ಬೆಂಬಲಿಗರು

ಗುರುವಾರ, ಏಪ್ರಿಲ್ 29, 2021

ಹುಬ್ಬಳ್ಳಿ ದಿನಗಳು 10

                            ಹುಬ್ಬಳ್ಳಿ ದಿನಗಳು10

 ನಾನು ಕಾಲೇಜ್ ಸೇರುವಾಗ ತುರ್ತು ಪರಿಸ್ಥಿತಿ ಜ್ಯಾರಿಯಲ್ಲಿ ಇದ್ದು ಯಾವುದೇ ವಿದ್ಯಾರ್ಥಿ ಸಂಘಗಳಿಗೆ ಅವಕಾಶ ಇರಲಿಲ್ಲ .1977 ರ ನಂತರ ಅವುಗಳಿಗೆ ಅವಕಾಶ ಮಾಡಿಕೊಡಲಾಯಿತು .ಶ್ರೀ ಬೆಲ್ಲದ ಎಂಬವರು ಕಾರ್ಯ ದರ್ಶಿ ಅದರೆಂದು ನೆನಪು .ಸಂಘದ ಉದ್ಘಾಟನೆಗೆ ಬೆಳ್ಳಾರಿ ಮೆಡಿಕಲ್ ಕಾಲೇಜ್ ನಲ್ಲಿ ಪ್ರಿನ್ಸಿಪಲ್ ಆಗಿದ್ದ ಪ್ರಸಿದ್ದ ಸರ್ಜನ್ ಪ್ರಾಧ್ಯಾಪಕ ಡಾ ಆರ್ ಎಚ್ ಎನ್ ಶೆಣಯ್  ಅವರು ಮುಖ್ಯ ಅತಿಥಿ ಯಾಗಿದ್ದರು .ಕಾಲೇಜ್ ಡೇ ಗೆ ಆಗ ಕರ್ನಾಟಕದ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಜಿ ಕೆ ಗೋವಿಂದ ಭಟ್ ಮತ್ತು ಅವರ ಸಹೋದ್ಯೋಗಿ ಸಭಾಹಿತ (ಸೀನಿಯರ್ )ಮುಖ್ಯ ಅತಿಥಿ ಯನ್ನಾಗಿ ಕರೆಸಿದ್ದರು .ಆಗಿನ್ನೂ ಸರಕಾರಿ  ಕಾಲೇಜ್ ಗಳಲ್ಲಿ ಜನ ಪ್ರತಿನಿಧಿಗಳನ್ನು ಖಡ್ಡಾಯವಾಗಿ ಕರೆಯಬೇಕು ಎಂಬ ಈಗಿನ ಪ್ರೋಟೋಕಾಲ್ ಇದ್ದಂತಿಲ್ಲ .ಈ ಅವಧಿಯಲ್ಲಿ  ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿಯಾಗಿ ಶ್ರೀ ಶಿವಾನಂದ ಕುಬಸದ್ ಎಂಬ ಸೀನಿಯರ್ ಇದ್ದರು.ಅವರು ಬಹುಮುಖ ಪ್ರತಿಭೆಯವರಾಗಿದ್ದು ಈಗ ಪತ್ರಿಕೆಯಲ್ಲಿ ಆರೋಗ್ಯಕ್ಕೆ ಸಂಬಂದಿಸಿದ ಒಳ್ಳೆಯ ಲೇಖನಗಳನ್ನು ಬರೆಯುತ್ತಿರುತ್ತಾರೆ .

ನಂತರದ ಅವಧಿಗೆ ಶ್ರೀ ಮಾಲಿ ಪಾಟೀಲ್ ಎಂಬ ನನ್ನ ಸಹಪಾಠಿ ಕಾರ್ಯದರ್ಶಿ ಆದರು ಮತ್ತು ಮತ್ತೊಬ್ಬ ಪ್ರತಿಭಾವಂತ ಮಿತ್ರ ಶ್ರೀ ವಿವೇಕ ವಾಣಿ
ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಆದರು .ಮುಂದಿನ ಕಾಲೇಜ್ ಡೇ ಗೆ ಆಗ ಕೇಂದ್ರ ರಾಸಾಯನಿಕ ಖಾತೆ ಸಚಿವರಾಗಿದ್ದ ಶ್ರೀ ವೀರೇಂದ್ರ ಪಾಟೀಲ್  ಮತ್ತು ಗುಲ್ಬರ್ಗಾ ಮೆಡಿಕಲ್ ಕಾಲೇಜ್ ಮುಖ್ಯಸ್ಥ ಶ್ರೀ ಜವಳಿ ಯವರು ಅತಿಥಿಗಳು .

ಕಾಲೇಜ್ ನಲ್ಲಿ ಬಹುಮುಖ ಪ್ರತಿಭೆಯ ಅನೇಕ ವಿದ್ಯಾರ್ಥಿಗಳು ಇದ್ದರು .ನಮ್ಮದೇ ಒಂದು ಆರ್ಕೇಸ್ತ್ರಾ ಇತ್ತು .ನನ್ನ ತರಗತಿಯ ಸುನೀಲಾ ಜೋತಾಡಿ ಮತ್ತು ಪರಿಮಳ ಒಳ್ಳೆಯ ಹಾಡುಗಾರ್ತಿ ಗಳಾಗಿ ಹೆಸರು ಪಡೆದಿದ್ದರು . ಮಿತ್ರ ಹರೀಶ್ ಕುಮಾರ್ ಶೆಟ್ಟಿ ಇಂಗ್ಲಿಷ್ ನಲ್ಲಿ  ಚೆನ್ನಾಗಿ ಭಾಷಣ ಮಾಡುತ್ತಿದ್ದು ,ಅವರು ಉಪಯೋಗಿಸಿದ ಶಬ್ದಗಳ ಅರ್ಥ ನಾವು ನಿಘಂಟುವಿನಲ್ಲಿ ನೋಡಿ ತಿಳಿಯುತ್ತಿದ್ದೆವು .

ನಮ್ಮ ನಾಟಕಗಳು ಉತ್ತಮ ಮಟ್ಟದ್ದಾಗಿ ಇರುತ್ತಿದ್ದು ,ವಿವೇಕ ವಾಣಿ ಸ್ವತಃ ಒಂದನ್ನು  ಯಶಸ್ವಿಯಾಗಿ ನಿರ್ದೇಶಿಸಿದ ನೆನಪು .ಪ್ರದೀಪ್ ಹನುಮಸಾಗರ್ ಎಂಬ ನಮ್ಮ ಸೀನಿಯರ್ ನಾಟಕ ,ಸಂಗೀತ  ಮತ್ತು ಕಲೆ ಎಲ್ಲಾ ರಂಗಗಳಲ್ಲಿ ಮಿಂಚುತ್ತಿದ್ದ ವಿಶೇಷ ಪ್ರತಿಭೆ .ಇಕ್ಬಾಲ್ ಮಣಿಯಾರ್ ಎಂಬ ಜೂನಿಯರ್ ಹಾರ್ಮೋನಿಯಂ ನುಡಿಸುತ್ತಿದ್ದು ,ಪಿ ಗಣೇಶ್ ಒಳ್ಳೆಯಗಾಯಕ .ಧಾರವಾಡದಲ್ಲಿ ಈಗ ಪ್ರಸಿದ್ದ ಸ್ತ್ರೀ ರೋಗ ತಜ್ನರೂ ,ಚಿಂತಕರೂ ,ಬರಹಗಾರರೂ ಆಗಿ ಅಸಾಂಪ್ರದಾಯಿಕ ಮಕ್ಕಳ ಶಾಲೆ ನಡೆಸುತ್ತಿರುವ ಸಂಜೀವ ಕುಲಕರ್ಣಿ ನಮ್ಮ ಜೂನಿಯರ್ ಮತ್ತು ಸಂಮಿತ್ರರು ;ಆಗಲೇ ಕವನಗಳನ್ನು ಬರೆಯುತ್ತಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು .


ನನ್ನ ಮಿತ್ರ ಡಾ ಮಂಟೂರ್ (ಈಗ ಪ್ರಸಿದ್ದ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ನ )ಅವರು ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಸಕ್ರಿಯರಾಗಿದ್ದು ಅವರೊಡನೆ ವಾರಾಂತ್ಯದಲ್ಲಿ ಒಂದು ಹಲ್ಲಿಗೆ ಸೈಕಲ್ ನಲ್ಲಿ ತೆರಳಿ ಜನರಿಗೆ ಆರೋಗ್ಯ ಶಿಕ್ಷಣ ಮತ್ತು ಉಚಿತ ಔಷಧಿ ವಿತರಣೆ ಮಾಡುತ್ತಿದ್ದ ನೆನಪು .

ಮಕ್ಕಳ ವಾರ್ಡ್ ನಲ್ಲಿ ಕೆಲವು ಬಾಲ್ಯ ಸಕ್ಕರೆ ಕಾಯಿಲೆ ಮತ್ತು ದಿನವೂ ಔಷಧ ಬೇಡುವ ಕಾಯಿಲೆಯ ಕೆಲವು ಬಡ ಮಕ್ಕಳನ್ನು ಮಾನವೀಯ ನೆಲೆಯಲ್ಲಿ ಖಾಯಂ ಆಗಿ ಅಡ್ಮಿಟ್ ಮಾಡಿದ್ದರು .ಇವರು ವಾರ್ಡ್ ಸಿಸ್ಟರ್ ಗಳಿಗೆ ಸಹಾಯ ಮಾಡುವರು .ಅನಕ್ಷರಸ್ಥ ರಾಗಿದ್ದ ಈ ಮಕ್ಕಳಿಗೆ ನಾವು ಕೆಲವು ವಿದ್ಯಾರ್ಥಿಗಳು ಸೇರಿ ಸಂಜೆ ಹೊತ್ತು ಅಕ್ಷರಾಭ್ಯಾಸ ಮಾಡಿಸಿದೆವು .ಮತ್ತು ಬಹಳ ಚೆನ್ನಾಗಿ ಹಾಡುತ್ತಿದ್ದ ಅವರಿಗೆ ತರಬೇತು ನೀಡಿ ಮಕ್ಕಳ ದಿನಾಚರಣೆ ಯಂದು ಒಳ್ಳೆಯ ಕಾರ್ಯಕ್ರಮ ಏರ್ಪಡಿಸಿದ್ದು ಧಾರವಾಡ ಆಕಾಶವಾಣಿಯವರು ಅದನ್ನು ಪ್ರಸಾರ ಮಾಡಿದರು .ಈ ಕಾರ್ಯದಲ್ಲಿ ಸಂಜೀವ ಕುಲಕರ್ಣಿ ಮತ್ತು ಇಕ್ಬಾಲ್ ಮಣಿಯಾರ್ ಸಹಕಾರ ನೀಡಿದ ನೆನಪು .ಮಕ್ಕಳ ವಿಭಾಗದ ಮುಖ್ಯಸ್ಥ ರಾಗಿದ್ದ  ಡಾ ಮಾಲತಿ ಯಶವಂತ್ ನನಗೊಂದು ಸರ್ಟಿಫಿಕೇಟ್ ದಯಪಾಲಿಸಿದರು .ಅದೇ ರೀತಿ ಹೆರಿಗೆ ವಿಭಾಗದಲ್ಲಿ ಹೆತ್ತವರಿಂದ ನಾನಾ ಕಾರಣಕ್ಕೆ ತ್ಯಕ್ತರಾದ ಕಂದಮ್ಮಗಳು ಇದ್ದು ಅವರನ್ನು ವಾರ್ಡ್ ಸಿಸ್ಟರ್ಸ್ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು . ಅಂತಹ ಒಂದು ಮಗು ಪ್ರೀತಿ ;ನನ್ನನ್ನು ತುಂಬಾ ಹಚ್ಚಿ ಕೊಂಡಿತ್ತು.ಆಗ ದತ್ತು ತೆಗೆದು ಕೊಳ್ಳುವ ಕಾನೂನುಗಳು ಸರಳ ಮತ್ತು ಸುಲಭ ಇದ್ದುದರಿಂದ  ಈ ಮಕ್ಕಳು ತುಂಬಾ ಕಾಲ ಇರ ಬೇಕಾಗಿ ಬರುತ್ತಿರಲಿಲ್ಲ .

ಕ್ರೀಡಾ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶಗಳು ಇದ್ದವು .ಹಾಸ್ಟಲ್ ನಲ್ಲಿ  ಟೇಬಲ್ ಟೆನ್ನಿಸ್ ಟೇಬಲ್ ಕಾಮನ್ ಹಾಲ್ ನಲ್ಲಿ ಇತ್ತು.ವಾಲಿ ಬಾಲ್ ಕೂಡಾ ಆಡುತ್ತಿದ್ದರು .ಕಾಲೇಜ್ ನಲ್ಲಿ ಟೆನ್ನಿಸ್ ಕೋರ್ಟ್  , ಮತ್ತು ದೊಡ್ಡ  ಕ್ರೀಡಾಂಗಣ ಇದ್ದು ನಮ್ಮಲ್ಲಿ  ಒಳ್ಳೆಯ  ಫೂಟ್ ಬಾಲ್ ಮತ್ತು ಕ್ರಿಕೆಟ್ ಆಟಗಾರರು ಇದ್ದರು .ನನ್ನ ಕ್ಲಾಸ್ ನಲ್ಲಿ  ಮೋಹನ್ .ಉದಯ್ ಸಾಂಭ್ರಾಣಿ ,ಸಂದೀಪ್ ಒಳ್ಳೆಯ  ಕ್ರಿಕೆಟ್ ಆಟಗಾರರು ಆಗಿದ್ದು ,ರಾಮನಾಥನ್ ಟೆನ್ನಿಸ್ ಮತ್ತು ಫೂಟ್ ಬಾಲ್ ಆಟಗಾರರಾಗಿದ್ದರು .

                  



ಬುಧವಾರ, ಏಪ್ರಿಲ್ 28, 2021

ಹುಬ್ಬಳ್ಳಿ ನೆನಪುಗಳು 9

                  ಹುಬ್ಬಳ್ಳಿ ನೆನಪುಗಳು 9

          

 
ಅಜ್ಞಾನ ತಿಮಿರಾಂಧಸ್ಯ  ಜ್ನಾನಾಂಜನ ಶಲಾಕಾಯ
ಚಾಕ್ಷುರುನ್ಮಿಲೀತಮ್  ಯೇನ ತಸ್ಮೈ ಶ್ರೀ ಗುರುವೇ ನಮಃ
 
 ನಮಗೆ  ಸರ್ಜರಿ ವಿಭಾಗದಲ್ಲಿ ಕೆ ಜಿ ನಾಯಕ್ ಎಂಬ ಪ್ರಾಧ್ಯಾಪಕರು ಇದ್ದರು.ಅವರ ಪತ್ನಿ ಶೀಲಾ ನಾಯಕ್ ಅನಾಟಮಿ ಪ್ರೊಫೆಸರ್ .ಇಬ್ಬರೂ ನಿವೃತ್ತಿ ನಂತರ ಸುಳ್ಯ ದ ಕೆ ವಿ ಜಿ‌ ಮೆಡಿಕಲ್ ಕಾಲೇಜ್ ನಲ್ಲಿ  ಕೆಲಸ ಮಾಡುತ್ತಿದ್ದರು.ಕೆ  ಜಿ‌ ನಾಯಕ್ ಅವರ ಒಂದು ಪಾದ ಸ್ವಲ್ಪ ಊನ ಆಗಿದ್ದರೂ ಬಹಳ ಕ್ರಿಯಾಶೀಲ .ಟೆನ್ನಿಸ್ ಕೂಡಾ ಆಡುತ್ತಿದ್ದರು . ನಾನು ವಿದ್ಯಾರ್ಥಿಯಾಗಿ ಮತ್ತು ಇಂಟರ್ನ್ ಆಗಿ ಅವರ (ಪ್ರೊ ಕೌಲ್ಗುಡ್ ಯೂನಿಟ್ )ಯೂನಿಟ್ ನಲ್ಲಿಯೇ ಇದ್ದೆ.ಅವರಿಗೆ ಕಲಿಸುವುದು ಅಚ್ಚು ಮೆಚ್ಚು .ಮಂಗಳೂರು ಕನ್ನಡದಲ್ಲಿ ಬೈಯ್ಯುವರು (ಪ್ರೀತಿಯಿಂದ ).ನನ್ನ ಉತ್ತರ ಅವರಿಗೆ ಸಮಾಧಾನ ಆಗದಿದ್ದರೆ 'ಏನಾ ಭಟ್ ಬಾಯಿಗೆ ಬಂದ ಹಾಗೆ ಏನಾದರೂ ಹೇಳುತ್ತಿ ,ಸರಿಯಾಗಿ ಓದುವುದಿಲ್ಲ," ನಮ್ಮ ಬ್ಯಾಚ್ ನಲ್ಲಿ ಇದ್ದ ಭಗವಾನ್ ಸಿಂಗ್ ಎಂಬ ಸರ್ದಾರ್ ನನ್ನು ಅವರು ಸಿಂಗು ಎಂದು ಕರೆಯುವರು .ವಾಟ್ ಸಿಂಗು ವಾಟ್ ಈಸ್ ಯುವರ್ ಫೈಂಡಿಂಗ್ ?ಇತ್ಯಾದಿ .ಪರೀಕ್ಷೆ ಗೆ ಮೊದಲು ಒಂದು ಸ್ಪೆಷಲ್ ಕ್ಲಾಸ್ ಸರಣಿ ತೆಗೆದು ಕೊಳ್ಳುವರು .ಅವರ ಹಿಂದಿನ ಶಿಷ್ಯ ಮತ್ತು ಈಗಿನ ಸಹೋದ್ಯೋಗಿ ಡಾ ಗಿರಿ ಗೌಡ ಕೂಡಾ ತೆಗೆದುಕೊಳ್ಳುವರು .ಹಾಗೆ ಶಸ್ತ್ರ ಚಿಕಿತ್ಸಾ ವಿಷಯ ನಮಗೆ ಸುಲಿದ ಬಾಳೆಯ ಹಣ್ಣಿನಂದದಿ ,ಕಳೆದ ಚಿಗುರಿನ ಕಬ್ಬಿನಂದದಿ ಆಗಿ ಹೋಯಿತು .




. ಗಿರಿ ಗೌಡರು ಅತೀ ಸರಳ ಆದರೆ ಜನಪ್ರಿಯ ಮತ್ತು ಅಧ್ಯಯನ ಶೀಲ ಗುರುಗಳು ಅವರು ತರಗತಿ ಆರಂಭಿಸುವ ಮೊದಲು ಕಣ್ಣು ಮುಚ್ಚಿ  ತಮ್ಮ ಗುರುಗಳಾದ ಡಾ ಅರ್ ಎಚ್ ಏನ್ ಶೆಣಯ್ ಮತ್ತು ,ಡಾ ಕೆ ಜಿ ನಾಯಕ್  ರವನ್ನು  ವಂದಿಸಿ  ತರಗತಿ ಆರಂಭಿಸುತ್ತಿದ್ದರು . ಅವರ ಬೆಡ್ ಸೈಡ್ ಕ್ಲಿನಿಕ್ಸ್ ಮತ್ತು ಪರೀಕ್ಷಾ ಕಾಲದ ವಿಶೇಷ ತರಬೇತಿ ಯು ಜಿ ಮತ್ತು ಪಿ ಜಿ ವಿದ್ಯಾರ್ಥಿಗಳಲ್ಲಿ ಜನಪ್ರಿಯ ಆಗಿತ್ತು .ಅವರೂ ಕೆ ಜಿ ನಾಯಕ ಅವರ ಶಿಷ್ಯರು .

ಗಿರಿ ಗೌಡರು ಉತ್ತಮ ಅಧ್ಯಾಪಕ ರಾದರೂ  ಒಳ್ಳೆಯ ಶಸ್ತ್ರ ಚಿಕಿತ್ಸಾ ನಿಪುಣರಾಗಿರಲಿಲ್ಲ ,ಅವರಿಗೆ ಅನಾರೋಗ್ಯದಿಂದ ಸ್ವಲ್ಪ ಕೈ ನಡುಕ ಇತ್ತು .
ಸ್ತನದ ಗಡ್ಡೆಗಳ ಬಗ್ಗೆ  ಪಾಠ ಆರಂಭಿಸುವಾಗ ಅವರು  'ಈ ಅಂಗವು ಶಿಶು , ಕವಿ ಪ್ರೇಮಿಗಳಿಗೆ ಅಪ್ಯಾಯಮಾನವಾಗಿ ಇರುವಂತೆ ಕ್ಯಾನ್ಸರ್ ರೋಗಕ್ಕೂ 'ಎನ್ನುತ್ತಿದ್ದರು .  ಫೈನಲ್ ಪರೀಕ್ಷೆಯಲ್ಲಿ ಯಾವುದೊ  ಒಂದು  ವಿಷಯ ರೋಗಿಯನ್ನು ಪರೀಕ್ಷಿಸುವಾಗ ಮರೆತು ಹೋದರೆ ಏನಾಗುವುದು ? ಎಂದು ಕೇಳುವರು ,ನಾವು 
ಹೆದರಿ ಉತ್ತರ ನಿರೀಕ್ಷಿಸುತ್ತಿರುವಾಗ  ನಿರುಮ್ಮಳವಾಗಿ   ಏನೂ ಸಂಭವಿಸದು  ಎನ್ನುವರು .ಅದು ಅವರು ವಿಶ್ವಾಸ ಹುಟ್ಟಿಸುತ್ತಿದ್ದ ರೀತಿ .

   ಅಲ್ಪಾಯುವಿನಲ್ಲಿ  ತೀರಿ ಕೊಂಡರೂ  ವಿದ್ಯಾರ್ಥಿಗಳ ಹೃದಯ ದಲ್ಲಿ  ಜ್ಞಾನ ರೂಪಿಯಾಗಿ ನೆಲೆಸಿದ್ದಾರೆ .ನಮ್ಮ ಶರೀರದಲ್ಲಿ ತಂದೆ ತಾಯಿಯರ ರಕ್ತ , ಇಂತಹ ಗುರು ವರೇಣ್ಯರ ಜ್ಞಾನ ವಾಹಿನಿ  ಹರಿದಾಡುತ್ತಿದೆ.ನಮ್ಮನ್ನು ಕಾಲ ಕಾಲಕ್ಕೆ  ದಾರಿ ತೋರಿ ಕಾಪಾಡುತ್ತಿದೆ .


ಸರ್ಕಾರೀ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎರಡು ತರದ ವೈದ್ಯರು ಇರುತ್ತಾರೆ . ಒಂದು ಅಸಿಸ್ಟೆಂಟ್ ಸರ್ಜನ್ ಕ್ಯಾಟಗೊರಿ  ,ಇವರು ಕ್ಯಾಶುಯಾಲಿಟಿ ,ಓ ಪಿ ಡಿ ವಾರ್ಡ್ ಗಳಲ್ಲಿ ಇರುವರು . ಟೀಚಿಂಗ್ ವಿಭಾಗದವರು ಇನ್ನೊಂದು . ಲೆಕ್ಚರರ್ ,ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಪ್ರೊಫೆ ಸರ್  ಇತ್ಯಾದಿ . ಈಗ ಪ್ರಸಿದ್ಧ ಮಕ್ಕಳ ಹೃದ್ರೋಗ ತಜ್ಞೆಯಾಗಿರುವ  ವಿಜಯ ಲಕ್ಷ್ಮಿ ಬಾಳೇಕುಂದ್ರಿ  ಅಸಿಸ್ಟೆಂಟ್ ಸರ್ಜನ್ ಆಗಿದ್ದು ಮೆಡಿಸಿನ್ ವಿಭಾಗದಲ್ಲಿ ಇದ್ದರು .ಬಹಳ ಪ್ರತಿಭಾವಂತೆ ,ಉತ್ಸಾಹಿ ಆಗಿದ್ದ ಇವರು ಕೆಲವೊಮ್ಮೆ ನಮಗೆ ಕ್ಲಾಸ್ ತೆಗೆದು ಕೊಳ್ಳುವರು .ಹಾಗೆಯೇ ಡಾ ಹೊಸ್ಮಟ್ಟ್ ಎಂಬುವರು ಕೂಡ ನಮಗೆ ಪಾಠ ಮಾಡುತ್ತಿದ್ದರು . 

ಇನ್ನು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಮೂರು ತಿಂಗಳು ಪೋಸ್ಟಿಂಗ್ಸ್ ಇದ್ದಾಗ ಅಲ್ಲಿ ಡಾ ಗಜಾನನ ಗುಡಿಗಾರ ಎಂಬ ಪ್ರತಿಭಾವಂತ ಫಿಸಿಷಿಯನ್ ಇದ್ದು ಅವರಿಂದ ನಾನು ಹಲವು ವಿಷಯಗಳನ್ನು ಕಲಿತೆನು . ಸೂಕ್ಷ್ಮ ಮತಿಯಾಗಿದ್ದ ಅವರದು ರೋಗ ನಿಧಾನದಲ್ಲಿ ಎತ್ತಿದ ಕೈ . ಅವರ ಪತ್ನಿ ಸ್ತ್ರೀ ರೋಗ ತಜ್ಞೆ .ನಾನು ಧಾರವಾಡದಲ್ಲಿ ಇದ್ದಷ್ಟು ದಿನ ಅವರ ಮನೆಯವನೇ ಆಗಿದ್ದು ನನ್ನ ಬಹುಪಾಲು ಊಟೋಪಚಾರ ಅವರಲ್ಲಿ ಆಗುತ್ತಿತ್ತು . ನಿವೃತ್ತರಾದ ಮೇಲೆ ಹುಬ್ಬಳ್ಳ್ಳಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದು ಶಿರೂರ್ ಪಾರ್ಕ್ ನಲ್ಲಿ ನೆಲಸಿದ್ದರು .ಅವರ ಕೈ ಬರಹ ಮತ್ತು ವೈದ್ಯಕೀಯ ನೋಟ್ಸ್ ಬಹಳ ಚಂದ . ಸರಕಾರಿ ಸೇವೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನೆಲ್ಲಾ  ಆಗಾಗ ಸ್ಮರಿಸಿ ಕೊಳ್ಳು ವೆನು . 

  ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿದ್ದ ಮೂರು ತಿಂಗಳು ನಾನು ಆಸ್ಪತ್ರೆಯಲ್ಲಿಯೇ ನೆಲಸಿ ೨೪ ಗಂಟೆ ಕೆಲಸ ಮಾಡುತ್ತಿದ್ದೆ .ಹೆರಿಗೆ ,ಮಕ್ಕಳ ವಿಭಾಗ ಮತ್ತು ತುರ್ತು ಚಿಕಿತ್ಸೆಯಲ್ಲಿ ತುಂಬಾ ಅನುಭವ ದೊರೆಯಿತು . ಮೆಡಿಕಲ್ ಕಾಲೇಜು ನಲ್ಲಿ ಪಿ ಜಿ ಗಳು ಇದ್ದ ಕಾರಣ  ನಮಗೆ ಸ್ವತಂತ್ರವಾಗಿ ನಿರ್ಧಾರ ತೆಗೆದು ಕೊಳ್ಳುವ ಅವಕಾಶಗಳು ಕಡಿಮೆ ಇದ್ದವು . 

ಸಿವಿಲ್ ಆಸ್ಪತ್ರೆಯಲ್ಲಿ  ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದ (ಗೌರವ ಉಪನ್ಯಾಸಕ )ಕಾರಣ ನನ್ನ ಅನುಭವದ ಪರಿಧಿ ವಿಸ್ತರಿಸಿ ಕೊಂಡಿತು . 

ಲೇಖಕ ಬಸವರಾಜ ಕಟ್ಟಿಮನಿ (MLC ಆಗಿದ್ದರು )ಸಿವಿಲ್ ಆಸ್ಪತ್ರೆಯಲ್ಲಿ ರೋಗಿಯಾಗಿ ದಾಖಲಾಗಿದ್ದರು .ಅವರನ್ನು ಉಪಚರಿಸುವ ಭಾಗ್ಯ ಸಿಕ್ಕಿತ್ತು . ಧಾರವಾಡ ವಿಶ್ವವಿದ್ಯಾಲಯ ಉಪಕುಲಪತಿ ಯಾಗಿದ್ದ  ಖ್ಯಾತ ಅರ್ಥ ಶಾಸ್ತ್ರಜ್ಞ ಡಿ ಎಂ ನಂಜುಂಡಪ್ಪ ಕೂಡಾ ವೈದ್ಯಕೀಯ ಸಲಹೆಗಾಗಲಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದರು . 

ಸಿವಿಲ್ ಆಸ್ಪತ್ರೆಯ ನವ ಶಿಶು ವಿಭಾಗದಲ್ಲಿ ಹೀಟರ್ ಇಲ್ಲದಿದ್ದುದರಿಂದ ನನ್ನ ಸ್ಟೈಪೆಂಡ್ ಹಣದಲ್ಲಿ ಒಂದನ್ನು ಕೊಡುಗೆಯಾಗಿ ನೀಡಿ ನನ್ನ ಋಣ ಅಲ್ಪ ಸಂದಾಯ ಮಾಡಿದೆನು .

 

ಮಂಗಳವಾರ, ಏಪ್ರಿಲ್ 27, 2021

ಹುಬ್ಬಳ್ಳಿ ದಿನಗಳು 11

  ಹುಬ್ಬಳ್ಳಿ ದಿನಗಳು 11

ನಮ್ಮ ಫೈನಲ್ ಎಂ ಬಿ ಬಿ ಎಸ್ 1980 -81 ರಲ್ಲಿ ಆಗಿದ್ದು ನಿರ್ಣಾಯಕ ಆಗಿತ್ತು .ನಾವೆಲ್ಲ ಅದರ  ತಯಾರಿಯಲ್ಲಿ ಇದ್ದೆವು . 

ಅದೇ ವರ್ಷ ಕೆಲವು ಪ್ರಮುಖ ಘಟನೆಗಳು ನಡೆದವು .

ಒಂದು ಗೋಕಾಕ ಚಳುವಳಿ .ಕರ್ನಾಟಕದಲ್ಲಿ ಶಾಲೆಗಳಲ್ಲಿ ಕನ್ನಡವೇ ಒಂದನೇ ಭಾಷೆ ಆಗಿರಬೇಕು ಎಂಬ ಡಾ ವಿ ಕೃ ಗೋಕಾಕ ಸಮಿತಿ ಕೊಟ್ಟ ತೀರ್ಮಾನ ಜ್ಯಾರಿಗೆ ತರಲು ಆಗ ಮುಖ್ಯ ಮಂತ್ರಿ ಆಗಿದ್ದ  ಶ್ರೀ ಗುಂಡೂ ರಾವು ಸರ್ಕಾರ ಮೀನ ಮೇಷ ನೋಡಿದಾಗ ರಾಜ್ಯದಾದ್ಯಂತ ನಡೆದ ಚಳುವಳಿ . ವರನಟ ಡಾ ರಾಜ್ ಕುಮಾರ್ ಕೂಡಾ ಭಾಗವಸಿದ್ದುದು ವಿಶೇಷ .ಕೊನೆಗೆ ಸರಕಾರ ಮಣಿಯಿತು .

ಇನ್ನೊಂದು ನರಗುಂದದ ರೈತ ಬಂಡಾಯ . ನರಗುಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಅಲ್ಲಿಯ ಅರಸ ಬಾವು ಸಾಹೇಬ ಬಾವೆ ಸಾರಿದ ಬಂಡಾಯದಿಂದ ಪ್ರಸಿದ್ದವಾದ ಸ್ಥಳ . ಇಲ್ಲಿಯ ರೈತರು ಮಲಪ್ರಭಾ ನೀರಾವರಿ ತೆರಿಗೆ ಎಂದು ಕಟ್ಟಿದರೂ ಸಾಕಷ್ಟು ನೀರು ಸಿಗುವುದಿಲ್ಲ ಎಂದು ಚಳವಳಿ ಮಾಡುತ್ತಿದ್ದರೂ ಸರಕಾರ ಕ್ಯಾರೇ ಎನ್ನಲಿಲ್ಲ .
ಅಂದು 1980ರ ಜುಲೆ 21, ಆಗಿನ ತಹಸೀಲ್ದಾರ ವರೂರ ಅವರು ಕಚೇರಿಗೆ ಬಂದರು. ರೈತರು ಕಚೇರಿ ಬಾಗಿಲು ಮುಚ್ಚಿ, ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಅರೆಬೆತ್ತಲೆಯಾಗಿ ಅಡ್ಡ ಮಲಗಿದರು. ಹೋಗುವುದಾದರೆ ನಮ್ಮನ್ನು ತುಳಿದುಕೊಂಡ ಹೋಗಿ ಎಂದು ಎಚ್ಚರಿಸಿದರು. ತಹಸೀಲ್ದಾರ  ಪ್ರತಿಭಟನಾ ನಿರತ ಅರೆಬೆತ್ತಲೆ ರೈತರನ್ನು ತುಳಿದುಕೊಂಡು ಕಚೇರಿ ಪ್ರವೇಶಿಸಿದ್ದು ರೆತರನ್ನು ಕೆರಳಿಸಿತು. ಆವೇಶ ಭರಿತ ರೈತರು ತಹಸೀಲ್ದಾರರನ್ನು ಹೊರಗೆಳೆದು ಥಳಿಸಿದರು. ಕಚೇರಿ ಒಳಗೆ ನುಗ್ಗಿದ ರೈತರು ಸಿಕ್ಕಿದ್ದನ್ನು ಕಿತ್ತೆಸೆದರು. ಕಿಟಕಿ,ಬಾಗಿಲು ಪುಡಿಪುಡಿಯಾದವು, ಅಲ್ಲಿಯೆ ಇದ್ದ ಅಬಕಾರಿ ಇಲಾಖೆಯಲ್ಲಿನ ಸರಾಯಿ ಟ್ಯಾಂಕಗಳನ್ನು ಒಡೆದು ಅದರಿಂದಲೆ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲಿ ಬೆರಳೆಣಿಕೆಯಲ್ಲಿದ್ದ ಪೊಲೀಸರು ರೈತರ ಮೇಲೆ ಲಾಠಿ ಬೀಸಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ರೈತರ ಮೇಲೆ ಪಿಎಸ್‌ಐ ಗುಂಡು ಹಾರಿಸಿದನು. ಆಗ ಚಿಕ್ಕನರಗುಂದ ಗ್ರಾಮದ ಯುವ ರೈತ ವೀರಪ್ಪ ಕಡ್ಲಿಕೊಪ್ಪ ಗುಂಡಿಗೆ ಬಲಿಯಾದರು. ರೈತನ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಆಕ್ರೋಶಗೊಂಡ ರೈತರು ಸಿಕ್ಕ ಸಿಕ್ಕ ಪೋಲಿಸರನ್ನು ಮನಬಂದಂತೆ ಥಳಿಸಿ ಸಾಯಿಸಿದರು. ಈ ದುರ್ಘಟನೆ ಸುದ್ದಿ ನವಲಗುಂದಕ್ಕೂ ಹಬ್ಬಿದಾಗ ಪ್ರತಿಭಟನಾ ರೈತರು ಪೊಲೀಸರ ವಿರುದ್ಧ ಬಂಡಾಯ ಎದ್ದರು. ಅಲ್ಲಿಯೂ ಓರ್ವ ರೈತ ಗುಂಡಿಗೆ ಬಲಿಯಾಗುವ ಮೂಲಕ ರೈತ ಕ್ರಾಂತಿಯೇ ನಡೆಯಿತು. 

ನಾವು ಆಗ ಸರ್ಜರಿ ಫೈನಲ್ ವರ್ಷದ ಪೋಸ್ಟಿಂಗ್ ನಲ್ಲಿ ಇದ್ದು ನೂರಾರು ಗಾಯಾಳುಗಳನ್ನು  ಕೆ ಎಂ ಸಿ ಆಸ್ಪತ್ರೆಗೆ ತಂದಿದ್ದರು ,ಹಗಲೂ ರಾತ್ರಿ ವೈದ್ಯರು ,ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರು.ರಕ್ತ ದಾನ ಮಾಡಿದರು .ತಲೆಗೆ ಏಟು ಬಿದ್ದು ಪ್ರಜ್ನಾಹೀನ ರಾದ ಪೋಲೀಸು ಮತ್ತು ರೈತರ ತಲೆಯೊಳಗೆ ಏನಾಗಿದೆ ಎಂದು ತಿಳಿಯಲು ಆಗ ಸಿ ಟಿ ಸ್ಕ್ಯಾನ್ ಇರಲಿಲ್ಲ .ತಲೆ ಬುರುಡೆ  ಓಪನ್ ಮಾಡಿಯೇ ತಿಳಿಯ ಬೇಕಿತ್ತು .ಬುರುಡೆ ಕಟ್ ಮಾಡಲು ಈಗಿನ ಪರಿಷ್ಕೃತ  ಉಪಕರಣಗಳೂ ಇರಲಿಲ್ಲ . ಸುಧಾರಿತ ಉಳಿ ಮತ್ತು ಚಮ್ಮಟಿ ಉಪಯೋಗಿಸುತ್ತಿದ್ದ ನೆನಪು . 

ಈ ಚಳುವಳಿ ಗುಂಡೂ ರಾಯರಿಗೆ ರಾಜಕೀಯವಾಗಿ ವಾಟರ್ಲೂ ಆಗಿ ಮುಂದಿನ ಚುನಾವಣೆ ಯಲ್ಲಿ ಸೋತವರು ಮೇಲೆ ಎಳಲೇ ಇಲ್ಲ.

ಮೂರನೆಯದು ಸರ್ಕಾರಿ ವೈದ್ಯಕೀಯ ವಿದ್ಯಾರ್ಥಿಗಳ ಚಳುವಳಿ .

ನಾನು ಹಿಂದೆಯೇ ಬರೆದಂತೆ ಸರಕಾರ ತಾನು  ನಡೆಸುತ್ತಿರುವ ಮೆಡಿಕಲ್ ಕಾಲೇಜ್ ಗಳ ಸ್ಥಿತಿ ದಿನೇ ದಿನೇ ಚಿಂತಾ ಜನಕ ಆಗುತ್ತಿದ್ದರೂ ಅದರ ಸುಧಾರಣೆಗೆ ಗಮನ ಕೊಡದೆ ಹೊಸ ಖಾಸಗಿ ವೈದ್ಯಕೀಯ  ಕೋಲೇಜುಗಳಿಗೆ ಅನುಮತಿ ಕೊಡಲು ಪ್ರಾರಂಭಿಸಿತ್ತು.ಕೆ ಎಂ ಸಿ ಹುಬ್ಬಳ್ಳಿ ಯಂತಹ ಉತ್ತರ ಕರ್ನಾಟಕದ ಹೆಮ್ಮೆಯ ಏಕಮೇವ ಸಂಸ್ಥೆಯಲ್ಲಿಯೇ ಪ್ರಿನ್ಸಿಪಲ್ ಇಲ್ಲ ,ಮೆಡಿಸಿನ್ ನಂತಹ ಮುಖ್ಯ ವಿಭಾಗದಲ್ಲಿ ಅಧ್ಯಾಪಕರಿಲ್ಲ .ಇನ್ನು ಖಾಸಗಿ ಕಾಲೇಜ್ ಆರಂಭ ಆದರೆ ಅಲ್ಲಿಗೂ ಇಲ್ಲಿಂದ ಕೆಲವರನ್ನು ಎರವಲು ಕೊಡುವರು .ಇಲ್ಲಿಯ ಅನೇಕ ಗುರುಗಳು ತಮ್ಮ ಊರಿಗೆ ಸಮೀಪ ಎಂದು ಇಲ್ಲಿ ಬಿಟ್ಟು ಅಲ್ಲಿಗೆ ಹೋಗುವರು . ಇಂದಿಗೂ ಕೂಡ ಕೇರಳ ಮತ್ತು ತಮಿಳುನಾಡಿನ ಸರಕಾರಿ ವೈದ್ಯಕೀಯ ಕಾಲೇಜ್ ಗಳು  ನಮ್ಮ ಸಂಸ್ಥೆಗಳಿಗಿಂತ ತುಂಬಾ ಮುಂದುವರಿದಿವೆ .

ಇದರ ವಿರುದ್ದ ನಾವು ಮನವಿ ಸಲ್ಲಿಸಿದೆವು . ಆದರೆ ಸರಕಾರ ಸ್ಪಂದಿಸಲಿಲ್ಲ .ನಾವು ಮುಷ್ಕರ ಮಾಡಿದರೆ ಫೈನಲ್ ವರ್ಷದಲ್ಲಿ ಇರುವ ನಮಗೆ ನಷ್ಟ ,ಆದರೂ ಸುಮ್ಮನಿದ್ದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು ಎಂದು  ಚಳುವಳಿ ಆರಂಬಿಸಿದೆವು . ಸರ್ಕಾರ ತಾನೇ ಮೆಡಿಕಲ್ ಕಾಲೇಜ್ ಗಳನ್ನು ಸ್ಥಾಪಿಸಲಿ ,ಅರ್ಹ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಕ್ಷೇಮ ಎಂಬುದೂ ನಮ್ಮ ಬೇಡಿಕೆಯಲ್ಲಿ ಸೇರಿತ್ತು .

(ಮುಂದೆ ಹಲವು ದಶಕ ಗಳ ನಂತರ ಡಾ ವಿ ಎಸ್ ಆಚಾರ್ಯ ರು  ವೈದ್ಯಕೀಯ ಶಿಕ್ಷಣ ಮಂತ್ರಿ ಆಗಿದ್ದಾಗ ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜ್ ಗಳನ್ನು ಆರಂಬಿಸುವ ಕೆಲಸ ಆರಂಬಿಸಿದ್ದು ಈಗ ಮುಂದುವರಿದಿದೆ .ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅದರಿಂದ ಆದ ಪ್ರಯೋಜನ ಅಳೆಯಲಾರದ್ದು .)

ಈ ಚಳುವಳಿಯ ಅಂಗವಾಗಿ ನಾವು ನೂರಾರು ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾಗಿ ನ್ಯಾಯಾಧೀಶರು ಜಾಮೀನು ಕೊಡುತ್ತೇನೆ ಎಂದರೂ ತಿರಸ್ಕರಿಸಿ ಜೈಲಿಗೆ ಹೋದೆವು .ನಾನು ಹುಬ್ಬಳ್ಳಿ ಸಬ್ ಜೈಲಿನಲ್ಲಿ ಹತ್ತು ದಿನ ಬಂಧಿಯಾಗಿ ಇದ್ದೆನು .ಇನ್ನೊಂದು ದೊಡ್ಡ ತಂಡ ಧಾರವಾಡ ಜಿಲ್ಲಾ ಕಾರಾಗೃಹಕ್ಕೆ.ನಮಗೆ ಹಾಸ್ಟಲ್ ನಿಂದ ಊಟ ಉಪಾಹಾರ ಸರಬರಾಜು ಆಗುತ್ತಿತ್ತು ಮತ್ತು ಕಾಲೇಜ್ ಹಿಂದೆ ಇರುವ ಪೈ ಹೊಟೇಲ್ ನವರು ಪ್ರೀತಿಯಿಂದ ವಿಶೇಷ ಆಹಾರ ಉಚಿತ ವಾಗಿ ತಂದು ಕೊಡುತ್ತಿದರು . ನಮ್ಮ ಗುರುಗಳಿಗೆ (ಅವರು ಜೈಲಿಗೂ ಬಂದಿದ್ದರು)ಮತ್ತು ಸಾರ್ವಜನಿಕರಿಗೆ ನಮ್ಮ ಮೇಲೆ ಸಹಾನುಭೂತಿ ಇತ್ತು . ಎಸ್ ಆರ್ ಬೊಮ್ಮಾಯಿ ,ಜೋರ್ಜ್ ಫೆರ್ನಾಂಡಿಸ್ ಮುಂತಾದ ನಾಯಕರು ನಮ್ಮನ್ನು ಕಂಡು ಬೆಂಬಲ ಸೂಚಿಸಿದ್ದರು .ನನ್ನ ಅತ್ತೆ ಮಗ ಸುಬ್ರಹ್ಮಣ್ಯ ಇಂಜಿನಿಯರಿಂಗ್ ವಿದ್ಯಾರ್ಥಿ ದಿನಾಲೂ ನನ್ನನ್ನು ಜೈಲ್ ನಲ್ಲಿ ಬಂದು ಕಾಣುತ್ತಿದ್ದ .ಇಲ್ಲಿಯ ಜೈಲರುಗಳಿಗೆ ಇದು ಒಂದು ಹಬ್ಬ ಆಗಿತ್ತು .ಕ್ರಿಮಿನಲ್ ಚಟುವಟಿಕೆಯವರೆ ಹೆಚ್ಕು ಬರುತ್ತಿದ್ದವರನ್ನು ನೋಡಿ ನಮ್ಮಂತಹ ಹುಡುಗ ಹುಡುಗಿಯರನ್ನು ನೋಡಿದ ಮೇಲೆ .ಹಲವರು ಆ ಮೇಲೂ ಆಸ್ಪತ್ರೆಯಲ್ಲಿ ಬಂದು ನಮ್ಮನ್ನು ಕಾಣುತ್ತಿದ್ದು ನಾವೂ ನೃಪತುಂಗ ಬೆಟ್ಟಕ್ಕೆ ವಾಕಿಂಗ್ ಹೋಗುವಾಗ ಜೈಲ್ ವಸತಿಗೆ ಭೇಟಿ ಕೊಡುತ್ತಿದ್ದೆವು .ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಯಾಗಿದ್ದ (ಮತ್ತು ನನ್ನ ಆತ್ಮೀಯರೂ ಆಗಿದ್ದ )ಅನಂತಕುಮಾರ್  ಕ್ರಿಯಾತ್ಮಕವಾಗಿ ನಮ್ಮೊಡನೆ ಸಹಕರಿಸಿದ್ದರು .ಅವರ ತಂದೆ ರೈಲ್ವೇ ನೌಕರರಾಗಿ ಹುಬ್ಬಳ್ಳಿಯಲ್ಲಿ ಇದ್ದರು .ತಾಯಿ ಹುಬ್ಬಳ್ಳಿ ಧಾರವಾಡ ಕಾರ್ಪೊರೇಷನ್  ಉಪ ಮೇಯರ್ ಆಗಿದ್ದರು ಎಂದು ನೆನಪು .ಮುಂದೆ ಅವರು ಎಂ ಪಿ ,ಮಂತ್ರಿ ಆದಮೇಲೆ ಸಂಪರ್ಕ ಬಿಟ್ಟು ಹೋಯಿತು . ಇದೇ ಚಳುವಳಿಯ ಅಂಗವಾಗಿ ಆಗ ಮಂತ್ರಿಗಳಾಗಿದ್ದ  ಶ್ರೀ ಎಂ ವೀರಪ್ಪ ಮೊಯಿಲಿಯವರನ್ನು ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಘೇರಾವೋ ಮಾಡಿದಾಗ ಲಾಟಿ ಚಾರ್ಜ್ ಆಯಿತು .ಆ ದಿನ ನಾನು ಊರಿನಲ್ಲಿ ಇದ್ದರೂ ಕೇಸ್ ನಲ್ಲಿ ನನ್ನ ಹೆಸರನ್ನೂ ಸೇರಿಸಿದ್ದರು . ಮುಂದೆ ರಾಮಕೃಷ್ಣ ಹೆಗ್ಡೆ ಸರಕಾರ ರೈತರು ಮತ್ತು ವಿದ್ಯಾರ್ಥಿಗಳ ಮೇಲಿನ ಕೇಸ್ ಗಳನ್ನು ಹಿಂಪಡೆಯಿತು .ಆದರೂ ಸರಕಾರಿ ವೈದ್ಯಕೀಯ ಕಾಲೇಜ್ ಗಳ ಸ್ಥಿತಿ ಹೆಚ್ಚು ಸುಧಾರಣೆ ಕಾಣಲಿಲ್ಲ ,ಅವುಗಳನ್ನು ಸ್ವಾಯತ್ತ ಸಂಸ್ಥೆ ಗಳನ್ನಾಗಿ ಮಾಡಿದರೂ .ಇದರಲ್ಲಿ ಅಧ್ಯಾಪಕ ವೈದ್ಯರ ಪಾಲೂ ಇದೆ ಎಂದು ಹೇಳಲು ವಿಷಾದ ಪಡುತ್ತೇನೆ .


ಹುಬ್ಬಳ್ಳಿ ದಿನಗಳು 7

                      ಹುಬ್ಬಳ್ಳಿ ದಿನಗಳು7

ನಮಗೆ  ಆಸ್ಪತ್ರೆ ಪೋಸ್ಟಿಂಗ್ ಜತೆಗೆ ಔಷಧ ಶಾಸ್ತ್ರ (Pharmacology) ,ರೋಗ ನಿದಾನ ಶಾಸ್ತ್ರ  (Pathology),ಸೂಕ್ಷ್ಮಾಣು ಜೀವಿ ಶಾಸ್ತ್ರ (Microbiology)ಮತ್ತು ಅಪರಾಧ ಪತ್ತೆ ವೈದ್ಯ ಶಾಸ್ತ್ರ (Forensic medicine) ಕಲಿಯಬೇಕಿತ್ತು .ಪ್ಯಾಥಾಲಜಿ ಯಲ್ಲಿ  ಡಾ ಗೊರವಲಿಂಗಪ್ಪ ,ಡಾ ಮಹಾಲೆ ಮತ್ತು ಡಾ ನಾಡಿಗ್ ಪ್ರಾಧ್ಯಾಪಕರಾಗಿದ್ದು ಕೊನೆಯವರು ಮೈಕ್ರೋಬಯಾಲಜಿ ವಿಭಾಗದ ಪ್ರಭಾರಿ ಆಗಿದ್ದು ಡಾ ಮೀರಾ ಮೇವುಂಡಿ ಅವರೊಡನೆ ಇದ್ದರು . ಫೋರೆನ್ಸಿಕ್ ಮೆಡಿಸಿನ್ ಗೆ  ಡಾ ಭಾಸ್ಕರ್ ಕೆಲವು ತಿಂಗಳುಗಳ ನಂತರ ಬಂದರು . 

ಫಾರ್ಮಕಾಲಜಿ ಪ್ರೊಫೆಸರ್ ಡಾ ಕಂದ ಸ್ವಾಮಿ ಹಿಂದಿ ಸಿನಿಮಾ ದ  ಪ್ರಾಣ್ ತರಹ ಇದ್ದು  ಅವರ ಡೈಲಾಗ್ ಡೆಲಿವರಿ ಮತ್ತು ಪಾಠ ಮಾಡುವ ಕ್ರಮ  ವಿಶಿಷ್ಟ ಆಗಿತ್ತು . ನಮಗೆ ಪರೀಕ್ಷೆಗೆ ಇಲ್ಲದಿದ್ದರೂ ಪ್ರಾಯೋಗಿಕ ಔಷಧ ಶಾಸ್ತ್ರಕ್ಕೆ  ಹೆಚ್ಚು ಒತ್ತು ನೀಡುತ್ತಿದ್ದರು . ಔಷಧ ಶಾಸ್ತ್ರ  ವೈದ್ಯರಿಗೆ ಬಹಳ ಮುಖ್ಯ  . ಯಾವುದೇ ಔಷಧಿ ಬರೆಯುವ ಮೊದಲು ,ಅದರ ರಚನೆ ,ಇತರ ಔಷಧಿಗಳಿಗೆ ಅದರ ಪ್ರತಿಕ್ರಿಯೆ ,ಅಡ್ಡ ಪರಿಣಾಮಗಳು ,ಅದು ಶರೀರದಿಂದ ವಿಸರ್ಜನೆ ಆಗುವ ವಿಧಾನ , ಡೋಸ್ ಇತ್ಯಾದಿ ತಿಳಿದಿರಬೇಕು . ಪ್ರಸಿದ್ಧ ನೆಫ್ರೊಲೊಜಿಸ್ಟ್ ಡಾ ಎಂ ಕೆ ಮಣಿ ತಮ್ಮ ಗುರು ಡಾ ಈಶ್ವರಯ್ಯ  ಹೇಳುತ್ತಿದ್ದ  ಕಿವಿ ಮಾತು ಆಗಾಗ ನೆನಪಿಸಿ ಕೊಳ್ಳುವರು . 

"ವೈದ್ಯಕೀಯ ದಲ್ಲಿ  ಮೂರೂ ಪ್ರಾಥಮಿಕ ವಿಷಯಗಳು . ಫಿಸಿಯೋಲಾಜಿ (ಸಾಮಾನ್ಯ ಶರೀರ ಕಾರ್ಯ ಶಾಸ್ತ್ರ ),ಪ್ಯಾಥಾಲಜಿ (ರೋಗ ಶಾಸ್ತ್ರ )ಮತ್ತು ಫಾರ್ಮಕಾಲಜಿ (ಔಷಧ ಶಾಸ್ತ್ರ ).ಫಾರ್ಮಕಾಲಜಿ ಚೆನ್ನಾಗಿ ಕಲಿತರೆ ಪ್ಯಾಥಾಲಜಿ ಯನ್ನು ಫಿಸಿಯೋಲಾಜಿ ಮಾಡುವಿರಿ ,ಇಲ್ಲದಿದ್ದರೆ ಫಿಸಿಯೋಲಾಜಿ ಪ್ಯಾಥಾಲಜಿ ಆಗುವುದು ."

ಪ್ಯಾಥಾಲಜಿ ಯಲ್ಲಿ  ರೋಗ ಪೀಡಿತ ಅಂಗಗಳ  ಸ್ಲೈಡ್ ಗೆ ಬಣ್ಣ ಹಾಕಿ ಮೈಕ್ರೋಸ್ಕೋಪ್ ನಲ್ಲಿ ನೋಡಿ ರೋಗ ಗುರುತಿಸ ಬೇಕು . ಅದೇ ರೀತಿ ರಕ್ತವನ್ನೂ . ನಮಗೆ ತರಗತಿಯಲ್ಲಿ ಕೊಡುತ್ತಿದ್ದ ಸ್ಲೈಡ್ ಪರೀಕ್ಷೆಗೂ ಇಡುತ್ತಿದ್ದು ವಿದ್ಯಾರ್ಥಿಗಳು ಕೆಲವು ಕಷ್ಟದ ಸ್ಲೈಡ್ ಗಳನ್ನು  ಮೂಲೆ ತುಂಡಾದ ಸ್ಲೈಡ್ ಲಿವರ್ ಕ್ಯಾನ್ಸರ್ ,ಸ್ಲೈಡ್ ನ ಬದಿಯಲ್ಲಿ  ನೊಣದ ರೆಕ್ಕೆ ತರಹ ಇದ್ದರೆ  ಥೈರಾಯಿಡ್ ಕಾಯಿಲೆ ಇತ್ಯಾದಿ ನೆನಪು ಇಟ್ಟುಕೊಳ್ಳುತ್ತಿದ್ದೆವು . ಇದಲ್ಲದೆ ರೋಗ ಪೀಡಿತ ಅಂಗಗಳನ್ನು   ಸ್ಪೆಸಿಮೆನ್  ಅಂತ ಕಲಿಸುತ್ತಿದ್ದರು .ಆಸ್ಪತ್ರೆಯ ಆಪರೇಷನ್ ಥೀಯೇಟರ್ ನಿಂದ ಬಂದ  ಈ ಅಂಗಗಳನ್ನು  ಫಾರ್ಮಲಿನ್ ಇರುವ ಗಾಜಿನ ಜಾರಿನಲ್ಲಿ ಇಡುವರು . ವೈದ್ಯಕೀಯ ವಲಯದಲ್ಲಿ ಪ್ರಚಲಿತ ವಿರುವ ಒಂದು ಜೋಕ್ . 

ಒಂದು  ಪ್ರಾಯೋಗಿಕ ಪರೀಕ್ಷೆ .ವಿದ್ಯಾರ್ಥಿ ಹುಡುಗ ಮತ್ತು  ಗಂಡು ಎಕ್ಸಾಮಿನರ್ . ಗರ್ಭ ಕೋಶದ ಸ್ಪೆಸಿಮೆನ್  ಇಟ್ಟಿದ್ದರು .ಇದು ಏನು ?ಎಂದು ಕೇಳಿದರು ಪರೀಕ್ಷಕ .ವಿದ್ಯಾರ್ಥಿ  ಮೇಲಿಂದ ಕೆಳಗೆ ಅಂಗವನ್ನು ನೋಡಿ ಕಿಡ್ನಿ ಅಂದ .  Is it kidney ?ಸರಿಯಾಗಿ ನೋಡು . ಸಾಮಾನ್ಯ ವಾಗಿ  ಆತ್ಮ ವಿಶ್ವಾಸ ಇಲ್ಲದ ವಿದ್ಯಾರ್ಥಿ ಮಾಡುವಂತೆ 'ಅಲ್ಲ ಅಲ್ಲ ಸಾರೀ ಸರ್ ಅದು ಲಿವರ್ ಎಂದು ಅಂದಾಜಿಗೆ ಗುಂಡು ಬಿಟ್ಟ . ಪರೀಕ್ಷಕರು ಒಳ್ಳೆಯಕಲರ್ಡ್ ವರು .ಅವನನ್ನು ಹೇಗಾದರೂ ಪಾಸ್ ಮಾಡುವಾ ಎಂದು "ನೋಡಪ್ಪಾ ಈ ಅಂಗ ನನ್ನಲ್ಲೂ ಇಲ್ಲ ,ನಿನ್ನಲ್ಲೂ ಇಲ್ಲ ,ಯೋಚಿಸಿ ಹೇಳು "ಎಂದರು .ಹುಡುಗ ತಟ್  ಎಂದು "ಗೊತ್ತಾಯಿತು ಸರ್ ಮೆದುಳು "ಎಂದು ಬಿಡುವುದೇ ?

ರೋಗ ಶಾಸ್ತ್ರದಲ್ಲಿ ಹಲವು ಆಹಾರ ವಸ್ತುಗಳ ಹೆಸರುಗಳನ್ನು  ರೋಗಗಳ ಜತೆ ತಳುಕು ಹಾಕಿ ಹೆಸರು ಇಟ್ಟಿದ್ದು ಊಟ ಮಾಡುವಾಗ ಅದರ ನೆನಪು ಆಗುವುದು .ಉದಾ ಕಾಲರಾ ದಲ್ಲಿ ರೈಸ್ ವಾಟರ್ (ಗಂಜಿ )ಮತ್ತು ಟೈಫಾಯಿಡ್ ನಲ್ಲಿ  ಶೇಂಗಾ ಸೂಪ್ ಭೇದಿ ,ಇದೇ  ರೀತಿ ಕೋಲಾ ಕಲರ್ಡ್ ಮೂತ್ರ ,ಜಾಯಿಕಾಯಿ ಲಿವರ್ ,ಸ್ಟ್ರಾಬೆರಿ  ಪಿತ್ತಕೋಶ ,ಬ್ರೆಡ್ ಅಂಡ್ ಬಟರ್ ಅಪಿಯರೆನ್ಸ್ , ಎಂಕೋವಿ (ಮೀನು)ಸಾಸ್ ಕೀವು ಇತ್ಯಾದಿ ಹಲವು ಇವೆ

  ಫೋರೆನ್ಸಿಕ್ ಮೆಡಿಸಿನ್  ತರಗತಿಗಳು ರಂಜಕ .ನಮ್ಮ ಪ್ರಾಧ್ಯಾಪಕರಾಗಿದ್ದ ಡಾ ಭಾಸ್ಕರ್ ಸಿಗಾರ್ ಪೈಪ್ ಇಟ್ಟುಕೊಂಡು ಬರುವರು ,ಅವರಿಗೆ ಒಳ್ಳೆಯ ಹಾಸ್ಯ ಪ್ರಜ್ಞೆ ಇದ್ದು ,ಹಲವು ಪತ್ತೇದಾರಿ ಕಥೆಗಳನ್ನು ತಮ್ಮ ಅನುಭವದಿಂದ ಹೇಳುವರು . ಮರಣೋತ್ತರ ಪರೀಕ್ಷೆಗಳನ್ನು ನಾವು ಅಟೆಂಡ್ ಮಾಡಬೇಕಿತ್ತು . ಇದು ಕಷ್ಟದ ವಿಷಯ ಅಲ್ಲದಿದ್ದರೂ ನಮ್ಮ ಫೈನಲ್ ಪರೀಕ್ಷೆಯಲ್ಲಿ ಭಾರೀ ಅನ್ಯಾಯ ಆಯಿತು .ಡಾ ಭಾಸ್ಕರ್  ಒಳ್ಳೆಯವರು .ಆದರೆ ಪರೀಕ್ಷೆಗೆ ನಮಗೆ ಆಂತರಿಕ ಪರೀಕ್ಷಕರು ಇರಲಿಲ್ಲ .ಹೊರಗಿನಿಂದ ಬಂದವರು ಪೂರ್ವಾಗ್ರಹ ಪೀಡಿತರಾಗಿ ಬಂದಂತ್ತಿತ್ತು .ನಮ್ಮ ತರಗತಿಯ ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಫೇಲ್ ಮಾಡಿ ಹೋದರು . ಆಗ ಈ ತರಹ ಅಲ್ಲಲ್ಲಿ ನಡೆಯುತ್ತಿತ್ತು . ಪ್ರಾಧ್ಯಾಪಕರ ಮರ್ಜಿಯ ಮೇಲೆ ವಿದ್ಯಾರ್ಥಿಯ ಭವಿಷ್ಯ .. ವಿದ್ಯಾರ್ಥಿ ಎಷ್ಟು ಪ್ರಾಮಾಣಿಕ ,ಬುದ್ದಿವಂತ ಆಗಿದ್ದರೂ ಸಾಲದು ,ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ .ಆದರೆ ಇಂತಹವರು ಅಪರೂಪಕ್ಕೆ ಕೆಲವರು ಇದ್ದು ಬಹುತೇಕ ಅಧ್ಯಾಪಕರು ಒಳ್ಳೆಯವರು ಆಗಿದ್ದರು . 

ಈ ಅನ್ಯಾಯದ ಬಗ್ಗೆ ಆಗ  ಇಲ್ಲಿಯ ಅತ್ಯಧಿಕ ಪ್ರಸಾರ ಇದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮುಖ ಪುಟದ ಲೇಖನ ಬಂದಿತು . ವಿದ್ಯಾರ್ಥಿಗಳ ಪರಿಸ್ಥಿತಿ ಮತ್ತೂ  ನಾಜೂಕು ಆಯಿತು .ನಮ್ಮವರೇ ಪತ್ರಿಕೆಗೆ ಸುದ್ದಿ ಕೊಟ್ಟದ್ದು ಎಂದು ತಿಳಿದು ಮುಂದಿನ ಪರೀಕ್ಷೆಯಲ್ಲಿಯೂ ಅದೇ ಪರೀಕ್ಷಕರು ಅಥವಾ ಅವರ ಮಿತ್ರರು ಬಂದರೆ ಬಹಳ ಕಷ್ಟ ವಾದೀತು  ಎಂದು ನಾವೆಲ್ಲಾ ಪತ್ರಿಕೆಯ ಆಫೀಸ್ ಗೆ ದೌಡಾಯಿಸಿದೆವು ..ಸಂಪಾದಕರು ನಿಮಗೆ ಆದ ಅನ್ಯಾಯ ಪುನಃ ಮರುಕಳಿಸ ಬಾರದು ಎಂಬುದುದಷ್ಟೇ ನಮ್ಮ ಉದ್ದೇಶ ಎಂದು ಸಮಾಧಾನ ಮಾಡಿ ಕಳುಹಿಸಿದರು . ನಮ್ಮ ಅದೃಷ್ಟಕ್ಕೆ ಮುಂದಿನ ಪರೀಕ್ಷೆಗೆ ವಿಶ್ವವಿದ್ಯಾನಿಲಯ ದವರು ಡಾ ಭಾಸ್ಕರ್ ಜತೆಗೆ ರಾಜ್ಯದ ಹೊರಗಿನಿಂದ ಪರೀಕ್ಷಕರನ್ನು ತರಿಸಿದರು ಮತ್ತು ಅನ್ಯಾಯವಾಗಿ  ಅನುತ್ತೀರ್ಣರಾದ ಎಲ್ಲರೂ ಉನ್ನತ ದರ್ಜೆಯಲ್ಲಿ ಪಾಸ್ ಆದರು  

ಬಾಲಂಗೋಚಿ : ಔಷಧಿ ಶಾಸ್ತ್ರದಲ್ಲಿ ಮದ್ಯಪಾನ ಮತ್ತು ಲೈಂಗಿಕತೆ ಯ  ಬಗ್ಗೆ ಶೇಕ್ಸ್ ಪಿಯರ್ ನ ಮಾಕ್ಬೆತ್ ನಾಟಕದ ಒಂದು ಉಕ್ತಿಯನ್ನು ಕೋಟ್ ಮಾಡುವರು " It provokes the desire, but it takes away the performance"

 

ಸೋಮವಾರ, ಏಪ್ರಿಲ್ 26, 2021

ಹುಬ್ಬಳ್ಳಿಯ ದಿನಗಳು 8

   ಹುಬ್ಬಳ್ಳಿಯ ದಿನಗಳು 8

ಕೆ ಎಂ ಸಿ ಯ ಸುವರ್ಣ ದಿನಗಳು ನಾವು ಅಲ್ಲಿಗೆ ಸೇರುವಾಗ ಮುಗಿದು ಕೊಂಡು ಬಂದು ಅವನತಿಯ ಪರ್ವ ಆರಂಭ ಆಗಿತ್ತು . ರಾಜ್ಯದ ನಾಲ್ಕು ಮೆಡಿಕಲ್ ಕಾಲೇಜ್ ನ ಅಧ್ಯಾಪಕರಿಗೆ ವರ್ಗಾವಣೆ ಇದ್ದು ಹುಬ್ಬಳ್ಳಿ ಗೆ ಬರಲು ಹಳೆ ಮೈಸೂರು ಕಡೆಯವರು ಹಿಂದೇಟು ಹಾಕುತ್ತಿದ್ದರು . ತಮ್ಮ ಪ್ರಭಾವ ಉಪಯೋಗಿಸಿ ಅಲ್ಲೇ ಉಳಿದು ಕೊಳ್ಳುತ್ತಿದ್ದರು .ಇಲ್ಲಿಗೆ ವರ್ಗ ಅದವರು ರಜೆ ಹಾಕಿ ಹುಣ್ಣಿಮೆಗೊ ಅಮಾವಾಸ್ಯೆಗೋ ಒಮ್ಮೆ ಬರುವರು.ಹೆಚ್ಕಿನವರು ಅಲ್ಲಿ ಪ್ರೈವೇಟ್ ಪ್ರಾಕ್ಟೀಸ್ ಇಟ್ಟುಕೊಂಡಿದ್ದು ,ನರ್ಸಿಂಗ್ ಹೋಮ್ ನಡೆಸುವವರೂ ಇದ್ದರು . ಕಾಲೇಜಿಗೆ ಖಾಯಂ ಪ್ರಿನ್ಸಿಪಾಲ್ ,ಇಲ್ಲದೆ ಹೊಟೇಲ್ ನಲ್ಲಿ ಇಂದಿನ ವಿಶೇಷ ಏನು ಎಂದು ಕೇಳುವಂತೆ ಇಂದಿನ ಪ್ರಿನ್ಸಿಪಾಲ್ ಯಾರು ಎಂದು ಕೇಳುವ ಸ್ಥಿತಿ ಬಂದಿತ್ತು . ಹಿಂದಿನವರ ಪುಣ್ಯದ ಪ್ರಭಾವದಿಂದ ಆಸ್ಪತ್ರೆ ಮತ್ತು ಕಾಲೇಜ್ ನಡೆಯುತ್ತಿದ್ದವು .

ನಮ್ಮ ಅದೃಷ್ಟಕ್ಕೆ ಸರ್ಜರಿ ಯಲ್ಲಿ ಒಳ್ಳೆಯ ಅಧ್ಯಾಪಕರು ಇದ್ದರು .ಡಾ ಎಸ್ ಆರ್ ಕೌಲ್ಗುಡ್ ,ಡಾ ವಿಜಯಕಾಂತ್ ,ಡಾ ಕೆ ಜಿ ನಾಯಕ್ ,ಡಾ ಬೂದಿಹಾಳ್ ,ಡಾ ಗಿರಿಗೌಡ ,ಮತ್ತು ಡಾ ಲಕ್ಷ್ಮೀಕಾಂತ್ ನೆನಪಿಗೆ ಬರುವರು . ನಾನು ವಿದ್ಯಾರ್ಥಿ ಯಾಗಿ ಮತ್ತು ಹೌಸ್ ಸರ್ಜನ್ ಆಗಿ ಡಾ ಕೌಲ್ಗುಡ್ ,ಡಾ ನಾಯಕ್ ,ಗಿರಿಗೌಡ ಮತ್ತು ಲಕ್ಷ್ಮೀಕಾಂತ್ ಯೂನಿಟ್ ನಲ್ಲಿ ಇರುವ ಸೌಭಾಗ್ಯ ದೊರಕಿತ್ತು .

ಸ್ತ್ರೀ ರೋಗ ವಿಭಾಗದಲ್ಲಿ ಡಾ ಎಸ್ ಏನ್ ಕೌಲ್ ಗುಡ್ ಮುಖ್ಯಸ್ಥರು ,ಡಾ ಪದ್ಮಾ ರಾವ್(ಹಿರಿಯ ಐ ಎ ಎಸ ಅಧಿಕಾರಿ ಆಗಿದ್ದು ಜೈತ್ರ ಯಾತ್ರೆ ಎಂಬ ಆತ್ಮ ಚರಿತ್ರೆ ಬರೆದ ಕೆ ಜೈರಾಜ್ ಇವರ ಪುತ್ರ ) ಮತ್ತು ಇಂದುಮತಿ ವಿಶಾಲಾಕ್ಷಿ ಪ್ರಾಧ್ಯಾಪಕರು .ನಾನು ಡಾ ಕೌಲ್ ಗುಡ್ ಯೂನಿಟ್ ನಲ್ಲಿ ಇದ್ದು ಡಾ ಸುನಂದಾ ಕುಲಕರ್ಣಿ(ಸುಧಾ ಮೂರ್ತಿ ಸಹೋದರಿ ) ,ಡಾ ದಮಯಂತಿ ಇದ್ದರು . 

ಕೌಲ್ ಗುಡ್ ಸಹೋದರರು ಪ್ರಾಮಾಣಿಕರೂ ,ವಿದ್ವಜ್ಜನರೂ ಆಗಿದ್ದು ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು . ಸರ್ಜರಿ ಕೌಲ್ ಗುಡ್ ಸ್ಥಿತ ಪ್ರಜ್ಞ ,ಮೃದು ಭಾಷಿ ಯಾಗಿದ್ದರೆ  ಸ್ತ್ರೀ ರೋಗ ದವರು ಭಾವ ಜೀವಿ ಮತ್ತು  ಗಟ್ಟಿ ಧ್ವನಿಯವರು . ಎಸ ಏನ್ ಕೌಲ್ಗುಡ್ ಪತ್ನಿಗೆ ರಕ್ತ ಕೊಡಲು ಹಿಂಜರಿಯುವ ಗಂಡಂದಿರಿಗೆ ಗದರಿಸುವರು ,ಕೆಲವೊಮ್ಮೆ ಏಟು ಹಾಕಿದ್ದೂ  ಇದೆ ಎಂದು ಪ್ರತೀತಿ .ಆಮೇಲೆ  ತಾವೇ ರಕ್ತ ಕೊಡುವರು . ಅವರು ನೂರಾರು ಭಾರಿ ರಕ್ತ ದಾನ ಮಾಡಿರಬಹುದು .ಅವರ ಓ ಪಿ ಡಿ ಯಲ್ಲಿ  ಯಾವಾಗಲೂ  ಜನ ಗಂಗುಳಿ ,ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾದದ್ದು ಮುಗಿಯುವಾಗ ಸಂಜೆ ಆಗುತ್ತಿತ್ತು .ಆಮೇಲೆ ಮನೆಗೆ ಹೋಗಿ ಊಟದ ಶಾಸ್ತ್ರ  ಮುಗಿಸಿ ರೌಂಡ್ಸ್ ಗೆ ಬರುವರು .ಸಣ್ಣ ಸಣ್ಣ ತಪ್ಪಿಗೆ ರೇಗುವರು .ದೊಡ್ಡ ತಪ್ಪನ್ನು ಸಮಾಧಾನದಿಂದ ಪರಿಹಾರ ಮಾಡುವರು . ನಾನು ಹೌಸ್ ಸರ್ಜನ್ ಆಗಿದ್ದ ವೇಳೆ ಕುಮಟಾ ದ  ಡಾ ಟಿ ಏನ್ ಹೆಗ್ಡೆ ಸ್ನಾತಕೋತ್ತರ ವಿದ್ಯಾರ್ಥಿ ಆಗಿದ್ದು ,ಈಗ ಜನಪ್ರಿಯ ಸ್ತ್ರೀ ರೋಗ ತಜ್ಞರು ಮತ್ತು ಈಗಲೂ ನನ್ನ ಸ್ನೇಹಿತರು . 

ಎಸ ಏನ್ ಕೌಲ್ಗುಡ್ ನಿಯಮಿತವಾಗಿ  ಮತ್ತು ಪರೀಕ್ಷಾ ಸಮಯ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವರು .ತರಗತಿಯ ಕೊನೆಗೆ I may not be that good but i am Koulgud  ಎನ್ನುವರು . ಎರಡು ಮಂದಿ  ಕೌಲ್ಗುಡ್ ಇದ್ದ ಕಾರಣ ಒಂದು ಬೆರಳಿನ ವರು ಮತ್ತು ಎರಡು ಬೆರಳಿನವರು ಎಂದೂ ತಮಾಷೆಗೆ ಗುರುತಿಸುತ್ತಿದ್ದರು . ಸರ್ಜನ್ ದೊಡ್ಡಕರುಳು ,ಗುದ ದ್ವಾರ ಪರೀಕ್ಷೆಗೆ ಒಂದು ಬೆರಳು ಉಪಯೋಗಿದರೆ ಸ್ತ್ರೀ ರೋಗ ತಜ್ಞರು  ಜನನಾಂಗ ,ಗರ್ಭಕೋಶ ಪರೀಕ್ಷೆಗೆ ಎರಡು ಬೆರಳು ಉಪಯೋಗಿಸುವರು . 

  ಇವರು ಮತ್ತು ಸರ್ಜರಿಯಲ್ಲಿ ಡಾ ಕೆ ಜಿ ನಾಯಕ್ ಮತ್ತು ಡಾ ಗಿರಿ ಗೌಡ ಯಾವುದೇ  ಹೆಚ್ಚಿನ  ಆರ್ಥಿಕ ಲಾಭ ಇಲ್ಲದಿದ್ದರೂ ತಪ್ಪದೆ  ಸ್ಪೆಷಲ್ ಕ್ಲಾಸ್ ತೆಗೆದು ಕೊಳ್ಳುತ್ತಿದ್ದರು . ಅವರಿಗೆಲ್ಲಾ ನಾವು ಎಷ್ಟು ಋಣಿ ಗಳು ಆದರೂ ಸಾಲದು 

 ಇನ್ನೊಂದು ಮುಖ್ಯ ವಿಷಯ ಮೆಡಿಸಿನ್ ವಿಭಾಗ .ಇದು ಸ್ವಲ್ಪ ಲಾಚಾರ  ಸ್ಥಿತಿಯಲ್ಲಿ ಇತ್ತು ಇಲಾಖಾ ಮುಖ್ಯಸ್ಥರೇ ಸರಿಯಾಗಿ ಇರಲಿಲ್ಲ .ಫೋರೆನ್ಸಿಕ್ ಮೆಡಿಸಿನ್ ನಲ್ಲಿ ಆದಂತೆ ಹೊರಗಿನಿಂದ ಬಂದ  ಪರೀಕ್ಷಕರು ನಿರ್ದಾಕ್ಷಿಣ್ಯವಾಗಿ ನಮ್ಮ ಬ್ಯಾಚ್ ನ ಮೇಲೆ  ವಿನಾ ಕಾರಣ  ಪ್ರಹಾರ ಮಾಡಿದರು . 

ಕೆ ಜಿ ನಾಯಕ್ ಮತ್ತು ಗಿರಿ ಗೌಡ ಬಗ್ಗೆ ಮುಂದೆ ಬರೆಯುವೆನು 

ಬಾಲಂಗೋಚಿ : ಕಲ್ಲಿಕೋಟೆ ಮೆಡಿಕಲ್ ಕಾಲೇಜ್ ನಲ್ಲಿ ಕಾಸರಗೋಡು ಮೂಲದ ಇಬ್ಬರು ಭಟ್ ಡಾಕ್ಟರ್ ಗಳು ಇದ್ದರು.(ಸಹೋದರರಲ್ಲ ).ಒಬ್ಬರು  ಕಣ್ಣಿನ ,ಮತ್ತೊಬ್ಬರು ಮುತ್ರಾಂಗ ಶಸ್ತ್ರಕ್ರಿಯ ತಜ್ನರು .ಅಲ್ಲಿ ರೋಗಿಗಳು ಭಟ್ ಡಾಕ್ಟರರು ಇದ್ದಾರೆಯೇ ಎಂದು ಕೇಳಿದಾದ "ನಿ0ಙಳುಕ್ಕು ನೇತ್ರ ಡಾಕ್ಟ್ರು ವೇಣೋ ಮೂತ್ರ ಡಾಕ್ಟ್ರುವೇಣೋ' ಎಂದು ಕೇಳುತ್ತಿದ್ದರಂತೆ

ಭಾನುವಾರ, ಏಪ್ರಿಲ್ 25, 2021

ಹುಬ್ಬಳ್ಳಿ ನೆನಪುಗಳು 6 ಕ್ಲಿನಿಕಲ್ ಪೋಸ್ಟಿಂಗ್

              ಹುಬ್ಬಳ್ಳಿ ನೆನಪುಗಳು 6   ಆಸ್ಪತ್ರೆ ಕಲಿಕೆ (ಕ್ಲಿನಿಕಲ್ ಪೋಸ್ಟಿಂಗ್ )

 He who studies medicine without books sails an uncharted sea, but he who studies medicine without patients does not go to sea at all. William Osler.

   

ಒಂದೂವರೆ ವರ್ಷದ ಧೀರ್ಘ ಅಧ್ಯಯನ ಬಳಿಕ ನಾವು ಕ್ಲಿನಿಕಲ್ ವಿದ್ಯಾರ್ಥಿಗಳಾದೆವು. ಆಸ್ಪತ್ರೆ ಒಳಗೆ ನಮಗೆ ಪ್ರವೇಶ . ಉರಗ ಭೂಷಣ ಶಿವನಂತೆ ಸ್ಟೇಥೋಸ್ಕೋಪ್ ಧರಿಸಿ ,ಕೋಟ್ ನ ಪಾಕೆಟ್ ನಲ್ಲಿ  ಒಂದು ಮೊಣಕಾಲ ಚಮ್ಮಟಿ (knee hammer),ಪೆನ್ ಟಾರ್ಚ್,ಅಳೆಯುವ ಟೇಪ್ ಧಾರಿಗಳಾಗಿ ಬಲಗಾಲು ಒಳಗಿಟ್ಟು ಆಸ್ಪತ್ರೆ ಪ್ರವೇಶಿಸುವಾಗ ಆಗಲೇ ವೈದ್ಯರಾದ ಸಂತೋಷ . 

ಆದರೆ ಜ್ಯೂನಿಯರ್  ಮೆಡಿಕೊ ಗಳಾದ ನಮ್ಮನ್ನು ವಾರ್ಡ್ ನರ್ಸ್ ಗಳು ಕನಿಕರದಿಂದ ಮತ್ತು ಬಹಳಷ್ಟು ರೋಗಿಗಳು ಅನುಮಾನದಿಂದ ನೋಡಿದಾಗ ನಮಗೆ ನಾವು ನಡೆಯಲಿರುವ ದಾರಿ ಹೂವ ಹಾಸು ಅಲ್ಲ ಮತ್ತು ಬಲು ದೂರ ಎಂಬ ವಾಸ್ತವ ಬಹು ಬೇಗ ಮನವರಿಕೆ ಆಯಿತು . ಮೆಡಿಸಿನ್ ಪೊಸ್ಟಿಂಗ್ಸ್ ನಲ್ಲಿ  ಕನ್ನಿ0ಗ್ ಹ್ಯಾಮ್ ವಿರಚಿತ ಕೈಪಿಡಿ  ಮತ್ತು ಸರ್ಜರಿ ಯಲ್ಲಿ ಡಾ ದಾಸ್ ಅವರದ್ದು .

ಬಹಳ ಜನರು  ಆ ಆಸ್ಪತ್ರೆ ಬೇಡ ,ಅಲ್ಲಿ ಕಲಿಯುವ ಡಾಕ್ಟರರು ,ಹೌಸ್ ಸರ್ಜನ್ ,ಪಿ ಜಿ ಗಳು ಮದ್ದು ಕೊಡುವುದು ,ಆಪರೇಷನ್ ಮಾಡುವುದು ಎಂದು ಮೂಗು ಮುರಿಯುವರು .ಅಮೆರಿಕಾ ದೇಶದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಇಂತಹ ಅಸ್ಪ್ತ್ರೆಗಳಲ್ಲಿ ಯೇ (ನುರಿತ ವೈದ್ಯರು ಮಾತ್ರ ಇರುವ ಆಸ್ಪತ್ರೆಗಳಿಗೆ ಹೋಲಿಸಿದರೆ )ಮರಣ ಪ್ರಮಾಣ ಕಡಿಮೆ ಮತ್ತು ಗುಣಮುಖ ರಾಗುವವರ  ಸಂಖ್ಯೆ ಅಧಿಕ ಎಂದು ಕಂಡು ಬಂದಿದೆ . ಯಾಕೆಂದರೆ ಬಹಳಷ್ಟು ವಿದ್ಯಾರ್ಥಿ ವೈದ್ಯರು ತಮ್ಮ ಅನನುಭವದಿಂದ ತೊಂದರೆ ಬರದಂತೆ ವಿಶೇಷ ಅಧ್ಯಯನ ಮಾಡುವರಲ್ಲದೆ  ಚಿಕಿತ್ಸೆಗೆ ರೋಗಿಯ ಸ್ಪಂದನೆ ಬಗ್ಗೆ ಹೆಚ್ಕು ಬಾರಿ ಅವಲೋಕನ ನಡೆಸುವರು .

  ವಾರ್ಡ್ ನಲ್ಲಿ ನಾವು ರೋಗಿಯ ರೋಗ (ಈಗಿನ ಮತ್ತು ಹಿಂದಿನ )ಚರಿತ್ರೆ ,ಕುಟುಂಬ ರೋಗ ಮತ್ತು ಚಿಕಿತ್ಸಾ ವಿವರ ಎಲ್ಲಾ  ಹಾಕಿ ಅದರ ಆಧಾರದ ಮೇಲೆ ಅಂಗಾಂಗಗಳ ಪರೀಕ್ಷೆಯ ಆದ್ಯತೆ ನಿರ್ಧರಿಸುವೆವು .ಉದಾಹರಣೆಗೆ ಹೊಟ್ಟೆ ನೋವು ಮತ್ತು ವಾಂತಿ ಎಂದು ಬಂದರೆ ಉದರ ಪರೀಕ್ಷೆ .ಆದರೆ ಎಲ್ಲಕ್ಕೂ ಮೊದಲು ಸಾಮಾನ್ಯ ಶರೀರ ಪರೀಕ್ಷೆ ಮತ್ತು ಕೊನೆಗೆ ಸರ್ವಾಂಗ ಪರೀಕ್ಷೆ ಮಾಡಬೇಕು .

ಸಾಮಾನ್ಯ ಪರೀಕ್ಷೆಯ ವಿವರ ಈ ರೀತಿ ಇರುವುದು . "ಮಧ್ಯ ವಯಸ್ಸಿನ ಸಾಮಾನ್ಯ ಮೈಕಟ್ಟು ಮತ್ತು ಬಡ  ಆಹಾರ ಪೋಷಣೆ ಇರುವ ವ್ಯಕ್ತಿ ,ನಾಡಿ  ನಿಮಿಷಕ್ಕೆ ೭೪ ,ನಿಯಮಿತ ,ಸರಿಯಾದ ಪರಿಮಾಣ ,ಮತ್ತು ಎಲ್ಲಾ ನಾಡಿಗಳು ಸಮನಾಗಿ ಸಿಗುವವು ,ಉಷ್ಣತೆ ೯೮.೬  ಫೆ ., ರಕ್ತಹೀನತೆ ಮತ್ತು ಕಾಮಾಲೆ ಇಲ್ಲ ,ಕೈಕಾಲ ಬೆರಳಲ್ಲಿ ಉಗುರ ಬಾಗುವಿಕೆ ಅಥವಾ ತಟ್ಟೆಯಾಕಾರ ಇಲ್ಲ . ಶರೀರದಲ್ಲಿ ಗಣನೀಯ ದುಗ್ಧ ಗ್ರಂಥಿಗಳ  ಊತ ಇಲ್ಲ "

ಮುಖ್ಯ ಅಂಗ ಪರೀಕ್ಷೆ ನಿರೀಕ್ಷಣೆ ,ಸ್ಪರ್ಶ ,ಮರ್ದನ ಮತ್ತು ಶ್ರವಣ ಈ ಆರ್ಡರ್ ನಲ್ಲಿಯೇ ನಡೆಸ ಬೇಕು .. ನಿರೀಕ್ಷಣೆಗೆ ಕಣ್ಣು ಮತ್ತು ಮೆದುಳು (ಮನವರಿಯದುದ ಕಣ್ಣು ನೋಡದು Eyes don't  see what mind doesn't know ಎಂಬುದು ವೈದ್ಯ ಶಾಸ್ತ್ರದ ಪ್ರಸಿದ್ಧ ನುಡಿಗಟ್ಟು ),ಸ್ಪರ್ಶಕ್ಕೆ ಅಂಗೈ ,ಮರ್ದನಕೆ ಬೆರಳುಗಳು ,ಶ್ರವಣಕ್ಕೆ ಸ್ಟೆಥೋಸ್ಕೋಪ್ .. 

ಉದರ ಪರೀಕ್ಷಾ ವರದಿ ಈ ಪರಿ ಇರುವುದು . ಹೊಟ್ಟೆಯ ಆಕಾರ ಸಾಮಾನ್ಯ ವಾಗಿದ್ದು ಉಸಿರಾಟದೊಡನೆ  ಎಲ್ಲಾ  ಭಾಗಗಳೂ ಒಂದೇ ತರನಾಗಿ ಮೇಲೆ ಕೆಳಗೆ ಹೋಗುತ್ತಿವೆ .ಹೊಕ್ಕುಳು ಮಧ್ಯ ಭಾಗದಲ್ಲಿ ಇದ್ದು ,ಉದರದ ಮೇಲ್ಮೈ ಯಲ್ಲಿ ಅಭಿಧಮನಿ ಗಳು (ಸಾಮಾನ್ಯರ ಭಾಷೆಯಲ್ಲಿ ನರ )ಉಬ್ಬಿ ಕಾಣುವುದಿಲ್ಲ ಮತ್ತು ಕರುಳಿನ ಚಲನೆ  ಕಾಣುವುದಿಲ್ಲ . ಉದರದ ಸುತ್ತಳತೆ --- ಇಷ್ಟು ಇದೆ 

ಮುಟ್ಟಿ ನೋಡಿದಾಗ ಲಿವರ್ ಪಕ್ಕೆಲುಬಿನಿಂದ ಎರಡು ಇಂಚು ಕೆಳಗೆ ಕೈಗೆ ಸಿಗುವುದು ,ಗಟ್ಟಿಯಾಗಿದ್ದು ,ಸ್ಪರ್ಶಿಸಿದಾಗ ವೇದನೆ ಇದೆ . 

ಮರ್ದನದಲ್ಲಿ ಲಿವರಿನ  ಅಳತೆ ---- ಇಷ್ಟು ಇದೆ . ದ್ರವಶೇಖರಣೆ ಲಕ್ಷಣಗಳು ಇಲ್ಲ . 

ಶ್ರವಣದಲ್ಲಿ  ಸಾಮಾನ್ಯ ಕರುಳಿನ ಚಲನಾ  ದನಿ ಕೇಳಿಸುವುದು .ಲಿವರ್ ನ ಮೇಲೆ ಅನ್ಯ ಶಬ್ದಗಳು ಇಲ್ಲ . 

ಹೆರ್ನಿಯಾ ಉಂಟಾಗ ಬಲ್ಲ ಸ್ಥಳಗಳು ಸಾಮಾನ್ಯ ವಾಗಿ ಇದ್ದು ವೃಷಣ ಮತ್ತು ವೃಷಣ ಚೀಲಗಳು ನಾರ್ಮಲ್ ಇವೆ . ಉದರ ಪರೀಕ್ಷೆ   ಜನನಾಂಗ ಮತ್ತು ತೊಡೆ ಬುಡ ಪರೀಕ್ಷೆಯ ಹೊರತು ಪೂರ್ಣವಾಗದು ಎಂದು ಪುನಃ ಪುನಃ ಕಲಿತು ,ಕಲಿಸಿದ್ದರೂ ಈಗಲೂ ಬೇರೆ ಬೇರೆ ಕಾರಣಗಳಿಂದ ಅದು ಬಿಟ್ಟು ಹೋಗುವುದು .ಬಹಳ ವಿದ್ಯಾರ್ಥಿಗಳು ಈ ಲೋಪಕ್ಕಾಗಿ  ಅನುತ್ತೀರ್ಣ ಆದದ್ದುಂಟು . 

ಆಮೇಲೆ  ಶ್ವಾಸ ಕೋಶ ,ಹೃದಯ ,ನರಾಂಗ ಪರೀಕ್ಷೆಯಲ್ಲಿ ವಿಶೇಷವೇನೂ ಕಂಡು ಬರುವುದಿಲ್ಲ . 

ನನ್ನ  ಪೂರ್ವಭಾವೀ  ರೋಗ ನಿದಾನ (ಡಯ ಗ್ನೋಸಿಸ್ ) ಅಮೀಬಿಕ್ ಲಿವರ್ ಕಾಯಿಲೆ . 

ಮಾಡಬೇಕಾದ  ಪರೀಕ್ಷೆಗಳು . 

ಆಗೆಲ್ಲಾ ಸ್ಕ್ಯಾನ್ ಇರಲಿಲ್ಲ ,ನಮ್ಮ ಅನುಭವ ಮತ್ತು ರೋಗಿಯ ಕೂಲಂಕುಷ ಪರೀಕ್ಷೆಗೆ ಹೆಚ್ಚಿನ ಮಹತ್ವ ಇತ್ತು

ಶುಕ್ರವಾರ, ಏಪ್ರಿಲ್ 23, 2021

ಹುಬ್ಬಳ್ಳಿ ನೆನಪುಗಳು 5

              ಹುಬ್ಬಳ್ಳಿ ನೆನಪು ಗಳು 5 

                     

Jowar Roti Meals at Kamat | Mouli's blogಮಡಿಕೆ ಕಾಳಿನ ಪಲ್ಯUttar Karnataka Special Madike kaalu palya recipe| Moth  beans Sprouts curry or bhaji - YouTube

ಹುಬ್ಬಳ್ಳಿಯಲ್ಲಿ ನನಗೆ ಉತ್ತರ ಕರ್ನಾಟಕದ ಆಹಾರ ಕ್ರಮಗಳ ಪರಿಚಯ ಆಯಿತು . ಮೊದಲನೆದಾಗಿ  ಅದು ವರೆಗೆ ಕಾಫಿ ಕುಡಿಯುತ್ತಿದ್ದ ನಾನು ಚಹಾದ ದಾಸನಾದೆ .ಇದಕ್ಕೆ ಕಾರಣ  ಮೆಸ್ಸ್ ನಲ್ಲಿ ಕಾಫಿ ಕೊಡುತ್ತಿರಲಿಲ್ಲ ;ಮತ್ತು ಖಾನಾವಳಿಗಳಲ್ಲಿ ಒಳ್ಳೆಯ ಕಾಫಿ ಸಿಗದು ,ಚಹಾ ಮಾತ್ರ ಎಲ್ಲೆಡೆ ಖಡಕ್ . ಬೇಂದ್ರೆಯವರು ಇನ್ನೂ ಯಾಕೆ ಬರಲಿಲ್ಲಾವ  ಹುಬ್ಬಳ್ಳಿಯಾಂವ ದಲ್ಲಿ  ಚಹಾದ ಕೂಡಾ ಚೂಡಾ(ಚಿವುಡ ,ಹುರಿದ ಅವಲಕ್ಕಿ ಮಿಶ್ರಣ ) ದಾಂಗ ಎಂದು ಬರೆದಿದ್ದಾರೆ .(ಕಾಫಿ ಕೂಡ ಎಂದು ಬರೆದರೆ ಸೇರದು ). 

ಇನ್ನು ಅವರ ಊಟ ನಮ್ಮ ರಾಜ್ಯದ ಬೇರೆ ಭಾಗಗಳಿಗೆ ಹೋಲಿಸಿದರೆ ಹೆಚ್ಚು ಸಮತೋಲ .ರೊಟ್ಟಿ ,ಸ್ವಲ್ಪ ಅನ್ನ ,ಸಾರು .ಮೊಸರು , ಕಾಳು ಪಲ್ಯ (ಮಡಿಕಿ ಕಾಳು ,ಅಲಸಂದಿ ,ಕಡಲೆ ಮತ್ತು ಹೆಸರು ),ಸೊಪ್ಪಿನ ಪಲ್ಯ .ಶೇಂಗಾ ಪುಟಾಣಿ  ಅಥವಾ ಗುರೆಳ್ಳು ಚಟ್ನಿ . ಅದರ ಜೊತೆ ಹಸಿ ಮೆಣಸಿನ ಕಾಯಿ .(ಇದು ಅಷ್ಟು ಒಳ್ಳೆಯದಲ್ಲ ). 

ನಮ್ಮ ಹಾಸ್ಟೆಲ್ ನಲ್ಲಿ ಜೋಳದ ರೊಟ್ಟಿ ಮಾಡುತ್ತಿದ್ದುದು ಕಡಿಮೆ ,ಚಪಾತಿ  ಕೊಡುತ್ತಿದ್ದರು .ಹಬ್ಬ ಹುಣ್ಣಿಮೆಗೆ ವಿಶೇಷವಾಗಿ ರೊಟ್ಟಿ ಮಾಡುವ ಅಕ್ಕನವರನ್ನು ಕರೆಸುತ್ತಿದ್ದರು .ಅವರು ರೊಟ್ಟಿ ತಟ್ಟುವ ಲಯ ಪೂರ್ಣ ಶಬ್ದ ಕಿವಿಯಲ್ಲಿದೆ .ಹೊರಗಡೆ ಮೆಸ್ಸ್ ಗಳಲ್ಲಿ ಒಂದು ಹೊತ್ತು ರೊಟ್ಟಿ ,ಇನ್ನೊಂದು ಹೊತ್ತು ಚಪಾತಿ ಕೊಡುತ್ತಿದ್ದರು . 

ಹಬ್ಬದ ದಿನ ಮತ್ತು ಕೆಲವು ಭಾನುವಾರ  ಕಡಲೆ ಝುಣಕ  ಬದನೆಕಾಯಿ ಎಣ್ಣೆ ಗಾಯಿ ,ಮತ್ತು ಶೇಂಗಾ ಹೋಳಿಗೆ ಇರುತ್ತಿತ್ತು . 

ಹುಬ್ಬಳ್ಳಿಯ ಹೋಟೆಲ್ ಮತ್ತು ಹಾಸ್ಟೆಲ್ ಗಳಲ್ಲಿ ಆಗ ಜನಪ್ರಿಯ ಆಗಿದ್ದ ತಿಂಡಿಗಳು ನಮ್ಮಲ್ಲಿ  ಅಪರೂಪವಾದ ಬ್ರೆಡ್ ಒಗ್ಗರಣೆ ,ಬ್ರೆಡ್ ಬೋಂಡಾ ,ಅವಲಕ್ಕಿ ಒಗ್ಗರಣೆ .. 

   ನಾವು ಕಾಲೇಜಿಗೆ ಸೇರುವಾಗ ಪ್ರಸಿದ್ದ ಕಾಮತ್ ಹೋಟೆಲ್ ನವರು ಕಾಲೇಜು ಕ್ಯಾಂಟೀನ್ ನಡೆಸುತ್ತಿದ್ದು ಆಮೇಲೆ ಶಾಸ್ತ್ರೀ ಗ್ರೂಪ್ ನವರು ಏಲಂ ಪಡೆದರು . ಕ್ಯಾಂಪಸ್ ನ ಹಿಂಭಾಗದಲ್ಲಿ ಇದ್ದ ಪೈ ಹೋಟೆಲ್ ,ಎದುರು ಗಡೆ  ಕಾಮರ್ಸ್ ಕಾಲೇಜು ಮುಂದೆ ಸಂಗೀತಾ ಹೋಟೆಲ್ ವಿದ್ಯಾರ್ಥಿ ವೃಂದದಲ್ಲಿ ಜನ ಪ್ರಿಯ ಆಗಿದ್ದುವು . ಪಕ್ಕದಲ್ಲೇ ಇದ್ದ ಅಂಬೇಶ್  ಹೋಟೆಲ್ ,ಎದುರು ಗಡೆ  ಇದ್ದ ಗುರುದತ್ತ ಭವನ ಹೊಗ್ಗುತ್ತಿದ್ದೆವು . ಗುರುದತ್ತ ಭವನದ ಶ್ರೀ ಜಯಂತ ಶೆಟ್ಟಿ    ಉತ್ತಮ ಕ್ರಿಕೆಟ್ ಆಟಗಾರ ಆಗಿದ್ದು ರಣಜಿ ಟೀಮ್ ವರೆಗೆ ಹೋಗಿದ್ದ ನೆನಪು .ಮುಂದೆ ಅವರು ಪೊಲೀಸ್ ಇಲಾಖೆ ಸೇರಿದರು ಎಂದು ಕೇಳಿದ್ದೇನೆ .ಹೆಚ್ಚಿನ ಹೋಟೆಲ್ ನವರೂ ಮಂಗಳೂರು ಕಡೆಯವರು ಆಗಿದ್ದರೂ ನಮ್ಮೊಡನೆ ಹೆಚ್ಚು ಸಲಿಗೆ ಇರಲಿಲ್ಲ .ಯಾರಾದರೂ ದುರುಪಯೋಗ ಗೊಳಿಸಿದರೆ ಎಂಬ ಭಯ ಇದ್ದಿರ ಬಹುದು . 

ಇನ್ನು ಮಾಂಸಾಹಾರ  ಇಷ್ಟ ವಿದ್ದವರು ಹೆಚ್ಚಾಗಿ ಅವಲಂಬಿಸಿದ್ದ ಹೋಟೆಲ್ ಅಭಿಮಾನ್ ಕ್ಯಾಂಪಸ್ ನೇರ ಎದುರುಗಡೆ ಇತ್ತು . ಇನ್ನೊಂದು ಹೋಟೆಲ್ ಹೈ ವೇ  ; ಅದರ ಯಜಮಾನರು ನನ್ನ ಸಹಪಾಠಿ ಹರೀಶ್ ಕುಮಾರ್ ಎಂಬುವರ ಬಂಧುಗಳು ಆದ ಕಾರಣ ನನಗೂ ಮಿತ್ರರಾದರು

ಇನ್ನು  ನಮ್ಮ ಮಿತ್ರರು ಊರಿಂದ ಬರುವಾಗ ಕರದಂಟು (ಗೋಕಾಕ ) ,ಕುಂದಾ (ಬೆಳಗಾವಿ ),ಮತ್ತು ಪೇಡಾ (ಧಾರವಾಡ )ತರುವರು .ಇವುಗಳ ಪೈಕಿ ಕರದಂಟು ನನಗೆ ಬಲು ಇಷ್ಟ ವಾಯಿತು .ನನ್ನ ಸಹಪಾಠಿ ಗೋಕಾಕದ ಡಾ ಮಹೇಶ್ ಹೂಲಿ ಯಾವಾಗಲೂ ತಂದು ಕೊಡುತ್ತಿದ್ದರು . 

ನಾವು ಊರಿಗೆ ಹೋಗುವಾಗ ಧಾರವಾಡ ಪೇಡಾ  ಮತ್ತು ವಿದ್ಯಾನಗರದಲ್ಲಿ ಇದ್ದ ಶಿರೂರ್ ಗಾರ್ಡನ್ ದ್ರಾಕ್ಷಿ ತೋಟದಿಂದ ಹಣ್ಣು ಕೊಂಡು ಹೋಗುತ್ತಿದ್ದೆವು . ಧಾರವಾಡ ದ  ಲೈನ್ ಬಜಾರ್ ಠಾಕೂರ್ ಪೇಡಾ  ಬಹಳ ಪ್ರಸಿದ್ಧ ..ಈಗ ದ್ರಾಕ್ಷಿ ತೋಟ ಹೋಗಿ ಅದೇ ಹೆಸರಿನ ಬಡಾವಣೆ ಬಂದಿದೆ . 

ಇಂದಿಗೂ ನನಗೆ ಉತ್ತರ ಕರ್ನಾಟಕದ ಊಟ ಬಹಳ ಇಷ್ಟ . ದುರದೃಷ್ಟ ವಶಾತ್ ಉತ್ತರ ಕರ್ನಾಟಕದಲ್ಲಿಯೂ ಸಮಾರಂಭ ಗಳಲ್ಲಿ  ಇತ್ತೀಚಿಗೆ ಉತ್ತರ ಭಾರತದ ಊಟ ಮತ್ತು  ತಿನಸುಗಳು ಸ್ಥಳೀಯ ಆಹಾರದ ಸ್ಥಾನ ಆಕ್ರಮಿಸಿವೆ . ನಾನು ಎರಡು ವರ್ಷಗಳ ಹಿಂದೆ ಕಾನ್ಫರೆನ್ಸ್ ಗಾಗಿ  ಬೆಳಗಾವಿಗೆ ಹೋದವನು ಒಳ್ಳೆಯ ರೊಟ್ಟಿ ಊಟಕ್ಕೆ  ತುಂಬಾ ಹುಡುಕಾಡ  ಬೇಕಾಯಿತು . (ಕೊನೆಗೆ ಅನ್ನಪೂರ್ಣ ಎಂಬ ಒಳ್ಳೆಯ ಖಾನಾವಳಿ ಸಿಕ್ಕಿತು ಅನ್ನಿ ). 

ಈಗಲೂ ನಾನು ಆನ್ಲೈನ್ ಮೂಲಕ ಬಿಜಾಪುರ ದಿಂದ ಶೇಂಗಾ ಚಟ್ನಿ ,ಶೇಂಗಾ ಹೋಳಿಗೆ ಮತ್ತು ರೊಟ್ಟಿ ತರಿಸಿ ತಿನ್ನುವೆನು . ಹಲಸಿನ ಹಣ್ಣಿನ ಕಡುಬು ತಿನ್ನುವಾಗ ಅಜ್ಜ ಅಜ್ಜಿ ಯ  ನೆನಪಾದಂತೆ ಇವುಗಳನ್ನು ಸವಿಯುವಾಗ ನನ್ನ ಕೆ ಎಂ ಸಿ ದಿನಗಳು ಮತ್ತು ಮಿತ್ರರ ನೆನಪು ಆಗುವದು . ರೊಟ್ಟಿ ,ಚಟ್ನಿ ಮತ್ತು ಹೋಳಿಗೆ ಬಿಜಾಪುರದ ಉಮದಿ ಫುಡ್ಸ್ (   https://umadifoods.com/ ) ಮತ್ತು ಕರದಂಟು ಸದಾನಂದ ಸ್ವೀಟ್ಸ್ (   https://gokakkaradant.com/ ) ಆನ್ಲೈನ್ ಅಂಗಡಿಗಳಲ್ಲಿ ಸಿಗುವದು.ಅಲ್ಲದೆ ನನ್ನ ಮಿತ್ರ ಡಾ ವೈ ಬಿ ಭಜಂತ್ರಿ ಹುಬ್ಬಳ್ಳಿಯಿಂದ ನಾನು ಕೇಳಿದಾಗಲೆಲ್ಲ ಪಾರ್ಸೆಲ್ ಮಾಡಿ ಕಳುಹಿಸುವರು .