ಬೆಂಬಲಿಗರು

ಶುಕ್ರವಾರ, ನವೆಂಬರ್ 5, 2021

ಕೆಲವು ಹಳೆಯ ಜನಪ್ರಿಯ ಔಷಧಿಗಳು

 ಕೆಲವು ಔಷಧಿಗಳು ಮರೆಯುವ ಮುನ್ನ 

ಕೆಲವು ವರ್ಷಗಳ ಹಿಂದೆ ಆಸ್ಪತ್ರೆಗಳಲ್ಲಿ ವ್ಯಾಪಕವಾಗಿ  ಉಪಯೋಗಿಸಲ್ಪಡುತ್ತಿದ್ದ ಕೆಲವು ಔಷಧಿಗಳು ಈಗ ಬಳಕೆಯಲ್ಲಿ ಇಲ್ಲ . ಅವುಗಳಲ್ಲಿ ಕೆಲವನ್ನು ನೆನಪಿಸಿ ಕೊಳ್ಳೋಣ .

       ಸಾಮಾನ್ಯವಾಗಿ ಜ್ವರ ,ಶೀತ ಇತ್ಯಾದಿಗಳಿಗೆ ಎ ಪಿ ಸಿ ಎಂಬ ಮಾತ್ರೆ ಬರೆಯುತ್ತಿದ್ದೆವು .ಇದರಲ್ಲಿ ಆಸ್ಪಿರಿನ್ ,ಫಿನೆಸಿಟಿನ್(paracetamol ಇದರ ಉತ್ಪನ್ನ )ಮತ್ತು ಕೆಫಿನ್ ಇದ್ದು ಹಲವು ದಶಕಗಳು ಉಪಯೋಗದಲ್ಲಿ ಇತ್ತು 

ಇನ್ನು ಆಂಟಿ ಬಯೊಟಿಕ್ ಆಗಿ ಇದ್ದುದು ಪೆನ್ಸಿಲಿನ್ ;ಪ್ರೋಕೈನ್ ಪೆನ್ಸಿಲಿನ್ ಎಂಬ ಬಿಳಿ ಇಂಜೆಕ್ಷನ್ ಎಲ್ಲಾ ರೋಗಗಳಿಗೂ ರಾಮ ಬಾಣ ವಾಗಿ ಕೊಡುತ್ತಿದ್ದರು . ಸೀಮಿತ ಸರಬರಾಜು ಇದ್ದ ಕಾರಣ ಮೊದಲು ಬಂದವರಿಗೆ ಮಾತ್ರ ಸರಿಯಾದ ಡೋಸ್ ಸಿಕ್ಕಿ ,ಕೊನೆಗೆ ಬಂದವರಿಗೆ ವಿವಾಹ ಸಮಾರಂಭಗಳಲ್ಲಿ ನಿರೀಕ್ಷೆಗಿಂತ ಅಧಿಕ ಅತಿಥಿ ಗಳು ಬಂದರೆ ಸಾರು ,ಸಾಂಭಾರು ನೀರು ಸೇರಿಸಿ ಉದ್ದ ಎಳೆಯುವಂತೆ ಡಿಸ್ಟಿಲ್ಡ್ ವಾಟರ್ ಸೇರಿಸಿ ಉದ್ದ ಎಳೆದದ್ದೂ ಉಂಟು.ಪೆನ್ಸಿಲಿನ್ ಅಲರ್ಜಿ ಇದ್ದರೆ ಟೆಟ್ರ ಸೈಕ್ಲೀನ್ .ಹಿಂದೆ ಬರೆದಂತೆ ಇಂಜೆಕ್ಷನ್ ಸೂಜಿ ಕುದಿಸಿ ಪುನಃ ಉಪಯೋಗಿಸುತ್ತಿದ್ದುದರಿಂದ ಅವು ಮೊಂಡಾಗಿ ಕೊಡುವವರಿಗೂ ಕೊಳ್ಳುವವರಿಗೂ ಹಿಂಸೆ ಆಗುತ್ತಿತ್ತು . ಆಂಟಿ ಬಾಕ್ಟೀರಿಯಲ್ ಮಾತ್ರೆ ಸಲ್ಫಾ ಡಯಾಜಿನ್ ಲಭ್ಯವಿರುತ್ತಿತ್ತು . ಕಡಿಮೆ ಔಷಧಿಗಳು ಇದ್ದ ಕಾರಣ ನೆನಪು ಇಟ್ಟು ಕೊಳ್ಳುವುದು ಕಷ್ಟ ಇರಲಿಲ್ಲ . 

ದಮ್ಮುಕಾಯಿಲೆಗೆ  ಅಮಿನೊಫಿಲಿನ್ ಇಂಜೆಕ್ಷನ್  ರಕ್ತನಾಳಕ್ಕೆ ಕೊಡ ಬೇಕಿದ್ದು ,ಸ್ವಲ್ಪ ಹೊರ ಬಂದರೂ ಸಿಕ್ಕಾಬಟ್ಟೆ ಉರಿಯಿಂದ ರೋಗಿಗಳು ಶಾಪ ಹಾಕುತ್ತಿದ್ದರು .ಅಪಸ್ಮಾರಕ್ಕೆ ಪಾರಲ್ದಿಹೈಡ್ ಎಂಬ ವಿಶಿಷ್ಟ ವಾಸನೆಯ ಇಂಜೆಕ್ಷನ್ ಇದ್ದು ಅದರ ಅಂಪ್ಯೂಲ ಒಡೆದೊಡನೆ ಇಡೀ ಪ್ರದೇಶದಲ್ಲಿ ವ್ಯಾಪಿಸುತ್ತಿತ್ತು .

ಗಾಯಕ್ಕೆ ಹಚ್ಚಲು ಟಿಂಕ್ಚರ್ ಗಳು ಇದ್ದವು . ಆಲ್ಕೋಹಾಲ್ ನಲ್ಲಿ  ಔಷಧಿ ಕರಗಿಸಿ ಮಾಡಿದ ದ್ರಾವಣಕ್ಕೆ ಟಿಂಕ್ಚರ್ ಎನ್ನುತ್ತಾರೆ . ಗಾಯಗಳಿಗೆ ಟಿಂಕ್ಚರ್ ಅಯೋಡಿನ್ ಹಚ್ಚುತ್ತಿದ್ದು ಅದರ ಉರಿ ಬಲ್ಲವನೇ ಬಲ್ಲ . ಇನ್ನೊಂದು ಟಿಂಕ್ಚರ್ ಬೆಂಝೋಯಿನ್ .ಇದನ್ನು ಗಾಯಕ್ಕೆ ಹಚ್ಚಿ ಮೇಲೆ ಹತ್ತಿ ಅಥವಾ ಬಟ್ಟೆ ಇಟ್ಟರೆ ಅಂಟಿ ಕೊಳ್ಳುವುದು . ಇದೇ ಟಿಂಕ್ಚರ್ ಕಫ ಕರಗಲು ಇನ್ಹಲೇಷನ್ (ಸೇದುವುದು )ರೂಪದಲ್ಲಿ ಕೊಡುವ ಪದ್ಧತಿ ಇತ್ತು . ಇನ್ನು ಚರ್ಮದ ಹುಣ್ಣು ,ಕುರ ಮತ್ತು  ಫಂಗಸ್ ಇನ್ಸ್ಪೆಕ್ಷನ್ ಇತ್ಯಾದಿಗಳಿಗೆ ನೀಲಿ ಬಣ್ಣದ ಜೇನ್ಷನ್ ವಯೊಲೆಟ್ ಎಂಬ ಔಷಧ(ಇದನ್ನು ನಾವು ಸರ್ವ ಚರ್ಮ ರೋಗ ನಿವಾರಕ ಎಂದು ಕರೆಯುತ್ತಿದ್ದೆವು ) . ಇವುಗಳೆಲ್ಲ  ದೊಡ್ಡ ಜಾರ್ ಗಳಲ್ಲಿ ಇಟ್ಟು  ರೋಗಿಗಳಿಗೆ ಪ್ರಸಾದದ ರೂಪದಲ್ಲಿ ಹಚ್ಚಿ ನೆಕ್ಸ್ಟ್ ನೆಕ್ಸ್ಟ್ ಎಂದು ಕ್ಯೂವಿನಲ್ಲಿ ನಿಂತಿರುವ ಮುಂದಿನವರನ್ನು ಕರೆಯುವುದು .ಸರಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಗಳಲ್ಲಿ ಜನ ಸಂದಣಿ ಇರುತ್ತಿತ್ತು . 

ಜಜ್ಜಿದ ನೋವಿಗೆ ಟರ್ಪೆಂಟೈನ್ ಲಿನಿಮೆಂಟ್ ;ಇದಕ್ಕೆ ಘಾಟು ವಾಸನೆ ಇತ್ತು .

ಕುಡಿಯುವ ಸಿರಪ್ ಗಳಲ್ಲಿ ಕಫ್ ಸಿರಪ್ ಕೆಮ್ಮಿಗೆ , ಕಾರ್ಮಿನೇಟೀವ್ ಮಿಕ್ಸ್ಚರ್ ಗ್ಯಾಸ್ ಗೆ ಮತ್ತು ಅಜೀರ್ಣಕ್ಕೆ ,ಪೆಕ್ಟಿನ್ ಕೆವೊಲಿನ್ ಭೇದಿ ನಿಲ್ಲಲು ಕೊಡುತ್ತಿದ್ದರು . 

 ಈಗ ಇದರಲ್ಲಿ ಹಲವು ಮರೆಯಾಗಿವೆ . ಸಾವಿರಾರು ಹೊಸ ಔಷಧಿಗಳು ಬಂದಿವೆ .

ಬುಧವಾರ, ನವೆಂಬರ್ 3, 2021

ಇಂದು ದೀಪಾವಳಿ . ಭಾರತೀಯರು ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ . ಹಿಂದೆ ಅಂಗಡಿಯವರು ಹೊಸ ಲೆಕ್ಕ ಆರಂಭಿಸುವ ಆಮಂತ್ರಣ ಕಳುಹಿಸುತ್ತಿದ್ದರು (ಹಳೆಯ ಸಾಲ ತೀರಿಸುವ ಸೂಚನೆ ). 

ಟಿ ವಿ ಯಲ್ಲಿ ನಮ್ಮವರೇ ಆದ ಶ್ರೀಮತಿ ಸುಚಿತ್ರ ಹೊಳ್ಳ ಸುಶ್ರಾವ್ಯವಾಗಿ ಭಾಗ್ಯದ ಲಕ್ಷ್ಮಿ ಬಾರಮ್ಮಾ ಎಂದು ಹಾಡುತ್ತಿದ್ದಾರೆ . ಅವರು ನನ್ನ ಮೆಚ್ಚಿನ ಗಾಯಕಿ . ಒಳ್ಳೆಯ ಶಾರೀರ ಮತ್ತು ಪ್ರಸ್ತುತ ಪಡಿಸುವಿಕೆ . ಮೇಲಾಗಿ ವಿನಯ ಭೂಷಣೆ . 

ಭಾಗ್ಯದ ಲಕ್ಷ್ಮಿ ಹಾಡು ಕೇಳುವಾಗಲೆಲ್ಲ ವಿದ್ಯಾರ್ಥಿಯ ತಪ್ಪು ಕಂಡು ಹಿಡಿಯಲು ಕಾಯುತ್ತಿರುವ ಪರೀಕ್ಷಕ ಅಧ್ಯಾಪಕನಂತೆ ನಾನು ಸಾಹಿತ್ಯ ಗಮನ ಕೊಟ್ಟು ಕೇಳುವೆನು .ಮನಕಾಮನೆಯ ಎನ್ನುತ್ತಾರೋ ಮನೆಕೆ ಮನೆಯಾ ಎನ್ನುತ್ತಾರೋ ಎಂದು . ಆದರೆ ಅತ್ತಿತ್ತಗಲದೆ ಭಕ್ತರ ಮನೆಯಲಿ ಇರ ಬೇಕು ಎಂದು ಆದೇಶಿಸುವುದು ಸರಿಯಲ್ಲ ಎಂದು ನನ್ನ ಭಾವನೆ .ಲಕ್ಷ್ಮಿ ಕೈ ಬದಲಿಸಿದಾಗಲೇ ಅದಕ್ಕೆ ಬೆಲೆ . 

ತುಂಬಾ ಸಿರಿವಂತರಿಗೆ ಅವರ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಬಿದ್ದಿದ್ದಾಳೆ ಎಂದು ಹೇಳುವುದುಂಟು . ಸ್ವಲ್ಪ ಅಸೂಯೆಯಲ್ಲಿ ಲಕ್ಷ್ಮಿಗೆ ಬೈಯ್ಯುವುದು ಇರ ಬಹುದು . ಆದರೆ ಕೈಕಾಲು ಮುರಿದು ಬಿದ್ದ ಲಕ್ಷ್ಮಿ ನೋನ್ ಪರ್ಫಾರ್ಮಿಂಗ್ ಅಸೆಟ್ ತರಹ . ಚಲಾವಣೆ ಆದರೆ ಮಾತ್ರ ಮೌಲ್ಯ ತಾನೇ ?

ಕಳೆದ ಕೆಲ ದಿನಗಳಿಂದ ಆಬಾಲ ವೃದ್ಧರಾಗಿ ಎಲ್ಲರೂ ಕಲ್ಪಿತ ಎದೆ ನೋವಿಗಾಗಿ ಈ ಸಿ ಜಿ ,ಕೊಲೆಸ್ಟರಾಲ್ ಮಾಡಿಸಲು ಧಾವಿಸುತ್ತಿದ್ದಾರೆ . ಅವರಿಗೆಲ್ಲ ಸಮಾಧಾನ ಹೇಳಿ ಹೇಳಿ ಸುಸ್ತಾಗಿ ನನಗೂ ಸ್ವಲ್ಪ ಎದೆ ಬಚ್ಚಿದ ಹಾಗೆ ಆಗುತ್ತಿದೆ . ಟಿ ವಿ ಯಲ್ಲಿ ವಾರ್ತಾ ಚಾನಲ್ ಸ್ವಲ್ಪ ಕಡಿಮೆ ನೋಡಿ ,ಸಾಧ್ಯವಾದಲ್ಲಿ ನಡೆಯಿರಿ ,ಹಿತ ಮಿತ ಆಹಾರ ಸೇವಿಸಿರಿ ..ಎಲ್ಲರಿಗೂ ದೀಪಾವಳಿ ಶುಭಾಶಯಗಳು . 

              




ಗುರುವಾರ, ಅಕ್ಟೋಬರ್ 28, 2021

ಅಗಲಿದ ಮೇರು ನಟ ನೆಡುಮುಡಿ ವೇಣು

 ಅಗಲಿದ ಮೇರು ನಟ  ನೆಡುಮುಡಿ ವೇಣು 

 Nedumudi Venu - Wikipedia                                                                                                                     ೧೯೯೯೦ ರಲ್ಲಿ ಇರಬೇಕು .ನಾನು ಮಂಗಳೂರು ರೈಲ್ವೆ ಅರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಆಗಿದ್ದೆ . ಅಮೃತ್ ಟಾಕೀಸ್ ನಲ್ಲಿ ಒಂದು ಮಲಯಾಳಿ ಸಿನೆಮಾ ಬಂದಿತ್ತು ;"ಹಿಸ್ ಹೈನೆಸ್ ಅಬ್ದುಲ್ಲಾ "ಅದರ ಶೀರ್ಷಿಕೆ . ಕುತೂಹಲದಿಂದ ನೋಡಲು ಹೋದೆವು .ನನ್ನ ಮಟ್ಟಿಗೆ ಹೇಳುವುದಾದರೆ ನಾನು ಅತ್ಯಂತ ತೀವ್ರವಾಗಿ ಆನಂದಿಸಿದ ಒಂದು ಚಿತ್ರ . ನಟನೆ ,ಸಂಗೀತ ಮತ್ತು ಮೆಲೋಡ್ರಾಮ ಎಲ್ಲವೂ ಸಹಜವಾಗಿ ಸಮ್ಮಿಳಿತ. ಸಿಬಿ ಮಲಯಿಲ್ ನಿರ್ದೇಶನ ದಲ್ಲಿ ನಟ ಮೋಹನಲಾಲ್ ನಿರ್ಮಿಸಿ ಸ್ವತಃ ನಟಿಸಿದ ಸಿನೆಮಾ ಹಲವು ಪ್ರಶಸ್ತಿ ಗಳನ್ನು ಸಹಜವಾಗಿ ತನ್ನದಾಗಿಸಿತು . ನನಗೆ ಅತೀ ಇಷ್ಟವಾದ ಪಾತ್ರ ಉದಯ ವರ್ಮ (ರಾಜ )ನಾಗಿ ಅಭಿನಯಿಸಿದ ನೆಡು ಮುಡಿ ವೇಣು ಅವರದು . ಪಾತ್ರಕ್ಕೆ ಬೇಕಾದ ರಾಜ ಗಾಂಭೀರ್ಯ ,ಸಿನೆಮಾದಲ್ಲಿ ಯಥೇಚ್ಛ ಇರುವ ಶಾಸ್ತ್ರೀಯ ಸಂಗೀತಕ್ಕೆ ಬೇಕಾದ ಹಾವ ಭಾವ . ನನಗೆ ಒಂದು ಪ್ರತಿಭಾವಂತ ನಟನನ್ನು ಪರಿಚಯಿಸಿತು . ಮುಂದೆ ಭರತನ್ ,ತೆನ್ಮಾವಿನ್ ಕೊಂಬಾತ್ ,ಚಮರಂ  ಮಾರ್ಗಂ ಇಂತಹ ಅನೇಕ ಚಿತ್ರಗಳಲ್ಲಿ ಅವರ ಅಭಿನಯ ನೋಡಿ ಆನಂದಿಸಿದೆ .ಚಿತ್ರಂ ಎಂಬ ಚಿತ್ರದಲ್ಲಿ ಅವರು ಮೋಹನಲಾಲ್ ಹಾಡುವಾಗ ಮೃದಂಗ ನುಡಿಸುವರು .ಸ್ವಯಂ ಮೃದಂಗ ವಾದಕರಾದ ಇವರ ನಟನೆ ಅಷ್ಟು ಸಹಜವಾಗಿತ್ತು . ಇವರು ಮಿಂಚಿದ್ದು ಪೋಷಕ ನಟನಾಗಿ . ನಾಟಕ ,ಟಿವಿ ಸೀರಿಯಲ್   ,ಜನಪದ ಸಂಗೀತ ಹೀಗೆ ಕಲೆಯ ಹಲವು ರಂಗಗಳಲ್ಲಿ ಕೈ ಆಡಿಸಿದ್ದ ಅವರು ಎರಡು ವಾರಗಳ ಹಿಂದೆ ತೀರಿ ಕೊಂಡಾಗ ಸಿನೆಮಾ ಮತ್ತು ಕಲಾ ರಸಿಕರು ಮತ್ತು ಕಲಾವಿದರು "ಇದು ತುಂಬಲಾರದ ನಷ್ಟ' ಎಂದು ಕಂಬನಿ ಮಿಡಿದುದು ಉತ್ಪ್ರೇಕ್ಷೆ ಅಲ್ಲ . 

ಅವರನ್ನು ಕಲಾ ಲೋಕಕ್ಕೆ ಪರಿಚಯಿಸಿದವರು ಪ್ರಸಿದ್ದ ನಟ ,ಕವಿ

ನಾರಾಯಣ ಪಣಿಕ್ಕರ್ . ಇಂಟರ್ನೆಟ್ ಜಾಲಾಡುವಾಗ ಈ ಗುರು ಶಿಷ್ಯರ ಒಂದು ವೀಡಿಯೋ ಸಿಕ್ಕಿತು . ಅದನ್ನು ನೋಡಿರಿ .

 https://youtu.be/eJ2YSqgtk-I

ಬುಧವಾರ, ಅಕ್ಟೋಬರ್ 27, 2021

ಪರಿಚಾರಕರ ನೆನಪು

                                      ಕಾರ್ಕಳ: ಎಂ. ಆರ್ ಎಂದೇ ಚಿರಪರಿಚಿತರಾಗಿದ್ದ ಸಾಹಿತಿ, ಪ್ರೊ. ಎಂ ರಾಮಚಂದ್ರ ವಿಧಿವಶ |  udayavani

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಕೇಂದ್ರದ ಕನ್ನಡ ಸಂಘ ಒಂದು ಸಜೀವ ಸಕ್ರಿಯ ಆಗಿದ್ದರೆ ಅದು ಕಾರ್ಕಳ ಸಾಹಿತ್ಯ ಸಂಘ .ಅದರ ರೂವಾರಿ ದಿ .ರಾಮಚಂದ್ರ .ಅವರ ಬಗ್ಗೆ ಹಿಂದೆಯೇ ಒಮ್ಮೆ ಬರೆದಿದ್ದೇನೆ .

ಇಂದಿಗೆ ಸರೀ ಎರಡು ವರ್ಷ ಮೊದಲು (26.10.2019) ಅದರ ವೇದಿಕೆಯಲ್ಲಿ  ಆರೋಗ್ಯ ವಿಚಾರ ಬಗ್ಗೆ ಮಾತನಾಡುವ ಅವಕಾಶ ನನಗೆ ದೊರಕಿತ್ತು . ಅಲ್ಲಿಯ ಕೆಲವು ಸಭೆಗಳಿಗೆ ನಾನು ಹಾಜರಾಗಿದ್ದೇನೆ. ಸಮಯ ಪಾಲನೆ ಮತ್ತು  ಒಳ್ಳೆಯ ಸಂಖ್ಯೆಯ ಆಸಕ್ತ ಕೇಳುಗರು ಅಲ್ಲಿಯ ವಿಶೇಷ .ಬಂದ ಅತಿಥಿಗಳನ್ನು ಚೆನ್ನಾಗಿ ನೋಡಿ ಕೊಳ್ಳುವರು .

ನನ್ನ ಜತೆ ಡಾ ವರದರಾಜ ಚಂದ್ರಗಿರಿ ಬಂದಿದ್ದರು.ಹಿಂತಿರುಗುವಾಗ ರಾತ್ರಿ ಆಗುವುದರಿಂದ ಟ್ಯಾಕ್ಸಿ ಮಾಡಿಕೊಂಡು ಹೋಗಿದ್ದೆವು . ರಾಮ ಚಂದ್ರರು ಕಾರ್ಯಕ್ರಮ ಮುಗಿದು ವಾಪಾಸು ತೆರಳುವಾಗ ನನ್ನ ಪತ್ನಿಗೆ ಎಂದು ತಿಂಡಿ ಕಟ್ಟಿ ಕೊಟ್ಟುದಲ್ಲದೆ ಗಂಟೆಗೆ ಒಮ್ಮೆ ನಾವು ಮನೆಗೆ ತಲುಪಿದೆವೋ ಎಂದು ಫೋನ್ ಮಾಡಿ ವಿಚಾರಿಸುವರು .ನಾವು ಮನೆಗೆ ತಲುಪದೆ ಅವರು ನಿದ್ದೆ ಮಾಡರು.ನನ್ನ ಭಾಷಣ ಕಾರ್ಯಕ್ರಮಕ್ಕೆ ನನಗೆ ಕೊಟ್ಟ ಸಂಭಾವನೆ ಅವರ ಸಂಗ್ರಹದಲ್ಲಿ ಇದ್ದ ಅಮೂಲ್ಯ  ಪತ್ರಗಳ ಪ್ರಕಟನಾ  ಕಾರ್ಯಕ್ಕಾಗಿ  ಕೊಟ್ಟಿದ್ದೆ . ಸ್ವಲ್ಪವಾದರೂ  ತೆಗೆದು ಕೊಳ್ಳ ಬೇಕಿತ್ತು ಎಂದು ಪುನಃ ಪುನಃ ಹೇಳಿದರು .ಪುತ್ತೂರಿನ ನಮ್ಮ ಮನೆಗೆ ಬಂದು ಆತಿಥ್ಯ  ಸೀಕರಿಸುವ  ಆಶ್ವಾಸನೆ  ಕೊಟ್ಟಿದ್ದರು .ಆದರೆ ಅದು ನೆನಸು  ಆಗಲಿಲ್ಲ .ಎರಡು ತಿಂಗಳಲ್ಲಿ  ಹಠಾತ್ ತೀರಿ ಕೊಂಡರು .ಸಾಯುವ  ಮುನ್ನಾ ದಿನ ಹತ್ತು ನಿಮಿಷ ನನ್ನೊಡನೆ  ಫೋನಿನಲ್ಲಿ  ಮಾತನಾಡಿದ್ದರು .


 

ಮಂಗಳವಾರ, ಅಕ್ಟೋಬರ್ 26, 2021

ಆತಿಥ್ಯದ ಕೆಲ ನೆನಪುಗಳು

                            ಅತಿಥಿ ದೇವೋ ಭವ

ನಾನು ಮಂಗಳೂರಿನಲ್ಲಿ ವಾಸವಿದ್ದ ಸಮಯ .ಕೆ ಎಸ ಹೆಗ್ಡೆ  ಮೆಡಿಕಲ್ ಕಾಲೇಜು ನಲ್ಲಿ ಅಧ್ಯಾಪನ ಮಾಡುತ್ತಿದ್ದೆ . ನಮ್ಮ ವಿದ್ಯಾರ್ಥಿಗಳು ಮದುವೆಗೆ ಅಹ್ವಾನ ನೀಡಿದಾಗ ಸಂತೋಷದಿಂದ ಹೋಗುತ್ತಿದ್ದೆವು . ಸಾಮಾನ್ಯವಾಗಿ ನಾನು ಮತ್ತು ಡಾ ಪ್ರಕಾಶ್ (ಈಗ  ಕ್ಷೇಮಾ ದ  ಡೀನ್ )ಜತೆಗೆ  ಅವರ ಸ್ಕೂಟರ್ ನಲ್ಲಿ ಹೋಗುವುದು ;ಊರ ಹೊರಗೆ ಇದ್ದರೆ  ನನ್ನ ಕಾರ್ ನಲ್ಲಿ . ಒಮ್ಮೆ ನಮ್ಮ ಶಿಷ್ಯ ನಾಗರಾಜ ತನ್ನ ಸಹೋದರಿ ಯ ಮದುವೆ ಗೆ ಅಹ್ವಾನ ನೀಡಿದ್ದು .ಅದು ಒಂದು ಭಾನುವಾರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ದಲ್ಲಿ ಇದ್ದಿತು . ಸರಿ ಭಾನುವಾರ ಹೇಗೂ ರಜೆ ,ನಾವಿಬ್ಬರೂ ಯಥಾಪ್ರಕಾರ ಕುದ್ರೋಳಿ ದೇವಳದ ಒಳಗೆ ಇರುವ ಕಲ್ಯಾಣ ಮಂಟಪಕ್ಕೆ ಹಾಜರ್ . ಅಲ್ಲಿ ನೋಡಿದರೆ ಪರಿಚಯದವರು ಯಾರೂ ಇಲ್ಲ .ನಾವು ಮೆಲ್ಲಗೆ ಹೊರ ಬಂದು  ದೇವಳದ ಕಚೇರಿಗೆ  ಬಂದು ಇಂತಹ ಮದುವೆ ಎಲ್ಲಿ ಎಂದಾಗ 'ಸರ್ ಅದು ಮುಂದಿನ ಭಾನುವಾರ ,ಇವತ್ತು ಬೇರೇ ಪಾರ್ಟಿ ಯದ್ದು 'ಎಂದಾಗ ಸರೀ ಕಾಗದ ನೋಡದೆ ಬಂದುದಕ್ಕೆ ನಮ್ಮನ್ನೇ ಹಳಿದುಕೊಂಡು ವಾಪಸು ಹೋಗುವಾ ಎನ್ನುತ್ತಿರಲು ಕಚೇರಿಯ ವ್ಯಕ್ತಿ "ಸರ್ ಇಲ್ಲಿ ಬಂದ ಮೇಲೆ ನಿಮ್ಮನ್ನು ಊಟ ಮಾಡದೇ ಹೋಗಲು ಬಿಡುವುದಿಲ್ಲ .ಇಲ್ಲಿಯೇ ದೇವಸ್ಥಾನದ ಊಟ ಇದೆ ,ಸ್ವಯಂ ಸೇವೆ .ಆದರೂ ನೀವು ಹಿರಿಯರು ಕುಳಿತುಕೊಳ್ಳಿ ನಾನೇ ತಂದು ಕೊಡುತ್ತೇನೆ "ಎಂದು ಉಪಚರಿಸಿ ಊಟ ಮಾಡಿಸಿಯೇ ಕಳುಹಿಸಿದ . ದೇವರು ಎಂದು ನಾವು ಹೇಳಿಕೊಳ್ಳುವುದು ಇಂತಹ ಸಂಸ್ಕಾರ ಯುಕ್ತ ಮನಸುಗಳ ಒಳಗೆ ಇರುವನು . 

          ಇನ್ನೊಂದು ಭಾರಿ ನಾನು ಸಕುಟುಂಬ ಕಾಸರಗೋಡಿನ ಒಂದು ಪ್ರಸಿದ್ಧ ದೇವಳದ ಹಾಲಿನಲ್ಲಿ ನಡೆದ ಸಂಗೀತೋತ್ಸವ ಕ್ಕೆ ಹೋಗಿದ್ದೆ. ಬೆಳಗಿನಿಂದ ಸಂಜೆ ತನಕ .ನಾವು ಮಂಗಳೂರಿನಿಂದ  ಬೇಗನೇ ನಾಷ್ಟಾ ಮಾಡಿ ಹೋಗಿದ್ದೆವು .ಕಚೇರಿಯ ಆರಂಭದಿಂದ ಊಟದ ವಿರಾಮದ ವೇಳೆ ತನಕ ಒಮ್ಮೆಯೂ ಏಳದೆ ಕುಳಿತು ಕೇಳಿ ಆನಂದಿಸಿದೆವು .ಆಯೋಜಕರು ,ಭಾಗವಹಿಸಿದವರು ಎಲ್ಲಾ ಪರಿಚಿತರೇ . ಊಟದ ವಿರಾಮ ಆಗುವಾಗ ಎಲ್ಲರೂ ದಡಬಡನೆ ಎಲ್ಲೋ ಧಾವಿಸಿದರು .ನಮ್ಮೊಡನೆ ಸೌಜನ್ಯಕ್ಕೆ ಕೂಡಾ ಬರುವಂತೆ ಹೇಳಲಿಲ್ಲ .ಅಲ್ಲಿಯೇ ಮೂಲೆಯಲ್ಲಿ ಕುಳಿದಿದ್ದ ಒಬ್ಬರು ಮಲಯಾಳಿ ನಮ್ಮ ಬಳಿಗೆ ಬಂದು ಮಲಯಾಳ ಮಿಶ್ರಿತ ಕನ್ನಡದಲ್ಲಿ "ಸಾರ್ ನಿಮ್ಮ ಊಟೆ ?'ಎಂದು ವಿಚಾರಿಸಿದರು .ನಾವು ಹೊರಗೆ ಹೋಟೆಲ್ ಒಂದಕ್ಕೆ ಹೋಗಿ ಹೊಟ್ಟೆ ತುಂಬಿಸಿ ಕೊಂಡೆವು . ಇಂತಹದೇ ಅನುಭವ ನಿಟ್ಟೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ದಲ್ಲಿ ಆಗಿತ್ತು .ನಾ ಮೊಗಸಾಲೆ ಅಧ್ಯಕ್ಷರು .ಮಂಗಳೂರಿನಿಂದ ಬಸ್ಸಿನಲ್ಲಿ ಹೋಗಿದ್ದೆ .ಹಲವು ಪರಿಚಯದವರು ಸಭೆಯಲ್ಲಿ ಇದ್ದರು .ಊಟದ ವೇಳೆ ಆಹ್ವಾನಿತರು ಎಲ್ಲಾ ಊಟದ ಚಪ್ಪರಕ್ಕೆ  ಕೂಡಾ  ಹೋದರು. ...ಅದು ವರೆಗೆ ನನ್ನಲ್ಲಿ ಮಾತನಾಡಿಕೊಂಡು ಇದ್ದವರೂ ಕೂಡಾ ಸೌಜನ್ಯಕ್ಕಾಗಿಯಾದರೂ "ಬನ್ನಿ".  ಎನ್ನಲಿಲ್ಲ . ಪುಣ್ಯಕ್ಕೆ ಅಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸುವ ಒಂದು ಕ್ಯಾಂಟೀನ್ ಇದ್ದು ,ನನ್ನ ವಿದ್ಯಾರ್ಥಿಗಳು ಇಂಟರ್ನ್ ಆಗಿ ಇದ್ದವರು ಸಿಕ್ಕಿ ಅವರೊಡನೆ ಊಟ ಮಾಡಿದೆನು . 

ಸಂಗೀತ ,ಸಾಮೂಲಕ ಹಿತ್ಯ ಕೂಟಗಳಲ್ಲಿ ಉಚಿತ ಊಟ ತಿಂಡಿ  ನೀಡುವುದಕ್ಕೆ ಆದ್ಯತೆ ನೀಡುವುದು ,ಅದಕ್ಕೆ ಹಣ ಖರ್ಚುಮಾಡುವುದಕ್ಕೆ  ನನ್ನ ಸಹಮತ ಇಲ್ಲ . ಇನ್ನು ಈಗಿನ ಸಾಹಿತ್ಯ ಮೇಳಗಳಲ್ಲಿ ಕ್ರಾಸ್ ಸಬ್ಸಿಡಿ ಮೂಲಕ ಸಭೆಯನ್ನು ಚಂದಗಾಣಿಸಲು ಹಲವರನ್ನು ಕರೆಯುವರು .ಅವರ ಖರ್ಚು ವೆಚ್ಚ ಸಾಮಾನ್ಯ ಪ್ರತಿನಿಧಿಗಳು ಭರಿಸ ಬೇಕು . ಅವರ ಭಾಷಣ ಇತ್ಯಾದಿ ಇರದು ,ಆದರೆ ಭಾಷಣ ನಂತರದ ಚರ್ಚೆ ಇತ್ಯಾದಿಯಲ್ಲಿ ಅವರ ಅವಶ್ಯ ಇದೆ ಎಂಬ ಆಶಯ ಇರ ಬೇಕು .ಸಾಮಾನ್ಯ ಎಲ್ಲಾ ಕಡೆಯೂ ವಿಶೇಷ ಆಹ್ವಾನಿತ  ಖಾಯಂ ಪ್ರತಿನಿಧಿಗಳನ್ನು (ವಿಶ್ವ ಸಂಸ್ಥೆಯ ಖಾಯಂ ಸದಸ್ಯರಂತೆ )ನಾನು ಕಂಡಿದ್ದೇನೆ . 

ಆದರೂ ಒಟ್ಟಿಗೇ ಕುಳಿತು ಮಾತನಾಡುತ್ತಿದ್ದು ಊಟಕ್ಕೆ ಆಗುವಾಗ ಕಂಡೇ ಇಲ್ಲ ಎಂದು ಓಡುವವರನ್ನು ಕಂಡಾಗ ಸ್ವಲ್ಪ ಬೇಸರ ಆಗುವುದು

 ಬಾಲಂಗೋಚಿ : ಕೆಲವು ಬಂಧು ಮಿತ್ರರು ಸಮಾರಂಭಗಳಲ್ಲಿ ವ್ಹಾಟ್ಸಪ್ಪ್ ನಲ್ಲಿ ಸಿಕ್ಕಾಗ ನೀವು ನಮ್ಮ ಮನೆಗೆ ಬರುವುದೇ ಇಲ್ಲಾ ಎಂದು ಗೋಗೆರೆಯುವರು . ನೀವು ಅವರ ಊರಿಗೆ ಹೋಗಿದ್ದು  ಇಲ್ಲೇ ಇದ್ದೇನೆ ಎಂದು ವ್ಹಾಟ್ಶಪ್ಪ್ ಫೇಸ್ಬುಕ್ ನಲ್ಲಿ ಹಾಕಿದರೆ ಜಾಣ ಮೌನ ವಹಿಸುವರು .

 

ಭಾನುವಾರ, ಅಕ್ಟೋಬರ್ 24, 2021

ಗುರುವಿನ ಗುಲಾಮ ನಾಗುವ ತನಕ

                      ಗುರುವಿನ ಗುಲಾಮ ನಾಗುವ ತನಕ 

ಹಿಂದೆ  ಬಹಳ ಅಧ್ಯಾಪಕರು ಪ್ರಾಧ್ಯಾಪಕರು ಎಲ್ಲಾ  ಬಲ್ಲವರು ಆಗಿದ್ದರು . ಅವರು ಹೇಳಿದ್ದನ್ನು ಪ್ರಶ್ನಿಸಿದರೆ ಸಹಿಸರು . ತಮಗೆ ತಿಳಿದಿಲ್ಲ ಎಂದು ಅವರ ಬಾಯಿಯಲ್ಲಿ ಬರುವುದು ಅಪರೂಪ . ಯಾವುದೇ ವಿಷಯದಲ್ಲಿ  ಹಲವು ಅಭಿಪ್ರಾಯ ಇದ್ದರೆ ಅವರು ಹೇಳಿದ್ದೇ ಅಂತಿಮ . 

ವೈದ್ಯಕೀಯ ಕಾಲೇಜು ಗಳಲ್ಲಿ ಇದು ಸಾಮಾನ್ಯವಾಗಿತ್ತು . ಪ್ರಾಧ್ಯಾಪಕರಿಗೆ ಅಂಜಿ ನಡೆಯ ಬೇಕಿತ್ತು .ಅವರ ಅವಕೃಪಗೆ ಒಳಗಾದರೆ ನೀವು ಪರೀಕ್ಷೆಯಲ್ಲಿ ಎಷ್ಟು ಒಳ್ಳೆಯದು ಮಾಡಿದರೂ ಉತ್ತೀರ್ಣ ಆಗುವುದಿಲ್ಲ . ವೈವಾ ಮತ್ತು ಪ್ರಾಕ್ಟಿಕಲ್ಸ್ ನಲ್ಲಿ  ಪರೀಕ್ಷಕರ ಜತೆ ಚರ್ಚೆಗೆ ಇಳಿಯುವುದು ಗಂಡಾಂತರ ಮೈ ಮೇಲೆ ಎಳೆದು ಕೊಂಡಂತೆ . 

ಜಸ್ಪಾಲ್ ಭಟ್ಟಿ ಅವರ ಧಾರವಾಹಿ ಹಿಂದೆ ದೂರ ದರ್ಶನ ದಲ್ಲಿ ಜನಪ್ರಿಯ ವಾಗಿತ್ತು .ಅದರಲ್ಲಿ ಪ್ರೊಫೆಸ್ಸರ್ ತನ್ನ ಮಾರ್ಗ ದರ್ಶನ ದಲ್ಲಿ  ಪಿ ಎಚ್ ಡಿ ಮಾಡುತ್ತಿರುವ ವಿದ್ಯಾರ್ಥಿಯ ಶೋಷಣೆ ಮಾಡುವುದನ್ನು ಚೆನ್ನಾಗಿ ಚಿತ್ರಿಸಿದ ನೆನಪು . ವಿದ್ಯಾರ್ಥಿ ತನ್ನ ಸಂಶೋಧನಾ ಕಾರ್ಯ ಬದಿಗಿಟ್ಟು ಪ್ರಾಧ್ಯಾಪಕರು ,ಅವರ ಕುಟುಂಬದವರ ಸೇವೆ ಮಾಡಿದರೆ ಮಾತ್ರ ಪಾಸ್ . ಅವರ ಮನೆ ಸಾಮಾನು ತರುವುದು ,ನಾಯಿಯನ್ನು  ವಾಕಿಂಗ್ ಕರೆದು ಕೊಂಡು ಹೋಗುವುದು ಇತ್ಯಾದಿ . 

 ಇತ್ತೀಚೆಗೆ ವಾತಾವರಣ ಸ್ವಲ್ಪ ಬದಲಾಗಿದೆ ; ಆದರೂ   (ನನ್ನನ್ನೂ ಸೇರಿ )ನಮ್ಮಲ್ಲಿ  ಯಾರಾದರೂ ಕಿರಿಯರು ಪ್ರಶ್ನೆ ಕೇಳಿದರೆ ನನಗೆ ತಿಳಿಯದು ಎಂದು ಒಪ್ಪಿ ಕೊಳ್ಳುವ ಪ್ರಾಜ್ಞರು ಕಡಿಮೆಯೇ ಎಂದು ಹೇಳ ಬೇಕು . 

 https://youtu.be/JCy9BfqMw2c

ಬಾಲ್ಯದ ಶಿಕ್ಷೆಗಳು

 ಸಾಫ್ಟ್ವೇರ್ ಕಂಪನಿಯವರು ಕ್ಯಾಂಪಸ್ ನಲ್ಲಿ ಆಯ್ಕೆ ಮಾಡಿ ಇನ್ನೂ ಕೆಲಸಕ್ಕೆ ತೆಗೆದುಕೊಂಡು ಇರದಿದ್ದರೆ ಬೆಂಚ್ ನಲ್ಲಿ ಇದ್ದಾನೆ ಎನ್ನುತ್ತಿದ್ದರು .ಈಗಲೂ ಇದೆಯೇ ಎಂದು ಗೊತ್ತಿಲ್ಲ .ನಾವು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ಏನಾದರೂ ಮಂಗ ಚೇಷ್ಟೆ ಮಾಡಿದರೆ ,ಮನೆ ಕೆಲಸ ಮಾಡದಿದ್ದರೆ ಮತ್ತು ಸರಿಯಾದ ಉತ್ತರ ಕೊಡದಿದ್ದರೆ ಬೆಂಚ್ ಮೇಲೆ ನಿಲ್ಲಿಸುತ್ತಿದ್ದರು .ನಾನೂ ಈ ಗೌರವಕ್ಕೆ ಹಲವು ಭಾರಿ  ಭಾಜನ ನಾಗಿದ್ದೇನೆ . ತರಗತಿಯಲ್ಲಿ ಎಲ್ಲರೂ ಕುಳಿತುವಾಗ ನಾವು ಮಾತ್ರ ಬೆರ್ಚಪ್ಪ ಗಳಂತೆ ಬೆಂಚಿನ ಮೇಲೆ ನಿಲ್ಲಲು ಸ್ವಲ್ಪ ಅವಮಾನ ಆಗುತ್ತಿತ್ತು . ಒಂದೇ ಮನೆಯವರು ಹಲವರು ಶಾಲೆಯಲ್ಲಿ ಇರುವಾಗ ನಮಗೆ ಆದ ಶಿಕ್ಷೆ ಮನೆಯವರಿಂದ ಮುಚ್ಚಿ ಇಡುವುದು ಸಾಧ್ಯವಿರಲಿಲ್ಲ .ಅಮ್ಮನಿಗೆ ತಿಳಿದರೆ ಇನ್ನೂ ಎರಡು ಬಿಗಿಯ ಬೇಕಿತ್ತು ನಿನಗೆ ಬುದ್ದಿ ಬರಲು ಎನ್ನುತ್ತಿದ್ದರು . 

ನಮ್ಮಲ್ಲಿ ಕೆಲವು ಮಕ್ಕಳು ಬೆಂಚಿನ ಮೇಲೆ ನಿಲ್ಲಿಸಿದರೂ ಏನೂ ಆಗದವರಂತೆ ಸ್ಥಿತ ಪ್ರಜ್ಞರಾಗಿ ಮುಗುಳ್ನಗುತ್ತಾ ನಿಂತು ಅಧ್ಯಾಪಕರ ಕೋಪಕ್ಕೆ ತುಪ್ಪ ಸುರಿಯುತ್ತಿದ್ದರು . ಅವರಿಗೆ ಅದು ವಿಕ್ಟರಿ ಸ್ಟಾಂಡ್ ನಂತೆ ತೋರುತ್ತಿರ ಬೇಕು . 

ನಾವು ಹೈ ಸ್ಕೂಲಿಗೆ ಬಂದಾಗ ಈ ಶಿಕ್ಷೆ ಇರಲಿಲ್ಲ .ನಮ್ಮಂತಹ ಟೊಣಪರ ಭಾರ ಬಡಕಲು ಬೆಂಚ್ ಗಳು ಹೊರಲಾರವು ಎಂದು ಇರ ಬೇಕು .

ಇತರ ಜನ (ಶಿಕ್ಷಕ )ಪ್ರಿಯ ಶಿಕ್ಷೆಗಳು ಬಸ್ಕಿ ಹೊಡೆಸುವುದು ,ಕಿವಿ ಹಿಂಡುವುದು ಮತ್ತು ಬೆತ್ತದಲ್ಲಿ ಹೊಡೆಯುವುದು . 

ಈ ತರಹ ದೈಹಿಕ ಶಿಕ್ಷೆ ಕೊಡುತ್ತಿರುವವರು  ತಮ್ಮ ಶಿಷ್ಯ ಉದ್ದಾರ ವಾಗುವುದಿಲ್ಲವಲ್ಲಾ ಎಂಬ ಹತಾಶೆ ಯಿಂದ  ಇದ್ದವರೇ ಹೆಚ್ಚು ವಿನಃ ಪರ ಹಿಂಸಾ ಸಂತೋಷಿಗಳು ಕಡಿಮೆ .An indulgent teacher is better than indifferent one. ಏನು ಬೇಕಾದರೂ ಮಾಡಿ ಸಾಯಲಿ ,ನನಗೆ ಹೇಗೂ ಸಂಬಳ ಬರುತ್ತದೆ ಎಂದು ಅಹಿಂಸಾ ತತ್ವ ಅಳವಡಿಸಿ ಕೊಳ್ಳುವವರು ಶಿಕ್ಷಿಸಲು ಹೋಗರು.

ಎಸ್ ವಿ ಪರಮೇಶ್ವರ ಭಟ್ ಅವರು ಹೇಳುತ್ತಿದ್ದ ಜೋಕ್: ತರಲೆ ವಿದ್ಯಾರ್ಥಿಗೆ ಅಧ್ಯಾಪಕ "ಕತ್ತೆ,ನೀನು  ನನ್ನೆದುರು ನಿಲ್ಲಲು ಅಯೋಗ್ಯ ,ನಡಿ ಹೆಡ್ ಮಾಸ್ಟೆರ್ ಅವರ ಬಳಿಗೆ "