ಬೆಂಬಲಿಗರು

ಶುಕ್ರವಾರ, ಏಪ್ರಿಲ್ 29, 2022

ಆಸ್ಪತ್ರೆಯ ಇತರ ಕೆಲವು ಉಪಯೋಗಗಳು

 ನಾನು ಹಿಂದೆ ಕೆಲಸ ಮಾಡಿದ  ಆಸ್ಪತ್ರೆಯಲ್ಲಿ ಆದ  ಅನುಭವ . ಆಸ್ಪತ್ರೆಯ ಮ್ಯಾನೇಜರ್ ಬಳಿ ಒಬ್ಬರು ಏನೋ ಗುಸು  ಗುಸು ಮಾತನಾಡುತ್ತಿದ್ದರು . ಅವರು ಹೋದ ಮೇಲೆ ಏನು ಕತೆ ? ಎಂದು ಮ್ಯಾನೇಜರ್ ಅವರಲ್ಲಿ ಕೇಳಿದೆ . ಸಾರ್  ಅವರ ಮಗಳಿಗೆ ವರಾನ್ವೇಷಣೆ ಮಾಡುತ್ತಿದ್ದಾರೆ . ಅವರಲ್ಲಿ ಹುಡುಗ ಹುಡುಗಿಯ ಮನೆಗೆ ಬಂದು ನೋಡುವ ಪದ್ದತಿ ಇಲ್ಲ .ಅದಕ್ಕೆ  ಆಸ್ಪತ್ರೆಯ ವೈಟಿಂಗ್ ರೂಮ್ ನಲ್ಲಿ ಕೂರಿಸಿ ವರನನ್ನು ಅಲ್ಲಿಗೆ ಕರೆಸ ಬಹುದಾ ಎಂದು ಕೇಳುತ್ತಿದ್ದರು .ಇಲ್ಲಿ ಹಲವು ಮಂದಿ ಹೀಗೆ ಬರುತ್ತಾರೆ ,ನಾವೂ ಒಳ್ಳೆಯ ಕಾರ್ಯ ಎಂದು ಸುಮ್ಮನೆ ಇರುತ್ತೇವೆ ' ಎಂದರು . 

ನನ್ನ ಅಜ್ಜ ಆಗಾಗ  ಪುತ್ತೂರಿನಲ್ಲಿ ಸುಂದರ ರಾಯರು ಮತ್ತು ಮಂಗಳೂರಿನಲ್ಲಿ ಡಾ ಚಾರಿ ಬಳಿಗೆ ಸುಮ್ಮನೇ ಅನಾರೋಗ್ಯ ಆರೋಪಿಸಿಕೊಂಡು ಹೋಗುತ್ತಿದ್ದರು . ಈ ಹಿರಿಯರೊಂದಿಗೆ ಮಾತನಾಡುವುದೇ  ಅಜ್ಜನಿಗೆ ಒಂದು ಟಾನಿಕ್ ಆಗಿತ್ತು . ಹಿಂದೆ  ದೊಡ್ಡ ಪಟ್ಟಣಗಳಲ್ಲಿ ರೋಗಿಗಳು ಅಡ್ಮಿಟ್ ಆದರೆ ಬಹಳ ಮಂದಿ ಅವರನ್ನು ನೋಡಿ ಕೊಂಡ ಹಾಗೂ ಆಯಿತು ಪೇಟೆ ನೋಡಿದ ಹಾಗೂ ಆಯಿತು ಎಂದು ಬರುತ್ತಿದ್ದರು .  ಈಗ ಅದಕ್ಕೆ ರೋಗಿಯ ಜತೆಗೆ ಇರುವವರ ಸಂಖ್ಯೆ ನಿರ್ಬಂಧಿಸಲು ಪಾಸ್ ವ್ಯವಸ್ಥೆ ಮಾಡಿದ್ದಾರೆ . 

ಇನ್ನು ಕೆಲವರು ಕೋರ್ಟ್ ಕೇಸ್ ಹಾಜರಾತಿ  ,ಕ್ರಿಮಿನಲ್ ಕೇಸ್ ಇರುವವರು ಬಂಧನ ತಪ್ಪಿಸಲು  ಇಲ್ಲದ ಮತ್ತು ಇರುವ ರೋಗಗಳ ನೆಪದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವುದು ನಿಮಗೆ ತಿಳಿದಿದೆ . 

ಒಂದು ಊರಿನಲ್ಲಿ ಹೋಟೆಲ್ ರೂಮ್ ಸಿಗಲಿಲ್ಲ ಎಂದು ಆಸ್ಪತ್ರೆಯಲ್ಲಿ ಬಂದು ಅಡ್ಮಿಟ್ ಆದುದನ್ನು  ಕಂಡಿದ್ದೇನೆ .ಎದೆ ನೋವು ಇತ್ಯಾದಿ ಹೇಳುವಾಗ ನೂರು ಶತ ಅನಾರೋಗ್ಯ ಇಲ್ಲ ಎಂದು ಹೇಳುವುದು ವೈದ್ಯರಿಗೂ ಕಷ್ಟೆ . 

ಹಲವು ಕಂಪನಿಗಳು ಆರೋಗ್ಯ ವಿಮೆ ಮಾಡಿದವರು ಒಳ ರೋಗಿಗಳಾಗಿ ಇದ್ದರೆ ಮಾತ್ರ ಚಿಕಿತ್ಸಾ ತಪಾಸಣಾ ಹಣ ಪಾವತಿ ಮಾಡುವುದು ಎಂಬ ಕಂಡಿಷನ್ ಇರುವ ಕಾರಣ ಅದಕ್ಕೆಂದೇ ಅಡ್ಮಿಟ್ ಆಗುವವರು ಇದ್ದಾರೆ.

ನಾನು ಪೆರಂಬೂರು ರೈಲ್ವೇ ಆಸ್ಪತ್ತ್ರೆಯಲ್ಲಿ ಇದ್ದಾಗ ನಡೆದ ಘಟನೆ .ರೈಲ್ವೇ ಮಂತ್ರಿ ತಮ್ಮ ಹೃದಯ ತಪಾಸಣೆಗೆ ಆಸ್ಪತ್ರೆಗೆ ಬರುವವರು ಇದ್ದರು.ಆಯಕಟ್ಟಿನ  ಸ್ಥಾನದಲ್ಲಿ ಇದ್ದು ಸಚಿವರಿಗೆ ಮೊದಲು ಆಪ್ತರಾಗಿದ್ದ ಓರ್ವ ಹಿರಿಯ ಅಧಿಕಾರಿ ನಮ್ಮ ಮುಖ್ಯಸ್ಥರಲ್ಲಿ ಅಂಗಲಾಚಿ ಐ ಸಿ ಯು ನಲ್ಲಿ ದಾಖಲಾತಿ ಪಡೆದರು . ಆಮೇಲೆ ಮಂತ್ರಿಗಳ ಪಿ ಎ ಮೂಲಕ ಅವರಿಗೂ ತಿಳಿಸಿರ ಬೇಕು .ಮಂತ್ರಿಗಳು ತಮ್ಮ ಪರೀಕ್ಷೆ ಎಲ್ಲಾ ಮುಗಿದ ಮೇಲೆ ಐ ಸಿ ಯು ಗೆ ಬಂದು ಇವರನ್ನೂ ವಿಚಾರಿಸಿದರು ಅನ್ನಿ .ಮಂತ್ರಿ ಅತ್ತ ಹೋದೊಡನೆ ಈ ಆಸಾಮಿಯೂ ಡಿಶ್ಚಾರ್ಜ್ ಮಾಡಿಸಿ ಕೊಂಡು ಹೋದರು.

ಇಯೋಸಿನೋಪಿಲ್ ಕಾಯಿಲೆ

                   Difference Between Neutrophils Eosinophils and Basophils | Structure,  Function, Comparison

 

ನಮ್ಮ ರಕ್ತದಲ್ಲಿ ಬಿಳಿ ರಕ್ತ ಕಣಗಳು ಎಂದು ಇವೆಯಷ್ಟೇ .ಅವುಗಳಲ್ಲಿ ಕೆಲವನ್ನು ಇಯೋಸಿನೋಫಿಲ್ ಎಂದು ಕರೆಯುತ್ತಾರೆ . ಬಿಳಿ ರಕ್ತ ಕಣಗಳ ೧ ರಿಂದ ೪ ಶತ ಇವುಗಳ ಸಂಖ್ಯೆ ಇರುತ್ತವೆ . 

ಇವುಗಳು ನಿಗದಿದ ಪ್ರಮಾಣಕ್ಕಿಂತ ಅಧಿಕ ಇದ್ದರೆ ಇಯೋಸಿನೋಫಿಲಿಯಾ ಎಂದು ಕರೆಯುತ್ತಾರೆ . ಇಯೋಸಿನೋಫಿಲಿಯಾ ಒಂದು ಕಾಯಿಲೆ ಅಲ್ಲ .ಬೇರೆ ಬೇರೆ ಕಾಯಿಲೆಗಳಲ್ಲಿ ಪ್ರಕಟವಾಗುವ ಒಂದು ಲಕ್ಷಣ ಅಷ್ಟೇ . 

ಇಯೋಸಿನೋಫಿಲ್  ಕಣಗಳು ಅಲರ್ಜಿ ಅಸ್ತಮಾ ಇರುವವರಲ್ಲಿ ಅಧಿಕ ಇರುತ್ತದೆ . ಇವರಲ್ಲಿ ಅವರ ಅಲರ್ಜಿ ಮತ್ತು ಅಸ್ತಮಾ ಕ್ಕೆ ಚಿಕಿತ್ಸೆ ಮಾಡುತ್ತೇವೆ . ಇಂತಹವರಲ್ಲಿ ಬಹಳ ಮಂದಿ ತಮ್ಮ ರಕ್ತ ಪರೀಕ್ಷೆ ಆಗಾಗ ಮಾಡಿಕೊಂಡು ಇಯೋಸಿನೋಫಿಲ್ ಜಾಸ್ತಿ ಇದೆಯಲ್ಲಾ ಎಂದು ಕೊರಗಿಕೊಂಡು ಅದಕ್ಕಾಗಿ  ಆಯುರ್ವೇದ ಹೋಮಿಯೋಪತಿ ಅಲೋಪಥಿ ಎಂದು ಬದಲಾಯಿಸಿ ಬದಲಾಯಿಸಿ ಚಿಕಿತ್ಸೆ ಮಾಡಿಸುತ್ತಿರುತ್ತಾರೆ . ಇದರಿಂದ ಪ್ರಯೋಜನ ಇಲ್ಲ . 

ಕರುಳ ಜಂತು ಗಳು ಕೂಡಾ ಈ ಕಣಗಳು ಜಾಸ್ತಿ ಆಗಲು ಕಾರಣ . ಟ್ರೋಪಿಕಲ್ ಇಯೋಸಿನೋಫಿಲಿಯಾ ಎಂಬ ಕಾಯಿಲೆ ಇದೆ .ಫೈಲೇರಿಯಾ ರೋಗಾಣು ಗಳಿಂದ ಉಂಟಾಗುವದು ಎಂದು ಪ್ರತೀತಿ .ಇಲ್ಲಿ ಇಯೋಸಿನೋಫಿಲ್ ೩೦ ಶೇಕಡಾ ಕ್ಕಿಂತಲೂ ಅಧಿಕ ಇರುವದು . ಇದು ಈಗ ಅಷ್ಟು ಸಾಮಾನ್ಯ ವಾಗಿ ಕಾಣಿಸಿ ಕೊಳ್ಳುತ್ತಿಲ್ಲ . ಇಲ್ಲಿ ಫೈಲೇರಿಯಾ ದ ಔಷಧಿ ಕೊಡುವರು . 

ಮೊನ್ನೆ ಒಬ್ಬ ಯುವಕ ಬಂದಿದ್ದರು .ಅವರ ಇಯೋಸಿನೋಫಿಲ್ ಪ್ರಮಾಣ ೭ ಶತ ಇದ್ದದ್ದು ಕಡಿಮೆ ಆಗಿಲ್ಲಾ ಎಂದು ಹಲವು ಕಡೆ ಹೋಗಿ ಬಂದಿದ್ದರು .ಅವರಿಗೆ ಯಾವಾಗಲೂ ನೆಗಡಿ ,ಅಕ್ಷಿ ಇತ್ಯಾದಿ ಇರುತ್ತದೆ ಎಂದರು .ನಾನು ಅವರಿಗೆ 'ನಿಮಗೆ ಅಲರ್ಜಿ ಇದೆ .ಅದರಿಂದ ಇಯೋಸಿನೋಫಿಲ್ ಸ್ವಲ್ಪ ಜಾಸ್ತಿ . ಅದಕ್ಕೆ ಅಲರ್ಜಿ ಚಿಕಿತ್ಸೆ ಮಾಡಿದರೆ ಸಾಕು ಎಂದು ಸಮಾಧಾನ ಮಾಡಿದೆ . 

ಬಾಲಂಗೋಚಿ : ಆಗಾಗ ಶೀತ ಆಗುವರ ಹೆಸರು ಕೇಳುತ್ತೇನೆ .ಅವರು ಮೀನಾಕ್ಷಿ ,ನಳಿನಾಕ್ಷಿ ಇತ್ಯಾದಿ ನಾಮಧೇಯ ಇದ್ದವರಾದರೆ ನಿಮ್ಮ ಹೆಸರಿನಲ್ಲಿಯೇ ಅಕ್ಷೀ ಇದೆ ಅದಕ್ಕೆ ನಿಮಗೆ ಅಕ್ಷೀ ಬರುವುದು ಎನ್ನುತ್ತೇನೆ

ಬುಧವಾರ, ಏಪ್ರಿಲ್ 27, 2022

ಡಾ ವೈ ಆರ್ ಮೋಹನ್

 

 

                                     


 ಮಲೆನಾಡಿನ ಒಂದು ಕುಗ್ರಾಮದಲ್ಲಿ ಜನಿಸಿ ಎಲ್ಲಾ ಅಡೆ ತೊಡೆಗಳನ್ನು ಎದುರಿಸಿ ತತ್ವ ಶಾಸ್ತ್ರದಲ್ಲಿ ಉನ್ನತ ಅಧ್ಯಯನ ಮಾಡಿ ಅಮೆರಿಕಾ ದೇಶದಲ್ಲಿ ಅಧ್ಯಾಪನ ಮಾಡಿದವರು ಡಾ ವೈ ಆರ್ ಮೋಹನ್ .ಅವರ ಆತ್ಮ ಚರಿತ್ರೆ "ನೆನೆವುದೆನ್ನ ಮನ ಮಲೆನಾಡ ಮೈತ್ರಿಯನು "ಮತ್ತು "ನೆನಪುಗಳು " ಎಂಬ ಎರಡು ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದು ,ಯು ಆರ್ ಅನಂತ ಮೂರ್ತಿ ಮುನ್ನುಡಿ ಬರೆದಿದ್ದಾರೆ .ಇತಿಹಾಸದ ಸಂಧಿ ಕಾಲದಲ್ಲಿ ಕಳೆದ ಅವರ ಬಾಲ್ಯ ಮತ್ತು ಯೌವನ ದಿನಗಳು ರೋಚಕವಾಗಿವೆ .ಅವರ ಮೈಸೂರು ದಿನಗಳು ,ಒಳ್ಳೆಯ ಅಧ್ಯಾಪಕರು ಮುಖ್ಯವಾಗಿ ಅವರ ಮೇಲೆ ಬಹಳ ಪ್ರಭಾವ ಬೀರಿದ ಪ್ರೊಫ್ .ಯಮುನಾಚಾರ್ಯ ಬಗ್ಗೆ ಆಪ್ತವಾದ ವಿವರಗಳು ಇವೆ . 

ಇವರು ಪಾರ್ಕಿನ್ಸನ್ ಕಾಯಿಲೆಗೆ ಗುರಿಯಾಗಿ ಬಹಳ ಕಷ್ಟ ಪಡಬೇಕಾಯಿತು .ಈ ಕಾಯಿಲೆಯ ಬಗ್ಗೆಯೇ ಒಂದು ಕೃತಿ ರಚಿಸಿದ್ದಾರೆ . 

 ತಮ್ಮ ಮಾಧ್ಯಮಿಕ ಶಾಲೆಯ ಪ್ರವಚನ ಬಗ್ಗೆ ಇವರು ವಿವರವಾಗಿ ಒಂದು ಅಧ್ಯಾಯ ಬರೆದಿದ್ದಾರೆ . 

ತಮ್ಮ ಕನ್ನಡ ಅಧ್ಯಾಪಕರು ಕೋಳೂರ ಕೊಡಗೂಸು ಪದ್ಯ ಕಲಿಸಿದ ಮೇಲೆ ಗಂಟೆ ಬಾರಿಸಿದಾಗ ಹುಡುಗರು ಜೈಲಿನಿಂದ ತಪ್ಪಿಸಿ ಕೊಳ್ಳುವವರಂತೆ  ಹೊರಗೆ ಧಾವಿಸಿ ನುಗ್ಗುತ್ತಿದ್ದರು . ಆ ಒಂದು ಪದ್ಯ ಕಲಿಸಲು ಅವರಿಗೆ ಎಷ್ಟೋ ಕಾಲ ಹಿಡಿಯಿತು .ಅದನ್ನು ಮುಗಿಸುವ ಹೊತ್ತಿಗೆ ನಮ್ಮ ಕನ್ನಡ ಆಸಕ್ತಿ ಕಮರಿ ಹೋಗಿತ್ತು .ಕತೆಯಲ್ಲಿ  ಕೊಡಗೂಸು ಮಲತಾಯಿಯ ಶಿಕ್ಷೆಗೆ ಹೆದರಿ ಶಿವನನ್ನು ಪ್ರಾರ್ಥಿಸುತ್ತಾ ಪ್ರಾಣ ಬಿಡುತ್ತಾಳೆ .ಆಗ ಶಿವ ಪ್ರತ್ಯಕ್ಷನಾಗಿ ಎಲ್ಲಾ ಮಂಗಳ ಕರವಾಗಿ ಮುಕ್ತಾಯವಾಗುತ್ತದೆ .ನನ್ನ ಸಹಪಾಠಿ ಶಿವ ಮೂರ್ತಿ ಕೊಡಗೂಸು ಪ್ರಾಣ ಕಳೆದು ಕೊಳ್ಳಲಿಲ್ಲ .ನಮ್ಮ ಮೇಷ್ಟ್ರು ಕೊಡಗೂಸನ್ನು ಕೊಂದು ಹಾಕಿದರು ಎಂದ .ನನಗನಿಸಿದ್ದು ಈ ಮೇಷ್ಟ್ರು ಕೊಡಗೂಸಿನ ಜತೆ ಕನ್ನಡವನ್ನೂ ಕೊಂದು ಹಾಕಿದರು ಎಂದು . 

ಕನ್ನಡ ಮೇಷ್ಟ್ರ ಕತೆ ಈ ರೀತಿ ಆದರೆ ಇಂಗ್ಲಿಷ್ ಮೇಷ್ಟರದು ಇನ್ನೊಂದು ವೈಪರೀತ್ಯದ ಪರಮಾವಧಿ ಆಗಿತ್ತು .

ಅವರ ಪಾಠ ಕ್ರಮದ ಉದಾಹರಣೆ ಹೀಗಿತ್ತು

 I say silence ,silence. you see this is class room ;not fish market,i say,do you understand?

'You see ,English is very important.In today's society .you see .If you don't know English ,your bean doesn't get baked(ನಿಮ್ಮ ಬೇಳೆ ಬೇಯದು) ,you understand?  .

You see ,English is very very difficult !You see ,don't think learning English is as easy as peeling plantain and putting in mouth I say'(ಬಾಳೆಹಣ್ಣು ಸುಲಿದು ತಿಂದಂತೆ ಅಲ್ಲ )

ಇನ್ನೂ ಕೆಲವು ಸಾಲುಗಳು 

I say you are a village simpleton!You see you listen to Ramayana all night and in the morning ask what is Rama's relation to Sita!

I see that's why you look like one who took castor oil (ಹರಳೆಣ್ಣೆ ಕುಡಿದವನ ಮುಖ ).

Teacher:I say ,I simply asked whether you saw anything .You see ,if someone shouts pumpkin-thief ,you touch and feel your shoulders!(ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದನಂತೆ )

Now say what is the plural form of sheep?Student:Sheeps saar !

Teacher :That includes you also !Useless fellow.I feel like warming your palm.(ಕೈ ಬಿಸಿ ಮಾಡಬೇಕು )

ಮಕ್ಕಳಲ್ಲಿ ಕುತೂಹಲ ಹುಟ್ಟಿಸಿ ಚೆನ್ನಾಗಿ ಪಾಠ ಮಾಡುತ್ತಿದ್ದವರು ಭೂಗೋಳ ಅಧ್ಯಾಪಕರು ಮಾತ್ರ ಎಂದು ನೆನಪಿಸಿ ಕೊಳ್ಳುತ್ತಾರೆ

ಮಂಗಳವಾರ, ಏಪ್ರಿಲ್ 26, 2022


 ಜಿ ಪಿ ರಾಜರತ್ನಂ ಅವರ ದಾರಿಯಲ್ಲಿಯೇ ನಡೆದ ಕನ್ನಡದ ಪರಿಚಾರಕ ಚಿ ಶ್ರೀನಿವಾಸ ರಾಜು ಅವರ ಪತ್ನಿ ಸರಸ್ವತಿ ಅವರ ಆತ್ಮ ಕಥನ ಎಂ ಆರ್ ಭಗವತಿ ಅವರ ನಿರೂಪಣೆ . ಯಾವ ಸೋಗೂ ಬೀಗೂ ಇಲ್ಲದ ಯಥಾ ಪಸ್ತುತಿ .ಬೆನ್ನುಡಿಯಲ್ಲಿ ಶ್ರೀ ಬಿ ಪಿ ಬಸವರಾಜು ಹೇಳಿರುವಂತೆ ಪ್ರಾಮಾಣಿಕತೆಯೇ ಈ ಕೃತಿಯ ಜೀವಾಳ . ಎಂ ಆರ್ ಭಗವತಿ ಆರಂಭದಲ್ಲಿ ಸರಸ್ವತಿ ಶ್ರೀನಿವಾಸರಾಜು ಎಂಬ ತುಂಬು ಜೀವನಕ್ಕೆ ಜೀವ ನೀಡಿದ ಅವರ ನೆನಪುಗಳು ನಿಮ್ಮ ಜೀವನನದ ಮತ್ತಾವುದೋ ಬಾಲ್ಯದ ನೆನಪಿಗೆ ಮಿಳಿತವಾದರೆ ತನ್ನ ಶ್ರಮ ಸಾರ್ಥಕ ಎಂದು ಕೊಂಡದ್ದು ಕೃತಿ ಓದಿದ ಬಳಿಕ ಸರಿ ಎಂಬ ಭಾವನೆ ಬರುತ್ತದೆ .

ಶ್ರೀನಿವಾಸ ರಾಜು ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ ಸ್ಥಾಪಿಸಿ ,ಹಲವು ಚಟುವಟಿಕೆಗಳ ರೂವಾರಿ ,ಇವರು ಪ್ರಕಟಿಸಿದ ಮೌಲಿಕ ಕೃತಿಗಳೆಷ್ಟು ,ಬೆಳಕಿಗೆ ತಂದ ಲೇಖಕರು ಎಷ್ಟು . ಇವರಿಗೆ ಇಬ್ಬರು ಸರಸ್ವತಿಯರು . ಮದುವೆ ಸಮಯದಲ್ಲಿ ರಾಜರತ್ನಂ  ಈ ಸರಸ್ವತಿ ಬಂದಾಗ ಆ ಸರಸ್ವತಿಯನ್ನು ಮರೆಯ ಬೇಡ ಎಂದರಂತೆ .

ಶ್ರೀನಿವಾಸ ರಾಜು ಜತೆ ಮದುವೆಯ ಮುಂಚಿನ ದಿನಗಳ ನೆನಪು ಮೊದಲ ಭಾಗದಲ್ಲಿ ಇದ್ದು ,ಹಳೆಯ ಬೆಂಗಳೂರಿನ ಚಿತ್ರಣ ಇದೆ . ಮುಂದೆ ವಿವಾಹಾನಂತರ  ರಾಜು ಮತ್ತು ತಮ್ಮ ಜೀವನದ ಬಗ್ಗೆ ವಿವರಣೆ . ರಾಜು ಎಲ್ಲರೊಡನೆ ಮೆದುವಾಗಿ ಇದ್ದು ಕೋಪವನ್ನು ಮಾತ್ರ ತನ್ನಲ್ಲಿ ತೋರಿಸಿ ಕೊಳ್ಳುತ್ತಿದ್ದುದು ,ಸ್ಕೂಟರ್ ನಲ್ಲಿ ಕುಳಿತಾಗ ಮೈ ಮೇಲೆ ಕೈಯಿಟ್ಟು ಬಹಿರಂಗ ಪ್ರೀತಿ ಪ್ರದರ್ಶನ ಇಷ್ಟ ಪಡದಿದ್ದುದು ಮತ್ತು ಹಣ ಕಾಸಿನ ವಿಚಾರದಲ್ಲಿ ಭಾರೀ ಕಟ್ಟು ನಿಟ್ಟಾಗಿ ಇದ್ದುದನ್ನು ಹಾಗೇ ಹೇಳಿ ಕೊಂಡಿದ್ದಾರೆ . ಮದುವೆಯ ನಂತರ ಗಂಡನ ಒತ್ತಾಸೆಯಿಂದಲೇ ತಾವು ವಿದ್ಯಾಭ್ಯಾಸ ಮುಂದು ವರಿಸುವಂತೆ  ಆಯಿತು ಎಂಬ ಕೃತಜ್ನತಾ ಭಾವ ಉದ್ದಕ್ಕೂ ಇದೆ . ಅವರ ಗೆಳೆಯರ ಬಳಗ . ಒಂದು ಬಾರಿ ಸ್ಕೂಟರ್ ನಲ್ಲಿ  ಪತ್ನಿಯನ್ನು ಕೂರಿಸಿ ಕೊಂಡು ಹೋಗುತ್ತಿದ್ದವರು ದಾರಿಯಲ್ಲಿ ಶ್ರೀ ಎಚ್ ಎಸ್ ರಾಘವೇಂದ್ರ ರಾಯರನ್ನು ಕಂಡು ಹೆಂಡತಿಗೆ ನೀನು ಬಸ್ಸಿನಲ್ಲಿ ಹೋಗು ಎಂದು ಮಿತ್ರನನ್ನು ಏರಿಸಿ ಕೊಂಡ ವಿಚಾರ ಹೇಳುತ್ತಾ ಅವರಿಗೆ  ತಮ್ಮ ಸ್ಕೂಟರ್ ,ಮಿತ್ರರು ಆಮೇಲೆ ನಾನು ಎಂದು ಹೇಳುತ್ತಾರೆ . 

ಚಿನ್ನದ ಸೀರೆ ಕೊಳ್ಳಲು ತನ್ನ ಜತೆ ಬಾರದಿದ್ದರೂ ಕನ್ನಡ ಸಂಘದ ಕೆಲಸಗಳಿಗೆ ಅಡವು ಇಡಲು ತನ್ನ ಚಿನ್ನವೇ ಬೇಕಾಗಿತ್ತು ಎನ್ನುತ್ತಾರೆ .  ರಾಜು ಎತ್ತರದ ವ್ಯಕ್ತಿ .ಸರಸ್ವತಿ ಅವರು ಕುಳ್ಳಿ . ಅಮಿತಾಭ್ ಜಯಾ ತರಹ .ರಾಜು ತೀರಿಕೊಂಡ  ಮೇಲೆ  ಸಿಕ್ಕ ಪತ್ನಿಯ ಬಗ್ಗೆ ಬರೆದ ಕೆಲವು ಸಾಲುಗಳು ,

  ಗಿಡ್ಡ ಹೆಂಡತಿ ಲೇಸು 

"ಗಿಡ್ಡ ಹೆಂಡತಿಯ ಗಂಡ ನಾನು 

ಸಾವಿರ ಕಣ್ಣಿಗೆ ಅಚ್ಚರಿ ನಾನು 

ಪದವಿ ಪರೀಕ್ಷೆ ಕೈ ಹತ್ತಲಿಲ್ಲ 

ಟಸ್ ಪುಸ್ ಇಂಗ್ಲಿಷ್ ಬಾಯೊಳಗಿಲ್ಲ 

ಮಾರುದ್ದ ಜಡೆಯ ನಿಲುವಿನ ಹೆಣ್ಣಲ್ಲ

ಬಯೋ ಸ್ಕೋಪ್ ಬೆಡಗಿನ ಸುಂದರಿಯಲ್ಲ 

ಆದರೂ ಇವಳೇ ನನ್ನ ಅಚ್ಚು ಮೆಚ್ಚಿನ ಬೆಲ್ಲ ದಚ್ಚು .

ಅಂದಿನ ಜೀವನ ಬಹಳ ಕಷ್ಟಕರ ಎನಿಸಿದರೂ ,ಈಗ ವಿದ್ಯಾವಂತ ಮಕ್ಕಳು ಇದ್ದಾರೆ ,ಸಾಕಷ್ಟು ಸೌಲಭ್ಯಗಳೂ ಇವೆ .ಪೆನ್ಷನ್ ಬರುತ್ತೆ .ಸ್ವಂತ ಮನೆ ಇದೆ .ಆದರೂ ಸುಖ ಇಲ್ಲ ಎನಿಸುತ್ತದೆ ಎಂದು ಬೇಸರಿಸುತ್ತಾರೆ .

ಶ್ರೀನಿವಾಸರಾಜು ಅವರ ನೆನಪುಗಳು ದಿನ ನಿತ್ಯ ನನ್ನ ಬದುಕಿನಲ್ಲಿ ಪ್ರಿಂಟ್ ಆಗುತ್ತಲೇ ಇವೆ !!ಮೂಲ ಪ್ರತಿ ಹಿಂತಿರುಗುವುದು ಯಾವಾಗ ?ಎಂಬ ಪ್ರಶ್ನೆಯೊಡನೆ ಅಂತ್ಯ ಗೊಳಿಸುತ್ತಾರೆ .

ಸರಾಗವಾಗಿ ಓದಿಸಿ ಕೊಂಡು ಹೋಗುತ್ತದೆ

ಬಾಲಂಗೋಚಿ : ನಿರೂಪಕಿಯವರ ಆಶಯ ಸಾಕಾರ ವಾಗಿದೆ . ನನ್ನ ವೈವಾಹಿಕ ಜೀವನದಲ್ಲಿ ಹಲವು ಸಾಮ್ಯತೆಗಳು ಇವೆ . (ಶ್ರೀನಿವಾಸ ರಾಜು ಮೇರು ಸಾಹಿತ್ಯ ಸೇವೆ ಯನ್ನು ಬಿಟ್ಟು ಮನೆಯಲ್ಲಿನನಡವಳಿಕೆ ಯಲ್ಲಿ ಮಾತ್ರ ) .ಇದನ್ನು ಓದಿ ನನ್ನ ಮನೆಯವರೂ ನೀವೆಲ್ಲಾ ಗಂಡಸರು ಹೀಗೆ ಎನ್ನುವುದು ಬೇಡ ಎಂದು ಪುಸ್ತಕವನ್ನು ಅಡಗಿಸಿ ಇಟ್ಟಿದ್ದೇನೆ.

ಸೋಮವಾರ, ಏಪ್ರಿಲ್ 25, 2022

ಅದ್ವಿತೀಯ

                        



ನರೇಂದ್ರ ರೈ ದೇರ್ಲ ಅವರ ಅದ್ವಿತೀಯ ಪುಸ್ತಕ ಓದಿ ಮುಗಿಸಿದೆ .ನನಗೆ ನಾಚಿಕೆ ಮತ್ತು ಸಂತೋಷ ಏಕ ಕಾಲಕ್ಕೆ ಆಯಿತು .ಪಕ್ಕದ ಕೆದಿಲ ಮತ್ತು ಪದ್ಮುಂಜದ ಈ ಸಾಧಕರ ಬಗ್ಗೆ ಇದುವರೆಗೆ ತಿಳಿಯದಿದ್ದ ಬಗ್ಗೆ ನಾಚಿಕೆ ,ಸಂತೋಷ ಈಗಲೂ ನಮ್ಮ ನಡುವೆ ಇಂತಹವರು ಇದ್ದಾರಲ್ಲ ಎಂದು . ದೇರ್ಲರು ಇಂತಹ ಅನೇಕ ತೆರೆ ಮರೆಯ ಸಾಧಕರನ್ನು ಸಮಾಜಕ್ಕೆ ಪರಿಚಯ ಮಾಡುವ ಕೆಲಸ ಮಾಡಿದ್ದಾರೆ . 

ಕಡು ಬಡ ತನದಲ್ಲಿ ಹುಟ್ಟಿ ಬೆಳೆದು ,ಧರ್ಮಸ್ಥಳ ರತ್ನ ಮಾನಸದಲ್ಲಿ ಒಂದಾದ ಈ ಜೋಡಿ ಮುಂದೆ ಜತೆ ಜತೆಯಾಗಿಯೇ ಇದ್ದು ನಿಜ ಅರ್ಥದಲ್ಲಿ ತಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಾಗಿ ಇಟ್ಟವರು . ಕುಗ್ರಾಮ ವೆಂದು ಗುರುತಿಸಲ್ಪಟ್ಟ ದಿಡುಪೆಯಲ್ಲಿ ಇವರ ಅಪ್ಪ್ರೆಂಟಿಸ್ ಶಿಪ್ .ಆಮೇಲೆ ರೋಶಿನಿ ನಿಲಯದಿಂದ ಸಮಾಜ ಸೇವೆಯಲ್ಲಿ ಪದವಿ .ಈ ಸಂಸ್ಥೆಯಲ್ಲಿ ಪದವಿ ಪಡೆದ ನನ್ನ ಪರಿಚಯದ ಹಲವರು ದೇಶದ ಸರಕಾರಿ ಮತ್ತು ಖಾಸಗಿ ಸಂಸ್ಥೆ ಗಳಲ್ಲಿ ಉನ್ನತ ಹುದ್ದೆಗೆ ತಲುಪಿದವರು ಇದ್ದಾರೆ . 

ಆದರೆ ಇವರು ಆಯ್ದು ಕೊಂಡದ್ದು ಕೊಳ್ಳೇಗಾಲ ಪರಿಸರದ ಸೋಲಿಗರ ನಡುವಿನ ಬದುಕು . ಹಲ ವರ್ಷ ಅಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮರಳಿ ಮಣ್ಣಿಗೆ . ಇಲ್ಲಿ ಅವರು ಮಾಡದ ಸಮಾಜ ಮುಖಿ ಕೆಲಸಗಳು ಇಲ್ಲ . ವಯಸ್ಕರ ಶಿಕ್ಷಣ ,ಪಂಚಾಯತ್ ರಾಜ್ ಬಲ ವರ್ಧನೆ ,ಸ್ವಚ್ಛತಾ ಅಭಿಯಾನ ,ಮದ್ಯ ವರ್ಜನ ಪ್ರಚಾರ ಒಂದೇ ಎರಡೇ . ಇವರಿಗೆ ಇವರ ಕಾರ್ಯದಲ್ಲಿ ಹಲವು ಪ್ರಾಮಾಣಿಕ ಅಧಿಕಾರಿಗಳ ಸಾಥ್ . 

ಇಬ್ಬರೂ ಅವಿವಾಹಿತರಾಗಿಯೇ ಉಳಿದು ,೨೪ x ೭ ಸಾರ್ವಜನಿಕ ಕಾರ್ಯ ಗಳಲ್ಲಿಯೇ ಮಗ್ನ . ಇವರ ಸೇವೆಗೆ ಜಾತಿ ಮತ ಪಂಥಗಳ ಬೇಧ ಇಲ್ಲ .ಯಾರು ಅಶಕ್ತರು ಇದ್ದಾರೆ ಅವರಿಗೆ ಇವರು ಊರುಗೋಲು ಮತ್ತು ಅವರನ್ನು ಮುಂದೆ ತಮ್ಮ ಕಾಲ ಮೇಲೆ ನಿಲ್ಲಿಸುವ ಪ್ರಯತ್ನ . 

ನಾವೆಲ್ಲಾ ಜೀವನದಲ್ಲಿ ಒಂದಲ್ಲ ಒಂದು ದಿನ ಇಂತಹ ಕೆಲಸ ಮಾಡ ಬೇಕು ಎಂದು ಕನಸು ಕಂಡಿರುತ್ತೇವೆ .ಆದರೆ ಇವರು ಕನಸಿನಲಿ ಕಂಡುದನ್ನು ಹಾಗೇ ಬಿಡದೆ ಬೆನ್ನು ಹತ್ತಿದವರು . ಇಂತವರ ಸಂಖ್ಯೆ ಸಾವಿರವಾಗಲಿ .  

ಇಂತಹ ಕೃತಿಗಳನ್ನು ನಾವು ಕೊಂಡು ಓದಿ ಪ್ರೋತ್ಸಾಹಿಸ ಬೇಕು . ಭಾವನಾತ್ಮಕ ಮತ್ತು ಕಪೋಲ ಕಲ್ಪಿತ ವಿಚಾರಗಳು ಮತ್ತು ಉತ್ಪ್ರೇಕ್ಷೆ ಇಲ್ಲದ ಸರಳ ಗಾಂಧಿ ಮಾರ್ಗದ ಕತೆ.

ಭಾನುವಾರ, ಏಪ್ರಿಲ್ 24, 2022

ಕೆಲ್ಲು ಗೆಲ್ಲುವುದು ಕಷ್ಟ

 ಕೆಲ್ಲು ಗೆಲ್ಲುವುದು ಕಷ್ಟ

Composite image. Onychomycosis due to Trichophyton rubrum, right and left great toe. Tinea unguium. 

ನಮ್ಮ ಹಳ್ಳಿಗಳಲ್ಲಿ ವಾಸಿಸುವರು ಮತ್ತು ಉಗುರಿನ ಫಂಗಸ್ ಸೋಂಕು ಅನ್ಯೋನ್ಯವಾಗಿ ಪ್ರಾಕಿನಿಂದ ಇದ್ದಾರೆ . ಬರಿಗಾಲಿನಲ್ಲಿ ತೋಟಕ್ಕೆ ,ಗುಡ್ಡೆಗೆ ಮತ್ತು ಶಾಲೆಗೆ  ನಡೆದು ಹೋಗುವಾಗ ಈ  ಶಿಲೀಂದ್ರ (ಫಂಗಸ್ )ಕಾಲಿನ ಉಗುರಿಗೆ ಪ್ರವೇಶಿಸಿ ಖಾಯಂ ನಿವಾಸಿಯಾಗಿ ಕೆಲ ಸಮಯ ನಂತರ ಅಕ್ರಮ ಸಕ್ರಮ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತದೆ . ಅದಕ್ಕೆ ಆಂಗ್ಲ ಭಾಷೆಯಲ್ಲಿ ಓನಿಕೋ (ಉಗುರಿನ )ಮೈಕೋಸಿಸ್ (ಶಿಲೀಂದ್ರ )ಸೋಂಕು ಎಂಬ ದೊಡ್ಡ ಹೆಸರು ಇದೆ .ನಾವು ಇದನ್ನು ಒಂದು ಕಾಯಿಲೆ ಎಂದು ಯಾವತ್ತೂ ಪರಿಗಣಿಸಿದ್ದೇ ಇಲ್ಲ .ನೆಲದಲ್ಲಿ ಕೆಲಸ ಮಾಡುವವರ ಕೈಯ ಉಗುರಿನಲ್ಲಿಯೂ ಇವು ಕಂಡು ಬರುತ್ತವೆ .

.ನೋಡಲು ಸ್ವಲ್ಪ ಚೆನ್ನಾಗಿರದು ಬಿಟ್ಟರೆ ಇದು ಯಾವ ತೊಂದರೆಯನ್ನೂ ಸಾಮಾನ್ಯವಾಗಿ ಕೊಡದು . ಈಗ ಎಲ್ಲರಿಗೂ ಸೌಂದರ್ಯ ಪ್ರಜ್ಞೆ ಬಂದ ಮೇಲೆ ಇದು ದೊಡ್ಡ ಕಾಯಿಲೆಯಾಗಿ ಪರಿಗಣಿಸಲ್ಪಟ್ಟಿದೆ .ಇದರ ಪರಿಹಾರಕ್ಕೆ ಔಷಧಿಗಳು ಬಂದಿದ್ದರೂ ಹಲವು ವಾರಗಳ ಉಪಚಾರ ಬೇಕು ,ಅಲ್ಲದೆ ನೆಲ ಮತ್ತು ಪರಿಸರದಿಂದ ಪುನಃ ಬರುವ ಸಾಧ್ಯತೆ ಕೂಡಾ ಸಾಮಾನ್ಯ .

ದೇಹದ ಪ್ರತಿರೋಧ ಶಕ್ತಿ ಕುಗ್ಗಿದವರಲ್ಲಿ ಅಪರೂಪಕ್ಕೆ ಈ ಶಿಲೀಂಧ್ರಗಳು ತಮ್ಮ ಪ್ರಚ್ಛನ್ನ ರೋಗ ಶಕ್ತಿ  ಪ್ರಕಟಿಸ ಬಹುದು . ಹಾನಿ ಗೊಂಡ ಉಗುರಿನ ಸುತ್ತು  ಬ್ಯಾಕ್ಟೀರಿಯಾ ಗಳು ಧಾಳಿ ಮಾಡಿ ನೋವು ಇರುವ ಉಗುರು ಸುತ್ತು ಉಂಟು ಮಾಡ ಬಹುದು . 

ಬಾಲಂಗೋಚಿ:  ಈಗ ಸೌಂದರ್ಯದ  ವ್ಯಾಖ್ಯೆಯನ್ನು  ಸೌಂದರ್ಯ ವರ್ಧಕ ತಯಾರಿಕಾ ಬಹು ರಾಷ್ಟ್ರೀಯ ಕಂಪನಿ ಗಳು ಮಾಡಿ ತಮ್ಮ ಜಾಹೀರಾತುಗಳ  ಮೂಲಕ  ಮನೆ ಮನೆಗಳನ್ನು ಹೊಕ್ಕು ಅವು ಹೇಳಿದ್ದೇ ಸತ್ಯ ಆಗಿದೆ . ಒಂದೊಂದು ಅಂಗಕ್ಕೆ ಒಂದೊಂದು ರಾಸಾಯನಿಕ ಲೇಪ . ಅದೇ ರೀತಿ ಉಡುಗೆ ತೊಡುಗೆ ಕೂಡಾ . ನಾನು ಹಿಂದೆ ಬರೆದಂತೆ , ಮಳೆಗೆ ಒದ್ದೆಯಾದ ನಮ್ಮ ತಲೆಯನ್ನು ಸೆರಗಿನಿಂದ  ಒರಸುವ ಅಮ್ಮನ ಮೈ ಯಿಂದ  ಅಕ್ಕಿ ಹಿಟ್ಟು ,ಬೆವರು ,ಹಟ್ಟಿಯಿಂದ ಬಂದ ಗಂಜಳ ಮತ್ತು ಮುಡಿದ ಹೂವುಗಳ ಮಿಶ್ರಿತ ಪರಿಮಳ ನಮಗೆ ಅಪ್ಯಾಯ ಮಾನವಾಗಿತ್ತು .  ಮೈ ಮುರಿದು ದುಡಿಯುವವರ  ಕೈಗಳು ದಪ್ಪ (ದಡ್ಡು)ವಾಗಿರುತ್ತವೆ (vs ಕೋಮಲ ), ಉಗುರುಗಳಲ್ಲಿ ಕೆಲ್ಲು  ಇರುತ್ತದೆ ,ಬೆವರ ವಾಸನೆ ಇರುತ್ತದೆ ,ಆದರೆ ಮನಸು ಕೋಮಲ ಇರಬಹುದು .   ಸೌಂದರ್ಯ ಕಂಪನಿ ಗಳು  ಹೇಳುವ   ಈಗಿನ ವ್ಯಾಖ್ಯೆಯನ್ನೇ ಒಪ್ಪಿದರೂ ಒಬ್ಬರ ಸೌಂದರ್ಯ ಕಾಪಾಡಲು ಹಲವರು ಅದನ್ನು ತ್ಯಜಿಸ ಬೇಕಾಗುವುದು ಎಂಬುದನ್ನು ಅರಿಯಬೇಕು .

 

ಶನಿವಾರ, ಏಪ್ರಿಲ್ 23, 2022

ಮಾತ್ರಾ ಗಣ

 ಮಾತ್ರಾ ಗಣ (ಕ )ಈಗ ಹಲವರು ಮಧ್ಯ ವಯಸ್ಸು ಸಮೀಪಿಸಿದ ಕೂಡಲೇ  ಅನಾರೋಗ್ಯಕ್ಕೆ ತುತ್ತಾಗಿ  ದಿನ ನಿತ್ಯ ಹಲವು ಔಷಧಿಗಳನ್ನು ಸೇವಿಸ ಬೇಕಾಗುತ್ತದೆ . ನನ್ನ ಒಬ್ಬ ಮಿತ್ರ ಸಕ್ಕರೆ ಕಾಯಿಲೆಗೆ ಎರಡು ತರದ ಮಾತ್ರೆ ದಿನಕ್ಕೆ ಎರಡು ಬಾರಿ ,ಬಿ ಪಿ ಗೆ ಎರಡು ಮಾತ್ರೆ ದಿನಕ್ಕೆ ಒಂದು ಬಾರಿ ,ಹೃದ್ರೋಗ ತಡೆಗಟ್ಟಲು ಎರಡು ಮಾತ್ರೆ ,ಸಕ್ಕರೆ ಕಾಯಿಲೆ ಜನ್ಯ ನರ ನೋವಿಗೆ ಒಂದು , ನಿತ್ರಾಣಕ್ಕೆ ಒಂದು ಬಿ ಕಾಂಪ್ಲೆಕ್ಸ್ ,ಪ್ರೊಸ್ಟ್ರೇಟ್ ತೊಂದರೆಗೆ ಒಂದು ಮತ್ತು ಇವುಗಳಿಗೆಲ್ಲಾ ಕಳಶ ವಿಟ್ಟಂತೆ ಒಂದು ಗ್ಯಾಸ್ಟ್ರಿಕ್ ಮಾತ್ರೆ ಇದೆ .ಇವನ  ಪ್ರಿಸ್ಕ್ರಿಪ್ಷನ್ ಕುಡುಮಿ ವಿದ್ಯಾರ್ಥಿಯ ಪರೀಕ್ಷಾ ಉತ್ತರ ಪತ್ರಿಕೆಯಂತೆ ಒಂದು ಪುಟ ಮೀರಿ ಅಡಿಷನಲ್ ಶೀಟ್ ಗೆ ವಿಸ್ತರಿಸಿದೆ .  

ನಾನು ಇಂತಹ ಪ್ರಿಸ್ಕ್ರ್ರಿಪ್ಷನ್ ಗಳನ್ನು ನೋಡಿದಾಗ ಹೇಗಾದರೂ ಇವುಗಳನ್ನು ನೆನಪು ಇಟ್ಟು ಕೊಂಡು ತಿನ್ನುವರು ಎಂದು ಚಿಂತಿಸುತ್ತೇನೆ . ಇಷ್ಟು ಮದ್ದುಗಳು ಸಾಲದೆಂದು ಜಾಹಿರಾತು ಗಳಲ್ಲಿ ಬರುವ (ಹೆಸರು ಬೇಡ )ಹಲವು ಔಷಧಿಗಳು ಅನಧಿಕೃತವಾಗಿ  ಸೇರಿಕೊಂಡಿರುತ್ತವೆ . 

ರೋಗಗಳ ಉಪಚಾರದಲ್ಲಿ ಬಹಳ ಕಟ್ಟು ನಿಟ್ಟು ಬೇಕಾದುದು ಅಪಸ್ಮಾರದ ಚಿಕಿತ್ಸೆಯಲ್ಲಿ .ಇಲ್ಲಿ ಒಂದು ಹೊತ್ತಿನ ಮಾತ್ರೆ ತಪ್ಪಿದರೂ ಫಿಟ್ಸ್ ಬರ ಬಹುದು ಅಲ್ಲದೆ ಫಿಟ್ಸ್ ಬರುವಾಗ ನೀರು ,ಬೆಂಕಿ ಯ ಬಳಿ ಇದ್ದರೆ ಅನಾಹುತ ಆದೀತು . ಹೆಚ್ಚಾಗಿ ಅಪಸ್ಮಾರ ರೋಗಿಗಳು ಚಿಕಿತ್ಸೆಯಲ್ಲಿ ಇರುವಾಗ ಫಿಟ್ಸ್ ಬರುವುದು ಮಾತ್ರೆ ತೆಗೆದು ಕೊಳ್ಳುವುದು ಮರೆತು . ತಾನು ತಿಂದು ಆಗಿದೆ ಎಂದು ಅವರು ಭಾವಿಸಿರುತ್ತಾರೆ ,ವಾಸ್ತವದಲ್ಲಿ ತಿಂದಿರುವುದಿಲ್ಲ . ದಿನಾಲೂ ಮಾತ್ರೆ ತಿಂದ ಕೂಡಲೇ ಕ್ಯಾಲೆಂಡರ್ ನಲ್ಲಿ ಮಾರ್ಕ್ ಮಾಡಿಕೊಳ್ಳ ಹೇಳುವೆನು . ಮಹಾಭಾರತದಲ್ಲಿ ಬರುವ ಅಜ್ಞಾತ ವೇಷ ಕಾಲದಲ್ಲಿ ಕಂಡು ಹಿಡಿಯಲ್ಪಟ್ಟರೆ ಪುನಃ ಹನ್ನೆರಡುವರ್ಷ ವನವಾಸ ಮಾಡ ಬೇಕಾದಂತೆ ಅಪಸ್ಮಾರ ಚಿಕಿತ್ಸೆಯಲ್ಲಿ ಫಿಟ್ಸ್ ಬಂದರೆ ಪುನಃ ಹೊಸ ಲೆಕ್ಕದ ಅವಧಿಗೆ ಔಷಧೋಪಚಾರ ಮಾಡ ಬೇಕಾಗುತ್ತದೆ . 

  ಇನ್ನು ಕೆಲವರು ತಮ್ಮ ಪ್ರತಿಯೊಂದು ಅಂಗಕ್ಕೂ ಸ್ಪೆಷಲಿಸ್ಟ್ ಬಳಿ ಹೋಗುವ ಅಭ್ಯಾಸ ಇಟ್ಟುಕೊಂಡು ,ತತ್ಪರಿಣಾಮ ಅವರ ಬಳಿ ಹಲವು ಪ್ರಿಸ್ಕ್ರಿಪ್ಷನ್ ಗಳು ಏಕ ಕಾಲಕ್ಕೆ ಇರುತ್ತವೆ . ಅವುಗಳಲ್ಲಿ ಒಂದೇ ಔಷಧಿ (ಉದಾ ವಿಟಮಿನ್ ಗಳು , ಗ್ಯಾಸ್ಟ್ರಿಕ್ ಔಷಧಿ ಗಳು )ಗಳು ಬೇರೆ ಬೇರೆ (ಕಂಪನಿ ಹೆಸರು ಬೇರೆ ಇರುವುದು )ಪಟ್ಟಿಗಳಲ್ಲಿ ಏಕ ಕಾಲಕ್ಕೆ ಇರುವುದು . ಸಾಮಾನ್ಯ ಕುಟುಂಬ ವೈದ್ಯರಲ್ಲಿ ಹೋಗುವುದು  ಮರ್ಯಾದೆಗೆ ಕಮ್ಮಿ ಎಂದು ಕೆಲವರು ಭಾವಿಸುತ್ತಾರೆ .ಇದರಿಂದ ತಮ್ಮ ವಿವಿಧ ಪದ್ದತಿಯ ಬೇರೆ ಬೇರೆ  ವೈದ್ಯರ ಔಷಧಿ ಸಲಹೆಗಳನ್ನು  ವಿಶ್ಲೇಷಿಸಿ         ಪ್ರಾ ಯೋಗಿಕ ಮತ್ತು ವೈಜ್ಞಾನಿಕ ನಿರ್ಧಾರಕ್ಕೆ ಬರುವುದು ಕಷ್ಟ .  

ತಿನ್ನುವ ಮಾತ್ರೆಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾದಲ್ಲಿ  ಎರಡು ಮೂರು ಔಷಧಿಗಳನ್ನು ಸೇರಿಸಿ ಒಂದೇ ಮಾತ್ರೆಯ ರೂಪದಲ್ಲಿ ತಯಾರು ಮಾಡಿ ಕೊಡುವ ಪ್ರಯತ್ನ ಮಾಡುತ್ತಾರೆ .ಉದಾಹರಣೆಗೆ ಪಾಲಿ ಕ್ಯಾಪ್ ಎಂಬ ಕ್ಯಾಪ್ಸುಲ್ ನಲ್ಲಿ  ಬಿ ಪಿ ಹೃದ್ರೋಗ ಸಂಬಂಧಿ ಐದು ಬೇರೆ ಬೇರೆ ಔಷಧಿಗಳು ಇವೆ . 

ಹಲವು ಮಾತ್ರೆಗಳನ್ನು ,ಅದೂ ವಯೋ ವೃದ್ಧರಿಗೆ ಕೊಡುವುದನ್ನು ಪಾಲಿ ಫಾರ್ಮಸಿ ಎಂದು ಕರೆಯುತ್ತಾರೆ ಮತ್ತು ಅದರ ಸಾಧಕ ಬಾಧಕಗಳ ಬಗ್ಗೆ  ವೈದ್ಯಕೀಯ ಕ್ಷೇತ್ರದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ