ಬೆಂಬಲಿಗರು

ಶುಕ್ರವಾರ, ಜುಲೈ 15, 2022

ರೇಷನ್ ಅಂಗಡಿ

 ಕರೋಪಾಡಿ ಕನ್ಯಾನದಿಂದ ಪಶ್ಚಿಮಕ್ಕೆ ಕೇರಳಕ್ಕೆ ತಾಗಿ ಇರುವ ಗ್ರಾಮ.ಮಿತ್ತನಡ್ಕ ಇದರ ಕೇಂದ್ರ ಸ್ಥಾನ . ಕರೋಪಾಡಿ ಯಲ್ಲಿ ಕೃಷಿಕರ ಸಹಕಾರಿ ಸಂಘ ಸ್ಥಾಪಿತವಾಗಿ ಇದ್ದು ಕನ್ಯಾನದಲ್ಲಿ  ಒಂದು ರೇಷನ್ ಷಾಪ್ ನಡೆಸುತ್ತಿದ್ದರು . ಕನ್ಯಾನ ಗ್ರಾಮದ ಕೃಷಿಕರೂ ಇದೇ ಸಂಘವನ್ನು ಅವಲಂಬಿಸಿ ಇದ್ದರು.(ಮುಖ್ಯವಾಗಿ ಸಾಲ ಕ್ಕೆ ).ಪಾದೆಕಲ್ ನ ಶ್ರೀ ಸಿ ಎಚ್ ಶಂಕರ ನಾರಾಯಣ ಭಟ್ ಎಂಬುವರು ಈ ಸೊಸೈಟಿ ಯ ಅಧ್ಯಕ್ಷರಾಗಿ ಇದ್ದರು ,


                         ಕನ್ಯಾನ ದಲ್ಲಿ  ಮುಖ್ಯ ರಸ್ತೆಯ  ಡಿ ಕೆ ಶೇಕಬ್ಬ ನವರ ಜೀನಸು ಅಂಗಡಿ ಪಕ್ಕ ರೇಷನ್ ಅಂಗಡಿ .ಇಲ್ಲಿ  ಪದ್ಮನಾಭ ಭಟ್ ಮತ್ತು ಶಂಕರ ಭಟ್ ಎಂಬುವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದು , ಡಾ ಮಹಾದೇವ ಶಾಸ್ತ್ರಿ ಅವರ ಕಾಂಪೌಂಡರ್ ಆಗಿಯೂ ಇದ್ದ ತಿಮ್ಮಪ್ಪ ಶೆಟ್ಟರು ತೂಕ ಮಾಡಿ ಕೊಡುವ ಅಸಿಸ್ಟೆಂಟ್ ಆಗಿದ್ದರು .ಕನ್ಯಾನ ಆಗ ಬೆಲ್ಟ್ ಏರಿಯಾ ದಲ್ಲಿ ಇದ್ದುದರಿಂದ  ಅಕ್ಕಿ ,ಅವಲಕ್ಕಿ ,ಸಕ್ಕರೆ ,ಚಿಮಿಣಿ ಎಣ್ಣೆ ಇತ್ಯಾದಿ ಗಳನ್ನು ರೇಷನ್ ಅಂಗಡಿಯಲ್ಲಿಯೇ  ಖರೀದಿಸ ಬೇಕಿತ್ತು .ಈಗಿನಂತೆ ನಿಯತವಾದ ಸರಬರಾಜು ಇರಲಿಲ್ಲ . ಪೇಟೆಗೆ ಹೋಗಿ ಬಂದವರು ಇನಿ ಅರಿ ಬತ್ತುದುಂಡು ,ಇನೀ ಚಿಮ್ಮಿಣಿ ದ ಎಣ್ಣೆ ಬತ್ತುದುಂಡಿಗೆ ಇತ್ಯಾದಿ ಸುದ್ದಿ ತರುವರು.ನಾವು ಶಾಲೆಯಿಂದ ಮರಳುವಾಗ 'ಬಾಲೆ, ಅರಿ ಬಜಿಲು ಬತ್ತುದುಂಡಾ' ಎಂದು ವಿಚಾರಿಸುವರು . ಹೀಗೆ ತಿಳಿದುಕೊಂಡು ಅಂಗಡಿಗೆ ಹೋಗುವುದು .ಕೆಲವೊಮ್ಮೆ ನಾವು ಹೋಗುವಾಗ ಖಾಲಿ . ನೆನೆಸಿದರೆ ಆಶ್ಚರ್ಯ ಆಗುತ್ತದೆ . ಮೊನ್ನೆ ಮೊನ್ನೆಯ ವರೆಗೆ  ನಾವು ರೇಷನ್ ಅಕ್ಕಿ ,ಸಕ್ಕರೆ ,ಗೋಧಿ ,ಎಣ್ಣೆ ಇತ್ಯಾದಿ ಗಳ  ಮೇಲೆ ಎಷ್ಟು ಅವಲಂಬಿಸಿ ಇದ್ದೆವು .ನಾನು ಸರ್ವೀಸ್ ನಲ್ಲಿ ಇದ್ದಾಗ  ವರ್ಗವಾದ ಸಮಯ ರೇಷನ್ ಕಾರ್ಡ್ ಸರೆಂಡರ್ ಮಾಡುವುದು ,ಹೊಸ ಊರಿನಲ್ಲಿ ಅದನ್ನು ಪುನಃ ಪಡೆದು ರೇಷನ್ ಅಂಗಡಿ ಹುಡುಕುವುದು ಮುಖ್ಯ ಕೆಲಸ ಆಗಿತ್ತು ,

 ಕೆಲವೊಮ್ಮೆ ಅಕ್ಕಿ ಕಡಿಮೆ ಬಂದಾಗ ಜೋಳ ಕೊಡುತ್ತಿದ್ದು ಅದನ್ನು ಹೇಗೆ ತಿನ್ನುವುದು ಎಂದು ತಿಳಿಯದೆ ಜೋಳದ ಗಂಜಿ ,ಅಡ್ಯೆ ಇತ್ಯಾದಿ  ಪ್ರಯೋಗ ಮಾಡಿ ಮುಖಃ ಸಿಂಡರಿಸಿ ಕೊಂಡು ತಿನ್ನುತ್ತಿದ್ದೆವು . ರೇಷನ್ ಅಂಗಡಿಯಲ್ಲಿ  ಅಪರೂಪಕ್ಕೆ ಕೋರಾ ಬಟ್ಟೆ ಸಿಗುತ್ತಿದ್ದು ಅದನ್ನೂ ಮುಗಿ ಬಿದ್ದು ಖರೀದಿಸುತ್ತಿದ್ದರು . 

ಧಾನ್ಯಗಳಲ್ಲಿ ಕಲ್ಲು ಮಿಶ್ರಣ ಮಾಡುತ್ತಿದ್ದರೋ ಕಲ್ಲಿನ ಹರಳುಗಳ ಜತೆ ಅಕ್ಕಿ ಸೇರಿಸುತ್ತಿದ್ದರೋ ಎಂದು ಗೊಂದಲ ಆಗುವಂತೆ ಕಲ ಬೆರಕೆ ಸಾಮಾನ್ಯ ಆಗಿತ್ತು .ಎಷ್ಟು ಹೆಕ್ಕಿದರೂ ಉಳಿಯುತ್ತಿತ್ತು .ನಾವು ಕೇಜಿ ಬಟ್ಟಲಿನಲ್ಲಿ ಗಂಜಿ ಹಾಕಿ ಕೈಯಲ್ಲಿ ಜಾಲಾಡುವಾಗ ಕರ ಕರ ಶಬ್ದ ವಾದರೆ ಕಲ್ಲು ಹೆಕ್ಕಿ ಇಡುವುದು .

ಇದನ್ನೆಲ್ಲ ನೆನೆಸುವಾಗ ಆಗ ಎಷ್ಟು ಬಡತನ ಇತ್ತು ಎಂದು ನೀವು ಆಲೋಚಿಸುತ್ತಿರ ಬಹುದು .ಹೌದು ,ಆದರೆ ಆಗಿನ  ಬಡತನದಲ್ಲಿಯೂ ಒಂದು ಸುಖ ಶಾಂತಿ ,ಸುರಕ್ಷತೆ ಅಡಗಿತ್ತು .ಈಗಿನ ಸಂಪತ್ತಿನ ಒಳಗೂ ಹೊರಗೂ ಅಶಾಂತಿ ಅತೃಪ್ತಿ ಅಸುರಕ್ಷಿತತೆ ಹಾಸು ಹೊಕ್ಕಾಗಿ ಇರುವಂತೆ .

ಮಂಗಳವಾರ, ಜುಲೈ 12, 2022

ಡಾ ಸುಬ್ರಹ್ಮಣ್ಯ ಭಟ್

 


ಕನ್ಯಾನ  ,ಕರೋಪಾಡಿ ಮತ್ತು ಸನಿಹದ  ಕೇರಳಕ್ಕೆ ಸೇರಿದ ಬಾಯಾರು ಆನೇಕಲ್ ವರೆಗಿನ ವಿಸ್ತಾರವಾದ ಪ್ರದೇಶದ  ಜನ ಔಷದೋಪಚಾರ ಕ್ಕಾಗಿ  ಕನ್ಯಾನವನ್ನು ಅವಲಂಬಿಸಿದ್ದರು .ಕನ್ಯಾನದಲ್ಲಿ ಇದ್ದವರು ಒಬ್ಬರೇ ಡಾಕ್ಟರ್ ಡಾ ಮಹಾದೇವ ಶಾಸ್ತ್ರಿಗಳು . ಆಮೇಲೆ ಕೋಡ್ಲ ವೆಂಕಟ್ರಮಣ ಭಟ್ ಎಂಬ ಆಯುರ್ವೇದ ವೈದ್ಯರು ಬಂದರು . ಎಂ ಬಿ ಬಿ ಎಸ್ ಪದವಿ ಪಡೆದು ಇಲ್ಲಿ ಸೇವೆ ಸಲ್ಲಿಸಲು ಬಂದ ಮೊದಲ ವೈದ್ಯ ಡಾ ಸುಬ್ರಹ್ಮಣ್ಯ ಭಟ್ (1979).ಅವರು ,ಮೂಲತಃ ಬಂಟ್ವಾಳ ಸಮೀಪ ಪ್ರಸಿದ್ದ ತೀರ್ಥ ಕ್ಷೇತ್ರ  ಕಾರಿಂಜದವರು .ಪ್ರತಿಭಾವಂತರಾದ ಇವರು ಬಳ್ಳಾರಿ ಸರಕಾರಿ ವೈದ್ಯಕೀಯ ಕಾಲೇಜ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು . ಕನ್ಯಾನ ಕೆಳಗಿನ ಪೇಟೆ ವಿಟ್ಲ ರಸ್ತೆಯಲ್ಲಿ ಇವರ ಕ್ಲಿನಿಕ್ ಇತ್ತು ,ಮುಂದೆ ಅದನ್ನು ಮಂಜೇಶ್ವರ ರೋಡ್ ಗೆ ಸ್ಥಳಾಂತರಿಸಿದರು . ಪೇಟೆಯ ದೊಡ್ಡ ಆಸ್ಪತ್ರೆಗೆ ಹೋಗ ಬೇಕಿದ್ದ ಅನೇಕ ರೋಗಿಗಳನ್ನು ತಾವೇ ಚಿಕಿತ್ಸೆ ಮಾಡಿ ,ಹಳ್ಳಿಯ ಜನರ ಕಷ್ಟ ಹಗುರವಾಗುವಂತೆ ಮಾಡಿದರು . ಆಗಿನ ಹಳ್ಳಿ ಪ್ರಾಕ್ಟೀಸ್ ನಲ್ಲಿ ಇವರು ರೋಗಿಯ ಭೇಟಿಗಾಗಿ ಸವೆದ ಕಟ್ಟ ಪ್ಪುಣಿ ಗಳೆಷ್ಟೋ ?ಹಾರಿದ ತಡಮ್ಮೆಗಳೆಷ್ಟೋ ?ನಡೆದ ಒರುಂಕು ಗಳೆಷ್ಟೋ ? ಜಾತಿ ,ಆರ್ಥಿಕ ಸ್ಥಿತಿ ನೋಡದೆ ಸಲ್ಲಿಸಿದ ಸೇವೆ .ಮದುವೆಯಾದ ಮೇಲೆ ಪುತ್ತೂರಿನಲ್ಲಿ ಮನೆ ಮಾಡಿ  ಬಸ್ ,ಮೋಟಾರ್ ಸೈಕಲ್ ನಲ್ಲಿ  ಕನ್ಯಾನಕ್ಕೆ .ಕೆಲ ವರ್ಷಗಳ ಹಿಂದೆ ಸೂಕ್ಷ್ಮಣು ಶಾಸ್ತ್ರದಲ್ಲಿ ಎಂ ಡಿ ಮಾಡಿ  ವೈದ್ಯಕೀಯ ಕಾಲೇಜ್ ನಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸುತ್ತಿರುವರು .ಆದರೂ ಕನ್ಯಾನದ ಮೇಲಿನ ಪ್ರೀತಿಯಿಂದ ವಾರಕ್ಕೊಮ್ಮೆ ಭಾನುವಾರ ಅಲ್ಲಿಗೆ ತಪ್ಪದೇ ಭೇಟಿ ನೀಡಿ ವೈದ್ಯಕೀಯ ಸಲಹೆ ನೀಡುತ್ತಲಿರುವರು .

ಡಾ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ಪ್ರಸಿದ್ದ ಸ್ತ್ರೀ ರೋಗ ಮತ್ತು ಪ್ರಸವ ಶಾಸ್ತ್ರ ತಜ್ನೆ ಡಾ ಪ್ರತಿಭಾ ಭಟ್ . ಹೆಸರಿಗೆ ತಕ್ಕಂತೆ ಪ್ರತಿಭಾ ವಂತರು . ನನ್ನ ಹಾಗೆ ಅವರೂ ಕೆ ಎಂ ಸಿ ಹುಬ್ಬಳ್ಳಿ ವಿದ್ಯಾರ್ಥಿನಿ .ವೈದ್ಯಕೀಯ ಕ್ಷೇತ್ರದ ದಂತ ಕತೆ ಡಾ ಎಸ್ ಎನ್ ಕೌಲ್ ಗುಡ್ ಅವರ ಶಿಷ್ಯೆ .(ನಾನೂ ಕೌಲ್ ಗುಡ್ ಶಿಷ್ಯ ) . ಪುತ್ತೂರಿನ  ಗಿರಿಜಾ ಕ್ಲಿನಿಕ್ ನಲ್ಲಿ ಆರಂಭಿಸಿ ಪ್ರಸ್ತುತ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ  ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ . ಯಥಾ ಗುರು ತಥಾ ಶಿಷ್ಯ ಎಂಬಂತೆ ಕೌಲ್ಗುಡ್ ಅವರ  ಸರಳತೆ ಮತ್ತು  ವೃತ್ತಿ ಪ್ರಾವೀಣ್ಯತೆ ಇವರನ್ನು  ಜನಪ್ರಿಯರನ್ನಾಗಿ ಮಾಡಿದೆ 

ಸೋಮವಾರ, ಜುಲೈ 11, 2022

ಕನ್ಯಾನದ ಕೆಲವು ನೆನಪುಗಳು

ವಿಟ್ಲ ಕಡೆಯಿಂದ  ಕನ್ಯಾನ ಕ್ಕೆ ಬರುತ್ತಿದ್ದಂತೆ ಬಲಕ್ಕೆ ಪಂಜಾಜೆ ,ಎಡಕ್ಕೆ ಅರ್ಪಿಣಿ . ಪೇಟೆ ಎಂದು ಸಾರಲು ಕೆಲವು ಕಟ್ಟಡಗಳು . ಬಲ ಬದಿಗೆ ಅಧಿಕ . ಕೇಕಣಾಜೆ ಶೆಟ್ಟರ ಗದ್ದೆ ,ತೋಟ ,ಡ್ರೈವರ್ ಗೋಪಾಲ ನ ಮನೆ , ಬಾಡಿಗೆ ಸಾಲು  ಮನೆಗಳು .ಇವುಗಳಲ್ಲಿ ಒಂದರಲ್ಲಿ ನಮ್ಮ ಜನಾರ್ಧನ ಶೆಟ್ಟಿ ಮೇಷ್ಟ್ರ ಕುಟುಂಬ ವಾಸ . ಮಾಸ್ಟ್ರು ಸಜ್ಜನಿಕೆಯ ಮೂರ್ತಿವೆತ್ತ ವರು . ಸುಶ್ರ್ಯಾವ್ಯ ವಾಗಿ ಹಾಡುತ್ತಿದ್ದರು .ಅವರ ಮನೆಯಲ್ಲಿ ನಿತ್ಯ ಭಜನೆ ನಡೆಯುತ್ತಿತ್ತು . 

ನಂತರದ ಮನೆಯಲ್ಲಿ  ಮಿಡ್ ವೈಫ್ ಅವರ ಕುಟುಂಬ . ಶಾಲೆ ಮಕ್ಕಳಿಗೆ ಚುಚ್ಚು ಮದ್ದು ಕೊಡಲು ಬರುವರು .ಹಳ್ಳಿಯಲ್ಲಿ ಯಾರಿಗಾದರೂ ಹೆರಿಗೆ ನೋವು ಬಂದರೆ ಅಲ್ಲಿಗೆ ಧಾವಿಸುವರು . ನನಗೆ  ಜ್ಞಾಪಕ ಇರುವಂತೆ ಶಾಂಭವಿ ಅಕ್ಕ ಎಂಬವರು ಇದ್ದರು . ನಮ್ಮ ಕೂಡು ಕುಟುಂಬದಲ್ಲಿ ವರ್ಷಕ್ಕೆ ಸರಾಸರಿ ಒಂದು ಜನನ ಇರುತ್ತಿದ್ದು ಅವರು ನಮಗೆ ಆಪತ್ಭಾಂಧವರು . ಎಷ್ಟೋ ಬಾರಿ ತಾವು ಹೋದ ಮನೆಗಳಲ್ಲೇ ತಂಗಿ ಹೆರಿಗೆ ಆದ ಮೇಲೆಯೇ ವಾಪಾಸು ಆಗುವರು . 

ಅದು ಬಿಟ್ಟರೆ  ಡಾ ಬಿ ಕೆ ಎಸ್ ಭಟ್ ಅವರ ಶಾಪ್ . ಇವರು ಕೇರಳ ಗಡಿಗೆ ತಾಗಿ ಇರುವ ಬೇತದವರು . ಕಾಂಗ್ರೆಸ್ ಪಕ್ಷದ ನಾಯಕರು . ತಾಲೂಕು ,ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿದ್ದರು . 

ಪಶ್ಚಿಮಕ್ಕೆ ತಾಗಿ ಇರುವ ಕಟ್ಟಡದಲ್ಲಿ ಕನ್ಯಾನದ ಮೊದಲ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಆರಂಭವಾಯಿತು .ಊರಿಗೆಲ್ಲಾ ಇದು ದೊಡ್ಡ ಸಂಭವ . ಅಲ್ಲಿ ಉದ್ಯೋಗಿಯಾಗಿ ಬಂದ ಉಡುಪಿಯ ಮಧ್ಯಸ್ಥ ಎಂಬ ಸ್ಪುರ ದ್ರೂಪಿ ತರುಣ ಒಬ್ಬರು ಇದ್ದರು .ನಗು ಮುಖ .ಹಳ್ಳಿಯವರಿಗೆಲ್ಲಾ  ಸದಾ ಸಹಾಯ ಹಸ್ತ ;ಚಲಂ ತುಂಬುಬುವುದು ,ಚೆಕ್ ಬರೆಯುವುದು ಎಲ್ಲಾ ಅವರೇ ಮಾಡುವುದು .ಆಗಿನ್ನೂ ಬ್ಯಾಂಕ್ ರಾಷ್ಟ್ರೀಕರಣ ಆಗಿರಲಿಲ್ಲ . 

ಬ್ಯಾಂಕಿನ ಪಕ್ಕದಲ್ಲಿ ಭಾರತ ಸೇವಾಶ್ರಮ ದವರ ಒಂದು ಕೋಣೆ ಇದ್ದದ್ದು ನೆನಪು . ಅಲ್ಲಿ ಅಗರಬತ್ತಿ ತಯಾರು ಮಾಡುತ್ತಿದ್ದರು .ಮುಂದೆ ಇದೇ ಜಾಗದಲ್ಲಿ ಡಾ ಸುಬ್ರಹ್ಮಣ್ಯ ಭಟ್  (ಕನ್ಯಾನದ ಮೊದಲ ಎಂ ಬಿ ಬಿ ಎಸ ಡಾಕ್ಟರ್ )ಹಲವು ವರ್ಷ ತಮ್ಮ ಕ್ಲಿನಿಕ್ ಮೂಲಕ ಜನ ಸೇವೆ ಮಾಡಿದರು . 

ಇನ್ನು ಅರ್ಪಿಣಿ ಬದಿಗೆ ಬಂದರೆ ಅಲ್ಲಿ ಒಂದು ಸಾಯ್ಬರ ಅಂಗಡಿ . ಸುತ್ತ ಮುತ್ತ ಬೇಸಾಯದ ಗದ್ದೆಗಳು . ಇಲ್ಲಿಯೇ ಭಾರತ ಸೇವಾಶ್ರಮ ಆರಂಭವಾಗಿ ಇಂದು ಒಳ್ಳೆಯ ಹೆಸರು ಪಡೆದಿದೆ . ಸೇವಾಶ್ರಮವನ್ನು ೧೯೬೪ ರಲ್ಲಿ  ಮೂಲತಃ ಪೂರ್ವ ಬಂಗಾಳದವರಾದ ,ಗಣಿ ಇಲಾಖೆಯಲ್ಲಿ ಉದ್ಯೋಗಿಯಾಗಿ ಇದ್ದ  ದೇವೇಂದ್ರನಾಥ ಭಟ್ಟಾಚಾರ್ಯ ಎಂಬ ಮಹಾತ್ಮರು ಸ್ಥಾಪಿಸಿದರು .ಅವರಿಗೆ ಉದ್ದನೆಯ ಗಡ್ಡ ಇದ್ದು ರವೀಂದ್ರನಾಥ ಟಾಗೋರ್ ಅವರಂತೆ ಕಾಣುತ್ತಿದ್ದರು . ಊರವರು ಅವರನ್ನು ಭಟ್ಟಾಚಾರಿ ಎಂದು ಹೃಸ್ವ ನಾಮದಿಂದ ಕರೆಯುತ್ತಿದ್ದರು . ಅವರು ಊರ ಪರವೂರ ದಾನಿಗಳನ್ನು ಬೇಡಿ ಈ ಸಂಸ್ಥೆ ಆರಂಭಿಸಿದರು . ಮೊದಲಿಗೆ ಅದು ಅನಾಥಾಶ್ರಮ ಆಗಿತ್ತು . ನನ್ನ ತರಗತಿಯಲ್ಲಿ ಕೃಷ್ಣ ಪುರುಷ ಎಂಬ ಹುಡುಗ ಅಲ್ಲಿಂದ ಬರುತ್ತಿದ್ದು ,ನಮ್ಮ ಕಬಡಿ ಟೀಮ್ ನ ನಾಯಕ ಆಗಿದ್ದನು . ಅದುವರೆಗೆ ಬೀಡಿ ಕಟ್ಟುವ ಗೃಹ ಉದ್ಯಮ ಮಾತ್ರ ಕಂಡಿದ್ದ ನಮಗೆ ಆಗರ ಬತ್ತಿ ಸುತ್ತುವ ಹೊಸ ವೃತ್ತಿ ತೋರಿದವರು ಶ್ರೀ ಭಟ್ಟಾಚಾರ್ಯರು . ಅವರು ವಾರಕ್ಕೊಂಮ್ಮೆ ಮುಂಜಾನೆ ರಾಂಪಣ್ಣ ನ ಬಸ್ಸಿನಲ್ಲಿ ಮಂಗಳೂರಿಗೆ ಅದನ್ನು ಸಾಗಿಸಿ ಅಲ್ಲಿಂದ ಆಶ್ರಮಕ್ಕೆ ಬೇಕಾದ ವಸ್ತುಗಳನ್ನು ತರುತ್ತಿದ್ದ್ದರು . ಆಶ್ರಮದಲ್ಲಿಯೇ ಬೆಳೆದ ಶ್ರೀ ಈಶ್ವರ ಭಟ್ ಈಗ ಅದನ್ನು ನಡೆಸುತ್ತಿದ್ದಾರೆ , ಬೈರಿಕಟ್ಟೆ ಬಳಿ ಕಳಂಜಿ ಮೂಲೆ ತಪ್ಪಲಲ್ಲಿ ಇನ್ನೊಂದು ದೊಡ್ಡ ಕ್ಯಾಂಪಸ್ ನಿರ್ಮಿಸಿದ್ದಾರೆ . ಈಗ ಹಿರಿಯರ ನ್ನು ನೋಡಿ ಕೊಳ್ಳುವ ವ್ಯವಸ್ಥೆಯೂ ಇದೆ 

 

ಭಾನುವಾರ, ಜುಲೈ 10, 2022

          

                                              

ದಶಕಗಳ ಹಿಂದೆ ನಾನು ಪುತ್ತೂರಿಗೆ ಬಂದು ನೆಲಸಿದ ಕೆಲವು ದಿನಗಳಲ್ಲಿ ಅನಿರೀಕ್ಷಿತವಾಗಿ ಒಂದು ಪೋಸ್ಟ್ ಕಾರ್ಡ್ ;ಜತೆಗೆ ಒಂದು ' ಕಗ್ಗೋಕ್ತಿ ಸಂಪದ 'ಎಂಬ ಒಂದು ಪುಸ್ತಕ ಅಂಚೆಯಲ್ಲಿ ಬಂದಿತು . ಅದು ಹಿರಿಯರಾದ ಕುಲ್ಯಾಡಿ ಮಾಧವ ಪೈ ಅವರದು .ನಾನು ಅವರ ಹೆಸರು ಕೇಳಿದ್ದೆ .ಕಂಡು ಬಲ್ಲವನಲ್ಲ . 

ಪ್ರಸಿದ್ಧ ಜವುಳಿ ವ್ಯಾಪಾರಿ ಕುಲ್ಯಾಡಿಕಾರ್ಸ್ ನಡೆಸುತ್ತಿದ್ದ ಶ್ರೀ ಮಾಧವ ಪೈ ಸಾಹಿತ್ಯ ಪ್ರಿಯರೂ ,ಬರಹಗಾರರೂ ಆಗಿದ್ದು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಆಗಿದ್ದರು ಎಂಬುದು ಆಮೇಲೆ ಗೊತ್ತಾಯಿತು . ಕಾಂತಾವರ ವರ್ಧಮಾನ ಪೀಠದ ಅಧ್ಯಕ್ಷರೂ ಆಗಿದ್ದರು .  ವಾಣಿಜ್ಯ ಚಟುವಟಿಕೆ ನಡುವೆ ಬಿಡುವು ಮಾಡಿಕೊಂಡು ಕನ್ನಡದ ಕಾಯಕ ನಡೆಸುತ್ತಿದ್ದ ಹಿರಿಯ ಮುತ್ಸದ್ದಿ . 

ಅವರಿಗೆ ಕೃತಜ್ಞತಾ ಪೂರ್ವಕ ಪತ್ರ ಬರೆದೆ .ಅವರನ್ನು ಮುಖತಾ ಕಾಣುವ ಅಸೆ ನೆರವೇರಲಿಲ್ಲ .ಇದಾಗಿ ಆರು ತಿಂಗಳಲ್ಲಿ ಅವರು ತೀರಿ ಕೊಂಡ ವಾರ್ತೆ ಪತ್ರಿಕೆಗಳಲ್ಲಿ ಓದಿದೆ . 

ಇಂದಿಗೂ  ವೈಯುಕ್ತಿಕ ಪರಿಚಯವಿಲ್ಲದ ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಹೆಕ್ಕಿ ತಮ್ಮ ಕೃತಿಯನ್ನು ಹೇಗೆ ಕಳುಹಿಸಿದರು ?ಎಂದು ನನಗೆ ತಿಳಿದಿಲ್ಲ . ಆದರೆ ಆ ಮಹಾ ಚೇತನಕ್ಕೆ ನೂರು ನೂರು ಶರಣು 

 


ಮಂಗಳವಾರ, ಜುಲೈ 5, 2022

ಲೆಕ್ಕಕ್ಕೆ

 ವೈದ್ಯಕೀಯ ವಿದ್ಯಾರ್ಥಿ ಆಗಿದ್ದಾಗ ಒಂದು ಮಿತ್ರ ವಿವೇಕ್ ಜತೆ ತಿಂಗಳು ಹಾಸ್ಟೆಲ್ ಪ್ರಿಫೆಕ್ಟ್ ಆಗಿದ್ದೆ . ನಿರ್ಗಮನಿಸುವ ಪ್ರಿಫೆಕ್ಟ್ ಅಡಿಗೆ ಮನೆಯ ಉಗ್ರಾಣದಲ್ಲಿ  ಉಳಿದ ಜೀನಸು ವಸ್ತುಗಳ ಚಾರ್ಜ್ ಅವುಗಳ ಬೆಲೆ ನಮೂದಿಸಿ ಹಸ್ತಾಂತರ ಮಾಡುವರು . ವಸ್ತುಗಳನ್ನು ಪರಿಶೀಲಿಸಿದಾಗ ಒಂದು ಗೋಣಿ ಅಕ್ಕಿ ,ಹಳೇ  ಮಾಲು ,ಗುಗ್ಗುರು ಹುಳಗಳ ಸಮೇತ ಇದ್ದು ಇದೇನು ?ಎಂದು ವಿಚಾರಿಸಲು ಇದು ಹೀಗೇ 'ಎರಡು ವರ್ಷದಿಂದ ಕೈ ಬದಲುತ್ತಾ ಬಂದಿದೆ ,ಅಡಿಗೆಗೆ ಉಪಯೋಗಿಸಲು ಆಗದು ;ನೀವು ಕೂಡಾ ಹ್ಯಾಂಡ್ ಓವರ್ ಮಾಡುವಾಗ ಸೇರಿಸಿ ಕೊಟ್ಟರೆ ಆಯಿತು 'ಎಂದರು . ನನಗೆ ಸಖೇದಾಶ್ಚರ್ಯ  ಆಯಿತಾದರೂ ಅವರ ಸಲಹೆಯಂತೆ ನಡೆದು ಕೊಂಡೆ . 

 ಮುಂದೆ ನಾನು ರೈಲ್ವೆ ವೈದ್ಯಕೀಯ ಸೇವೆಗೆ ಸೇರಿ ಬೇರೆ ಬೇರೆ  ಸ್ಥಳ ಗಳಲ್ಲಿ ಚಾರ್ಜ್ ತೆಗೆದು ಕೊಳ್ಳುವಾಗ ಇದೇ ಚಾಳಿ ಕಂಡು ಬಂದಿತು . ಮುರಿದ ಕುರ್ಚಿ ,ಒಡೆದ ಪ್ರಯೋಗ ಸಾಧನಗಳು ಇತ್ಯಾದಿ ಒಬ್ಬರ ತರುವಾಯ ಒಬ್ಬರು ಚಾರ್ಜ್ ತೆಗೆದು ಕೊಂಡು ಮುಂದೆ ಇನ್ನೊಬ್ಬರಿಗೆ ಕೊಟ್ಟು ಹೋಗುವರು . ಅವುಗಳು ಎಲ್ಲಾ ಟೂಲ್ಸ್ ಅಂಡ್ ಪ್ಲಾಂಟ್ಸ್ ರಿಜಿಸ್ಟರ್ ನಲ್ಲಿ ಇರುವ ಕಾರಣ ನಾವಾಗಿ ಅವನ್ನು ವಿಲೇವಾರಿ ಮಾಡುವಂತೆ ಇಲ್ಲ .ಮೇಲಧಿಕಾರಿಗಳು ಇನ್ಸ್ಪೆಕ್ಷನ್ ಗೆ ಬಂದಾಗ ಅವುಗಳನ್ನು ಕಂಡೆಮ್ ಮಾಡಿಸಿ ,ನಂತರ ಹೊಸದಕ್ಕೆ ಇಂಡೆಂಟ್ ಮಾಡ ಬಹುದು . ಕಂಡೆಮ್ ರಿಜಿಸ್ಟರ್ ಇಟ್ಟು  ಕೊಳ್ಳ ಬೇಕು . ಅಡಿಟ್ ಗೆ ಬಂದವರು ಅದನ್ನು ಪರಿಶೀಲಿಸುವರು .ಇದೆಲ್ಲಾ ರಗಳೆ ಬೇಡ ಎಂದು ಈ ಅನುಪಯುಕ್ತ ವಸ್ತುಗಳನ್ನು  ಹಾಗೇ ಇಟ್ಟುಕೊಂಡು ಮುಂದಿನವರಿಗೆ ಹಸ್ತಾಂತರಿಸಿ ಹೋಗುತ್ತಿದ್ದವರೇ ಹೆಚ್ಚು 

ಶನಿವಾರ, ಜುಲೈ 2, 2022

ಒಂದು ಚಿಂತನೆ

 ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವಲರಾ||
೧||

ಸೋಮೇಶ್ವರ ಶತಕದ ಮೇಲಿನ ಸಾಲುಗಳು ನನಗೆ ಬಹಳ ಇಷ್ಟ . ಅದರಲ್ಲೂ ಬಲ್ಲವರಿಂದ ಕಲ್ತುದು ಬಹಳ . ವೈದ್ಯಕೀಯ ವೃತ್ತಿಯಲ್ಲಿ ವಿದ್ಯಾರ್ಥಿ ಆಗಿದ್ದಾಗ ಅನಾಟಮಿ ,ಫಿಸಿಯೋಲಾಜಿ ಅಟೆಂಡರ್ ಗಳು ಎಷ್ಟೋ ಸಾಮಾನ್ಯ ಜ್ಞಾನದ ವಿಷಯ ಗಳನ್ನು ಅರುಹಿದ್ದರು .ಮುಂದೆ ಕ್ಲಿನಿಕಲ್ ವಿಭಾಗದಲ್ಲಿ ಅನುಭವಿ ನರ್ಸ್ ಗಳು ಇಂಜೆಕ್ಷನ್ ಕೊಡುವುದು,ಡ್ರೆಸ್ಸಿಂಗ್ ಮಾಡುವುದು ಇತ್ಯಾದಿ ,ಆಪರೇಷನ್ ಥೇಟರ್ ನಲ್ಲಿ  ವಾಶ್ ಮಾಡುವದು ,ಕತ್ತರಿ ಹಿಡಿದು ಕೊಳ್ಳುವುದು ,ಹೊಲಿಗೆ ಹಾಕುವ ವಿಧಾನ ಇತ್ಯಾದಿ ಮನವರಿಕೆ ಮಾಡಿಕೊಟ್ಟವರು . ಮೂಳೆ ವಿಭಾಗದ ಅಸಿಸ್ಟೆಂಟ್ ತಪ್ಪಿದ ಕೀಲು  ಸರಿಪಡಿಸುವದು ,ಇತ್ಯಾದಿ ಕಲಿಸಿ ಕೊಟ್ಟವರು . ಯಾವತ್ತೂ ನಮಗೆ  ಇವರಿಂದ ಎಂತ ಕಲಿಯುವುದು ಎಂಬ ಯೋಚನೆ ಬಂದೇ ಇಲ್ಲ . 

ಶಾಸ್ತ್ರಗಳ ಓದುವುದು ,ಮತ್ತು ಬೇರೆಯವರು ಹೇಳಿದ್ದನ್ನು ದೃಡೀಕರಿಸಿ ಕೊಳ್ಳುವದು ಬಹಳ ಮುಖ್ಯ .ಈಗ ಇಂಟರ್ನೆಟ್ ಬಂದು ಇದು ಸುಲಭ ಕೂಡಾ ಆಗಿದೆ .ಆದರೂ ಬಹಳ ಮಂದಿ  ಹಲವಂ ವಾಟ್ಸ್ಯಾಪ್ಪ್ ನಿಂ  ಕಂಡು ಅದರಿಂ ಬಂದದ್ದೇ ತೀರ್ಥ ಎಂದು ಸೇವಿಸುವುದು ಕಂಡು ದುಃಖ ಆಗುತ್ತದೆ . ಬಹಳ ಸಾರಿ ರೋಗಿ ಬಯಸಿದ್ದೂ ಹಾಲು ಎಂಬಂತೆ ವಾಟ್ಸಪ್ಪ್ ಗ್ರೂಪ್ ಸದಸ್ಯ ಬಯಸಿದ್ದೇ ಸದಸ್ಯರು ಸೃಷ್ಟಿಸಿ ಕೊಡುವಾಗ ಪಂಚಾಮೃತ ಎಂದು ಕಣ್ಣು ಮುಚ್ಚಿ ಸ್ವೀಕರಿಸುತ್ತಾರೆ . ಇವರಲ್ಲಿ ಬಹಳ ಮಂದಿ ವೈಯುಕ್ತಿಕವಾಗಿ ಒಳ್ಳೆಯವರು ಮತ್ತು ವಿಶಾಲ ಮನಸ್ಕರು . ಆದರೆ ವಾಟ್ಸಪ್ಪ್ ಗುಂಪುಗಳು mob ಮೆಂಟಾಲಿಟಿ ತರಹ . ಕಂಡ ಕೂಡಲೇ ಜಯ ಜಯ ಎಂದು ಫಾರ್ವರ್ಡ್ ಮಾಡಿ ಕೃತಾರ್ಥ ರಾಗುವರು . ಫ್ಯಾಕ್ಟ್ ಚೆಕ್ ಮಾಡಲೂ ಹೋಗರು . ಸಮಾಜಕ್ಕೆ  ಇದರಿಂದ  ಆಗುವ ದುಷ್ಪರಿಣಾಮ ಬಹಳ 

ಶುಕ್ರವಾರ, ಜುಲೈ 1, 2022

ಪದಾರ್ಥ

 ನಿನ್ನೆ ಹಿರಿಯ ಲೇಖಕಿ ಭುವನೇಶ್ವರಿ ಹೆಗ್ಡೆ ಅವರು ನಾನು ವಾಕಿಂಗ್ ಹೋಗಿ ಬರುವಾಗ ಚಂಡಿ ಆಗಿದ್ದೆ ಎಂಬುದನ್ನು ದಕ್ಷಿಣ ಕನ್ನಡೇತರ ರಿಗಾಗಿ  ಚಂಡಿ ಎಂದರೆ ಒದ್ದೆ ಎಂದು ವಿಶದೀಕರಿಸಿದ್ದರು . ಅದಕ್ಕೆ ಉತ್ತರವಾಗಿ ನಾನು ಸೂಕ್ತ ಪದಾರ್ಥ ಎಂದು ಬರೆದಿದ್ದೆ . ಗ್ರಾಂಥಿಕವಾಗಿ ಪದಾರ್ಥ ಎಂಬುದು ಪದದ ಅರ್ಥ .ಪಾ ವೆಂ ಆಚಾರ್ಯರ 'ಪದಾರ್ಥ ಚಿಂತಾಮಣಿ ' ಇದು ಇದೇ ಆಶಯದ ಕೃತಿ.ಪಂಜೆ  ಮಂಗೇಶ  ರಾಯರ 'ಪದಾರ್ಥವೇನು ?'ಎಂಬ  ಪ್ರಭಂದ  ಆರಂಭದಲ್ಲಿ  ಅಡಿಗೆ ಪದಾರ್ಥ ವನ್ನು ವಿವರಿಸಿದರೂ ಮುಂದೆ ಶಬ್ದ ಗಳ  ವ್ಯುತ್ಪತ್ತಿ ಯನ್ನು ವಿಶ್ಲೇಷಣೆ ಮಾಡುತ್ತದೆ . ಉದಾಹರಣೆ ಗೆ  ಬೀಳ್ಕೊಡು ಎಂಬುದು ವೀಳ್ಯ ಕೊಡು ಎಂಬುದರಿಂದ ಬಂದಿರ ಬಹುದು ಇತ್ಯಾದಿ . 

                   ಆದರೆ ವಾಡಿಕೆಯಲ್ಲಿ ಪದಾರ್ಥ ಎಂದರೆ ತಿನ್ನುವ ಅನ್ನ ,ಹೈನೇತರ  ಅಡಿಗೆ ಮಾಡಿ ತಯಾರು ಮಾಡುವ ವಸ್ತು .ತರಕಾರಿ ,ಮಾಂಸ ಮೀನು ಇತ್ಯಾದಿಗಳು ಮುಖ್ಯ ವಸ್ತುಗಳು . ತುಳುವಿನ ಕಜಿಪ್ಪು . 

ಕೆಲ ತಿಂಗಳುಗಳ ಹಿಂದೆ  ನಮ್ಮ ರಸ್ತೆ ಮೋರಿ ನಿರ್ಮಾಣಕ್ಕಾಗಿ ಬಂದ್ ಆಗಿತ್ತು . ಆದ್ದರಿಂದ  ನಾನು ಮುಖ್ಯ ರಸ್ತೆಯ ವರೆಗೆ ನಡೆದು ಆಟೋ ಹಿಡಿದು ಹೋಗುತ್ತಿದ್ದೆ . ಒಂದು ದಿನ ರಸ್ತೆಯಲ್ಲಿ ನಿತ್ಯ ಓಡಾಡುವ ಹುಡುಗಿ ಒಬ್ಬಾಕೆ ಸಿಕ್ಕಿದಳು . ವರ್ಕ್ ಶಾಪ್ ಒಂದರ ಉದ್ಯೋಗಿ . ನನ್ನನ್ನು ಕಂಡು ನಮಸ್ಕಾರ ಮಾಡಿ ಜತೆಗೇ ನಡೆಯುತ್ತಾ 'ಸಾರ್ ನೀವು ಗೋ ಡಾಕ್ಟ್ರಾ ?'ಎಂದು ಪ್ರಶ್ನೆ  ಮಾಡಿದಳು .(ನಮ್ಮ ರಸ್ತೆಯಲ್ಲಿ ಓರ್ವ ಹಿರಿಯ ಪಶು ವೈದ್ಯರು ಇದ್ದಾರೆ . )ನಾನು 'ಇಲ್ಲಕ್ಕ ಈಗ ನಡೆದೇ go ಮಾಡುವ (ನಡೆದು ಹೋಗುವ )ಡಾಕ್ರು . ನಾನು ಒಂದೇ ಪ್ರಾಣಿಯನ್ನು ಚಿಕಿತ್ಸೆ ಮಾಡ ಬಲ್ಲೆ . ಗೋ ಡಾಕ್ಟ್ರು ಹಲವು ಪ್ರಾಣಿಗಳನ್ನು ಮಾಡ ಬಲ್ಲರು . "ಎಂದೆ .ಯಾಕೆ ಕೇಳಿದ್ದು ಎಂದುದಕ್ಕೆ 'ಸುಮ್ಮನೇ ' ಎಂದಳು :ಬಹುಶಃ ಆಕೆಯ ಮನೆಯಲ್ಲಿ ಹಸು ಸಾಕುತ್ತಿರ ಬಹುದು . 

ಆಮೇಲೆ ಮಾತು ಮುಂದುವರಿಸುತ್ತಾ 'ನಿಮಗೆ ಏನು ತಿಂಡಿ?'ಎಂದಳು .ನಾನು 'ಪುಂಡಿ 'ಎಂದೆ .ಕೂಡಲೇ 'ಪದಾರ್ಥ ಎಂತದ್ದು ?'ಎಂಬ ಪ್ರಶ್ನೆ .ನಾನು' ಬಸಳೆ 'ಎಂದೆ . ಪದಾರ್ಥ ಶಬ್ದ ಕೇಳಿ ಬಹಳ ಸಂತೋಷ ಆಯಿತು .ಹೀಗೆ ಮಾತನಾಡುತ್ತಾ  ಮುಖ್ಯ ರಸ್ತೆ ಬಂದುದೇ ತಿಳಿಯಲಿಲ್ಲ . 

ಈಗಲೂ ನನಗೆ ಕಜಿಪ್ಪಿಗೆ ಪದಾರ್ಥ ಎಂದು ಏಕೆ ಹೆಸರು ಬಂತು ಎಂದು ತಿಳಿದಿಲ್ಲ .


ಬಾಲಂಗೋಚಿ ; ಕೆಲವರಿಗೆ  ದಾರಿಯಲ್ಲಿ ಈ ತರಹ ಪ್ರಶ್ನೆ ಇಷ್ಟ ಆಗುವುದಿಲ್ಲ .ಆಗ ಕೋಪದಲ್ಲಿ "ಅಂಬಟೆ ಕಾಯಿ ಕೊರಂಟು ,ನಿನಗ್ಯಾಕೆ ?"ಎನ್ನುವರು ಎಂದು ಪಂಜೆಯವರ ಪ್ರಬಂಧ ದಲ್ಲಿ ಬರುತ್ತದೆ .

Untitled