ಬೆಂಬಲಿಗರು

ಶುಕ್ರವಾರ, ಏಪ್ರಿಲ್ 9, 2021

ನಮ್ಮ ಹೆಮ್ಮೆಯ ನಿಶ್ಚಿತ್

                                            

                    ನಮ್ಮ ಹೆಮ್ಮೆಯ ನಿಶ್ಚಿತ್

ಈ ಚಿತ್ರದಲ್ಲಿ ಇರುವ ಯುವಕ ನಿಶ್ಚಿತ್ . ನಮ್ಮ ನೆರೆ (ಹೊರೆಯಂತೂ ಅಲ್ಲವೇ ಅಲ್ಲ )ಕರೆ ಯಲ್ಲಿ  ಅವನ ಮನೆ . ತಾಯಿ ನಿವೃತ್ತ ಬಿ ಎಸ ಏನ್ ಎಲ್ ಉದ್ಯೋಗಿ . ಹುಟ್ಟುವಾಗಲೇ ವಾಕ್ ಮತ್ತು ಶ್ರವಣ  ಶಕ್ತಿ ಇಲ್ಲ . ಆದರೆ ದೃತಿ ಕೆಟ್ಟು ಮನೆಯಲ್ಲಿ ಕೂರಿಸಲಿಲ್ಲ .ವಾಮನೂರಿನ ಮಂಗಳ ಜ್ಯೋತಿ  ವಿಕಲ ಚೇತನ ಸಂಯೋಜಿತ ಶಾಲೆಯಲ್ಲಿ  ಅಕ್ಷರಾಭ್ಯಾಸ ಮಾಡಿ ಈಗ  ಅಲ್ಲಿಯೇ ಪಕ್ಕದ  ಪದ್ಮಾ ಆಟೋ ಗ್ಯಾರೇಜು ನಲ್ಲಿ ಕೆಲಸ .ಬೆಳಗ್ಗೆ ಪುತ್ತೂರಿನಿಂದ ಬಸ್ ಹಿಡಿದು ಮಂಗಳೂರು ,ಅಲ್ಲಿಂದ ಇನ್ನೊಂದರಲ್ಲಿ  ವಾಮ೦ಜೂರಿಗೆ  ಹೋಗಿ ಬರುವನು .ದಾರಿಯಲ್ಲಿ ನಾನು ಆಸ್ಪತ್ರೆಗೆ ಹೋಗುವಾಗ  ಮುಗುಳ್ನಗೆ ಮತ್ತು ನಮಸ್ಕಾರ . ಮೇಯ್ನ್ ರೋಡ್ ವರೆಗೆ  ಕಾರಿನಲ್ಲಿ ಬಿಡುವೆನು ಎಂದರೆ ಬೇಡ ಬೇಡ ನಡೆದೇ ಬರುವೆನು ಎನ್ನುವನು . 

  ಇವನಿಗೆ ಹೀಗೆ ಆಯಿತು ಎಂದು ಬೇಸರವೇ ಎಂದು ಕೇಳಿದ್ದಕ್ಕೆ "ಖಂಡಿತಾ ಇಲ್ಲ ,ನಮಗೆ ಮಹಾಲಿಂಗೇಶ್ವರ ದೇವರೇ ಇಷ್ಟು ಒಳ್ಳೆಯ ಮಗ ಕೊಟ್ಟಿದ್ದಾನೆ "ಎನ್ನುವರು ತಾಯಿ ಶ್ರೀಮತಿ ರತ್ನಾ . 

ಕರಾಟೆ  ತರಬೇತಿ ಕೂಡಾ ಪಡೆದಿರುವ ಈತ ಬ್ಲಾಕ್ ಬೆಲ್ಟ್ . 

ನನ್ನ  ಪಕ್ಕದ ಮನೆ ಸನ್ಮಿತ್ರ ಈತ  ಎನ್ನಲು ನನಗೆ ಹೆಮ್ಮೆ . 




 

ಗುರುವಾರ, ಏಪ್ರಿಲ್ 8, 2021

ಹಿರಿಯರ ಆಶೀರ್ವಾದ

                     ಹಿರಿಯರ ಆಶೀರ್ವಾದ 

ಇಂದು ನನಗೊಂದು  ಅಚ್ಚರಿ ಕಾದಿತ್ತು .ಅಂಚೆಯಲ್ಲಿ ಒಂದು ಓಲೆ .ಈಗ ಕಾಗದ ಬರೆಯುವವರೇ ಕಡಿಮೆ . ಆದರೆ 'ಯಿಂದ' ಕಲಂ ನಲ್ಲಿ ವಕೀಲರ ಹೆಸರು ಇತ್ತು .ನನಗೆ ಸ್ವಲ್ಪ ಗಾಬರಿ ಆಯಿತು .ನನ್ನ ಪತ್ನಿ ನನ್ನನ್ನು ಮೊದಲೇ ಎಚ್ಚರಿಸಿದ್ದರು ."ನಿಮಗೆ ಯಾಕೆ ಇದೆಲ್ಲಾ ಬರೆಯುವ ಉಸಾಬರಿ ,ಈಗ ಎಲ್ಲರೂ ತುಂಬಾ ಸೆನ್ಸಿಟಿವ್ "  ಯಾರಾದರೂ ವಕೀಲರ ನೋಟಿಸ್ ಕಳುಹಿಸಿದ್ದಾರೋ ?

ಧೈರ್ಯದಲ್ಲಿ ತೆರೆದು ಓದಿದರೆ ಅದು ಜಿಲ್ಲೆಯ ಹಿರಿಯ ವಕೀಲ ಪುಂಡಿಕಾಯ್ ನಾರಾಯಣ ಭಟ್ ಅವರ ಆಶೀರ್ವಾದ ಪೂರ್ವಕ ಪತ್ರ .  ಅವರು ಸಾಹಿತ್ಯ ಸಂಗೀತ ಮತ್ತು ಕಲೆಗಳಲ್ಲಿ ಅಭಿರುಚಿ ಇರುವವರು ಎಂದು ನಾನು ಬಲ್ಲೆ .ಅವರ ಮಗ ಪ್ರಸಿದ್ದ ವೈದ್ಯ ರಾಮರಾಜ್ ಕೂಡಾ . ತಮ್ಮ ಪುಂಡಿಕಾಯ್ ಗಣಪಯ್ಯ ಸಾಹಿತ್ಯ ಮತ್ತು ಇತಿಹಾಸ  ಕ್ಷೇತ್ರದಲ್ಲಿ ಹೆಸರು ಮಾಡಿದವರು .ನನ್ನ ಫೇಸ್ ಬುಕ್ ಬರಹಗಳನ್ನು  ಮೆಚ್ಚಿ ಒಳ್ಳೆಯ ಅಭಿಪ್ರಾಯ ಬರೆದಿದ್ದಾರೆ . ಅವರಿಗೆ ನಾನು ಗೌರವ ಪೂರ್ವಕವಾಗಿ ವಂದಿಸುತ್ತೇನೆ .




ಬುಧವಾರ, ಏಪ್ರಿಲ್ 7, 2021

shramajeevi sathyanna

   ಶ್ರಮ ಜೀವಿ ಸತ್ಯಣ್ಣ 


 


 ೧೯೮೬ ರಿಂದ ೧೯೮೯ ವರೆಗೆ ಮೂರು  ವರ್ಷ ರೈಲ್ವೆ  ವೈದ್ಯಾಧಿಕಾರಿ ಆಗಿ ಪುತ್ತೂರಿನಲ್ಲಿ (ರೈಲ್ವೆ ಭಾಷೆಯಲ್ಲಿ ಕಬಕ ಪುತ್ತೂರು )ಇದ್ದೆನು . ಹಾರಾಡಿ ರೈಲ್ವೆ ಕಾಲೋನಿ ಯಲ್ಲಿ ಮನೆ .ನಮ್ಮ ಮನೆಗೆ ಹೊಳ್ಳರ ಅಂಗಡಿಯಿಂದ ದಿನ ಪತ್ರಿಕೆ ಬರುತ್ತಿತ್ತು .ಹಾಕುತ್ತಿದ್ದವರು ಸತ್ಯನಾರಾಯಣ ಭಟ್ ಅಥವಾ  ಸತ್ಯಣ್ಣ . 

  ಮುಂದೆ ನಾನು ದೇಶ ವಿದೇಶ ಸುತ್ತಿ (ಕೊಂಕಣ ಸುತ್ತಿ ಮೈಲಾರಕ್ಕೆ ಬಂದ  ಹಾಗೆ )

ಪುತ್ತೂರಿಗೆ ೨೦೧೦ ರಲ್ಲಿ ಬಂದು ನೆಲೆಸಿದೆನು . ಒಂದು ದಿನ ಅದೇ ಸೈಕಲ್  ಸತ್ಯಣ್ಣ ಹಾಲಿನ ಕ್ಯಾನ್  ತುಂಬಿಕೊಂಡು ರಸ್ತೆಯಲ್ಲಿ ಹೋಗುವುದು ಕಂಡೆ .ಅವರು  ಡಾ ಎಂ ಎಸ್  ಭಟ್ ಅವರ ಹಾಲಿನ ಡೈರಿಯಿಂದ ಹಾಲು ಸರಬರಾಜು ಮಾಡುವ ವೃತ್ತಿಗೆ ಸೇರಿದ್ದರು .ಬಿಸಿಲು ಮಳೆಯೆನ್ನದೆ  ದಿನದಲ್ಲಿ ಎರಡು ಹೊತ್ತು ಹಾಲು ತುಂಬಿದ ಸೈಕಲ್ ತುಳಿದು (ಮತ್ತು ದೂಡಿ )ಪ್ರಾಮಾಣಿಕ ಜೀವನ ಸಾಗಿಸುವ ಶ್ರಮ ಜೀವನ .. ದಾರಿಯಲ್ಲಿ ಕಂಡಾಗ ಒಂದು ಮುಗುಳ್ನಗು .. 

ಅವರನ್ನು ಕಂಡು ಒಂದು ಭಾವ ಚಿತ್ರ ತೆಗೆದುಕೊಳ್ಳಲು ಇಂದು ಡೈರಿಗೆ ಹೋಗಿ ಬಂದು ಬರೆಯುತ್ತಿದ್ದೇನೆ . ಕಾಯಕವೇ ಕೈಲಾಸ ಎಂದು ಬದುಕುವ ಇಂಥವರನ್ನು ಕಂಡರೆ ನನಗೆ ಪ್ರೀತಿ ಮತ್ತು ಗೌರವ .

 

ಬಿರುದು ಬಾವಲಿಗಳು

                          ಬಿರುದು ಬಾವಲಿಗಳು 


ಹಲ ವರುಷಗಳ ಹಿಂದೆ ನನಗೊಂದು ಪತ್ರ  ಬಂದಿತು .ಅದರಲ್ಲಿ " ನಿಮ್ಮ   ವಿಶೇಷ ಸಾಧನೆಯನ್ನು ಪರಿಗಣಿಸಿ  ಗೌರವ ಡಾಕ್ಟರೇಟ್  ಉಪಾಧಿ ಕೊಡಲು ನಿರ್ಧರಿಸಿದ್ದು ,ನ ಮ್ಮಿಂದ  ಗೌರವಿಸಲ್ಪಟ್ಟ  ಹಿಲ್ಲರಿ ಕ್ಲಿಂಟನ್ ,ಬಿಲ್ ಗೇಟ್ಸ್ (ಮತ್ತು ಕೆಲವು  ಪ್ರಸಿದ್ಧ ವ್ಯಕ್ತಿಗಳ ಉಲ್ಲೇಖ ) ಅಂತಹವರ ಸಾಲಿನಲ್ಲಿ ನೀವೂ ಸೇರಿದ್ದೀರಿ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ . ನಿಮ್ಮ ಬಯೋ ಡೇಟಾ ಮತ್ತು ಇತ್ತೀಚೆಗಿನ ಭಾವ ಚಿತ್ರ ಕೆಳಗಿನ ವಿಳಾಸಕ್ಕೆ  ಕಳುಹಿಸಿ ಕೊಡುವುದು ."ಎಂದು ಬರೆದಿತ್ತು .ಜತೆಗೆ ಅವರ ಹಿಂದಿನ ಘಟಿಕೋತ್ಸವದ  ಚಿತ್ರ ,ಅದರಲ್ಲಿ ಮಾಜೀ ರಾಜ್ಯಪಾಲರು ಮುಖ್ಯ ಅತಿಥಿ ಮತ್ತು ಇನ್ನಿತರ ಗಣ್ಯ ವ್ಯಕ್ತಿಗಳು . (ನನ್ನ ಬಯೋ ಡೇಟಾ ಗೊತ್ತಿಲ್ಲದವರು ನನಗೆ ಗೌರವ ಪದವಿ ನೀಡುವರು !)

ನಾನು ಒಂದು ವೇಳೆ ಉತ್ತರಿಸಿದರೆ  ನನಗೆ  ಘಟಿಕೋತ್ಸವ ವೆಚ್ಚ ವೆಂದು ಇಷ್ಟು ಮೊತ್ತ ಕಳುಹಿಸಿರಿ ಎಂದು ಬರುವುದು . ಯಾವುದಾದರೂ ಒಂದು ಮಹಾನಗರದ ಹೋಟೆಲ್ ಸಭಾಂಗಣದಲ್ಲಿ  ನನಗೆ ಗೌ ಡಾ ಕೊಡಲ್ಪಟ್ಟು ಪತ್ರಿಕೆಗಳಲ್ಲಿ ನನ್ನ ಭಾವ ಚಿತ್ರ  ಬರುವುದಲ್ಲದೆ  ನನ್ನ ಹಿತೈಷಿಗಳು ಡಾ ಎ   ಪಿ ಭಟ್ ಅವರಿಗೆ ಅಭಿನಂದನೆಗಳು ಎಂದು ಹಾಕುವರು .. ಇದು ಒಂದು ಗೌರವ ಡಾಕ್ಟರೇಟ್ ದಂಧೆ . 

ಮಾಧ್ಯಮಗಳಿಗೆ ಇದು ಒಂದು ಜಾಹಿರಾತಿನ ದಾರಿ ಯಾದುದರಿಂದ  ಅದರ ಮೂಲಕ್ಕೆ ಅವು ಹೋಗವು .ಇದೇ ರೀತಿಯ ಬಹು ವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರ ಬಿರುದು ದಾಹಿಗಳಿಗೆ ನೀಡುವವರು ಹುಟ್ಟಿಕೊಂಡಿದ್ದಾರೆ

ಇನ್ನು ನಮ್ಮ ಅಧಿಕೃತ (ಯು ಜಿ ಸಿ ಅಂಗೀಕೃತ )ವಿಶ್ವ ವಿದ್ಯಾಲಯಗಳ ಸ್ಥಿತಿ ಉತ್ತಮ ಏನೂ  ಇದ್ದಂತಿಲ್ಲ . ಡಾಕ್ಟರೇಟ್ ಪದವಿಗಳು ಮಾರಾಟವಾಗುತ್ತಿವೆ  ಮತ್ತು  ವಶೀಲಿ ಬಾಜಿ ನಡೆಯುವದು ಎಂದು ತಿಳಿದವರು ಹೇಳುವರು . ಅನಧಿಕೃತ ಪದವಿ ದಾನಿಗಳು ಕೆಲವರಾದರೂ  ಅರ್ಹರಿಗೆ ಗೌ ಡಾ ಮಾರುತ್ತಿರಬಹುದು . 

ಇನ್ನು  ಸಂಘ ಸಂಸ್ಥೆ ಮತ್ತು ಸರಕಾರೀ ಇಲಾಖೆಗಳಲ್ಲಿ  ಉತ್ತಮ ಸಾಧನೆಗಾಗಿ ಕೊಡಲ್ಪಡುವ  ಬಿರುದು ಬಾವಲಿಗಳು ಬಹುತೇಕ ಅರ್ಹರು ಮತ್ತು ಪ್ರಾಮಾಣಿಕರಿಗೆ ಸಿಗುವುದಿಲ್ಲ .ಇದು ನನ್ನ ಸುಧೀರ್ಘ ವೃತ್ತಿ ಜೀವನದ ಅನುಭವ . ಛತ್ರ ಚಾಮರ ಸೇವೆ ಮಾಡಿದವರು  ಗುರುತಿಸಲ್ಪಡುವರು . ಎಲೆಯ  ಮರೆಯ ಕಾಯಿಗಳು ಅಲ್ಲಿಯೇ ಹಣ್ಣು ಆಗುವರು . 

ಇನ್ನು ಕೆಲವು ಇಲಾಖೆಗಲ್ಲಿ ಬಿರುದು ಯಾಂತ್ರಿಕವಾಗಿ ಕೊಡಲ್ಪಡುವದು .ಇತ್ತೀಚಿಗೆ ನಿಧನರಾದ  ಕರ್ನಾಟಕದ ಮಾಜಿ ಪೊಲೀಸ್ ಮಹಾ ನಿರ್ದೇಶಕ  ಎ ಪಿ ದುರೈ ತಮ್ಮ ಆತ್ಮ ಚರಿತ್ರೆಯಲ್ಲಿ ಹಿರಿಯ ಪೋಲಿಸ್ ಅಧಿಕಾರಿಯನ್ನು ಉಲ್ಲೇಖಿಸಿ "ನಮ್ಮ ಸೇವೆಯಲ್ಲಿ ದಡಾರ ಮತ್ತು ಕೋಟ್ಲೆ (ಮೀ ಸಲ್ಸ್ ಮತ್ತು ಚಿಕನ್ ಪೋಕ್ಸ್)ಬರುವಂತೆ ಸೇವಾ ಅವಧಿಯಲ್ಲಿ ಎಲ್ಲರಿಗೂ  ಸೇವಾ ಪದಕ ಬರುವುದು "ಎಂದು ತಮಗೆ ಪದಕ ಬಂದುದ ನನ್ನು ನೆನಪಿಸಿ ಕೊಂಡಿರುವರು 

 

  


ಒಂದು ಪ್ರಯಾಣದ ನೆನಪು

                                ಒಂದು ಪ್ರಯಾಣದ ನೆನಪು

೧೯೮೨ ಇರಬೇಕು . ಯು ಪಿ ಎಸ ಸಿ ಸಂಯುಕ್ತ ವೈದ್ಯಕೀಯ ಸೇವೆ  ರಿಟನ್ ಟೆಸ್ಟ್ ಪಾಸ್  ಆಗಿ ಇಂಟರ್ವ್ಯೂ ಗೆ  ದೆಹಲಿಗೆ ಕರೆದಿದ್ದರು .ಬೆಂಗಳೂರಿನಿಂದ ಗ್ರಾಂಡ್ ಟ್ರಂಕ್ ಎಕ್ಷ ಪ್ರೆಸ್ ರೈಲಿನಲ್ಲಿ ಹೋಗುವದು .ಈ ರೈಲು  ಬೆಳಿಗ್ಗೆ ಬೆಂಗಳೂರಿನಿಂದ ಹೊರಟು  ಮದ್ಯಾಹ್ನ ಚೆನ್ನೈಗೆ ತಲುಪುವುದು .ಅಲ್ಲಿಂದ ನಾಲ್ಕು ಗಂಟೆಗಳ ತರುವಾಯ ಡೆಲ್ಲಿಯತ್ತ . ಇಷ್ಟು ದೂರ ಒಬ್ಬನೇ ಹೋಗುವುದು ಮೊದಲ ಬಾರಿಯಾದ್ದರಿಂದ ಆತಂಕ . 

ಗ್ರ್ಯಾಂಡ್ ಟ್ರಂಕ್ ಎಕ್ಷ ಪ್ರೆಸ್ ಬಹು ಉದ್ದದ ರೈಲು . ನನ್ನ ಕಂಪಾರ್ಟ್ಮೆಂಟ್ ನಲ್ಲಿ  ಕುಂದಾಪುರ ಮೂಲದ ಒಬ್ಬ ಯುವಕ ಇದ್ದರು . ಅವರು ಬೆಂಗಳೂರಿನಲ್ಲಿ ಹೆಗ್ಡೆ ಅಂಡ್ ಗೋಲೆ  ಕೈ ಗಡಿಯಾರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ಬೇರೊಂದು ಕಂಪನಿ ಕೆಲಸಕ್ಕೆ ಇಂಟರ್ವ್ಯೂ ಗೆ ಹೋಗುವವರು . ಆಗೆಲ್ಲಾ  ಸಹ ಪ್ರಯಾಣಿಕರನ್ನು ಈಗಿನಂತೆ ಸಂದೇಹಿಸುತ್ತಿರಲಿಲ್ಲ . ಊಟ ತಿಂಡಿಗಳನ್ನು ಹಂಚಿ ತಿನ್ನುತ್ತಿದ್ದರು .ಅಲ್ಲದೆ ಸಹ ಪ್ರಯಾಣಿಕರಿಗೆ ತಮ್ಮ ವಿಳಾಸ ಫೋನ್ ನಂಬರ್ ಕೊಟ್ಟು ಸಂಪರ್ಕ ಇಟ್ಟು ಕೊಳ್ಳಲು ಹೇಳುತ್ತಿದ್ದರು . ಗ್ರಾಂಡ್ ಟ್ರಂಕ್ ರೈಲಿನಲ್ಲಿ ಲೈಬ್ರರಿ ಕೂಡಾ ಇತ್ತು ,ಸಮಯ ಕಳೆಯಲು ಪುಸ್ತಕ ಎರವಲು ಕೊಡುತ್ತಿದ್ದರು .ಪ್ಯಾಂಟ್ರಿ ಕಾರ್ ಗೆ ಹೋಗಿ ನಮಗೆ ಬೇಕಾದದ್ದನ್ನು ತಿನ್ನ ಬಹುದಾಗಿತ್ತು .ಇದೆಲ್ಲಾ ನನಗೆ ಹೊಸದು.

ಆಗ ತಾನೇ  ಏಶಿಯನ್ ಗೇಮ್ಸ್ ಗಾಗಿ ಹೊಸ ಹೋಟೆಲ್ ಗಳು ಹುಟ್ಟಿ ಕೊಂಡಿದ್ದು ಟ್ರೈನ್ ನಲ್ಲಿ  ಪರಿಚಯ ಆದ  ಯುವಕ ಮತ್ತು ನಾನು  ಸೇರಿ ಹೊಸ ದಿಲ್ಲಿ  ರೈಲ್ವೆ ಸ್ಟೇಷನ್ ಬಳಿ ಒಂದು ರೂಮ್ ಪಡೆದೆವು . 

ಟಿ ಟಿ ಕೆ ಮ್ಯಾಪ್ ಹಿಡಿದು  ಸ್ಥಳಗಳ ಅನ್ವೇಷಣೆ . ಕಿಲೋಮೀಟರ್ ದೂರದಲ್ಲಿ ಕನ್ನಾಟ್ ಪ್ಲೇಸ್ ಇತ್ತು .ಅಲ್ಲಿಯ ಮದ್ರಾಸ್ ಕೆಫೆ ಯಲ್ಲಿ ಊಟ ತಿಂಡಿ .ನನ್ನ ಇಂಟರ್ವ್ಯೂ ಇದ್ದ ಧೋಲ್ಪುರ್ ಹೌಸ್ ಗೆ ಕೂಡಾ ನಡೆದೇ ಹೋದೆನು .ಯು ಪಿ ಎಸ ಸಿ  ಸಂದರ್ಶನ  ಬಹಳ  ಚೆನ್ನಾಗಿ ,ವೈಜ್ಞಾನಿಕ ರೀತಿಯಲ್ಲಿ  ನಡೆಸುತ್ತಾರೆ .ಅದರಲ್ಲಿ ಸಾಮಾನ್ಯ ಮತ್ತು  ವಿಷಯ ತಜ್ಞರು ಇರುತ್ತಾರೆ . ಉದ್ಯೋಗಾರ್ಥಿಯನ್ನು  ಕುಶಲ ಸಂಭಾಷಣೆಗಳಿಂದ  ಮಾತನಾಡಿಸಿ ಪರಿಚಿತ ವಾತಾವರಣ ಸೃಷ್ಟಿ ಮಾಡಿ ಆಮೇಲೆ  ಅವನ ವಿಷಯದ ಮೇಲೆ ಒಳ್ಳೆಯ ಪ್ರಶ್ನೆಗಳನ್ನು ಕೇಳಿ ಅವನಲ್ಲಿ ಏನು ಜ್ಞಾನ ಇದೆ ಎಂದು ಅಳೆಯುವರು . ನಮಗೇನು ತಿಳಿದಿಲ್ಲಾ ಎಂಬುದನ್ನು ತೋರಿಸುವ ಮನೋಭಾವ ಇಲ್ಲ . ನಾನು ಜೀವ ಮಾನದಲ್ಲಿ ಎದುರಿಸಿದ ಅತ್ಯುತ್ತಮ ಸಂದರ್ಶನ ಎನ್ನ ಬಹುದು . 

ನನ್ನ ಮಿತ್ರರೂ ಅವರ ಸಂದರ್ಶನ ಮುಗಿಸಿ ,ನಾವು ಜತೆಗೇ ವಾಪಸ್ಸು ಆದೆವು . 

ಇದನ್ನು ಬರೆಯುವ ಉದ್ದೇಶ ಕಾಲ ಹೇಗೆ ಬದಲಾಗಿದೆ . ಈಗ ಸಹ ಪ್ರಯಾಣಿಕರಲ್ಲಿ  ಮಾತನಾಡಲು ಅಂಜುತ್ತೇವೆ . ಅವರು ಕೊಟ್ಟುದನ್ನು ತಿನ್ನುವ ಅಥವಾ ಕುಡಿಯುವ ಮಾತೇ  ಇಲ್ಲ .ಅಪನಂಬಿಕೆ ,ಅನಾದರ .

ಮಂಗಳವಾರ, ಏಪ್ರಿಲ್ 6, 2021

ಹಿರಿಯ ವೈದ್ಯ ಪಥ ನಿರೂಪಕ ಡಾ ವಿಟ್ಟಲ್ ಜಿ ಎನ್



 ಮೇಲಿನ  ಚಿತ್ರದಲ್ಲಿ ಕಾಣುವದು ಪುತ್ತೂರಿನ ಹಿರಿಯ ವೈದ್ಯರಾದ ಡಾ ಜಿ ಏನ್ ವಿಠ್ಠಲ್ . ಪಂಜದ ಸಮೀಪ ಕುಗ್ರಾಮ ನಾಯ್ಕೆರೆ ಯಲ್ಲಿ ೧೯೪೫ ರಲ್ಲಿ ಜನಿಸಿ ಪಂಜ ,ಪುತ್ತೂರು ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಕೆಲ ಕಾಲ ಪ್ರಸಿದ್ಧ ಪುತ್ತೂರು ಬೋರ್ಡ್ ಹೈ ಸ್ಕೂಲ್ ನಲ್ಲಿ ಅಧ್ಯಾಪನ ಮಾಡಿ  ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ  ಪೂರೈಸಿ  ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಿಷನ್ ಆಸ್ಪತ್ರೆ ಯಲ್ಲಿ ಸೇವೆ .ಆಮೇಲೆ ಅಲ್ಲಿಯೇ ಖಾಸಗಿ ಕ್ಲಿನಿಕ್ ಹಾಕಿ ಪ್ರಾಕ್ಟೀಸ್ .ಕೆಲ ಸಮಯ ಮಾನಾ  ರಾಯಪುರ ದಲ್ಲಿ ಸ್ಥಾಪಿತ  ಬಾಂಗ್ಲಾದೇಶಿ ನಿರಾಶ್ರಿತರ ಶಿಬಿರದಲ್ಲಿ ವೈದ್ಯಕೀಯ ಸೇವೆ . ೧೯೭೬ ರಲ್ಲಿ ಇರಾನ  ದೇಶಕ್ಕೆ ತೆರಳಿ ೧೯೮೯ ರ ವರೆಗೆ ಅಲ್ಲಿಯ ಸರಕಾರಿ ವೈದ್ಯಕೀಯ ಸೇವೆಯಲ್ಲಿ . ಇರಾನಿನ ಮಂಜಿಲ್ ಗಿಲಾನ್ ನಲ್ಲಿ  ಇರಾಕೀ ಯುದ್ಧ ಕೈದಿಗಳ ಅರೋಗ್ಯ ದೇಖೆ ರೇಖೆ .. 

ಆಸ್ಟ್ರಿಯಾ ದೇಶದ ವಿಯೆನ್ನಾ ದಲ್ಲಿ ಶಿಶು ರೋಗಗಳ ಬಗ್ಗೆ ವಿಶೇಷ ತರಬೇತಿ ಪಡೆದಿರುವ ಇವರು ಪುತ್ತೂರಿನ ಪ್ರಥಮ  ಅಲ್ಟ್ರಾ ಸೌಂಡ್ ಸ್ಕ್ಯಾನ್ ಕೇಂದ್ರ  ಅಪೊಲೊ ಸ್ಕ್ಯಾನ್  ಸೆಂಟರ್ ಸ್ಥಾಪಿಸಿ  ಈ ಊರಿನಲ್ಲಿ  ರೋಗ ನಿಧಾನದ  ಹೊಸ ವಿಧಾನ ಪರಿಚಯಿಸಿ  ಅದಕ್ಕೋಸ್ಕರ ಮಂಗಳೂರಿಗೆ ಹೋಗುವ ಅವಶ್ಯ ಕತೆ ನಿವಾರಿಸಿದರು . 

ಹಳ್ಳಿಯ ರೋಗಿಗಳಿಗೆ ಸದಾ  ಸಾಂತ್ವನ ಸಹಾಯ ಹಸ್ತ

ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ಪುತ್ತೂರು ಸಿಟಿ ಆಸ್ಪತ್ರೆಯ ಸ್ಥಾಪಕ ಸದಸ್ಯರು ಆಗಿರುವ ಇವರು ಸದ್ಯ ವೃದ್ದಾಪ್ಯ ಮತ್ತು ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು , ಆಗಾಗ ಅವರಲ್ಲಿ ತೆರಳಿ ಗೌರವ ಸಲ್ಲಿಸಿ ಅರೋಗ್ಯ ವಿಚಾರಣೆ ಮಾಡುವೆನು

 

ಭಾನುವಾರ, ಏಪ್ರಿಲ್ 4, 2021

ವಿಟ್ಲದ ಬಲ್ಲಾಳರು ಮತ್ತು ಪುತ್ತೂರಿನ ಸಾಹೇಬರು

     ವಿಟ್ಲದ ಬಲ್ಲಾಳರು ಮತ್ತು ಪುತ್ತೂರಿನ ಸಾಹೇಬರು 

ವಿಟ್ಲ ಬಸ್ ಸ್ಟಾಂಡ್ ನಲ್ಲಿ  ಬಲ್ಲಾಳ (ಅವರ ಹೆಸರು ತಿಳಿಯದು )ರೆಂಬವರು ಇದ್ದರು.ಅವರಿಗೆ ಒಂದು ಕಾಲು ಸ್ವಲ್ಪ ಊನ . ಕಾಲು ಎಳೆಯುತ್ತಾ ನಡೆಯುತ್ತಿದ್ದರು . ಮುಂಜಾನೆ  ನಿಲ್ದಾಣ ಪರಿಸರ ದಲ್ಲಿ   ವೃತ್ತ ಪತ್ರಿಕೆ ಮಾರುವರು .ನವ ಭಾರತ (ಮತ್ತೆ ಉದಯವಾಣಿ ),ಪ್ರಜಾವಾಣಿ ,ಸಂಯುಕ್ತ ಕರ್ನಾಟಕ ,ಡೆಕ್ಕನ್ ಹೆರಾಲ್ಡ್ ಎಂದು ರಾಗ ಬದ್ದವಾಗಿ ಕೂಗಿ ಕೊಂಡು ಬರುವರು . ಹಳ್ಳಿಯವರು ಬಂದರೆ ನವಭಾರತ ಅಥವಾ ಉದಯವಾಣಿ ಮುಂದೆ ಬರುವುದು .ಪೇಟೆ ಯ  ಪ್ಯಾಂಟ್ ಷರ್ಟ್ ನವರು ಬಂದರೆ ಇಂಗ್ಲಿಷ್ ಪತ್ರಿಕೆ ಚಾಚುವರು.

ಹನ್ನೊಂದು ಗಂಟೆ ಸುಮಾರಿಗೆ  ಕಿತ್ತಳೆ ಹಣ್ಣು ,ಮುಸುಂಬಿ ವ್ಯಾಪಾರ . ಲಾಟರೀ ಟಿಕೆಟ್ ಮಾರಾಟ ಕೂಡ ಮಾಡುವರು .

ಸುತ್ತು ಮುತ್ತಲಿನ ಬಹಳಷ್ಟು ಹಳ್ಳಿಯವರು ಅವರಿಗೆ ಪರಿಚಿತ . ನನ್ನನ್ನು ಕಂಡೊಡನೆ ಮಂಜೇಶ್ವರ ಬಸ್ ಬರೆಕ್ಕಷ್ಟೆ  ಅಣ್ಣಾ ಎಂದು ಹವ್ಯಕ ಭಾಷೆಯಲ್ಲಿ ಸೂಚನೆ ಕೊಡುವರು .ಇನ್ನು ಬಹಳ ಮಂದಿಗೆ ಅವರು ಸಂದೇಶ ವಾಹಕರು . ಈರ್ನ ಅಮ್ಮೇರು ನಾಯ್ಕೇರ್ನ ಅಂಗಡಿಗು ಪೋತೇರು.ಈರು ಮೂಳು ಕಾಪೋಡಿಗೆ ಎಂದು ಮಂಗಳೂರಿನಿಂದ ಬಂದಿಳಿದ  ಹುಡುಗನಿಗೆ ತಿಳಿಸುವರು .

ಅವರ ಸದ್ದಿಲ್ಲದ  ಜನ ಸೇವೆ ಯಾವಾಗಲೂ ಕಣ್ಮುಂದೆ ಬರುವುದು .

  ಇನ್ನೊಬ್ಬರು  ಪುತ್ತೂರಿನ ಹಳೇ ಬಸ್ ಸ್ಟಾಂಡ್ ನಲ್ಲಿ  ಹಣ್ಣು ,ಪೇಪರ್ ಮಾರುತ್ತಿದ್ದ ಸಾಹೇಬರು . ಮೊನ್ನೆ ಆಸ್ಪತ್ರೆಗೆ ಹೋಗುವಾಗ ಅರುಣಾ ಥಿಯೇಟರ್ ಬಳಿ ಅವರನ್ನು ಹೋಲುವ ಒಬ್ಬರು ವೃದ್ಧರನ್ನು ಕಂಡೆ . ಆದರೆ ವಾಹನ ದಟ್ಟಣೆ ಇದ್ದುದರಿಂದ ಅವರನ್ನು ವಿಚಾರಿಸಲು ಆಗಲಿಲ್ಲ . ಅವರೂ ನಮ್ಮಂತಹ ಹಳ್ಳಿಯವರಿಗೆ  ಮಾಹಿತಿ  ಕೊಡುವ  ಉಪಕಾರಿ . ದ್ರಾಕ್ಷಿ ದ್ರಾಕ್ಷಿ ,ಕಿತ್ತಳೆ ಹಣ್ಣು ಎಂದು ಬಸ್ ಸ್ಟಾಂಡ್ ಸುತ್ತುತ್ತ , ಆಗೊಮ್ಮೆ ಈಗೊಮ್ಮೆ ತಮ್ಮ ಸರಂಜಾಮು ಇದ್ದ ಜಾಗಕ್ಕೆ ಬರುತ್ತಾ ಇರುತ್ತಿದ್ದರು . ಹಳ್ಳಿಯವರು  ಉಬಾರುಗು ಬಸ್ ಏಪಣ್ಣ ,ಪಾಣಾಜೆ ಬಸ್ ಪೊಂಡಾ ಎಂದು ಅವರನ್ನು ವಿಚಾರಿಸುವರು .ಎಲ್ಲರಿಗೂ ಬೇಸರಿಸದೇ ಉತ್ತರಿಸುವರು .                                 ಹಳೇ ಬಸ್ ಸ್ಟಾಂಡ್ ,ಹೊಳ್ಳರ ಪೇಪರ್ ಅಂಗಡಿ ,ಎದುರಿನ ಹೂವಿನ ಮಾರುಕಟ್ಟೆ ,ಅಲ್ಲಿ ಏಕ ಕಾಲಕ್ಕೆ ಹೂ ಕಟ್ಟುತ್ತಲೂ ,ಮಾರುತ್ತಲೂ ಇದ್ದ (ಬಹುತೇಕ ಕ್ರಿಶ್ಚಿಯನ್ )ಸಹೋದರಿಯರು .ಉಪ್ಪಳದಿಂದ ಬುಟ್ಟಿಯಲ್ಲಿ ಮೀನು ತಂದು ಮಾರುತ್ತಿದ್ದ ಮತ್ಸ್ಯ ಗಂಧಿಯರು ,ಪಕ್ಕದಲ್ಲಿ ನಿಲ್ಲಿಸಿದ   ಬಡೆಕ್ಕಿಲ ಶಿವರಾಮ ಭಟ್ ಡಾಕ್ಟರ ಜೀಪ್ ಎಲ್ಲಾ ಈ ಸಾಹೇಬರ ನೆನಪಿನ ಜತೆ ಸಾಲಾಗಿ ಬರುತ್ತಿದೆ .