ಮೊದಲ ಅವಧಿಯ ಪುತ್ತೂರು ವಾಸ
ಪುತ್ತೂರು (ರೈಲ್ವೇ ಭಾಷೆಯಲ್ಲಿ ಕಬಕಪುತ್ತೂರು )ರೈಲ್ವೇ ಆರೋಗ್ಯ ಕೇಂದ್ರದ ವೈದ್ಯರು ವರ್ಗಾವಣೆ ಅಪೇಕ್ಷೆ ಪಟ್ಟು ವಿನಂತಿ ಮಾಡಿಕೊಂಡ ಮೇರೆಗೆ ಆ ಜಾಗದಲ್ಲಿ ನನ್ನನ್ನು ನೇಮಿಸಲು ನಾನೇ ಕೇಳಿಕೊಂಡೆ .ಪುತ್ತೂರು ನನ್ನ ಊರು ಕನ್ಯಾನಕ್ಕೆ ಸಮೀಪ .ವಾರಕ್ಕೊಮ್ಮೆ ವಯೋವೃದ್ದ ಹೆತ್ತವರನ್ನು ಕಾಣಬಹುದು .ಅಲ್ಲದೆ ನನ್ನ ತಂಗಿಗೆ ಮದುವೆ ಮಾಡಿ ಆ ಮೇಲೆ ನಾನು ಮದುವೆ ಆಗ ಬೇಕಿತ್ತು .ಇದಕ್ಕೆಲ್ಲಾ ಊರ ಸಮೀಪ ಇದ್ದರೆ ಅನುಕೂಲ .ಇಲ್ಲಿಗೆ ಬರಲು ಬೇರೆ ಯಾರೂ ಸ್ಪರ್ದಿಗಳು ಇಲ್ಲದಿದ್ದರಿಂದ ಅನಾಯಾಸ ವಾಗಿ ಸಿಕ್ಕಿತು .ಮಂಗಳೂರು ಪಡೀಲ್ ನಿಂದ ನೆಟ್ಟಣ(ಸುಬ್ರಹ್ಮಣ್ಯ ರೋಡ್ ) ವರೆಗಿನ ಸಾಮ್ರಾಜ್ಯ .ಆಗ ಇನ್ನೂ ರೈಲು ಹಳಿ ನಿರ್ಮಾಣ ಮುಗಿದಿದ್ದು ಅದರ ಪಳೆಯುಳಿಕೆಗಳು ನೌಕರ ಶಾಹಿ ಇನ್ನೂ ಉಳಿದಿದ್ದವು .ಪುತ್ತೂರಿನ ವಸತಿ ಗೃಹ ವಿಶಾಲವಾಗಿ ಮರಗಳ ನಡುವೆ ಇದ್ದಿತು .ಆದರೆ ಆರೋಗ್ಯ ಕೇಂದ್ರ ರೋಗ ಗ್ರಸ್ತ ನಂತೆ ಒಂದು ಶೆಡ್ ನಲ್ಲಿ ಇದ್ದಿತು .ಸುಬ್ರಹ್ಮಣ್ಯ ರೋಡ್ ನಲ್ಲಿ ಒಂದು ಉಪ ಕೇಂದ್ರ ಮತ್ತು ಫರ್ಮಾಸಿಸ್ಟ್ ಇದ್ದರು.
ರಘುವೀರ್ ಎಂಬ ಹಿರಿಯರು ಪುತ್ತೂರಿನ ಫರ್ಮಾಸಿಸ್ಟ್ ,ವೆಂಕಟಯ್ಯ ಡ್ರೆಸ್ಸರ್ ಮತ್ತು ಕಾಂತಮ್ಮ ,ಮೂಡ್ಲಿ ಗೌಡ ಎಂಬ ನೌಕರರು .ಹೆಲ್ತ್ ಇನ್ಸ್ಪೆಕ್ಟರ್ ಆಗಿ ಮುರುಗೇಶನ್ ಎಂಬ ತಮಿಳು ತರುಣ ಆಮೇಲೆ ಸೇರಿ ಕೊಂಡರು.ವೆಂಕಟಯ್ಯ ಮದ್ಯ ವ್ಯಸನಿ ,ಆದರೆ ನೂರಕ್ಕೆ ನೂರು ವಿಧೇಯ .ನೆಟ್ಟಣದ ತಮಿಳು ಹುಡುಗಿಯನ್ನು ಎರಡನೇ ವಿವಾಹ ಮಾಡಿಕೊಂಡು ನಮ್ಮ ಊರಿನ ಅಳಿಯನಾದ.ಆಸ್ಪತ್ರೆಯಲ್ಲಿ ಗಾಯ ಡ್ರೆಸ್ ಮಾಡುವುದರ ಜತೆ ವಾರಕ್ಕೆ ಎರಡು ದಿನ ನನ್ನ ಸುಬ್ರಹ್ಮಣ್ಯ ರೋಡ್ ಸವಾರಿ ಯಲ್ಲಿ
ಜತೆ ಬರುತ್ತಿದ್ದ .ಕಾಂತಮ್ಮ ತಮಿಳು ಹೆಂಗಸು .ಗಂಭೀರ ,ಮತ್ತು ಲಕ್ಷಣ ಮುಖ ,ಮನೆ ತುಂಬಾ ಮಕ್ಕಳು ,ಅವಳ ಗಂಡ ತೀರಿ ಹೋಗಿ ಅನುಕಂಪ ನೆಲೆಯಲ್ಲಿ ಕೆಲಸ . ಸುಸಂಸ್ಕೃತ ನಡೆ ನುಡಿ .ನನ್ನ ಮನೆಯವರು ಮತ್ತು ನೆಂಟರಿಷ್ಟರೆಲ್ಲರಿಗೂ ಅವಳ ಪರಿಚಯ .ನನ್ನ ವಸತಿ ಗೃಹಕ್ಕೆ ಹೋಗುವ ದಾರಿಯಲ್ಲಿ ಒಂದು ಹಳೇ ಮನೆಯಲ್ಲಿ ವಾಸವಿದ್ದಳು .ಸ್ವಲ್ಪ ಸಮಯದ ನಂತರ ಮುದ್ಲಿಗೌಡ ವರ್ಗವಾಗಿ ಲಕ್ಷ್ಮಮ್ಮ ಎಂಬಾಕೆ ಮತ್ತು ಫರ್ಮಾಸಿಸ್ಟ್ ಆಗಿ ಕೇರಳದಿಂದ ಒಬ್ಬರು ಬಂದರು .
ನಾನು ಬಂದ ದಿನದಿಂದ ಹೆಲ್ತ್ ಯೂನಿಟ್ ನ್ನು ಒಂದು ಗೌರವಾನ್ವಿತ ತಾಣಕ್ಕೆ ಬದಲಾಯಿಸಲು ಹೊಂಚು ಹಾಕುತ್ತಿದ್ದೆ .ಸ್ಟೇಟಸ್ ಕ್ವೋ ಯಿಸ್ಟ್ ಗಳಾದ ನನ್ನ ಮೇಲಿನ ಅಧಿಕಾರಿಗಳ ಸಹಕಾರ ಸ್ವಲ್ಪವೂ ಇರಲಿಲ್ಲ .ಕೆಳಗೆ ಕಾಣುವುದು ನಾನು ಚಾರ್ಜ್ ತೆಗೆದು ಕೊಂಡ ಆರೋಗ್ಯ ಕೇಂದ್ರದ ಈಗಿನ ಚಿತ್ರ
ರೈಲ್ವೇ ಸಿಗ್ನಲ್ ವಿಭಾಗದವರಿಗೆ ಸ್ವಲ್ಪ ದೊಡ್ಡದಾದ ಶೆಡ್ ಇದ್ದಿತು .ಅದನ್ನು ವಿಭಾಗದ ಸಹಾಯಕ ಎಂಜಿನಿಯರ್ ಸುಬ್ರಹ್ಮಣ್ಯಂ ಮತ್ತು ಪುತ್ತೂರಿನ ಪರ್ಮನೆಂಟ್ ವೇ ಇನ್ಸ್ಪೆಕ್ಟರ್ (ಹಳಿ ಎಂಜಿನಿಯರ್ )ನಾಗರಾಜಪ್ಪ ನವರ ಸಹಾಯದಿಂದ ಸ್ವಲ್ಪ ಬದಲಾವಣೆ ಮಾಡಿ ಈಗ ಇರುವ ಜಾಗಕ್ಕೆ ಶಿಫ್ಟ್ ಮಾಡಿದ ಮೇಲೆ ದೊಡ್ಡವರಿಗೆ ತಿಳಿಸಿದೆನು.
ಆಗ ಆರೋಗ್ಯ ಕೇಂದ್ರದಲ್ಲಿ ಇದ್ದ ದೂರವಾಣಿಯನ್ನು ದೂರ ಸಂಚಾರ ಇಲಾಖೆಯವರು ಹೊಸ ಜಾಗಕ್ಕೆ ಅನೌಪಚಾರಿಕ ವಾಗಿ ವರ್ಗಾಯಿಸಿ ಕೊಟ್ಟರು . (ಎಂದರೆ ಯಾವುದೇ ಅರ್ಜಿ ,ಶುಲ್ಕ ಇಲ್ಲದೆ .ಅಗೆಲ್ಲ ಫೋನ್ ಒಂದು ರೂಮಿನಿಂದ ಇನ್ನೊಂದು ರೂಮಿಗೆ ಸ್ಥಳಾಂತರಿಸಲು ಅನುಮತಿ ಕೇಳಿ ,ನಿಗದಿತ ಫೀಜ್ ಪಾವತಿಸ ಬೇಕಿತ್ತು .).ಇದರಿಂದ ರೈಲ್ವೇ ಗೆ ಹಣ ಉಳಿತಾಯ ಆಯಿತು .ಆದರೆ ನನ್ನ ಮೇಲಿನವರು ಈ ತರಹದ ಒಕ್ಕಣೆಯ ಪತ್ರ ನನಗೆ ಬರೆದರು ."ನಿಮ್ಮ ಕಾರ್ಯೋತ್ಸಾಹ ಮತ್ತು ಇನಿಶಿಯೆಟಿವ್ ನಾವು ಮೆಚ್ಚುವುದಾದರೂ ಇಂತಹ ಕಾರ್ಯಗಳಲ್ಲಿ ಪ್ರಾಪರ್ ಚಾನಲ್ ಮೂಲಕ ಲಿಖಿತ ಅನುಮತಿ ತೆಗೆದು ಕೊಂಡೇ ಮುಂದುವರಿಸುವುದು "ಈಗ ನನಗೆ ಅನಿಸುತ್ತದೆ ಈ ಪ್ರಾಪರ್ ಚಾನಲ್ ಮೂಲಕ ಹೋಗಿದ್ದರೆ ಹಳೇ ಜಿಂಕ್ ಶೀಟ್ ಕಟ್ಟಡವೇ ನಮಗೆ ಗತಿ ಆಗುತ್ತಿತ್ತು . ಮೇಲಿನ ಸ್ಟೇಟಸ್ ಕ್ವೋ ಅಧಿಕಾರಿಗಳೆ ಹೆಚ್ಚು ಇದ್ದುದರಿಂದ ಮಂಗಳೂರು ಬೆಂಗಳೂರು ರೈಲು ಇನ್ನೂ ಕುಂಟಿ ಕೊಂಡು ಹೋಗುತ್ತಿತ್ತು .ರಾತ್ರಿ ಹೊತ್ತು ಪ್ರಯಾಣಿಕ ರೈಲು ಸುರಕ್ಷಾ ಕರಣಗಳಿಂದ ಘಾಟ್ ಮೂಲಕ ಹೋಗುವಂತಿಲ್ಲ ಎಂಬ ಕುಂಟು ನೆಪ .ಆಗ ನಮ್ಮೆಲ್ಲರ ಪುಣ್ಯಕ್ಕೆ ರಾಮ್ ಕುಮಾರ್ ಎಂಬ ವಿಭಾಗೀಯ ಅಧಿಕಾರಿ ಬಂದರು .ಅವರು ತಮ್ಮೆಲ್ಲ ಸಂಪನ್ಮೂಲ ಮತ್ತು ಶಕ್ತಿ ಉಪಯೋಗಿಸಿ ರಾತ್ರಿ ಅಪಾಯ ರಹಿತವಾಗಿ ಗಾಡಿ ಓಡಿಸ ಬಹುದು ಎಂದು ಟ್ರಾಯಲ್ ಮೂಲಕ ಸಾಬೀತು ಪಡಿಸಿ ಸಂಜೆ ಮಂಗಳೂರಿನಿಂದ ಹೊರಟು ಮುಂಜಾನೆ ಬೆಂಗಳೂರಿಗೆ ರೈಲು ಓಡುವ ಹಾಗೆ ಮಾಡಿದರು .ಈ ಟ್ರಾಯಲ್ ಗಳಲ್ಲಿ ನಾನೂ ಭಾಗವಸಿದ್ದೆ.ನಾವೆಲ್ಲ ಹರಿಯಾಣ ಮೂಲದ ಈ ಮಹಾನುಭಾವನಿಗೆ ಕೃತಜ್ನ ರಾಗಿ ಇರಬೇಕು .
ಪುತ್ತೂರು ನಮ್ಮ ಪಕ್ಕದ ಮನೆ ಹಳಿ ಎಂಜಿನಿಯರ್ ನಾಗರಾಜಪ್ಪ ನವರದು .ಅವರ ಪತ್ನಿ ಪ್ರೇಮಾ ,ಮಕ್ಕಳು ಕಿರಣ್ ,ಸಂದೇಶ್ ಮತ್ತು ಮಮತಾ .ಜತೆಗೆ ಅವರ ಬಿಡಾರ ದಲ್ಲಿ ಸಂಬಂದಿ ವಿಟ್ಲ ಅಡಿಕೆ ಸಂಶೋಧನಾ ಕೇಂದ್ರದ ವಿಜ್ನಾನಿ ಮಲ್ಲಿಕಾರ್ಜುನ ಸ್ವಾಮಿ ,ಪತ್ನಿ ಪ್ರಮೀಳಾ ,ಮಗ ಭಾನು ಮತ್ತು ಅಣ್ಣನ ಮಗ ಪ್ರದೀಪ್ ಇದ್ದರು .(ಕೆಲ ಕಾಲದ ನಂತರ ಸಮೀಪ ಬೇರೆ ಬಾಡಿಗೆ ಮನೆಗೆ ಹೋದರು.)ನಾಗರಾಜಪ್ಪ ಕುಟುಂಬ ನಮಗೆ ಮನೆಯವರಂತೆಯೇ ಆಗಿ ಹೋದರು.ರಜಾ ದಿನಗಳಂದು ನಮ್ಮ ದೊಡ್ಡ ಗೋಷ್ಠಿ ಅಲ್ಲಿ ನಡೆಯುತ್ತಿತ್ತು .ಪ್ರೇಮ ಅಕ್ಕನ ರಾಗಿ ರೊಟ್ಟಿ ಚಹಾ ಸರಬರಾಜು .ಕಿರಣ್ ನನಗೆ ತುಂಬಾ ಆತ್ಮೀಯ ,ಈಗಲೂ ಸಂಪರ್ಕ ಇದೆ .ಕಿರಣ್ ಮತ್ತು ಸಂದೇಶ್ ಮೈಸೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ .ನಾನು ಮತ್ತು ಈ ಮಕ್ಕಳ ಗುಂಪು (ತರಲೆ ಪಟಾಲಂ )ಊರೆಲ್ಲಾ ಸುತ್ತುತ್ತಿದ್ದೆವು .ಪುತ್ತೂರು ಜಾತ್ರೆ ಇತ್ಯಾದಿ .ನನ್ನ ಮನೆಯ ಎಲ್ಲಾ ಸಮಾರಂಭಗಳಿಗೆ ಅವರು ಬರುತ್ತಿದ್ದರು .ಆಗ ಹಾರಾಡಿಯ ವಸತಿ ಗೃಹದಿಂದ ಪೇಟೆಗೆ ಎದುರಿನ ಗದ್ದೆಯ ಮೂಲಕ ಒಳ ದಾರಿಯಲ್ಲಿ ಕೊಂಬೆಟ್ಟು ಮೂಲಕ ನಡೆದು ಕೊಂಡು ಹೋಗುತ್ತಿದ್ದೆವು .ಧರ್ಭೆ ಫಿಲೋಮೀನಾ ಶಾಲೆಗೆ ಕೂಡ ನಡೆದೇ ಹೋಗುವುದು .
ಕೆಲವು ತಿಂಗಳು ನನ್ನೊಡನೆ ನನ್ನ ಅಣ್ಣನ ಕುಟುಂಬ ವಾಸವಾಗಿತ್ತು .ಎಂಜಿನಿಯರ್ ಆಗಿರುವ ಅಣ್ಣ ಲಿಬಿಯಾ ದೇಶದಿಂದ ವಾಪಸು ಆಗಿ ಮುಂಬೈ ಯಲ್ಲಿ ಬೇರೆ ಕೆಲಸಕ್ಕೆ ಸೇರಿದ ತರುಣ ದಲ್ಲಿ .ಅಣ್ಣನ ಮಕ್ಕಳಾದ ಮುರಳಿ ಮತ್ತು ನಳಿನಿ ನನಗೆ ಒಳ್ಳೆಯ ಕಂಪನಿ .ನನ್ನೊಡನೆ ಆಸ್ಪತ್ರೆ ,ಸುಬ್ರಹ್ಮಣ್ಯ ರೋಡ್ ,ಪೇಟೆ ಎಲ್ಲಾ ಸುತ್ತಿದ್ದೆ ಸುತ್ತಿದ್ದು .
ಆಗಿನ್ನೂ ಟಿ ವಿ ಬಂದಿದ್ದು ನಾಗರಾಜಪ್ಪ ನವರ ಮನೆಯಲ್ಲಿ ಒಂದು ಕಪ್ಪು ಬಿಳುಪು ಟಿ ವಿ ಇದ್ದಿತು .ಅದಕ್ಕೆ ಮನೆ ಹಿಂದಿನ ಎತ್ತರದ ಮರಕ್ಕೆ ಒಂದು ಆಂಟೆನ್ನಾ.ಭಾನುವಾರ ರಾಮಾಯಣ ನೋಡಲು ಎಲ್ಲರೂ ಕೂಡುತ್ತಿದ್ದೆವು .
ಪುತ್ತೂರಿಗೆ ಯಕ್ಷಗಾನ ಬಯಲಾಟ ಸಾಕಷ್ಟು ಬರುತ್ತಿದ್ದು ಹೋಗುತ್ತಿದ್ದೆನು.ಬೋಳಂತ ಕೋಡಿ ಈಶ್ವರ ಭಟ್ ಅವರ ನೇತೃತ್ವದಲ್ಲಿ ಸಾಹಿತ್ಯ ಕಾರ್ಯಕ್ರಮಗಳು ಆಗಾಗ ನಡೆಯುತ್ತ ಇದ್ದವು .ಅವರ ಗೆಳೆಯರು ನಡೆದು ಕೊಂಡೇ ಊರು ಸುತ್ತಿ ಧನ ಸಂಗ್ರಹ ಮಾಡುತ್ತಿದ್ದು ನನ್ನ ಮನೆಗೂ ಹಲವು ಬಾರಿ ಬಂದಿದ್ದರು.ಈಶ್ವರ ಭಟ್ ಉದಯವಾಣಿ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ಭಾತ್ಮಿದಾರರೂ ಆಗಿದ್ದು ನಮ್ಮ ರೈಲ್ವೇ ಕಾರ್ಯ ಕ್ರಮಗಳಿಗೆ ಬರುತ್ತಿದ್ದರು .ಅವರೊಂದಿಗೆ ಶ್ರೀ ಪ್ರೊ ವಿ ಬಿ ಮೊಳೆಯಾರ್,ಪುರಂಧರ ಭಟ್ ಮತ್ತು ನನ್ನ ಅಕ್ಕನ ಗಂಡ ಪ್ರೊ ವಿ ಬಿ ಅರ್ತಿಕಜೆ ಇರುತ್ತಿದ್ದರು .ಸಾಹಿತ್ಯ ಪ್ರಿಯನಾದ ನನಗೆ ಇದು ಆಪ್ಯಾಯಮಾನ ವಾಗಿತ್ತು .
ಪುತ್ತೂರಿನಲ್ಲಿ ಇರುವಾಗಲೇ ನನ್ನ ತಂಗಿಯಂದಿರ ಮದುವೆ ,ನನ್ನ ವಿವಾಹ ,ಮತ್ತು ತಮ್ಮಂದಿರ ವಿವಾಹ ನಡೆಯಿತು .ನನ್ನ ಪತ್ನಿ ಉಷಾ ಕಾಸರಗೋಡು ತಾಲೂಕು ಪೆರ್ಲ ಸಮೀಪದವಳು ಅವಳ ತಂದೆ ಪೆರ್ಲ ಸಾತ್ಯನಾರಾಯಣ ಶಾಲೆಯಲ್ಲಿ ಅಧ್ಯಾಪಕ ,ಮದುವೆ ವಿಟ್ಲ ಪುತ್ತೂರು ನಡುವಿನ ಕಂಬಳಿ ಬೆಟ್ಟು ಹಾಲ್ ನಲ್ಲಿ ನನ್ನ ಮದುವೆಗೆ ಇಲಾಖಾ ಸಿಬ್ಬಂದಿ ಲಾರಿ ಯಲ್ಲಿ ತುಂಬಿ ಕೊಂಡು ಬಂದದ್ದು ವಿಶೇಷ .ನನ್ನ ಮಗ ನಿತಿನ್ ಪುತ್ತೂರಿನ ಪತ್ರಾವೋ ಆಸ್ಪತ್ರೆಯಲ್ಲಿ ಹುಟ್ಟಿದ್ದು .
ಈ ಅವಧಿಯಲ್ಲಿಯೇ ನನ್ನ ಮೊದಲನೇ ವಾಹನ ಕಾವಸಾಕಿ ಬಜಾಜ್ ಮೋಟಾರ್ ಸೈಕಲ್ ಕೊಂಡದ್ದು .ನನ್ನ ಕಿರಿಯ ಸಹೋದರ ಶ್ರೀನಿವಾಸ ಬೆಂಗಳೂರಿನಿಂದ ತಂದು ಕೊಟ್ಟುದು .ಆಗ ಇಂತಹ ವಾಹನಗಳು ಬರ ತೊಡಗಿದ್ದ ಕಾಲ,ನಾನು ಪೇಟೆಯಲ್ಲಿ ಗಾಡಿ ನಿಲ್ಲಿಸಿದಾಗ ಅಕ್ಕ ಪಕ್ಕದವರು ಬೆಂಜ್ ಕಾರ್ ನೋಡಿದವರಂತೆ ಕುತೂಹಲ ದಿಂದ ನೋಡುತ್ತಿದ್ದರು .ಇದೇ ವಾಹನ ಮುಂದೆ ಹತ್ತು ವರುಷ ನನ್ನ ನಂಬಿಕೆಯ ಸಾರಥಿ ಆಯಿತು .
ಆಗ ನಮ್ಮ ಮನೆಯಲ್ಲಿ ಗ್ರೈಂಡರ್ ಇರಲಿಲ್ಲ ,ಸಂಟಿಯಾರ್ ನಿಂದ ತಂದ ಅರೆಯುವ ಕಲ್ಲು ,ಒಂದೇ ಗ್ಯಾಸ್ ಸಿಲಿಂಡರ್ ಇದ್ದು ಅದು ಮುಗಿದ್ದಾಗ ಸೀಮೆ ಎಣ್ಣೆ ಸ್ಟೌ ,ಈಗಿನಂತೆ ಬೇಕಾದಷ್ಟೂ ಹಾಲು ಸರಬರಾಜು ಇಲ್ಲ .ಆದರೂ ಪೇಟೆಗೆ ಬಂದ ಹತ್ತಿರ ಮತ್ತು ದೂರದ ನೆಂಟರಿಷ್ಟರು ಮನೆಗೆ ಬರುತ್ತಿದ್ದರು ಮತ್ತು ಬಂದಾಗ ಸಂತೋಷ ಆಗುತ್ತಿತ್ತು .ಈಗಿನ ಹಾಗೆ ಫೋನ್ ಮಾಡಿ ಬರಲು ಅದೂ ಇರಲಿಲ್ಲ .ರಾತ್ರಿ ಬೆಂಗಳೂರಿಗೆ ರೈಲು ಮತ್ತು ಬಸ್ ಹಿಡಿಯಲು ಬಂದವರೂ ಬರುತ್ತಿದ್ದರು .ವಿದ್ಯುತ್ ಶಕ್ತಿ ಆಗಾಗ ಕೈ ಕೊಡುವುದು .
ಪುತ್ತೂರಿನ ಪರ್ಲಡ್ಕ ಕಾರಂತ ಬಾಲ ವನ ದ ಬಳಿ ನನ್ನ ಅಕ್ಕ ಭಾಗ್ಯ ಲಕ್ಷ್ಮಿ ಮನೆ .ಅಲ್ಲಿಗೆ ಆಗಾಗ ನಡಿಗೆಯಲ್ಲಿಯೇ ಸವಾರಿ .ಅವರದು ಕೂಡು ಕುಟುಂಬ ಆಗಿದ್ದು ಯಾವತ್ತೂ ಸಂಭ್ರಮ .ಭಾವ ವಿ ಬಿ ಅರ್ತಿಕಜೆ ವಿವೇಕಾನಂದ ಕಾಲೇಜ್ ನಲ್ಲಿ ಇತಿಹಾಸ ಪ್ರಾಧ್ಯಾಪಕರು ,ಲೇಖಕರು ಮತ್ತು ಪತ್ರಕರ್ತರು ಆಗಿ ಯಾವಾಗಲೂ ಬ್ಯುಸಿ ಆಗಿ ಇರುತ್ತಿದ್ದರು .ಅವರ ಮಗ ಬ್ಯಾಂಕ್ ಅಧಿಕಾರಿ ಮಗಳು ಬೆಂಗಳೂರಿನಲ್ಲಿ ಗೃಹಿಣಿ .
ನನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಬಂಧು ಮಹಾಲಿಂಗೇಶ್ವರ ಭಟ್ ಮತ್ತು ದುರ್ಗಾಮಣಿ ,(ಅಧ್ಯಾಪಕ ದಂಪತಿಗಳು )ವಾಸವಿದ್ದು ನಮ್ಮಲ್ಲಿ ಪರಸ್ಪರ ಭೇಟಿ ಆಗುತ್ತಿತ್ತು .ಅವರ ಮಗಳು ವೈಶಾಲಿ ನನ್ನ ಪುಟ್ಟ ಗೆಳತಿ .ನಮ್ಮ ಆರೋಗ್ಯ ಕೇಂದ್ರದ ಸಮೀಪ ಶ್ರೀ ಮೂಡಿತ್ತಾಯ ಮನೆ ಕಟ್ಟಿ ವಾಸವಿದ್ದು ಪ್ರತಿಭಾವಂತರಾದ ಅವರ ಮಕ್ಕಳು ನಮ್ಮಲ್ಲಿ ಆಗಾಗ ಬರುತ್ತಿದ್ದು ನನ್ನ ಸಂಗ್ರಹ ದಿಂದ ಪುಸ್ತಕ ಒಯ್ದು ಓದುತ್ತಿದ್ದರು.ಅಗೆಲ್ಲ ಮಕ್ಕಳು ಸಮೀಪದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದು ಹಾರಾಡಿ ಪ್ರಾಥಮಿಕ ಶಾಲೆ ,ಕೊಂಬೆಟ್ಟು ವಿನಲ್ಲಿ ಇದ್ದ ಬೋರ್ಡ್ ಹೈಯರ್ ಸೆಕೆಂಡರಿ ಶಾಲೆ ಪ್ರತಿಷ್ಠಿತ ಸಂಸ್ಥೆ ಗಳಾಗಿದ್ದವು .
ನಮ್ಮ ಮನೆಯ ಸಮೀಪ ಬಡೆಕ್ಕಿಲ ಶಂಕರ ಭಟ್ ಎಂಬ ಆಯುರ್ವೇದ ವೈದ್ಯರ ಮನೆ ಇತ್ತು .ಅವರ ಶ್ರೀಮತಿ ಜಯಲಕ್ಶ್ಮಿ .ಅವರಿಗೆ ಏಳು ಹೆಣ್ಣು ಮಕ್ಕಳು .ಶಾಲೆಗೆ ಹೋಗುವವರು .ಶಂಕರ ಭಟ್ ಅವರಿಗೆ ಪುತ್ತೂರ ಪೋಲೀಸು ಸ್ಟೇಷನ್ ಬಳಿ ಕ್ಲಿನಿಕ್ ಇತ್ತು .ಅವರ ಅಣ್ಣ ಪುತ್ತೂರಿನ ಪ್ರಸಿದ್ದ ವೈದ್ಯ ಶಿವರಾಮ ಭಟ್ .(ಮುಂಗ್ಲಿ ಮನೆ ಮರಿಯಪ್ಪ ಭಟ್ಟರ ಅಳಿಯ ).ಶಂಕರ ಭಟ್ ಮತ್ತು ಅವರ ಕುಟುಂಬ ನಮಗೆ ಬಹಳ ಆತ್ಮೀಯರಾದರು .ಮುಂದೆ ನಾವು ಪುತ್ತೂರು ಬಿಟ್ಟ ಕೆಲ ದಿನಗಳಲ್ಲಿ ಅವರು ಹಠಾತ್ ನಿಧನ ರಾದ ವಾರ್ತೆ ಬಂದು ಬಹಳ ವ್ಯಥೆಯಾಯಿತು .ಆ ತಾಯಿ ದೃತಿ ಗೆಡದೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ,ಯೋಗ್ಯ ವರರಿಗೆ ಮದುವೆ ಮಾಡಿಕೊಟ್ಟು ಸೈ ಎನ್ನಿಸಿ ಕೊಂಡಿದ್ದಾರೆ .ಈಗಲೂ ನಮ್ಮೊಡನೆ ಸಂಪರ್ಕ ಇರಿಸಿ ಕೊಂಡಿರುವರು .
ಹೀಗೆ ಸಮಯ ಹೋಗುತ್ತಿರಲು ಒಂದು ದಿನ ಚೆನ್ನೈನಿಂದ ಮುಖ್ಯ ವೈದ್ಯಾಧಿಕಾರಿ ಡಾ ಯೋಗಿ ಮಹ್ರೋತ್ರಾ ಇನ್ಸ್ಪೆಕ್ಷನ್ ಗೆ ಬಂದಿದ್ದವರು ನನ್ನೊಡನೆ ನಿನ್ನಂತಹ ಉತ್ಸಾಹಿ ಯುವಕರು ಮುಂದೆ ಕಲಿಯ ಬೇಕು ಮತ್ತು ಪೆರಂಬೂರ್ ರೈಲ್ವೇ ಆಸ್ಪತ್ರೆಯಂತಹ ಕಡೆ ಇರಬೇಕು .ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ ಬರೆ .ಆಮೇಲೆ ನಾನು ಪೆರಂಬೂರಿಗೆ ಕರೆಸಿಕೊಳ್ಳುವೆ .ನಡುವೆ ಒಂದು ವರ್ಷ ಮಂಗಳೂರು ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡು ಎಂದು ಹಾರೈಸಿದರು .ಅವರ ಆಶೀರ್ವಾದದಿಂದ ಮುಂದೆ ನಾನು ಪಿ ಜಿ ಮಾಡುವಂತೆ ಆಯಿತು .
ಮುಗಿಸುವ ಮುನ್ನ ನನ್ನ ಸುಬ್ರಹ್ಮಣ್ಯ ರೋಡ್ ಫರ್ಮಾಸ್ಸಿಸ್ಟ್ ವಿಜಯನ್ ಬಗ್ಗೆ .ಇವರು ಪ್ರಮಾಣಿಕ ಕೆಲಸ ಗಾರ : ಸಾಹಿತ್ಯ ಪ್ರಿಯ ,ಮಲಯಾಳ ಸಾಹಿತ್ಯದ ಬಗ್ಗೆ ನನಗೆ ಓನಾಮ ಹಾಕಿದವರು .ನಾನು ಸುಬ್ರಹ್ಮಣ್ಯ ರೋಡ್ ಗೆ ಹೋದಾಗ ಸಂಜೆ ಅವರೊಡನೆ ಬಿಳಿ ನೆಲೆ ಅಥವಾ ಸಿರಿವಾಗಿಲು ಕಡೆ ಮಾತನಾಡಿಕೊಂಡು ವಾಕಿಂಗ್ ಹೋಗುತ್ತಿದ್ದೆವು .ಈಗ ಮಂಗಳೂರು ರೈಲ್ವೇ ಆರೋಗ್ಯ ಕೇಂದ್ರ ದಲ್ಲಿ ಇದ್ದು ನನ್ನ ಕುಟುಂಬಕ್ಕೆ ಆತ್ಮೀಯರು