ಬೆಂಬಲಿಗರು

ಶನಿವಾರ, ಮೇ 14, 2022

ನನ್ನ ಕೆಲ ವೈದ್ಯಕಿಯೇತರ ಅಧ್ಯಯನ

 ಮಂಗಳೂರಿನಲ್ಲಿ ಪ್ರಸಿದ್ದ ಭಾರತೀಯ ವಿದ್ಯಾ ಭವನ ಸ್ಥಾಪನೆಗೆ ಪ್ರಾತಃ ಸ್ಮರಣೀಯ ಡಾ ಎಂ ಪಿ ಪೈ ಕಾರಣ ಎಂದು ತಿಳಿದು ಕೊಂಡಿದ್ದೇನೆ .  ತನ್ನ ಸ್ವಂತ ಕಟ್ಟಡ ಆಗುವುದಕ್ಕಿಂತ ಮೊದಲು ಅದರ ಕಾರ್ಯಕ್ರಮಗಳು ಕೆ ಎಂ ಸಿ ಮಂಗಳೂರು ಸಭಾ ಭವನದಲ್ಲಿ ನಡೆಯುತ್ತಿದ್ದು ಆಮೇಲೆ ಈಗ ಪಾಂಡೇಶ್ವರದಲ್ಲಿ ಇರುವ ಸೌಧಕ್ಕೆ ಖಾಯಂ ಆಗಿ ಸ್ಥಳಾಂತರ ಆಯಿತು . ಆರಂಭದಲ್ಲಿ  ಸಾಂಸ್ಕೃತಿಕ  ಕಾರ್ಯಕ್ರಮಗಳು ಮತ್ತು ಸಂಗೀತ ತರಬೇತಿ ಗೆ ಸೀಮಿತ ವಾಗಿದ್ದ  ಚಟುವಟಿಕೆಗಳು ಕ್ರಮೇಣ ವಿಸ್ತರಿಸಿ ಕೊಂಡವು . ಶ್ರೀಮತಿ ಶಾರದಾ(ಸರೋಜಾ?) ಆಚಾರ್ ಎಂಬ ಹಿರಿಯರು ಸಂಗೀತ ಕಲಿಸುತ್ತಿದ್ದರು .ಆಗ ಅದು ಉಚಿತ ವಾಗಿದ್ದು ಖರ್ಚು ವೆಚ್ಚ ಕೇಂದ್ರವೇ ವಹಿಸುತ್ತಿತ್ತು . ನಾನು ಕೂಡಾ ಒಂದು ವರ್ಷ ಸಂಗೀತ ಕಲಿಯುವ ಹಂಬಲದಿಂದ ಒಂದು ವರ್ಷ ಹೋಗಿದ್ದೆ . ತರಗತಿಯಲ್ಲಿ ಹುಡುಗ ನಾನೊಬ್ಬನೇ ಇದ್ದು ಉಳಿದವರು ಎಲ್ಲಾ ಹುಡುಗಿಯರು. ಮೇಡಮ್ ಮತ್ತು ವಿದ್ಯಾರ್ಥಿನಿಯರಿಗೆಲ್ಲಾ ನನ್ನ ಮೇಲೆ ಅನುಕಂಪ .ಆದರೆ ಜತೆಯಾಗಿ ಅಭ್ಯಾಸ ಮಾಡುವಾಗ ಕೋಗಿಲೆಗಳ ನಡುವೆ ನನ್ನದೊಂದು ಕಾಗೆಯ ಸ್ವರದಂತೆ ಎದ್ದು ಕೇಳುತ್ತಿತ್ತು . ವಾರ್ಷಿಕೋತ್ಸವ ಮುಂತಾದ ಕಾರ್ಯಕ್ರಮ ಗಳಲ್ಲಿ ಹೊರ್ಮೋನಿಯಂ ಪೆಟ್ಟಿಗೆ ಹೊತ್ತು ಕೊಂಡು ಹೋಗಲು ಮುಂತಾದ ಕಾರ್ಯಗಳಿಗೆ ನಾನೊಬ್ಬ ಹುಡುಗ ಇದ್ದುದು ಅವರಿಗೆ ಅನುಕೂಲ ಕೂಡಾ ಇದ್ದುದರಿಂದ ನನ್ನ ಪ್ರಗತಿ ಅಷ್ಟು ಇಲ್ಲದಿದ್ದರೂ ಹುರಿದುಂಬಿಸಿ ನಾನು ಅರ್ಧಕ್ಕೆ ಬಿಡದಂತೆ ನೋಡಿಕೊಂಡರು .ಆದರೆ ಪಿ ಯು ಸಿ ಮುಗಿಸಿ ಎಂ ಬಿ ಬಿ ಎಸ್ ಗೆ ನಾನು ಹುಬ್ಬಳ್ಳಿಗೆ ಹೋದುದರಿಂದ ಸಂಗೀತ ಅಭ್ಯಾಸ ಅಲ್ಲಿಗೇ ನಿಂತಿತು . ಆದರೂ ನನ್ನ ಶಾಸ್ತ್ರೀಯ ಸಂಗೀತ ಅಭಿರುಚಿ ಗಟ್ಟಿ ಮಾಡಿತು .

ನಾನು ಎಂ ಬಿ ಬಿ ಎಸ್  ಉತ್ತೀರ್ಣ ನಾಗಿ ಎರಡು ವರ್ಷ ನಂತರ ರೈಲ್ವೇ ವೈದ್ಯಕೀಯ ಸೇವೆಗೆ ಸೇರಿದೆ . ಈ ಹುದ್ದೆಯಲ್ಲಿ ಮಂಗಳೂರಿಗೆ 1989 ರಲ್ಲಿ ಪೋಸ್ಟ್ ಆಯಿತು . ಸಂಜೆ ಐದು ಗಂಟೆಯಿಂದ ನಾನು ಫ್ರೀ ಇರುತ್ತಿದ್ದೆ .ನಮ್ಮ  ವಸತಿ ಗೃಹ ಸಮೀಪದಲ್ಲಿಯೇ  ಭಾರತೀಯ ವಿದ್ಯಾ ಭವನ ಮಂಗಳೂರು ಕೇಂದ್ರ ಪಾಂಡೇಶ್ವರ ದಲ್ಲಿ ಇತ್ತು . ಅವರು ಆಗ ಸಂಗೀತ ,ನೃತ್ಯ ದೊಡನೆ  ಮ್ಯಾನೇಜ್ಮೆಂಟ್ ಕೋರ್ಸ್ ಕೂಡಾ  ನಡೆಸುತ್ತಿದ್ದರು . ಅದು ಸಂಜೆ ಇದ್ದು ನಾನೂ ಸೇರಿ ಕೊಂಡೆ .ಮಂಗಳೂರು ವಿಶ್ವ ವಿದ್ಯಾಲಯದ ಕಾಮರ್ಸ್ ಪ್ರೊಫೆಸರ್  ಪೋದುವಾಳ್ ,ಎಸ್ ಡಿ ಎಂ ಕಾಲೇಜ್ ನ ಶ್ರೀ ದೇವರಾಜ್ ಮತ್ತು  ಕಾರ್ಮಿಕ ಕಾನೂನಿನಲ್ಲಿ ಪ್ರಸಿದ್ದ ರಾದ ಶ್ರೀ ಚಂದ್ರಶೇಖರ ಹೊಳ್ಳ ಮತ್ತು ಇನ್ನೂ ಕೆಲವರು ಅಲ್ಲಿ ಕಲಿಸಲು ಬರುತ್ತಿದ್ದರು . ಮಂಗಳೂರಿನ ವಿವಿಧ ರಂಗಗಳಲ್ಲಿ ಪ್ರಸಿದ್ದರಾದ ಶ್ರೀ ಶೇಖರ ಪೂಜಾರಿ ,ಜಯನಾಥ ಕೋಟ್ಯಾನ್ ನನ್ನ ಸಹಪಾಠಿ ಗಳು . ವರ್ಕ್ಸ್ ಮನ್ಸ್ ಕಂಪೆನ್ಸಷನ್ ಆಕ್ಟ್ ,ಮಿನಿಮಲ್ ವೇಜ್ ಆಕ್ಟ್ ,ಬೋನಸ್ ಆಕ್ಟ್ ಇತ್ಯಾದಿ ಕಲಿತ ನೆನಪು .(ಬೋನಸ್ ಐಸ್ ಡಿಫರ್ಡ್ ವೇಜ್ ಇತ್ಯಾದಿ ). ತರಗತಿಯಲ್ಲಿ ಸಣ್ಣ ಹುಡುಗರಿಂದ ಹಿಡಿದು ಮಧ್ಯ ವಯಸ್ಕರ ವರೆಗೆ ಹೆಣ್ಣು ಗಂಡು ವಿದ್ಯಾರ್ಥಿಗಳು ಇದ್ದು ನಾನು ವೈದ್ಯನಾದ ಕಾರಣ ಮತ್ತು ನನ್ನಲ್ಲಿ  ಹಾಸ್ಯ ಪ್ರಜ್ಞೆ ಇದ್ದ ಕಾರಣ  ಪ್ರೀತಿ ಗೌರವದಿಂದ ನಡೆದು ಕೊಳ್ಳುತ್ತಿದ್ದರು . ವರ್ಷಾಂತ್ಯದಲ್ಲಿ ಪರೀಕ್ಷೆ ನಡೆದು ನನಗೆ ಡಿಪ್ಲೊಮಾ ಇನ್ ಪರ್ಸನಲ್ ಮ್ಯಾನೇಜ್ಮೆಂಟ್ (ದ್ವಿತೀಯ ದರ್ಜೆ )ಉಪಾಧಿ ಸಿಕ್ಕಿತು .ಆದರೆ ನನ್ನ ಮ್ಯಾನೇಜ್ಮೆಂಟ್  ಸ್ಕಿಲ್ ಇದರಿಂದ ಏನಾದರೂ ಉತ್ತಮವಾದ ಹಾಗೆ ಕಾಣೆ . ಕೆಲ ಒಳ್ಳೆಯ ಮಿತ್ರರು ಸಿಕ್ಕಿದರು . 



ಫ್ರೀ ಹೋಮ್ ಡೆಲಿ ವರಿ

ಹಿಂದೆ   ಹೊಸತಾಗಿ ಮದುವೆ  ಆದ ಹುಡುಗಿ ಗರ್ಭಿಣಿ ಆದಾಗ ಸಂಭ್ರಮ . ಸೀಮಂತ ಆಚರಿಸಿ  ತವರು ಮನೆಗೆ ಬಂದ ಆಕೆಗೆ ಅದರ ಪ್ರೀತಿಯ ಉಪಚಾರ . ಶ್ರೀಮಂತರಲ್ಲಿ ದೊಡ್ಡ ಉಪಚಾರ ಇದ್ದರೆ ಹೃದಯ ಶ್ರೀಮಂತಿಕೆ ಇದ್ದ ಉಳಿದವರಲ್ಲಿಯೂ ಶಕ್ತ್ಯಾನುಸಾರ ಅವಳ ಆಸೆಗಳನ್ನು ಪೂರೈಸುತ್ತಿದ್ದರು . ತವರು ಮನೆಯ ಅಕ್ಕ ಪಕ್ಕದ ಸ್ನೇಹಿತೆಯರೂ ಆಗಾಗ ಬಂದು ವಿಚಾರಿಸುವರು . ಸಣ್ಣ ಸಣ್ಣ ಕಾಯಿಲೆ ಬಂದಾಗ ಅನುಭವಿಗಳಾದ ಅಜ್ಜಿಯರು ,ದೊಡ್ಡಮ್ಮ ಚಿಕ್ಕಮ್ಮ ನವರ  ಉಪಚಾರ ಸಾಕಾಗುತ್ತಿತ್ತು ,

 ಈಗಿನ ಹಾಗೆ ತಿಂಗಳಿಗೆ ಒಮ್ಮೆ ಡಾಕ್ಟ್ರ ಅಪಪೋಯಿಂಟ್ (ಇದೂ ಕಷ್ಟದಲ್ಲಿ ಸಿಗುವುದು ),ಸ್ಕ್ಯಾನ್ ,ಪಿ ಏನ್ ಡಿ ಟಿ ಫಾರಂ ತುಂಬುವುದು ,ಆಧಾರ್ ಕಾರ್ಡ್ ಯಾವುದೂ ಇರಲಿಲ್ಲ . ಆಸ್ಪತ್ರೆಯಲ್ಲಿ ಬಂದು  ಕ್ಯೂ ನಿಲ್ಲುವುದೂ ಇಲ್ಲ . 

ಬಹಳ ಹಿಂದೆ ಹಳ್ಳಿಯ ಸೂಲಗಿತ್ತಿಯರೇ ಪ್ರಸವ ಶಾಸ್ತ್ರಜ್ಞೆ ಯರು ಆಗಿದ್ದರೆ ,ಆಮೇಲೆ  ಸರಕಾರಿ ಮಿಡ್ ವೈಫ್ ನವರು . ಮಿಡ್ ವೈಫ್ ನಮ್ಮಂತಹ ಹಳ್ಳಿಯವರ ಬಾಯಿಯಲ್ಲಿ ಮೆಡ್ ಬಾಯ್ ಆಗಿದ್ದರು .ಅವರು ಒಂದೆರಡು ಬಾರಿ ತಮ್ಮ ಗ್ರಾಮ ಸಂಚಾರದಲ್ಲಿ  ಗರ್ಭಿಣಿಯರ ಪರೀಕ್ಷೆ ಮಾಡುವರು .ಹೆರಿಗೆ ನೋವು ಆರಂಭ ಆದಾಗ ಅವರ ವಸತಿ ಗೃಹಕ್ಕೆ ಯಾರಾದರೂ ದೂತರು ಓಡಿ ಅವರ ಪೆಟ್ಟಿಗೆ ಹೊತ್ತು ಗೊಂಡು ಕರೆ ತರುವುದು .ಹಗಲು ರಾತ್ರಿ ಎನ್ನದೆ ಅವರು ಬಂದು ಪ್ರಸವ ಆದ ಮೇಲೆಯೇ ಹೋಗುವರು . ಒಳ್ಳೆಯ ಅನುಭವ ಇದ್ದ ಅವರು ತಮಗೆ ಕಷ್ಟ ಕರ ಎಂದು ತೋರಿದರೆ ಮಾತ್ರ ಆಸ್ಪತ್ರೆಗೆ ಒಯ್ಯಲು ಹೇಳುವರು . ಹಳ್ಳಿಯವರು ಅವರಿಗೆ ಪ್ರೀತಿಯಿಂದ ಶಕ್ತ್ಯಾನುಸಾರ ಕಾಣಿಕೆ ಕೊಡುವರು ;ಆದರೆ ಅದರ ಮುಖ ನೋಡಿ ಅವರು ಕೆಲಸ ಮಾಡರು . 

ಹೆರಿಗೆ ಆದ ಕೂಡಲೇ ಗಂಡನ ಮನೆಗೆ ಸಕ್ಕರೆ (ಬೆಲ್ಲ ),ತೆಂಗಿನ ಕಾಯಿ ತೆಗೆದು ಕೊಂಡು ಹೋಗಿ ತಿಳಿಸುವುದು .ಅಲ್ಲಿ ಪಾಯಸ ದ ಊಟ ಮಾಡಿ ಬರುವುದು .ಈಗಿನಂತೆ ಫೋನ್ ಇಲ್ಲವಲ್ಲ . ಮಿಕ್ಕ ಬಂಧುಗಳಿಗೆ ಪೋಸ್ಟ್ ಕಾರ್ಡ್ ಹಾಕಿ ತಿಳಿಸುವುದು .. 

ಮಗುವಿನ ಲಾಲನೆ ಪಾಲನೆಗೆ ಮನೆಯಲ್ಲಿ ಎಷ್ಟು ಜನ .ಅಜ್ಜ ಅಜ್ಜಿ ದೊಡ್ಡಮ್ಮ  ,ಚಿಕ್ಕಮ್ಮ ,ಮಕ್ಕಳು . ಮಗು ಅತ್ತ ಒಡನೆ ಧಾವಿಸುವರು . ಅಡಿಕೆ ಹಾಳೆಯಲ್ಲಿ ಶಿಶುವಿನ ಶಯನ . ಮಗು ಬಟ್ಟೆ ಒದ್ದೆ ಮಾಡಿದ್ದರೆ ಅದನ್ನು ಕೆಳಕ್ಕೆ ಎಳೆದು ಉಂಡೆ ಮಾಡುವರು ,ಹಾಳೆಯನ್ನು ಕರ ಕರ ಮಾಡಿದರೆ ಮಗು ಅಳುವುದು ನಿಲ್ಲಿಸುವದು . ಈಗಿನಂತೆ ಸಣ್ಣ ಶೀತ ಆದಾಗ ಆಸ್ಪತ್ರೆಗೆ ಓಡುವ ಪದ್ಧತಿ ಇರಲಿಲ್ಲ . ಎಲ್ಲವೂ ಸಹಜ ಸಂಭ್ರಮ ಆಗಿತ್ತು . 

ನಾನು ಇಷ್ಟೆಲ್ಲಾ ಬರೆದ ಕಾರಣ ವಿಜ್ಞಾನ ಮತ್ತು ಈಗಿನ ತಪಾಸಣೆ ಗಳಿಂದ ಉಪಯೋಗ ಇಲ್ಲ ಎಂದು ತಿಳಿಯ ಬಾರದು . ಕುಚ್ ಪಾನೇಕೆ ಲಿಯೇ ಕುಚ್ ಖೋನಾ ಹೈ . 

ಬಾಲಂಗೋಚಿ : ಮೊದಲು ಫ್ರೀ ಹೋಮ್  ಡೆಲಿ ವರಿ ಇದ್ದದ್ದು ಈಗ ಕ್ಯಾಷ್ ಒನ್  ಡೆಲಿ ವರಿ ಆಗಿದೆ

ಶುಕ್ರವಾರ, ಮೇ 13, 2022

ಹಿರಿಯರ ಮೆಚ್ಚಿಗೆ ರೂಪದ ಆಶೀರ್ವಾದ

                            




 

 ಮೊನ್ನೆ ರಾತ್ರಿ ದೆಹಲಿಯಿಂದ ಶ್ರೀಮತಿ ಕಿರಣ ಎಂಬುವರು ಫೋನ್ ಮಾಡಿ ನನ್ನ ಪುಸ್ತಕ ಓದಿ ತುಂಬಾ ಸಂತೋಷ ಪಟ್ಟುದಾಗಿ ಮತ್ತು ಹಿರಿಯರಾದ ತನ್ನ ಅತ್ತೆಯವರೂ ಅದನ್ನು ಬಹಳ ಇಷ್ಟ ಪಟ್ಟರು ಎಂದು ಹೇಳಿದರು . ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಸಹಜವಾಗಿ ನನಗೆ ಸಂತೋಷ ಆಗಿ ಅವರಿಗೆ ಧನ್ಯವಾದ ಹೇಳಿದೆ . 

ನಿನ್ನೆ ರಾತ್ರಿ ಮತ್ತೊಂದು ಆಶ್ಚರ್ಯ . ಮಂಜೇಶ್ವರದಿಂದ ಹಿರಿಯರಾದ ಡಾ ರಮಾನಂದ ಬನಾರಿ ದೂರವಾಣಿ ಮೂಲಕ ಸುಮಾರು ಹತ್ತು ನಿಮಿಷ ಅದೇ ಕಾರಣ ಮಾತನಾಡಿ ತಮ್ಮ ಸಂತಸ ಹಂಚಿ ಕೊಂಡರು . ರಮಾನಂದ ಬನಾರಿ ವಯೋ ವೃದ್ದರು ಮತ್ತು ಜ್ಞಾನ ವೃದ್ದರು .ಅವರಿಗೆ ಓದುವುದು ಈಗ ಸ್ವಲ್ಪ ತ್ರಾಸ ದಾಯಕ ,ಆದರೂ ತನಗಿಂದ ಕಿರಿಯ ವೈದ್ಯ ಏನೋ ಬರೆದಿದ್ದಾನೆ ಎಂದು ಕಷ್ಟ ಪಟ್ಟು ಓದಿ ,ಸಂತಸ ಪಟ್ಟು ನನ್ನೊಡನೆ ಹಂಚಿಕೊಂಡದ್ದು ಅವರ ದೊಡ್ಡ ಮನಸು . ಅವರ ಮೆಚ್ಚುಗೆ ನುಡಿ ನನಗೆ ಆಶೀರ್ವಾದ . 

 ನೀವು ೨೦ ನೇ ಶತಮಾನದಲ್ಲಿ ಯಕ್ಷಗಾನ ಬೆಳೆದು ಬಂದ ಚರಿತ್ರೆ ಓದಿದರೆ ಅದರಲ್ಲಿ ಬರುವ ಎರಡು ಮೇರು ವ್ಯಕ್ತಿತ್ವ ಗಳು  ಒಂದು ಕುರಿಯ ವಿಠಲ ಶಾಸ್ತ್ರಿಗಳು ಆದರೆ ಇನ್ನೊಂದು ಕೀರಿಕ್ಕಾಡ್ ಮಾಸ್ಟರ್ ವಿಷ್ಣು ಭಟ್ಟರು .೧೯೪೪ ರಲ್ಲಿ ವಿಷ್ಣು ಭಟ್ ಅವರು ಸ್ಥಾಪಿಸಿದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ರೂಪಿಸಿದ ಯಕ್ಷ  ಕಲಾವಿದರೆಷ್ಟು . ಅವರು ಮತ್ತು ವಿಠಲ ಶಾಸ್ತ್ರಿಗಳು  ಈ ಕಲೆಯ  ಎಲ್ಲಾ ಪ್ರಾಕಾರಗಳಲ್ಲಿ  ತರಬೇತು ಕೊಟ್ಟುದಲ್ಲದೇ  ,ತಮ್ಮದೇ ಛಾಪು ಮೂಡಿಸಿ ದಂತ ಕತೆಗಳಾದವರು . 

 ಡಾ ರಮಾನಂದ ಬನಾರಿ ವಿಷ್ಣು ಭಟ್ ಅವರ ಎರಡನೇ ಪುತ್ರ ..ಪ್ರತಿಭಾವಂತ .ಕ್ಯಾಲಿಕಟ್ ಮೆಡಿಕಲ್ ಕಾಲೇಜು ನಿಂದ ಎಂ ಬಿ ಬಿ ಎಸ ಪದವಿ ಗಳಿಸಿ ,ಸ್ವಲ್ಪ ಸಮಯ ಸರಕಾರಿ ಸೇವೆ . ಆಮೇಲೆ ಮಂಜೇಶ್ವರ ದಲ್ಲಿಯೇ ಆಸ್ಪತ್ರೆ ಸ್ಥಾಪಿಸಿ ಹಲವು ದಶಕಗಳ ಸೇವೆ ಸಲ್ಲಿಸಿ  ಜನಾನುರಾಗಿ . ಆದರೂ ರಕ್ತದಲ್ಲಿ ಬಂದ ಕಲಾ ಸಾಹಿತ್ಯ ಅಭಿರುಚಿ ಮತ್ತು ಪ್ರತಿಭೆ ಬಿಡುವುದೇ .ತಾವೂ ಕೂಡಾ ಮೊದಲನೇ ಸಾಲಿನ ಯಕ್ಷಗಾನ ಅರ್ಥದಾರಿ , ಹಲವು ಕೃತಿಗಳ ರಚನೆ . ಅವುಗಳಿಗೆ ವಿದ್ವಜ್ಜನರ ಮನ್ನಣೆ .

ನಾನು ಉಪ್ಪಳ ಕೆ ಎನ್ ಎಚ್ ಆಸ್ಪತ್ರೆಗೆ ಹೋಗುತ್ತಿದ್ದ ಸಮಯ  ನನ್ನ ಸಲಹೆಗಗಾಗಿ  ರೋಗಿಗಳನ್ನು ಕಳುಹಿಸುತ್ತಿದ್ದರು . ಅವರ ರೋಗ ದಾಖಲೆ ಬಹಳ ಸ್ಫುಟ .ಚಿಕಿತ್ಸಾ ವಿಧಾನ  ವೈಜ್ನಾನಿಕ . ಒಂದೆರಡು ಬಾರಿ ಅವರ ಗಣರಾಜ ಕ್ಲಿನಿಕ್ ಗೆ ಕೂಡಾ ಭೇಟಿ ನೀಡಿದ್ದೇನೆ . ಏಕ ವ್ಯಕ್ತಿ ಆಸ್ಪತ್ರೆ ಯಾದರೂ  ಒಳ ರೋಗಿ ಚಿಕಿತ್ಸೆ ,ಪ್ರಸವ ಇತ್ಯಾದಿ ನೆಡೆಸುತ್ತಿದ್ದರು ಎಂದರೆ ಅವರ ವೈದ್ಯಕೀಯ ಕ್ಷಮತೆ ಯ ಅರಿವು ಆದೀತು .  ಮಂಜೇಶ್ವರ ಗೋವಿಂದ ಪೈ ಮನೆ ಇವರ ಮನೆಗೆ ಸಮೀಪ ." ಗಿಳಿವಿಂಡು" ಅಬಿವೃದ್ದಿ ಪಡಿಸುವುದರಲ್ಲಿ  ಇವರ ಪಾತ್ರವೂ ಇದೆ .ಉಪ್ಪಳ ಐ ಎಂ ಎ ಯ ಸ್ಥಾಪಕ ಸದಸ್ಯರು ಮತ್ತು ಕ್ರಿಯಾಶೀಲ ರಾಗಿ ಭಾಗ ವಹಿಸುತ್ತಿದ್ದರು .ಇತ್ತೀಚೆಗೆ ಸಮರ್ಪಿತವಾದ ಡಾ ಪ್ರಭಾಕರ ಹೊಳ್ಳ ಅವರಿಗೆ ಗೌರವ ಗ್ರಂಥ ತಯಾರಿಯ ಮೂಲ ಪ್ರೇರಣೆ ಇವರೇ .

   ಡಾ  ಬನಾರಿ ಅವರು ಆಯುರಾರೋಗ್ಯ ದಿಂದ ಇದ್ದು ನಮ್ಮಂತವರಿಗೆ  ಮಾರ್ಗ ದರ್ಶನ ನೀಡುತ್ತಿರಲಿ .

ಗುರುವಾರ, ಮೇ 12, 2022

ಎಕ್ಸ್ ಪೆಕ್ಟೆಡ್ ಡೇಟ್ ಆಫ್ ಡೆಲಿವರಿ

 ಯಾವುದೇ  ಸ್ತ್ರೀ ರೋಗ ತಜ್ನರ ಬಳಿಗೆ ತಪಾಸಣೆಗೆ ಹೋದ ಗರ್ಭಿಣಿಯರ  ದಾಖಲೆಯ ಮೇಲ್ಬಾಗ ಎರಡು ಷಾರ್ಟ್ ಫೋರ್ಮ್ ಗಳನ್ನು ನೋಡ ಬಹುದು .ಒಂದು   ಎಲ್ ಎಂ ಪಿ (LMP) ,ಇನ್ನೊಂದು ಇ ಡಿ ಡಿ (E D D). ಕೊನೆಯ ಋತು  ಸ್ರಾವ ದ ಮೊದಲನೇ ದಿನವನ್ನು  ಎಲ್ ಎಂ ಪಿ(Last Menstrual Period) ತೋರಿಸುತ್ತದೆ . . ಇ ಡಿ ಡಿ ಎಂದರೆ  ಸಂಭವನೀಯ ಹೆರಿಗೆ ದಿನಾಂಕ(Expected Date of Delivery) . ಪ್ರಸವ ತಜ್ನರ ಬಳಿಯಿಂದ ಬಂದ ಗರ್ಭಿಣಿಯರು  ತಮಗೆ ಹೆರಿಗೆಗೆ  ಈ ದಿನಾಂಕ ಕೊಟ್ಟಿದ್ದಾರೆ ಎಂದು ಹೇಳುವರು .ಇದು ಅವರು ಬಲ್ಮೆ ಇಟ್ಟು ಹೇಳುವುದಲ್ಲ . 

    ಪೂರ್ಣ ಬೆಳವಣಿಗೆಗೆ ತಾಯ ಗರ್ಭದ ಒಳಗೆ ಸಾಮಾನ್ಯವಾಗಿ   ಶಿಶುವಿನ   ವಾಸ 280 ದಿನಗಳು . ಅದನ್ನು ಗಮನದಲ್ಲಿ ಇಟ್ಟು ಕೊಂಡು ಕೊನೇ ಋತು ಸ್ರಾವದ ಆರಂಭದ  ತಾರೀಕಿಗೆ ಏಳು ಸೇರಿಸಿ ,ಮೂರು ತಿಂಗಳು ಹಿಂದೆ  ಹೋದಾಗ ಬರುವ ದಿನಾಂಕ ಮುಂದಿನ ವರ್ಷದಲ್ಲಿ  ಸುಮಾರಾಗಿ ಹೆರಿಗೆ ದಿನ ಆಗಿರುತ್ತದೆ . ಉದಾಹರಣೆಗೆ  ಎಲ್ ಎಂ ಪಿ   20022 ಏಪ್ರಿಲ್ 15  ಆಗಿದ್ದರೆ ಏಳು ಸೇರಿಸಿದಾಗ 2022 ಏಪ್ರಿಲ್ 22 ಆಯಿತು .ಮೂರು ತಿಂಗಳು ಹಿಂದೆ ಅಂದರೆ  2022 ಜನವರಿ 22. ಒಂದು ವರ್ಷ ಮುಂದೆ ಅದೇ ದಿನ 2023 ರ ಜನವರಿ 22 . ಅದು ಇಡಿ ಡಿ .

ಈಗ  ಅಲ್ಟ್ರಾ ಸೌಂಡ್ ಸ್ಕ್ಯಾನ್ ಮೂಲಕವೂ ಸಂಭವನೀಯ ಹೆರಿಗೆ ದಿನಾಂಕ ಹೇಳುವರು .ಅದು ಹೆಚ್ಚು ನಿಖರ ಇರುವುದಲ್ಲದೆ  ದಿನ  ಲೆಕ್ಕ ಮತ್ತು ಬೆಳವಣಿಗೆ ಲೆಕ್ಕ  ಒಂದ್ಕಕೊಂದು ತಾಳೆ ಆಗುತ್ತದೆಯೋ ಎಂದು ಕೂಡಾ ಸೂಚಿಸುವದು . 

ಇನ್ನೊಂದು ಅಪಭ್ರಂಶ ಕೂಡಾ ನೀವು ಕಾಣ ಬಹುದು . ಒಂದು ಗ್ರಾವಿಡಾ (GRAVIDA )ಎಷ್ಟನೇ ಗರ್ಭಿಣಿ ಎಂದು ಸೂಚಿಸುವುದು . ಪ್ಯಾರಾ   ಎಂದರೆ ಪ್ರಸವಿದರೆ ಶಿಶು  ಬದುಕ ಸಾಧ್ಯವಾಗುವ ವರೆಗೆ ಮುಂದುವರಿದವು ಎಷ್ಟು ಎಂದು ಸೂಚಿಸಿದರೆ ಅದಕ್ಕಿಂತ ಮೊದಲೇ ಆದರೆ ಗರ್ಭಪಾತ   . ಗ್ರಾವಿಡಾ ವನ್ನು Gr ಎಂದೂ ಪ್ಯಾರಾ ವನ್ನು P ಎಂದೂ ಗರ್ಭಪಾತವನ್ನು A(Abortion) ಎಂದೂ ಸೂಚಿಸುವರು .ಉದಾ  ಒಂದು ಮಗು ಇದ್ದು ಎರಡನೇ  ಗರ್ಭಿಣಿಗೆ Gr 2 P1  ಇತ್ಯಾದಿ .

ಅದಕ್ಕೆ LD (Last Delivery) ಎಂದರೆ ಕೊನೆಯ ಹೆರಿಗೆ ಯಾವಾಗ ಎಂಬ ಸೂಚಕವೂ ಸೇರುವುದಲ್ಲದೆ  ಅದು ತಿಂಗಳು ತುಂಬಿ ಸಹಜ ಹೆರಿಗೆ ಆದರೆ FTND (Full Term Normal Delivery )ಶಸ್ತ್ರ ಚಿಕಿತ್ಸೆ ಮೂಲಕ ಆದರೆ LSCS(Lower Segment Caesarean Section)ಎಂಬ  ಷಾರ್ಟ್ ಫೋರ್ಮ್ ಕಾಣ ಬಹುದು .

 ಒಳ್ಳೆಯ ದಿನ ಮತ್ತು ನಕ್ಷತ್ರ ಬೇಕು ಎಂದು ಮೊದಲೇ ಹೆರಿಗೆ ಮಾಡಿಸಿ ಎಂದು ಗೋಗೆರೆಯುವವರೂ ಇದ್ದಾರೆ .ತಮ್ಮ ವಾಹನಕ್ಕೆ ಎಷ್ಟು  ಕೊಟ್ಟಾದರೂ  ಇಷ್ಟದ  ಮತ್ತು ಅದೃಷ್ಟದ ನಂಬರ್ Reg.  ಪಡೆಯುವಂತೆ .

ಬಾಲಂಗೋಚಿ : ಈಗ ಒನ್ ಲೈನ್ ಅಂಗಡಿಗಳಿಂದ  ವಸ್ತು ಖರೀದಿಸುವಾಗ  ಕೊರಿಯರ್ ಕಂಪೆನಿ ಯವರು EDD ಮೊದಲೇ ಸೂಚಿಸುವರು .

ಬುಧವಾರ, ಮೇ 11, 2022

ಮೌನ ಸಾಧಕರು ಡಾ ಡಿ ಸದಾಶಿವ ಭಟ್

                       


ಇವರು ಡಾ ಸದಾಶಿವ ಭಟ್.ಪುತ್ತೂರು ತಾಲೂಕು ನಿಡ್ಪ ಳ್ಳಿ ಯವರು . 90 ವರ್ಷದ ತರುಣ .ಪೆರಡಾಲ ಸಂಸ್ಕೃತ ಕಾಲೇಜಿನಲ್ಲಿ ವ್ಯಾಸಂಗ .ಮದರಾಸು ವಿಶ್ವ ವಿದ್ಯಾಲಯದ ವಿದ್ವಾನ್ ಪದವಿ . ೧೯೭೬ರಲ್ಲಿ ಮೈಸೂರು ವಿಶ್ವ ವಿದ್ಯಾಲಯದಿಂದ ಬಿ ಎ ಪದವಿ ,೧೯೭೮ ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯ ದಿಂದ ಬಿ ಎಡ್ ,೧೯೭೯ ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ದಿಂದ ಎಂ ಎ ಪದವಿ . ಇದಕ್ಕೆಲ್ಲಾ ಕಿರೀಟ ವಿಟ್ಟಂತೆ ೧೯೮೬ ರಲ್ಲಿ  ಮಂಗಳೂರು ಯೂನಿವರ್ಸಿಟಿ ಯಿಂದ 'ಪಂಜೆಯವರ ಸಾಹಿತ್ಯ ಕೃತಿಗಳು -ಒಂದು ಅಧ್ಯಯನ 'ಎಂಬ ಮಹಾ ಪ್ರಬಂಧಕ್ಕೆ ಪಿ ಎಚ್ ಡಿ ಪದವಿ .. ಇದಲ್ಲದೆ ಹಿಂದಿಯಲ್ಲಿ ರಾಷ್ಟ್ರ ಭಾಷಾ ವಿಶಾರದ . 

೧೯೬೪ ರಲ್ಲಿ ಬೆಟ್ಟಂಪಾಡಿ ನವೋದಯ ಹೈ ಸ್ಕೂಲ್ ನಲ್ಲಿ ಅಧ್ಯಾಪಕರಾಗಿ ಸೇರಿ ೧೯೯೨ರಲ್ಲಿ ನಿವೃತ್ತಿ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿ ಎಚ್ ಡಿ ಪಡೆದ ಮೊದಲ ಹೈ ಸ್ಕೂಲ್ ಅಧ್ಯಾಪಕ ಎಂಬ ಹೆಗ್ಗಳಿಕೆ .ಅಲ್ಲದೆ ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯ ಮತ್ತು ಮದ್ರಾಸ್ ವಿಶ್ವ ವಿದ್ಯಾಲಯ ಗಳಿಂದ ಪರೀಕ್ಷೆ ಉತ್ತೀರ್ಣ ರಾಗಿ ಪದವಿ . 

೧೯೬೦ ರಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ "ಶ್ರೀ ಸತ್ಯನಾರಾಯಣ ಯಕ್ಷಗಾನ ಕೂಟ "ಸ್ಥಾಪನೆ .ಯಕ್ಷಗಾನ ತರಬೇತಿ ತಾಳ ಮದ್ದಳೆ ಮತ್ತು ಬಯಲಾಟ ಪ್ರದರ್ಶನ .ಇವರು ಪ್ರಸಂಗ ಕರ್ತೃ,ಅರ್ಥದಾರಿ ಮತ್ತು ವೇಷಧಾರಿ ಕೂಡಾ . 

ಇವರ ಗುರು ಕನ್ನಡದೋಜ  ಪೆರಡಾಲ ಕೃಷ್ಣಯ್ಯ ಮತ್ತು ಸಹಪಾಠಿ ಅಡೂರ್ ವೆಂಕಟ್ರಾವ್ ಅವರಿಂದ ಅರ್ಥಗಾರಿಕೆಯ ಸೂಕ್ಷ್ಮಗಳ  ಕಲಿಕೆ ..೧೯೫೭ ರಲ್ಲಿ  ಹುಡುಗಿಯರಿಂದ ಮೊದಲ ಯಕ್ಷಗಾನ ಮಾಡಿಸಿದ ಶ್ರೇಯ ಇವರಿಗೆ . 

ಇದುವರೆಗೆ ೧೭೪ ಯಕ್ಷಗಾನ ಪ್ರಸಂಗಗಳನ್ನು ಪ್ರಕಟಿಸಿರುವ ಇವರು ಸಂಸ್ಕೃತ ,ಹಿಂದಿ ಭಾಷೆಯವೂ ಇದರಲ್ಲಿ ಸೇರಿರುವುದು ಗಮನಾರ್ಹ . ಇವರ ಮಾತೃ ಭಾಷೆ ಕರಾಡ್ ನಲ್ಲಿ ೩ ಮಹಾ ಕಾವ್ಯ ರಚಿಸಿದ್ದಾರೆ . ೫೧೦ ಪುಟಗಳ ಯಕ್ಷಗಾನ ಮಹಾ ಕಾವ್ಯ ವನ್ನು ರಚಿಸಿದ ಹೆಗ್ಗಳಿಕೆ . 

ಪುತ್ತೂರು ತಾಲೂಕು ೧೩ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ,ಹಲವು ಗ್ರಂಥಗಳ ಸಂಪಾದನೆ ಮತ್ತು ಸಹ ಸಂಪಾದನೆ .ಆಕಾಶವಾಣಿಯಲ್ಲಿ ವಾರದ ವ್ಯಕ್ತಿ ,ಸೀತಾನದಿ ಗಣಪಯ್ಯ ಪ್ರಶಸ್ತಿ ,ಪೊಳಲಿ ಶಾಸ್ತ್ರೀ ಪ್ರಶಸ್ತಿ ಯಂತಹ ಹತ್ತು ಹಲವು ಇವರನ್ನು ಅರಸಿ ಬಂದಿವೆ . 

ಸರಳ ಸಜ್ಜನ , ವಿನಯ ಭೂಷಣ ವಿದ್ವತ್ ಇವರ ಛಾಪು . 

ಇವರು ಆರೋಗ್ಯವಾಗಿದ್ದು ಇನ್ನೂ ಸಾಹಿತ್ಯ ಕಲಾ ಸೇವೆ ಮುಂದುವರಿಸಲಿ .

ಇವರ ಕೃತಿಗಳ ಪಟ್ಟಿ 



ಮಂಗಳವಾರ, ಮೇ 10, 2022

ಅಗಲಿದ ಮಿತ್ರ ಅಮೈ ವಸಂತ ಆಚಾರ್ಯ


 ಪುತ್ತುರಿನಲ್ಲಿ ನನಗೆ ಎಲ್ಲಾ ಸ್ತರದವರು ಮತ್ತು ವಿವಧ ಉದ್ಯೋಗದಲ್ಲಿ ಇರುವ ಮಿತ್ರರು ಇದ್ದಾರೆ . ನಾನು ಅವರೊಡನೆ ಮಾತು ಕತೆಯಿಂದ ಸಂತೋಷ ಪಡುತ್ತೇನೆ .ಅಂತವರಲ್ಲಿ ಒಬ್ಬರು ಮೂರು ತಿಂಗಳುಗಳ ಹಿಂದೆ ನಮ್ಮನ್ನು ಅಗಲಿದ ಶ್ರೀ ವಸಂತ ಆಚಾರ್ಯ .

ಇವರು ನಲುವತ್ತು ವರ್ಷ ಗಳಿಂದ ಅರುಣಾ ಥಿಯೇಟರ್ ಬಳಿ ವಾಚ್ ದುರಸ್ತಿ ಅಂಗಡಿ ನಡೆಸುತ್ತಿದ್ದರು .ಪುತ್ತೂರು ಹಾರಾಡಿ ಯಲ್ಲಿ ಮನೆ.ಮುಂಜಾನೆ  ವಾಕಿಂಗ್  ಹಾರಾಡಿ ಯಿಂದ ಕರ್ಮಳ  ವಿವೇಕಾನಂದ ಕಾಲೇಜ್ ಮೂಲಕ ನಗರಕ್ಕೆ ಬಂದು ಮುಖ್ಯ ರಸ್ತೆ ಯಲ್ಲಿ  ಬೊಳುವಾರು ಮೂಲಕ ವಾಪಾಸು .ನನಗೆ  ಎದುರು ಸಿಕ್ಕು ಒಂದು ನಮಸ್ಕಾರ ಉಭಯ ಕುಶಲೋಪರಿ . ನಾನು ಅವರ ಅಂಗಡಿಗೆ ವಾಚ್ ರಿಪೇರ್ ಇದ್ದರೆ ಅಥವಾ ಎದುರು ರಸ್ತೆಯಲ್ಲಿ ಹೋಗುತ್ತಿದ್ದರೆ ನಗು ಮುಖದ ಅವರ ಮಾತುಗಳು . 

ಇದ್ದಕ್ಕಿಂದ್ದಂತೆ ಹೋಗಿ ಬಿಟ್ಟರು .ನನಗೆ ತಿಳಿದಾಗ ತಿಂಗಳು ಕಳಿದಿತ್ತು.

ಪಂಖಾವರೋಹಣ

 



ನಮ್ಮ ಮನೆ ಜಗಲಿಯಲ್ಲಿ ಸೆಖೆಗಾಲಕ್ಕೆ ಆಗಲಿ ಎಂದು ಒಂದು ಫ್ಯಾನ್  ಹಾಕಿಸಿದ್ದೆವು .ಕಳೆದ  ಕೆಲವು  ತಿಂಗಳಿನಿಂದ  ಹಕ್ಕಿ  ಅದರ  ಮೇಲೆ ಗೂಡು  ಕಟ್ಟಲು ಶತ  ಪ್ರಯತ್ನ  ಮಾಡುತ್ತಿದೆ ,ದಿನವೂ  ಆ ಕಸವನ್ನು  ಗುಡಿಸುವುದೇ ಪ್ರಯಾಸ ಆಗ ತೊಡಗಿತು . ಹಕ್ಕಿಗಳು  ಕಡ್ಡಿ ಎಲೆ ಜತೆ  ಹಾವಿನ ಪೊರೆ ಎಲ್ಲೆಲ್ಲಿಂದಲೋ ಹೆಕ್ಕಿ  ತರುತ್ತಿದ್ದು ಅವುಗಳ ಸಂಗ್ರಹ ವೈವಿಧ್ಯ ಮತ್ತು ತಾಂತ್ರಿಕ ಜ್ಞಾನ  ಬೆರಗು  ಹುಟ್ಟಿಸುವಂತಹದು . 

ಹಕ್ಕಿಗಳ ಮರಳಿ ಯತ್ನವ ಮಾಡು ಎಂಬ  ಶ್ರಮ ಸುಮ್ಮನೆ ವ್ಯರ್ಥ ವಾಗುವುದು ಮತ್ತು ದಿನವಿಡೀ ಕಸ ಶೇಖರಣೆ  ಕಂಡು ಇಂದು ಮುಂಜಾನೆ ಆ ಫ್ಯಾನನ್ನು ಅವರೋಹಣ  ಮಾಡಿದೆನು .