ಬೆಂಬಲಿಗರು

ಶುಕ್ರವಾರ, ಏಪ್ರಿಲ್ 8, 2022

ನಂದರ ಬೆಟ್ಟು ದಾಸರ ನೆನಪು

 ನಂದರ ಬೆಟ್ಟು ದಾಸರ ನೆನಪು 

 

ಅಂಗ್ರಿ (ನನ್ನ ಹುಟ್ಟೂರು )ಗೆ ನೈಋತ್ಯ  ದಿಕ್ಕಿನಲ್ಲಿ ನಂದರ ಬೆಟ್ಟು  ಬೈಲು ಇದೆ . ಇಲ್ಲಿ ದಾಸ ಕುಟುಂಬಗಳು ಇದ್ದವು . ಇವರಲ್ಲಿ ಹಿರಿಯರು ಹಳ್ಳಿಯ  ಮನೆ ಮನೆ ಅಂಗಳಕ್ಕೆ' ಗೋವಿಂದಾ ಗೋವಿಂದಾ ' ಎಂದು   ಶಂಖ ಜಾಗಟೆ ಯೊಡನೆ ಬರುವರು . ಹಣೆಯಲ್ಲಿ ದೊಡ್ಡ ನಾಮ . ಒಂದು ಕೈಯಲ್ಲಿ ಜಾಗಟೆ ಮತ್ತು ಅದನ್ನು ಬಡಿಯುವ ಕೋಲು ,ಇನ್ನೊಂದು ಕೈಯ್ಯಲ್ಲಿ ಶಂಖ . ಒಂದೇ ಕೈಯಲ್ಲಿ ಜಾಗಟೆ ಮತ್ತು ಕೋಲು ಹಿಡಿದು ಲಯ ಬದ್ಧ ವಾಗಿ ಬಾರಿಸುವದು ಕಷ್ಟದ ಕೆಲಸ . ಮನೆಗಳಲ್ಲಿ ಅವರಿಗೆ ಬಾಯಾರಿಕೆ ಕೊಟ್ಟು , ಸೇರು ಭತ್ತ ಅಥವಾ ಅಕ್ಕಿ ಹಾಕುವರು . 

ಇವರ ಮನೆಯ ಇತರರು ಹಳ್ಳಿಯ ಮೊಬೈಲ್ ಫ್ಯಾನ್ಸಿ ಸ್ಟೋರ್ ಆಗಿದ್ದು ,ಪೆಟ್ಟಿಗೆಯಲ್ಲಿ ಬಳೆ ಮಣಿಸರಕು ಹೇರಿಕೊಂಡು ಮನೆ ಮನೆಗೆ ಬರುವರು . ಮನೆಯ ಹೆಂಗಸರು ಮಕ್ಕಳು ( ಮುಖ್ಯವಾಗಿ ಹುಡುಗಿಯರು )ಅವರ ಸುತ್ತ  ಸೇರುವರು . ಬಣ್ಣ ಬಣ್ಣದ ಬಳೆಗಳು ತಮಗೆ ಇಷ್ಟ ಪಟ್ಟದ್ದು ಹಾಕಿ ನೋಡುವರು .ಆಗೆಲ್ಲಾ ಗಾಜಿನ ಬಳೆಗಳೇ ಜಾಸ್ತಿ . ಎಳೆಯ ಶಿಶುಗಳಿಗೆ ಕರಿಮಣಿ ಬಳೆ 

ಇನ್ನು ಒಂದು ಮುಖ್ಯ ಐಟಂ ಪಟ್ಟೆ ನೂಲು . ಇದು ಬಹು ಉಪಯೋಗಿ ಸಾಧನ. ಮುಖ್ಯವಾಗಿ ಉಡಿದಾರಕ್ಕೆ(ದಪ್ಪಡ ಪತ್ತೆ ನೂಲು ) . ಉಳ್ಳವರು ಬೆಳ್ಳಿ ಬಂಗಾರದ ಉಡಿದಾರ  ಧರಿಸಿದರೆ ನಮಗೆಲ್ಲಾ ಇದುವೇ ಆಧಾರ (. ಉಡಿದಾರಕ್ಕೆ ಕೌಪೀನ . ). ಇನ್ನು ವಿವಾಹಿತ ಮಹಿಳೆಯರು ತಾಳಿ ಧಾರಣೆಗೆ ಇದನ್ನೇ ಉಪಯೋಗಿಸುತ್ತಿದ್ದರು . ಮದುವೆ ಮಂಗಳ ಕಾರ್ಯದಲ್ಲಿ ಕಂಕಣ ಕಟ್ಟಲು ,ಮಂತ್ರವಾದಿಗಳಿಗೆ ಮಂತ್ರಿಸಿ ಕೊಡಲು ಇದುವೇ ಬೇಕು .ಮೊನ್ನೆ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಡ್ರಿಪ್ ಹಾಕಲು ಮೊಣಕೈಯಿಂದ ಮಂತರಿಸಿದ  ನೂಲು ತೆಗೆಯಲು ಸುತಾರಂ ಒಪ್ಪಲಿಲ್ಲ . 

ಇವರ ಪೆಟ್ಟಿಗೆಯ ಇನ್ನೊಂದು ಅಮೂಲ್ಯ ವಸ್ತು ಕುಂಕುಮ .ಆಗೆಲ್ಲಾ ಈಗಿನಂತೆ ಬಿಂದಿ ಸ್ಟಿಕ್ಕರ್ ಅಂಟಿಸುವ ಪದ್ಧತಿ ಇರಲಿಲ್ಲ . ಹಣೆಗೆ ಜೇನು ಮಯಣ  ದ  ಪ್ರೈಮರ್ ಹಚ್ಚಿ ಅದರ ಮೇಲೆ  ಕುಂಕುಮದ ಬೊಟ್ಟು.ಉರುಟು ಬೊಟ್ಟು ಇಡಲು ಕೆಲವರು ಒಟ್ಟೆಮುಕ್ಕಾಲು ಉಪಯೋಗಿಸುತ್ತಿದ್ದರು .ನಮ್ಮ ಅಜ್ಜಿ ಹಣೆ ತುಂಬಾ ಕುಂಕುಮದ ಅಡ್ಡ ಪಟ್ಟಿ ಬೊಟ್ಟು ಇಡುತ್ತಿದ್ದರು .ಈಗ ನಮ್ಮಲ್ಲಿ  ಇಂತಹ ಸಿಂಧೂರ ತಿಲಕ ಇಲ್ಲ .  ಮಕ್ಕಳಿಗೆ ಲಾಲ್ ಗಂಧಾ ಎಂಬ ಕೆಂಪು ದ್ರವ ರೂಪದ ಬಣ್ಣ ಬರಲು ಆರಂಭವಾಗಿತ್ತು . 

ಹುಡುಗಿಯರ ಜಡೆಗೆ ಬಣ್ಣ ಬಣ್ಣದ ರಿಬ್ಬನ್ (ಇದನ್ನು ಟೇಪು ಎನ್ನುತ್ತಿದ್ದರು ),ಕ್ಲಿಪ್ ,ಬಾಚಣಿಕೆ ಎಲ್ಲಾ ಇವರ ಪೆಟ್ಟಿಗೆಯಲ್ಲಿ ಲಭ್ಯ . 

ನಾನು ಹಿಂದೆ ಬರೆದಿದ್ದ ಹಾಗೆ' ಲವ್ ಇನ್ ಟೋಕಿಯೋ 'ಎಂಬ ಹಿಂದಿ ಚಿತ್ರದಲ್ಲಿ ನಾಯಕಿ ತನ್ನ ಜಡೆಗೆ ಮೂರು ಬಣ್ಣದ ಪ್ಲಾಸ್ಟಿಕ್ ಗೋಲಿಗಳಿಗೆ ಎಲಾಸ್ಟಿಕ್ ದಾರ  ಕಟ್ಟಿ ಅದನ್ನು ಜಡೆ ಕೂದಲು ಬಂಧಿಸಿದ್ದು ,ಅದಕ್ಕೆ ಲವ್ ಇನ್ ಟೋಕಿಯೋ ಎಂದೇ ಹೆಸರು ಆಯಿತು .ನಮ್ಮ ಹಳ್ಳಿಯ ಹುಡುಗಿಯರು ಅದನ್ನು ಲವಿನ್ ಟಕಿ ಎಂದು ಕರೆಯುತ್ತಿದ್ದು ಬಳೆಗಾರನಲ್ಲಿ ಅದು ಇಲ್ಲವೇ ಎಂದು ವಿಚಾರಿಸುತ್ತಿದ್ದರು .

ಬುಧವಾರ, ಏಪ್ರಿಲ್ 6, 2022

ಬದಲಾವಣೆಯ ಹರಿಕಾರ ಶ್ರೀ ಶ್ರೀನಿವಾಸ್

             ಬದಲಾವಣೆಯ ಹರಿಕಾರ ಶ್ರೀ ಶ್ರೀನಿವಾಸ್ 


                       


ನನಗೆ  ಮುಂಜಾನೆ ವಾಕಿಂಗ್ ಮಾಡುವದುದರಿಂದ ಶರೀರಕ್ಕೆ ವ್ಯಾಯಾಮ ಮಾತ್ರವಲ್ಲ  ಮನಸಿಗೆ  ಉಲ್ಲಾಸ ಉಂಟಾಗುತ್ತದೆ .ವಿವಿಧ  ಪಕ್ಷಿಗಳು ,ಅವುಗಳ ಸಂಗೀತ ಮತ್ತು ಬಗೆ ಬಗೆಯ ಪ್ರಾಣಿಗಳು ,ಪ್ರಕೃತಿಯಲ್ಲಿ ಕಾಣುವ ಹೊಸತು ಇವೆಲ್ಲಾ ಚೇತೋಹಾರಿ  ಅಂಶಗಳು ಆದರೆ ಅಲ್ಲದೆ  ವಾಕಿಂಗ್ ಸಮಯದಲ್ಲಿ ಬೇರೆ ವಾಕ್ಸ್ ಆ ಲೈಫ್ (walk of  life )ನ  ಜನರು ಸಿಗುತ್ತಾರೆ . ಅವರೊಡನೆ ಉಭಯ ಕುಶಲೋಪರಿ ವಿನಿಮಯ ಕೂಡಾ ನನಗೆ ಇಷ್ಟ . 

                  ಅವರಲ್ಲಿ ಒಬ್ಬರು ಶ್ರೀನಿವಾಸ್ .ಇವರು ವಿವೇಕಾನಂದ ಕಾಲೇಜು ರೋಡ್ ನಲ್ಲಿ ಸ್ವಸ್ತಿಕ್ ಟೈಲರ್ ಎಂಬ  ಅಂಗಡಿ ಇಟ್ಟಿದ್ದಾರೆ .ಮುಂಜಾನೆ ಆರು ಗಂಟೆಗೆಲ್ಲಾ ಹಾಜರ್ . ಅಂಗಡಿ ತೆರೆದು ದೇವರ ಪಟಕ್ಕೆ  ನಮಸ್ಕರಿಸಿ ಕೆಲಸದಲ್ಲಿ ನಿರತರಾಗಿರುತ್ತಾರೆ . ನಮಗೆ ಸ್ಪೋಂಟೆನಿಯಸ್ ಮೈತ್ರಿ.ನನ್ನ ನೆರಳು ಹಾಯ್ದೊಡನೆ ಓಡಿ ಹೊರ ಬಂದು ನಮಸ್ಕಾರ ಮಾಡುವರು.

ಶ್ರೀನಿವಾಸ್  ಮೂರು ದಶಕ  ಬೆಂಗಳೂರಿನಲ್ಲಿ ಟೈಲರ್ ವೃತ್ತಿ ನಡೆಸಿ ಈಗ ಪುತ್ತೂರಿಗೆ ಬಂದು ನೆಲೆಸಿರುವ ಇವರ ಹುಟ್ಟೂರು  ಅನಂತಾಡಿ. ಇವರ  ಸ್ಪೆಷಾಲಿಟಿ ಎಂದರೆ  ಆಲ್ಟರೇಷನ್ ಅಥವಾ ಬದಲಾವಣೆ .ಸಾಮಾನ್ಯವಾಗಿ  ಸಿಂಪಿಗರು  ಈ ಕೆಲಸ ಇಷ್ಟ ಪಡುವುದಿಲ್ಲ . ಇವರ ಮುಖ್ಯ ವೃತಿಯೇ ಅದು . 

ಬಾಲಂಗೋಚಿ : ಇವರು ಬಟ್ಟೆ ಮಾತ್ರ ಅಲ್ಟ ರೇಷನ್ ಮಾಡುವರು .ಲೇಡಿ ಯನ್ನು ಜೆಂಟ್ಸ್ ಮತ್ತು ವೈಸ್ ವೆರ್ಸ ಅಲ್ಲ . ಹಿಂದೆ ಮನೆ ತುಂಬಾ ಮಕ್ಕಳು ಇದ್ದಾಗ ಅಣ್ಣನ ಹಳೆ ಅಂಗಿ ತಮ್ಮ ,ಅಕ್ಕನ ಲಂಗ ರವಿಕೆ ತಂಗಿ ಸಣ್ಣ ದೊಡ್ಡ ಮಾಡಿಸಿ ಹಾಕುವುದು ಇತ್ತು . ಬೆಳೆಯುವ ಮಕ್ಕಳಿಗೆ ವರ್ಷಕ್ಕೇ ಹೊಲಿಸಿದ ಉಡುಪು ಟೈಟ್ ಆಗುವುದು ಸಹಜ .



ಮಂಗಳವಾರ, ಏಪ್ರಿಲ್ 5, 2022

ಶೀತದ ಔಷಧಿಗಳು ಮತ್ತು ಅಮಲು

    ಶೀತದ ಔಷಧಿಗಳು ಮತ್ತು ಅಮಲು 

 

ಇಂದು ಬಿಡುಗಡೆಯಾದ ಹಿರಿಯರು ಬಡೆಕ್ಕಿಲ ಡಾ ಶ್ರೀಧರ ಭಟ್ ಅವರ 'ಸಾರಂಗ ನಿನ್ನ ನೆನಪಿನಲ್ಲಿಯೇ 'ಓದುತ್ತಿದ್ದೆ .ಅದರಲ್ಲಿ ಒಂದು ದಿನ ಡಾ ಭಟ್ ಅವರು ಮುಖ್ಯವಾದ ಒಂದು ವಿಷಯ ಚೆನ್ನಾಗಿ ತಯಾರು ಮಾಡಿ ಪಾಠ ಮಾಡುತ್ತಿರುವಾಗ ಓರ್ವ ವಿದ್ಯಾರ್ಥಿನಿ ನಿದ್ದೆ ತೋಗುತ್ತಿರುವದು ಕಂಡು ಬೇಸರ ಪಟ್ಟರು . ಬುದ್ದಿವಂತ ಹುಡುಗಿ . ಕಾರಣ ವಿಚಾರಿಸಲು ಆಕೆಗೆ  ಫ್ಲೂ ಜ್ವರ ,ಡಾಕ್ಟರರು ಆಂಟಿಬಯೋಟಿಕ್ ಕೊಟ್ಟಿದ್ದಾರೆ ;ಸ್ವಲ್ಪ ನಿದ್ದೆ ತೂಗ ಬಹುದು ಎಂದು ಹೇಳಿದ್ದಾರೆ .ಇದೇ ವಿಷಯದ ನಿಮ್ಮ ಹಿಂದಿನ ಪಾಠ ಕೇಳಿ ಇದನ್ನು ತಪ್ಪಿಸ ಬಾರದು ಎಂದು ಹಠ ದಿಂದ ತರಗತಿಗೆ ಬಂದುದು ಎಂದು ತಿಳಿದು ಬಂತು . 

ಇಲ್ಲಿ ಒಂದು ವಿಚಾರ .ಫ್ಲೂ ವೈರಸ್ ಜನ್ಯ .ಅದಕ್ಕೆ ಆಂಟಿಬಯೋಟಿಕ್ ಬೇಡ .ಒಂದು ವೇಳೆ ಸೇವಿಸಿದರೂ ಅದರಿಂದ ಅಮಲು ಬರದು .ಆದರೆ ಶೀತ ಕೆಮ್ಮಿಗೆ ಸಿರಪ್ ಮತ್ತು ಮಾತ್ರೆ ರೂಪದಲ್ಲಿ ಕೊಡುವ ಆಂಟಿ ಹಿಸ್ಟಮಿನ್ ಎಂಬ ಔಷಧಿ ನಿದ್ದೆ ತೂಗಿಸುವುದು ,ಏಕಾಗ್ರತೆ ತಪ್ಪಿಸುವುದು ಮಾಡ ಬಹುದು . ಕ್ಲೋರ್ ಫೆನಿರಮಿನ್ ಮಾಲಿಯೇಟ್ ,ಫೆನಿರಮಿನ್ ಮಾಲಿಯೇಟ್ ,ಡೈ ಫೆನ್ ಹೈಡ್ರಾಮಿನ್  ಇತ್ಯಾದಿ ಮೊದಲನೇ ಪೀಳಿಗೆ ಯ ಮತ್ತು   ಸೆಟ್ರಿ ಜಿನ್ ,ಲೊರಟಿದಿನ್  ನಂತಹ ಎರಡೇ ಪೀಳಿಗೆಯ ಆಂಟಿ ಹಿಸ್ಟಮಿನ್ ಔಷಧಿಗಳು ಅಮಲು ಉಂಟು ಮಾಡ ಬಲ್ಲವು .ಅದರಲ್ಲೂ ಒಂದನೇ ಪೀಳಿಗೆಯ ಔಷಧಿಗಳು ಮದ್ಯ ಪಾನಕ್ಕಿಂತಲೂ ಹೆಚ್ಚು ಇದ್ದು ಇವುಗಳನ್ನು ಸೇವಿಸಿದವರು ವಾಹನ ಚಲಾವಣೆ ಮಾಡ ಬಾರದು . ಪ್ರಿಸ್ಕ್ರಿಪ್ಷನ್ ಇಲ್ಲದೆ ಓವರ್ ದಿ ಕೌಂಟರ್ ಸಿಗುವ ಕೆಮ್ಮು ಶೀತದ ಔಷಧಿ ಗಳಲ್ಲಿ ಇಂತಹ ರಾಸಾಯನಿಕಗಳು ಇರುತ್ತವೆ . 

ಈಗ ಪರೀಕ್ಷಾ ಸೀಸನ್ . ಅದರ ಜೊತೆ ಶೀತ ಜ್ವರಗಳೂ ಇವೆ . ಪರೀಕ್ಷಾರ್ಥಿಗಳು ಇಂತಹ ಔಷಧಿ ಸೇವಿಸಿ ಹೋದರೆ ಓದಿದ್ದು ನೆನಪಿಗೆ ಬಾರದೇ ಹೊಂದಿತು . 

(ಎಲ್ಲರಲ್ಲೂ ಒಂದೇ ತರಹ ಅಮಲು ಉಂಟಾಗುವದಿಲ್ಲ ,ಕೆಲವರಲ್ಲಿ ಹೆಚ್ಚು ,ಕೆಲವರಲ್ಲಿ ಕಮ್ಮಿ ಇರ ಬಹುದು .ಆದರೂ ರಿಸ್ಕ್ ಯಾಕೆ ?)

ಕಣ್ಮರೆಯಾದ ಗೋಡೆ ಫೋಟೋ ಗಳು

 

ಲೇಖಕ ವಸುದೇಂದ್ರ ಅವರ' ರಕ್ಷಕ ಅನಾಥ ' ಎಂಬ ಪುಸ್ತಕದಲ್ಲಿ ಅದೇ ತಲೆ ಬರಹದ ಲೇಖನ ಇದೆ . ಬಳ್ಳಾರಿ ಯ ತಮ್ಮ ಮನೆಯನ್ನು ಬೆಂಗಳೂರಿಗೆ ಬದಲಿಸುವಾಗ ಎದುರಿಸಿದ ಒಂದು ಸಮಸ್ಯೆ .ಬಳ್ಳಾರಿ ಯ ಅವರ ಮನೆಯಲ್ಲಿ ,ಹಿಂದಿನ ಮನೆಗಳಂತೆ ,ಫ್ರೇಮ್ ಹಾಕಿ  ಗೋಡೆಗೆ ನೇತು ಹಾಕಿದ್ದ ಹಲವು ದೇವರ ಫೋಟೋ ಗಳನ್ನು ಬೆಂಗಳೂರಿನ ಆಧುನಿಕ ಮನೆಯಲ್ಲಿ ಎಲ್ಲಿ ಪುನರ್ವಸತಿ ಕಲ್ಪಿಸುವದು ?ಈಗಿನ ಮನೆಗಳಲ್ಲಿ ಗೋಡೆಗೆ ಮೊಳೆ ಹೊಡೆಯುವಂತಿಲ್ಲ . 

ಹಿಂದೆ ಮನೆಯ ಮುಖ್ಯವಾಗಿ ಚಾವಡಿಯ ಗೋಡೆಯಲ್ಲಿ ಲಕ್ಷ್ಮಿ ,ಸರಸ್ವತಿ ,ತಿರುಪತಿ ತಿಮ್ಮಪ್ಪ ಮತ್ತು ಮನೆ ದೇವರು ಹೀಗೆ ಹಲವು ಚಿತ್ರಗಳು ಫ್ರೇಮ್ ಹಾಕಿಸಿ ನೇತಾಡುತ್ತಿದ್ದವು . ಕೆಲವು   ಕ್ಯಾಲೆಂಡರ್ ಕಟ್ ಮಾಡಿ ಫ್ರೇಮ್ ಹಾಕಿದಂತಹವು . ಈ ಚಿತ್ರಗಳ ಆಕಡೆ ಈ ಕಡೆ ಮನೆಯ ಯಜಮಾನ ,ಅವನ ಮಕ್ಕಳು ಇವರ ಮದುವೆ ಯಾದಾಗ ಸ್ಟುಡಿಯೋ ದಲ್ಲಿ ತೆಗೆಸಿದ ಬ್ಲಾಕ್ ಅಂಡ್ ವೈಟ್ ಫೋಟೋ ಗಳು . ಶಾಲೆಯ ಸೆಂಡ್ ಆಫ್ ಗ್ರೂಪ್ ಫೋಟೋ ಗಳು (ಇವುಗಳಲ್ಲಿ ಮೊದಲ ಸಾಲಿನಲ್ಲಿ ಕೈಯ್ಯಲ್ಲಿ  ವಾಚ್ ತೋರಿಸಿ ಕೊಂಡು ನಿಂತ ಹುಡುಗಿಯರು ),ಎಳೆಯ ಮಕ್ಕಳ ಭಾವ ಚಿತ್ರ ಇತ್ಯಾದಿ . ಇವುಗಳು ಧೂಳು ಮಯವಾಗಿ ಇರುತ್ತಿದ್ದಲ್ಲದೆ ಹಿಂದುಗಡೆ ಚೇಡರ ಬಲೆ ಹುಳ ಹುಪ್ಪಟೆ ಹಲ್ಲಿ ಮರಿಗಳು ದೇವರ ಆಶ್ರಯ ದಲ್ಲಿ ನಿಶ್ಚಿಂತೆ ಯಾಗಿ ಇರುತ್ತಿದ್ದವು . ಫ್ರೇಮ್ ನಿಂದ ಕುಟ್ಟೆ ಹುಡಿ ಉದುರುದು . ದೊಡ್ಡಚಿತ್ರಗಳ ಮೇಲ್ಬಾಗ ಎದುರಿಗೆ  ಬಗ್ಗಿಸಿ  ಕಟ್ಟುತ್ತಿದ್ದರು ;ಅದರ ಹಿಂದೆ ಕನ್ನಡಕ ,ಊದು ಬತ್ತಿ ಕಟ್ಟು ಇತ್ಯಾದಿ ಇಡುವರು .

ಮನೆಗೆ ನೆಂಟರು ಬಂದರೆ ಬೆಲ್ಲ ನೀರು ಕುಡಿದು ಡ್ರೈವರ್ ಮನಸಿದ್ದರೆ ಈ ಪಟಗಳನ್ನು  ನೋಡುವರು . ಈಗಿನ ಹಾಗೆ ಟೈಮ್ ಪಾಸ್ ಆಲ್ಬಮ್ ನೋಡುವ ಪದ್ಧತಿ ಇರಲಿಲ್ಲ . 

ಇನ್ನು ಉಳಿದ ಜಾಗಗಳಲ್ಲಿ ಕ್ಯಾಲೆಂಡರ್ ಗಳು .ಡಿಸೆಂಬರ್ ತಿಂಗಳಿನಿಂದ ಅವುಗಳ ಭೇಟೆ ಆರಂಭ . ಜವುಳಿ ಶೆಟ್ಟರ ಬಳಿ ಜಯಂತಿಲಾಲ ಬ್ರದರ್ಸ್ ,ಸಾಹೇಬರ ಅಂಗಡಿಯಿಂದ ಅಗರಬತ್ತಿ ಕಂಪನಿಯ ,ಮತ್ತು ಮಂಗಳೂರಿನಿಂದ ದಕ ಕೃಷಿಕರ ಸಹಕಾರಿ ಮಾರಾಟ ಸಂಘದ ಕ್ಯಾಲೆಂಡರ್(ಹಾಗೆ ಹತ್ತು ಹಲವು ) . ದೇವರ ಪಟ ಇದ್ದರೆ ಆದ್ಯತೆ . 

ಇದರ ಜತೆ  ಕೊಡೆಯ ಕಡ್ಡಿಯನ್ನು ಬಗ್ಗಿಸಿ  ,ಅದರಲ್ಲಿ ಬಂದ ಮದುವೆ ,ಮುಂಜಿ ಮತ್ತು  ಶ್ರಾದ್ದ ಇತ್ಯಾದಿಗಳ ಆಮಂತ್ರಣ ಗಳನ್ನು ನೇತು ಹಾಕುವರು .ಪಂಚಾಂಗ ಕೂಡಾ . ಹಿಂದೆ ಹಳ್ಳಿಗಳಲ್ಲಿ (ಕರೆಂಟ್ ,ಫೋನ್ ಇತ್ಯಾದಿ ) ಬಿಲ್ಲು ಗಳ ಕಾಟ ಇರಲಿಲ್ಲ .

ಇಂತಹ ಫೋಟೋ  ಗಳು ಎಲ್ಲಾ ಧರ್ಮದವರ ಮನೆಯ್ಲಲೂ ಅವರವರ ಭಾವ ಭಕುತಿಗೆ ತಕ್ಕಂತೆ  ಇರುತ್ತಿದ್ದವು . ಬಸ್ ಗಳಲ್ಲಿ  ಮಾತ್ರ ಸರ್ವ ಧರ್ಮ ಸಮನ್ವಯತೆ ಸಾರುವಂತೆ ಡ್ರೈವರ್ ಹಿಂದೆ  ಮಧೂರು ಗಣಪತಿ ,ಜೀಸಸ್ ಮತ್ತು ಕಾಬಾದ  ಚಿತ್ರಗಳನ್ನು ಹಾಕಿ ದಿನಾಲೂ ಅದಕ್ಕೆ ಮಾಲೆ ಹಾಕಿ ಸಿಬ್ಬಂದಿ ನಮಸ್ಕರಿಸುತ್ತಿದ್ದರು . 

ಸೋಮವಾರ, ಏಪ್ರಿಲ್ 4, 2022

ಯುಗಾದಿ

 

                                           



ಮೊನ್ನೆ ಚಂದ್ರಮಾನ ಯುಗಾದಿ ;ನಮ್ಮಲ್ಲಿ ಸಾಮಾನ್ಯವಾಗಿ  ಸೌರಮಾನ ಯುಗಾದಿ ಅಥವಾ ವಿಷು ಹಬ್ಬ ಹೆಚ್ಚು ಆಚರಣೆಯಲ್ಲಿ ಇದ್ದರೂ ಒಂದು ಪಾಯಸ ಮಾಡುವುದು ಉಂಟು . ಎಲ್ಲಕ್ಕಿಂತ ಮುಖ್ಯ ಹೊಸ ಪಂಚಾಂಗ .ನಮ್ಮಲ್ಲಿ ದಶಕಗಳಿಂದ ವೈಜಯಂತಿ ಪಂಚಾಂಗ .ಅದರ ಮುಖ ಪುಟದಲ್ಲಿ ಮೀಸೆ ಹೊತ್ತ ಬಾಲಗಂಗಾಧರ ತಿಲಕರ ಮತ್ತು ವೈ ವೆಂಕಟೇಶ ಕೇತಕರ ಪಟ . 

ಬಂದ ಕೂಡಲೇ ಓದುವುದು ಸಂವತ್ಸರ ಭವಿಷ್ಯ .ಈ ವರ್ಷ ಎಷ್ಟು ಕೊಳಗ ಮಳೆ ಬೀಳುವುದು ,ಅದರಲ್ಲಿ ಸಮುದ್ರಕ್ಕೆ ಎಷ್ಟು ,ಭೂಮಿಗೆ ಎಷ್ಟು ಇತ್ಯಾದಿ .ಆ ಮೇಲೆ ನಮ್ಮ ರಾಶಿ ಭವಿಷ್ಯ . ಅದು ಆಶಾಜನಕ ಇದ್ದರೆ ಓಕೆ .ಇಲ್ಲದಿದ್ದರೆ ಪತ್ರಿಕೆಗಳ ಯುಗಾದಿ ಸಂಚಿಕೆಯನ್ನು ನೋಡುವುದು .ಹೆಚ್ಚಾಗಿ ಅವು ಒಳ್ಳೆಯದನ್ನೇ ಬರೆಯುವವು .ಬೆಸ್ಟ್ ಆಫ್ ಆಲ್ ನಮಗೇ ಎಂದು ತಿಳಿದು ಸಂತೋಷ ಪಡುವುದು .

ಪಂಚಾಂಗದಲ್ಲಿ ಗೌಳೀ ಪತನ ಫಲಂ ಎಂದು ಒಂದು ಕಾಲಂ ಇದೆ .ಹಳ್ಳಿ ಬಿದ್ದುದರ ಬಗ್ಗೆ .ನಮ್ಮ ಶರೀರದ ಯಾವ ಭಾಗದಲ್ಲಿ ಬಿದ್ದರೆ (ನಮಗೆ ,ಹಲ್ಲಿಗೆ ಅಲ್ಲ )ಏನು ಸೂಚನೆ ?ನಡು ತಲೆಗೆ ಬಿದ್ದರೆ ಮೃತ್ಯು ,ಬಲ ಭುಜಕ್ಕೆ ಬಿದ್ದರೆ ಜಯ ಮತ್ತು ಸುಖ ಇದೆ .ಗಂಡಸರಿಗೆ ಬೇರೆ ಹೆಂಗಸರಿಗೆ ಬೇರೆ . ಒಂದು ವೇಳೆ ತಲೆಗೆ ಬಿದ್ದು ಭುಜಕ್ಕೆ ತಾಗಿ ಕೆಳಗೆ ಬಿದ್ದರೆ?ಬಾಲ್ಯದಲ್ಲಿ ಹಾವು ಬಾರಿ ಹಲ್ಲಿ ಮೈಮೇಲೆ ಬಿದ್ದಾಗ ಹೆದರಿ ಪಂಚಾಂಗ ಓದಿ ಸಮಾಧಾನ ಪಟ್ಟುದೋ ಅಥವಾ ಭಯ ಪಟ್ಟು ದೇವರಿಗೆ ನಮಸ್ಕಾರ ಮಾಡಿದ್ದೂ ಇದೆ .

ವೈಜಯಂತಿ ಪಂಚಾಂಗ ದಲ್ಲಿ ನಾನು ಮೆಚ್ಚಿದ್ದು ಇತ್ತೀಚೆಗಿನ ವಾಸ್ತು ಗೀಳನ್ನು ಅವರು ವಿಮರ್ಶಿದ್ದು .

 

ಶನಿವಾರ, ಏಪ್ರಿಲ್ 2, 2022

ಸೇಮೆದ ಅಡ್ಯೆ

                        ಅರ್ಥ ಶಾಸ್ತ್ರದಲ್ಲಿ  ಇನ್ಕ್ಲ್ಯೂಸಿವ್ ಗ್ರೋಥ್ ,ಈಕ್ವಾಲೈಸರ್ ಇತ್ಯಾದಿ ಶಬ್ದಗಳು ಇವೆ . ಸಂದರ್ಭಕ್ಕೆ ಅನುಗುಣವಾಗಿ ಅವುಗಳಿಗೆ ಮಹತ್ವ ಇದೆ . ಅಡಿಗೆಯಲ್ಲಿ ಎಲ್ಲರನ್ನೂ ಒಳ ಗೊಳ್ಳ್ಳುವ ತಿಂಡಿ ಶ್ಯಾವಿಗೆ (ಸೇಮಗೆ ,ಸೇಮೆದ ಅಡ್ಯೆ). ಇನ್ಕ್ಲ್ಯೂಸಿವ್ ಇನ್ ಕುಕಿಂಗ್ .  ಯಾಕೆಂದರೆ ಒಬ್ಬರಿಂದ ಇದನ್ನು ಮಾಡುವುದು ಕಷ್ಟ . ಒಬ್ಬರು ಉಂಡೆ ಹಾಕಿ  ಶ್ಯಾವಿಗೆ ತೆಗೆದರೆ ಇನ್ನೊಬ್ಬರು ಒತ್ತುವುದು . ಹಿಂದೆ ಇದ್ದ ಕುದುರೆ ಮುಟ್ಟು ಒತ್ತಲು ಎರಡು ಮೂರು ಮಂದಿ ಸೇರುತ್ತಲಿದ್ದರು . ಹಿಂದೆ ನಮ್ಮಲ್ಲಿ ಅಂತಹ ಮರದ ಮುಟ್ಟು (ಮಣೆ )ಇದ್ದು  ಅದರ ಮೇಲೆ ಕಬ್ಬಿಣದ ರಾಡ್  ಒಂದು  ಕಡೆ ಕಿಟಿಕಿಯ ಅಡ್ಡ (ಅಥವಾ ಸರಳು )ಗೆ ಸಿಕ್ಕಿಸಿ ಕುದುರೆ ಮೇಲಿಂದ ಹಾದ ಇನ್ನೊಂದು ಬದಿಯನ್ನು ನಾವು ಮಕ್ಕಳು ಹಿಡಿದು ನೇಲುತ್ತಿದ್ದೆವು ;ಅಥವಾ ಹಿರಿಯ ಗಂಡಸರು ಒತ್ತುವರು . ಸಾಮೂಹಿಕ ಒಳಗೊಳ್ಳುವಿಕೆ .ಇನ್ನು ಗಂಡು ಹೆಣ್ಣು ಮಕ್ಕಳು ಎಲ್ಲರೂ ಸಮಾನವಾಗಿ ಸೇರಿ ಮಾಡುತ್ತಿದ್ದರಿಂದ ,ಸಮಾನತೆ ಯ ಸಂದೇಶ ಕೂಡಾ ಇರುತ್ತಿತ್ತು . ಬೇರೆ ತಿಂಡಿಗಳ ತಯಾರಿಯತ್ತ ಗಂಡಸರು ಸುಳಿಯುವುದು ಕಡಿಮೆ . 

ನಾನು ಅಂದು ಕೊಳ್ಳುತ್ತಿದ್ದೆ ,ಇಷ್ಟು ಕಷ್ಟ ಪಟ್ಟು ಅಕ್ಕಿ ಉಂಡೆಯನ್ನು ಉದುರು ಉದುರು ಮಾಡಿ ತಿನ್ನುವುದು ಯಾಕೆ ?ಹಾಗೇ ತಿನ್ನ ಬಹುದಲ್ಲಾ ಎಂದು . ಏಕತಾನತೆ ತಪ್ಪಿಸುವುದು ಒಂದು ಉದ್ದೇಶ ಆದರೆ ಎಲ್ಲರೂ ಸೇರಿ ಒಂದು ತಿಂಡಿ ಹಬ್ಬ ಮಾಡುವುದು ಕೂಡಾ ಇನ್ನೊಂದು ಇರಬೇಕು . 

ಶ್ಯಾವಿಗೆ ಗೆ  ಯಾವಾಗಲೂ ಬಾಳೆಹಣ್ಣು ರಸಾಯನ ಇರುತ್ತಿದ್ದು ನಮಗೆ ಆಕರ್ಷಣೆ .  ನಮ್ಮಲ್ಲಿ ಕೊಡಗಾಸನ ಹೂವಿನ ಸಾಂಬಾರು ಕೂಡಾ ಅದರೊಡನೆ ಇರುತ್ತಿತ್ತು . ಶ್ಯಾವಿಗೆಗೆ ನೂಕಡ್ಯೆ ಎಂದೂ ಕರೆಯುವರು .ನೆಂಟರು ಬಂದು ಬಹಳ ದಿನ ಠಿಕಾಣಿ ಮಾಡಿದರೆ  ಈ ತಿಂಡಿ ಮಾಡಿದರೆ ಅವರು ಹೊರಡ ಬಹುದು ಎಂಬ ಸೂಚನೆ . 

ಶ್ಯಾವಿಗೆ ಮಣೆ ಅದರಲ್ಲೂ ಅದರ ಕೊಂಡೆ ತೊಳೆಯುವುದು ಕಿರಿ ಕಿರಿ ಕೆಲಸ .ನನ್ನ ತಮ್ಮ  ನಾರಾಯಣ ಸೇಮಿಗೆ  ಮಣೆ ಕೊಂಡೆ ಕೂಡಾ ಸರಿಯಾಗಿ ತೊಳೆಯುವ ಡಿಶ್ ವಾಷರ್(ಪಾತ್ರೆ ತೊಳೆಯುವ ಯಂತ್ರ ) ಬಂದರೆ ಮಾತ್ರ ತೆಗೆದು ಕೊಳ್ಳ ಬಹುದು ಎಂದು ಆಗಾಗ ಹೇಳುವುದುಂಟು . 

ಇಂದು ಮುಂಜಾನೆ ಸೋಫಾದಲ್ಲಿ ಕುಳಿತು ಯುಕ್ರೈನ್ ,ಶ್ರೀಲಂಕಾ ಮತ್ತು ನಮ್ಮದೇ ಹಿಜಾಬ್ ಪೆಟ್ರೋಲ್ ಧಾರಣೆ ಇತ್ಯಾದಿಗಳ  ಪರಿಹಾರ ಬಗ್ಗೆ ಗಹನವಾಗಿ ಆಲೋಚಿಸುತ್ತಿರುವಾಗ ನನ್ನ ಹೆಂಡತಿ ಶಾವಿಗೆ ಒಟ್ಟಲು ಬನ್ನಿರಿ ಎಂದು ನನ್ನನ್ನು ಈ ಯಕಃಶ್ಚಿತ್ ಕಾರ್ಯಕ್ಕೆ ಕರೆದಾಗ ನಿಂತ ನೆಲಕ್ಕೆ ಇಳಿದು ಅಡಿಗೆ ಮನೆಗೆ ಹೋಗ ಬೇಕಾಯಿತು . ಆಗ ಬಂದ ಕೋಪ ತಿಂದು ಪರಿಹಾರ ಆಯಿತು ಅನ್ನಿ .

                                           Buy Online Mangalore Store - Akki Shavige Mane

                                      


Malnad - ಮಲೆನಾಡ ವಿಶೇಷ ಒತ್ತು ಶಾವಿಗೆ : ನಮ್ಮ ಹಳ್ಳಿಮನೆಯಲ್ಲಿ... 

ಕೊನೆ ಚಿತ್ರದ ಮೂಲಕ್ಕೆ ಆಭಾರಿ

ಶುಕ್ರವಾರ, ಏಪ್ರಿಲ್ 1, 2022

ರಕ್ತ ದಾನ

                                   Blood components separated after spin-down in a collection tube. Blood... |  Download Scientific Diagram

 

ಅನ್ನದಾನಂ ಪರಂ ದಾನಂ ವಿದ್ಯಾದಾನಮತಃ ಪರಮ್| ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂ ವಿದ್ಯಯಾ|| - ದಾನಗಳಲ್ಲಿ ಅನ್ನದಾನವು ಶ್ರೇಷ್ಠವಾದ ದಾನವಾಗಿದೆ. ಆದರೆ ವಿದ್ಯಾದಾನವು ಅನ್ನದಾನಕ್ಕಿಂತಲೂ ಮಿಗಿಲಾಗಿದೆ. ಏಕೆಂದರೆ ಅನ್ನದಿಂತ ಸಿಗುವ ತೃಪ್ತಿಯು ಕ್ಷಣಿಕವಾದುದಾದರೆ, ವಿದ್ಯೆಯಿಂದ ಜೀವನವಿಡೀ  ದೊರೆಯುತ್ತದೆ. 

ಎಂಬ  ಸುಭಾಷಿತ ನಮಗೆ ಶಾಲೆಯಲ್ಲಿ ಹೇಳಿ ಕೊಡುತ್ತಿದ್ದರು .ಭಹುಶಃ  ಈ ಶ್ಲೋಕ  ರಚನೆ ಆದಾಗ  ರಕ್ತ ದಾನ ಇದ್ದಿರಲಿಕ್ಕಿಲ್ಲ .ಇದ್ದರೆ ಅದಕ್ಕೆ  ಪ್ರಾಶಸ್ತ್ಯ ಕೊಡುತ್ತಿದ್ದರು .

ಮನುಷ್ಯ ಮನುಷ್ಯರೊಳಗೆ  ಜಾತಿ ಮತ ದ್ವೇಷ  ಹುಟ್ಟು ಹಾಕಿ ಸಂತೋಷ ಪಡುವವರಿಗೆ ಆಸ್ಪತ್ರೆಯಲ್ಲಿ ರಕ್ತ ತೆಗೆದು ಕೊಳ್ಳುವಾಗ ಜಾತಿ ನೋಡುತ್ತೇವೆಯೇ ಎಂಬ  ವೇದಾಂತ ನಿಜಕ್ಕೂ ಸರಿ . ಆದರೆ ರಕ್ತದಲ್ಲಿಯೇ ಗುಂಪುಗಾರಿಕೆ ಮತ್ತು ಜಾತಿ ಇದೆಯೆಂದು ಕಾರ್ಲ್  ಲ್ಯಾಂಡ್  ಸ್ಟೀನರ್ ಎಂಬ ವಿಜ್ಞಾನಿ  ೧೯೦೦ ರಲ್ಲಿ  ಕಂಡು ಹಿಡಿದನು . ಇದರಿಂದ ರಕ್ತದಾನ ದ ಕ್ರಾಂತಿಯೇ ಆಗಿ  ರಕ್ತಸ್ರಾವ ಇತ್ಯಾದಿ ಕಾರಣಗಳಿಂದ ಮೃತ್ಯು ದವಡೆಗೆ ಹೋಗಿದ್ದ ಹಲವು ಜೀವಗಳು ಉಳಿದವು . ರಕ್ತ ಕೊಡುವಾಗ ರಕ್ತ  ಜಾತಿ ಹೊಂದಾಣಿಕೆ ನೋಡಿಯೇ ಕೊಡುವರು . ಇದನ್ನು ಗ್ರೂಪಿಂಗ್ ಮತ್ತು ಕ್ರಾಸ್ ಮ್ಯಾಚಿಂಗ್ ಎನ್ನುವರು . 

ರಕ್ತದಲ್ಲಿ ಕೆಂಪು ರಕ್ತ  ಕಣ  ಬಿಳಿ ರಕ್ತ ಕಣ ,ಪ್ಲಾಟಿಲೆಟ್ ಎಂಬ ಮುಖ್ಯ ಕಣಗಳೂ ಪ್ಲಾಸ್ಮಾ ಎಂಬ ದ್ರವವೂ ಸೇರಿದೆ . 

ಮುಖ್ಯ ರಕ್ತ ಗುಂಪುಗಳ ಹಣೆಪಟ್ಟಿ ಕೆಂಪು ರಕ್ತ ಕಣಗಳಲ್ಲಿ  ಇರುವುದು .  ಸಾಮಾನ್ಯವಾಗಿ ರಕ್ತ ಕೊಡುವುದು ಕೆಂಪು ರಕ್ತ ಕಣಗಳ  ಮರು ಪೂರಣೆಗೆ . ನಖ ಶಿಖಾಂತ್ಯ  ಪ್ರಾಣ ವಾಯು ಸಾಗಿಸುವುದು ಅವು ತಾನೇ . 

 

ಹಿಂದೆ  ಇಡೀ ರಕ್ತ ಕೊಡುತ್ತಿದ್ದೆವು .ಈಗ ಅದರಿಂದ  ಕೆಂಪು ರಕ್ತ ಕಣಗಳನ್ನು ಬೇರ್ಪಡಿಸಿ ಕೊಡುವರು ,ಇದನ್ನು ಪ್ಯಾಕ್ಡ್ ಸೆಲ್ಸ್ ಎಂದು ಕರೆಯುತ್ತಾರೆ .ಇದರಿಂದ ಕಡಿಮೆ ವಾಲ್ಯೂಮ್ ನಲ್ಲಿ ಹೆಚ್ಚು ರಕ್ತ ಕಣ ಪೂರಣ ಆಗುವುದು ,ದ್ರವ ದ  ಓವರ್ ಲೋಡ್ ಆಗದು .ಮತ್ತು ರಕ್ತ ದ್ರವ ಅಥವಾ ಪ್ಲಾಸ್ಮಾ ದಲ್ಲಿ ರಕ್ತ ಹೆಪ್ಪು ಗಟ್ಟಿಸುವ ರಾಸಾಯನಿಕಗಳು ಇರುವುದರಿಂದ  ಅದನ್ನು ಶೀತಲೀಕರಿಸಿ ರಕ್ತ ಸ್ರಾವದ ಸಂದರ್ಭ ಫ್ರೆಶ್ ಫ್ರೋಜನ್ ಪ್ಲಾಸ್ಮಾ ಎಂಬ ಹೆಸರಿನಿಂದ ಬಳಸುವರು . ಕೆಂಪು ರಕ್ತ ಕಣದ ಆಯುಸ್ ೧೨೦ ದಿನಗಳು , ಒಂದು ಯೂನಿಟ್ ನಲ್ಲಿ ಶೇಖರಿಸಿದ ಕಣಗಳ  ಸರಾಸರಿ ಆಯು ಕಮ್ಮಿ ಇರುವುದರಿಂದ  ೪೨ ದಿನಗಳ ವರೆಗೆ ಉಪಯೋಗಿಸುವರು . 

 ಇನ್ನು ಬಿಳಿ ರಕ್ತ ಕಣಗಳ ಆಯು ಕೆಲವೇ ಗಂಟೆಗಳು ಇರುವುದರಿಂದ ಅವುಗಳ  ಪೂರಣ ಮಾಡುವದು ಅಪರೂಪ .ಬದಲಿಗೆ  ಅವಶ್ಯ ಬಿದ್ದಾಗ ಅವಗಳ ಉತ್ಪಾದನೆ ಪ್ರಚೋದಿಸುವ ಔಷಧಿಗಳನ್ನು ಕೊಡುವರು . (ಕಾಲೋನಿ ಸ್ಟಿಮ್ಯುಲೇಟಿಂಗ್ ಫ್ಯಾಕ್ಟರ್ ). 

ಇನ್ನು ಪ್ಲಾಟಿಲೆಟ್ ಗಳು . ಇವು ರಕ್ತ ಸ್ರಾವ ತಡೆಗಟ್ಟುವ ಪ್ರಾಥಮಿಕ ಸಾಧನಗಳು . ಸರಾಸರಿ ಆಯುಸ್ಸು ಒಂದು ವಾರ . ಇದನ್ನು ಬೇರೆ ದಾನಿಗಳ ರಕ್ತ ದಿಂದ ಬೇರ್ಪಡಿಸಿ ಅಥವಾ ಒಬ್ಬನೇ ದಾನಿಯ ರಕ್ತವನ್ನು  ಪ್ಲೇಟೆಲೆಟ್ ಮಾತ್ರ  ಬೇರ್ಪಡಿಸುವ ಯಂತ್ರಕ್ಕೆ ಹಾಯಿಸಿ ಉಳಿದ ರಕ್ತವನ್ನು ಅವನ ಶರೀರಕ್ಕೇ  ಸೇರಿಸುವ ವಿಧಾನದಿಂದ ಸಂಗ್ರಹಿಸುವರು . ಡೆಂಗೂ  ಕಾಯಿಲೆಯಿಂದ ಈ ಕಣಗಳು  ಪ್ರಸಿದ್ದಿ ಹೊಂದಿದವು .ಪ್ಲಾಟಿಲೆಟ್ ಕಣಗಳು ೫೦೦೦ ದಿಂದ ಕಡಿಮೆ ಆದಾಗ ಅಥವಾ  ಕಣಗಳ ಕೊರತೆಯಿಂದ ರಕ್ತ ಸ್ರಾವ ಇದ್ದರೆ ಮಾತ್ರ ಕೊಡುವರು . ಜಾಗತಿಕ ಅರೋಗ್ಯ ಸಂಸ್ಥೆ ಕೂಡಾ ಡೆಂಗೂ  ಜ್ವರದಲ್ಲಿ ೧೦೦೦೦ ಕ್ಕಿಂತ ಕಡಿಮೆ ಆದರೆ ಅಥವಾ ರಕ್ತ ಸ್ರಾವ ಇದ್ದರೆ ಪ್ಲಾಟಿಲೆಟ್ ಕೊಡಿರಿ ,ಸುಮ್ಮ ಸುಮ್ಮನೆ ಕೊಟ್ಟರೆ ತೊಂದರೆಯೇ ಜಾಸ್ತಿ ಎಂದು ಎಚ್ಚರಿಕೆ ನೀಡಿದೆ . ಮೇಲಾಗಿ ಈ ಕಾಯಿಲೆಯಲ್ಲಿ ಪ್ಲಾಟೇಲೆಟ್ ಕೊರತೆಯಿಂದ ಮರಣ ಸಂಭವಿಸುವುದು ಕಡಿಮೆ . 

     ಹಿಂದೆ ದಾನಿಯ ರಕ್ತ ವನ್ನು ಕ್ರಾಸ್ ಮ್ಯಾಚ್ ಮಾಡಿ ಕೂಡಲೇ ಕೊಡುತ್ತಿದ್ದರು .ಆದರೆ ಈಗ  ದಾನಿಯ ರಕ್ತದಲ್ಲಿ ಎಚ್ ಐ ವಿ ,ಹೆಪಟೈಟಿಸ್ ಬಿ ಮತ್ತು ಸಿ ,ಸಿಫಿಲಿಸ್ ರೋಗ ಇಲ್ಲವೆಂದು  ಪರೀಕ್ಷೆಯ ಮೂಲಕ ಖಾತರಿ ಪಡಿಸಿ ಕೊಡುವರು . ಇದರಿಂದಲೇ ರಕ್ತ ಉಚಿತ ಆದರೂ ಬ್ಲಡ್ ಬ್ಯಾಂಕ್ ನವರು  ಸ್ವಲ್ಪ ದರ ನಿಗದಿ ಪಡಿಸಿರುವರು . 

                    ರಕ್ತ ಪೂರಣ ಮಾಡುವಾಗ ಸಣ್ಣ ಜ್ವರ ,ತುರಿಕೆಯಿಂದ ಹಿಡಿದು ಅಪರೂಪಕ್ಕೆ ಅಪಾಯಕಾರಿ ರಿಯಾಕ್ಷನ್ ಆಗುವುದು ಉಂಟು . ಅದನ್ನು ಚಿಕಿತ್ಸೆ ಮಾಡುವುದಲ್ಲದೆ ,ಬ್ಲಡ್ ಬ್ಯಾಂಕ ಗೆ ವಿವರಗಳನ್ನು ಕೂಡಲೇ ಕಳುಹಿಸುವರು . 

 ತೆಗೆದು ಕೊಳ್ಳುವಾಗ  ರಕ್ತ ಸಂಬಂಧಿಗಳ  ರಕ್ತ ವೈಜಾನಿಕವಾಗಿ ಒಳ್ಳೆಯದಲ್ಲ .ಸಂಬಂಧಿಗಳಲ್ಲದವರ  ರಕ್ತವನ್ನು ಕೊಟ್ಟರೆ ಒಳ್ಳೆಯದು .