆ ಕಾದಿತ್ತು